ವಿಷಯಕ್ಕೆ ಹೋಗು

ಅಲ್ ವಹತ್ ಅಲ್ ಖರಿಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖರ್ಗ ಓಯಸಿಸ್‍ನಲ್ಲಿ ಹಿಬಿಸ್ ದೇವಾಲಯ

ಅಲ್ ವಹತ್ ಅಲ್ ಖರಿಜ ಈಜಿಪ್ಟಿನ ಅತ್ಯಂತ ದೊಡ್ಡ ಓಯಸಿಸ್. ಲಿಬ್ಯನ್ ಮರುಭೂಮಿಯಲ್ಲಿ ಉ.ಅ. 24'-26' ಮತ್ತು ಪೂ.ರೇ. 30'-31' ನಡುವೆ ಇದೆ. ದಕ್ಷಿಣೋತ್ತರವಾಗಿ 100 ಮೈ. ಮತ್ತು ಪೂರ್ವಪಶ್ಚಿಮವಾಗಿ 12-50 ಮೈ. ಇರುವ ಇದರ ವಿಸ್ತೀರ್ಣ 1,426 ಚ. ಮೈ.[] ಇಲ್ಲಿರುವ ಮುಖ್ಯ ಪಟ್ಟಣ ಅಲ್ ಖರಿಜ. ಈ ಪಟ್ಟಣ ಕೈರೋದಿಂದ ದಕ್ಷಿಣಕ್ಕೆ ರೈಲುಮಾರ್ಗದಲ್ಲಿ 471 ಮೈ. ದೂರದಲ್ಲಿದೆ. ನೈಲ್ ಕಣಿವೆ ರೈಲುಮಾರ್ಗದ ಮೇಲಿರುವ ಅಲ್ ವಹತ್ ಸಂಧಿಸ್ಥಳದಿಂದ ಇಲ್ಲಿಗೆ ನ್ಯಾರೋ ಗೇಜ್ ರೈಲ್ವೆ ಸಂಪರ್ಕವುಂಟು.

ಇದಕ್ಕೆ ಖರ್ಗ, ಖರ್ಗೇಹ್ ಎಂಬ ಹೆಸರುಗಳೂ ಉಂಟು. ಪ್ರಾಚೀನ ಈಜಿಪ್ಷಿಯನ್ನರು ಇದನ್ನು ಕೆನೆಮ್ ಎಂದು ಕರೆಯುತ್ತಿದ್ದರೆಂದೂ ಹೇಳಲಾಗಿದೆ.[] ಗ್ರೀಕ್ ಚರಿತ್ರಕಾರ ಹೆರೊಡೋಟಸ್ (ಕ್ರಿ.ಪೂ.ಸು. 5ನೆಯ ಶತಮಾನ) ಈ ಓಯಸಿಸ್ ಪ್ರದೇಶವನ್ನು ಪುಣ್ಯವಂತರ ದ್ವೀಪ ಎಂದು ಕರೆದಿದ್ದಾನೆ. ಇದನ್ನು ಅಮಾನುಷ ಅಥವಾ ಅತಿಮಾನುಷ ಶಕ್ತಿಗಳ ಬೀಡು ಎಂದೂ ಪರಿಗಣಿಸಲಾಗಿತ್ತು. ಇದು ಬಹು ದೂರದಲ್ಲಿದ್ದ ಪ್ರದೇಶವಾದ್ದರಿಂದ ದೇಶಭ್ರಷ್ಟರನ್ನು ಇಲ್ಲಿಗೆ ಸಾಗಿಸುತ್ತಿದ್ದುದುಂಟು.

ಜನಜೀವನ, ಕೃಷಿ, ಪ್ರದೇಶದ ಲಕ್ಷಣಗಳು

[ಬದಲಾಯಿಸಿ]

ಈ ಪ್ರದೇಶ ಸುತ್ತಣ ಪ್ರಸ್ಥಭೂಮಿಗಿಂತ ಸುಮಾರು 1,000' ಕೆಳಮಟ್ಟದಲ್ಲಿದೆ. ಸಮುದ್ರಮಟ್ಟದಿಂದ ಇದರ ಎತ್ತರ 70'. ಈ ಓಯಸಿಸಿನ ನಡುಗಡ್ಡೆಯಲ್ಲಿ ಮರಳಿನ ಬೀಳುಭಾಗವೊಂದಿದ್ದು, ಅದು ಬಹುಮಟ್ಟಿಗೆ ಬಂಜರಾಗಿದೆ. ಓಯಸಿಸಿನ ಸುತ್ತಲೂ ಸುಣ್ಣಕಲ್ಲಿನ ಬೆಟ್ಟಗಳುಂಟು. ಈ ಪ್ರದೇಶದಲ್ಲಿರುವ ಭೂಮಿ ತುಂಬ ಫಲವತ್ತಾದ್ದು. ಸುಣ್ಣಕಲ್ಲಿನ ಭೂಮಿಯಲ್ಲಿ ಬಾವಿಗಳನ್ನು ತೋಡಿ ನೀರು ಪೂರೈಕೆ ಮಾಡಿಕೊಂಡು ಬೇಸಾಯ ಕೈಗೊಳ್ಳಲಾಗಿದೆ. ಖರ್ಜೂರ, ಗೋದಿ, ಕಾಳುಗಳು, ಅಕ್ಕಿ, ಹತ್ತಿ, ಬಾರ್ಲಿ, ಕೆಲವು ಬಗೆಯ ಹಣ್ಣು ಮತ್ತು ತರಕಾರಿ ಇಲ್ಲಿಯ ಮುಖ್ಯ ಬೆಳೆಗಳು. ಖರ್ಜೂರದ ಮರದ ಎಲೆ ಮತ್ತು ನಾರುಗಳಿಂದ ಬುಟ್ಟಿಗಳನ್ನೂ ಚಾಪೆಗಳನ್ನೂ ಹೆಣೆಯುತ್ತಾರೆ.

ಅಲ್ ಖರಿಜ ಪಟ್ಟಣ ಖರ್ಜೂರ ಮರಗಳ ತೋಪಿನ ನಡುವೆಯೇ ಇದೆ. ಈ ಪಟ್ಟಣದ ರಸ್ತೆಗಳು ಕಿರಿದಾಗಿ ಅಂಕುಡೊಂಕಾಗಿವೆ. ಇಲ್ಲಿಯ ಈಗಿನ ನಿವಾಸಿಗಳು ಬರ್ಬರ್ ಮತ್ತು ಬೆದೊಯಿನ್ ಜನಾಂಗಕ್ಕೆ ಸೇರಿದವರು.

ಹಿಂದೆ ಇಲ್ಲಿ ವಿಸ್ತಾರವಾದ ಪ್ರದೇಶ ಕೃಷಿಗೆ ಒಳಪಟ್ಟಿತ್ತು. ಕಾಲಕ್ರಮದಲ್ಲಿ ಭೂಕುಸಿತದಿಂದ ಅದು ಕಡಿಮೆಯಾಗಿತ್ತು. ಈಚೆಗೆ ಮತ್ತೆ ನೆಲವನ್ನು ಕೃಷಿಯೋಗ್ಯವನ್ನಾಗಿ ಮಾಡಲಾಗುತ್ತಿದೆ. ಇಲ್ಲಿ ಮಳೆ ಬಹಳ ಕಡಿಮೆ. ಜೊತೆಗೆ ಭೂಮ್ಯಂತರ್ಗತ ಜಲತಲವೂ ಕ್ರಮೇಣ ಕೆಳಕ್ಕೆ ಇಳಿಯುತ್ತಿರುವುದರಿಂದ, ಚಿಲುಮೆಗಳು ಬತ್ತುತ್ತಿವೆ. ಬಾವಿಗಳನ್ನು ತೋಡಿ ನೀರನ್ನು ಪಡೆದುಕೊಳ್ಳುವ ಪದ್ಧತಿ ಜಾರಿಗೆ ಬಂದಿದೆ. ನೀರು ಸರಬರಾಜು ವ್ಯವಸ್ಥೆ ಉತ್ತಮಗೊಂಡಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ.

ಪ್ರವಾಸಿ ಆಕರ್ಷಣೆಗಳು

[ಬದಲಾಯಿಸಿ]

ಈ ಓಯಸಿಸ್ ಪ್ರದೇಶದಲ್ಲಿ ಪ್ರಾಚೀನ ಶಿಲಾಯುಗದ ಜನ ಬಹುಕಾಲ ವಾಸವಾಗಿದ್ದರೆಂಬುದು ಗೆರ್‌ಟ್ರೂಡ್ ಕೇಟನ್-ಥಾಂಪ್ಸನ್ ನಡೆಸಿದ ಉತ್ಖನನಗಳಿಂದ ಗೊತ್ತಾಗಿದೆ.[] ಇತರ ಯುಗಗಳಲ್ಲಿದ್ದ ಮಾನವರ ನೆಲೆಗಳೂ ಈಚಿನ ಸಂಶೋಧನೆಗಳಿಂದ ಬೆಳಕಿಗೆ ಬಂದಿವೆ. ಅಲ್ ಖರಿಜದ ಪ್ರಾಚೀನ ಅವಶೇಷಗಳಲ್ಲಿ ಅತ್ಯಂತ ಮುಖ್ಯವಾದವೆಂದರೆ ಅಮ್ಮಾನ್, ಹಿಬಿಸ್ ಮತ್ತು ನದುರ ದೇವಾಲಯಗಳು, ರೋಮನ್ ಕೋಟೆ ಮತ್ತು ಮತ್ತು ಕ್ರೈಸ್ತರ ಶ್ಮಶಾನ. ಶ್ಮಶಾನದಲ್ಲಿ ಇಟ್ಟಿಗೆಗಳಿಂದ ಕಟ್ಟಲಾಗಿರುವ ನೂರಾರು ಸಮಾಧಿಗಳುಂಟು. ಇಲ್ಲಿಯ ಪ್ರಮುಖ ಕಟ್ಟಡಗಳೆಂದರೆ ಎರಡು ಮಸೀದಿಗಳು ಮತ್ತು ಒಂದು ಸರ್ಕಾರಿ ಭವನ. ಅಲ್ ಖರಿಜ ಮತ್ತು ಅಲ್ ವಹತ್ ನಗರಗಳ ನಡುವೆ ರೈಲ್ವೆ ಸಂಪರ್ಕ ಏರ್ಪಟ್ಟಿದ್ದು 1908ರಲ್ಲಿ.

ಉಲ್ಲೇಖಗಳು

[ಬದಲಾಯಿಸಿ]
  1. Introduction to Kharga Oasis
  2. Britannica, The Editors of Encyclopaedia. "Al-Wāḥāt al-Khārijah". Encyclopedia Britannica, 31 May. 2016, https://www.britannica.com/place/Al-Wahat-al-Kharijah. Accessed 27 August 2024.
  3. Kirwan, L. P. (2004). "Thompson, Gertrude Caton (1888–1985)". Oxford Dictionary of National Biography (Rev. ed.). Oxford University Press.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: