ವಿಷಯಕ್ಕೆ ಹೋಗು

ತೌಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಕ್ಕಿ ತೌಡು

ತೌಡು ಎಂದರೆ ಅಕ್ಕಿ, ಗೋಧಿ, ರೈ, ಜೋಳ, ಮುಂತಾದ ಧಾನ್ಯಗಳ ಕಾಳುಗಳ ಮೇಲೆ ಇರುವ ತೆಳುಪೊರೆ (ಬ್ರಾನ್), ಸಸ್ಯದಿಂದ ಧಾನ್ಯವನ್ನು ವಿಂಗಡಿಸಿದ ಮೇಲೆ ಅದನ್ನು ಕುಟ್ಟಿ ಹೊಟ್ಟಿನಿಂದ ಬೇರ್ಪಡಿಸಿ ಕಾಳನ್ನು ಪಡೆಯಲಾಗುತ್ತದೆ. ಕಾಳನ್ನೇ ನೇರವಾಗಿ ಪಾಕಮಾಡಿ ತಿಂದರೆ ಬಾಯಲ್ಲಿ ಸ್ವಲ್ಪ ಕಸಕಸವಾಗಿ ಸಿಕ್ಕ ಬಹುದಾದ್ದರಿಂದ ಇಲ್ಲವೇ ತಯಾರಿಸಿದ ಪದಾರ್ಥದ ಬಣ್ಣ ಮಸುಕಾಗಿರಬಹುದಾದ್ದರಿಂದ ಕಾಳಿನ ಹೊರಪದರಗಳಣ್ನು ತೆಗೆದುಹಾಗಿ ಉಪಯೋಗಿಸುವುದು ರೂಢಿಗೆ ಬಂತು. ಗೋಧಿ, ಜೋಳ, ವಗೈರ ಕಾಳುಗಳನ್ನು ಚೆನ್ನಾಗಿ ಕುಟ್ಟಿ ಹಿಟ್ಟು ಮಾಡಿ ಜರಡಿಯಾಡಿ ತೌಡನ್ನು ಬೇರ್ಪಡಿಸುತ್ತಾರೆ. ಇದು ಪದರ ಪದರವಾದ ಚೂರ್ಣ ದಂತಿರುತ್ತದೆ (ಫ್ಲೇಕ್ಸ್). ಬತ್ತದ ಹೊಟ್ಟನ್ನು ತೆಗೆದು ಅಕ್ಕಿಯನ್ನು ಪಡೆದು ಅದಕ್ಕೆ ಬಿಳೀ ಬಣ್ಣ ಬರುವಂತೆ ಮಾಡಲು ಇನ್ನೊಮ್ಮೆ ಅದನ್ನು ಗಿರಣಿಗೆ ಹಾಕಿದಾಗ ಅಕ್ಕಿ ಕಾಳುಗಳ ಮೇಲಿನ ತಿಳಿಪೊರೆ ಹಿಟ್ಟಿನಂತೆ ಬೇರ್ಪಡುತ್ತದೆ. ಹೀಗೆ ದೊರಕುವ ತೌಡಿನಲ್ಲಿ ಕಾಳಿನಲ್ಲಿರುವ ಮೊಳಕೆ, ಭ್ರೂಣಾಹಾರಗಳೂ (ಎಂಡೋಸ್ಪಮ್ರ್ಸ್) ಸೇರಿರುತ್ತವೆ. ಆದ್ದರಿಂದ ತೌಡಿನಲ್ಲಿ ಪುಷ್ಟಿಕಾಂಶ ಇರುವುದು ವ್ಯಕ್ತ. ತೌಡನ್ನು ದನಕರುಗಳು, ಕುದುರೆ, ಹಂದಿ, ಕೋಳಿ, ಇವುಗಳಿಗೆ ಆಹಾರವಾಗಿ ಉಪಯೋಗಿಸುವುದು ಸರ್ವೇಸಾಮಾನ್ಯ. ಜೀರ್ಣವಾಗದ ಅಂಶವೂ ತೌಡಿನಲ್ಲಿ ಹೆಚ್ಚಾಗಿರುವುದರಿಂದ ಅದು ಮಲ ವಿಸರ್ಜನೆಗೆ ಸಹಾಯಕವಾಗಿ ಪ್ರಾಣಿಗಳಲ್ಲಿ ಮಲಬದ್ದತೆ ಉಂಟಾಗದಿರುವಂತೆ ಮಾಡುತ್ತದೆ. ತೌಡು ಎಲ್ಲ ಪ್ರಾಣಿಗಳಿಗೂ ಉತ್ತಮ ಆಹಾರ. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಾಗಲೂ ಅವುಗಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದಿಲ್ಲ.

ಗೋದಿಯ ತೌಡಿನಲ್ಲಿ ಸುಮಾರು 16% ಪ್ರೋಟಿನ್, 4.5% ಕೊಬ್ಬು, 15%-20% ಪಿಷ್ಟ, 10% ಕ್ಕಿಂತ ಹೆಚ್ಚಿಲ್ಲದಷ್ಟು ನಾರುಪದಾರ್ಥಗಳು ಇವೆ. ತೌಡಿನ ಪ್ರೋಟಿನ್ ಗೋದಿಕಾಳಿನ ಪ್ರೋಟೀನಿಗಿಂತ ಉತ್ತಮ ಪೌಷ್ಟಿಕ ರಂಜಕವೂ ಇದೆ. ಕ್ಯಾಲ್ಸಿಯಮ್ ಪ್ರಮಾಣ ಕಡಿಮೆ ಇರುವುದರಿಂದ ರಂಜಕ ರಕ್ತಗತವಾಗಬಲ್ಲದಾಗಿ ಉಪಯುಕ್ತವಾಗಿದೆ. ಗೋದಿಯ ತೌಡಿನ ಒಟ್ಟಿನಲ್ಲಿ ಸುಮಾರು 2/3 ಭಾಗ ಆಹಾರಘಟಕವಾಗಿ ಒದಗಬಹುದಾಗಿದೆ.

ಅಕ್ಕಿಯ ತೌಡಿನಲ್ಲಿ ಸುಮಾರು 12% ಪ್ರೋಟೀನ್, 14% ಕೊಬ್ಬು, 15%-20% ಪಿಷ್ಠ, 12% ನಾರುಪದಾರ್ಥಗಳು ಇವೆ. ಕೊಬ್ಬಿನ ಅಂಶ ಹೆಚ್ಚಾಗಿರುವುದರಿಂದ ಅಕ್ಕಿ ತೌಡನ್ನು ಕೆಡೆದಂತೆ ಬಹಳ ದಿನ ಇಡಲಾಗುವುದಿಲ್ಲ. ಬೇಗ ಮಣಕುವಾಸನೆ (ರ್ಯಾನ್ ಸಿಡ್) ಬಂದುಬಿಡುತ್ತದೆ. ಪೌಷ್ಟಿಕಾಂಶಗಳು ಅಧಿಕ ಪ್ರಮಾಣದಲ್ಲಿ ಇರುವುದರಿಂದ ದನಕರುಗಳ ಆಹಾರದಲ್ಲಿ ಒಟ್ಟು ತೂಕದ 1/3 ರಷ್ಟು ಪ್ರಮಾಣದಲ್ಲಿ ತೌಡನ್ನು ಸೇರಿಸುವುದುಂಟು. ಗೋದಿಯ ತೌಡಿನ ಬದಲು ಅಕ್ಕಿ ತೌಡನ್ನು ಉಪಯೋಗಿಸುವುದಕ್ಕೆ ಯಾರ ಅಭ್ಯಂತರವೂ ಇಲ್ಲ. ಆದರೆ ಅಕ್ಕಿತೌಡು ಹಿಟ್ಟಿನಂತಿರುವುದರಿಂದ ಬತ್ತದ ಹೊಟ್ಟನ್ನು ಪುಡಿಮಾಡಿ ತೌಡಿನ ಜೊತೆ ಬೆರಸಿ ಮಾರಲು ವ್ಯಾಪಾರಸ್ಥರಿಗೆ ಅನುಕೂಲ. ಇಂಥ ಬೆರೆಕ ತೌಡನ್ನು ಪ್ರಾಣಿಗಳಿಗೆ ಕೊಟ್ಟರೆ ಅವುಗಳ ಜಠರ ಕರುಳುಗಳಲ್ಲಿ ಕೆಟ್ಟ ಪರಿಣಾಮವಾಗಬಹುದಾದ ವಿಷಯ ವ್ಯಕ್ತ.

ಜೋಳದ ತೌಡು ಜೋಳದ ಕಾಳುಗಳನ್ನು ಹಿಟ್ಟುಮಾಡಿ ಜರಡಿ ಆಡಿದಾಗ ದೊರಕುವ ವಸ್ತು. ಇದರಲ್ಲಿಯೂ ಅಕ್ಕಿತೌಡು ಗೋದಿತೌಡುಗಳಂತೆಯೇ ಪೌಷ್ಟಿಕಾಂಶಗಳು ಇರುತ್ತವೆ. ಜೋಳ ಹೆಚ್ಚು ಬಳಕೆಯಲ್ಲಿರುವ ಪ್ರಾಂತ್ಯಗಳಲ್ಲಿ ಜೋಳದ ತೌಡನ್ನು ಪ್ರಾಣಿಗಳ ಮೇವಾಗಿ ಉಪಯೋಗಿಸುತ್ತಾರೆ. ಆದರೆ ಇದಕ್ಕೆ ಮಿಕ್ಕ ತೌಡುಗಳಿಗಿರುವಷ್ಟು ಬೇಡಿಕೆ ಇಲ್ಲ.

ಅಕ್ಕಿಯ ತೌಡಿನಲ್ಲಿ ವೈಟಮಿನ್ ಬಿ1 ತಕ್ಕಷ್ಟು ಪ್ರಮಾಣದಲ್ಲಿದೆ. ವೈಟಮಿನ್ ಬಿ1 ವಸ್ತುವನ್ನು ಮೊದಲು ಪತ್ತೆಮಾಡಿ ಪ್ರತ್ಯೇಕಿಸಿದ್ದು ಅಕ್ಕಿತೌಡಿನಿಂದಲೇ. ಬಣ್ಣ ಪ್ರಧಾನವೆಂದು ಗಣಿಸಿ ಅಕ್ಕಿಗೆ ಮೆರಗು (ಪಾಲಿಷ್) ಕೊಟ್ಟಾಗ ಈ ವೈಟಮಿನ್ ಬಹುವಾಗಿ ಕಳೆದು ಹೋಗುತ್ತದೆ. ಆದ್ದರಿಂದ ಮೆರಗುಕೊಟ್ಟ ಅಕ್ಕಿಯನ್ನೇ ಉಪಯೋಗಿಸುವುದರಿಂದ ವಿಟಮಿನ್ ಃ1 ಕೊರತೆ ಉಂಟಾಗಬಹುದು. ಈ ಕೊರತೆಯನ್ನು ನೀಗಲು ತೌಡನ್ನು ಉಪಯೋಗಿಸಬಹುದು. ಆದರೆ ಇದು ಬಾಯಿಗೆ ಕಸಕಸವಾಗಿ ಸಿಕ್ಕುವುದರಿಂದ ಸೇವನೆ ಹಿತವಾಗಿರುವುದಿಲ್ಲ. ಕೈಯಿಂದ ಕುಟ್ಟಿದ ಅಕ್ಕಿ ಇಲ್ಲವೇ ಮೆರಗು ಕೊಡದ ಅಕ್ಕಿಯನ್ನು ಸೇವಿಸುವುದರಿಂದ ಬಿ1 ವೈಟಮಿನ್ನಿನ ಕೊರತೆ ಸಂಭವವನ್ನು ಮಿತಗೊಳಿಸಬಹುದು.

ತೌಡನ್ನು ಬಿಸ್ಕತ್ತು ಮತ್ತಿತರ ಖಾದ್ಯವಸ್ತುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಕೆಲವು ನಾಜೂಕಾದ ವಸ್ತುಗಳನ್ನು ಒಡೆಯದಂತೆ ಕಟ್ಟಿಡುವುದಕ್ಕೂ ಉಪಯೋಗಿಸುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ತೌಡು&oldid=914550" ಇಂದ ಪಡೆಯಲ್ಪಟ್ಟಿದೆ