ನವಗ್ರಹ ಪೂಜೆ, ಹೋಮ
ನವಗ್ರಹ ಪೂಜೆ, ಹೋಮ - ಸೂರ್ಯ ಚಂದ್ರ ಮಂಗಳ ಬುಧ ಗುರು ಶುಕ್ರ ಶನಿ ರಾಹು ಕೇತು-ಈ ಒಂಬತ್ತು ಗ್ರಹಗಳಿಂದ ಸಂಭವಿಸಬಹುದಾದ ಅನಿಷ್ಟಫಲ ಪರಿಹಾರವಾಗಲು ಅವನ್ನು ಪೂಜಿಸಬೇಕೆಂದೂ ಅವನ್ನು ಉದ್ದೇಶಿಸಿ ಹೋಮ ಮಾಡಬೇಕೆಂದೂ ಶಾಸ್ತ್ರದಲ್ಲಿ ತಿಳಿಸಿವೆ. ಇಂದಿಗೂ ಪೂಜೆ ಹೋಮಗಳನ್ನು ನಡೆಸುವುದು ರೂಢಿಯಲ್ಲಿದೆ.[೧]
ಮೊದಲು ಆಯಾ ಗ್ರಹಗಳಿಗೆ ತಿಳಿಸಿರುವಂತೆ ಮಂಡಲಗಳನ್ನು ರಚಿಸಿ ಅವುಗಳ ಮೇಲೆ ಆಯಾ ಗ್ರಹಗಳ ಪ್ರತಿಮೆಗಳನ್ನಾಗಲಿ ಧ್ಯಾನವನ್ನಾಗಲೀ ಇಟ್ಟು ಧ್ಯಾನ ಆವಾಹನಾದಿ ಉಪಚಾರಗಳಿಂದ ಪೂಜಿಸಬೇಕು.[೨] ಆಯಾ ಗ್ರಹದ ಪೂಜೆ ಆದಮೇಲೆ ಅದೇ ಗ್ರಹದ ಅಧಿದೇವತೆ ಮತ್ತು ಪ್ರತ್ಯಧಿದೇವತೆಗಳನ್ನು ಆವಾಹನೆ ಮಾಡಿ ಪೂಜಿಸಬೇಕು.[೩]
ಸೂರ್ಯ
[ಬದಲಾಯಿಸಿ]ಮಧ್ಯದಲ್ಲಿ ಎಂಟು ದಳದ ಪದ್ಮವನ್ನು ಬರೆದು ಅದರ ಮಧ್ಯದಲ್ಲಿ ವೃತ್ತಾಕಾರದ ಮಂಡಲವನ್ನು ರಚಿಸಿ ಅದರ ಮೇಲೆ ಸೂರ್ಯನ ಪ್ರತಿಮೆಯನ್ನು ಇರಿಸಿ ಭಗವನ್ನಾದಿತ್ಯ ಗ್ರಹಾಧಿಪತೇ ಕಾಶ್ಯಪಗೋತ್ರ ಕಳಿಂಗದೇಶೇಶ್ವರ ಸಪ್ತಮ್ಯಾಂ ವಿಶಾಖಾ ನಕ್ಷತ್ರಜಾತ ಜಪಾಪುಷ್ಪೋಪಮಾಂಗದ್ಯುತೇ ದ್ವಿಭುಜಪದ್ಮಾಭಯಹಸ್ತ ಸಿಂಧೂರ ವರ್ಣಾಂಬರಮಾಲ್ಯಾನುಲೇಪನ ಜ್ವಲನ್ಮಾಣಿಕ್ಯಖಚಿತ ಸರ್ವಾಂಗಾಭರಣ ಭಾಸ್ಕರ ತೇಜೋನಿಧೇ ತ್ರಿಲೋಕೇ ಪ್ರಕಾಶಕ ದೇವತಾತ್ರಯೀ ಮೂರ್ತೇ ನಮಸ್ತೇ. ಸನ್ನದ್ಧಾಭರಣಪತಾಕೋಪಶೋಭಿತೇನ ಸಪ್ತಾಶ್ವರಥವಾಹನೈಕಚಕ್ರೇಣ ರಥೇನ ಮೇರುಂ ಪ್ರದಕ್ಷಿಣೇಕುರ್ವನ್ನಾಗಚ್ಫ-ಅಗ್ನಿಮದ್ರಾಭ್ಯಾಂ ಸಹ ಪದ್ಮಕರ್ಣಿಕಾಯಾಂ ತಾಮ್ರಪ್ರತಿಮಾಂ ಪ್ರಾಙ್ಮುಖವರ್ತುಲ ಪೀಠಮಧಿತಿಷ್ಠ-ಎಂದು ಅಂಗ ಆಯುಧಶಕ್ತಿ ಪತ್ನೀಸಹಿತನಾದ ಸೂರ್ಯನನ್ನು ಮೊದಲು ಧ್ಯಾನ ಮಾಡಬೇಕು. ಕೆಂಪು ಹೂವು, ಕೆಂಪು ಅಕ್ಷತೆ, ಧೂಪ ದೀಪಗಳಿಂದ ವೃತ್ತಾಕಾರ ಮಂಡಲದ ಮೇಲೆ ಪ್ರತಿಷ್ಠಿಸಿರುವ ಸೂರ್ಯನನ್ನು ಪೂಜಿಸಬೇಕು. ಬಳಿಕ ಸೂರ್ಯಧಿದೇವತೆ ಅಗ್ನಿಯನ್ನೂ ಪ್ರತ್ಯಧಿದೇವತೆ ರುದ್ರನನ್ನೂ ಪೂಜಿಸಬೇಕು.
ಚಂದ್ರ
[ಬದಲಾಯಿಸಿ]ಸೂರ್ಯಮಂಡಲದ ಆಗ್ನೇಯ ಭಾಗದಲ್ಲಿ ಚತುರಸ್ರ ಮಂಡಲವನ್ನು ರಚಿಸಿ ಅದರ ಮೇಲೆ ಚಂದ್ರ ಪ್ರತಿಮೆಯನ್ನಿಟ್ಟು ಭಗವನ್ ಸೋಮ ದ್ವಿಜಾಧಿಪತೇ ಸುಧಾಮಯ ಶರೀರ ಅತ್ರಿಗೋತ್ರ ಯಾಮುನದೇಶೇಶ್ವರ ಗೋಕ್ಷೀರ ಧವಳಾಂಗ ಧ್ಯುತೇ ದ್ವಿಭುಜ ಗದಾವರದಾಂಕಿತಕರ ಶುಕ್ಲಾಂಬರಮಾಲ್ಯಾನುಲೇಪನ ಮೌಕ್ತಿಕಾಭರಣ ರಮಣೀಯ ಸಮಸ್ತಲೋಖಾಪ್ಯಾಯಕ ದೇವತಾಸ್ವಾದ್ಯ ಮೂರ್ತೆನಮಸ್ತೇ. ಸನ್ನದ್ಧ ಧವಲ ಧ್ವಜೋಪಶೋಭಿತೇನ ದಶಾಶ್ವರಥವಾಹನೇನ ತ್ರಿಚಕ್ರರಥೇನ ಮೇರೂ ಪ್ರದಕ್ಷಿಣೀ ಕುರ್ವನ್ನಾಗಚ್ಛ. ಅದ್ಭಿರುಮಯಾ ಸಹ ಪದ್ಮಾಗ್ನೇಯದಳ ಮಧ್ಯೇ ಸ್ಫಟಿಕ ಪ್ರತಿಮಾಂ ಪ್ರಾಙ್ಮಖೀಂ ಚತುರಸ್ರಪೀಠಮಧಿತಿಷ್ಠ-ಎಂದು ಅಂಗ ಆಯುಧ ಸಹಿತನಾದ ಚಂದ್ರನನ್ನು ಮೊದಲು ಧ್ಯಾನಿಸಬೇಕು. ಬಳಿಕ ಬಿಳಿಯ ಪುಷ್ಪಾಕ್ಷತೆಗಳಿಂದ ಚತುರಸ್ರ ಮಂಡಲದ ಮೇಲೆ ಪ್ರತಿಷ್ಠಿಸಿರುವ ಪಶ್ಚಿಮಾಭಿಮುಖನಾಗಿರುವ ಚಂದ್ರನನ್ನು ಪೂಜಿಸಬೇಕು. ಅನಂತರ ಚಂದ್ರಾಧಿದೇವತೆ ಅಪ್ಪು, ಪ್ರತ್ಯಾಧಿದೇವತೆ ಉಮಾ ಇವರನ್ನು ಧ್ಯಾನಿಸಿ ಪೂಜಿಸಬೇಕು.
ಅಂಗಾರಕ
[ಬದಲಾಯಿಸಿ]ಸೂರ್ಯಮಂಡಲದ ದಕ್ಷಿಣ ಭಾಗದಲ್ಲಿ ತ್ರಿಕೋನಾಕಾರ ಮಂಡಲವನ್ನು ರಚಿಸಿ ಅದರ ಮೇಲೆ ಅಂಗಾರಕ ಪ್ರತಿಮೆಯನ್ನಿಟ್ಟು ಭಗವನ್ ಅಂಗಾರಕ ಅಗ್ನ್ಯಾಕೃತೇ ಭಾರದ್ವಾಜ ಗೋತ್ರ ಅವಂತೀದೇಶೇಶ್ವರ ಅಷ್ಟಮ್ಯಾಂ ಶ್ರವಣನಕ್ಷತ್ರೋತ್ಪನ್ನ ಜ್ವಾಲಾಪುಂಜೋಪಮಾಂಗದ್ಯುತೇ ಚತುರ್ಭುಜಶಕ್ತಿ ಶುಲಗದಾಖಟ್ವಾಂಗಧಾರಿನ್ ರಕ್ತಾಂಬರಮಾಲ್ಯಾನುಲೇಪನ ಪ್ರವಾಳಾಭರಣಭೂಷಿತ ಸರ್ವಾಂಗದ್ಯುತೇ ಆಲೋಕದೀಪ್ತೇ ನಮಸ್ತೇ. ಸನ್ನದ್ಧ ರಕ್ತಧ್ವಜೋಪಶೋಭಿತೇನ ರಕ್ತಮೇಷಾಷ್ಟರಥವಾಹನೇನ ಮೇರುಂ ಪ್ರದಕ್ಷಿಣೇ ಕುರ್ವನ್ನಾಗಚ್ಫ ಭೂಮಿಸ್ಕಂದಾಭ್ಯಂ ಸಹ ಪದ್ಮದಕ್ಷಿಣದಲಮಧ್ಯೇ ರಕ್ತಚಂದನ ಪ್ರತಿಮಾಂ ದಕ್ಷಿಣಾಭಿಮುಖೀಂ ತ್ರಿಕೋಣಪೀಠಮಧಿತಿಷ್ಠ-ಎಂದು ಅಂಗಾರಕನನ್ನು ಧ್ಯಾನಿಸಿ ತ್ರಿಕೋಣ ಮಂಡಲದ ಮೇಲೆ ಪ್ರತಿಷ್ಠಾಪಿಸಿರುವ ಅಂಗಾರಕನನ್ನು ಕೆಂಪು ಹೂವು ಅಕ್ಷತೆಗಳಿಂದ ಪೂಜಿಸಬೇಕು. ಆಮೇಲೆ ಅಂಗಾರಕಾಧಿದೇವತೆ ಭೂಮಿ, ಪ್ರತ್ಯಧಿದೇವತೆ ಸ್ಕಂದ ಇವರನ್ನು ಧ್ಯಾನಿಸಿ ಪೂಜಿಸಬೇಕು.
ಬುಧ
[ಬದಲಾಯಿಸಿ]ಸೂರ್ಯಮಂಡಲದ ಈಶಾನ್ಯ ಭಾಗದಲ್ಲಿ ಬಾಣಾಕಾರ ಮಂಡಲವನ್ನು ರಚಿಸಿ ಅದರ ಮೇಲೆ ಬುಧನ ಪ್ರತಿಮೆಯನ್ನಿಟ್ಟು ಭಗವನ್ ಸೌಮ್ಯದ್ಯೂತೇ ಸರ್ವಜ್ಞಾನಮಯ ದ್ವಾದಶ್ಯಾಧನಿಷ್ಠಾನಕ್ಷತ್ರೋತ್ಪನ್ನ ಮಗಧದೇಶೇಶ್ವರ ಕುಂಕುಮ ವರ್ಣಾಂಗದ್ಯುತೇ ಚತುರ್ಭುಜ ಖಡ್ಗಖೇಟಿ ಗದಾವರದಾನಾಂಕಿತರ ಪೀತಮಾಲ್ಯಾನುಲೇಪನ, ಮರಕತಾಭರಣಾಲಂಕೃತ ಸರ್ವಾಂಗದ್ಯುತೇ ವಿಬುಧಮತೇ ನಮಸ್ತೇ. ಸನ್ನದ್ಧ ಹರಿತಧ್ವಜೋಪಶೋಭಿತೇನ ಚತುಸ್ಸಿಂಹರಥವಾಹನೇನ ಮೇರುಂ ಪ್ರದಕ್ಷಿಣೀಕುರ್ವನ್ನಾಗಚ್ಛ ವಿಷ್ಣುಪುರುಷಾಭ್ಯಾಂ ಸಹ, ಪದ್ಮೇಶಾನದಲ ಮಧ್ಯೇ ಸುವರ್ಣಪ್ರತಿಮಾಮುದಙ್ಮುಖೀಂ ಬಾಣಾಕಾರಪೀಠಮಧಿತಿಷ್ಠ-ಎಂದು ಬುಧನನ್ನು ಧ್ಯಾನಿಸಿ ಬಾಣಾಕಾರ ಮಂಡಲದ ಮೇಲೆ ಉತ್ತರಮುಖವಾಗಿ ಪ್ರತಿಷ್ಠಿಸಿರುವ ಬುಧನನ್ನು ಪೂಜಿಸಬೇಕು. ಆ ಬಳಿಕ ಬುಧಾಧಿದೇವತೆ ವಿಷ್ಣು ಪ್ರತ್ಯಧಿದೇವತೆ ಪುರುಷ ಇವರನ್ನೂ ಧ್ಯಾನಿಸಿ ಪೂಜಿಸಬೇಕು.
ಗುರು
[ಬದಲಾಯಿಸಿ]ಸೂರ್ಯಮಂಡಲದ ಉತ್ತರ ಭಾಗದಲ್ಲಿ ಚತುರಸ್ರಾಕಾರ ಮಂಡಲವನ್ನು ರಚಿಸಿ ಅದರ ಮೇಲೆ ಗುರುವಿನ ಪ್ರತಿಮೆಯನ್ನಿಟ್ಟು ಭಗವನ್ ಬೃಹಸ್ಪತೇ ಸಮಸ್ತ ದೇವತಾಚಾರ್ಯ ಆಂಗೀರಸಗೋತ್ರ ಸಿಂಧುದೇಶೇಶ್ವರ ದೀಪ್ತ ಸುವರ್ಣ ಸದೃಶಾಂಗ ದೀಪ್ತೇ ಚತುರ್ಭುಜ ದಂಡಕಮಂಡಲ್ವಕ್ಷ ಸೂತ್ರ ವರದಾಂಕಿತ ಕರ ಪೀತಾಂಬರಮಾಲ್ಯಾನುಲೇಪನ ಅಷ್ಟಾಶ್ವರಥವಾಹನೇನ ಮೇರುಂ ಪ್ರದಕ್ಷಿಣೀ ಕುರ್ವನ್ನಾಗಚ್ಛ ಇಂದ್ರಬ್ರಹ್ಮಭ್ಯಾಂ ಸಹ ಪದ್ಮೋತ್ತರದಲಮಧ್ಯೇ ಸುವರ್ಣ ಪ್ರತಿಮಾಮುದಙ್ಮುಖೀಂ ದೀರ್ಘ ಚತುರಸ್ರಪೀಠಮಧಿತಿಷ್ಠ-ಎಂದು ಗುರುವನ್ನು ಧ್ಯಾನಿಸಿ ಚತುರಸ್ರಾಕಾರ ಮಂಡಲದ ಮೇಲೆ ಪ್ರತಿಷ್ಠಾಪಿಸಿರುವ ಗುರುವನ್ನು ಪೂಜಿಸಬೇಕು. ಮತ್ತೆ ಗುರ್ವಧಿದೇವತೆ ಇಂದ್ರ ಪ್ರತ್ಯಧಿದೇವತೆ ಬ್ರಹ್ಮ ಇವರನ್ನು ಧ್ಯಾನಿಸಿ ಪೂಜಿಸಬೇಕು.
ಶುಕ್ರ
[ಬದಲಾಯಿಸಿ]ಸೂರ್ಯಮಂಡಲದ ಪೂರ್ವಭಾಗದಲ್ಲಿ ಪಂಚಬಾಣಾಕಾರ ಮಂಡಲವನ್ನು ರಚಿಸಿ ಅದರ ಮೇಲೆ ಶುಕ್ರನ ಪ್ರತಿಮೆಯನ್ನಿಟ್ಟು ಭಗವನ್ ಭಾರ್ಗವ ಸಮಸ್ತ ದೈತ್ಯಸುರೋಭಾರ್ಗವಗೋತ್ರ ಭೋಜಕಟದೇಶೇಶ್ವರ ರಜತೋಜ್ಚ್ವಲಾಂಗಕಾಂತೇ ಚತುರ್ಭುಜ, ದಂಡಕಮಂಡಲ್ವಕ್ಷಸೂತ್ರ ವರದಾನಾಂಕಿತಕರ ಶುಕ್ಲಾಂಬರ ಮಾಲ್ಯಾಸುಲೇಪನ ವಜ್ರಾಭರಣಭೂಷಿತ ಸರ್ವಾಂಗ ಸಮಸ್ತ ನೀತಿ ಶಾಸ್ತ್ರ ನಿಪುಣಮತೇ ನಮಸ್ತೆ, ಶುಕ್ಲಧ್ವಜೋಪಶೋಭಿತೇನ ಶುಕ್ಲಾಷ್ಟಾಶ್ವರಥವಾಹನೇನ ಮೇರುಂ ಪ್ರದಕ್ಷಿಣೀ ಕುರ್ವನ್ನಾಗಚ್ಛ. ಇಂದ್ರಾಣೀದ್ರಾಭ್ಯಾಂ ಸಹ ಪದ್ಮಪೂರ್ವದಲಮಧ್ಯೇ ರಜತಪ್ರತಿಮಾಂ ಪ್ರಾಙ್ಮುಖೀಂ ಪಂಚಕೋಣಪೀಠಮಧಿತಿಷ್ಠ-ಎಂದು ಶುಕ್ರನನ್ನು ಧ್ಯಾನಿಸಿ ಪಂಚಬಾಣಾಕಾರದ ಮಂಡಲದ ಮೇಲೆ ಪೂರ್ವಾಭಿಮುಖನಾಗಿ ಪ್ರತಿಷ್ಠಾಸಿರುವ ಶುಕ್ರನನ್ನು ಪೂಜಿಸಬೇಕು. ಆ ಬಳಿಕ ಶುಕ್ರಾಧಿದೇವತೆ ಇಂದ್ರಾಣಿ, ಪ್ರತ್ಯಧಿದೇವತೆ ಇಂದ್ರ ಇವರನ್ನೂ ಧ್ಯಾನಿಸಿ ಪೂಜಿಸಬೇಕು.
ಶನಿ
[ಬದಲಾಯಿಸಿ]ಸೂರ್ಯಮಂಡಲದ ಪಶ್ಚಿಮಭಾಗದಲ್ಲಿ ಧನುಸ್ಸಿನ ಆಕಾರದ ಮಂಡಲವನ್ನು ರಚಿಸಿ ಅದರ ಮೇಲೆ ಶನೈಶ್ವರ ಪ್ರತಿಮೆಯನ್ನಿರಿಸಿ ಭಗವನ್ ಶನೈಶ್ವರ ಭಾಸ್ಕರತನಯ ಕಾಶ್ಶಪಗೋತ್ರ ಸೌರಾಷ್ಟ್ರದೇಶೇಶ್ವರ ಕಜ್ಜಲಸಮಾಂಗದ್ಯುತೇ ಚತುರ್ಭುಜಚಾಪಭಾಣ ಕೃಪಾಣಾಭಯಾಂಕಿತಕರ ನೀಲಾಂಬರ ಮಾಲ್ಯಾನುಲೇಪನ ನೀಲರತ್ನ ಭೂಷಣಾಲಂಕೃತಸರ್ವಾಂಗ ಸಮಸ್ತ ಭುವನ ಭೀಷಣಾಮರ್ಷಮೂರ್ತೇ ನಮಸ್ತೇ ಸನ್ನದ್ಧ ನೀಲಧ್ವಜೋಪಶೋಭಿತೇನ ನೀಲಗೃದ್ರಾರ್ಶಟರಥವಾಹನೇನ ಮೇರುಂ ಪ್ರದಕ್ಷಿಣೀಕುರ್ವನ್ನಾಗಚ್ಛ-ಎಂದು ಶನೇಶ್ವರನನ್ನು ಧ್ಯಾನಿಸಿ ಧನುರಾಕಾರ ಮಂಡಲದ ಮೇಲೆ ಪಶ್ಚಿಮಾಭಿಮುಖವಾಗಿ ಪ್ರತಿಷ್ಠಿಸಿರುವ ಶನಿಯನ್ನು ಪೂಜಿಸಬೇಕು. ಅನಂತರ ಶನೈಶ್ವರಾಧಿದೇವತೆ ಪ್ರಜಾಪತಿ, ಪ್ರತ್ಯಧಿದೇವತೆ ಯಮ ಇವರನ್ನು ಧ್ಯಾನಿಸಿ ಪೂಜಿಸಬೇಕು.
ರಾಹು
[ಬದಲಾಯಿಸಿ]ಸೂರ್ಯಮಂಡಲದ ನೈಋತ್ಯಭಾಗದಲ್ಲಿ ಶೂರ್ಪಾಕಾರ (ಮೊರದ ಆಕಾರ) ಮಂಡಲವನ್ನು ರಚಿಸಿ ಅದರ ಮೇಲೆ ರಾಹುಪ್ರತಿಮೆಯನ್ನಿಟ್ಟು ಭಗವನ್ ರಾಹೋ ರವಿಸೋಮವಿಮರ್ದನ ಸಿಂಹಿಕಾನಂದನ ಪೈಠೀನಸಿಗೋತ್ರ ಬರ್ಬರ ದೇಶೇಶ್ವರ ಕಾಲ ಮೇಘದ್ಯುತೇ ವ್ಯಾಘ್ರವದನ ಚತುರ್ಭುಜ ಖಡ್ಗ ಧರ್ಮ ಶೂಲ ವರದಾನಾಂಕಿತಕರ ಕೃಷ್ಣಾಂಬರಮಾಲ್ಯಾನುಲೇಪನ ಗೋಮೇಧಿಕಾಚರಣಭುಷಿತ ಸರ್ವಾಂಗಶೌರ್ಯನಿಧೇ ನಮಸ್ತೇ. ಸನ್ನದ್ಧ ಕೃಷ್ಣಧ್ವಜೋಪಶೋಭಿತೇನ ಕೃಷ್ಣ ಸಿಂಹರಥವಾಹನೇನ ಮೇರುಮಪ್ರದಕ್ಷಿಣೇ ಕುರ್ವನ್ನಾಗಚ್ಛ-ಎಂದು ರಾಹುವನ್ನು ಧ್ಯಾನಿಸಿ ಮೊರದ ಆಕಾರದ ಮಂಡಲದ ಮೇಲೆ ದಕ್ಷಿಣಾಭಿಮುಖವಾಗಿ ಪ್ರತಿಷ್ಠಿಸಿರುವ ರಾಹುವನ್ನು ಪೂಜಿಸಬೇಕು. ಅನಂತರ ರಾಹ್ವಧಿದೇವತೆ ಸರ್ಪ, ಪ್ರತ್ಯಧಿದೇವತೆ ಕಾಲ ಇವರನ್ನು ಧ್ಯಾನಿಸಿ ಪೂಜಿಸಬೇಕು.
ಕೇತು
[ಬದಲಾಯಿಸಿ]ಸೂರ್ಯಮಂಡಲದ ವಾಯವ್ಯ ಭಾಗದಲ್ಲಿ ಧ್ವಜಾಕಾರ ಮಂಡಲವನ್ನು ರಚಿಸಿ ಅದರ ಮೇಲೆ ಕೇತು ಪ್ರತಿಮೆಯನ್ನಿಟ್ಟು ಭಗವನ್ ಕೇತೋ ಧೂಮರೂಪ ಜೈಮಿನಿ ಗೋತ್ರ ಮಧ್ಯದೇಶೇಶ್ವರ ಧೂಮ್ರವರ್ಣ ಧ್ವಜಾಕೃತೇ ದ್ವಿಭುಜ ಗದಾವರದಾನಾಂಕಿತಕರ ಚಿತ್ರಮಾಲ್ಯಾನುಲೇಪನ ವೈಡೂರ್ಯವರಾಭರಣಭೂಷಿತ ಸರ್ವಾಂಗವಿಚಿತ್ರಶಕ್ತೀ ನಮಸ್ತೇ ಸನ್ನದ್ಧ ಚಿತ್ರಧ್ವಜೋಪಶೋಭಿತೇನ ಚಿತ್ರ ಕಪೋತರಥವಾಹನೇನ ಮೇರುಪ್ರದಕ್ಷಿಣೀ ಕುರ್ವನ್ನಾಗಚ್ಫ-ಎಂದು ಧ್ವಜಾಕಾರಮಂಡಲದ ಮೇಲೆ ದಕ್ಷಿಣಾಭಿಮುಖವಾಗಿ ಪ್ರತಿಷ್ಠಿಸಿರುವ ಕೇತುವನ್ನು ಪೂಜಿಸಬೇಕು. ಬಳಿಕ ಕೇತ್ಯಧಿದೇವತೆ ಬ್ರಹ್ಮ, ಪ್ರತ್ಯಧಿದೇವತೆ ಚಿತ್ರಗುಪ್ತ ಇವರನ್ನು ಧ್ಯಾನಿಸಬೇಕು.
ಶ್ರೀ ವ್ಯಾಸರು ತಿಳಿಸಿರುವ ನವಗ್ರಹ ಸ್ತೋತ್ರ ಈ ರೀತಿ ಇದೆ-
ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ಧ್ಯಾಂತಾರಿಂ ಸರ್ವಪಾಪಘ್ನಂ ಪ್ರಣತೋ ಸ್ಮಿ ದಿವಾಕರಂ ದಿವ್ಯಶಂಖ ತುಷಾರಾಭಂ ಕ್ಷಿರೋದಾರ್ಣವ ಸಂಭವಂ ನಮಾಮಿ ಶಶಿನ ಭಕ್ತ್ಯಾ ಶಂಭೋರ್ಮಕುಟಭೂಷಣಂ ಧರಣೀಗರ್ಭಸಂಭೂತಂ ವಿದ್ಯುತ್ಪುಂಜಮಪ್ರಭಂ ಕುಮಾರಂ ಶಕ್ತಿಹಸ್ತಂಚ ಲೋಹಿತಾಂಗಂ ನಮಾಮ್ಯಹಂ ಪ್ರಿಯಂಗುಕಲಿಕಾಶ್ಶಾಮಂ ರೂಪೇಣಾಪ್ರತಿಮಂ ಬುಧಂ ಸೌಮ್ಯಂ ಸರ್ವಗುಣೋಪೇತಂ ನಮಾಮಿ ಶಶಿನಃ ಸುತಂ ದೇವತಾನಾಂ ಋಷಿಣಾಂಚ ಗುರುಂ ಕನಕಸನ್ನಿಭಂ ವಂದ್ಯ ಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ನೀಲಾಂಜನಚಯಪ್ರಖ್ಯ ರವಿಸೂನುಂ ಮಹಾಗ್ರಹಂ ಛಾಯಾಯಾ ಭರ್ಗ ಸಂಭೂತಂ ವಂದೇಭಕ್ತ್ಯಾ ಶನೈಶ್ವರಂ ಅರ್ಧಕಾಯಂ ಮಾಹಾಘೋರಂ ಚಂದ್ರಾದಿತ್ಯವಿಮರ್ದಕಂ ಸಿಂಹಿಕಾಯಾಃ ಸುತಂ ರೌದ್ರಂ ತಂ ರಾಹುಂ ಪ್ರಣಮಾಮ್ಯಹಂ ಪಲಾಲ ಧೂಮಸಂಕಾಶಂ ತಾರಾಗ್ರಹವಿಮರ್ದಕಂ ರೌದ್ರಂ ರುದ್ರಾತ್ಮಜಂ ಕ್ರೂರಂ ತಂ ಕೇತುಂ ಪ್ರಣಮಾಮ್ಯಹಂ
ಈ ಸ್ತೋತ್ರವನ್ನು ಶುಚಿಯಾಗಿ ಪಠಿಸುವವರಿಗೆ ಗ್ರಹಪೀಡೆ ತೊಲಗಿ ಆರೋಗ್ಯವೂ ಐಶ್ವರ್ಯವೂ ಉಂಟಾಗುತ್ತದೆ ಎಂದಿದೆ.
ಗ್ರಹಗಳ ಪೀಡಾಪರಿಹಾರಕ್ಕಾಗಿ ಗ್ರಹ ಮಂತ್ರ ಜಪ ಮತ್ತು ಹೋಮಗಳು ವಿಹಿತವಾಗಿವೆ. ಗ್ರಹಮಂತ್ರಗಳೂ ವೇದಭೇದದಿಂದ ಭಿನ್ನಭಿನ್ನವಾಗಿವೆ. ಆಯಾ ಶಾಖಾಧ್ಯಾಯಿಗಳಿಗೆ ಆಯಾ ಮಂತ್ರಗಳು ಗ್ರಾಹ್ಯವಾಗಿದೆ. ಗ್ರಹಮಂತ್ರವನ್ನು ೧೦೮ ಬಾರಿ ೧೦೦೮ ಬಾರಿ ಜಪಿಸುವುದು ರೂಢಿಯಲ್ಲಿದೆ. ಸ್ಥಂಡಿಲದಲ್ಲಿ ಅಗ್ನಿಪ್ರತಿಷ್ಠೆ ಮಾಡಿ ಸೂರ್ಯನಿಗೆ ಅರ್ಕ, ಚಂದ್ರನಿಗೆ ಪಲಾಶ, ಅಂಗಾರಕನಿಗೆ ಖದಿರ, ಬುಧನಿಗೆ ಅಪಾಮಾರ್ಗ, ಗುರುವಿಗೆ ಅಶ್ವತ್ಥ, ಶುಕ್ರನಿಗೆ ಉದುಂಬರ, ಶನಿಗೆ ಶಮಿ, ರಾಹುವಿಗೆ ದೂರ್ವಾ, ಕೇತುವಿಗೆ ಕುಶ-ಈ ಸಮಿತ್ತುಗಳನ್ನೂ ಚರು ಮತ್ತು ತುಪ್ಪವನ್ನು ಪ್ರತ್ಯೇಕವಾಗಿ ೮ ಅಥವಾ ೨೮ ಅಥವಾ ೧೦೮ ಬಾರಿ ಅಗ್ನಿಯಲ್ಲಿ ಆಯಾ ಗ್ರಹಮಂತ್ರೋಚ್ಛಾರಣ ಪೂರ್ವಕ ಹೋಮ ಮಾಡಬೇಕು. ಅಂತೆಯೇ ಅಧಿದೇವತೆ ಪ್ರತ್ಯಧಿದೇವತೆಗಳಿಗೆ ಪ್ರಧಾನ ದೇವತೆಯ ದಶಮಾಂಶ ಸಂಖ್ಯೆಯಲ್ಲಿಯೂ ಕ್ರತು ಸಂರಕ್ಷಣ ದೇವತೆಗಳಿಗೆ ಇಪ್ಪತ್ತನೆಯ ಒಂದು ಅಂಶ ಸಂಖ್ಯೆಯಲ್ಲಿಯೂ ಹೋಮ ಮಾಡಬೇಕು. ಈ ಕ್ರಮದಲ್ಲಿ ಮಾಡುವ ನವಗ್ರಹ ಹೋಮದಿಂದ ಗ್ರಹಜನ್ಯ ದೋಷಗಳು ಹೋಗುತ್ತವೆ.[೪]
ಆಧುನಿಕ ಶಾಸ್ತ್ರಪ್ರಕಾರಗಳ ಗ್ರಹಗಳು
[ಬದಲಾಯಿಸಿ]ವೈಜ್ಞಾನಿಕವಾಗಿ ಗ್ರಹಗಳನ್ನು ಹೀಗೆ ಗುರುತಿಸಬಹುದು.
-
ಭೂಮಿ
-
ಗುರು
-
ಶುಕ್ರ
-
ಬುಧ
-
ಮಂಗಳ
-
ಯುರೆನಸ್/ವರುಣ
-
ನೆಫ್ಚೂನ್/ಇಂದ್ರ
-
ಶನಿ
-
ಫ್ಲೂಟೊ/ಯಮ
ಉಲ್ಲೇಖಗಳು
[ಬದಲಾಯಿಸಿ]- ↑ https://www.mymandir.com/p/kpmKhb
- ↑ https://ashwathavruksha.blogspot.com/2019/05/navagraha-pujaa-vidhi.html
- ↑ http://www.aralikatte.com/2018/03/24/navagraha-pooja-mahatva/
- ↑ "ಆರ್ಕೈವ್ ನಕಲು". Archived from the original on 2019-09-08. Retrieved 2020-04-16.