ಉಗ್ರಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಗ್ರಾಣ: ಭವಿಷ್ಯದಲ್ಲಿ ಉಪಯೋಗಿಸುವ ಉದ್ದೇಶದಿಂದ ಸಂಗ್ರಹಿಸಿದ ಸಾಮಗ್ರಿ ಗಳನ್ನು ವ್ಯವಸ್ಥಿತವಾಗಿ ಶೇಖರಿಸಿಡುವ ಸ್ಥಳ, ಕೊಠಡಿ, ಕಟ್ಟಡ (ಸ್ಟೋರ್ಸ್‌, ಸ್ಟೋರ್-ರೂಂ, ಸ್ಟೋರ್-ಹೌಸ್). ವ್ಯವಸಾಯೋತ್ಪನ್ನಗಳನ್ನೂ ಮಾರಾಟದ ಉದ್ದೇಶದಿಂದ ಸಂಗ್ರಹಿಸಿದ ಸರಕುಗಳನ್ನೂ ಕೆಡದಂತೆ ಭದ್ರವಾಗಿ ದಾಸ್ತಾನು ಮಾಡುವ ಕ್ರಮ ಇಂದಿನ ವಾಣಿಜ್ಯ ವ್ಯವಸ್ಥೆಯಲ್ಲಿ ಬಲು ಅಗತ್ಯ. ದಾಸ್ತಾನಾಗುವ ಸರಕುಗಳ ಉಗಮ, ಸ್ವರೂಪ, ಉಪಯೋಗ, ದಾಸ್ತಾನಿನ ಉದ್ದೇಶ ಮುಂತಾದವುಗಳ ದೃಷ್ಟಿಯಿಂದ ದಾಸ್ತಾನು ಕೇಂದ್ರಗಳನ್ನು ವಿಂಗಡಿಸುವುದು ಸಾಧ್ಯ. ರೈತರೂ ಜಮೀನಿನ ಒಡೆಯರೂ ಇತರರೂ ಮಾರಾಟಕ್ಕೂ ಸ್ವಂತ ಉಪಯೋಗಕ್ಕೂ ದವಸಧಾನ್ಯ ಸಂಗ್ರಹಿಸಿಡಲು (ಸಾಮಾನ್ಯವಾಗಿ ಖಾಸಗಿಯಾಗಿ) ಏರ್ಪಡಿಸಿಕೊಂಡ ವಿಶಿಷ್ಟ ರಚನೆಯೇ ಕಣಜ, ಪಣತ ಅಥವಾ ಹಗೇವು (ಗ್ರ್ಯಾನರಿ). ರೈತ, ವರ್ತಕ ಮುಂತಾದವರ ಉಪಯೋಗಕ್ಕಾಗಿ ಸರ್ಕಾರವಾಗಲಿ ಖಾಸಗಿಯವರಾಗಲಿ ಸಂಘ ಸಂಸ್ಥೆಗಳಾಗಲಿ ನಿರ್ಮಿಸಿ ನಿರ್ವಹಿಸುವ ಸಾರ್ವಜನಿಕ ಕೇಂದ್ರಗಳು ದಾಸ್ತಾನುಮಳಿಗೆಗಳೆನ್ನಿಸಿಕೊಳ್ಳುತ್ತವೆ. (ವೇರ್ ಹೌಸ್). ಗಿರಣಿ, ಕಾರ್ಖಾನೆ ಹಾಗೂ ವ್ಯಾಪಾರಿಗಳು ಮಾರಾಟದ ಸರಕನ್ನು ಅಧಿಕ ಪ್ರಮಾಣದಲ್ಲಿ ದಾಸ್ತಾನು ಮಾಡುವ ಆಲಯ ಅಥವಾ ಮಳಿಗೆಯೇ ಗಡಂಗು ಅಥವಾ ಗೋದಾಮು (ಗೋಡೌನ್, ವೇರ್ ಹೌಸ್). ನೇರ ಮಾರಾಟದ ಸಲುವಾಗಿ ವ್ಯಾಪಾರ ಸ್ಥಳದಲ್ಲೇ ಸರಕು ಶೇಖರಿಸಿಟ್ಟಿದ್ದರೆ ಅದು ಕೋಠಿ, ಮಂಡಿ ಅಥವಾ ಭಂಡಾರ (ಡಿಪೊ). ಕಾರ್ಖಾನೆಯವರು ಕೊಂಡ ಸರಕನ್ನು ಉಗ್ರಾಣಕ್ಕೆ ಸೇರಿಸುವ ಮುನ್ನ ಸ್ವೀಕರಿಸಿಡುವ ಸ್ಥಳವನ್ನೂ ಕೋಠಿಯೆಂದು ಕರೆಯುವ ವಾಡಿಕೆ ಇದೆ. ಈ ಲೇಖನದಲ್ಲಿ ಉಗ್ರಾಣವನ್ನು ಕುರಿತು ಪ್ರಸ್ತಾವ ಮಾಡಲಾಗಿದೆ. ಕಣಜ ದಾಸ್ತಾನುಮಳಿಗೆ, ಗಡಂಗು ಮತ್ತು ಕೋಠಿಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಿ. ಚಿಕ್ಕ ದೊಡ್ಡ ಸಂಸಾರಗಳಿಗೂ ಛತ್ರ ಹೋಟಲುಗಳಿಗೂ ವಿದ್ಯಾರ್ಥಿನಿಲಯ ಸೈನಿಕಠಾಣ್ಯಗಳಿಗೂ ಗಿರಣಿ ಕಾರ್ಖಾನೆಗಳಿಗೂ ಉಗ್ರಾಣ ಆವಶ್ಯಕ. ಕೊಂಡ ಸಾಮಗ್ರಿಗಳನ್ನು ಜೋಡಿಸಿಟ್ಟು ಅಗತ್ಯಕ್ಕೆ ತಕ್ಕಂತೆ ಅವನ್ನು ಅನುಕ್ರಮವಾಗಿ ಬಳಕೆಗೆ ಕೊಡುವುದೂ ಬರುವ ಹೋಗುವ ಸಾಮಗ್ರಿಗಳ ಲೆಕ್ಕ ಇಡುವುದೂ ಇಂದು ಎಲ್ಲ ಉದ್ಯಮಗಳಲ್ಲೂ ಸಾಮಾನ್ಯ. ಸರಕು ಉತ್ಪಾದನೆಯಲ್ಲಿ ಅಂದಂದಿನ ಅಗತ್ಯಕ್ಕೆ ತಕ್ಕಂತೆ ಅಂದಂದೇ ನೇರವಾಗಿ ಕಚ್ಚಾ ಸಾಮಗ್ರಿ ತರಿಸಿ ಬಳಸುವುದು ಆದರ್ಶ ವ್ಯವಸ್ಥೆ. ಆದರೆ ವಾಸ್ತವವಾಗಿ ಹೀಗೆ ಮಾಡುವುದು ಸಾಧ್ಯವಿಲ್ಲ. ಉತ್ಪಾದನೆಯ ಕಾರ್ಯ ಸರಳವೂ ಅವಿಚ್ಛಿನ್ನವೂ ಅಲ್ಪಗಾತ್ರದ್ದೂ ಆಗಿರುವ ಕೈಗಾರಿಕೆಗಳಲ್ಲಿ ಮಾತ್ರ ಇಂಥ ಆದರ್ಶಸ್ಥಿತಿ ಮುಟ್ಟಲು ಯತ್ನಿಸಬಹುದು. ಅನೇಕ ಕೈಗಾರಿಕೆಗಳಲ್ಲಿ ಪದಾರ್ಥೋತ್ಪಾದನೆಗಾಗಿ ದಿನದಿನವೂ ಬಳಸುವ ಸಾಮಗ್ರಿಗಳ ಪರಿಮಾಣ ಹೆಚ್ಚುಕಡಿಮೆ ಆಗುತ್ತಿರುತ್ತದೆ. ಉತ್ಪಾದಿತ ವಸ್ತುಗಳ ಮಾರಾಟವೂ ಏರಿಳಿಯುತ್ತಿರುತ್ತದೆ. ಆದ್ದರಿಂದ ಅಂದಂದಿಗೆ ಎಷ್ಟೆಷ್ಟು ಬೇಕೋ ಅಷ್ಟಷ್ಟೇ ಸಾಮಗ್ರಿ ತರಿಸಿ ನೇರವಾಗಿ ಉತ್ಪಾದನೆಯಲ್ಲಿ ತೊಡಗಿಸುವುದು ಸಾಧ್ಯವಿಲ್ಲ. ಇಂದಿನ ಕೈಗಾರಿಕೆಗಳಿಗೆ ಅಗತ್ಯವಾದ ಸಾಮಗ್ರಿಗಳ ಸರಬರಾಯಿ ಕೂಡ ಎಲ್ಲ ಕಾಲದಲ್ಲೂ ಏಕಪ್ರಕಾರವಾಗಿರುವುದಿಲ್ಲ. ಇವುಗಳ ಬೆಲೆ ಏರಿಳಿಯುತ್ತಿರುತ್ತವೆ. ವ್ಯವಸಾಯೋತ್ಪನ್ನಗಳ ಧಾರಣೆವಾಸಿಯೂ ಸರಬರಾಯಿಯೂ ಋತುಮಾನಕ್ಕೆ ಅಧೀನ. ಇವನ್ನು ದೂರ ದೂರದ ಸ್ಥಳಗಳಿಂದ ತರಿಸಬೇಕಾಗಬಹುದು. ಪೇಟೆಯಲ್ಲಿ ಸರಬರಾಯಿ ಅಧಿಕವಾಗಿದ್ದು ಧಾರಣೆವಾಸಿ ಅನುಕೂಲಕರವಾಗಿರುವಾಗ ಇವನ್ನು ಒಟ್ಟೊಟ್ಟಿಗೆ ಕೊಳ್ಳುವುದು ಯುಕ್ತ. ಹೆಚ್ಚು ಮೊತ್ತದಲ್ಲಿ ಸಾಮಗ್ರಿ ಕೊಂಡಷ್ಟು ಬೆಲೆಯಲ್ಲೂ ಸಾರಿಗೆ ವೆಚ್ಚದಲ್ಲೂ ಉಳಿತಾಯ ಸಾಧ್ಯ. ಎರಡನೆಯದಾಗಿ, ಈ ವ್ಯವಸ್ಥೆಯಿಂದ ಉತ್ಪಾದನಾಲಯಕ್ಕೆ ಸಾಮಗ್ರಿಯ ಆವಶ್ಯಕತೆಯಿದ್ದಾಗ ಅದು ಸಾಕಷ್ಟು ಪ್ರಮಾಣದಲ್ಲಿ ಒದಗುವುದೆಂಬ ಭರವಸೆ ಇರುತ್ತದೆ. ಮೂರನೆಯದಾಗಿ, ಉದ್ಯಮದ ಆರ್ಥಿಕಸ್ಥಿತಿಯ ಮೇಲೆ ಕಣ್ಣಿಟ್ಟು ಉತ್ಪಾದನೆಯನ್ನು ನಿಯಂತ್ರಣಗೊಳಿಸುವುದಕ್ಕೂ ಒಳ್ಳೆಯ ಉಗ್ರಾಣ ವ್ಯವಸ್ಥೆ ಸಹಾಯಕ. ಹೀಗೆ ಯುಕ್ತ ಪರಿಮಾಣಗಳಲ್ಲಿ ಸಕಾಲದಲ್ಲಿ ಸಾಮಗ್ರಿಯ ಸರಬರಾಯಿ, ಉತ್ಪಾದನೆಯ ವೆಚ್ಚದ ಉಳಿತಾಯ ಹತೋಟಿ ಇವು ಉಗ್ರಾಣ ವ್ಯವಸ್ಥೆಯ ಉದ್ದೇಶ, ಒಂದು ಉತ್ಪಾದನಾಲಯದಲ್ಲಿ ದಾಸ್ತಾನು ಮಾಡಲಾಗುವ ಸಾಮಗ್ರಿ ಸ್ಥೂಲವಾಗಿ ನಾಲ್ಕು ವಿಧ: 1. ಉತ್ಪಾದನೆಯಲ್ಲಿ ಪ್ರತ್ಯೇಕವಾಗಿ ಬಳಕೆಯಾಗಿ, ಸಿದ್ಧವಸ್ತುವಾಗಿ ಮಾರ್ಪಡುವ ಕಚ್ಚಾಸಾಮಗ್ರಿ, ಪ್ರತ್ಯಕ್ಷ ಸಾಮಗ್ರಿ (ಉದಾ: ಗಿರಣಿಯಲ್ಲಿ ಬಳಸಲಾಗುವ ಹತ್ತಿ, ದಾರ); 2.ಉತ್ಪಾದನೆಗೆ ಅವಶ್ಯವಾದರೂ ಸಿದ್ಧವಸ್ತುವಿನಲ್ಲಿ ಸೇರದೆ ನಾಶಹೊಂದುವ (ಜೀರ್ಣವಾಗಿ ಹೋಗುವ) ಸರಬರಾಯಿ, ಪರೋಕ್ಷ ಸಾಮಗ್ರಿ (ಉದಾ: ಇಂಧನ, ಚರಬಿ, ಹತ್ತಿ): 3.ಸಲಕರಣೆ (ಟೂಲ್ಸ್‌), ಸರಂಜಾಮು (ಎಕ್ವಿಪ್ಮೆಂಟ್): 4. ಮಾರಾಟಕ್ಕೆ ಸಿದ್ಧವಾದ ಪದಾರ್ಥ (ಉತ್ಪಾದಿತ ವಸ್ತು). ಪ್ರತ್ಯಕ್ಷ ಪರೋಕ್ಷ ಸಾಮಗ್ರಿಗಳನ್ನು, ಸಲಕರಣೆ ಸರಂಜಾಮುಗಳನ್ನು ದಾಸ್ತಾನು ಮಾಡುವ ಸ್ಥಳ ಉಗ್ರಾಣ. ಉತ್ಪಾದಿತ ವಸ್ತುವನ್ನು (ಸರಕು ಅಥವಾ ಮಾಲು) ಇಡುವ ಸ್ಥಳ ಗಡಂಗು. ಇದನ್ನು ದಾಸ್ತಾನು ಕೊಠಡಿ ಅಥವಾ ದಾಸ್ತಾನು ಮಳಿಗೆ ಎನ್ನಲೂಬಹುದು. ಒಳಕ್ಕೆ ಬರುವ ಸಾಮಗ್ರಿ ಸರಬರಾಯಿಗಳಿಗೂ ಕಾರ್ಖಾನೆಗೂ ನಡುವಣ ಆಶ್ರಯವೇ ಉಗ್ರಾಣ; ಕಾರ್ಖಾನೆಗೂ ಮಾರಾಟ ಕೋಠಿಗೂ ನಡುವಿನದು ದಾಸ್ತಾನು ಕೊಠಡಿ. ಉಗ್ರಾಣವನ್ನು ಹೇಗೆ ನಿರ್ವಹಿಸಬೇಕು, ಸಂಘಟಿಸಬೇಕು ಎಂಬ ವಿಚಾರವಾಗಿ ಎಲ್ಲ ಕಾರ್ಖಾನೆಗಳಿಗೂ ಅನ್ವಯವಾಗುವ ಸೂತ್ರ ರಚಿಸುವುದು ಸಾಧ್ಯವಿಲ್ಲ. ಪದಾರ್ಥ ಕೆಡದಂತೆ ರಕ್ಷಿಸುವುದಂತೂ ಅವಶ್ಯ. ಇದಕ್ಕಾಗಿ ಭದ್ರ ಕಟ್ಟಡ ಬೇಕಾಗುತ್ತದೆ. ಆದರೆ ಎಂಜಿನಿಯರಿಂಗ್ ಉದ್ಯಮ ಸಾಮಗ್ರಿಗಳಾದ ಬೀಡು ಕಬ್ಬಿಣ, ಉಕ್ಕಿನ ಕಂಬಿ ಮುಂತಾದವನ್ನು ಹೊರಾಂಗಣದಲ್ಲಿ ದಾಸ್ತಾನು ಮಾಡಬಹುದು. ಪ್ರತ್ಯಕ್ಷ ಸಾಮಗ್ರಿಗಳಿಗೆ ಬೇರೆ ಬೇರೆ ಕೊಠಡಿಗಳಿರುವುದು ಸೂಕ್ತ. ಏಕೆಂದರೆ ಪರೋಕ್ಷ ಸಾಮಗ್ರಿಗಳಾದ ತೈಲ, ಚರಬಿ, (ಗ್ರೀಸ್), ಬಣ್ಣ, ಹತ್ತಿ ರದ್ದಿ, (ಕಾಟನ್ ವೇಸ್ಟ್‌) ಮುಂತಾದವುಗಳಿಂದ ಉಗ್ರಾಣವೆಲ್ಲ ಕಶ್ಮಲವಾಗುವುದಲ್ಲದೆ ಇತರ ಸಾಮಗ್ರಿಗಳೂ ಕೆಡುತ್ತವೆ. ಉತ್ಪಾದನಾಲಯಕ್ಕೆ ಉಗ್ರಾಣ ಆದಷ್ಟು ಹತ್ತಿರದಲ್ಲಿ, ಕೇಂದ್ರ ಸ್ಥಳದಲ್ಲಿದ್ದರೆ ಶ್ರಮ, ಹಣ, ಸಮಯಗಳ ಉಳಿತಾಯ ಸಾಧ್ಯ. ಇದು ಉತ್ಪಾದನೆಯ ಸರಪಳಿ ಸುಸೂತ್ರವಾಗಿ ಮುಂದುವರಿಯಲು ಸಹಾಯಕ. ಉಗ್ರಾಣ ವ್ಯವಸ್ಥೆಯ ಕಾರ್ಯಭಾರಗಳು ಇತರ ಇಲಾಖೆಗಳಷ್ಟೇ ಗುರುತರವಾದವು. ಇವನ್ನು ಸ್ಥೂಲವಾಗಿ ಹೀಗೆ ವಿಂಗಡಿಸಬಹುದು:

  1. ಸಾಮಗ್ರಿಗಳ ಸ್ವೀಕಾರ, ದಾಸ್ತಾನು, ರಕ್ಷಣೆ;
  2. ಉತ್ಪಾದನ ಇಲಾಖೆಯ ಬೇಡಿಕೆಗೆ ಅನುಸಾರವಾಗಿ ನಿಖರ ಪರಿಮಾಣದಲ್ಲಿ ಸಾಮಗ್ರಿ ನೀಡಿಕೆ;
  3. ಉಗ್ರಾಣದಲ್ಲಿರುವ ಸಾಮಗ್ರಿಯೆಷ್ಟು, ಉಗ್ರಾಣಕ್ಕೆ ಬರಲಿರುವುದೆಷ್ಟು, ಅಲ್ಲಿಂದ ಕೊಟ್ಟಿರುವುದೆಷ್ಟು, ಮೀಸಲಾಗಿಟ್ಟಿರುವುದೆಷ್ಟು ಎಂಬುದರ ತಪಶೀಲಾದ ದಾಖಲೆ;
  4. ಪ್ರತಿ ಸಾಮಗ್ರಿಯ ಕನಿಷ್ಠಾವಶ್ಯಕತೆಯೆಷ್ಟೆಂಬುದನ್ನು ಖಚಿತಪಡಿಸಿಕೊಂಡು, ಅದು ಖರ್ಚಾದಂತೆ ಅದರ ಸರಬರಾಯಿಗಾಗಿ ಕ್ರಯಾಧಿಕಾರಿಗಳಿಗೆ ಸಕಾಲಿಕ ಕೋರಿಕೆಯ ಸಲ್ಲಿಕೆ.

ಆಧುನಿಕ ಉತ್ಪಾದನಾಲಯಗಳಲ್ಲಿ ಉತ್ತಮ ಉಗ್ರಾಣ ವ್ಯವಸ್ಥೆಗೂ ದಾಖಲೆಗೂ ಹೆಚ್ಚಿನ ಗಮನ ನೀಡಲಾಗುತ್ತಿದೆ. ಉತ್ಪಾದನೆಯ ಒಟ್ಟು ವೆಚ್ಚವನ್ನು ನಿಖರವಾಗಿ ಕಂಡು ಹಿಡಿಯುವ ಯತ್ನವಾದ ಪರಿವ್ಯಯ ಲೆಕ್ಕ ವ್ಯವಸ್ಥೆಯ ಯಶಸ್ಸಿಗೆ ಉತ್ತಮ ಉಗ್ರಾಣ ವ್ಯವಸ್ಥೆಯೂ ಮುಖ್ಯ.

"https://kn.wikipedia.org/w/index.php?title=ಉಗ್ರಾಣ&oldid=796872" ಇಂದ ಪಡೆಯಲ್ಪಟ್ಟಿದೆ