ವಿಷಯಕ್ಕೆ ಹೋಗು

ಪುದುಚೇರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುದುಚೇರಿ ಕೇಂದ್ರಾಡಳಿತ ಪ್ರದೇಶ
Map of India with the location of ಪುದುಚೇರಿ ಕೇಂದ್ರಾಡಳಿತ ಪ್ರದೇಶ highlighted.
Map of India with the location of ಪುದುಚೇರಿ ಕೇಂದ್ರಾಡಳಿತ ಪ್ರದೇಶ highlighted.
ರಾಜಧಾನಿ
 - ಸ್ಥಾನ
ಪಾಂಡಿಚೆರಿ
 - 11.93° N 79.83° E
ಅತಿ ದೊಡ್ಡ ನಗರ
ಜನಸಂಖ್ಯೆ (2001)
 - ಸಾಂದ್ರತೆ
973,829 (2nd)
 - /km²
ವಿಸ್ತೀರ್ಣ
 - ಜಿಲ್ಲೆಗಳು
೪೯೨ km² (3rd)
 - 4
ಸಮಯ ವಲಯ IST (UTC+5:30)
ಸ್ಥಾಪನೆ
 - ಶಾಸನಸಭೆ (ಸ್ಥಾನಗಳು)
ಜುಲೈ ೧, ೧೯೬೩
 - Unicameral (30)
ಅಧಿಕೃತ ಭಾಷೆ(ಗಳು) ತಮಿಳು, ಫ್ರೆಂಚ್, ತೆಲುಗು, ಮಲಯಾಳಂ
Abbreviation (ISO) IN-PY
ಅಂತರ್ಜಾಲ ತಾಣ: www.pondicherry.nic.in

ಪುದುಚೇರಿ (ಮುಂಚೆ ಪಾಂಡಿಚೆರಿ) ಭಾರತದ ಒಂದು ಕೇಂದ್ರಾಡಳಿತ ಪ್ರದೇಶಗಳು. ಮುಂಚೆ ಫ್ರಾನ್ಸ್ ದೇಶದ ವಸಾಹತು ಆಗಿದ್ದ ವಿವಿದೆಡೆ ೪ ಕಡೆ ಹರಡಿರುವ ಜಿಲ್ಲೆಗಳು ಇದಕ್ಕೆ ಸೇರಿವೆ. ಎಲ್ಲಕಿಂತ ದೊಡ್ಡದಾಗಿರುವ ಪುದುಚೇರಿ ನಗರ ಇದರ ರಾಜಧಾನಿ. ಇದು ಹಿಂದಿನ ಫ್ರೆಂಚ್ ಭಾರತ,ನಾಲ್ಕುಪ್ರದೇಶ; ಅವುಗಳೆಂದರೆ ಪುದುಚೆರಿ, ಕರೈಕಲ್, ಯಾಣಂ ಮತ್ತು ಮಾಹೆ ನಾಲ್ಕು ವಿಂಗಡಿತ-ಪ್ರದೇಶವನ್ನು ರಚಿಸಲಾಯಿತು. ಇದರ ದೊಡ್ಡ ಜಿಲ್ಲೆಗೆ ಪುದುಚೇರಿ ಎಂದು ಹೆಸರಿಡಲಾಗಿದೆ. ಐತಿಹಾಸಿಕವಾಗಿ ಪಾಂಡಿಚೇರಿ (Pāṇṭiccēri) ಎಂದು ಹೆಸರಾದ ಪ್ರದೇಶವನ್ನು 20 ಸೆಪ್ಟೆಂಬರ್ 2006 ರಂದು ಪುದುಚೇರಿ (Putuccēri) ಎಂದು ಅಧಿಕೃತ ಹೆಸರನ್ನು ಇಡಲಾಯಿತು.[]

ಹೆಸರು

[ಬದಲಾಯಿಸಿ]

ಪುದುಚ್ಚೇರಿ ಭಾರತ ಗಣರಾಜ್ಯದ ಒಕ್ಕೂಟ ಪ್ರದೇಶ ; ಅದರ ಒಂದು ಜಿಲ್ಲೆ ; ಮತ್ತು ಆ ಪ್ರದೇಶದ ಮುಖ್ಯ ಪಟ್ಟಣ. ಪಾಂಡಿಚ್ಚೇರಿ ಎಂಬುದು ಪಾಶ್ಚಾತ್ಯೀಕೃತ ಹೆಸರು. ಪುದುಚ್ಚೇರಿ ಎಂಬುದು ತಮಿಳಿನ ಪುದು (ಹೊಸ) ಮತ್ತು ಚೇರಿ (ಗ್ರಾಮ) ಎಂಬ ಪದಗಳಿಂದ ಕೂಡಿದೆ. ಪಾಂಡಿ ಎಂಬುದು ಪುದು ಎಂಬುದರ ಅಪಭ್ರಂಶ. ಪುದುವೈ, ಪುದುಚ್ಚೇರಿ ಹಾಗೂ ಪಾಂಡಿ ಎಂದು ಕರೆಯುವುದುಂಟು.

ವಿಸ್ತೀರ್ಣ

[ಬದಲಾಯಿಸಿ]

ಪುದುಚ್ಚೇರಿ ಒಕ್ಕೂಟ ಪ್ರದೇಶದ ವಿಸ್ತೀರ್ಣ 496 ಚ.ಕಿ.ಮೀ. ಜನಸಂಖ್ಯೆ 1,244,464 (೨೦೧೧). ಈ ಪ್ರದೇಶಕ್ಕೆ ಕೋರಮಂಡಲ (ಪೂರ್ವ) ತೀರದ ಪುದುಚ್ಚೇರಿಯೇ ಅಲ್ಲದೆ, ಕಾರೈಕಲ್, ಯಾನಾಂ ಮತ್ತು ಮಾಹೆ ಇವು ಸೇರಿವೆ. ಪುದುಚ್ಚೇರಿ ಜಿಲ್ಲೆ 290 ಚ.ಕಿ.ಮೀ. ವಿಸ್ತಾರವಾಗಿದೆ. ಯಾನಾಂ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಗೋದಾವರಿ ನದಿಯ ಮುಖಜ ಭೂಮಿಯಲ್ಲಿದೆ. ಫ್ರೆಂಚರು ಇದನ್ನು 1731 ರಲ್ಲಿ ಪಡೆದುಕೊಂಡರು. ಇದರ ವಿಸ್ತೀರ್ಣ 20 ಚ.ಕಿ.ಮೀ. ಕಾರೈಕಲ್ ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಕಾವೇರಿಯ ಮುಖಜ ಭೂಮಿಯಲ್ಲಿದೆ. 1738 ರಲ್ಲಿ ತಂಜಾವೂರಿನ ದೊರೆ ಸಾಹುಜಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಗೆ ಇದನ್ನು ನೀಡಿದ. ಕಾರೈಕಲ್‍ನ ವಿಸ್ತೀರ್ಣ 161 ಚ.ಕಿ.ಮೀ. ಮಾಹೆ ಇರುವುದು ಪಶ್ಚಿಮ ಕರಾವಳಿಯಲ್ಲಿ ಕೇರಳದ ನಡುವೆ. ಇದು 9 ಚ.ಕಿ.ಮೀ. ವಿಸ್ತಾರವಾಗಿದೆ. ಇದನ್ನು ಬಡಗರ ರಾಜ 1721 ರಲ್ಲಿ ಫ್ರೆಂಚರಿಗೆ ಒಪ್ಪಿಸಿದ್ದ. ಪುದುಚ್ಚೇರಿ, ಕಾರೈಕಲ್ ಹಾಗೂ ಯಾನಾಂ ಇವುಗಳಿಗೆ ಭಿನ್ನವಾಗಿ ಮಾಹೆ ಬೆಟ್ಟಗುಡ್ಡಗಳ ಹಾಗೂ ಅರಣ್ಯಗಳ ಪ್ರದೇಶ. ಇಲ್ಲಿ ತೆಂಗಿನ ಬೆಳೆ ಅಧಿಕ.

ಆಡಳಿತ

[ಬದಲಾಯಿಸಿ]
Puducherry Legislative Assembly

ಪುದುಚ್ಚೇರಿ ಒಕ್ಕೂಟ ಪ್ರದೇಶದ ಆಡಳಿತಕ್ಕೆ ಲೆಫ್ಟಿನೆಂಟ್ ಗವರ್ನರ್ ಮುಖ್ಯರು. ಇವರಿಗೆ ಆಡಳಿತದಲ್ಲಿ ನೆರವು ನೀಡಲು ಮಂತ್ರಿಮಂಡಲ ಇರುತ್ತದೆ. ಮಂತ್ರಿಮಂಡಲದ ನಾಯಕ ಮುಖ್ಯಮಂತ್ರಿ. 30 ಮಂದಿ ಸದಸ್ಯರ ವಿಧಾನಸಭೆಗೆ ಮಂತ್ರಿಮಂಡಲ ಆಡಳಿತ ವಿಚಾರಗಳಲ್ಲಿ ಹೊಣೆಯಾಗಿರುತ್ತದೆ.

ಪುದುಚ್ಚೇರಿಯ 4 ಜಿಲ್ಲೆಗಳು ಪುದುಚ್ಚೇರಿ, ಕಾರೈಕಲ್, ಯಾನಾಂ ಮತ್ತು ಮಾಹೆ.

ಶಿಕ್ಷಣ

[ಬದಲಾಯಿಸಿ]

ಜನಸಂಖೈಯ ಸೇಕಡ ೮೬.೫ ರಷ್ಟು ಮಂದಿ ಅಕ್ಷರಸ್ಥರು[]. 1976-77 ರಲ್ಲಿ 9 ಕಾಲೇಜುಗಳೂ 65 ಪ್ರೌಢಶಾಲೆಗಳೂ 82 ಮಾಧ್ಯಮಿಕ ಮತ್ತು 288 ಪ್ರಾಥಮಿಕ ಶಾಲೆಗಳೂ 51 ನರ್ಸರಿ ಶಾಲೆಗಳು 1 ವೈದ್ಯಕೀಯ ಕಾಲೇಜೂ 1 ಕಾನೂನು ಕಾಲೇಜೂ 1 ಪಾಲಿಟೆಕ್ನಿಕ್ ಶಾಲೆಯೂ ಇದ್ದವು.

ಆರ್ಥಿಕತೆ

[ಬದಲಾಯಿಸಿ]

ಈ ಪ್ರದೇಶದ ಹೆಚ್ಚು ಭಾಗ ಕಡಲ ತೀರ. ಸೇಕಡ 45 ಮಂದಿಯ ಕಸುಬು ವ್ಯವಸಾಯ. ಮುಖ್ಯ ಬೆಳೆಗಳು ಬತ್ತ, ಹತ್ತಿ, ಜೋಳ, ಬಾಜ್ರಾ, ಮೆಕ್ಕೆಜೋಳ, ಕಬ್ಬು, ಕಡಲೆಕಾಯಿ, ಎಣ್ಣೆ ಬೀಜಗಳು, ತೆಂಗು, ತಂಬಾಕು ಮತ್ತು ಮೆಣಸಿನಕಾಯಿ. ಮೀನುಗಾರಿಕೆ ಇನ್ನೊಂದು ಕಸುಬು.

The Promenade in the main town Puducherry is one of the most popular tourist attractions of the Union Territory
Sri Aurobindo Ashram, Puducherry

ಪುದುಚೇರಿಯ ಒಟ್ಟಾರೆ ಉತ್ಪನ್ನದ ತಖ್ತೆ ಇಲ್ಲಿದೆ.

ವರ್ಷ ರಾಜ್ಯದ ಒಟ್ಟಾರೆ ಉತ್ಪನ್ನ(ಕೋಟಿ ರುಪಾಯಿಗಳಲ್ಲಿ)
1980 184
1985 342
1990 603
1995 1,320
2000 3,781
2010 13,092
2014 25,819 []

ಸಾರಿಗೆ

[ಬದಲಾಯಿಸಿ]

ವಿಳ್ಳಿಪ್ಪುರಂ ಜಂಕ್ಷನ್‍ನಿಂದ ಪುದುಚ್ಚೇರಿಗೆ 1879 ರಲ್ಲಿ ರೈಲು ಮಾರ್ಗವನ್ನು ಹಾಕಲಾಯಿತು. ಇದರ ಉದ್ದ 38.4 ಕಿ.ಮೀ.ಒಟ್ಟು ಸುಮಾರು ೬೫೦ ಕಿ.ಮೀ ರಸ್ತೆ ಸಂಪರ್ಕವನ್ನು ಹೊಂದಿದೆ. ಅಂತೆಯೇ ೨೦೧೩ರಲ್ಲಿ ಹೊಸ ವಿಮಾನ ನಿಲ್ದಾಣವನ್ನು ರಚಿಸಲಾಗಿದ್ದು, ಬೆಂಗಳೂರಿನಿಂದನೇರ ವಿಮಾನ ಸಂಪರ್ಕವಿದೆ.

ಪುದುಚ್ಚೇರಿ ಪಟ್ಟಣ

[ಬದಲಾಯಿಸಿ]

ತಮಿಳುನಾಡಿನ ದಕ್ಷಿಣ ಆರ್ಕಾಟ್ ಜಿಲ್ಲೆಯ ಪೂರ್ವ ಅಂಚಿನಲ್ಲಿ ಬಂಗಾಳದ ಕೊಲ್ಲಿಗೆ ಬೀಳುವ ಸಣ್ಣ ನದಿಯೊಂದರ ಮುಖದ ಬಳಿಯ ಬೆಟ್ಟ ಸಾಲುಗಳ ಆಗ್ನೇಯ ಭಾಗದಲ್ಲಿ ಪುದುಚ್ಚೇರು ಪಟ್ಟಣ ಇದೆ. ಇದು ಮದ್ರಾಸಿನಿಂದ ದಕ್ಷಿಣಕ್ಕೆ ರೈಲು ಮಾರ್ಗದಲ್ಲಿ 196 ಕಿ.ಮೀ. ದೂರದಲ್ಲಿದೆ. 1954 ರಿಂದ ಇದು ಒಕ್ಕೂಟ ಪ್ರದೇಶದ ರಾಜಧಾನಿ.

ಪುದುಚ್ಚೇರಿ ಗ್ರಾಮವನ್ನು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಪರವಾಗಿ ಫ್ರಾಂಕೋ ಮಾರ್ಟಿನ್ ಎಂಬ ಫ್ರೆಂಚ್ ಸೈನ್ಯಾಧಿಕಾರಿ 1674 ರಲ್ಲಿ ಬಿಜಾಪುರದ ಸುಲ್ತಾನನ ಜಿಂಜಿಕೋಟೆಯ ಪ್ರಾಂತ್ಯಾಧಿಕಾರಿ ಷೇರ್‍ಖಾನನಿಂದ ಕೊಂಡುಕೊಂಡ. ಆಗ ಇದು ಸಣ್ಣ ಗ್ರಾಮವಾಗಿತ್ತು. 1683 ರಲ್ಲಿ ಫ್ರೆಂಚರು ಇಲ್ಲಿ ವಸಾಹತು ಸ್ಥಾಪಿಸಿದರು. 1690 ರಲ್ಲಿ ಇಲ್ಲಿದ್ದ ಯೂರೋಪಿಯನ್ನರ ಸಂಖ್ಯೆ 200. ಕಪೂಚಿಯನ್ ಪಾದ್ರಿಗಳು ಇಲ್ಲಿ ಕ್ರೈಸ್ತ ದೇವಾಲಯವನ್ನು ಕಟ್ಟಿದರು. 1691 ರಲ್ಲಿ ಫ್ರೆಂಚರು 700 ಕ್ರೌನ್ ವೆಚ್ಚ ಮಾಡಿ ಕಟ್ಟಿದ ಸಣ್ಣ ಕೋಟೆಯಲ್ಲಿ ಸಮುದ್ರಾಭಿಮುಖವಾಗಿ 18 ದೊಡ್ಡ ಫಿರಂಗಿಗಳನ್ನಿಡಲು ಜಿಂಜಿಯಲ್ಲಿದ್ದ ಶಿವಾಜಿಯ ಪ್ರಾಂತಾಧಿಕಾರಿ ಅನುಮತಿ ನೀಡಿದ. 1701 ರಲ್ಲಿ ಫ್ರಾಂಕೋ ಮಾರ್ಟಿನ್ ಕೋಟೆಯನ್ನು ಭದ್ರಗೊಳಿಸಿ ಅದನ್ನು ಫೋರ್ಟ್ ಲೂಯಿ ಎಂದು ಕರೆದ. ಆಗ ಪುದುಚ್ಚೇರಿಯ ಜನಸಂಖ್ಯೆ 40,000. ಇಂಗ್ಲಿಷರು ಕೋಟೆ ಇದ್ದ ಕಲ್ಕತ್ತ ಪಟ್ಟಣದ ಜನಸಂಖ್ಯೆ ಆಗ ಕೇವಲ 20,000.

18 ನೆಯ ಶತಮಾನದ ವೇಳೆಗೆ ಪುದುಚ್ಚೇರಿ ಪ್ರಸಿದ್ಧಿ ಪಡೆದಿತ್ತು. ವಿದೇಶಿಯರು ಇದನ್ನು ಪಾಂಡಿಚ್ಚೇರಿ ಎಂದು ಕರೆಯಲಾರಂಭಿಸಿದರು. ಇದು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ಮುಖ್ಯ ಪಟ್ಟಣವಾಗಿದ್ದು, ಆ ಶತಮಾನದ ಕರ್ನಾಟಿಕ್ ಯುದ್ಧಗಳಲ್ಲಿ ಮಹಾರಾಷ್ಟ್ರ, ಹೈದರಾಬಾದ್ ಮತ್ತು ಮೈಸೂರು ರಾಜ್ಯಗಳಿಗೆ ಹಾಗೂ ಆರ್ಕಾಟಿನ ನವಾಬರಿಗೆ ಸಂಬಂಧಿಸಿದಂತೆ ರಾಜಕೀಯ ವ್ಯವಹಾರಗಳಲ್ಲಿ ಪ್ರಧಾನ ಪಾತ್ರ ವಹಿಸಿತು. ಡೂಪ್ಲೆಯ ತರುವಾಯ ಪಾಂಡಿಚ್ಚೇರಿಯ ಗವರ್ನರ್ ಆಗಿದ್ದ ಡೂಮಾನ ದುಬಾಷಿಯಾಗಿದ್ದ ಆನಂದರಂಗಪಿಳ್ಳೆ ಇಲ್ಲಿಯ ಆಗಿನ ರಾಜಕೀಯ ವ್ಯವಹಾರಗಳನ್ನು ತನ್ನ ದಿನಚರಿಯಲ್ಲಿ ಬರೆದಿಟ್ಟಿದ್ದಾನೆ. 19 ನೆಯ ಶತಮಾನದಲ್ಲಿ ಪುದುಚ್ಚೇರಿ ಪಟ್ಟಣದಲ್ಲಿ ಎರಡು ಬಡಾವಣೆಗಳಿದ್ದವು. ಇವೆರಡೂ ಬಡಾವಣೆಗಳ ನಡುವೆ ನಾಲೆಯೊಂದು ಹರಿಯುತ್ತದೆ. ಬಿಳಿಯರಿದ್ದ ಬಡಾವಣೆಗೆ ಹ್ವೈಟ್ ಟೌನ್, ಸ್ಥಳೀಯರು ವಾಸವಾಗಿದ್ದ ಬಡಾವಣೆಗೆ ಬ್ಲಾಕ್ ಟೌನ್ ಎಂಬ ಹೆಸರುಗಳು ಬಂದವು.

ಕಡಲಿನ ದಂಡೆಯ ಮೇಲಿರುವ ಪುದುಚ್ಚೇರಿಯ ನೆಲ ಸಮತಟ್ಟಾಗಿದ್ದು ಹೆಚ್ಚು ಮರಳಿನಿಂದ ಕೂಡಿದೆ. ಸಮುದ್ರ ಪಟ್ಟಣಕ್ಕೆ ಕೆಲವೇ ಅಡಿಗಳ ಎತ್ತರದಲ್ಲಿದೆ. ಪ್ರಮುಖ ರಸ್ತೆಗಳು ಸಮಾಂತರದಲ್ಲಿವೆ. ಪುದುಚ್ಚೇರಿ ಬಂದರಿನಲ್ಲಿ ಹಡಗುಗಳು ನಿಲ್ಲಲು ಅವಕಾಶವಿಲ್ಲ. ಬಂದರಿಗೆ ಎರಡು-ಮೂರು ಕಿ.ಮೀ. ದೂರದಲ್ಲಿ ಹಡಗುಗಳು ನಿಲ್ಲುತ್ತವೆ. ಬಂದರಿನಿಂದ ಸಮುದ್ರದ ಕಡೆಗೆ ಚಾಚಿರುವ ಹಡಗುಕಟ್ಟೆ ಜನಸಂಚಾರಕ್ಕೂ ಹಡಗಿನಿಂದ ಸರಕುಗಳನ್ನು ಇಳಿಸಿಕೊಳ್ಳುವುದಕ್ಕೂ ಅನುಕೂಲವಾಗಿದೆ. 1960 ರಲ್ಲಿ ಹೊಸ ಹಡಗುಕಟ್ಟೆಯೊಂದನ್ನು ನಿರ್ಮಿಸಲಾಯಿತು. ಹಡಗುಕಟ್ಟೆ ಹಾಗೂ ಕಡಲಿಗೆ ಅಭಿಮುಖವಾಗಿ ಪುದುಚ್ಚೇರಿಯ ಫ್ರೆಂಚ್ ಗವರ್ನರ್ ಆಗಿದ್ದ ಡೂಪ್ಲೆಯ ಪ್ರತಿಮೆ ಇದೆ. ಫ್ರೆಂಚರ ಆಡಳಿತದಲ್ಲಿ ಪುದುಚ್ಚೇರಿ ಮುಕ್ತ ಬಂದರಾಗಿತ್ತು. ಅಲ್ಲಿಗೆ ಬರುತ್ತಿದ್ದ ಸರಕುಗಳ ಮೇಲೆ ಸುಂಕ ವಿಧಿಸುತ್ತಿರಲಿಲ್ಲ.

ಪುದುಚ್ಚೇರಿ ಪಟ್ಟಣಕ್ಕೆ ಸೇರಿದ ಮೂರು ಗ್ರಾಮಗಳು ವಿಳ್ಳೈನೂರ್, ಬಾಹೂರ್ ಮತ್ತು ಆರಿಯನ್ ಕುಪ್ಪಂ, ಪಟ್ಟಣದ ಸುತ್ತಮುತ್ತ ಆರ್ಟೀಸಿಯನ್ ಬಾವಿಗಳಿವೆ. ಪಟ್ಟಣದಲ್ಲಿ ಕಪೂಚಿಯನ್ ಪಾದ್ರಿಗಳು ಸ್ಥಾಪಿಸಿದ್ದ ರೋಮನ್ ಕ್ಯಾತೊಲಿಕ್ ಚರ್ಚ್, ಅರವಿಂದಾಶ್ರಮ, ಮದರಾಸ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಕಾಲೇಜುಗಳಿವೆ.

ಇತಿಹಾಸ

[ಬದಲಾಯಿಸಿ]

ಫ್ರೆಂಚರು 1674 ರಲ್ಲಿ ಪುದುಚ್ಚೇರಿ ಗ್ರಾಮವನ್ನು ಕೊಂಡು ಇಲ್ಲಿ ವಸಾಹತು ಸ್ಥಾಪಿಸಿದ ಮೇಲೆ ಗ್ರಾಮ ತ್ವರಿತವಾಗಿ ಬೆಳೆಯಿತು. ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿ ಇದನ್ನು ಸಾಮಾನ್ಯ ಗ್ರಾಮದಿಂದ ಪ್ರಧಾನ ವ್ಯಾಪಾರ ಕೇಂದ್ರವಾಗಿ ಪರಿವರ್ತಿಸಿತು. 1742 ರಲ್ಲಿ ಡೂಪ್ಲೆ ಪುದುಚ್ಚೇರಿಯ ಗವರ್ನರ್ ಆಗಿ ನೇಮಕಗೊಂಡ ; ಇಂಗ್ಲಿಷರನ್ನು ಓಡಿಸಿ ಭಾರತದಲ್ಲಿ ಫ್ರೆಂಚ್ ಸಾಮ್ರಾಜ್ಯವನ್ನು ಸ್ಥಾಪಿಸುವುದು ಅವನ ಆಕಾಂಕ್ಷೆಯಾಗಿತ್ತು. 1740-48 ರ ನಡುವೆ ಯೂರೋಪಿನಲ್ಲಿ ಆಸ್ಟ್ರಿಯನ್ ಉತ್ತರಾಧಿಕಾರ ಯುದ್ಧ ನಡೆಯುತ್ತಿದ್ದಾಗ ಭಾರತದಲ್ಲಿ ಬ್ರಿಟಿಷ್ ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಗಳ ನಡುವೆ ಘರ್ಷಣೆ ನಡೆದಿತ್ತು. ಡೂಪ್ಲೆ ಇಲ್ಲಿ ಮದರಾಸನ್ನು ಹಿಡಿದ. ಯೂರೋಪಿನ ಯುದ್ಧ ಮುಗಿದಾಗ ಮದರಾಸನ್ನು ಇಂಗ್ಲಿಷರಿಗೆ ಹಿಂತಿರುಗಿಸಲಾಯಿತು. 18 ನೆಯ ಶತಮಾನದ ಕರ್ನಾಟಿಕ್ ಯುದ್ಧಗಳ ಕಾಲದಲ್ಲಿ ಪುದುಚ್ಚೇರಿಯ ಮೇಲೆ ಇಂಗ್ಲಿಷರು ಅನೇಕ ಬಾರಿ ದಾಳಿ ನಡೆಸಿದರು. ಅವರು ಇದನ್ನು 1761 ರಲ್ಲಿ ವಶಪಡಿಸಿಕೊಂಡು 1765 ರಲ್ಲಿ ಹಿಂದಿರುಗಿಸಿದರು. ಎರಡನೆಯ ಬಾರಿ 1778 ರಲ್ಲಿ ಅವರು ಇದನ್ನು ಆಕ್ರಮಿಸಿಕೊಂಡು 1785 ರಲ್ಲಿ ಮತ್ತೆ ಫ್ರೆಂಚರಿಗೆ ಒಪ್ಪಿಸಿದರು. ಮೂರನೆಯ ಸಲ 1793 ರಲ್ಲಿ ನಗರವನ್ನು ಹಿಡಿದು ಅಂತಿಮವಾಗಿ ಇದನ್ನು 1814 ರಲ್ಲಿ ಫ್ರೆಂಚರಿಗೆ ಹಿಂದಿರುಗಿಸಿದರು.

ಭಾರತದಲ್ಲಿ ಬ್ರಿಟಿಷರ ಆಡಳಿತ ಪ್ರಾರಂಭವಾದ ಮೇಲೆ ಫ್ರೆಂಚರು ತಮ್ಮ ಭಾರತ ವಸಾಹತುಗಳನ್ನು ಮುಂದುವರಿಸಲು ಬ್ರಿಟಿಷರು ಅನುಮತಿ ನೀಡಿದರು. ಆದರೆ, ಪುದುಚ್ಚೇರಿಗೆ ಇದ್ದ ರಾಜಕೀಯ ಪ್ರಾಮುಖ್ಯ ಹೋಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಮೇಲೆ ಫ್ರೆಂಚರು ನವೆಂಬರ್ 1954 ರಲ್ಲಿ ತಮ್ಮ ಭಾರತೀಯ ವಸಾಹತುಗಳನ್ನು ಭಾರತಕ್ಕೆ ಒಪ್ಪಿಸಿದರು. ಪುದುಚ್ಚೇರಿ, ಕಾರೈಕಲ್, ಯಾನಾಂ, ಮಾಹೆ-ಈ ಫ್ರೆಂಚ್ ವಸಾಹತುಗಳು ಸೇರಿದ ಹಾಗೆ ಪಾಂಡಿಚ್ಚೇರಿ ಯೂನಿಯನ್ ಪ್ರದೇಶ ಸ್ಥಾಪಿತವಾಗಿ ಅದು ಭಾರತ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ.

ಚುನಾವಣೆ ಮತ್ತು ಸರ್ಕಾರ

[ಬದಲಾಯಿಸಿ]
ಪಾಂಡುಚೆರಿ/ಪುದುಚೆರಿ-ಹಳದಿಬಣ್ನದ ಪ್ರದೇಶ

ಪುದುಚೇರಿ ವಿಧಾನಸಭೆಯ ಅವಧಿ ಜೂನ್ 2, 2016 ರಂದು ಮುಕ್ತಾಯಗೊಳ್ಳುತ್ತದೆ. ಮುಂದಿನ ವಿಧಾನಸಭಾ ಚುನಾವಣೆ 16 ಮೇ, 2016 ರಂದು ನಡೆಯಲಿದೆ. ಚಿಕ್ಕ ಪ್ರದೇಶದ 30 ಕ್ಷೇತ್ರಗಳಿಗೆ ಸದಸ್ಯರನ್ನು ಚುನಾಯಿಸಲಾಗುವುದು.

2011 ರ ಚುಣಾವಣೆ ಫಲಿತಾಂಶ

[ಬದಲಾಯಿಸಿ]

ಪುದುಚೇರಿಯ ಮೂವತ್ತು ಕ್ಷೇತ್ರಗಳಿಂದ ಸದಸ್ಯರನ್ನು ಚುನಾಯಿಸುವ ಕೇಂದ್ರಾಡಳಿತ ಪ್ರದೇಶದ ಪುದುಚೇರಿ ವಿಧಾನಸಭಾ ಚುನಾವಣೆಯು ಏಪ್ರಿಲ್ 13, 2011 ಭಾರತೀಯ ನಡೆಯಿತು. ಎಣಿಕೆ ಮೇ 13, 2011 ನಡೆದಿದೆ.

ಕ್ರ.ಸಂ. ಪಕ್ಷದ ಹೆಸರು ಸ್ಪರ್ಧೆ ಗೆಲುವು + /- %
1 ಅಖಿಲ ಭಾರತ ಎನ್.ಆರ್ ಕಾಂಗ್ರೆಸ್ 17 15 +15 ಹೊಸ ಪಕ್ಷ 31.75%
2 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 17 7 -3 25.06%
3 ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಎಲ್ಲಾ ಕಳಗಂ 10 5 +2 -
4 ದ್ರಾವಿಡ ಮುನ್ನೇತ್ರ ಕಳಗಂ 10 2 -5 -
5 ಪಕ್ಷೇತರರು 79 1 -2 -
6 ಒಟ್ಟು 30 - -

[]

ರಾಜ್ಯಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. National : Bill to rename Pondicherry as Puducherry passed". The Hindu. 22 August 2006.
  2. "Ranking of states and union territories by literacy rate: 2011" (PDF). Government of India.
  3. List of Indian states by GDP
  4. Election Commission of India. Schedule for holding General Election to the Legislative Assembly of Puducherry


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: