ಕಾಂತತೆ
ಕಾಂತತೆ (ಕಾಂತತ್ವ) (Magnetism)[೧] ಎಂದರೆ ಒಂದು ವಿದ್ಯುತ್ ಪ್ರವಾಹವು ಇನ್ನೊಂದು ವಿದ್ಯುತ್ ಪ್ರವಾಹದ ಮೇಲೆ ಉಂಟು ಮಾಡುವ ಬಲ (Force). ಕಾಂತತೆಯು ಅಯಸ್ಕಾಂತವನ್ನು ಹೊಂದಿದ ವಸ್ತುಗಳನ್ನು ಆಕರ್ಷಿಸುತ್ತದೆ ಅಥವಾ ವಿಕರ್ಷಿಸುತ್ತದೆ. ಕಾಂತಕ್ಷೇತ್ರವೆಂದರೆ ಅಯಸ್ಕಾಂತ ಶಕ್ತಿಯ ಕ್ಷೇತ್ರ. 'ಕಾಂತಕ್ಷೇತ್ರ' ಎಂದರೆ ಕಾಂತವು ತನ್ನ ಸಮೀಪದಲ್ಲಿರುವ ಮತ್ತೊಂದು ಕಾಂತದ ಧ್ರುವಗಳ ಮೇಲೆ ಬಲಪ್ರಯೋಗ ಮಾಡುವುದು. ಇದನ್ನು ಇಂಗ್ಲೀಷಿನಲ್ಲಿ 'ಮಾಗ್ನಟಿಕ್ ಫೀಲ್ಡ್'[೨] ಎಂದು ಕರೆಯುತ್ತಾರೆ.[೩] ಕಾಂತತ್ವ ನೇರವಾಗಿ ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದಿಲ್ಲ. ಉತ್ತರಮುಖಿ ಅಥವಾ ದಿಕ್ಸೂಚಿಯನ್ನು 'ಕಾಂತ ಧ್ರುವಸೂಚಿ' ಎಂದು ಕರೆಯುತ್ತಾರೆ. ಕಾಂತಬಲಗಳನ್ನು ಅಳೆಯುವ ಉಪಕರಣಗಳನ್ನು 'ಕಾಂತಬಲಮಾಪಕ' ಎಂದು ಕರೆಯುತ್ತಾರೆ. ಹೀಗೆ ಕಾಂತತೆ ನಮ್ಮ ದಿನನಿತ್ಯದ ಬದುಕಿನಲ್ಲಿ ಪ್ರಭಾವ ಬೀರುತ್ತಿದ್ದು ನಮಗೆಲ್ಲ ಚಿರಪರಿಚಿತವಾಗಿರುವ ಒಂದು ಶಕ್ತಿಯಾಗಿದೆ. ವಿಜ್ಞಾನಿಗಳ ಪ್ರಕಾರ 'ಸ್ವಾಭಾವಿಕವಾಗಿ ಬೇರೊಂದು ಕಾಂತದ ಸಂಪರ್ಕದಿಂದ ಪ್ರೇರಿತವಾಗಿ ಇಲ್ಲವೇ ವಿದ್ಯುತ್ ಪ್ರವಾಹದ ಫಲವಾಗಿ ಕಬ್ಬಿಣವನ್ನು ಆಕರ್ಷಿಸುವ ಗುಣವನ್ನು ಹಾಗೂ ದಕ್ಷಿಣೋತ್ತರವಾಗಿ ನಿಲ್ಲುವ ಪ್ರವೃತ್ತಿಯನ್ನು ತೋರುವ ವಸ್ತುವೇ ಕಾಂತ'.
ಇತಿಹಾಸ
[ಬದಲಾಯಿಸಿ]ಏಷ್ಯ ಮೈನರಿಗೆ ಸೇರಿದ 'ಮ್ಯಾಗ್ನೀಶಿಯ' ಎಂಬ ಪ್ರದೇಶದಲ್ಲಿ ಸಿಕ್ಕಿದ ಕೆಲವು ಕಪ್ಪು ಶಿಲೆಗಳಲ್ಲಿ ಅಂದರೆ ಮ್ಯಾಗ್ನಟೈಟ್ ಎಂಬ ಕಬ್ಬಿಣದ ಅದಿರಿಗೆ ಕಬ್ಬಿಣವನ್ನು ಆಕರ್ಷಿಸುವ ಗುಣ ಇದ್ದಿತ್ತೆಂದು ಬಹಳಕಾಲದಿಂದ ಮನುಷ್ಯ ಅರಿತಿದ್ದ.[೪] ಈ ಬಗೆಯಲ್ಲಿ ಕಬ್ಬಿಣವನ್ನು ಆಕರ್ಷಿಸುವ ಗುಣವನ್ನು 'ಆಯಸ್ಕಾಂತತೆ' ಎನ್ನುತ್ತಾರೆ. ಆಯಸ್ಕಾಂತತೆ ಗುಣವುಳ್ಳ ಕಾಂತಗಳು ಕೇವಲ ಕಬ್ಬಿಣವನ್ನು ಮಾತ್ರ ಆಕರ್ಷಿಸುವುದಲ್ಲದೇ ಕೆಲವು ಧಾತುಗಳನ್ನು ಕೂಡ ಆಕರ್ಷಿಸುತ್ತದೆ ಆದುದರಿಂದ ಇದನ್ನು ಕಾಂತತೆ, ಕಾಂತಶಕ್ತಿ ಅಥವಾ ಕಾಂತತ್ವ ಎಂದು ಕರೆಯುತ್ತಾರೆ. ಈ ಗುಣಹೊಂದಿರುವ ವಸ್ತುಗಳನ್ನು ಮ್ಯಾಗ್ನೆಟ್ ಎಂದು ಕರೆಯುತ್ತಾರೆ.
ಭೂಮಿಯಲ್ಲಿ ಸಿಗುವ ಕಬ್ಬಿಣದ ಅದಿರಿನಲ್ಲಿ ಮ್ಯಾಗ್ನಟೈಟ್ ಹಾಗು ಲೋಡಸ್ಟೋನ್ ಎಂಬ ಅದಿರಿನ ಜಾತಿ ಇದೆ. ಕ್ರಿಸ್ತಪೂರ್ವದಲ್ಲಿ 'ಯುರಿಪಿಡೀಸ್' ಎಂಬ ಗ್ರೀಕ್ ವಿಜ್ಞಾನಿ ಕಬ್ಬಿಣವನ್ನು ಆಕರ್ಷಿಸುವ ಕಲ್ಲುಗಳ ವಿಚಾರವನ್ನು ಪ್ರಸ್ತಾಪಿಸಿದ ಎಂದು ವಿದ್ವಾಂಸರು ತಿಳಿದಿದ್ದಾರೆ. ಉಕ್ಕಿನ ಪಟ್ಟಿಗಳ ಮೇಲೆ ಒಂದೇ ದಿಕ್ಕಿಗೆ ಇಂತಹ ಸೂಜಿಕಲ್ಲನ್ನು ಹಲವಾರು ಬಾರಿ ಉಜ್ಝಿದರೆ ಆ ಉಕ್ಕಿಗೂ ಅದೇ ಬಗೆಯ ಕಾಂತ ಗುಣ ಶಾಶ್ವತವಾಗಿ ಬರುತ್ತದೆ. ಎಂಬ ಅಂಶವನ್ನು ಚೀನಿಯರು ಅರಿತಿದ್ದರು. ಕಬ್ಬಿಣವನ್ನು ಆಕರ್ಷಿಸುವ ಮ್ಯಾಗ್ನೆಟೈಟ್ ಅದಿರು ಭಾರತ ಅಲ್ಲದೇ ಪ್ರಪಂಚದ ಹಲವಾರು ದೇಶಗಳಲ್ಲಿಯೂ ದೊರೆಯುತ್ತದೆ. ಏಷ್ಯಾ ಮೈನರ್ ಪ್ರದೇಶದ ಮ್ಯಾಗ್ನೆಸ್ ಎಂಬೊಬ್ಬ ಕುರುಬರ ಹುಡುಗ ಇದನ್ನು ಕಂಡುಹಿಡಿದರಿಂದ ಇದಕ್ಕೆ ಮ್ಯಾಗ್ನೆಟ್ ಎಂಬ ಹೆಸರು ಬಂತೆಂದು ಒಂದು ದಂತಕಥೆಯಲ್ಲಿ ಹೇಳಲಾಗಿದೆ. ಕೆಲವರು ತಿಳಿಸುವಂತೆ ಪ್ರಾಚೀನ ಗ್ರೀಸ್ ಬಳಿ 'ಮ್ಯಾಗ್ನೇಸಿಯ' ಎಂಬ ಊರು ಇತ್ತೆಂದು ಅಲ್ಲಿ ಒಂದು ಬಗೆಯ ಕಪ್ಪು ಶಿಲೆಯನ್ನು ಪ್ರಾಚೀನ ಗ್ರೀಕರು ಕಂಡುಹಿಡಿದರೆಂದು ಆ ಶಿಲೆಗಳು ಕಬ್ಬಿಣದ ಚೂರುಗಳನ್ನು ಆಕರ್ಷಿಸುತ್ತಿತ್ತೆಂದು ಈ ಕಾರಣಕ್ಕಾಗಿ ಇದಕ್ಕೆ ಮ್ಯಾಗ್ನೆಟ್ ಎಂಬ ಹೆಸರು ಬಂದಿತು. ಆಯಸ್ಕಾಂತಗಳನ್ನು ಚೀನಿಯರು 'ಚುಷಿಯು' ಎಂದರೆ ಒಲವಿನ ಶಿಲೆ, ಫ಼್ರಾನ್ಸ್ ದೇಶದ ಜನರು 'ಐಮಂತೆ', ಗ್ರೀಕರು 'ಹರ್ಕ್ಯುಲಿಸ್' ಎಂದು ಕರೆಯುತ್ತಿದ್ದರು. ಆದರೆ ಇಂದು ಆಯಸ್ಕಾಂತಗಳು ಅಂದರೆ ಕೃತಕ ಆಯಸ್ಕಾಂತಗಳು ಅಪೂರ್ವ ಎನಿಸುವ ಶಕ್ತಿಯನ್ನು ಪ್ರದರ್ಶಿಸುತ್ತದೆ.
ಕಾಂತತೆಯ ಅಣುರೂಪ
[ಬದಲಾಯಿಸಿ]ಒಂದು ಆಯಸ್ಕಾಂತವನ್ನು ತೆಗೆದುಕೊಂಡು ಅದನ್ನು ವಿಭಜಿಸಿ ಅನೇಕ ಚೂರುಗಳಾಗಿ ಮಾಡಿದಾಗ ಪ್ರತಿಯೊಂದು ಸಣ್ಣ ಚೂರು ಚಿಕ್ಕ ಕಾಂತದಂತೆ ವರ್ತಿಸುತ್ತವೆ, ಅಂದರೆ ಕಾಂತ ವಸ್ತುವಿನ ಪ್ರತಿಯೊಂದು ಅಣುವು ಕಾಂತದಂತೆ ವರ್ತಿಸುವುದು ಎಂದು ಭಾವಿಸಲಾಗಿದೆ. ಒಂದು ಸಾಧಾರಣ ಕಬ್ಬಿಣದ ತುಂಡಿನಲ್ಲಿ ಅಣುಗಳು ವಿವಿಧ ದಿಕ್ಕುಗಳಲ್ಲಿರುತ್ತವೆ. ಅಂದರೆ ಒಂದು ಅಣು ಉತ್ತರಕ್ಕೆ ಅಭಿಮುಖವಾಗಿದ್ದರೆ ಇನ್ನೊಂದು ದಕ್ಷಿಣಕ್ಕೆ ಅಭಿಮುಖವಾಗಿರುತ್ತದೆ.[೫] ಕಬ್ಬಿಣದ ದಂಡದ ಕೊನೆಗಳಲ್ಲಿ ಬರಿಯ ಉತ್ತರ ಧ್ರುವವಾಗಲಿ ಇಲ್ಲವೆ ದಕ್ಷಿಣ ಧ್ರುವವಾಗಲಿ ಇರುವುದಿಲ್ಲ. ಇದರಿಂದಾಗಿ ಸಾಧಾರಣ ಕಬ್ಬಿಣದ ತುಂಡು ಆಯಸ್ಕಾಂತದಂತೆ ವರ್ತಿಸುವುದಿಲ್ಲ. ಆಯಸ್ಕಾಂತದಲ್ಲಿ ಅಣುಗಳು ವಿವಿದ ಸಾಲುಗಳಲ್ಲಿ ಒಂದರ ಹಿಂದೆ ಒಂದರಂತೆ ನಿಲ್ಲುತ್ತವೆ ಆಗ ಆಯಸ್ಕಾಂತದ ಒಂದು ತುದಿಯಲ್ಲಿ ಬರಿಯ ಉತ್ತರ ಧ್ರುವಗಳು ಇನ್ನೊಂದು ತುದಿಯಲ್ಲಿ ದಕ್ಷಿಣದ ಧ್ರುವಗಳು ಇದ್ದು ಕಾಂತತೆಯು ಪ್ರದರ್ಶಿಸಲ್ಪಡುವುದು. ಇದನ್ನು ಕಾಂತತೆಯ ಅಣುವಾದ ಎಂದು ಕರೆಯುತ್ತಾರೆ. ಅಣುಗಳು ಕಾಂತತೆಯನ್ನು ಪಡೆಯುವುದಕ್ಕೆ ಕಾರಣ ಪರಮಾಣುವಿನ ವಿವಿಧ ಕವಚಗಳಲ್ಲಿ ಭ್ರಮಿಸುವ ಎಲೆಕ್ಟ್ರಾನ್ಗಳು. ಕಬ್ಬಿಣವು ಕಾಂತಗುಣ ಹೊಂದಿದ್ದರೆ ಅದಕ್ಕೆ ಕಾರಣ ಅದರಲ್ಲಿ ಬಹಳಷ್ಟು ಎಲೆಕ್ಟ್ರಾನ್ಗಳು ಒಂದೇ ದಿಕ್ಕಿನಲ್ಲಿ ಭ್ರಮಿಸುವುದು. ಕಬ್ಬಿಣದ ಪರಮಾಣುಗಳು ಗುಂಪುಗುಂಪಾಗಿರುತ್ತವೆ. ಪ್ರತೀ ಗುಂಪಿನ ಪರಮಾಣುಗಳು ಅಚ್ಚುಕಟ್ಟಾಗಿ ಒಂದೇ ರೇಖೆಯಲ್ಲಿ ನಿಂತು ಕಾಂತತೆಗೆ ಕಾರಣವಾಗುತ್ತದೆ. ಪ್ರತಿಯೊಂದು ಪರಮಾಣುವಿನಲ್ಲು ನ್ಯೂಕ್ಲಿಯಸ್ ಅನ್ನು ಪರಿಭ್ರಮಿಸುವ ಎಲೆಕ್ಟ್ರಾನ್ಗಳಿವೆ. ಈ ಎಲೆಕ್ಟ್ರಾನ್ಗಳ ಪರಿಭ್ರಮಣೆ ಮತ್ತು ಭ್ರಮಣತೆ ಇಂದಾಗಿ ಕಾಂತ ಗುಣಗಳು ತೋರಿ ಬರುತ್ತವೆ. ವಿವಿದ ಎಲೆಕ್ಟ್ರಾನ್ಗಳ ಕಾಂತ ಪರಿಣಾಮಗಳು ಒಟ್ಟಾಗಿ ಮಾಯವಾಗುತ್ತವೆಯೇ ಇಲ್ಲವೆ ಅವು ಉಳಿದುಕೊಳ್ಳುತ್ತವೆಯೆ ಎಂಬುದರ ಆಧಾರದ ಮೇಲೆ ಪರಮಾಣುವಿನ ಹಾಗು ಪದಾರ್ಥದ ಕಾಂತಗುಣಗಳು ನಿರ್ಧಾರವಾಗುತ್ತವೆ.
ಕಾಂತೀಯ ವಸ್ತುಗಳು
[ಬದಲಾಯಿಸಿ]ಪದಾರ್ಥಗಳನ್ನು ಕಾಂತ ಕ್ಷೇತ್ರದಲ್ಲಿ ಇಟ್ಟಾಗ ಅವುಗಳ ಮೂಲಕ ಹಾದುಹೋಗುವ ಬಲರೇಖೆಗಳ ದಟ್ಟಣೆ ಮತ್ತು ಪ್ರೇರಿತವಾಗುವ ಕಾಂತತೆಯನ್ನು ಅವಲಂಬಿಸಿ ಕಾಂತೀಯ ವಸ್ತುಗಳ ವರ್ಗೀಕರಣ ಮಾಡುತ್ತಾರೆ. ನೀರು, ಉಪ್ಪು, ತಾಮ್ರ ಮೊದಲಾದ ವಸ್ತುಗಳನ್ನು ಬಾಹ್ಯ ಕಾಂತ ಕ್ಷೇತ್ರದಲ್ಲಿಟ್ಟಾಗ ಅವು ಪ್ರಬಲ ಕಾಂತಕ್ಷೇತ್ರದಿಂದ ವಿಮುಖವಾಗುತ್ತವೆ. ಅಂದರೆ ಬಾಹ್ಯಕ್ಷೇತ್ರಕ್ಕೆ ಅಡ್ಡವಾಗಿ ನಿಲ್ಲುತ್ತವೆ. ಇವು ಅಡ್ಡ ಕಾಂತೀಯ ಪದಾರ್ಥಗಳು. ಅಲ್ಯೂಮಿನಿಯಂ, ಮೈಲು ತುತ್ತು ಮುಂತಾದ ಕೆಲವು ವಸ್ತುಗಳು ಬಾಹ್ಯ ಕಾಂತಕ್ಷೇತ್ರದಲ್ಲಿ ಪ್ರಬಲ ಕಾಂತಕ್ಷೇತ್ರದ ಕಡೆಗೆ ಆಕರ್ಷಿತವಾಗುತ್ತದೆ. ಅವು ಕಾಂತೀಯ ಪದಾರ್ಥಗಳು. ಕೋಬಾಲ್ಟ್, ನಿಕಲ್ ಮತ್ತು ಕಬ್ಬಿಣ ಮೊದಲಾದ ವಸ್ತುಗಳಿಗೆ ಬಾಹ್ಯ ಕಾಂತಕ್ಷೇತ್ರದ ದಿಕ್ಕಿನಲ್ಲಿ ನಿಲ್ಲುವ ಗುಣವಿದೆ. ಇವು ಅತಿ ಕಾಂತೀಯ ಪದಾರ್ಥಗಳು. ಎಲ್ಲಕ್ಕಿಂತ ಹೆಚ್ಚಾಗಿ ಕಬ್ಬಿಣವನ್ನು ಅದರಲ್ಲು ಮೆದುಕಬ್ಬಿಣವನ್ನು ಕಾಂತೀಕರಿಸುವುದು ಸುಲಭ. ಕೆಲವಸ್ತುಗಳನ್ನು ಕಾಂತಕ್ಷೇತ್ರದಲ್ಲಿಟ್ಟಾಗ ಕ್ಷೇತ್ರದ ಬಲರೇಖೆಗಳನ್ನು ತನ್ಮೂಲಕ ಹಾದುಹೋಗಲು ಅನುಕೂಲ ಮಾಡಿಕೊಡುತ್ತವೆ. ಆದರೆ ಮೇಲೆ ವಿವರಿಸಲಾಗಿರುವ ಅಡ್ಡ ಕಾಂತೀಯ ವಸ್ತುಗಳು ಈ ಗುಣವನ್ನು ಅಲ್ಪ ಪ್ರಮಾಣದಲ್ಲಿ ಪಡೆದಿವೆ. ಅನುಕಾಂತೀಯ ವಸ್ತುಗಳಲ್ಲಿ ಈ ಗುಣ ಸ್ವಲ್ಪ ಮಟ್ಟಿಗೆ ಹೆಚ್ಚಿಗೆ ಇದ್ದರೂ ಅತಿಕಾಂತೀಯ ವಸ್ತುಗಳಲ್ಲಿ ಈ ಗುಣ ಅತ್ಯಧಿಕವಾಗಿ ಕಂಡುಬರುತ್ತದೆ. [೬]
ಅಡ್ಡ ಕಾಂತೀಯ ಪದಾರ್ಥಗಳಲ್ಲಿ ಬಲರೇಖೆಗಳು ನಿರ್ವಾತದಲ್ಲಿ ಹಾಯುವಷ್ಟು ಸುಲಭವಾಗಿ ವಸ್ತುಗಳನ್ನು ಹಾಯಲಾರವು. ಇವುಗಳನ್ನು ಕಾಂತಕ್ಷೇತ್ರದಲ್ಲಿ ಅಡ್ಡಲಾಗಿ ತೂಗಾಡಿಸಿದರೆ ಕಾಂತಕ್ಷೇತ್ರದ ದಿಕ್ಕಿಗೆ ಅಡ್ಡವಾಗಿ ನಿಲ್ಲುತ್ತದೆ. ಆದರೆ ಅವು ಕಾಂತೀಯ ಪದಾರ್ಥಗಳಲ್ಲಿ ಕಾಂತ ಬಲರೇಖೆಗಳು ಗಾಳಿ ಮತ್ತು ನಿರ್ವಾತದಲ್ಲಿ ಹಾದುಹೋಗುವುದಕ್ಕಿಂತ ಸುಲಭವಾಗಿ ಸಾಗುತ್ತವೆ. ಇವುಗಳನ್ನು ಕಾಂತಕ್ಷೇತ್ರದಲ್ಲಿ ತೂಗಾಡಿಸಿದರೆ ಕಾಂತಕ್ಷೇತ್ರದ ದಿಕ್ಕಿನಲ್ಲೇ ನಿಲ್ಲುತ್ತವೆ. ಅತಿಕಾಂತೀಯ ಪದಾರ್ಥಗಳು ಕಾಂತಕ್ಷೇತ್ರದ ಬಲರೇಖೆಗಳು ತಮ್ಮಲ್ಲೇ ಸಾಂದ್ರೀಕ್ರುತವಾಗುವಂತೆ ಮಾಡುತ್ತವೆ.
ಕಾಂತದ ಗುಣಗಳು
[ಬದಲಾಯಿಸಿ]ಒಂದು ಅಯಸ್ಕಾಂತವನ್ನು ಕಬ್ಬಿಣದ ಧೂಳಿನಲ್ಲಿ ಹೊರಳಿಸಿದರೆ ಅದರ ತುದಿಗಳಲ್ಲಿ ಮಾತ್ರ ಧೂಳು ಹೆಚ್ಚಾಗಿ ಆಕರ್ಷಿಸಲ್ಪಡುತ್ತದೆ. ಆದರೆ ಕಾಂತದ ಮಧ್ಯಭಾಗದಲ್ಲಿ ಆಕರ್ಷಣೆಯೇ ಇರುವುದಿಲ್ಲ. ವಿದ್ಯುತ್ತು ಇಲ್ಲವೇ ಕಬ್ಬಿಣಗಳಿಲ್ಲದ ಜಾಗದಲ್ಲಿ ಆಯಸ್ಕಾಂತವನ್ನು ಮಧ್ಯದಲ್ಲಿ ತೂಗು ಹಾಕಿದರೆ ಅದು ಉತ್ತರ-ದಕ್ಷಿಣ ದಿಕ್ಕಿನಲ್ಲಿ ನಿಲ್ಲುತ್ತದೆ. ಇದಕ್ಕೆ ಕಾರಣವೆಂದರೆ ಭೂಮಿಯೂ ಕೂಡ ಒಂದು ಆಯಸ್ಕಾಂತದಂತೆ ವರ್ತಿಸುತ್ತದೆ. ಉತ್ತರ ದಿಕ್ಕಿಗೆ ಮುಖ ಮಾಡಿರುವ ತುದಿಯನ್ನು ಉತ್ತರ ಧ್ರುವವೆಂದೂ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ದಿಕ್ಕನ್ನು ದಕ್ಷಿಣ ಧ್ರುವವೆಂದು ಕರೆಯುತ್ತಾರೆ. ವಿಜಾತೀಯ ಧ್ರುವಗಳು ಅಂದರೆ ಉತ್ತರ ಹಾಗೂ ದಕ್ಷಿಣ ಧ್ರುವಗಳು ಪರಸ್ಪರ ಆಕರ್ಷಿಸುತ್ತವೆ. ಆದರೆ ಸಜಾತೀಯ ಧ್ರುವಗಳು ಅಂದರೆ ಎರಡು ಉತ್ತರ ಧ್ರುವಗಳು ಅಥವಾ ಎರಡು ದಕ್ಷಿಣ ಧ್ರುವಗಳು ವಿಕರ್ಷಿಸುತ್ತವೆ.
ವಿವಿಧ ಪ್ರಕಾರದ ಕಾಂತಗಳು
[ಬದಲಾಯಿಸಿ]ನಿಸರ್ಗದಲ್ಲಿ ಸ್ವಾಭಾವಿಕವಾಗಿ ದೊರೆಯುವ ಕಾಂತಗಳನ್ನು 'ನೈಸರ್ಗಿಕ ಕಾಂತಗಳು' ಅಥವಾ 'ಸಹಜ ಕಾಂತಗಳು' ಎಂದು ಕರೆಯುತ್ತಾರೆ. ಆದರೆ ಈ ಕಾಂತಗಳ ಆಕಾರ ಮತ್ತು ಗಾತ್ರ ಸೂಕ್ತ ಮಾದರಿಗಳಲ್ಲಿ ಇರುವುದಿಲ್ಲ. ಅವನ್ನು ಪ್ರಯೋಗಾಲಯಗಳಲ್ಲಿ ಮತ್ತು ಇತರ ಕಡೆಗಳಲ್ಲಿ, ಬೇರೆ ಬೇರೆ ಉಪಕರಣಗಳಲ್ಲಿ ಬಳಸಲು ಸಾಧ್ಯವಾಗುವುದಿಲ್ಲ, ಹಾಗಾಗಿ ನೈಸರ್ಗಿಕ ಕಾಂತಗಳ ಸಹಾಯ ಪಡೆದು ತಮಗೆ ಅಗತ್ಯ ವಾಗಿರುವಂತಹ ಕಾಂತಗಳನ್ನು ತಯಾರಿಸಿಕೊಳ್ಳಬಹುದು. ಇವನ್ನು 'ಕೃತಕ ಕಾಂತಗಳು' ಎಂದು ಕರೆಯುತ್ತಾರೆ. ಆಕಾರಕ್ಕೆ ಅನುಗುಣವಾಗಿ ಇವಕ್ಕೆ ಕುದುರೆಲಾಳಕಾರದ ಕಾಂತ, ಸೂಜಿ ಕಾಂತ, ಬಿಲ್ಲೆ ಕಾಂತ, ಉಂಗುರ ಕಾಂತ, ಸಲಾಕೆ ಕಾಂತ, ದಂಡ ಕಾಂತ ಎಂದು ಅನೇಕ ಹೆಸರುಗಳನ್ನು ಇಡಲಾಗಿದೆ. ಜಗತ್ತಿನ ಎಷ್ಟೋ ಪ್ರದೇಶಗಳಲ್ಲಿ ಕಾಂತೀಯ ಅದಿರು ದೊರೆಯುತ್ತದೆ. ಹಾಗೆ ದೊರೆಯದಿದ್ದರೂ ರಾಸಾಯನಿಕ ವಸ್ತುಗಳನ್ನು ಮಾರುವ ಅಂಗಡಿಗಳಲ್ಲಿ ಈ ಅದಿರು ಸಿಗಬಹುದು. ಅದರಲ್ಲಿ ಕಾಂತ ಶಕ್ತಿ ಇದೆಯೇ ಎಂಬುದನ್ನು ಪರೀಕ್ಷಿಸಲು ಕಬ್ಬಿಣದ ಸಣ್ಣ ಚೂರುಗಳನ್ನು, ಪುಡಿಯನ್ನು ಇಲ್ಲವೆ ಉಕ್ಕಿನ ಬಹಳ ನವಿರಾದ ಪುಡಿಯನ್ನು ಬಿಳಿಯ ಕಾಗದದ ಮೇಲೆ ಉದುರಿಸಿಕೊಂಡು ತಂದಿರುವ ಅದಿರು ಅವನ್ನು ಆಕರ್ಷಿಸುವುದೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. ಕಾಗದ ಕ್ಲಿಪ್ಪುಗಳು, ಜಮಖಾನದ ಟಾಕುಗಳು ಮುಂತಾದ ಸ್ವಲ್ಪ ಭಾರವಿರುವ ವಸ್ತುಗಳನ್ನು ಆ ಅದಿರಿನಿಂದ ಎತ್ತಲು ಪ್ರಯತ್ನಿಸಿ ಅದರ ಕಾಂತ ಶಕ್ತಿಯನ್ನು ಖಚಿತ ಪಡಿಸಿಕೊಳ್ಳಬಹುದು. ಕಾಂತ ಸೂಜಿಯೊಂದನ್ನು ಅದಿರಿನ ಹತ್ತಿರ ತಂದು ಅದಿರಿನ ಎಲ್ಲ ಭಾಗಗಳು ಒಂದೇ ರೀತಿಯಲ್ಲಿ ಕಾಂತ ಸೂಜಿಯನ್ನು ಆಕರ್ಷಿಸುವುದೇ ಎಂಬುದನ್ನೂ ಕಂಡುಕೊಳ್ಳಬಹುದು. ಹಳೆಯ ರೇಡಿಯೋ, ಧ್ವನಿವರ್ಧಕಗಳು, ಹಳೆಯ ಟೆಲಿಫ಼ೋನ್ ಗ್ರಾಹಕರು, ಹಳೆಯ ಮೋಟಾರಿನ ಸ್ಪೀಡೋಮೀಟರುಗಳು ಮುಂತಾದ ಕೆಲವು ಉಪಕರಣಗಳಿಂದ ಪ್ರಯೋಗಕ್ಕೆ ಮತ್ತು ಚಿಕ್ಕಪುಟ್ಟ ಕಾರ್ಯಗಳಿಗೆ ಅಗತ್ಯವಾಗಿರುವ ಕೃತಕ ಕಾಂತಗಳನ್ನು ಪಡೆದುಕೊಳ್ಳಬಹುದು. ಇವು ಸಾಮಾನ್ಯವಾಗಿ ಲಾಳದ ಅಥವಾ ದಂಡದ ಅಥವಾ ಪಟ್ಟಿ ಆಕೃತಿಗಳಲ್ಲಿ ಇರಬಹುದು. ಇಂಗ್ಲೀಷಿನ 'ಯು' ಆಕಾರದ ಮತ್ತು ಸೂಜಿ ಕಾಂತಗಳು ಕೂಡ ದೊರೆಯುತ್ತವೆ.
ಪ್ರೇರಿತ ಕಾಂತತ್ವ
[ಬದಲಾಯಿಸಿ]ಒಂದು ಕಾಂತವು ತನ್ನ ಬಳಿಯಿರುವ ಇನ್ನೊಂದು ಕಾಂತ ವಸ್ತುವಿನಲ್ಲಿ ಕಾಂತತೆಯನ್ನು ಉಂಟು ಮಾಡುವುದೇ ಪ್ರೇರಿತ ಕಾಂತತ್ವ ಅಥವಾ ಪ್ರೇರಿತ ಕಾಂತತೆ.[೭] [೮]ಕಾಂತವೊಂದರ ಬಳಿ ಕಬ್ಬಿಣದ ಮೊಳೆಯೊಂದನ್ನು ಹಿಡಿದರೆ ಅದು ಆಕರ್ಷಿಸಲ್ಪಡುವುದು. ಜತೆಯಲ್ಲಿ ಈ ಮೊಳೆ ಇನ್ನೊಂದನ್ನು ಆ ಇನ್ನೊಂದು ಮೊಳೆ ಮತ್ತೊಂದನ್ನು ಕೂಡ ಆಕರ್ಷಿಸಬಲ್ಲದು. ಆದರೆ ಮೊದಲನೆ ಮೊಳೆಯನ್ನು ತೆಗೆದರೆ ಸರಪಳಿ ದ್ವಂಸವಾಗುತ್ತದೆ. ಇಲ್ಲಿ ಮೊಳೆಯು ಪ್ರೇರಿತ ಕಾಂತದಂತೆ ವರ್ತಿಸಿತು. ಪ್ರೇರಿತ ಕಾಂತತೆಯಲ್ಲಿ ಎರಡು ಬಗೆಗಳಿವೆ. ಅವು ತಾತ್ಕಾಲಿಕ ಮತ್ತು ಶಾಶ್ವತ ಕಾಂತಗಳು. ತಾತ್ಕಾಲಿಕ ಕಾಂತಗಳಲ್ಲಿ ಕಬ್ಬಿಣವು ಕಾಂತ ಕ್ಷೇತ್ರದಲ್ಲಿ ಇರುವವರೆಗೆ ಮಾತ್ರ ಕಾಂತ ಗುಣವನ್ನು ಪ್ರದರ್ಶಿಸುತ್ತದೆ. ಆದರೆ ಉಕ್ಕಿನಂತಹ ಅತಿ ಕಠಿಣ ಪದಾರ್ಥಗಳನ್ನು ಒಮ್ಮೆ ಕಾಂತತೆಗೆ ಒಡ್ಡಿದರೆ ಅವು ಶಾಶ್ವತವಾಗಿ ಕಾಂತಗಳಾಗಿರುತ್ತವೆ. ಕಬ್ಬಿಣ, ನಿಕ್ಕಲ್, ತಾಮ್ರ ಮುಂತಾದ ಲೋಹಗಳನ್ನು ಒಂದುಗೂಡಿಸಿ ತಯಾರಾಗುವ ಮಿಶ್ರಲೋಹಗಳಿಂದ ಕೂಡ ಶಾಶ್ವತ ಕಾಂತಗಳನ್ನು ತಯಾರಿಸಬಹುದು. ಒಂದು ಮೆದು ಕಬ್ಬಿಣ ತುಂಡಿಗೆ ಹತ್ತಿ ಸುತ್ತಿದ ತಾಮ್ರದ ತಂತಿಯನ್ನು ಸುತ್ತಿ ತರುವಾಗ ತಂತಿಯಲ್ಲಿ ವಿದ್ಯುತ್ತನ್ನು ಹರಿಸಿದಾಗ ಮೆದು ಕಬ್ಬಿಣವು ಕಾಂತತ್ವವನ್ನು ಪಡೆಯುವುದು. ಇದು ಕೂಡ ಪ್ರೇರಿತ ಕಾಂತತ್ವವೇ ಆಗಿದೆ. ಈ ಪ್ರೇರಿತ ಕಾಂತತ್ವದ ತತ್ವವನ್ನು ಅನುಸರಿಸಿ ವಿದ್ಯುದ್ಗಂಟೆಯನ್ನು ತಯಾರಿಸಲಾಗಿದೆ.
ಬಲರೇಖೆಗಳು
[ಬದಲಾಯಿಸಿ]ಕಾಂತಕ್ಷೇತ್ರದ ವಿವಿಧ ಬಿಂದುಗಲ್ಲಿ ಉತ್ತರ ಧ್ರುವವು ಅನುಭವಿಸುವ ಬಲದ ದಿಕ್ಕನ್ನು ಬಲರೇಖೆಯು ಸೂಚಿಸುತ್ತದೆ. ಬಲರೇಖೆಗಳನ್ನು ಪುಟ್ಟ ದಿಕ್ಸೂಚಿಯ ಸಹಾಯದಿಂದ ಕಾಂತಕ್ಷೇತ್ರದ ದಿಕ್ಕು ಮತ್ತು ತೀವ್ರತೆಯನ್ನು ತಿಳಿದುಕೊಳ್ಳಬಹುದು. ತುಂಬಾ ಹಿಂದಿನಿಂದಲೂ ಅಯಸ್ಕಾಂತದ ಬಲವು ಅಯಸ್ಕಾಂತದಿಂದ ಸ್ವಲ್ಪ ದೂರದವರೆಗೆ ಮಾತ್ರ ಪಸರಿಸಿರುತ್ತದೆ ಎಂದು ತಿಳಿದಿತ್ತು. ಖ್ಯಾತ ವಿಜ್ಞಾನಿ ಮೈಕಲ್ ಫ್ಯಾರಡೇ ಕಾಂತೀಯ ಬಲಕ್ಷೇತ್ರ ಮತ್ತು ಕಾಂತೀಯ ರೇಖೆಗಳ ಬಗ್ಗೆ ವಿವರಿಸಿದ ಮೊದಲ ವಿಜ್ಞಾನಿ.[೯] ಈ ವಿಚಾರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರ ಪರಿಣಾಮವಾಗಿ ಟೆಲಿಪೋನ್, ವಿದ್ಯುತ್ ದೀಪ, ರೇಡಿಯೋ ಮುಂತಾದ ಉಪಕರಣಗಳ ತಯಾರಿಕೆ ಸಾಧ್ಯವಾಯಿತು. ವಿವಿಧ ಕಾಂತದಲ್ಲಿ ಆಕರ್ಷಣೆಯು ಬೇರೆ ಬೇರೆ ಪ್ರಮಾಣಗಳಲ್ಲಿರುತ್ತದೆ. ಧ್ರುವಗಳಲ್ಲಿ ಈ ಶಕ್ತಿ ಅತ್ಯಧಿಕ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಕಾಂತತ್ವವು ಒಂದು ಕಾಂತದಲ್ಲಿ ಒಂದೇ ಸಮಾನವಾಗಿ ಹರಡಿರುವುದಿಲ್ಲ ಎಂಬ ಅಂಶ ಸ್ಪಷ್ಟವಾಗಿದೆ. ಕಾಂತದೊಳಗೆ ಯಾವ ಬಿಂದುವಿನಲ್ಲಿ ಸರಾಸರಿ ಪ್ರಮಾಣದಲ್ಲಿ ಎಷ್ಟು ಪ್ರಮಾಣದ ಕಾಂತತ್ವವಿದೆ ಎಂಬುದನ್ನು ಸೂಚಿಸಲು 'ಕಾಂತೀಕರಣದ ತೀವ್ರತೆ' ಎಂಬ ಪದವನ್ನು ಬಳಸಲಾಗುತ್ತಿದೆ. ಒಂದು ದಂಡಕಾಂತವು ತನ್ನ ಉತ್ತರ ಧ್ರುವದ ಹತ್ತಿರ ಕಬ್ಬಿಣದ ಮೊಳೆಯೊಂದನ್ನು ಆಕರ್ಷಿಸುತ್ತದೆ ಎಂಬುದನ್ನು ನಾವು ಅರಿತಿದ್ದೇವೆ. ಎರಡನೇ ಮೊಳೆಯೊಂದನ್ನು ಮೊದಲನೆಯ ಮೊಳೆಯು ತಾನೇ ಒಂದು ಕಾಂತದಂತೆ ಆಕರ್ಷಿಸುತ್ತದೆ. ದಂಡಕಾಂತದ ಉತ್ತರ ಧ್ರುವವನ್ನು ಮೊಳೆಯಲ್ಲಿ ತನ್ನ ಹತ್ತಿರದ ತುದಿಯಲ್ಲಿ ದಕ್ಷಿಣ ಧ್ರುವವನ್ನು ದೂರದ ತುದಿಯಲ್ಲಿ ಉತ್ತರ ಧ್ರುವವನ್ನು ಪ್ರೇರಿಸುತ್ತದೆ. ಈ ಮೊಳೆಯಲ್ಲಿನ ಪ್ರೇರಿತ ಕಾಂತತ್ವ ಎರಡನೇ ಮೊಳೆಯಲ್ಲಿ ಕಾಂತತ್ವವನ್ನು ಪ್ರೇರಿಸುತ್ತದೆ.
ಒಂದು ಮಿದು ಕಬ್ಬಿಣದ ದಂಡವನ್ನು ಕಾಂತಕ್ಷೇತ್ರದಲ್ಲಿ ಸಮಾಂತರವಾಗಿ ಇಟ್ಟಾಗ ಕಾಂತೀಯ ಪ್ರೇರಣೆಯಿಂದ ಆ ದಂಡವು ಕಾಂತವಾಗಿ ಧ್ರುವಗಳನ್ನು ಹೊಂದುತ್ತದೆ. ದಂಡದೊಳಗೆ ಹಾಯುವ ಬಲರೇಖೆಗಳು ಬಾಹ್ಯಕ್ಷೇತ್ರದಷ್ಟೇ ಅಲ್ಲದೇ ಸ್ವಂತದ ಬಲರೇಖೆಗಳನ್ನೂ ಒಳಗೊಳ್ಳುವುದರಿಂದ ದಂಡದೊಳಗೆ ಹಾಯುವ ಬಲರೇಖೆಗಳ ಸಂಖ್ಯೆ ನಿಜವಾಗಿಯೂ ಹೆಚ್ಚಾಗುತ್ತದೆ. ಬಲರೇಖೆಗಳು ಯಾವಾಗಲೂ ಉತ್ತರ ಧ್ರುವದಿಂದ ದಕ್ಷಿಣ ಧ್ರುವದ ಕಡೆಗೆ ಹರಿಯಬೇಕು. ಈ ರೇಖೆಗಳು ಅವಿಚ್ಛಿನ್ನವಾಗಿದ್ದು ಯಾವುದೇ ಪದಾರ್ಥದಲ್ಲಾದರೂ ಹರಿಯುತ್ತದೆ. ಸಾಮಾನ್ಯವಾಗಿ ಒಂದು ಪದಾರ್ಥದಲ್ಲಿ ಹರಿಯುವ ಕಾಂತೀಯ ರೇಖೆಗಳು, ಯಾವುದೇ ಕಾಂತಕ್ಷೇತ್ರದಲ್ಲಾದರೂ ಪ್ರೇರಣಾರೇಖೆಗಳೇ ಆಗಿರುತ್ತದೆ. ಕೊಂಚ ತೀವ್ರತೆ ಹೊಂದಿರುವ ಬಲರೇಖೆಗಳು ಮನುಷ್ಯನ ಮೇಲೆ ಯಾವುದೇ ಪರಿಣಾಮವನ್ನು ಬಿರುವುದಿಲ್ಲ.
ಕಾಂತ ಧ್ರುವಗಳು
[ಬದಲಾಯಿಸಿ]ನೈಸರ್ಗಿಕ ಕಾಂತ ಮತ್ತು ಕೃತಕ ಕಾಂತಗಳ ತುದಿಗಳನ್ನು 'ಧ್ರುವಗಳು' ಎಂದು ಕರೆಯುತ್ತಾರೆ.[೧೦] ದಂಡಕಾಂತವನ್ನು ಸಮತೋಲದಲ್ಲಿ ಇರುವಂತೆ ತೂಗಿದಾಗ ಅದು ಸದಾ ಭೂಮಿಯ ಉತ್ತರ ದಕ್ಷಿಣ ದಿಕ್ಕಿಗೆ ಅಭಿಮುಖವಾಗಿ ನೆಲೆಗೊಳ್ಳುತ್ತದೆ. ಮೊದಲನೆಯ ಕೊನೆಯನ್ನು ಉತ್ತರಾಭಿಮುಖ ಧ್ರುವವೆಂದೂ ಹೇಳುತ್ತೇವೆ. ಭೂಮಿ ಒಂದು ಬೃಹತ್ಕಾಂತವಾಗಿ ವರ್ತಿಸುವುದೇ ಇದಕ್ಕೆ ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಾಂತಶಕ್ತಿ ಅತ್ಯಂತ ಹೆಚ್ಚಾಗಿರುವ ಭಾಗಗಳನ್ನು ಧ್ರುವಗಳೊಂದು ಶಕ್ತಿ ಇರದಿದ್ದ ಭಾಗಗಳನ್ನು ತಟಸ್ಥ ಭಾಗಗಳೆಂದು ಕರೆಯುತ್ತಾರೆ. ಮಹರಾಣಿ ಎಲಿಜಬೆತ್ ಆಳ್ವಿಕೆಯ ಕಾಲದಲ್ಲಿ ಕಾಂತವು ಎರಡು ಧ್ರುವಗಳನ್ನು ಹೊಂದಿದೆ ಎಂಬ ವಿಚಾರವನ್ನು ಪ್ರಕಟಿಸಲಾಯಿತು. ಆ ಎರಡು ಧ್ರುವಗಳು ಸ್ವಭಾವದಲ್ಲಿ ಒಂದಕ್ಕೊಂದು ವಿರುದ್ದವಾಗಿದ್ದು ಸಜಾತಿಯ ಧ್ರುವಗಳು ವಿಕರ್ಷಿಸುತ್ತವೆ ಮತ್ತು ವಿಜಾತಿಯ ಧ್ರುವಗಳು ಆಕರ್ಷಿಸುತ್ತವೆ ಎಂದೂ ವಿಜ್ಞಾನಿಗಳು ಪ್ರಕಟಿಸಿದರು ಎನ್ನಲಾಗಿದೆ. ಉತ್ತರ ಹಾಗೂ ದಕ್ಷಿಣ ಧ್ರುವವನ್ನು 'ಋಣಧ್ರುವ' ಎಂದು ಕರೆಯುವುದುಂಟು. ಒಂದು ಕಾಗದದ ಮೇಲೆ ಕಬ್ಬಿಣದ ಹುಡಿಯನ್ನು ಹಾಕಿ ಅದರ ಕೆಳಗೆ ಕಾಂತವನ್ನು ಆಡಿಸಿದಾಗ ಕಾಗದ ಮೇಲೆ ಕಾಂತರೇಖೆಗಳು ಹಬ್ಬುವ ರೀತಿಯನ್ನು ಪರಿಶೀಲಿಸಿದರೆ ಎರಡು ಧ್ರುವಗಳ ತುದಿಗೆ ಸಮೀಪವಾಗಿರುವ ಎರಡು ಬಿಂದುಗಳಿಂದ ಆ ರೇಖೆಗಳು ಹಬ್ಬಿರುವುದು ಕಾಣಿಸುತ್ತದೆ. ಆ ಪಟ್ಟಿಯಿಂದ ದೂರ ಸರಿದಂತೆ ಹಿಡಿಯುವ ಕಬ್ಬಿಣದ ಹುಡಿಯ ಪ್ರಮಾಣ ಕಾಣಿಸುತ್ತದೆ. ಆ ಕಾಂತ ಪ್ರವಾಹ ರೇಖೆಗಳ ಮೇಲೆ ದಕ್ಚಕ್ರಗಳನ್ನಿಟ್ಟರೆ ದಕ್ಷಿಣ ಧ್ರುವಗಳ ದಿಕ್ಕಿಗೆ ಸಮನಾಗಿಯೇ ನಿಲ್ಲುವುದು. ಕಬ್ಬಿಣ, ನಿಕ್ಕಲ್, ಕೋಬಾಲ್ಟ್ ಮೊದಲಾದ ಲೋಹಗಳ ಪಟ್ಟಿಯಲ್ಲಿ, ಅವುಗಳ ಆಂತರಿಕ ರಚನೆಯಲ್ಲಿ ಈ ಕಾಂತ ಶಕ್ತಿ ಸೇರಿಕೊಂಡಿದೆ. ಒಂದು ಉದ್ದನೆಯ ದಂಡಕಾಂತವನ್ನು ಎಷ್ಟು ತುಂಡುಗಳಾಗಿ ಮಾಡಿದರೂ ಅದರ ಒಂದೊಂದು ತುಂಡಿನಲ್ಲೂ ದಕ್ಷಿಣೋತ್ತರ ಧ್ರುವಗಳಿರುವುದನ್ನು ಅವುಗಳಲ್ಲಿ ಕಾಂತಶಕ್ತಿಯಿರುವುದನ್ನು ಕಂಡುಕೊಳ್ಳಲಾಗಿದೆ.
ಕಾ೦ತ ಕ್ಷೇತ್ರ
[ಬದಲಾಯಿಸಿ]ಕಾ೦ತ ಕ್ಷೇತ್ರ ಅಥವಾ ಮ್ಯಾಗ್ನೆಟಿಕ್ ಫೀಲ್ಡ್[೧೧] ಎಂದರೆ ಕಾಂತೀಯ ಕಾಯದ ಸುತ್ತ ಅಥವಾ ವಿದ್ಯುತ್ ಹರಿಯುವ ವಾಹಕದ ಸುತ್ತ ಮತ್ತು ಬೆಳಕಿನ ತರಂಗದಲ್ಲಿ ವಿದ್ಯುತ್ ಕ್ಷೇತ್ರದೊಂದಿಗೆ ಅಸ್ತಿತ್ವದಲ್ಲಿರುವ ಬಲಕ್ಷೇತ್ರ. ಈ ಕ್ಷೇತ್ರದಲ್ಲಿ ಚಲಿಸುವ ಅವಿಷ್ಟ ಕಣಗಳು ಬಲಕ್ಕೊಳಗಾಗಿರುತ್ತವೆ. ಒಂದು ಕಾಂತ ಅಥವಾ ಕಾಂತಧ್ರುವದ ಸುತ್ತ ಅದರ ಪ್ರಭಾವವನ್ನು ಗುರುತಿಸಬಹುದಾದ ಹರವಿಗೆ ಕಾಂತಕ್ಷೇತ್ರವೆಂದು ಕರೆಯುತ್ತಾರೆ.[೧೨] ಒಂದು ಬಿಂದುವಿನಲ್ಲಿ ಒಂದು ಏಕ ಧ್ರುವವು ಬಲವನ್ನು ಅನುಭವಿಸಿದರೆ ಅದು ಬೇರಾವುದೋ ಕಾಂತಕ್ಷೇತ್ರದಲ್ಲಿದೆ ಎಂದು ಅರ್ಥವಾಗುವುದು. ಏಕ ಧ್ರುವವು ಅನುಭವಿಸುವ ಬಲವೇ ಬಿಂದುವಿನಲ್ಲಿ ಕಾಂತಕ್ಷೇತ್ರದ ತೀವ್ರತೆಯನ್ನು ಅಳೆಯುವುದು. ಬಲವು ಒಂದು ಡೈನ್ ಆದರೆ ಕಾಂತಕ್ಷೇತ್ರದ ತೀವ್ರತೆಯು ಒಂದು ಓರ್ಸ್ಟೆಡ್ ಆಗಿರುವುದು. ಡೆನ್ಮಾರ್ಕಿನ ಹಾನ್ಸ್ ಕ್ರಿಶ್ಚಿಯನ್ ಓರ್ಸ್ಟೆಡ್(೧೭೭೭-೧೮೧೫) ಎಂಬ ವಿಜ್ಞಾನಿಯ ನೆನಪಿಗಾಗಿ ಕಾಂತಕ್ಷೇತ್ರದ ಗುಣವನ್ನು ಹೀಗೆ ಕರೆಯುತ್ತಾರೆ. ಕಾಂತಕ್ಷೇತ್ರದ ವಿವಿಧ ಬಿಂದುಗಳಲ್ಲಿ ಏಕ ಉತ್ತರ ಧ್ರುವವು ಅನುಭವಿಸುವ ಬಲದದಿಕ್ಕನ್ನು ಬಲರೇಖೆಯು ಸೂಚಿಸುತ್ತದೆ. ಕಾಂತಕ್ಷೇತ್ರವನ್ನಳೆಯಲು ಮತ್ತು ಧ್ರುವ ಸಾಮರ್ತ್ಯವನ್ನಳೆಯಲು ಕೂಲಂಬ್ನ ನಿಯಮ ಉಪಯುಕ್ತವಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಂದು ಪ್ರಬಲ ಕಾಂತದ ಧ್ರುವಗಳ ಸಾಮರ್ಥ್ಯ ಬಹಳ ಹೆಚ್ಚಾಗಿರುತ್ತದೆ. ಯಾವುದೇ ಒಂದು ಕಾಂತದ ಎರಡು ಧ್ರುವಗಳ ಸಾಮರ್ಥ್ಯ ಒಂದು ಪ್ರಮಾಣದಲ್ಲಿರುತ್ತದೆ ಎಂಬುದು ಮಹತ್ವದ ವಿಚಾರ. ಅದಕ್ಕೆ ಕಾರಣವೇನೆಂದರೆ ಯಾವುದೆ ಕಾಂತೀಯ ಪದಾರ್ಥದ ಅಣುಗಳು ಪುಟ್ಟ ಕಾಂತಗಳು ಎಂದು ಭಾವಿಸಿದರೆ ಆ ಪದಾರ್ಥ ದಂಡಕಾಂತವಾದಾಗ ಅದರಲ್ಲಿ ಅವ್ಯವೆಸ್ತಿತವಾಗಿ ಮೊದಲು ಹರಡಿಕೊಂಡಿದ್ದ ಕಾಂತಾಣುಗಳು ಒಂದು ಕ್ರಮದಲ್ಲಿ ವ್ಯವಸ್ತಿತವಾಗಿ ಉತ್ತರ ಧ್ರುವಗಳನ್ನು ಒಂದು ದಿಕ್ಕಿಗೂ ದಕ್ಷಿಣ ಧ್ರುವಗಳನ್ನು ವಿರುದ್ದ ದಿಕ್ಕಿಗೂ ಮಾಡಿ ನಿಲ್ಲುತ್ತವೆ. ಇದರಿಂದ ದಂಡದಲ್ಲಿ ಅಷ್ಟಷ್ಟೇ ಎರಡು ಧ್ರುವಗಳು ನಿರ್ಮಿತವಾಗುತ್ತವೆ.
ಕೂಲಂಬ್ನ ನಿಯಮದ ಪ್ರಕಾರ ಎರಡು ಕಾಂತ ಧ್ರುವಗಳು ಪರಸ್ಪರ ಆಕರ್ಷಿಸುವ ಅಥವಾ ವಿಕರ್ಷಿಸುವ ಬಲದ ಪ್ರಮಾಣವು ಆ ಧ್ರುವ ಸಾಮರ್ಥ್ಯಗಳ ಗುಣಲಬ್ಧದ ಸಮಾನಪಾತ್ರದಲ್ಲಿಯೂ ಅವುಗಳ ನಡುವಿನ ದೂರದ ವರ್ಗದ ವಿಲೋಮನುಪಾತದಲ್ಲಿಯೂ ಇರುತ್ತದೆ. ಈ ಬಲವು ಧ್ರುವಗಳನ್ನು ಜೋಡಿಸುವ ರೇಖೆಯ ದಿಕ್ಕಿನಲ್ಲಿರುತ್ತದೆ ಒಂದೇ ತರಹದ ಕಾಂತಧ್ರುವವನ್ನು ಪ್ರತ್ಯೇಕವಾಗಿ ಪಡೆಯಲು ಸಾಧ್ಯವಾಗದು. ಏಕೆಂದರೆ ಯಾವುದೇ ದಂಡಕಾಂತದಲ್ಲಿ ಎರಡು ಧ್ರುವಗಳು ಇರಲೇಬೇಕು. ಒಂದು ದಂಡಕಾಂತದ ಸಾಮರ್ಥ್ಯವನ್ನು ಕೇವಲ ಅದರ ಧ್ರುವ ಸಾಮರ್ಥ್ಯಗಳಿಂದ ಅಳೆಯದೇ ಅದರ ಕಾಂತೀಯ ಮಹತ್ವ (ಮ್ಯಾಗ್ನೆಟಿಕ್ ಮೋಮಂಡ್) ದಿಂದ ಅಳೆಯುತ್ತಾರೆ. ಯಾವುದೇ ದಂಡಕಾಂತದಲ್ಲಿ ಸಾಮಾನ್ಯವಾಗಿ ಧ್ರುವಗಳು ದಂಡದ ಮಧ್ಯಬಿಂದುವಿನಿಂದ ಒಂದು ನಿರ್ದಿಷ್ಟ ಅಂತರದಲ್ಲಿರುತ್ತವೆ. ಈ ದೂರವನ್ನು ಕಾಂತಾಂತರ ಅಥವಾ ಕಾಂತೀಯ ಉದ್ದ ಎಂದು ಕರೆಯುತ್ತಾರೆ. ಯಾವುದೇ ಕಾಂತಕ್ಷೇತ್ರದ ಒಂದು ಬಿಂದುವಿನಲ್ಲಿ ಕ್ಷೇತ್ರ ಸಾಮರ್ಥ್ಯ ಎಷ್ಟೆಂದು ಅಳೆಯಲು ಒಂದು ಏಕಮಾನ ಉತ್ತರ ಧ್ರುವವನ್ನು ಆ ಬಿಂದುವಿನಲ್ಲಿಟ್ಟು ಅದು ಎಷ್ಟು ಬಲವನ್ನುಅನುಭವಿಸುವುದು ಎಂಬುದರ ಲೆಕ್ಕ ಹಾಕಬೇಕು. ಬರುವ ಬಲವೇ ಕ್ಷೇತ್ರದ ಅಳತೆಯ ಮಾನವಾಗುತ್ತದೆ. ಈ ಏಕಮಾನವೇ ಒಯರ್ಸ್ಟೆಡ್.[೧೩] ಒಂದು ಆಯಸ್ಕಾಂತವನ್ನು ಒಂದು ಪೇಪರ್ ಕ್ಲಿಪ್ನ ಬಳಿ ತಂದಾಗ ಕ್ಲಿಪ್ಪು ಆಯಸ್ಕಾಂತಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ. ಒಂದು ಆಯಸ್ಕಾಂತದ ಉತ್ತರ ಧ್ರುವದ ಬಳಿಗೆ ಇನ್ನೊಂದು ಆಯಸ್ಕಾಂತದ ಉತ್ತರ ಧ್ರುವವನ್ನು ತಂದಾಗ ಅದು ತನ್ನಷ್ಟಕ್ಕೆ ತಾನೆ ದೂರ ಚಲಿಸುತ್ತದೆ. ಹೀಗೆ ಒಂದು ಆಯಸ್ಕಾಂತದ ಪ್ರಭಾವ ಇರುವಂತಹ ವಲಯವನ್ನು ಕಾಂತೀಯ ಕ್ಷೇತ್ರ ಎಂದು ಕರೆಯುತ್ತಾರೆ. ಆದರೆ ಈ ಪ್ರಭಾವ ಕಾಂತೀಯ ಕ್ಷೇತ್ರದುದ್ದಕ್ಕೂ ಒಂದೇ ಸಮನಾಗಿರುವುದಿಲ್ಲ ಮತ್ತು ಅದು ಒಂದು ನಿರ್ದಿಷ್ಟ ದೂರದವರೆಗೆ ಮಾತ್ರ ತನ್ನ ಪ್ರಭಾವವನ್ನು ಬೀರಬಲ್ಲದು.
ಭೂಮಿಯ ಕಾಂತತ್ವ
[ಬದಲಾಯಿಸಿ]ಕಾಂತವನ್ನು ಮಧ್ಯದಲ್ಲಿ ನೇತುಹಾಕಿದಾಗ ಅದು ದಕ್ಷಿಣೋತ್ತರವಾಗಿ ನಿಲ್ಲುತ್ತದೆ ಇದಕ್ಕೆ ಕಾರಣ ವಿಜ್ಞಾನಿಗಳು ತಿಳಿಸಿರುವಂತೆ ಭೂಮಿ ಒಂದು ದೊಡ್ಡ ಕಾಂತವಾಗಿರುವುದು. ಭೂಕಾಂತ ಕ್ಷೇತ್ರದ ಉತ್ತರ ಧ್ರುವವು ಅದರ ಭೌಗೋಳಿಕ ದಕ್ಷೀಣ ದಿಕ್ಕಿನಲ್ಲಿಯೂ ಹಾಗೂ ಭೂಕಾಂತ ಕ್ಷೇತ್ರದ ದಕ್ಷಿಣ ಧ್ರುವವು ಅದರ ಭೌಗೋಳಿಕ ಉತ್ತರ ದಿಕ್ಕಿನಲ್ಲಿಯೂ ಇದೆ. ಆದ್ದರಿಂದ ಭೂ ಸಮತಲದಲ್ಲಿ ತೂಗುಬಿಟ್ಟ ಕಾಂತವು ಯಾವಾಗಲು ದಕ್ಷಿಣೋತ್ತರವಾಗಿ ನಿಲ್ಲುವುದು.[೧೪][೧೫] ಭೂಮಿ, ಸೂರ್ಯ ಮೊದಲಾದ ದೊಡ್ಡ ಭೌತಕಾಯಗಳು ಕಾಂತತೆಯನ್ನು ಪ್ರದರ್ಶಿಸುತ್ತದೆ. ಸೂರ್ಯ ಮುಂತಾದ ನಕ್ಷತ್ರಗಳ ಸುತ್ತ ಕಾಂತಕ್ಷೇತ್ರ ಬಲವತ್ತಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.[೧೬] ಕೆಲವು ನಕ್ಷತ್ರಗಳು ಭೂಮಿ ಮತ್ತು ಸೂರ್ಯನಿಗಿಂತ ಹೆಚ್ಚು ಪ್ರಬಲವಾಗಿರುವ ಕಾಂತತೆಯನ್ನು ಹೊಂದಿವೆ ಎಂದು ಊಹಿಸಲಾಗಿದೆ. ಭೂಮಿ ಗುರುತ್ವ ಮತ್ತು ಕಾಂತತೆಗಳೆರಡನ್ನೂ ಹೊಂದಿದೆ. ಭೂಕಾಂತತೆಯು, ಕಾಂತವಾಗಿ ಪರಿವರ್ತಿಸಬಲ್ಲ ಪದಾರ್ಥ ಅಂದರೆ ಕಾಂತೀಯ ಪದಾರ್ಥಗಳ ಮೇಲೆ ಮಾತ್ರ ಪ್ರಭಾವಬೀರುತ್ತವೆ. ಆದರೆ ಗುರುತ್ವಾಕರ್ಷಣೆಯ ಪ್ರಭಾವ ಭೂಮಿಯ ಮೇಲಿರುವ ಎಲ್ಲ ಪಧಾರ್ಥಗಳ ಮೇಲೂ ಇರುತ್ತದೆ. ನಾವೀಕರು ಹಿಂದಿನಿಂದಲು ಬಳಸುತ್ತಿರುವ ನಾವಿಕರ ದಿಕ್ಸೂಚಿಯು ಸದಾ ಉತ್ತರ ಮತ್ತು ದಕ್ಷಿಣ ದಿಕ್ಕುಗಳನ್ನು ತೋರಿಸುವುದು ಎಂಬುದನ್ನು ತುಂಬಾ ಹಿಂದೆಯೇ ಕಂಡುಕೊಳ್ಳಲಾಗಿತ್ತು. ಆದರೆ ವಾಸ್ತವವಾಗಿ ದಿಕ್ಸೂಚಿಯು ಭೂಮಿಯ ನಿಜವಾದ ಉತ್ತರಾ ಮತ್ತು ದಕ್ಷಿಣಾ ದಿಕ್ಕುಗಳನ್ನು ತೋರಿಸುವುದಿಲ್ಲ ಎಂಬುದು ಕೂಡ ತುಂಬಾ ಹಿಂದೆಯೇ ತಿಳಿದಿತ್ತು. ದಿಕ್ಸೂಚಿಯು ವಾಸ್ತವವಾಗಿ ಕಾಂತ ಧ್ರುವಗಳ ದಿಕ್ಕನ್ನು ತೋರಿಸುತ್ತದೆ. ನಿಜವಾದ ಉತ್ತರಾ ಮತ್ತು ದಕ್ಷಿಣಾ ದಿಕ್ಕನ್ನು ಅರಿಯಲು ಭೌಗೋಳಿಕ ಧ್ರುವಗಳ ಮಧ್ಯೆ ಇರುವ ಕೋನಗಳ ಲೆಕ್ಕ ಹಾಕಬೇಕು. ಈ ಕೋನಕ್ಕೆ ಕಾಂತೀಯ ದಿಕ್ಪಾತ ಎಂಬ ಹೆಸರಿದೆ. ಕಾಂತೀಯ ದಿಕ್ಪಾತವೆಂದರೆ ಭೌಗೋಳಿಕ ಮತ್ತು ಕಾಂತೀಯ ಯಾಮ್ಯೋತ್ತರ ತಲಗಳ ನಡುವಿನ ಕೋನ. ಇದು ಭೂಮಿಯ ಮೇಲೆ ವಿವಿಧ ಸ್ಥಳಗಳಲ್ಲಿ ಮತ್ತು ಕಾಲಗಳಲ್ಲಿ ಬದಲಾಗುತ್ತಿರುವುದು. ಭೂಮಿಯ ಕಾಂತೀಯ ಉತ್ತರ ಧ್ರುವ ಭೌಗೋಳಿಕ ಉತ್ತರ ಧ್ರುವದ ಸುತ್ತ ಪರಿಭ್ರಮಿಸುತ್ತ ೯೩೦ವರ್ಷಗಳಲ್ಲಿ ಒಂದು ಪರಿಬ್ರಮಣೆಯನ್ನು ಮುಗಿಸುತ್ತದೆ. ಈ ಕಾಂತೀಯ ದಿಕ್ಪಾತಗಳು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಯಾಗಿರುತ್ತದೆ. ಕಾಂತ ಧ್ರುವಗಳು ಭೌಗೋಳಿಕ ಧ್ರುವಗಳಲ್ಲ ಎಂಬುದನ್ನು ಲಕ್ಷಕ್ಕೆ ತಂದು ಕೊಳ್ಳಬೇಕು. ಭೌಗೋಳಿಕ ಧ್ರುವದಿಂದ ಸುಮಾರು ೧೬೦೦ಕಿ.ಮೀ. ದೂರದಲ್ಲಿ ಕಾಂತಧ್ರುವವಿದೆ. ಉತ್ತರ ಕಾಂತ ಧ್ರುವವು ಆರ್ಕಟಿಕ್ ಪ್ರದೇಶದ ಆರ್ಚಿಪೆಲಾಗೋವಿನಲ್ಲಿರುವ ಭಾಥಸ್ಟ್ ಮತ್ತು ಪ್ರಿನ್ಸ್ ಆಫ ವೇಲ್ಸ ದ್ವೀಪಗಳ ಮದ್ಯದಲ್ಲಿದೆ. ವೈಕೌಂಟಿ ಮೆಲ್ವಿಲ್ ಎಂಬ ಸ್ಥಳದಲ್ಲಿದೆ. ದಕ್ಷಿಣ ಕಾಂತಧ್ರುವವು ಅಂಟಾರ್ಟಿಕಾದಲ್ಲಿರುವ ಹಾಗೂ ಆಸ್ಟ್ರೇಲಿಯಕ್ಕೆ ಸೇರಿರುವ, ಅದಾ ಪಶ್ಚಿಮ ಕರಾವಳಿಯಲ್ಲಿರುವ ಟೆರೆ ಅಡಳಿ ಎಂಬಲ್ಲಿದೆ.
ಕಾಂತೀಯ ಧ್ರುವಗಳು ಸ್ಥಿರವಾಗಿರದೇ ಭೌಗೋಳಿಕ ವೃತ್ತಗಳಸುತ್ತ ನಿಧಾನವಾಗಿ ತಿರುಗುತ್ತಿರುತ್ತವೆ. ತುಂಬಾ ಹಿಂದೆ ಉತ್ತರ ಕಾಂತ ಧ್ರುವ ದಕ್ಷಿಣ ಕಾಂತ ಧ್ರುವ ವಾಗಿತ್ತೆಂದೂ ಏನೋಕಾರಣದಿಂದ ಅವುಗಳ ಸ್ಥಾನಗಳು ಬದಲಾಗಿವೆ ಎಂದೂ ತಜ್ಞರು ತಿಳಿಸಿದ್ದಾರೆ. ಒಂದು ಅಂದಾಜಿನ ಪ್ರಕಾರ ಭೂಮಿಯ ಕಾಂತಕ್ಷೇತ್ರ ಆಕಾಶದಲ್ಲಿ ಸುಮಾರು ೮೦,೦೦೦ಕಿ.ಮೀ ವರೆಗೂ ಹರಡಿಕೊಂಡಿದೆ. ಈ ಪ್ರಭಾವೀ ವಲಯವನ್ನು ಕಾಂತಮಂಡಲ ಎಂದು ಕರೆಯುತ್ತಾರೆ. ಈ ಕ್ಷೇತ್ರದಲ್ಲಿ ವಿದ್ಯುದಂಶ ಹೊಂದಿರುವ ಕಣಗಳು ಇರುತ್ತವೆ. ಭೂಮಿಗೆ ಸಮೀಪದಲ್ಲಿ ಇವುಗಳ ಸಾಂದ್ರತೆ ಹೆಚ್ಚಾಗಿರುತ್ತದೆ. ಧ್ರುವಪ್ರಭೆ ಅಂದರೆ ಅರೋರಾಕ್ಕೆ ಕೂಡ ಕಾಂತಮಂಡಲ ಕಾರಣ ಎಂದು ತಿಳಿದು ಬಂದಿದೆ. ಸುಮಾರು ೪೦೦೦ ವರ್ಷಗಳ ಹಿಂದೆಯೇ ಸೂಜಿಗಲ್ಲು ಸದಾ ಒಂದೇ ದಿಕ್ಕಿನತ್ತ ಓಲಾಡುತ್ತದೆ ಎಂಬುದನ್ನು ಚೀನೀಯರು ಅರಿತಿದ್ದರು. ಇಂಗ್ಲಾಂಡಿನ ಮೊದಲನೇ ಎಲಿಜಬತ್ ಮಹಾರಾಣಿಯ ಆಸ್ಥಾನದಲ್ಲಿ ವೈಧ್ಯನಾಗಿದ್ದ ವಿಲಿಯಮ್ ಗಿಲ್ಬರ್ಟ್ (೧೫೪೪-೧೬೦೩) ವ್ಯಾಪಕವಾಗಿ ಅಧ್ಯಯನ ನಡಿಸಿ ಭೂಮಿ ಬೃಹತ್ ಕಾಂತದಂತೆ ವರ್ತಿಸುತ್ತದೆ ಎಂದು ತಿಳಿಸಿದ. ಭೂಕಾಂತ ಕ್ಷೇತ್ರದ ತೀವ್ರತೆಯಲ್ಲಿ ಬಹುಪಾಲು ಭೂಮಿಯ ಇರುಳನ್ನು ಅವಲಂಬಿಸಿ ಕೊಂಡಿದೆ. ಭೂಮಿ ತನ್ನ ಅಕ್ಷದಲ್ಲಿ ತಿರುಗುವಾಗ ಅದರ ಘನ ರೂಪದ ಒಳತಿರುಳು ಮತ್ತು ದ್ರವರೂಪದ ಹೊರತಿರುಳು ವ್ಯತ್ಯಾಸಗೊಳ್ಳುತ್ತದೆ. ಭೂಮಿಯ ಅಂತರಾಳದಲ್ಲಿ ಅತ್ತ್ಯಧಿಕ ಉಷ್ಣತೆ ಇದೆ. ಇದರಿಂದ ಭೂಮಿಯೊಳಗೆ ವಿದ್ಯುತ್ ಪ್ರವಾಹ ಹರಿಯುತ್ತದೆ. ಇದರಿಂದ ಕಾಂತಕ್ಷೇತ್ರ ನಿರ್ಮಾಣವಾಗುತ್ತದೆ.
ಕೃತಕ ಕಾಂತಗಳು
[ಬದಲಾಯಿಸಿ]ಒಂದು ಕಾಂತವು ತನ್ನ ಬಳಿಯಿರುವ ಮತ್ತೊಂದು ಕಾಂತ ವಸ್ತುವಿನಲ್ಲಿ ಕಾಂತತೆಯನ್ನುಂಟು ಮಾಡುವುದು. ಇದಕ್ಕೆ ಪ್ರೇರಿತ ಕಾಂತತೆ ಎಂದು ಕರೆಯುತ್ತಾರೆ. ಈ ಪ್ರೇರಿತ ಕಾಂತತೆಗಳಲ್ಲಿ ಎರಡು ವಿಧಗಳಿವೆ: ತಾತ್ಕಾಲಿಕ ಮತ್ತು ಶಾಶ್ವತ. ಮಿದು ಕಬ್ಬಿಣವು ಕಾಂತಕ್ಷೇತ್ರದಲ್ಲಿ ಇರುವವರೆಗೆ ಎಂದರೆ ಕಾಂತ ಬಲರೇಖೆಗಳ ವ್ಯಾಪ್ತಿಯಲ್ಲಿ ಮಾತ್ರ ಕಾಂತತೆಯನ್ನು ಪ್ರದರ್ಶಿಸುತ್ತದೆ. ಇದನ್ನು ತಾತ್ಕಾಲಿಕ ಕಾಂತ ಎಂದು ಕರೆಯುತ್ತಾರೆ. ಆದರ ಉಕ್ಕಿನಂತಹ ಕಠಿಣ ಪದಾರ್ಥಗಳು ಒಮ್ಮೆ ಕಾಂತತೆಯನ್ನು ಪಡೆದರೆ ಅವು ಶಾಶ್ವತ ಕಾಂತಗಳಾಗಿ ಬಿಡುವುವು. ಕಬ್ಬಿಣ, ನಿಕ್ಕಲ್, ಕೋಬಾಲ್ಟ್ ಮೊದಲಾದ ಲೋಹಗಳನ್ನು ಬೆರಸಿ ತಯಾರಿಸಲಾದ ಮಿಶ್ರಲೋಹಗಳಿಂದ ಶಾಶ್ವತ ಕಾಂತಗಳೆನ್ನು ತಯಾರಿಸುತ್ತಾರೆ. ಸೂಜಿಗಲ್ಲು ಅಥವಾ ಲೋಡ್ ಸ್ಟೋನ್ ಪ್ರಾಕೃತಿಕ ಕಾಂತವಾದರೆ, ಉಪಯೋಗದಲ್ಲಿ ಹೆಚ್ಚಾಗಿ ಇರುವುದು ಕೃತಕ ಕಾಂತಗಳು . ಏಕೆಂದರೆ ಪ್ರಕೃತಿಕ ಕಾಂತಗಳು ಬಳಕೆಯಲ್ಲಿ ಅಷ್ಟು ಉಪಯುಕ್ತವೇನಲ್ಲ. ಬೇರೆ ಬೇರೆ ಆಕಾರಗಳಲ್ಲಿ ಮತ್ತು ಗಾತ್ರಗಳಲ್ಲಿ ತಯಾರಾದ ಕೃತಕ ಕಾಂತಗಳು ನಮ್ಮ ದಿನ ನಿತ್ಯದ ಬಳಕೆಗೆ ಉಪಯುಕ್ತವಾಗಿದೆ. ಒಂದು ಉಕ್ಕಿನ ಪಟ್ಟಿಯ ಮೇಲೆ ವಿಶಿಷ್ಟರೀತಿಯಲ್ಲಿ ದಂಡಕಾಂತದಿಂದ ತಿಕ್ಕಿದರೆ ಅದನ್ನು ಶಾಶ್ವತ ಕಾಂತವಾಗಿ ಮಾಡಬಹುದು. ಆದರೆ ಕಬ್ಬಿಣದಲ್ಲಿ ಶಾಶ್ವತ ಕಾಂತವಾಗುವ ಗುಣವಿಲ್ಲವಾದ್ದರಿಂದ ಈ ಪದ್ಧತಿಯಿಂದ ಪ್ರಯೋಜನವಿಲ್ಲ. ಹಾಗೆಯೇ ನಿರೋಧಿತ ತಂತಿಯನ್ನು ಉಕ್ಕಿನ ದಂಡದ ಸುತ್ತಸುತ್ತಿ ಬ್ಯಾಟರಿಯ ಸಹಾಯದಿಂದ ವಿದ್ಯುತ್ ಪ್ರವಾಹ ಹರಿಸಿದರೆ ಆದಂಡ ಶಾಶ್ವತ ಕಾಂತವಾಗುವುವು. ಇಂಥ ಕಾಂತಗಳನ್ನು ವಿದ್ಯು ಕಾಂತಗಳು ಅಥವಾ ಎಲೆಕ್ಟೋಮ್ಯಾಗ್ನೆಟ್ ಎಂದು ಕರೆಯುತ್ತಾರೆ. ಪ್ರಬಲವಾಗಿರುವ ಕಾಂತಗಳು ಬೇಕೆನಿಸಿದಾಗ ವಿದ್ಯುತ್ ಪ್ರವಾಹ ಹರಿಸಿ ಕಾಂತಗಳನ್ನು ತಯಾರಿಸುವ ಪದ್ದತಿಯನ್ನು ಅನುಸರಿಸುತ್ತಾರೆ. ತಂತಿಯನ್ನು ಸುರುಳಿಯಾಕಾರದಲ್ಲಿ ಸುತ್ತಿ ಅದರೊಳಗೆ ಕಬ್ಬಿಣ ಅಥವಾ ಉಕ್ಕಿನ ದಂಡಗಳನ್ನು ಇರಿಸದಿದ್ದರೆ ಹಾಗೂ ತಂತಿಯ ಸುರುಳಿಯಲ್ಲಿ ವಿದ್ಯುತ್ ಅನ್ನು ಪ್ರವಹಿಸಿದರೆ ಆ ಸುರುಳಿಯೇ ವಿದ್ಯುತ್ ಕಾಂತದಂತೆ ವರ್ತಿಸುವುದು. ಇದನ್ನು ಧೀರ್ಘಸುರುಳಿ ಎಂದು ಕರೆಯುತ್ತಾರೆ. ಕಬ್ಬಿಣ ಮತ್ತು ಉಕ್ಕಿನ ಕಾಂತ ಜಡತ್ವದ ಬಳ್ಳಿಗಳಲ್ಲಿ ಮಹತ್ವದವ್ಯೆತ್ಯಾಸವಿದೆ. ಮಿದುಕಬ್ಬಿಣದಲ್ಲಿ ಕಾಂತೀಯ ಪ್ರೇರಣೆ ಹೆಚ್ಚಾಗಿದ್ದರೂ ನಿಗ್ರಹಬಲ ಮತ್ತು ಧಾರಣ ಶಕ್ತಿ ಕಡಿಮೆ ಯಾಗಿರುತ್ತದೆ. ಸ್ವಲ್ಪ ಕಲಕಿದರೂ ಕಾಂತತೆ ಅಳಿದು ಹೋಗುತ್ತದೆ. ಆದರೆ ಹೆಚ್ಚು ನಿಗ್ರಹ ಬಲ ಹೊಂದಿರುವ ಉಕ್ಕಿನಲ್ಲಿ ಕಾಂತತೆ ಶಾಶ್ವತವಾಗಿ ಉಳಿದು ಕೊಳ್ಳುತ್ತದೆ. ವಿದ್ಯುದ್ ಉಪಕರಣಗಳಲ್ಲಿ ಕಬ್ಬಿಣವನ್ನು ಬಳಸಲು ಮುಖ್ಯ ಕಾರಣವೆಂದರೆ ಅದರಲ್ಲಿ ಕಡಿಮೆ ಕಾಂತ ಬಲ ವಿರುವುದು.
ಉಪಯೋಗಗಳು
[ಬದಲಾಯಿಸಿ]ಶಾಶ್ವತ ಕಾಂತಗಳನ್ನು ಅಮೀಟರ್, ವೋಲ್ಟಾಮೀಟರ್ ಮುಂತಾದ ವಿದ್ಯುತ್ ಮಾಪಕಗಳಲ್ಲೂ, ದಿಕ್ಸೂಚಿಗಳಲ್ಲೂ ಬಳಸುತ್ತಾರೆ. ಕಣ್ಣಿನಲ್ಲಿ ಲೋಹದ ಚೂರುಗಳು ಸೇರಿಕೊಂಡಿದ್ದರೆ ಪ್ರಬಲಕಾಂತಗಳಿಂದ ಅವನ್ನು ಸುಲಭವಾಗಿ ಹೊರಗೆ ತೆಗೆಯಬಹುದು. ರೇಡಿಯೋ, ಟೆಲಿಫೊನ್, ರೇಡಾರ್ ಮುಂತಾದ ಹಲವಾರು ಸಂಪರ್ಕ ಸಾಧನಗಳಮೇಲೆ ಕಾಂತಿಯ ಬಿರುಗಾಳಿಯ ಪ್ರಭಾವವಿದೆ.[೧೭] ರೇಡಿಯೋ ತರಂಗಗಳು, ಶಾಖವಿಕಿರಣ,ಕ್ಷ-ಕಿರಣ ವಿಕಿರಣಶೀಲ ವಸ್ತುವಿನಿಂದ ಹೊರಡುವ ಗಾಮ ಕಿರಣ ಮತ್ತು ಕೆಲವು ವಿಶ್ವಕಿರಣಗಳು ವಿದ್ಯುತ್ ಕಾಂತಿಯ ತರಂಗಗಳೇ ಆಗಿದೆ. ವಿದ್ಯುದ್ಗಂಟೆಗಳು, ದ್ವನಿವರ್ಧಕಗಳು, ಫಾನ್ಗಳು, ಮೋಟಾರುಗಳು, ವಿದ್ಯುಜ್ಜನಕಗಳು, ಮುಂತಾದ ಹತ್ತು ಹಲವು ಸಾಧನಗಳಲ್ಲಿ ವಿದ್ಯುತ್ಕಾಂತಗಳು ನೆರವಿಗೆ ಬರುತ್ತದೆ. ಅನೇಕ ದಿನ ಬಳಕೆಯ ವಸ್ತುಗಳಲ್ಲಿ ವಿದ್ಯುತ್ಕಾಂತಗಳು ಉಪಯುಕ್ತವಾಗಿದೆ.
ಬಾಹ್ಯ ಸಂಪರ್ಕ
[ಬದಲಾಯಿಸಿ]- ಆಯಸ್ಕಾಂತದ ಇತಿಹಾಸ Archived 2015-02-14 ವೇಬ್ಯಾಕ್ ಮೆಷಿನ್ ನಲ್ಲಿ.
- ಕಾಂತತೆಯ ಕಿರುಪರಿಚಯ Archived 2015-02-15 ವೇಬ್ಯಾಕ್ ಮೆಷಿನ್ ನಲ್ಲಿ.
ಇವುಗಳನ್ನು ನೋಡಿ
[ಬದಲಾಯಿಸಿ]
ಉಲ್ಲೇಖ
[ಬದಲಾಯಿಸಿ]- ↑ http://www.thefreedictionary.com/magnetism
- ↑ http://www.thefreedictionary.com/magnetic+field
- ↑ http://www.livescience.com/38059-magnetism.html
- ↑ The location of Magnesia is debated; it could be the regional unit or Magnesia ad Sipylum. See, for example, "Magnet". Language Hat blog. 28 May 2005. Retrieved 22 March 2013.
- ↑ http://www.miniphysics.com/properties-of-magnets.html
- ↑ http://www.school-for-champions.com/science/magnetic_materials.htm#.VTXr4HvrOzk
- ↑ http://www.thefreedictionary.com/magnetic+induction
- ↑ https://www.le.ac.uk/se/centres/sci/selfstudy/mam6.htm
- ↑ http://books.google.co.in/books?id=yzgLAAAAYAAJ&pg=PA407&lpg=PA407&dq=%22On+the+physical+character+of+the+lines+of+magnetic+force%22&source=bl&ots=vuhrFRrROv&sig=Kpi1IOwE_8KRnZ1QnWokVgMgkHU&hl=en&ei=QJfzTKqLFI-6sQOKtqTCCw&sa=X&oi=book_result&ct=result&redir_esc=y#v=onepage&q=%22On%20the%20physical%20character%20of%20the%20lines%20of%20magnetic%20force%22&f=false
- ↑ https://en.wiktionary.org/wiki/magnetic_pole
- ↑ Jiles, David C. (1998). Introduction to Magnetism and Magnetic Materials (2 ed.). CRC. p. 3. ISBN 0412798603.
- ↑ Feynman, Richard Phillips; Leighton, Robert B.; Sands, Matthew (1964). The Feynman Lectures on Physics 2. California Institute of Technology. pp. 1.7–1.8. ISBN 0465079989.
- ↑ "International system of units (SI)". NIST reference on constants, units, and uncertainty. National Institute of Standards and Technology. Retrieved 9 May 2012.
- ↑ Serway, Raymond A.; Chris Vuille; Jerry S. Faughn (2009). College physics (8th ed.). Belmont, CA: Brooks/Cole, Cengage Learning. p. 628. ISBN 978-0-495-38693-3.
- ↑ Kurtus, Ron (2004). "Magnets". School for champions: Physics topics. Retrieved 17 July 2010.
- ↑ Herbert, Yahreas (June 1954). "What makes the earth Wobble". Popular Science (New York: Godfrey Hammond): 266.
- ↑ "Electromagnetic deflection in a cathode ray tube, I". National High Magnetic Field Laboratory. Retrieved July 2011.