ವಿಷಯಕ್ಕೆ ಹೋಗು

ಜಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾವಳಿಯು ಲಲಿತ ಸಂಗೀತದ ಗುಂಪಿಗೆ ಸೇರಿದ, ಲೌಕಿಕ ಶೃಂಗಾರವನ್ನು ವಸ್ತುವಾಗುಳ್ಳ ಸಂಗೀತ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಇವನ್ನು ನೋಡಬಹುದು. ಸ್ವಲ್ಪಮಟ್ಟಿಗೆ ಇವು ಹಿಂದೂಸ್ತಾನಿಯ ಗಜ಼ಲ್‍ಗಳನ್ನು ಹೋಲುತ್ತವೆ. ಇವುಗಳಲ್ಲಿ ಸಾಮಾನ್ಯವಾಗಿ ದೇಸೀ ಭಾಷೆಯ ಬಳಕೆಯಿದ್ದು, ರೂಢಿಯಲ್ಲಿರುವ ಆದಿ, ರೂಪಕ ಮತ್ತು ಛಾಪು ತಾಳಗಳಲ್ಲಿ ರಚಿತವಾಗಿರುತ್ತವೆ. ಆಕರ್ಷಕ ಹಾಗೂ ಲಲಿತವಾದ ಧಾಟಿಯೇ ಇವುಗಳ ಜನಪ್ರಿಯತೆಗೆ ಕಾರಣ.

ಇತಿಹಾಸ[ಬದಲಾಯಿಸಿ]

ಜಾವಳಿಗಳ ಹುಟ್ಟು ಸು.19ನೆಯ ಶತಮಾನದ ಕೊನೆಯ ಭಾಗದಲ್ಲೆಂಬ ಅಭಿಪ್ರಾಯವಿದೆ. ಈ ಪದದ ಮೂಲವನ್ನು ನೋಡಲು ಹೊರಟರೆ ಕಿಟ್ಟೆಲ್ ನಿಘಂಟಿನಲ್ಲಿ ಜಾವಡಿ ಎಂಬ ಮಾತಿಗೆ ಒಂದು ತರಹದ ಕೀಳು (ಲ್ಯೂಡ್) ತರಗತಿಯ ಹಾಡು ಎಂದಿದೆ. ಲ್ಯೂಡ್ ಎಂಬ ಪದಕ್ಕೆ ಅಶ್ಲೀಲ ಕಾಮುಕ ಎಂದೆಲ್ಲ ಅರ್ಥಗಳಿವೆ. ತಮಿಳು ನಿಘಂಟಿನಲ್ಲಿ ಈ ಪದಕ್ಕೆ ಜಾóವ್ಲಿ ಎಂಬ ಉರ್ದು ಪದಮೂಲವೆಂಬ ಸೂಚನೆಯಿದೆ. ಆದರೆ ಅದಕ್ಕೆ ಯಾವ ರೀತಿಯ ಸಮರ್ಥನೆಯನ್ನೂ ಅದು ಕೊಡುವುದಿಲ್ಲ. ಪರ್ಷಿಯನ್ ಹಾಗೂ ಉರ್ದು ವಿದ್ವಾಂಸರು ಇದನ್ನು ಸಮರ್ಥಿಸಿಲ್ಲ. ಸಂಗೀತ ಶಾಸ್ತ್ರಗ್ರಂಥಗಳಲ್ಲಿಯೂ ಈ ಪದದ ಬಳಕೆ ಕಂಡುಬರುವುದಿಲ್ಲ.

19ನೆಯ ಶತಮಾನದ ಕೊನೆಯ ಭಾಗದ ತೆಲುಗು ನಿಘಂಟುಗಳಲ್ಲಿ ಜಾವಳಿ ಪದದ ಸೇರ್ಪಡೆಯಾಗಿದೆ. ಆ ಕಾಲದಲ್ಲೇ ಅನೇಕ ಸಂಗೀತಗಾರರು ತೆಲುಗಿನಲ್ಲಿ ಜಾವಳಿಗಳನ್ನು ರಚಿಸಿದರು. ಇದು ಮರಾಠಿಯ ಮೂಲದ್ದು ಅಲ್ಲವೆಂಬುದು ಸ್ಪಷ್ಟ. ಆದ್ದರಿಂದ ಕನ್ನಡದ ಜಾವಡಿ>ಜಾವಳಿ (ಶೃಂಗಾರಗೀತೆ) ಆಯಿತು ಎಂಬುದು ಸದ್ಯಕ್ಕೆ ಒಮ್ಮತದ ಅಭಿಪ್ರಾಯ.

ಸ್ವರೂಪ[ಬದಲಾಯಿಸಿ]

ಜಾವಳಿಗಳು ಪಲ್ಲವಿ, ಅನುಪಲ್ಲವಿ ಮತ್ತು ಚರಣ-ಈ ತ್ರಿಧಾತುಗಳಿಂದ ಕೂಡಿರುತ್ತವೆ :

		ರಾಗ-ಬೇಗಡೆ               ತಾಳ-ಛಾಪು
ಇದಿ ನೀಕು ಮರಿಯಾದಗಾ ಏ ರಾನಾಸಾಮಿ				ಪ
ಇದಿ ನೀಕು ಮರಿಯಾದಾಗಾ ದಾನಿಂಟಿಕಿ ಪೋಯಿ,
ಅಲಸಿಪೊಲಸಿ ಗೂಡಿ ಇಂದುರಾವೃತಿವೈಯ್ಯಾ			   ಅ.ಪ
ಪಟ್ಟೆ ಮಂಚಮು ಬಿಗಿಪಟ್ಟಿಂಚಿ ನಾಪಡ
ಕಿಂಟ ಪವ್ವಳಿಂಚಮನಿ ವೇಡಿತೇ ನಾತೋ
ಸದ್ದುಸೇಯಕ ಮುವ್ವಸುದತಿ ಯಿಂಟಿಕಿ ಪೋಯಿ
ಪಟ್ಟಟಿ ನೇಲಲೊ ಪವಳಿಂಚಿವೈತಿ, ವೈಯ್ಯಾ				ಚರಣ

		ರಾಗ-ಕಮಾಜ್				 ಛಾಪು-ತಾಳ
ಮಾತಾಡಬಾರದೀನೋ ಮಾರಮಣನೇ 				ಪ
ಪ್ರೀತಿಗೊಲಿದ ಪ್ರಾಣಕಾಂತೆಯೊಡನೆ ಒಂದು				ಅ.ಪ
ಮಾತನಾಡದೆ ಇಂತು ಮೌನದಿಂದಿದರುವರೇ
ಮೋಹನಾಂಗನೆ ನೀನು ಮನ್ನಿಸಿ ದಯಮಾಡಿ
ಮಡದಿಯೆಂದೆನ್ನನು ಮಮತೆಯಿಂದಲಿ ಮೋಡಿ
ಮೋಹಸಾಗರದೊಳು ಮುಳುಗಿಸುತಲಲೆ ಮುದ್ದು
ಅಂಗಕೆ ಬೆಳದಿಂದಗಳೆ ಬಿಸಿಲಾಗಿ ತೋರಿತೆ 
ಅಂದವುಳ್ಳ ದೇಹ ಕಂದಿಕುಂದಿತೆ ಸ್ವಾಮಿ

(ಅಂಕಿತ ಸಿಕ್ಕಿಲ್ಲ. ಇಷ್ಟನ್ನು ಹಾಡುವ ರೂಢಿಯಿದೆ.)

ಅನುಪಲ್ಲವಿ ಇಲ್ಲದಿರುವ ಸಂದರ್ಭಗಳೂ ಉಂಟು. ಪ್ರತಿ ಜಾವಳಿಯ ಕೊನೆಯಲ್ಲೂ ರಚಕರ ಅಂಕಿತವಿರುತ್ತದೆ. ಹೀಗೆ ಬಾಹ್ಯ ಸ್ವರೂಪದಲ್ಲಿ ಜಾವಳಿಗಳು ಕೀರ್ತನೆ ಹಾಗೂ ಪದಗಳನ್ನು ಹೋಲುತ್ತವೆ. ಶೃಂಗಾರ ಪ್ರಧಾನವಾದ ರೂಪದಗಳಲ್ಲಿ ಸಾಹಿತ್ಯ ಗುಣವಿರುತ್ತದೆ. ಆದರೆ ಸಂಗೀತ ಹಾಗೂ ಅಭಿನಯಗಳೇ ಇವುಗಳ ಬಂಡವಾಳ. ಸಾಮಾನ್ಯವಾಗಿ ಪದಗಳನ್ನು ವಿಳಂಬಕಾಲದಲ್ಲೂ ಜಾವಳಿಗಳನ್ನು ಮಧ್ಯಮಕಾಲದಲ್ಲೂ ಹಾಡುವುದು ರೂಢಿ. (ಕನ್ನಡದ ಹರಿದಾಸರ ಪದಗಳನ್ನು ಮಧ್ಯಮ ಕಾಲದಲ್ಲಿ ಹಾಡುತ್ತಾರೆ) ಕೆಲವು ಜಾವಳಿಗಳು ವಿಳಂಬಕಾಲದಲ್ಲೂ ಇವೆ. ಪದಗಳ ಸಾಹಿತ್ಯ ಹೆಚ್ಚು ಶಿಷ್ಟವಾಗಿರುತ್ತದೆ, ಗಂಭೀರವಾಗಿರುತ್ತದೆ. ಈ ಕೆಲವು ವ್ಯತ್ಯಾಸಳನ್ನು ಬಿಟ್ಟರೆ ತೆಲುಗಿನ ಕ್ಷೇತ್ರಯ್ಯನ ಪದಗಳಿಗೂ-ಕನ್ನಡದ ಹರಿದಾಸರ (ಮಧುರಭಾವದ) ಪದಗಳು ಮತ್ತು ಜವಳಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ. ಮೂರನ್ನೂ ಆಕರ್ಷಕವಾಗಿ ಹಾಡಲೂಬಹುದು; ಅಭಿನಯಿಸಲೂಬಹುದು.

ಸಂಗೀತ ಪ್ರಧಾನವಾದ ಜಾವಳಿಗಳ ಗಾಯನದಲ್ಲಿ ಸ್ವಾತಂತ್ರ್ಯ ಹೆಚ್ಚು ಬಹುತೇಕ ಇವು ದೇಶ್ಯ ಹಾಗೂ ಭಾಷಾಂಗ ರಾಗಗಳಲ್ಲಿವೆ. ರಂಜನೆಗಾಗಿ ರಾಗ ಲಕ್ಷಣಗಳನ್ನು ಖಚಿತವಾಗಿ ಅನುಸರಿಸದಿರುವುದೂ ಹೊಸ ಹೊಸ ಪ್ರಯೋಗಗಳನ್ನು ಮಾಡಿರುವುದೂ ಉಂಟು. ಅನ್ಯರಾಗಚ್ಛಾಯೆಗಳನ್ನೂ ಬಳಸುತ್ತಾರೆ. ಉದಾ: `ಏಮಂಡುನೇ ಮುದ್ದು ಬಾಲಾಮಣಿ` ಎಂಬ ಮುಖಾರಿ ರಾಗದ ಜಾವಳಿಯ ಚರಣದಲ್ಲಿ ಹಿಂದುಸ್ತಾನಿ ಕಾಪಿರಾಗದ ಛಾಯೆಯನ್ನು ಕಾಣಬಹುದು. ಅಂತೆಯೇ ಕಮಾಚ್ ರಾಗದ ಅಪದೂರು ಕುಲೋನೈಚಿನೆ ಎಂಬ ಜಾವಳಿಯಲ್ಲಿ ಆರಂಭದಲ್ಲಿ ಹಿಂದೂಸ್ತಾನಿ ಬೇಹಾಗ್ ರಾಗದ ಛಾಯೆಯನ್ನು ಕಾಣಬಹುದು. ಈ ರೀತಿಯ ಸ್ವಾತಂತ್ರ್ಯ ಉಳಿದ ಸಂಗೀತರಚನೆಗಳಿಗಿಲ್ಲವೆಂಬುದು ಗಮನೀಯ ಅಂಶ. ರಂಜನೀಯ ರಾಗಗಳ ಸಂಯೋಜನೆಯೇ ಜಾವಳಿಗಳ ಪ್ರಮುಖ ಆಕರ್ಷಣೆ. ದೇಸೀ ಭಾಷೆಯ ಬಳಕೆಯೊಂದಿಗೆ ಎಷ್ಟೋ ವೇಳೆ ಅಶ್ಲೀಲ ಪದಗಳೂ ಕಾಣಸಿಗುತ್ತವೆ.

ನಾಯಿಕಾ ನಾಯಕ ಮತ್ತು ಸಖಿ ಎಂದು ಮೂರು ರೀತಿಯ ಜಾವಳಿಗಳುಂಟು. ಯಾರು ಯಾರಿಗೆ ಹಾಡುತ್ತಾರೆಂಬುದರ ಮೇಲೆ ಈ ವರ್ಗೀಕರಣವನ್ನು ಮಾಡಲಾಗಿದೆ. ಹಾಡಿನೊಂದಿಗೆ ಹಾಡುವವರ ಮನಃಸ್ಥಿತಿಯ ಅರಿವೂ ಆಗುತ್ತದೆ. ಜನಪ್ರಿಯವಾಗುತ್ತಿರುವ ಈ ಜಾವಳಿಗಳನ್ನು ಸಂಗೀತ ಕಚೇರಿಗಳಲ್ಲಿ ಹಾಡುವುದು ಕ್ರಮವಾಗುತ್ತಿದೆ. ಸಾಮಾನ್ಯವಾಗಿ ರಾಗ ತಾನ ಪಲ್ಲವಿಯ ಅನಂತರ ಇವನ್ನು ಹಾಡುತ್ತಾರೆ. ಪಲ್ಲವಿ, ಅನುಪಲ್ಲವಿ, ಅನಂತರ ಚರಣ-ಇದು ಗಾಯನಕ್ರಮ. ಒಂದಕ್ಕಿಂತ ಹೆಚ್ಚು ಚರಣಗಳಿದ್ದರೂ ಹಾಡುವಿಕೆಯಲ್ಲಿ ಬದಲಾವಣೆಯಿರುವುದಿಲ್ಲ. ಕೆಲವು ಸಲ ಅನುಪಲ್ಲವಿ, ಚರಣಗಳ ಹಾಡುವಿಕೆ ಒಂದೇ ರೀತಿಯಲ್ಲಿರುತ್ತದೆ. ಪಲ್ಲವಿ, ಅನುಪಲ್ಲವಿ ಈ ಎರಡರ ಮತ್ತು ಚರಣದ ಹಾಡುವಿಕೆಯೂ ಒಂದೇ ರೀತಿ ಇರುವ ಸಾಧ್ಯತೆಯಿದೆ. ಚಿಟ್ಟಸ್ವರಗಳಿರುವುದಿಲ್ಲ. ಜಾವಳಿಗಳನ್ನು ನೃತ್ಯಕ್ಕೆ ಹೆಚ್ಚಾಗಿ ಬಳಸುತ್ತಾರೆ. ಆದರೆ ಅವುಗಳಿಗೂ ಅಪವಾದಗಳಿಲ್ಲದಿಲ್ಲ. ಉದಾ: ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ಯರ ವೇಗನೀವು ಎಂಬ ಜಾವಳಿಯಲ್ಲಿ ಚಿಟ್ಟಸ್ವರಗಳನ್ನು ಸೇರಿಸಿದ್ದಾರೆ. ಶ್ರೀರಾಮಪದಮುಲು ಎಂಬ ಜಾವಳಿಯಲ್ಲಿ ಅನೇಕ ಭಾಷೆಗಳೊಡನೆ ಇಂಗ್ಲೀಷ್ ಭಾಷೆಯೂ ಸೇರಿ ಮಣಿಪ್ರವಾಳ ಸಾಹಿತ್ಯವಾಗಿದೆ. ಕೆಲವರು ಜಾವಳಿಯನ್ನು ಹಾಡಿ ಕಲ್ಪನಾಸ್ವರಗಳನ್ನೂ ಹಾಡುವುದುಂಟು. ಇಂಥ ಜಾವಳಿಗಳು ಹೆಚ್ಚಾಗಿಲ್ಲ.

ಜಾವಳಿ ರಚನೆಕಾರರು[ಬದಲಾಯಿಸಿ]

ಧರ್ಮಪುರಿ ಸುಬ್ಬರಾಯರು (ಅಂಕಿತ: ಧರ್ಮಪುರಿಶ). ಪಟ್ಟಾಭಿರಾಮಯ್ಯ (ಅಂಕಿತ: ತಾಲವಾಣೀಶ), ಸ್ವಾತಿತಿರುನಾಳ್ ಮಹರಾಜ (ಅಂಕಿತ: ಪಧ್ಮನಾಭ), ಪಟ್ನಂ ಸುಬ್ರಹ್ಮಣ್ಯ ಅಯ್ಯರ್ (ಅಂಕಿತ: ವೆಂಕಟೇಶ್), ರಾಮನಾಡ್ ಶ್ರೀನಿವಾಸ ಅಯ್ಯಂಗಾರ್ (ಅಂಕಿತ: ಶ್ರೀನಿವಾಸ)-ಇವರು ಪ್ರಮುಖ ಜಾವಳಿ ರಚಕರು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾವಳಿ&oldid=1065738" ಇಂದ ಪಡೆಯಲ್ಪಟ್ಟಿದೆ