ಕೇಂದ್ರೀಯ ಆಹಾರ ಸಂಶೋಧನಾಲಯ
Established | 21 ಅಕ್ಟೋಬರ್ 1950 |
---|---|
Research type | A constituent laboratory of Council of Scientific and Industrial Research, India |
Director | ರಾಮ್ ರಾಜಶೇಖರನ್ |
Location | ಮೈಸೂರು, ಕರ್ನಾಟಕ |
Campus | 700 acres (2.8 km2) |
Operating agency | Council of Scientific and Industrial Research |
Website | www |
ಕೇಂದ್ರೀಯ ಆಹಾರ ಸಂಶೋಧನಾಲಯ ಆಹಾರವಿಜ್ಞಾನದ ವಿವಿಧ ಶಾಖೆಗಳ ವಿಚಾರ ಅಭ್ಯಸಿಸುವುದಕ್ಕೆ ಪ್ರಯೋಗ ಮತ್ತು ಸಂಶೋಧನೆಗಳನ್ನು ನಡೆಸುವುದಕ್ಕೆ ಮೀಸಲಾಗಿ ಮೈಸೂರಿನಲ್ಲಿ ಕೇಂದ್ರ ಸರ್ಕಾರದ ಆಶ್ರಯದಲ್ಲಿ ಸ್ಥಾಪಿತವಾಗಿರುವ ಸಂಸ್ಥೆ (ಸೆಂಟ್ರಲ್ ಫುಡ್ ಟೆಕ್ನಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್). ಭಾರತ ಸರ್ಕಾರದ ವೈಜ್ಞಾನಿಕ ಮತ್ತು ಔದ್ಯೋಗಿಕ ಸಂಶೋಧನ ಮಂಡಲಿಯ ಅಂಗವಾಗಿ 1950ರ ಅಕ್ಟೋಬರಿನಲ್ಲಿ ಮೈಸೂರು ನಗರದ ರಾಜಕುಮಾರಿ ಚೆಲುವಾಂಬಾ ಅರಮನೆಯ ವಿಶಾಲ ಮೈದಾನದಲ್ಲಿ ಆಹಾರ ರಂಗಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಕೈಗೊಳ್ಳಲು ಈ ಸಂಸ್ಥೆಯನ್ನು ಸ್ಥಾಪಿಸಲಾಯಿತು.[೧] ಆಹಾರದ ಗುಣ ಪ್ರಮಾಣಗಳೆರಡರಲ್ಲಿಯೂ ಸ್ವಯಂಪೂರ್ಣತೆಯನ್ನು ಸ್ಥಾಪಿಸಿ, ಒಳ್ಳೆಯ ಪೌಷ್ಟಿಕ ಮಟ್ಟವನ್ನು ಸಾಧಿಸುವಂತೆ ದೇಶದ ಎಲ್ಲ ಆಹಾರ ಸಾಧನಗಳನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಸಿಕೊಂಡು, ಆಧುನಿಕ ಆಹಾರ ತಂತ್ರ ಪ್ರಯೋಗದಿಂದ ದೇಶದ ಆರ್ಥಿಕಾಭಿವೃದ್ಧಿಗೆ ನೆರವಾಗುವುದು ಈ ಸಂಸ್ಥೆಯ ಮುಖ್ಯ ಉದ್ದೇಶ. ಉತ್ಪಾದನೆಯ ಹಂತದಿಂದ ಸೇವಿಸುವವರೆಗಿನ ವಿವಿಧ ಮಟ್ಟಗಳಲ್ಲಿ ಆಹಾರವನ್ನು ಸಂರಕ್ಷಿಸಿ ಲಾಭದಾಯಕವಾಗಿ ಬಳಸುವ ವಿಧಾನಗಳಲ್ಲಿ ಸಂಶೋಧನೆ ನಡೆಸಿ ರಾಷ್ಟ್ರದ ಆಹಾರ ಸಮಸ್ಯೆಗೆ ಪರಿಹಾರ ದೊರಕಿಸುವ ಕಾರ್ಯದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದೆ. ಈ ಸಂಶೋಧನಾಲಯದಲ್ಲಿ ಸ್ಥಾಪಿತವಾಗಿರುವ ಆಹಾರ ಕೃಷಿ ಸಂಸ್ಥೆಯ ಅಂತಾರಾಷ್ಟ್ರೀಯ ಆಹಾರ ತಂತ್ರಶಾಸ್ತ್ರ ತರಬೇತಿ ಕೇಂದ್ರದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ತಂತ್ರಶಾಸ್ತ್ರದ ಎಂ.ಎಸ್ಸಿ. ಪದವಿಗಾಗಿ ಭಾರತ ಹಾಗೂ ದೂರ ಪ್ರಾಚ್ಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ಸಂಶೋಧನಾಲಯದ 15 ವಿಭಾಗಗಳಲ್ಲಿ ಧಾನ್ಯಾಹಾರಗಳು, ಹಣ್ಣು ತರಕಾರಿಗಳು, ಮಾಂಸಾಹಾರಗಳು, ಸಂಬಾರಜಿನಸಿಗಳು, ಹಾಲಿನ ಉತ್ಪನ್ನಗಳು, ಇವೇ ಮೊದಲಾದ ವಿಚಾರಗಳಿಗೆ ಅನೇಕ ಬಗೆಯ ಪ್ರಯೋಗಗಳೂ ಸಂಶೋಧನೆಗಳೂ ಸತತವಾಗಿ ನಡೆಯುತ್ತಿವೆ. ಈ ಕೆಲಸಗಳಿಂದ ನಮ್ಮ ದೇಶದಲ್ಲಿ ಹಲವಾರು ಹೊಸ ಆಹಾರ ಕೈಗಾರಿಕೆಗಳು ಹುಟ್ಟುಕೊಂಡಿರುವುದಲ್ಲದೆ, ಇರುವ ಕೈಗಾರಿಕೆಗಳವರಿಗೆ ಬಹು ಹೆಚ್ಚಿನ ಸಹಾಯವಾಗುತ್ತದೆ.
ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ, ಎಣ್ಣೆ ಹಿಂಡಿಯಿಂದ ಪೌಷ್ಟಿಕಾಂಶಗಳ ತಯಾರಿಕೆ, ಸದ್ಯದಲ್ಲಿ ಬಳಕೆಯಲ್ಲಿರುವ ಆಹಾರ ಸಾಮಗ್ರಿಗಳಿಂದ ನೂತನ ಆಹಾರ ವಸ್ತುಗಳನ್ನು ತಯಾರಿಸಿ ಬಳಸುವ ವಿಧಾನಗಳ ಸಂಶೋಧನೆ, ಆಹಾರ ತಯಾರಿಕೆಯ ಉದ್ಯಮಗಳಿಗೆ ತಾಂತ್ರಿಕ ನೆರವು ನೀಡುವುದು, ಆಹಾರೋದ್ಯಮದ ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಿಕೊಡುವುದು, ಆಹಾರ ಸಿದ್ಧವಸ್ತುಗಳ ಗುಣನಿಯಂತ್ರಣ ಮಾಡುವುದು ಇವೇ ಮುಂತಾದ ಕ್ಷೇತ್ರಗಳಲ್ಲಿ ಇದು ಸಲ್ಲಿಸಿರುವ ಸಾರ್ಥಕ ಸೇವೆಯ ಫಲವಾಗಿ ರಾಷ್ಟ್ರ ತನ್ನ ಆಹಾರ ಕ್ಷೇತ್ರದ ಅನೇಕ ಜಟಿಲ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಂಡಿದೆ.
ಆಹಾರ ವಸ್ತುಗಳ ಸಂರಕ್ಷಣೆ
[ಬದಲಾಯಿಸಿ]ಭಾರತದಲ್ಲಿ ಕೀಟಾದಿಗಳ ಕಾಟದಿಂದಲೂ ಸಂಗ್ರಹಣೆಯ ನ್ಯೂನತೆಗಳಿಂದಲೂ ಗಣನೀಯ ಪ್ರಮಾಣದಲ್ಲಿ ಆಹಾರ ನಷ್ಟವಾಗುತ್ತಿದೆ. ಇದನ್ನು ತಪ್ಪಿಸಿ ರಾಷ್ಟ್ರದ ಆಹಾರ ಸಮಸ್ಯೆಯ ಸಂಕಟವನ್ನು ಪರಿಹರಿಸಲು ಈ ಸಂಸ್ಥೆ ಕೀಟ ನಿಯಂತ್ರಣಕ್ಕೂ ಆಹಾರ ಸಂಗ್ರಹಣಕ್ಕೂ ಪರಿಣಾಮಕಾರಿ ವಿಧಾನಗಳನ್ನು ಕಂಡುಹಿಡಿದು ಪ್ರಚಾರಕ್ಕೆ ತಂದಿದೆ. ದೊಡ್ಡ ಪ್ರಮಾಣದಲ್ಲಿ ಉಗ್ರಾಣಗಳಲ್ಲಿ ಆಹಾರವನ್ನು ಸಂಗ್ರಹಿಸಿ ರಕ್ಷಿಸಿಡಲು ನೆರವಾಗುವಂತೆ ಇದು ಸಂಶೋಧಿಸಿರುವ ಪ್ರಧೂಪನ (ಹೊಗೆಯಾಡಿಸುವ) ವಿಧಾನ ತುಂಬ ಪರಿಣಾಮಕಾರಿಯೆನಿಸಿದೆ. ಗೃಹಬಳಕೆಗಾಗಿ ಸಣ್ಣ ಪ್ರಮಾಣದಲ್ಲಿ ರಕ್ಷಿಸಿಡಲು ನೆರವಾಗುವಂತೆ ಅಲ್ಪ ಬೆಲೆಯ ಪ್ರಧೂಪನ ಗುಳಿಗೆಗಳನ್ನು ತಯಾರಿಸಿದೆ. ಒಂದು ಗುಳಿಗೆಯಿಂದ ಒಂದು ಮೂಟೆ ಧಾನ್ಯ ಅಥವಾ ಬಿತ್ತನೆಯ ಬೀಜವನ್ನು ಸಂಸ್ಕರಿಸಿ, ಸಂರಕ್ಷಿಸಿ ಇಡಬಹುದು. ಕೀಟನಾಶಕವಾಗಿ ಇದು ತಯಾರಿಸಿರುವ ಲಿಂಡೇನ್ ಎಂಬ ರಾಸಾಯನಿಕ ವಸ್ತು ಈಗ ಎಲ್ಲೆಲ್ಲೂ ಬಳಕೆಗೆ ಬರುತ್ತಿದೆ. ಇದರ ತಯಾರಿಕೆಯಲ್ಲಿ ದೊರಕಿರುವ ಎಕ್ಸ್‌ಫ್ಯಾಕ್ಟರ್ ಎಂಬ ಉಪ-ಉತ್ಪನ್ನ ಗೆದ್ದಲು ಮುಂತಾದ ಕೀಟನಾಶಕ್ಕೆ ಪರಿಣಾಮಕಾರಿಯೆನಿಸಿದೆ. ಈಗ ತಮಿಳುನಾಡಿನ ಹಾಗೂ ಗುಜರಾತಿನ ಸಂಸ್ಥೆಗಳು ಲಿಂಡೇನನ್ನು ತಯಾರಿಸಿ ಮಾರಾಟಕ್ಕೆ ಒದಗಿಸುತ್ತಿವೆ. ಗಿರಣಿಗಳಲ್ಲಿ ಅಕ್ಕಿ ತಯಾರಿಕೆಯಲ್ಲಿ ಆಗುವ ನಷ್ಟವನ್ನು ತಪ್ಪಿಸಲು ಹೊಸತಂತ್ರವನ್ನು ರೂಪಿಸಿದೆ. ಕುಸುಬಲು ಅಕ್ಕಿ ಮಾಡಲು ನಾಲ್ಕೈದು ದಿನಗಳ ತನಕ ಹಬೆಗೊಡ್ಡುವ ಬದಲು ಕೇವಲ ಕೆಲವೇ ಗಂಟೆಗಳಲ್ಲಿ ಈ ಕಾರ್ಯ ಸಾಧಿಸುವ ನೂತನ ವಿಧಾನವನ್ನು ಅನುಷ್ಠಾನಕ್ಕೆ ತಂದಿದೆ. ಹೊಸ ಅಕ್ಕಿಯನ್ನು ಬಳಸಿದಾಗ ಉಂಟಾಗುವ ಕೆಲವು ತೊಂದರೆಗಳನ್ನು ತಪ್ಪಿಸಿ ಹಬೆಯಾಡಿಸಿ ಹಳೆಯ ಅಕ್ಕಿಯ ಗುಣಧರ್ಮಗಳನ್ನು ಹೊಂದಿರುವಂತೆ ಮಾಡುವ ವಿಧಾನವನ್ನು ಕಂಡುಹಿಡಿದು ಗ್ರಾಹಕರಿಗೆ ಉಪಕಾರ ಮಾಡಿದೆ.
ಅಕ್ಕಿತೌಡಿನಿಂದ ಖಾದ್ಯತೈಲ
[ಬದಲಾಯಿಸಿ]ಭಾರತದಲ್ಲಿ ಬತ್ತದ ತೌಡು ಅಧಿಕ ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಅದರ ಬಹುಭಾಗ ಇಂಧನದ ರೂಪದಲ್ಲಿ ವ್ಯಯವಾಗುತ್ತಿತ್ತು. ಆದರೆ ಅದರಲ್ಲಿ ಪುಷ್ಟಿಕರವಾದ ಖಾದ್ಯತೈಲ ಅಡಗಿದೆ. ಈ ಸಂಸ್ಥೆ ಅದರಿಂದ ಎಣ್ಣೆಯನ್ನು ತೆಗೆಯುವ ವಿಧಾನವನ್ನು ಕಂಡುಹಿಡಿದಿದೆ. ಈಚೆಗೆ ತೌಡಿನಿಂದ ಎಣ್ಣೆಯನ್ನು ಹಿಂಡುವ ಕಾರ್ಖಾನೆಗಳನ್ನು ಸ್ಥಾಪಿಸಲು ನೆರವು ನೀಡಿ ವ್ಯರ್ಥವಾಗುತ್ತಿದ್ದ ಲಕ್ಷಾಂತರ ಟನ್ ತೌಡು ಉಪಯುಕ್ತ ಆಹಾರವಾಗಲು ಸಹಾಯಮಾಡಿದೆ.
ತರಕಾರಿ, ಹಣ್ಣು ಮುಂತಾದವುಗಳ ಸಂಸ್ಕರಣ
[ಬದಲಾಯಿಸಿ]ಭಾರತದಲ್ಲಿ ವಿವಿಧ ತರಕಾರಿಗಳು ಹೇರಳವಾಗಿ ಬೆಳೆದರೂ ಕೆಲವೇ ದಿನಗಳಲ್ಲಿ ಕೆಟ್ಟುಹೋಗುತ್ತವೆ. ಒಂದು ನಿರ್ದಿಷ್ಟ ಕಾಲದಲ್ಲಿ ದೊರೆಯುವ ತರಕಾರಿಯನ್ನು ದೀರ್ಘಕಾಲ ಇಟ್ಟು ಬಳಸಲು ಅನುಕೂಲವಾಗುವಂತೆ ನೂತನ ಸಂಸ್ಕರಣ ವಿಧಾನಗಳನ್ನು ಈ ಸಂಸ್ಥೆ ರೂಪಿಸಿದೆ. ಹಾಗೆಯೇ ದೇಶದಲ್ಲಿ ಅನೇಕ ಜಾತಿಯ ಖಾದ್ಯ ಹಣ್ಣು ಹಂಪಲುಗಳು ವರ್ಷದ ವಿವಿಧ ಕಾಲದಲ್ಲಿ ದೊರಕುತ್ತವೆ. ಹಿಂದೆ ಅವನ್ನೆಲ್ಲ ಅದೇ ಕಾಲದಲ್ಲಿ ಉಪಯೋಗಿಸ ಬೇಕಾಗಿತ್ತು. ಈಚೆಗೆ ಅವನ್ನು ಹಲವಾರು ತಿಂಗಳು ರಕ್ಷಿಸಿಡುವ ವಿಧಾನಗಳನ್ನು ಕಂಡುಹಿಡಿದು ಅದಕ್ಕಾಗಿ ಭಾರಿ ಕಾರ್ಖಾನೆಗಳನ್ನು ಸ್ಥಾಪಿಸಲು ನೆರವು ನೀಡಿದೆ. ಬಾಳೆಹಣ್ಣು ಬೇಕಾದ ಹಾಗೆ ದೇಶದಲ್ಲಿ ಬೆಳೆದರೂ ರಫ್ತು ಮಾಡಲು ಬರುತ್ತಿರಲಿಲ್ಲ. ಸಂಶೋಧನಾಲಯ ಅದಕ್ಕೆ ಬೂಷ್ಟು ಹಿಡಿದು ಕೆಡದಂಥ ರೀತಿಯಲ್ಲಿ ಸಂರಕ್ಷಿಸಿ ರಫ್ತುಮಾಡಲು ನೆರವಾಗುವಂಥ ಬೂಷ್ಟು ನಿರೋಧಕಗಳನ್ನೂ ತಯಾರಿಸಿದೆ. ಅದರಿಂದ ಈಗ ಬಾಳೆಹಣ್ಣು ಅನ್ಯದೇಶಗಳಿಗೆ ರಫ್ತಾಗುತ್ತಿದ್ದು ವಿದೇಶೀ ವಿನಿಮಯ ಗಳಿಸುತ್ತಿದೆ. ಕೆಲವು ಹಣ್ಣುಗಳಿಂದ ಪಾನೀಯಗಳನ್ನೂ ಪುಡಿಮಿಠಾಯಿಯನ್ನೂ ತಯಾರಿಸುವ ವಿಧಾನವನ್ನು ಕಾರ್ಖಾನೆಗಳಿಗೆ ರೂಪಿಸಿಕೊಟ್ಟಿದೆ. ಪಪಾಯಿ ಹಣ್ಣಿನಿಂದ ಪೆಕ್ಟಿನ್ ಮತ್ತು ಪಪಾಯಿನ್ ಎಂಬ ವಸ್ತುಗಳನ್ನೂ, ನಿಂಬೆಹಣ್ಣಿನಿಂದ ಪೆಕ್ಟಿನ್, ನಿಂಬೆಎಣ್ಣೆ, ಕ್ಯಾಲ್ಸಿಯಂ ಸಿಟ್ರೇಟ್ ಮುಂತಾದ ಉಪಯುಕ್ತ ಆಹಾರಾಂಶಗಳನ್ನು ತಯಾರಿಸಿದೆ. ಅದನ್ನು ಮಹಾರಾಷ್ಟ್ರದ ಕಾರ್ಖಾನೆ ಇಂದು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಮಾರುಕಟ್ಟೆಗೆ ತಂದಿದೆ. ಅದು ಕಂಡುಹಿಡಿದ ಹುಣಿಸೆಹಣ್ಣಿನ ರಸವೂ ಈಗ ಮಾರಾಟಕ್ಕೆ ಬಂದಿದೆ.
ಭಾರತದಲ್ಲಿ ಬೆಳೆಯುವ ಹಲವಾರು ಸಂಬಾರ ಪದಾರ್ಥಗಳಿಗೆ ಅನ್ಯದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದರೂ ಅಲ್ಲಿನವರ ರುಚಿಗೊಪ್ಪುವಂತೆ ಸಂಸ್ಕರಿಸುವ ವಿಧಾನ ಪ್ರಚಾರದಲ್ಲಿರಲಿಲ್ಲ. ಆಹಾರ ಸಂಶೋಧನಾಲಯ ಆ ಕ್ಷೇತ್ರದಲ್ಲೂ ಸಂಶೋಧನೆ ನಡೆಸಿದೆ. ಕಪ್ಪುಮೆಣಸಿನ ಸಿಪ್ಪೆಯನ್ನು ತೆಗೆದು ಸ್ವಚ್ಛ ಬಿಳಿಮೆಣಸು ಮಾಡುವ ಯಂತ್ರವನ್ನೂ ಹಸಿರು ಮೆಣಸನ್ನು ನಿರ್ದ್ರವಗೊಳಿಸುವ ವಿಧಾನವನ್ನೂ ಕಂಡುಹಿಡಿದಿದೆ. ಕೆಲವು ಸಂಬಾರ ವಸ್ತುಗಳ ಎಣ್ಣೆಯನ್ನು ತಯಾರಿಸುವ ವಿಧಾನವನ್ನೂ ಕಂಡುಹಿಡಿದಿದೆ. ಇದರಿಂದ ಮೇಲೆ ಸಂಸ್ಕರಿಸಿದ ಸಂಬಾರ ವಸ್ತುಗಳ ರಫ್ತು ಹೆಚ್ಚಿ ವಿದೇಶೀ ವಿನಿಮಯ ಲಭ್ಯವಾಗುತ್ತಿದೆ.
ಮಾಂಸಾಹಾರದ ಕ್ಷೇತ್ರದಲ್ಲಿ
[ಬದಲಾಯಿಸಿ]ಮಾಂಸಾಹಾರಕ್ಕೆ ಸಂಬಂಧಿಸಿದಂತೆಯೂ ಸಂಸ್ಥೆ ಹಲವು ಮೌಲಿಕ ಸಂಶೋಧನೆಗಳನ್ನು ನಡೆಸಿದೆ. ಮಾಂಸ ಮತ್ತು ಮೊಟ್ಟೆ ಹೆಚ್ಚು ಕಾಲ ಕೆಡದಂತೆ ರಕ್ಷಿಸಿಡುವ ವಿಧಾನವನ್ನು ರೂಪಿಸಿರುವುದರ ಜೊತೆಗೆ ಮಾಂಸ, ತರಕಾರಿ, ಸಂಬಾರವಸ್ತು-ಇವುಗಳ ಸಂಯೋಜನೆಯಿಂದ ಬಹು ರುಚಿಕರವಾದ ಆಹಾರವಸ್ತುಗಳನ್ನು ತಯಾರಿಸಿದೆ. ಕೋಳಿಮೊಟ್ಟೆಯಿಂದ ಶೀಘ್ರ(ದಿಢೀರ್) ಬಳಕೆಗೆ ಬರುವ ಒಂದು ರೀತಿಯ ಪುಡಿಯನ್ನು ತಯಾರಿಸಿದೆ.
ಸಸಾರಜನಕಾದಿ ಪುಷ್ಟಿಕರವಾದ ಆಹಾರ
[ಬದಲಾಯಿಸಿ]ದ್ವಿದಳಧಾನ್ಯಗಳು ಹಾಗೂ ಕೆಲವು ಎಣ್ಣೆಬೀಜಗಳು ಪ್ರಮುಖ ಪುಷ್ಟಿದಾಯಕ ಆಹಾರ ವಸ್ತುಗಳು. ಆಹಾರ ಸಂಶೋಧನಾಲಯ ದ್ವಿದಳ ಧಾನ್ಯಗಳನ್ನು ಒಡೆದು ಒಪ್ಪವಾಗಿ ಬೇಳೆಮಾಡುವ ನೂತನ ಯಂತ್ರಗಳನ್ನು ತಯಾರಿಸಿದೆ. ಕೆಲವು ಅನುಪಯುಕ್ತ ಎಣ್ಣೆಬೀಜಗಳಿಂದ ಪುಷ್ಟಿಕರವಾದ ಆಹಾರವಸ್ತುಗಳನ್ನು ತಯಾರಿಸಿದೆ. ಹೀಗೆ ತಯಾರಿಸಿದ ಆಹಾರ ಈಗಾಗಲೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರಾಂಶ ಕಾರ್ಯಕ್ರಮದಲ್ಲಿ ಬಳಕೆಯಾಗುತ್ತಿದೆ. ಗೋದಿಹಿಟ್ಟು, ಕಡಲೆಹಿಟ್ಟು, ಕಡಲೆಕಾಯಿಹಿಟ್ಟು ಮತ್ತು ಬೆಲ್ಲ ಇವುಗಳಿಂದ ತಯಾರಿಸಿದ ಬಹುರುಚಿಕರವಾದ ತಿಂಡಿ ಆ ಕಾರ್ಯಕ್ರಮದಲ್ಲಿ ಬಳಕೆಯಲ್ಲಿದೆ.
ಈ ಸಂಸ್ಥೆ ತಯಾರಿಸಿರುವ ವಿವಿಧೋದ್ದೇಶ ಆಹಾರ ಈಗಾಗಲೆ ವಾಣಿಜ್ಯ ವಸ್ತುವಾಗಿ ಬಳಕೆಗೆ ಬಂದಿದೆ. ಮೈಸೂರಿನಲ್ಲೂ ಉತ್ತರಾಖಂಡದ ಕೋಟದ್ವಾರದಲ್ಲೂ ಅದನ್ನು ತಯಾರಿಸುವ ಕಾರ್ಖಾನೆಗಳು ಆರಂಭವಾಗಿವೆ.
ಗುಜರಾತಿನ ಆನಂದ್‌ನಲ್ಲಿ ತಯಾರಾಗುತ್ತಿರುವ ಅಮೂಲ್ ಸ್ಪ್ರೇ ಮತ್ತು ಅಮೂಲ್ ಆಹಾರ ವಸ್ತುಗಳು ಎಳೆಯ ಮಕ್ಕಳಿಗೂ ಬೆಳೆದ ಐದು ವರ್ಷದ ವಯಸ್ಸಿನ ಮಕ್ಕಳಿಗೂ ಉಪಯುಕ್ತ ಆಹಾರವಾಗಿದ್ದು ದೇಶಾದ್ಯಂತ ಪ್ರಚಾರದಲ್ಲಿದೆ. ಇದನ್ನು ಕಂಡುಹಿಡಿದು ಆ ಸಂಸ್ಥೆಯನ್ನು ಸ್ಥಾಪಿಸಲು ಈ ಸಂಶೋಧನಾಲಯ ಮುಖ್ಯಪಾತ್ರವಹಿಸಿತ್ತು.
ಕಡಲೆಕಾಯಿ ಹಿಂಡಿಯಿಂದ ಪ್ರೋಟೀನ್ ತಯಾರಿಸುವ ವಿಧಾನವನ್ನು ಈ ಸಂಸ್ಥೆ ಈಚೆಗೆ ಕಂಡುಹಿಡಿದಿದೆ. ಅದರಿಂದ ತಯಾರಾಗುವ ಮಿಲ್ಟೋನ್ ಎಂಬ ಪೇಯ ಈ ಸಂಸ್ಥೆಗೆ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿಕೊಟ್ಟಿದೆ. ಈಗ ಇದನ್ನು ಬೆಂಗಳೂರಿನ ಡೈರಿಯಲ್ಲಿ ತಯಾರಿಸಲಾಗುತ್ತಿದೆ. ಇದು ಕಂಡುಹಿಡಿದ ವಿಧಾನಗಳು ಉದ್ಯಮ ಕ್ಷೇತ್ರದಲ್ಲಿ ಬಳಕೆಗೆ ಬಂದ ಮೇಲೆ ದುಗ್ಧಾಹಾರಕ್ಕಾಗಿ ವ್ಯಯವಾಗುತ್ತಿದ್ದ ಕೋಟ್ಯಂತರ ರೂಪಾಯಿಗಳ ವಿದೇಶೀ ವಿನಿಮಯವನ್ನು ಉಳಿಸಿದಂತಾಗಿದೆ.
ಇಡ್ಲಿ, ದೋಸೆ, ವಡೆ, ರಸಂ, ಸಾಂಬಾರ್, ಚಕ್ಕುಲಿ, ಮುಚ್ಚೋರೆ, ಗುಲಾಬ್ ಜಾಮೂನ್, ಜಿಲೇಬಿ ಮುಂತಾದವನ್ನು ಶೀಘ್ರವಾಗಿ ತಯಾರಿಸಲು ಅನುಕೂಲಿಸುವ ಪುಡಿಗಳನ್ನೂ ಈ ಸಂಸ್ಥೆ ಕಂಡುಹಿಡಿದಿದೆ. ಅವನ್ನು ಮಾರಾಟಕ್ಕೆ ಸಿದ್ಧಪಡಿಸುವ ಸಂಸ್ಥೆಗಳಿಗೂ ನೆರವು ನೀಡಿದೆ.
ತಂತ್ರಜ್ಞಾನದ ಬಿಡುಗಡೆ
[ಬದಲಾಯಿಸಿ]ಸಾಮಾನ್ಯವಾಗಿ ಯಾವ ಸಂಶೋಧನೆಯೇ ಆಗಲಿ ಅದು ಜೀವನಕ್ಷೇತ್ರದಲ್ಲಿ ಆನ್ವಯಿಕ ಮೌಲ್ಯವನ್ನು ಪಡೆದಾಗಲೆ ಅದರ ಪ್ರಾಮುಖ್ಯ ಹೆಚ್ಚಾಗುವುದು. ಆಹಾರ ಸಂಶೋಧನಾಲಯ ಈಗಾಗಲೆ ರೂಪಿಸಿರುವ ಅನೇಕ ತಯಾರಿಕಾ ವಿಧಾನಗಳಲ್ಲಿ ಕೆಲವನ್ನು ಸು. 300 ಉದ್ಯಮಗಳಿಗೆ ಬಿಡುಗಡೆ ಮಾಡಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ "CSIR Lab Directory". Archived from the original on 15 January 2013. Retrieved 19 January 2013.
ಹೊರಗಿನ ಕೊಂಡಿಗಳು
[ಬದಲಾಯಿಸಿ]- https://web.archive.org/web/20130115030611/http://www.csir.res.in/External/Heads/aboutcsir/lab_directory.htm
- http://www.knowindia.net/agro.html
- http://businessworld.in/article/We-Are-Changing-And-So-Is-Our-Food/28-12-2016-110384/