ಗಂಟಲುಬೇನೆ
ಗಂಟಲುಬೇನೆಯು ದನ, ಎಮ್ಮೆ, ಕುರಿ ಮತ್ತು ಆಡು ಜಾತಿಗಳಿಗೆ ತಗಲುವ ಅತಿ ತೀವ್ರವಾದ ಅಂಟುರೋಗ. ಗಳಲೆರೋಗ ಎಂದು ಕೂಡ ಕರೆಯುವುದುಂಟು. ಈ ರೋಗವು ಮುಖ್ಯವಾಗಿ ದನಗಳು ಮತ್ತು ಎಮ್ಮೆಗಳಲ್ಲಿ ಕಂಡುಬರುತ್ತದೆ,[೧] ಆದರೆ ಮೇಕೆಗಳಲ್ಲಿ (ಕ್ಯಾಪ್ರಾ ಏಗ್ಯಾಗ್ರಸ್ ಹಿರ್ಕಸ್),[೨][೩][೪] ಆಫ಼್ರಿಕಾದ ಎಮ್ಮೆಯಲ್ಲಿ, (ಸಿಂಕರಸ್ ನ್ಯಾನಸ್)[೫] ಒಂಟೆಗಳಲ್ಲಿ,[೬] ಕುದುರೆಗಳು ಹಾಗೂ ಕತ್ತೆಗಳಲ್ಲಿ (ಇಕ್ವಸ್ ಆಫ಼್ರಿಕಾನಸ್ ಆಸಿನಸ್)[೭] ವರದಿಯಾಗಿದೆ.
ಈ ರೋಗದಲ್ಲಿ ಚರ್ಮದ ಕೆಳಗೆ ಬಾವು ಬರಬಹುದು; ಸಣ್ಣ ಕರುಳುಗಳ ನೋವು ತಲೆದೋರಬಹುದು; ಇಲ್ಲವೇ ಪುಪ್ಪುಸ ಭಾಗಗಳು ಕೆಟ್ಟು ನ್ಯೂಮೋನಿಯ ಬರಬಹುದು. 1838ರಲ್ಲಿ ಯುರೋಪ್ ಖಂಡದಲ್ಲಿ ಬೋಲಿಂಗ್‍ರ್ ಎಂಬ ವಿಜ್ಞಾನಿ ಈ ರೋಗವನ್ನು ಮೊದಲು ಕಂಡುಹಿಡಿದ. 1885ರಲ್ಲಿ ಕಿಟ್ ಎಂಬ ವಿಜ್ಞಾನಿ ಈ ರೋಗಕ್ಕೆ ಮೂಲಕಾರಣವಾದ ಕ್ರಿಮಿಯನ್ನು ಕಂಡುಹಿಡಿದ. ಅಂದಿನಿಂದ ಭಾರತದಲ್ಲಿಯೂ, ಜಗತ್ತಿನ ಇತರ ಎಲ್ಲ ದೇಶಗಳಲ್ಲಿ ಈ ರೋಗವನ್ನು ಗುರುತಿಸಲಾಗಿದೆ. ಭಾರತದಲ್ಲಿ ಪ್ರತಿ ವರ್ಷ 33,000ಕ್ಕಿಂತಲೂ ಹೆಚ್ಚು ದನ ಮತ್ತು ಎಮ್ಮೆಗಳು ಈ ರೋಗದಿಂದ ಸಾಯುತ್ತವೆ.
ರೋಗಮೂಲ ವಿಜ್ಞಾನ
[ಬದಲಾಯಿಸಿ]ಈ ರೋಗಕ್ಕೆ ಮೂಲ ಕಾರಣ ಪಾಶ್ಚುರೆಲ್ಲ ಸೆಪ್ಟಿಕ ಎಂಬ ಹೆಸರಿನ ಒಂದು ಸೂಕ್ಷ್ಮ ಕ್ರಿಮಿ. ಇದು ದೇಹದ ಹೊರಗೆ ಭೂಮಿಯ ಮಣ್ಣಿನಲ್ಲಿ ಅಲ್ಲದೆ ಜೌಗುಪ್ರದೇಶದಲ್ಲಿ ಹೆಚ್ಚಾಗಿ ಇರುತ್ತದೆ. ಸಾಮಾನ್ಯವಾಗಿ ಇದು ಆರೋಗ್ಯವಾದ ಪ್ರಾಣಿಗಳ ಊರ್ಧ್ವಶ್ವಾಸನಾಳಗಳಲ್ಲಿಯೇ ಇದ್ದು ಪ್ರಾಣಿಗಳ ಶಕ್ತಿ ಕುಂದಿದಾಗ ಮೇಲ್ಮೈ ಹೊಂದಲು ಅವಕಾಶವಾಗುತ್ತದೆ. ಶರೀರದಲ್ಲಿ ಈ ಕ್ರಿಮಿ ರೋಗದಿಂದ ಬಳಲುವ ಪ್ರಾಣಿಯ ಎಲ್ಲ ಅವಯವಗಳಲ್ಲಿ ಅದರಲ್ಲಿಯೂ ರಕ್ತ ಮತ್ತು ಬಾವು ಬಂದ ಜಾಗಗಳಲ್ಲಿ ಕಂಡುಬರುತ್ತದೆ. ಇದನ್ನು ಸೂಕ್ಷ್ಮದರ್ಶಕ ಯಂತ್ರದಿಂದ ಗುರುತಿಸಬಹುದು.
ರೋಗಲಕ್ಷಣಗಳು
[ಬದಲಾಯಿಸಿ]ಗಂಟಲುಬೇನೆ ಅತಿ ತೀಕ್ಷ್ಣವಾಗಿದ್ದು ರಕ್ತದಲ್ಲಿ ಕ್ರಿಮಿ ಬೇಗನೆ ಪಸರಿಸಿ ಕೂಡಲೇ ರೋಗದ ಲಕ್ಷಣಗಳು ಕಂಡುಬರುತ್ತವೆ. ಜ್ವರ 1060 ಫ್ಯಾ. 1070 ಫ್ಯಾ. ಇರುವುದು. ನಾಲಗೆ ಬಾಯಿಯಿಂದ ಹೊರಗೆ ಚಾಚಿರುತ್ತದೆ. ವಿಪರೀತ ಜೊಲ್ಲು ಸೋರುವುದು. ಕಣ್ಣು ಕೆಂಪಾಗುವುದು. ಪ್ರಾಣಿ ಅತೀವ ಇಳಿಮುಖವಾಗಿದ್ದು 34 ಗಂಟೆಗಳಲ್ಲಿ ಮರಣ ಹೊಂದಬಹುದು. ಕೆಲವು ಸಮಯ ಗಂಟಲು, ಗಂದೆಗಳು, ಎದೆ ಈ ಜಾಗಗಳಲ್ಲಿ ಅತೀವ ನೋವಾದ ಬಾವುಗಳು ಕಂಡುಬರುತ್ತವೆ. ಉಸಿರಾಡಲು ತೊಂದರೆಯಾಗುತ್ತದೆ. ಬೇನೆಯ ಕೆಲವು ದಿವಸಗಳು ಕಳೆಯುವಾಗ ನಿಮೋನಿಯ ತಲೆದೊರಬಹುದು. ಇಲ್ಲವೇ ಕರುಳಿನಲ್ಲಿ ಬದಲಾವಣೆಗಳು ಕಂಡುಬರಹುದು. ಮರಣಾಂತರ ಪ್ರಾಣಿಗಳ ದೇಹವನ್ನು ತೆಗೆದು ಪರೀಕ್ಷೆ ಮಾಡಿದರೆ ರೋಗ ಅತಿ ತೀಕ್ಷ್ಣವಾಗಿದ್ದರೆ ದೇಹದ ಎಲ್ಲ ಭಾಗಗಳಲ್ಲಿ ರಾಗಿಯಷ್ಟು ಗಾತ್ರದ ರಕ್ತ ಗಂಟುಗಳು ಕಂಡುಬರುತ್ತವೆ. ರಸಗ್ರಂಥಿಗಳು ಕೆಂಪಾಗಿ ಉಬ್ಬಿರುತ್ತವೆ. ಈ ಬೇನೆ ಎದೆಗೆ ಪಸರಿಸಿದಾಗ ಎದೆಗೂಡಿನಲ್ಲಿ ದೇಹದ ರಸ ಅಥವಾ ಮಂದವಾದ ರಸ ತುಂಬಿಕೊಂಡಿದ್ದು ಎದೆಗೂಡಿನ ಪದರು ಕೆಂಪಾಗಿರುತ್ತದ. ಪುಪ್ಪಸಗಳು ಬಾತಿದ್ದು ಅಲ್ಲಲ್ಲಿ ಕೆಂಪು ಅಥವಾ ಕಪ್ಪುಬಣ್ಣದ ಬದಲಾವಣೆಗಳನ್ನು ತೋರಿಸುತ್ತವೆ. ಇಂಥ ಪುಪ್ಪುಸ ಒಂದನ್ನು ಕತ್ತರಿಸದರೆ ಅದರಲ್ಲಿ ದಪ್ಪವಾದ ಬಿಳಿಗೆರೆಗಳನ್ನು ಕಂಡುಬರುತ್ತವೆ.
ಚಿಕಿತ್ಸೆ
[ಬದಲಾಯಿಸಿ]ಗಂಟಲು ಬೇನೆ ಬಂದಿರುವ ಎಲ್ಲ ಪ್ರಾಣಿಗಳನ್ನು ಬೇರ್ಪಡಿಸಿ ಉಳಿದವುಗಳಿಂದ ದೂರವಿಡಬೇಕು. ಅವನ್ನು ಬೆಚ್ಚಗಿರುವ ಜಾಗದಲ್ಲಿ ಕಟ್ಟಿ ಒಳ್ಳೆಯ ಆಹಾರವನ್ನು ಕೊಡಬೇಕು. ಈ ರೋಗಕ್ಕೆ ಬಗೆ ಬಗೆಯ ಸಲ್ಫನಾಮೈಡ್ ಔಷಧಿಗಳು ಗುಣ ಕೊಡುತ್ತವೆ. ಸಮರ್ಥ ವೈದ್ಯರ ನೆರವನ್ನು ಒಡನೆ ಪಡೆಯುವುದು ಕ್ಷೇಮ. ಆಗಿಂದಾಗ್ಗೆ ರೋಗ ಕಾಣಬರುವ ಪ್ರದೇಶಗಳಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ಆರಂಭದಲ್ಲಿ ವಿಶೇಷವಾಗಿ ಈ ರೋಗ ಬರುತ್ತದೆ. ಇದು ಒಮ್ಮೆಲೆ ತೀಕ್ಷ್ಣವಾಗಿ ಉಲ್ಪಣ ಸ್ಥಿತಿಯುಂಟಾಗುತ್ತದೆ. ಆದ್ದರಿಂದ ಚಿಕಿತ್ಸಾ ಕ್ರಮ ಕೈಗೊಳ್ಳವಷ್ಟು ಅವಕಾಶ ಸಿಗುವುದು ಕೂಡ ಕಷ್ಟವಾಗುತ್ತದೆ. ರೋಗ ದೊಡ್ಡ ಗಾತ್ರದಲ್ಲಿ ಹಬ್ಬಿದರೆ ಪ್ರತಿಯೊಂದು ಪ್ರಾಣಿಯನ್ನೂ ಉಪಚರಿಸುವುದು ಕಠಿಣವಾಗುತ್ತದೆ. ಇಂಥ ಪ್ರಸಂಗದಲ್ಲಿ ಒಂದೇ ಪ್ರತಿಬಂಧಕ ಮಾರ್ಗವೆಂದರೆ ಪ್ರತಿವರ್ಷ ಈ ಪ್ರದೇಶಗಳಲ್ಲಿ ಚುಚ್ಚುಮದ್ದನ್ನು ಎಲ್ಲ ದನಗಳಿಗೆ ಹಾಕಿಸುವುದು. ಈ ಚುಚ್ಚುಮದ್ದು ರೋಗವನ್ನು ಹತೋಟಿಗೆ ತರಲು ಬಹಳ ಉಪಕಾರಿಯಾಗಿದೆ. ಚುಚ್ಚುಮದ್ದಿನಿಂದ ಉಪಚರಿಸಿದ ಪ್ರಾಣಿಗಳು ಕನಿಷ್ಠ 10 ತಿಂಗಳವರೆಗೆ ಗಂಟಲುಬೇನೆಯಿಂದ ಮುಕ್ತವಾಗಿರುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ Carter GR and De Alwis MCL (1989) Haemorrhagic septicaemia. In: C. Adlam and J. M. Rutter, editors. Pasteurella and Pasteurellosis. Academic Press, London. pp. 131–160.
- ↑ FAO (1959) Report of the FAO meeting on haemorrhagic septicaemia. Manila, Philippines.
- ↑ FAO (1979). In: FAO, editor editors. Proceedings of the third international workshop on haemorrhagic septicaemia. Colombo, Sri Lanka: FAO-APHCA.
- ↑ FAO (1991). Proceedings of the fourth international workshop on haemorrhagic septicaemia. Kandy, Sri Lanka: FAO-APHCA Publication No. 1991/13.
- ↑ Kasali OB (1972) A case of haemorrhagic septicaemia in an African buffalo (Syncerus nanus). Bull Epizoot Dis Afr 20: 203-204.
- ↑ Bain RVS, De Alwis MCL, Carter GR and Gupta BK (1982) Haemorrhagic septicaemia. FAO animal production and health paper No 33. Rome.
- ↑ Pavri KM and Apte VH (1967) Isolation of Pasteurella multocida from a fatal disease of horses and donkeys in India. Vet Rec 80: 437-439.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Current status of Hemorrhagic septicemia worldwide at OIE. WAHID Interface - OIE World Animal Health Information Database
- Disease card