ವಿಷಯಕ್ಕೆ ಹೋಗು

ಧ್ರುವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣು ಧ್ರುವನ ಮುಂದೆ ಪ್ರತ್ಯಕ್ಷನಾಗುತ್ತಾನೆ

ಧ್ರುವ (ध्रुव "constant, immovable, fixed") ವಿಷ್ಣು ಪುರಾಣ ಮತ್ತು ಭಾಗವತ ಪುರಾಣದಲ್ಲಿ ಹೆಸರಿಸಲಾದ ವಿಷ್ಣುವಿನ ಒಬ್ಬ ಭಕ್ತ.

ಸಂಸ್ಕೃತ ಪದವಾದ ಧ್ರುವ ನಕ್ಷತ್ರವನ್ನು ಮಹಾಭಾರತದಲ್ಲಿ ಧ್ರುವತಾರೆಗೆ ಬಳಸಲಾಗುತ್ತದೆ. ಧ್ರುವನು ಉತ್ತಾನಪಾದನ ಮಗ ಮತ್ತು ಮನುನ ಮೊಮ್ಮಗ.

ಧ್ರುವನು ರಾಜ ಉತ್ತಾನಪಾದ ಮತ್ತು ರಾಣಿ ಸುನೀತಿಯ ಮಗನಾಗಿ ಜನಿಸಿದನು. ರಾಜನಿಗೆ ತನ್ನ ಎರಡನೇ ರಾಣಿ ಸುರುಚಿಯಿಂದ ಉತ್ತಮನೆಂಬ ಮತ್ತೊಬ್ಬ ಮಗನೂ ಇದ್ದನು. ಉತ್ತಮನು ರಾಜನಿಗೆ ಬಹಳ ಪ್ರೀತಿಪಾತ್ರನಾಗಿದ್ದನು. ಐದು ವರ್ಷದ ಧ್ರುವನು ಒಮ್ಮೆ ಸಿಂಹಾಸನದ ಮೇಲೆ ಅಪ್ಪನ ತೊಡೆಯ ಮೇಲೆ ಕುಳಿತಾಗ, ಸುರುಚಿಗೆ ಧ್ರುವನ ಬಗ್ಗೆ ಅಸೂಯೆಯಾಯಿತು ಏಕೆಂದರೆ ಸುರುಚಿಯ ಮಗನ ಬದಲು ಅವನು ಉತ್ತರಾಧಿಕಾರಿಯಾಗುವನಿದ್ದನು. ಹಾಗಾಗಿ ಬಲವಂತದಿಂದ ಧ್ರುವನನ್ನು ರಾಜನ ತೊಡೆಯಿಂದ ಕೆಳಗಿಳಿಸಿದನು. ಧ್ರುವನು ಪ್ರತಿಭಟಿಸಿ ತಾನು ಅಪ್ಪನ ತೊಡೆಯ ಮೇಲೆ ಕುಳಿತುಕೊಳ್ಳಲಾಗುವುದಿಲ್ಲವೆ ಎಂದು ಕೇಳಿದಾಗ, ಸುರುಚಿಯು 'ದೇವರು ಮಾತ್ರ ನಿನಗೆ ಆ ಹಕ್ಕನ್ನು ಅನುಮತಿಸಬಹುದು. ಹೋಗಿ ಅವನನ್ನು ಕೇಳು' ಎಂದು ಬಯ್ದು ಹೇಳಿದಳು.

ತಲ್ಲಣಗೊಂಡ ಮಗುವನ್ನು ಸುನೀತಿಯು ಸಮಾಧಾನಿಸಲು ಪ್ರಯತ್ನಿಸಿದಳು. ಆದರೆ ಧ್ರುವನು ದೇವರಿಂದಲೇ ತನ್ನ ವಿಧಿಯನ್ನು ಕೇಳಲು ದೃಢಸಂಕಲ್ಪ ಮಾಡಿದನು. ಅವನ ದೃಢ ಸಂಕಲ್ಪ ನೋಡಿ, ಅವನ ತಾಯಿ ಅವನಿಗೆ ವಿದಾಯ ಹೇಳಿದಾಗ ಧ್ರುವನು ಕಾಡಿಗೆ ಒಬ್ಬಂಟಿಯಾಗಿ ಹೊರಟನು. ಧ್ರುವನು ತನಗೆ ತನ್ನ ಯುಕ್ತ ಸ್ಥಾನವನ್ನು ಕೋರಲು ದೃಢನಾಗಿದ್ದನು. ಇವನ ಸಂಕಲ್ಪ ನೋಡಿ, ನಾರದ ಋಷಿಯು ಪ್ರತ್ಯಕ್ಷನಾಗಿ ಅಷ್ಟು ಸಣ್ಣ ವಯಸ್ಸಿನಲ್ಲಿ ಅಷ್ಟು ಕಠಿಣ ತಪಸ್ಸನ್ನು ಮಾಡದಂತೆ ತಪ್ಪಿಸಲು ಪ್ರಯತ್ನಿಸಿದನು. ಆದರೆ, ಧ್ರುವನ ಉಗ್ರ ಸಂಕಲ್ಪಕ್ಕೆ ಮಿತಿಯಿರಲಿಲ್ಲ, ಮತ್ತು ಆಶ್ಚರ್ಯಚಕಿತ ಋಷಿಯು ಅವನ ಗುರಿಯತ್ತ ಮಾರ್ಗದರ್ಶನ ಮಾಡಿ ವಿಷ್ಣುವನ್ನು ಬೇಡುವಾಗ ಧ್ಯಾನ ಮಾಡಬೇಕಾದ ಕ್ರಿಯಾವಿಧಿಗಳು ಮತ್ತು ಮಂತ್ರಗಳನ್ನು ಕಲಿಸಿದರು. ಇದರಲ್ಲಿ ಓಂ ನಮೋ ಭಗವತೇ ವಾಸುದೇವಾಯ ಮಂತ್ರವೂ ಸೇರಿತ್ತು. ಸಲಹೆ ಪಡೆದ ಧ್ರುವನು ತಪಸ್ಸು ಆರಂಭಿಸಿದನು ಮತ್ತು ಆರು ತಿಂಗಳು ಅನ್ನ ನೀರು ಇಲ್ಲದೆ ದೇವರಲ್ಲಿ ಮನಸ್ಸು ನೆಟ್ಟನು. ಅವನ ತಪಸ್ಸಿನ ಉಗ್ರತೆ ಸ್ವರ್ಗವನ್ನು ನಡುಗಿಸಿತು ಮತ್ತು ದೇವರು ಅವನ ಮುಂದೆ ಪ್ರತ್ಯಕ್ಷನಾದನು. ಕಣ್ಣು ಬಿಟ್ಟು ದೇವರನ್ನು ನೋಡಿ ಧ್ರುವನು ಅವನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಆದರೆ ಒಂದೂ ಮಾತು ಆಡಲಾಗಲಿಲ್ಲ. ವಿಷ್ಣುವು ಧ್ರುವನ ಬಲ ಗಲ್ಲವನ್ನು ತನ್ನ ಶಂಖದಿಂದ ಸ್ಪರ್ಶಿಸಿದನು. ಆಗ ಅವನ ಬಾಯಿಯಿಂದ ದೇವರನ್ನು ಸ್ತುತಿಸುವ ೧೨ ಶ್ಲೋಕಗಳ ಒಂದು ಸುಂದರ ಕವಿತೆ ಹೊರಟಿತು, ಇದೇ ಧ್ರುವ ಸ್ತುತಿ. ದೇವರ ನೆನಪಲ್ಲಿ ದೀರ್ಘ ಸಮಯ ಕಳೆದಿದ್ದ ಧ್ರುವನಿಗೆ ತನ್ನ ತಪಸ್ಸಿನ ಗುರಿಯೂ ಮರೆತುಹೋಗಿ, ಕೇವಲ ದೇವರ ಸ್ಮರಣೆಯಲ್ಲಿನ ಜೀವನ ಕೇಳಿದನು. ಅವನ ಸ್ತುತಿ ಮತ್ತು ತಪಸ್ಸಿನಿಂದ ಸಂತೋಷಗೊಂಡು ವಿಷ್ಣು ಅವನ ಬಯಕೆ ಈಡೇರಿಸಿದನು ಮತ್ತು ಜೊತೆಗೆ ಧ್ರುವನು ಧ್ರುವಪದ ಪಡೆಯುವನು ಎಂದು ಆದೇಶಿಸಿದನು. ಧ್ರುವನು ತನ್ನ ರಾಜ್ಯಕ್ಕೆ ಹಿಂದಿರುಗಿದನು. ಅವನ ಕುಟುಂಬ ಅವನನ್ನು ಉತ್ಸಾಹದಿಂದ ಸ್ವಾಗತಿಸಿತು ಮತ್ತು ರಾಜ ಪದವಿಯನ್ನು ಆರನೇ ವಯಸ್ಸಿಗೆ ಪಡೆದನು. ಅವನು ಅನೇಕ ದಶಕಗಳವರೆಗೆ ನ್ಯಾಯಸಮ್ಮತವಾಗಿ ರಾಜ್ಯವನ್ನು ಆಳಿದನು.

"https://kn.wikipedia.org/w/index.php?title=ಧ್ರುವ&oldid=932977" ಇಂದ ಪಡೆಯಲ್ಪಟ್ಟಿದೆ