ವಿಷಯಕ್ಕೆ ಹೋಗು

ಹಾರ್ಮೋನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾರ್ಮೋನ್ ಎಂದರೆ ನಿರ್ನಾಳ ಗ್ರಂಥಿಗಳಲ್ಲಿ ಉತ್ಪತ್ತಿಯಾಗಿ, ರಕ್ತಗತವಾಗಿ ತನ್ನ ಜನ್ಮಸ್ಥಾನದಿಂದ ದೂರದಲ್ಲಿರುವ ಲಕ್ಷ್ಯಕೋಶಗಳಲ್ಲಿ (ಟಾರ್ಗೆಟ್ ಸೆಲ್ಸ್) ಕಾರ್ಯೋನ್ಮುಖವಾಗುವ ರಾಸಾಯನಿಕ.

ಕಾರ್ಯಗಳು

[ಬದಲಾಯಿಸಿ]

ಬೆಳೆವಣಿಗೆ, ಉಪಾಪಚಯ ದರ, ಕೋಶಗಳಲ್ಲಿ ಪೋಷಕಗಳ ಸದ್ವಿನಿಯೋಗ, ಸಂತಾನೋತ್ಪತ್ತಿ, ಜೀವಿಯ ಮಾಸಿಕ ಅಥವಾ ವಾರ್ಷಿಕ ಕ್ರಿಯಾಚಕ್ರಗಳ ನಿಯಂತ್ರಣ ಮತ್ತು ವ್ಯಕ್ತಿತ್ವ ವಿಕಸನ ಇವೆಲ್ಲದರ ಮೇಲ್ವಿಚಾರಣೆ ಹಾರ್ಮೋನುಗಳದ್ದು. ಆದ್ದರಿಂದ ಇವುಗಳಿಗೆ “ರಸದೂತಗಳು” ಎಂದು ಹೆಸರು.

ವರ್ಗೀಕರಣ

[ಬದಲಾಯಿಸಿ]

ಹಾರ್ಮೋನುಗಳನ್ನು ಐದು ಬಗೆಯ ರಾಸಾಯನಿಕ ವರ್ಗಗಳಾಗಿ ವಿಂಗಡಿಸುವುದು ವಾಡಿಕೆ. ಸ್ಟೀರಾಯ್ಡ್‌ಗಳು, ಅಮೈನೊಆಮ್ಲ ಜನ್ಯಗಳು, ಪೆಪ್ಟೈಡ್‍ಗಳು ಅಥವಾ ಪ್ರೋಟೀನ್‍ಗಳು, ಗ್ಲೈಕೊಪ್ರೋಟೀನ್‍ಗಳು ಮತ್ತು ಕೊಬ್ಬಿನ ಆಮ್ಲ ಜನ್ಯಗಳು. ಹಾರ್ಮೋನುಗಳ ಕಾರ್ಯಾಚರಣೆಯನ್ನು ನಿರ್ದೇಶಿಸುವುದು ಹೈಪೋಥ್ಯಾಲಮಸ್‍ನ ಕಾರ್ಯ.

ಕೆಲವು ಹಾರ್ಮೋನುಗಳ ಉದಾಹರಣೆಗಳು

[ಬದಲಾಯಿಸಿ]

ಇನ್ಸುಲಿನ್, ಆಕ್ಸಿಟಾಸಿನ್, ಅಡ್ರೆನಲಿನ್, ಕಾರ್ಟಿಸೋನ್‍ಗಳು, ವ್ಯಾಸೊಪ್ರೆಸಿನ್, ತೈರಾಕ್ಸಿನ್, ಟೆಸ್ಟೊಸ್ಟೆರೋನ್ ಮತ್ತು ಈಸ್ಟ್ರೊಜನ್‍ಗಳು ಕೆಲವು ಪರಿಚಿತ ಹಾರ್ಮೋನುಗಳು.

ಇನ್ಸುಲಿನ್: ಮೇದೋಜೀರಕದ ನಿರ್ನಾಳ ಭಾಗವೇ ಲ್ಯಾಂಗರ್‌ಹಾನ್ಸ್‌ನ ಕಿರುದ್ವೀಪಗಳು. ಇಲ್ಲಿ ಇನ್ಸುಲಿನ್ ಉತ್ಪತ್ತಿಯಾಗುವುದು. ಇದರ ನೆರವಿನಿಂದ ಯಕೃತ್ತು ನಮ್ಮ ರಕ್ತದಲ್ಲಿ ಗ್ಲೂಕೋಸ್ ಅಂಶ ಸುರಕ್ಷಿತ ಮಟ್ಟದಲ್ಲಿರುವಂತೆ (ಒಂದು ಡೆಸಿಲೀಟರ್ ರಕ್ತದಲ್ಲಿ 80-100 ಮಿಲಿಗ್ರಾಮ್‍ಗಳು) ಕಾಯುತ್ತದೆ.[] ಈ ಮಿತಿ ಮೀರಿದರೆ ಮಧುಮೇಹ ಸನ್ನಿಹಿತ.

ಆಕ್ಸಿಟಾಸಿನ್ ಮತ್ತು ವ್ಯಾಸೊಪ್ರೆಸಿನ್: ಪಿಟ್ಯೂಟರಿ ಗ್ರಂಥಿಯ ಹಿಂಬದಿಯ ಹಾಲೆಯಿಂದ ಆಕ್ಸಿಟಾಸಿನ್ ಮತ್ತು ವ್ಯಾಸೊಪ್ರೆಸಿನ್ ಹಾರ್ಮೋನುಗಳು ಸ್ರವಿಸುತ್ತವೆ. ಗರ್ಭಕೋಶದ ಸ್ನಾಯುಗಳು ಮತ್ತು ರಕ್ತನಾಳಗಳನ್ನು ಸಂಕುಚಿಸಿ, ಹೆಚ್ಚು ರಕ್ತಸ್ರಾವಕ್ಕೆ ಎಡೆಗೊಡದೆ ಸುಲಭ ಪ್ರಸವವಾಗಲು ಆಕ್ಸಿಟಾಸಿನ್ ಮಾಡಲೂ ಇದು ಸಹಾಯಕ. ದೇಹದ ಜಲಸಮತೋಲನ ವ್ಯಾಸೊಪ್ರೆಸಿನ್‍ನ ಹೊಣೆ. ಅದರ ಕೊರತೆಯಿಂದ ನಿಸ್ಸಾರ ಮಧುಮೇಹ ಎಂಬ ಸ್ಥಿತಿ ಉಂಟಾಗುವುದು.[] ಈ ಸ್ಥಿತಿಯಲ್ಲಿ ರೋಗಿ ಪ್ರತಿ ದಿನ 30 ಲೀಟರ್‌ಗಳಷ್ಟು ಮೂತ್ರವನ್ನು ವಿಸರ್ಜಿಸುತ್ತಾನೆ.

ಕಾರ್ಟಿಸೋನ್‍ಗಳು: ದೇಹದಲ್ಲಿ ಸೋಡಿಯಮ್-ಪೊಟ್ಯಾಸಿಯಮ್ ಸಮತೋಲನ ಕಾಪಾಡುವುದು ಕಾರ್ಟಿಸೋನ್‍ಗಳ ಕಾರ್ಯ. ಇವು ಅಡ್ರೀನಲ್ ಗ್ರಂಥಿಗಳ ಉತ್ಪನ್ನ. ಈ ಗ್ರಂಥಿಗಳು ಉತ್ಪಾದಿಸುವ ಅಡ್ರೀನಲಿನ್ ಅಪಾಯಗಳನ್ನು ಎದುರಿಸಲು ಮತ್ತು ಅವುಗಳಿಂದ ಪಾರಾಗಲು ಸಹಾಯಕ.

ತೈರಾಕ್ಸಿನ್: ತೈರಾಯ್ಡ್ ಗ್ರಂಥಿಗಳಲ್ಲಿ ತೈರಾಕ್ಸಿನ್ ಜನ್ಯ. ಇದು ಅಯೊಡೀನ್ ಉಳ್ಳ ಹಾರ್ಮೋನ್. ಇದರ ಕೊರತೆಯಿಂದ ಗಳಗಂಡ ರೋಗ ಪ್ರಾಪ್ತ.[] ಆದ್ದರಿಂದಲೇ ಅಡುಗೆ ಉಪ್ಪಿಗೆ (NaCl) ಸೋಡಿಯಮ್ ಅಯೊಡೈಡ್ ಕೂಡಿಸಿಯೇ ಮಾರಬೇಕು ಎಂಬ ಕಾನೂನು.

ಈಸ್ಟ್ರೋಜನ್ ಮತ್ತು ಟೆಸ್ಟೊಸ್ಟೆರೋನ್: ಅಂಡಾಶಯಗಳಲ್ಲಿ ಈಸ್ಟ್ರೊಜನ್‍ಗಳು ಮತ್ತು ವೃಷಣಗಳಲ್ಲಿ ಟೆಸ್ಟೊಸ್ಟೆರೋನ್‍ಗಳ ಹುಟ್ಟು. ಇವು ಅನುಕ್ರಮವಾಗಿ ಸ್ತ್ರೀ ಪುರುಷರ ಲೈಂಗಿಕ ಲಕ್ಷಣಗಳು ಮತ್ತು ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತವೆ.

ಸಸ್ಯಗಳೂ ಹಾರ್ಮೋನುಗಳಿಂದ ಪ್ರಭಾವಿತ. ಪುಷ್ಪೋತ್ಪತ್ತಿ ಪ್ರೇರಕವಾದ ಫ಼್ಲಾರಿಜೆನ್ ಒಂದು ಉದಾಹರಣೆ.[]

ಉಲ್ಲೇಖಗಳು

[ಬದಲಾಯಿಸಿ]
  1. Stryer L (1995). Biochemistry (Fourth ed.). New York: W.H. Freeman and Company. pp. 773–74. ISBN 0-7167-2009-4.
  2. Caldwell HK, Young WS III (2006). "Oxytocin and Vasopressin: Genetics and Behavioral Implications" (PDF). In Lajtha A, Lim R (eds.). Handbook of Neurochemistry and Molecular Neurobiology: Neuroactive Proteins and Peptides (3rd ed.). Berlin: Springer. pp. 573–607. ISBN 978-0-387-30348-2.
  3. Ijaz Ahsan (1997). Textbook of Surgery. CRC Press. p. 376. ISBN 9789057021398.
  4. Tsuji, Hiroyuki (2017). "Molecular function of florigen". Breeding Science. 67 (4): 327–332. doi:10.1270/jsbbs.17026. PMC 5654465. PMID 29085241.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: