ಗೋವಿಂದ ದೀಕ್ಷಿತ
ಗೋವಿಂದ ದೀಕ್ಷಿತ 1554-1626. ಪ್ರಸಿದ್ಧ ಸಂಗೀತಗಾರ ಮತ್ತು ಕವಿ. ಅಯ್ಯನ ಎಂಬ ಇನ್ನೊಂದು ಹೆಸರೂ ಉಂಟು. ತಂಜಾವೂರಿನ ಅಚ್ಯುತಯ್ಯ ಮತ್ತು ರಘುನಾಥನಾಯಕ ಅರಸರ ಕಾಲದಲ್ಲಿ ಪ್ರಧಾನಿಯಾಗಿದ್ದ. ಕಾವೇರೀ ತೀರದ ಪಟ್ಟೀಶ್ವರಮ್ ಈತನ ಮೂಲಸ್ಥಾನ. ಜಾತಿಯಿಂದ ಈತ ಕರ್ನಾಟಕ ಬ್ರಾಹ್ಮಣ. ಹೆಂಡತಿ ನಾಗಂಬಾ. ಈ ದಂಪತಿಗಳ ಶಿಲಾಪ್ರತಿಮೆಯನ್ನು ಪಟ್ಟೀಶ್ವರಮ್ ದೇವಸ್ಥಾನದಲ್ಲಿ ಈಗಲೂ ಕಾಣಬಹುದು.
ಗೋವಿಂದ ದೀಕ್ಷಿತನ ಹರಿವಂಶಸಾರಚರಿತ್ರಮ್ ಎಂಬ ಸಂಸ್ಕೃತ ಕೃತಿ ಮೂರು ಸಂಪುಟಗಳಲ್ಲಿದೆ. ಈತನ ಸನ್ಮಿತ್ರ ಅಪ್ಪಯ್ಯದೀಕ್ಷಿತ ಈ ಗ್ರಂಥಕ್ಕೆ ಟೀಕೆ ಬರೆದಿದ್ದಾನೆ. ಸಂಗೀತಸುಧಾನಿಧಿ ಈತನ ಪದ್ಯಗಳ ಸಂಕಲನ. ಇದಲ್ಲದೆ ಈತ ವೇದಾಂತ, ಧರ್ಮ, ಶಿಲ್ಪ, ಸಂಗೀತಶಾಸ್ತ್ರಗಳನ್ನು ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾನೆ.
ಇಪ್ಪತ್ತು ನಾಲ್ಕು ಪಟ್ಟಿಗಳುಳ್ಳ ಸುಪ್ರಸಿದ್ಧ ತಂಜಾವೂರು ವೀಣೆಯನ್ನು ತಯಾರಿಸಿದವನೀತ. ಚೂಡಾಮಣಿ ಈತನಿಗೆ ಅದ್ವೈತ ವಿದ್ಯೆ ನೀಡಿದ ಗುರು. ಧಾರ್ಮಿಕ ಮನೋಧರ್ಮದ ಪರೋಪಕಾರಿ ಬ್ರಾಹ್ಮಣನಾದ್ದರಿಂದ ಈತ ಅನೇಕ ಯಜ್ಞ ಮಾಡಿದನಲ್ಲದೆ ವಿಪುಲವಾಗಿ ದಾನಧರ್ಮ ಮಾಡಿದ. ಕೆರೆಕಟ್ಟೆ ಕಟ್ಟಿಸಿದ, ತಿರುವಾಯೂರಿನಲ್ಲಿ ಸಂಸ್ಕೃತ ವಿದ್ಯಾಲಯ ತೆರೆದ, ಕುಂಭಕೋಣದ ಮಹಾಮಖಂ ಕೆರೆ ದಂಡೆಯ ಸುತ್ತ ಹದಿನಾರು ಲಿಂಗಗಳನ್ನು ಸ್ಥಾಪಿಸಿದ. ಈತ ಕಟ್ಟಿಸಿದ ತಂಜಾವೂರಿನ ಏಕಾದಶೀ ಅಗ್ರಹಾರ ಈಗಲೂ ಪ್ರಸಿದ್ಧವಾಗಿದೆ.