ಸೂರ್ಯ
Wikipedia ಇಂದ
| ವೀಕ್ಷಣಾ ಮಾಹಿತಿ | |
|---|---|
| ಭೂಮಿಯಿಂದ ಸರಾಸರಿ ದೂರ | ೧೪೯.೬×೧೦೬ ಕಿ.ಮೀ. (೯೨.೯೫×೧೦೬ ಮೈಲಿ) (ಬೆಳಕಿನ ವೇಗದಲ್ಲಿ ೮.೩೧ ನಿಮಿಷಗಳು) |
| ಗೋಚರ ಪ್ರಮಾಣ (V) | −೨೬.೮m |
| Absolute magnitude | ೪.೮m |
| ವರ್ಣಪಟಲ ವಿಂಗಡಣೆ | G2V |
| ಕಕ್ಷೆಯ ಗುಣಲಕ್ಷಣಗಳು | |
| ಕ್ಷೀರಪಥದ ಕೇಂದ್ರದಿಂದ ಸರಾಸರಿ ದೂರ | ~೨.೫×೧೦೧೭ ಕಿ.ಮೀ. (೨೬,೦೦೦-೨೮,೦೦೦ ಜ್ಯೋತಿರ್ವರ್ಷಗಳು) |
| ತಾರಾಗಣ ಕಾಲ | ೨.೨೫-೨.೫೦×೧೦೮ a |
| ವೇಗ | ೨೧೭ ಕಿ.ಮೀ./ಕ್ಷಣ (ಕ್ಷೀರ ಪಥದ ಕೇಂದ್ರದಿಂದ ಪರಿಭ್ರಮಣೆ). ಹತ್ತಿರವಿರುವ ನಕ್ಷತ್ರಗಳ ಸರಾಸರಿ ವೇಗಕ್ಕೆ ಸಾಪೇಕ್ಷವಾಗಿ ೨೦ ಕಿ.ಮೀ./ಕ್ಷಣ) |
| ಭೌತಿಕ ಗುಣಲಕ್ಷಣಗಳು | |
| ಸರಾಸರಿ ವ್ಯಾಸ | ೧.೩೯೨×೧೦೬ ಕಿ.ಮೀ. (ಭೂಮಿಯ ೧೦೯ ಪಟ್ಟು) |
| ಪರಿಧಿ | ೪.೩೭೩×೧೦೬ ಕಿ.ಮೀ. |
| ಹ್ರಸ್ವಾಕ್ಷತೆ | ೯×೧೦−೬ |
| ಮೇಲ್ಮೈ ವಿಸ್ತೀರ್ಣ | ೬.೦೯×೧೦೧೮ ಮೀ (ಭೂಮಿಯ ೧೧,೯೦೦ ಪಟ್ಟು) |
| ಗಾತ್ರ | ೧.೪೧×೧೦೨೭ ಮೀ (ಭೂಮಿಯ ೧,೩೦೦,೦೦೦ ಪಟ್ಟು) |
| ದ್ರವ್ಯರಾಶಿ | ೧.೯೮೮ ೪೩೫×೧೦೩೦ ಕಿ.ಗ್ರಾಂ. (ಭೂಮಿಯ ೩೩೨,೯೪೬ ಪಟ್ಟು) |
| ಸಾಂದ್ರತೆ | ೧,೪೦೮ ಕಿ.ಗ್ರಾಂ./ಮೀ೩ |
| ಮೇಲ್ಮೈ ಗುರುತ್ವ | ೨೭೩.೯೫ ಮೀ ಕ್ಷ-೨ (೨೭.೯ ಜೀ) |
| ಮೇಲ್ಮೈನಿಂದ ಮುಕ್ತಿ ವೇಗ | ೬೧೭.೫೪ ಕಿ.ಮೀ./ಕ್ಷಣ (ಭೂಮಿಯ ೫೫ ಪಟ್ಟು) |
| ಮೇಲ್ಮೈ ತಾಪಮಾನ | ೫೭೮೫ ಕೆ |
| ಪ್ರಭಾವಲಯದ ತಾಪಮಾನ | ೦.೫ ಕೋಟಿ ಕೆ. |
| ಒಳ ತಾಪಮಾನ | ~೧.೩೬ ಕೋಟಿ ಕೆ. |
| Luminosity (Lsol) | ೩.೮೨೭×೧೦೨೬ ವ್ಯಾಟ್ ~೩.೭೫×೧೦೨೮ ಲ್ಯುಮೆನ್ (~೯೮ ಲ್ಯು/ವ್ಯಾ efficacy) |
| ಸರಾಸರಿ ತೀವ್ರತೆ (Isol) | ೨.೦೦೯×೧೦೭ W m-೨ sr-೧ |
| ಪರಿಭ್ರಮಣೆಯ ಗುಣಲಕ್ಷಣಗಳು | |
| Obliquity | ೭.೨೫degree (to the ecliptic) ೬೭.೨೩ (to the galactic plane) |
| ಉತ್ತರ ಧ್ರುವದ ವಿಷುವದಂಶ[೧] | ೨೮೬.೧೩ (೧೯ ಘಂ ೪ ನಿ ೩೦ ಕ್ಷ) |
| ಉತ್ತರಧ್ರುವದ ಘಂಟಾವೃತ್ತಾಂಶ | +೬೩.೮೭ (೬೩೫೨' ಉತ್ತರ) |
| ಸಮಭಾಜಕದಲ್ಲಿ ಅಕ್ಷೀಯ ಪರಿಭ್ರಮಣ ಕಾಲ | ೨೫.೩೮ ದಿನಗಳು (೨೫ ದಿ ೯ ಘಂ ೭ ನಿ ೧೩ ಕ್ಷ)[೧] |
| ಸಮಭಾಜಕದಲ್ಲಿ ಪರಿಭ್ರಮಣ ವೇಗ | ೭೧೭೪ ಕಿ.ಮೀ./ಪ್ರತಿ ಘಂ. |
| ದ್ಯುತಿ ಗೋಳದ ರಚನೆ (ದ್ರವ್ಯರಾಶಿಯ ದೃಷ್ಟಿಯಿಂದ) | |
| ಜಲಜನಕ | ೭೩.೪೬ % |
| ಹೀಲಿಯಂ | ೨೪.೮೫ % |
| ಆಮ್ಲಜನಕ | ೦.೭೭ % |
| ಇಂಗಾಲ | ೦.೨೯ % |
| ಕಬ್ಬಿಣ | ೦.೧೬ % |
| Neon | ೦.೧೨ % |
| ಸಾರಜನಕ | ೯.೦೯ % |
| Silicon | ೦.೦೭ % |
| Magnesium | ೦.೦೫ % |
| Sulphur | ೦.೦೨ % |
ಸೂರ್ಯನು ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಭೂಮಿ ಮತ್ತು ಬೇರೆ ಕಾಯಗಳು (ಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಮತ್ತು ಧೂಳು ಸೇರಿದಂತೆ) ಸೂರ್ಯನನ್ನು ಪರಿಭ್ರಮಿಸುತ್ತವೆ. ಸೂರ್ಯವೊಂದೇ ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷಣೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ ಆಧಾರವಾಗಿದ್ದು, ಭೂಮಿಯ ಹವಾಮಾನದ ಮೇಲೂ ಪ್ರಭಾವ ಬೀರುತ್ತದೆ.
ಪರಿವಿಡಿ |
[ಬದಲಾಯಿಸಿ] ಪರಿಚಯ
ಸೂರ್ಯನ ೭೪% ದ್ರವ್ಯರಾಶಿಯು ಜಲಜನಕದಿಂದ, ೨೫% ಹೀಲಿಯಂನಿಂದ ಮತ್ತು ಉಳಿದ ದ್ರವ್ಯರಾಶಿಯು ಅಲ್ಪ-ಸ್ವಲ್ಪ ಭಾರಿ ವಸ್ತುಗಳಿಂದ ಕೂಡಿದೆ. ಸೂರ್ಯನ ವರ್ಣಪಟಲ ವಿಂಗಡಣೆಯು G2V. ಸೂರ್ಯನ ಮೇಲ್ಮೈ ತಾಪಮಾನವು ಸುಮಾರು ೫,೦೦೦-ಕೆ. ಗಳಿರುವುದನ್ನು "G2" ಸೂಚಿಸುತ್ತದೆ. ಈ ತಾಪಮಾನವು ಮೇಲ್ಮೈಗೆ ಬಿಳಿ ಬಣ್ಣವನ್ನು ಕೊಟ್ಟರೂ, ವಾಯುಮಂಡಲವು ಬೆಳಕನ್ನು ಚದುರಿಸುವುದರಿಂದ, ಹಳದಿಯಾಗಿ ಕಾಣುತ್ತದೆ. ಇದರ ವರ್ಣಪಟಲವು ಅಯಾನುಗೊಳಿತ ಮತ್ತು ತಟಸ್ಥ ಲೋಹಗಳ ಮತ್ತು ಬಹಳ ದುರ್ಬಲವಾದ ಜಲಜನಕದ ವರ್ಣರೇಖೆಗಳನ್ನು ತೋರಿಸುತ್ತದೆ. ಸೂರ್ಯನು ಬಹುತೇಕ ಇತರೆ ನಕ್ಷತ್ರಗಳಂತೆ ಪ್ರಮುಖಾನುಕ್ರಮ ನಕ್ಷತ್ರವೆಂದು "V" ಪ್ರತ್ಯಯವು ಸೂಚಿಸುತ್ತದೆ. ಇದರರ್ಥ, ಸೂರ್ಯವು ಪರಮಾಣು ಬೆಸುಗೆಯಿಂದ ಜಲಜನಕವನ್ನು ಹೀಲಿಯಂ ಆಗಿ ಪರಿವರ್ತಿಸಿ ಶಕ್ತಿಯನ್ನು ಉತ್ಪಾದಿಸುತ್ತದೆ, ಮತ್ತು ಇದು ಸಮತೋಲನ ಸ್ಥಿತಿಯಲ್ಲಿದ್ದು, ಅದರ ಗಾತ್ರವು ಬದಲಾಗುವುದಿಲ್ಲ ಎಂದು. ನಮ್ಮ ತಾರಾಗಣದಲ್ಲಿ ೧೦ ಕೋಟಿಗಿಂತ ಹೆಚ್ಚು G2 ವರ್ಗದ ನಕ್ಷತ್ರಗಳಿವೆ. ತಾರಾಗಣದಲ್ಲಿರುವ ೮೫% ನಕ್ಷತ್ರಗಳಿಗಿಂತ ಸೂರ್ಯವು ಹೆಚ್ಚು ಪ್ರಕಾಶಮಾನವಾಗಿದೆ. ಈ ೮೫% ನಕ್ಷತ್ರಗಳು ಕೆಂಪು ಕುಬ್ಜ ರೂಪದಲ್ಲಿವೆ.[೨]
ಕ್ಷೀರ ಪಥ ತಾರಾಗಣ ಕೇಂದ್ರದಿಂದ ಸುಮಾರು ೨೫,೦೦೦-೨೮೦೦೦ ಜ್ಯೋತಿರ್ವರ್ಷಗಳ ದೂರದಲ್ಲಿ ಸೂರ್ಯವು ಪರಿಭ್ರಮಿಸುತ್ತದೆ. ಇದರ ಒಂದು ಪರಿಭ್ರಮಣಕ್ಕೆ ಸುಮಾರು ೨೨೫೨೫ ಕೋಟಿ ವರ್ಷಗಳು ಬೇಕಾಗುತ್ತವೆ. ಇದರ ೨೧೭ ಕಿ.ಮೀ./ಕ್ಷಣದ ಪರಿಭ್ರಮಣ ವೇಗವು, ಪ್ರತಿ ೧,೪೦೦ ವರ್ಷಗಳಿಗೊಂದು ಜ್ಯೋತಿರ್ವರ್ಷ, ಮತ್ತು ಪ್ರತಿ ೮ ದಿನಗಳಿಗೊಮ್ಮೆ ಒಂದು ಖಗೋಳ ಮಾನದ ಪ್ರಮಾಣಗಳಿಗೆ ಸಮಾನವಾಗಿದೆ.[೩]
ಸೂರ್ಯನು ಮೂರನೇ ಪೀಳಿಗೆಯ ಒಂದು ನಕ್ಷತ್ರ. ಹತ್ತಿರದಲ್ಲುಂಟಾದ ತಾರಾಸ್ಫೋಟದಿಂದ (supernova) ಹೊರಬಂದ ಆಘಾತತರಂಗಗಳು ಸೂರ್ಯನ ಉದ್ಭವಕ್ಕೆ ಚಾಲನೆಯನ್ನು ಕೊಟ್ಟಿದ್ದಿರಬಹುದು. ಸೌರಮಂಡಲದಲ್ಲಿ ಹೇರಳವಾಗಿ ಕಂಡುಬರುವ ಚಿನ್ನ, ಯುರೇನಿಯಂಗಳಂಥ ಭಾರವಸ್ತುಗಳ ಅಸ್ತಿತ್ವವು ಈ ರೀತಿಯ ಉದ್ಭವವನ್ನು ಸೂಚಿಸುತ್ತವೆ; ಈ ಮೂಲವಸ್ತುಗಳು, ತಾರಾಸ್ಫೋಟದ ಸಮಯದಲ್ಲಿ ಉಂಟಾದ ಪರಮಾಣು ಕ್ರಿಯೆಯಿಂದ, ಅಥವಾ ಒಂದು ಬೃಹತ್ ಎರಡನೇ ಪೀಳಿಗೆಯ ನಕ್ಷತ್ರದಲ್ಲಿ ನ್ಯೂಟ್ರಾನ್ ಹೀರುವಿಕೆಯಿಂದ ಉಂಟಾದ ರೂಪ ಬದಲಾವಣೆಯಿಂದ (transmutation) ಸೃಷ್ಟಿಯಾಗಿದ್ದಿರಬಹುದು.
ಭೂಮಿಯ ಮೇಲ್ಮೈನ ಹತ್ತಿರ ಸೂರ್ಯನ ಬೆಳಕೇ ಶಕ್ತಿಯ ಮುಖ್ಯ ಮೂಲ. ಸೂರ್ಯನತ್ತ ನೇರವಾಗಿ ಮುಖಮಾಡಿರುವ ಏಕಮಾನ ವಿಸ್ತೀರ್ಣದ ಮೇಲೆ ಬೀಳುವ ಸೌರಶಕ್ತಿಯನ್ನು ಸೌರ ಸ್ಥಿರವೆಂದು ಕರೆಯಲಾಗುತ್ತದೆ. ಈ ಪ್ರಮಾಣವು ೧ ಖಗೋಳ ಮಾನ ಅಥವಾ ಸೂರ್ಯನಿಂದ ಭೂಮಿಯಿರುವ ದೂರದಲ್ಲಿ ಸುಮಾರು ೧,೩೭೦-ವ್ಯಾಟ್/ಚ.ಮೀ. ನಷ್ಟಿದೆ. ವಿವಿಧ ನೈಸರ್ಗಿಕ ಮತ್ತು ಸಂಶ್ಲಿಷ್ಟ ಪ್ರಕ್ರಿಯೆಗಳಿಂದ ಈ ಶಕ್ತಿಯನ್ನು ಉಪಯೋಗಿಸಿಕೊಳ್ಳಬಹುದು. ಮರ-ಗಿಡಗಳಲ್ಲಿ ನಡೆಯುವ ದ್ಯುತಿಸಂಶ್ಲೇಷಣೆಯು ಈ ಶಕ್ತಿಯನ್ನು ಹಿಡಿದು ಆಮ್ಲಜನಕ ಮತ್ತು ಇಂಗಾಲದ ಸಂಯುಕ್ತಗಳ ರಸಾಯನಿಕ ರೂಪಕ್ಕೆ ಪರಿವರ್ತಿಸುತ್ತದೆ. ಸೌರ ಕೋಶಗಳು ಸೌರಶಕ್ತಿಯನ್ನು ವಿದ್ಯುಚ್ಛಕ್ತಿಯನ್ನಾಗಿ ಪರಿವರ್ತಿಸುತ್ತವೆ. ಹಿಂದಿನ ಕಾಲದಲ್ಲಿ ದ್ಯುತಿಸಂಶ್ಲೇಷಣೆಯು ಸೌರಶಕ್ತಿಯನ್ನು ಪರಿವರ್ತಿಸಿ, ಕಲ್ಲೆಣ್ಣೆ ಮತ್ತು ಇತರ ಇಂಧನಗಳಲ್ಲಿ ಶೇಖರಿಸಿತು.
ಸೂರ್ಯಪ್ರಕಾಶವು ಹಲವು ಆಸಕ್ತಿಕರ ಜೈವಿಕ ಗುಣಗಳನ್ನು ಹೊಂದಿದೆ. ಸೂರ್ಯನ ಅತಿನೇರಳೆ ಕಿರಣಗಳು ನಂಜು ನಿವಾರಕ ಗುಣಗಳನ್ನು ಹೊಂದಿದ್ದು, ಇದನ್ನು ಕ್ರಿಮಿನಿವಾರಣೆಗೆ ಬಳಸಬಹುದು. ಇದು ಚರ್ಮದ ಮೇಲೆ ಕೆಂಪು ಸುಡುಗಾಯಗಳನ್ನು ಮಾಡುವುದಲ್ಲದೆ, ವಿಟಮಿನ್ ಡಿ ಉತ್ಪಾದನೆಯಂತಹ ಕೆಲವು ವೈದ್ಯಕೀಯ ಗುಣಗಳನ್ನೂ ಹೊಂದಿದೆ. ಭೂಮಿಯ ವಾಯುಮಂಡಲವು ಅತಿನೇರಳೆ ಬೆಳಕನ್ನು ಹೀರಿಕೊಂಡು ದುರ್ಬಲಗೊಳಿಸುವುದರಿಂದ, ಬೆಳಕಿನ ಶಕ್ತಿಯು ಅಕ್ಷಾಂಶದೊಂದಿಗೆ ಬದಲಾಗುತ್ತದೆ. ಹೆಚ್ಚು ಅಕ್ಷಾಂಶದ ಜಾಗಗಳಲ್ಲಿ ಬೆಳಕು ವಾಯುಮಂಡಲದ ಮೂಲಕ ಹೆಚ್ಚು ದೂರವನ್ನು ಕ್ರಮಿಸುವುದರಿಂದ, ಹೆಚ್ಚು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಅತಿನೇರಳೆ ಬೆಳಕಿನ ತೀವ್ರತೆಯಲ್ಲಿ ಉಂಟಾಗುವ ಈ ವ್ಯತ್ಯಾಸಗಳಿಂದ, ಮನುಷ್ಯರಲ್ಲಿ ವರ್ಣಭಿನ್ನತೆಯೂ ಸೇರಿದಂತೆ ಹಲವು ಜೈವಿಕ ಹೊಂದಾಣಿಕೆಗಳು ಉಂಟಾಗಿವೆ.
ಸೂರ್ಯವು ಕಾಂತೀಯವಾಗಿ ಚಟುವಟಿಕೆಯಿಂದಿರುವ ನಕ್ಷತ್ರ; ಇದು ಪ್ರತಿ ೧೧ ವರ್ಷಗಳಿಗೊಮ್ಮೆ ತಿರುಗುಮುರುಗಾಗುವ ಪ್ರಬಲವಾದ ಕಾಂತಕ್ಷೇತ್ರವನ್ನು ಹೊಂದಿದೆ. ಸೂರ್ಯನ ಕಾಂತಕ್ಷೇತ್ರವು ಉಂಟುಮಾಡುವ ಹಲವು ಪರಿಣಾಮಗಳನ್ನು ಒಟ್ಟಾಗಿ ಸೌರ ಚಟುವಟಿಕೆಗಳು ಎಂದು ಕರೆಯಲಾಗುತ್ತದೆ. ಇದರಲ್ಲಿ ಸೂರ್ಯನ ಮೇಲ್ಮೈ ಮೇಲಿರುವ ಸೌರಕಲೆಗಳು, ಸೌರ ಜ್ವಾಲೆಗಳು, ಮತ್ತು ಸೌರಮಂಡಲದೊಳಗೆ ಪದಾರ್ಥಗಳನ್ನು ಸಾಗಿಸುವ ಸೌರಮಾರುತಗಳ ಬದಲಾವಣೆಗಳು ಸೇರಿವೆ. ಸೂರ್ಯನ ಚಟುವಟಿಕೆಗಳು ಭೂಮಿಯ ಮೇಲೂ ಪರಿಣಾಮಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ, ಧ್ರುವಾರುಣ ಜ್ಯೋತಿ ಮತ್ತು ರೇಡಿಯೊ-ಸಂಪರ್ಕ/ವಿದ್ಯುತ್-ಪ್ರವಾಹಗಳಲ್ಲಿ ಅಡಚಣೆಗಳು. ಸೌರಮಂಡಲದ ರೂಪಿಸುವಿಕೆ ಮತ್ತು ವಿಕಾಸದಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆಯೆಂದು ನಂಬಲಾಗಿರುವ ಸೌರ ಚಟುವಟಿಕೆಗಳು ಭೂಮಿಯ ಹೊರ ವಾಯುಮಂಡಲದ ವಿನ್ಯಾಸದ ಮೇಲೂ ಆಳವಾದ ಪ್ರಭಾವವನ್ನು ಬೀರುತ್ತದೆ.
ಸೂರ್ಯನು ಭೂಮಿಯ ಅತ್ಯಂತ ನಿಕಟದಲ್ಲಿರುವ ನಕ್ಷತ್ರವಾದ್ದರಿಂದ, ವಿಜ್ಞಾನಿಗಳು ಸೂರ್ಯನನ್ನು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಆದರೂ, ಸೂರ್ಯನ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರಗಳು ದೊರಕಿಲ್ಲ. ಹತ್ತು ಲಕ್ಷ ಕೆ.ಗಿಂತಲೂ ಹೆಚ್ಚು ಬಿಸಿಯಾಗಿರುವ ಹೊರ ವಾಯುಮಂಡಲವನ್ನು ಹೊಂದಿದ್ದರೂ, ಅದರ ಗೋಚರ ಮೇಲ್ಮೈ (ದ್ಯುತಿಗೋಳ) ಕೇವಲ ೬,೦೦೦ ಕೆ.ಗಳ ತಾಪಮಾನದಲ್ಲಿ ಹೇಗಿದೆ? ಎಂಬುದೂ ಈ ಪ್ರಶ್ನೆಗಳಲ್ಲೊಂದು. ಸೌರಕಲೆಗಳ ಕ್ರಮಬದ್ಧ ಚಟುವಟಿಕೆಗಳು, ಸೌರ ಜ್ವಾಲೆಗಳ ಉದ್ಭವದ ಕಾರಣ, ವರ್ಣಗೋಳ ಮತ್ತು ಪ್ರಭಾವಲಯಗಳ ನಡುವೆ ಕಾಂತೀಯ ಒಡನಾಟ, ಸೌರಮಾರುತದ ಉದ್ಭವ - ಇವುಗಳು ಪ್ರಸ್ತುತದಲ್ಲಿ ಸಂಶೋಧನೆಗೆ ಒಳಪಟ್ಟಿರುವ ವಿಷಯಗಳು.
[ಬದಲಾಯಿಸಿ] ಜೀವನ ಚಕ್ರ
ನಾಕ್ಷತ್ರಿಕ ವಿಕಸನ ಮತ್ತು ಪರಮಾಣು-ಬ್ರಹ್ಮಾಂಡ-ಕಾಲ-ಶಾಸ್ತ್ರಗಳ ಗಣಕೀಕೃತ ಮಾದರಿಗಳ ಆಧಾರದ ಮೇಲೆ, ಸೂರ್ಯನಿಗೆ ೪೫೭ ಕೋಟಿ ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ.
ಪರಮಾಣು ಬೆಸುಗೆಯಿಂದ ಜಲಜನಕವು ಹೀಲಿಯಂ ಆಗಿ ಪರಿವರ್ತಿತವಾಗುವ ಸೂರ್ಯನ ಪ್ರಮುಖಾನುಕ್ರಮ ವಿಕಸನ ಕಾಲದಲ್ಲಿ ಅರ್ಧ ಕಾಲವು ಈಗಾಗಲೇ ಮುಗಿದಿದೆ. ಸೂರ್ಯನ ಒಳಭಾಗದಲ್ಲಿ ಪ್ರತಿ ಕ್ಷಣವೂ ಸುಮಾರು ೪೦ ಲಕ್ಷ ಟನ್ನುಗಳಷ್ಟು ದ್ರವ್ಯರಾಶಿಯು ಶಕ್ತಿಯಾಗಿ ಪರಿವರ್ತಿತವಾಗಿ, ನ್ಯೂಟ್ರಿನೊ ಮತ್ತು ಸೌರ ವಿಕಿರಣಗಳು ಉದ್ಭವವಾಗುತ್ತವೆ. ತನ್ನ ಜೀವಾವಧಿಯಲ್ಲಿ ಸೂರ್ಯವು ಸುಮಾರು ಒಟ್ಟಾರೆ ೧೦೦೦ ಕೋಟಿ ವರ್ಷಗಳ ಕಾಲ ಪ್ರಮುಖಾನುಕ್ರಮ ನಕ್ಷತ್ರವಾಗಿರುತ್ತದೆ.
ತಾರಾಸ್ಫೋಟದಂತೆ ಕೊನೆಗಾಣಲು ಸಾಕಷ್ಟು ದ್ರವ್ಯರಾಶಿಯನ್ನು ಸೂರ್ಯವು ಹೊಂದಿಲ್ಲ. ಬದಲಿಗೆ, ಇನ್ನು ಸುಮಾರು ೪-೫ ಶತಕೋಟಿ ವರ್ಷಗಳಲ್ಲಿ ಸೂರ್ಯವು ಕೆಂಪು ದೈತ್ಯದ ಹಂತವನ್ನು ತಲುಪುತ್ತದೆ. ಅದರ ಒಳಭಾಗದಲ್ಲಿರುವ ಜಲಜನಕ ಇಂಧನವು ಬಳಸಲಾಗಿ, ಒಳಭಾಗವು ಸಂಕುಚಿಸಿ ಬಿಸಿಯಾಗಿ, ಹೊರಪದರಗಳು ಹಿಗ್ಗುತ್ತವೆ. ಒಳಭಾಗದ ತಾಪಮಾನವು ೧೦ ಕೋಟಿ ಕೆ. ತಲುಪಿದಾಗ ಹೀಲಿಯಂ ಬೆಸುಗೆಯು ಶುರುವಾಗಿ, ಇಂಗಾಲ ಮತ್ತು ಆಮ್ಲಜನಕಗಳು ಸೃಷ್ಟಿಯಾಗುತ್ತವೆ. ಭೂಮಿಯು ಪ್ರಸ್ತುತದಲ್ಲಿರುವ ದೂರದವರೆಗೂ ಸೂರ್ಯನ ಹೊರಪದರಾಗಳು ಹಿಗ್ಗಿದರೂ, ಸೂರ್ಯನು ತನ್ನ ಕೆಂಪು ದೈತ್ಯ ಹಂತದಲ್ಲಿ ದ್ರವ್ಯರಾಶಿಯನ್ನು ಕಳೆದುಕೊಳ್ಳುವುದರಿಂದ, ಭೂಮಿಯ ಕಕ್ಷೆಯು ಇನ್ನೂ ದೂರವಾಗುತ್ತದೆ ಎಂದು ಇತ್ತೀಚೆಗಿನ ಸಂಶೋಧನೆಗಳು ತೋರಿಸುತ್ತವೆ. ಆದರೆ, ಭೂಮಿಯ ಮೇಲಿನ ನೀರು ಮತ್ತು ಬಹುತೇಕ ವಾಯುಮಂಡಲವು ಅಪಾರ ಶಾಖದಿಂದ ಇಂಗಿ ಹೋಗುತ್ತವೆ.
ಕೆಂಪು ದೈತ್ಯ ಹಂತದ ನಂತರ, ಉಷ್ಣತೆಯ ತೀವ್ರವಾದ ಮಿಡಿತಗಳಿಂದ, ಸೂರ್ಯವು ತನ್ನ ಹೊರ ಪದರಗಳನ್ನು ಕಳೆದುಕೊಂದು ಗ್ರಹ ಜ್ಯೋತಿಪಟಲವಾಗಿ ಮಾರ್ಪಡುತ್ತದೆ. ಹೊರ ಪದರಗಳನ್ನು ಕಳೆದುಕೊಂಡ ಮೇಲೆ ಉಳಿದ ಅತ್ಯಂತ ಬಿಸಿಯಾದ ನಾಕ್ಷತ್ರಿಕ ಒಳಭಾಗವು ನೂರಾರು ಕೋಟಿ ವರ್ಷಗಳ ಕಾಲಾವಧಿಯಲ್ಲಿ ನಿಧಾನವಾಗಿ ತಣ್ಣಗಾಗಿ ಶ್ವೇತ ಕುಬ್ಜದಂತೆ ನಂದಿಹೋಗುತ್ತದೆ. ನಾಕ್ಷತ್ರಿಕ ವಿಕಸನದಲ್ಲಿ ಈ ರೀತಿಯ ಘಟನಾವಳಿಗಳು ಸಣ್ಣ ಮತ್ತು ಮಧ್ಯ ಪ್ರಮಾಣದ ನಕ್ಷತ್ರಗಳಲ್ಲಿ ಸಾಮಾನ್ಯವಾಗಿ ನಡೆಯುತ್ತವೆ.[೪][೫]
[ಬದಲಾಯಿಸಿ] ರಚನೆ
ಸೂರ್ಯನು ಸಾಮಾನ್ಯ-ಗಾತ್ರದ ನಕ್ಷತ್ರವಾದರೂ, ಅದು ಸೌರಮಂಡಲದ ೯೯% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಆಕಾರವು ಶುದ್ಧ [ಗೋಳಾಕಾರ]]ಕ್ಕೆ ಬಹಳ ಹತ್ತಿರದಲ್ಲಿದೆ.[೬] ಸೂರ್ಯನ ಸಮಭಾಜಕ ಮತ್ತು ಧ್ರುವಗಳ ಮೂಲಕ ವ್ಯಾಸಗಳಲ್ಲಿ ಕೇವಲ ೧೦ ಕಿ.ಮೀ. ಗಳ ವ್ಯತ್ಯಾಸವಿದೆ. ಸೂರ್ಯನು ಒಂದು ಘನ ಕಾಯದಂತೆ ಪರಿಭ್ರಮಿಸುವುದಿಲ್ಲ (ಪರಿಭ್ರಮಣ ಕಾಲಗಳು: ಸಮಭಾಜಕದಲ್ಲಿ ೨೫ ದಿನಗಳು ಮತ್ತು ಧ್ರುವಗಳಲ್ಲಿ ೨೮ ದಿನಗಳು). ಇದು ಒಟ್ಟಾರೆ ಪರಿಭ್ರಮಣಕ್ಕೆ ಸುಮಾರು ೨೮ ದಿನಗಳನ್ನು ತೆಗೆದುಕೊಳ್ಳುತ್ತದೆ; ಈ ನಿಧಾನವಾದ ಸೌರ ಪರಿಭ್ರಮಣದಿಂದ ಉಂಟಾಗುವ ಕೇಂದ್ರಾಪಗಾಮಿ ಬಲಕಿಇಂತ ಸೂರ್ಯನ ಸಮಭಾಜಕದಲ್ಲಿರುವ ಗುರುತ್ವ ಬಲವು ೧.೮ ಕೋಟಿ ಪಟ್ಟು ಹೆಚ್ಚು ಶಕ್ತಿಯುತವಾಗಿದೆ. ಗ್ರಹಗಳು ಉಂಟುಮಾಡುವ ಉಬ್ಬರವಿಳಿತಗಳು ಸೂರ್ಯನ ಆಕಾರದ ಮೇಲೆ ಗಮನಾರ್ಹವಾದ ಪರಿಣಾಮವನ್ನು ಬೀರುವುದಿಲ್ಲ.
ಘನರೂಪಿ ಗ್ರಹಗಳಲ್ಲಿ ಕಾಣುವ ಸ್ಫುಟವಾಗಿ ಗುರುತಿಸಲ್ಪಟ್ಟ ಸೀಮಾರೇಖೆಯು ಸೂರ್ಯನಲ್ಲಿ ಕಾಣುವುದಿಲ್ಲ; ಸೂರ್ಯನಲ್ಲಿ ಅನಿಲದ ಸಾಂದ್ರತೆಯು ಕೇಂದ್ರದಿಂದ ಇರುವ ದೂರದ ಪ್ರಮಾಣದ ಸುಮಾರು ಘಾತಾನುಸಾರದ ಅನುಪಾತದಲ್ಲಿ ಕಡಿಮೆಯಾಗುತ್ತದೆ. ಆದರೂ, ಈ ಕೆಳಗೆ ವಿವರಿಸಿದಂತೆ, ಸೂರ್ಯವು ಚೆನ್ನಾಗಿ ಗುರುತಿಸಬಹುದಾದ ಆಂತರಿಕ ರಚನೆಯನ್ನು ಹೊಂದಿದೆ. ಸೂರ್ಯನ ಕೇಂದ್ರದಿಂದ ದ್ಯುತಿಗೋಳದ ತುದಿಯವರೆಗಿರುವ ದೂರವನ್ನು ತ್ರಿಜ್ಯವೆಂದು ಪರಿಗಣಿಸಲಾಗುತ್ತದೆ. ಈ ತುದಿಯ ಹೊರಗಡೆ ಅನಿಲಗಳೌ ಪಾರದರ್ಶಕವಾಗಿದ್ದು, ತುದಿಯ ಒಳಭಾಗದಲ್ಲಿ ಅನಿಲಗಳು ಅಪಾರದರ್ಶಕವಾಗಿರುತ್ತವೆ; ದ್ಯುತಿಗೋಳವು ಬರಿಗಣ್ಣಿಗೆ ಅತಿ ಸುಲಭವಾಗಿ ಕಾಣುತ್ತದೆ. ಸೂರ್ಯನ ಬಹುತೇಕ ದ್ರವ್ಯರಾಶಿಯು ಕೇಂದ್ರದಿಂದ ೦.೭ ತ್ರಿಜ್ಯಗಳ ಒಳಗೆ ಸ್ಥಿತವಾಗಿದೆ.
ಸೌರ-ಒಳಭಾಗವನ್ನು ನೇರವಾಗಿ ವೀಕ್ಷಿಸಲಾಗುವುದಿಲ್ಲ, ಮತ್ತು ಸೂರ್ಯವು ವಿದ್ಯುತ್ಕಾಂತೀಯ ವಿಕಿರಣಕ್ಕೆ ಅಪಾರದರ್ಶಕವಾಗಿದೆ. ಭೂಕಂಪ ವಿಜ್ಞಾನವು ಭೂಕಂಪದಿಂದ ಉಂಟಾಗುವ ಅಲೆಗಳಿಂದ ಭೂಮಿಯ ಆಂತರಿಕ ರಚನೆಯನ್ನು ತರ್ಕಿಸುವಂತೆ, ಸೌರಕಂಪ ವಿಜ್ಞಾನವು ಸೂರ್ಯನ ಒಳಭಾಗದಲ್ಲಿ ಉಂಟಾಗುವ ಒತ್ತಡದ ಅಲೆಗಳನ್ನು ಮಾಪಿಸಿ ಅದರ ಆಂತರಿಕ ರಚನೆಯನ್ನು ತಿಳಿದುಕೊಳ್ಳುತ್ತದೆ. ಸೂರ್ಯನ ಒಳ ಪದರಗಳನ್ನು ಪರಿಶೀಲಿಸಲು ಅದರ ಗಣಕೀಕೃತ ಮಾದರಿಗಳನ್ನೂ ಬಳಸಲಾಗುತ್ತದೆ.
[ಬದಲಾಯಿಸಿ] ಒಳಭಾಗ
ಕೇಂದ್ರದಿಂದ ಸುಮಾರು ೦.೨ ಸೌರ ತ್ರಿಜ್ಯಗಳವರೆಗೆ ವ್ಯಾಪಿಸಿರುವ ವಲಯವನ್ನು ಸೂರ್ಯನ ಒಳಭಾಗ ಎಂದು ಪರಿಗಣಿಸಲಾಗಿದೆ. ಈ ಭಾಗವು ೧೫೦,೦೦೦ ಕಿ.ಗ್ರಾಂ/ಮೀ೩ ಗಳವರೆಗೂ ಸಾಂದ್ರತೆಯನ್ನು ಹೊಂದಿದ್ದು (ಭೂಮಿಯ ಮೇಲೆ ನೀರಿನ ಸಾಂದ್ರತೆಯ ೧೫೦ ಪಟ್ಟು) ಸುಮಾರು ೧೩,೬೦೦,೦೦೦ ಕೆ. ಗಳಷ್ಟು ತಾಪಮಾನದಲ್ಲಿದೆ (ಹೋಲಿಕೆಯಲ್ಲಿ, ಸೂರ್ಯನ ಮೇಲ್ಮೈ ತಾಪಮಾನವು ಕೇವಲ ೫,೭೮೫ ಕೆ. ಗಳು (ಒಳಭಾಗದ ೧/೨೩೫೦ ರಷ್ಟು). ಸೂರ್ಯನ ಬಹುತೇಕ ಆಯುಷ್ಯದಲ್ಲಿ, p-p (ಪ್ರೋಟಾನ್-ಪ್ರೋಟಾನ್) ಸರಣಿಯೆಂದು ಕರೆಯಲಾಗುವ ಸರಣಿ ಹಂತದ ಪರಮಾಣು ಬೆಸುಗೆಯಿಂದ ಶಕ್ತಿಯು ಉತ್ಪತ್ತಿಯಾಗುತ್ತದೆ; ಈ ಪ್ರಕ್ರಿಯೆಯು ಜಲಜನಕವನ್ನು ಹೀಲಿಯಂ ಆಗಿ ಪರಿವರ್ತಿಸುತ್ತದೆ. ಈ ಬೆಸುಗೆಯಿಂದ ಗಮನಾರ್ಹವಾದ ಶಾಖವನ್ನು ಉತ್ಪತ್ತಿಸುವುದು ಸೂರ್ಯನ ಒಳಭಾಗ ಮಾತ್ರ; ಸೂರ್ಯನ ಉಳಿದ ಭಾಗಗಳು ಒಳಭಾಗದಿಂದ ಹೊರಬರುವ ಶಕ್ತಿಯಿಂದ ಬಿಸಿಯಾಗುತ್ತವೆ. ಶಕ್ತಿಯು ಸೂರ್ಯನ ಬೆಳಕು ಅಥವಾ ಚಲನ ಶಕ್ತಿಯಾಗಿ ಬಾಹ್ಯಾಕಾಶಕ್ಕೆ ಹೋಗುವ ಮುನ್ನ ಸೂರ್ಯನ ವಿವಿಧ ಪದರಗಳ ಮೂಲಕ ಹಾದುಹೋಗಬೇಕು.
ಪ್ರತಿ ಕ್ಷಣವೂ ಸುಮಾರು ೮.೯×೧೦೩೭ ಪ್ರೋಟಾನ್‌ಗಳು (ಜಲಜನಕದ ಪರಮಾಣುವಿನ ಕೇಂದ್ರ) ಹೀಲಿಯಂ ಪರಮಾಣುವಿನ ಕೇಂದ್ರವಾಗಿ ಪರಿವರ್ತಿತವಾಗುತ್ತವೆ. ಇದು ೩೮೩×೧೦೨೪ ವ್ಯಾಟ್‌ಗಳು, ಅಥವಾ ಪ್ರತಿ ಕ್ಷಣ ೯.೧೫×೧೦೯ ಕೋಟಿ ಟನ್ನುಗಳ ಟಿ ಎನ್ ಟಿ ಸ್ಫೋಟದಷ್ಟು ಸರಿಸುಮಾರು ಶಕ್ತಿ. ಪರಮಾಣು ಬೆಸುಗೆಯ ವೇಗವು ಅನಿಲದ ಸಾಂದ್ರತೆಯ ಮೇಲೆ ಅವಲಂಬಿತವಾಗಿರುವುದರಿಂದ, ಸೂರ್ಯನ ಒಳಭಾಗದಲ್ಲಿ ಬೆಸುಗೆಯು ಸ್ವಯಂ-ತಿದ್ದಿಕೊಳ್ಳುವ ಒಂದು ಸಮತೋಲನ ಸ್ಥಿತಿಯಲ್ಲಿದೆ: ಈ ವೇಗವು ಸ್ವಲ್ಪ ಹೆಚ್ಚಾದರೆ ಒಳಭಾಗವು ಬಿಸಿಯಾಗಿ ಹಿಗ್ಗಿ, ಬೆಸುಗೆಯನ್ನು ನಿಧಾನಗೊಳಿಸುತ್ತದೆ; ಇದೇ ರೀತಿ, ಬೆಸುಗೆಯು ನಿಧಾನವಾದಾಗ ಒಳಭಾಗವು ಸಂಕುಚಿಸಿ, ಲಭ್ಯವಿರುವ ಕಡಿಮೆ ಪ್ರದೇಶದಲ್ಲಿ ಬೆಸುಗೆಯು ಮತ್ತೆ ವೇಗವಾಗಿ ಆಗಲು ಶುರುವಾಗುತ್ತದೆ.
ಪರಮಾಣು ಬೆಸುಗೆಯಿಂದ ಹೊರಬರುವ ಶಕ್ತಿಯುತ ಫೋಟಾನುಗಳು (ಗಾಮಾ ಮತ್ತು ಕ್ಷ-ಕಿರಣ) ಸೂರ್ಯನ ಮೇಲ್ಮೈ ತಲುಪಲು ವರ್ಷಗಳೇ ಬೇಕಾಗುತ್ತವೆ. ಈ "ಫೋಟಾನ್ ಯಾತ್ರಾಸಮಯ"ದ ಅಂದಾಜುಗಳು ೫ ಕೋಟಿ ವರ್ಷಗಳಿಂದ[೭] ೧೭,೦೦೦ ವರ್ಷಗಳವರೆಗೂ[೮] ಇವೆ. ಒಮ್ಮೆ ದ್ಯುತಿಗೋಳದ ಪಾರದರ್ಶಕ "ಮೇಲ್ಮೈ"ಯನ್ನು ತಲುಪಿದ ಮೇಲೆ ಫೋಟಾನುಗಳು ಗೋಚರ ಬೆಳಕಿನಂತೆ ಹೊರಬರುತ್ತವೆ. ಬಾಹ್ಯಾಕಾಶಕ್ಕೆ ಹೋಗುವ ಮುನ್ನ, ಸೂರ್ಯನ ಒಳಭಾಗದಲ್ಲಿರುವ ಪ್ರತಿ ಗಾಮಾ ಕಿರಣವೂ ಲಕ್ಷಾಂತರ ಫೋಟಾನುಗಳಾಗಿ ಮಾರ್ಪಡುತ್ತದೆ. ಪರಮಾಣು ಬೆಸುಗೆಯಿಂದ ನ್ಯೂಟ್ರಿನೊಗಳೂ ಉದ್ಭವವಾಗುತ್ತವೆ. ಆದರೆ ಇವು ಬೇರೆ ಪದಾರ್ಥಗಳ ಜೊತೆ ಪ್ರತಿಕ್ರಿಯಿಸುವುದಿಲ್ಲವಾದ್ದರಿಂದ, ಇವು ಹುಟ್ಟಿದ ತಕ್ಷಣವೇ ಸೂರ್ಯನಿಂದ ಹೊರಬರುತ್ತವೆ. ಹಲವು ವರ್ಷಗಳವರೆಗೆ, ಸಿದ್ಧಾಂತಗಳು ಸೂಚಿಸಿದ್ದಕ್ಕಿಂತ ಬಹಳ ಕಡಿಮೆ ಪ್ರಮಾಣವನ್ನು ನ್ಯೂಟ್ರಿನೊ ಮಾಪನಗಳು ತೋರಿಸಿದವು. ಇತ್ತೀಚೆಗೆ ನ್ಯೂಟ್ರಿನೊ ಓಲಾಟದ ಪರಿಣಾಮವು ಚೆನ್ನಾಗಿ ಅರ್ಥವಾದ ನಂತರ ಈ ಸಮಸ್ಯೆಯು ಬಗೆಹರಿಯಿತು.
[ಬದಲಾಯಿಸಿ] ವಿಕಿರಣ ವಲಯ
ಕೆಂದ್ರದಿಂದ ೦.೨ ರಿಂದ ೦.೭ ಸೌರ ತ್ರಿಜ್ಯಗಳ ದೂರದಲ್ಲಿ ಸೌರ ಅನಿಲಗಳು ಬಹಳ ಬಿಸಿಯಾಗಿ ಮತ್ತು ಸಾಂದ್ರವಾಗಿರುವುದರಿಂದ, ಒಳಭಾಗದ ಶಾಖವನ್ನು ಹೊರಗೆ ಸಾಗಿಸಲು ಉಷ್ಣ ವಿಕಿರಣವೊಂದೇ ಸಾಕು. ಈ ವಲಯದಲ್ಲಿ ಉಷ್ಣ ಸಂವಹನೆಯು ಉಂಟಾಗುವುದಿಲ್ಲ; ಕೇಂದ್ರದಿಂದ ದೂರ ಹೆಚ್ಚಿದಂತೆ ತಾಪಮಾನವು ಕಡಿಮೆಯಾದರೂ, ತಾಪಮಾನದ ಬದಲಾವಣೆಯ ಗತಿಯು ಸ್ಥಿರೋಷ್ಣ ಮರುಕಳಿಕೆಗಿಂತ ಕಡಿಮೆಯಿರುವುದರಿಂದ, ಸಂವಹನೆ ಉಂಟಾಗಲು ಸಾಧ್ಯವಿಲ್ಲ. ಜಲಜನಕ ಮತ್ತು ಹೀಲಿಯಂಗಳ ಅಯಾನುಗಳು ಹೊರಸೂಸಿದ ಫೋಟಾನ್ಗಳು ಸ್ವಲ್ಪ ದೂರ ಕ್ರಮಿಸಿದ ನಂತರ, ಬೇರೆ ಅಯಾನುಗಳು ಫೋಟಾನುಗಳನ್ನು ಮತ್ತೆ ಹೀರಿಕೊಳ್ಳುತ್ತವೆ-ಈ ರೀತಿಯಲ್ಲಿ ವಿಕಿರಣವು ಶಾಖವನ್ನು ಸಾಗಿಸುತ್ತದೆ. ಬೆಳಕು ಈ ಪದರದಿಂದ ಹೊರಹೋಗಲು ಲಕ್ಷಾಂತರ ವರ್ಷಗಳೇ ಹಿಡಿಯುತ್ತದೆ. ಬೆಳಕು ಸೂರ್ಯನ ಮೇಲ್ಮೈವರೆಗೂ ಬಂದ ಮೇಲೆ ಭೂಮಿಯನ್ನು ತಲುಪಲು ಕೇವಲ ೮ ನಿಮಿಷಗಳು ಬೇಕಾಗುತ್ತವೆ.
[ಬದಲಾಯಿಸಿ] ಸಂವಹನ ವಲಯ
ಸುಮಾರು ೦.೭ ಸೌರ ತ್ರಿಜ್ಯಗಳಿಂದ ಸೂರ್ಯನ ಗೋಚರ ಮೇಲ್ಮೈವರೆಗಿರುವ ಅನಿಲಗಳು, ಒಳ ಶಾಖವನ್ನು ವಿಕಿರಣದಿಂದ ಹೊರ ಸಾಗಿಸುವಷ್ಟು ಸಾಂದ್ರತೆಯನ್ನು ಹೊಂದಿಲ್ಲ. ಈ ಕಾರಣದಿಂದ, ಸಂವಹನೆಯುಂಟಾಗಿ, ಉಷ್ಣ ಪ್ರವಾಹಗಳು ಬಿಸಿಯಾದ ಪದಾರ್ಥಗಳನ್ನು ಸೂರ್ಯನ ಹೊರಭಾಗಕ್ಕೆ ಸಾಗಿಸುತ್ತವೆ. ಈ ಪದಾರ್ಥಗಳು ಹೊರಭಾಗದಲ್ಲಿ ಸ್ವಲ್ಪ ತಣ್ಣಗಾಗಿ, ಮತ್ತೆ ಸಂವಹನ ವಲಯದ ಕೆಳಭಾಗವನ್ನು ತಲುಪುತ್ತವೆ. ಇಲ್ಲಿ ಇವು ವಿಕಿರಣ ವಲಯದ ಮೇಲ್ಭಾಗದಿಂದ ಮತ್ತಷ್ಟು ಶಾಖವನ್ನು ಹೀರಿಕೊಂಡು ಪುನಃ ಹೊರಗೆ ಸಾಗಿಸುತ್ತವೆ.
ಈ ಉಷ್ಣ ಪ್ರವಾಹಗಳು ಸೂರ್ಯನ ಮೇಲ್ಮೈ ಮೇಲೆ ಕಾಳಿನ ಆಕಾರದ ಕಲೆಗಳನ್ನು ಬಿಡುತ್ತವೆ. ಸೌರ ಅಂತರಂಗದ ಹೊರಭಾಗದ ಈ ಪ್ರವಾಹಗಳು ಸಣ್ಣ ಉತ್ಪಾದಕಗಳನ್ನು ಸೃಷ್ಟಿಸಿ, ಸೂರ್ಯನ ಮೇಲೆಲ್ಲಾ ಹಲವು ಕಾಂತೀಯ ಧ್ರುವಗಳನ್ನು ಉಂಟುಮಾಡುತ್ತವೆ.
[ಬದಲಾಯಿಸಿ] ದ್ಯುತಿಗೋಳ
ನೋಡಲು ಕಾಣುವ ಸೂರ್ಯನ ಮೇಲ್ಮೈಯಾದ ದ್ಯುತಿಗೋಳದ ಪದರದ ಕೆಳಗೆ ಸೂರ್ಯವು ಗೋಚರ ಬೆಳಕಿಗೆ ಅಪಾರದರ್ಶಕವಾಗುತ್ತದೆ. ದ್ಯುತಿಗೋಳದ ಹೊರಗೆ ಸೂರ್ಯರಶ್ಮಿಯು ಬಾಹ್ಯಾಕಾಶಕ್ಕೆ ಹೋಗಿ ಸೂರ್ಯನಿಂದ ಪೂರ್ಣವಾಗಿ ಮುಕ್ತಿ ಹೊಂದುತ್ತದೆ. ವಾಸ್ತವದಲ್ಲಿ ನೂರಾರು ಕಿ.ಮೀ. ಗಳಷ್ಟು ದಪ್ಪವಿರುವ ದ್ಯುತಿಗೋಳವು ಭೂಮಿಯ ಗಾಳಿಗಿಂತ ಸ್ವಲ್ಪ ಹೆಚ್ಚು ಪಾರದರ್ಶಕತೆಯನ್ನು ಹೊಂದಿದೆ. ಒಟ್ಟಾರೆ ಅನಿಲ ಸಾಂದ್ರತೆಯು ಕಡಿಮೆಯಾಗುವುದರಿಂದ ಪಾರದರ್ಶಕತೆಯಲ್ಲಿ ಈ ರೀತಿಯ ವ್ಯತ್ಯಾಸವು ಉಂಟಾಗುತ್ತದೆ. ಸೂರ್ಯನ ಬೆಳಕು ಸುಮಾರು ೬,೦೦೦ ಕೆ. (೫,೭೨೭ ಸೆ.) ನಷ್ಟು ತಾಪಮಾನದಲ್ಲಿದೆಯೆಂದು ಅದರ ವರ್ಣಪಟಲವು ಸೂಚಿಸುತ್ತದೆ. ದ್ಯುತಿಗೋಳವು ಸುಮಾರು ೧೦೨೩ ಮೀ.-೩ ನಷ್ಟು ಸಾಂದ್ರತೆಯನ್ನು ಹೊಂದಿದೆ (ಸಾಗರ ಮಟ್ಟದಲ್ಲಿ ಭೂಮಿಯ ವಾಯುಮಂಡಲವು ಹೊಂದಿರುವ ೧% ಸಾಂದ್ರತೆಯಷ್ಟಿದೆ).
ದ್ಯುತಿಗೋಳದ ವರ್ಣ ಪಟಲವನ್ನು ಮೊದಲು ಅಧ್ಯಯನ ಮಾಡಿದಾಗ, ಆಗಿನ ಕಾಲದಲ್ಲಿ ತಿಳಿದಿರದ ಮೂಲವಸ್ತುಗಳನ್ನು ಸೂಚಿಸುವ ಕೆಲವು ರೇಖೆಗಳು ಕಂಡುಬಂದವು. ಈ ರೇಖೆಗಳು ಒಂದು ಹೊಸ ಮೂಲವಸ್ತುವಿನ ಕಾರಣದಿಂದ ರೂಪುಗೊಂಡಿವೆಯೆಂದು ೧೮೬೮ರಲ್ಲಿ ನಾರ್ಮನ್ ಲಾಕ್ಯೆರ್ ಪ್ರತಿಪಾದಿಸಿದನು. ಗ್ರೀಕರ ಸೂರ್ಯ ದೇವತೆ ಹೀಲಿಯೋಸ್ನ ಆಧಾರದ ಮೇಲೆ ಈ ಮೂಲವಸ್ತುವಿಗೆ "ಹೀಲಿಯಂ" ಎಂದು ಹೆಸರಿಡಲಾಯಿತು. ಇದಾದ ೨೫ ವರ್ಷಗಳ ನಂತರವೇ ಭೂಮಿಯ ಮೇಲೆ ಹೀಲಿಯಂನ್ನು ಬೇರ್ಪಡಿಸಲಾಯಿತು.[೯]
[ಬದಲಾಯಿಸಿ] ವಾಯುಮಂಡಲ
ದ್ಯುತಿಗೋಳದ ಹೊರಗಿರುವ ಸೂರ್ಯನ ಭಾಗಗಳನ್ನು ಒಟ್ಟಿಗೆ ಸೌರ ವಾಯುಮಂಡಲ ಎಂದು ಕರೆಯಲಾಗುತ್ತದೆ. ದೂರದರ್ಶಕದಲ್ಲಿ ಕಾಣುವ ಈ ವಾಯುಮಂಡಲವು ೫ ಮುಖ್ಯ ವಲಯಗಳನ್ನು ಒಳಗೊಂಡಿದೆ: ಕನಿಷ್ಠ ತಾಪ ವಲಯ, ವರ್ಣಗೋಳ, ಪರಿವರ್ತನಾ ವಲಯ, ಪ್ರಭಾವಲಯ, ಮತ್ತು ಸೌರಗೋಳ. ವಿರಳವಾದ ಹೊರ ವಾಯುಮಂಡಲವಾದ ಸೌರಗೋಳವು ಪ್ಲುಟೊನ ಕಕ್ಷೆಯಿಂದಾಚೆ ಸೌರವಿರಾಮದವರೆಗೂ ವ್ಯಾಪಿಸುತ್ತದೆ. ಸೌರವಿರಾಮದಲ್ಲಿ ಇದರಿಂದ ಒಂದು ಸ್ಫುಟವಾದ ಅಘಾತ ತರಂಗವು ರೂಪುಗೊಳ್ಳುತ್ತದೆ. ವರ್ಣಗೋಳ, ಪರಿವರ್ತನಾ ವಲಯ ಮತ್ತು ಪ್ರಭಾವಲಯಗಳು ಮೇಲ್ಮೈಗಿಂತ ಬಹಳಷ್ಟು ಹೆಚ್ಚು ಬಿಸಿಯಾಗಿವೆ; ಇದರ ಕಾರಣ ಇನ್ನೂ ತಿಳಿದುಬಂದಿಲ್ಲ.
ದ್ಯುತಿಗೋಳದ ಸುಮಾರು ೫೦೦ ಕಿ.ಮೀ. ಮೇಲೆ ಇದ್ದು ಸುಮಾರು ೪,೦೦೦ ಕೆ. ತಾಪಮಾನದಲ್ಲಿರುವ ಪದರವು ಸೂರ್ಯನ ಅತಿ ತಣ್ಣಗಿರುವ ವಲಯ. ಕನಿಷ್ಠ ತಾಪ ವಲಯವೆಂದು ಕರೆಯಲ್ಪಡುವ ಸೂರ್ಯನ ಈ ಪದರವು ಇಂಗಾಲದ ಮಾನಾಕ್ಸೈಡ್ ಮತ್ತು ನೀರಿನಂಥ ಸರಳ ಸಂಯುಕ್ತ ವಸ್ತುಗಳನ್ನು ಇಟ್ಟುಕೊಳ್ಳುವಷ್ಟು ತಣ್ಣಗಿದೆ. ಈ ವಸ್ತುಗಳನ್ನು ಈ ಪದರದ ವರ್ಣಪಟಲದಲ್ಲಿ ಕಂಡುಹಿಡಿಯಬಹುದು.
ಕನಿಷ್ಠ ತಾಪ ವಲಯದ ಮೇಲೆ ೨,೦೦೦ ಕಿ.ಮೀ. ದಪ್ಪವಿರುವ ತೆಳುವಾದ ಒಂದು ಪದರವಿದೆ. ಸೂರ್ಯನ ಪೂರ್ಣ ಗ್ರಹಣದ ಆರಂಭ ಮತ್ತು ಅಂತ್ಯದಲ್ಲಿ ಬಣ್ಣದ ಹೊಳಪಿನಂತೆ ಕಾಣುವ ಈ ವಲಯಕ್ಕೆ ವರ್ಣಗೋಳ ಎಂದು ಹೆಸರು. ಈ ವಲಯದಲ್ಲಿ ತಾಪಮಾನವು ಎತ್ತರದೊಂದಿಗೆ ಹೆಚ್ಚಾಗಿ, ಸುಮಾರು ೧೦೦,೦೦೦-ಕೆ. ಗಳನ್ನು ತಲುಪುತ್ತದೆ.
ವರ್ಣಗೋಳದ ಹೊರಗಿರುವ ಪರಿವರ್ತನಾ ವಲಯದಲ್ಲಿ ತಾಪಮಾನವು ೧೦೦,೦೦೦ ಕೆ. ಯಿಂದ ಪ್ರಭಾವಲಯದ ತಾಪಮಾನದ ಹಾತಿರಕ್ಕೆ (೧೦ ಲಕ್ಷ ಕೆ. ಗಳ ಬಳಿಗೆ) ಏರುತ್ತದೆ. ಹೆಚ್ಚಿನ ತಾಪಮಾನದಲ್ಲಿ ಈ ವಲಯದಲ್ಲಿರುವ ಹೀಲಿಯಂನ ಅಯಾನೀಕರಣವಾಗಿ ಅದರ ರೂಪ ಪರಿವರ್ತನೆಯು ಉಂಟಾಗುವುದರಿಂದ, ತಾಪಮಾನದಲ್ಲಿ ಈ ರೀತಿಯ ಏರಿಕೆಯು ಉಂಟಾಗುತ್ತದೆ. ಪರಿವರ್ತನಾ ವಲಯವು ಒಂದು ಸ್ಥಿರವಾದ ಎತ್ತರದಲ್ಲಿರದೆ, ನಿರಂತರವಾದ ಗೊಂದಲದ ಚಲನೆಯಲ್ಲಿರುತ್ತದೆ. ಈ ವಲಯವು ಭೂಮಿಯ ಮೇಲ್ಮೈಯಿಂದ ಸುಲಭವಾಗಿ ಕಾಣುವುದಿಲ್ಲ. ಬಾಹ್ಯಾಕಾಶದಲ್ಲಿ ಸ್ಥಿತವಾಗಿದ್ದು, ಅತಿನೇರಳೆ ಕಿರಣಗಳನ್ನು ಗ್ರಾಹಿಸುವ ಉಪಕರಣಗಳಿಂದ ಈ ವಲಯವನ್ನು ನೋಡಬಹುದು.
ಸೂರ್ಯನಿಗಿಂತ ಬಹಳಷ್ಟು ಹೆಚ್ಚು ಗಾತ್ರವನ್ನು ಹೊಂದಿರುವ ಸೂರ್ಯನ ಹೊರ-ವಾಯುಮಂಡಲಕ್ಕೆ ಪ್ರಭಾವಲಯ ಎಂದು ಹೆಸರು. ಸೌರಮಂಡಲ ಮತ್ತು ಸೌರಗೋಳವನ್ನು ವ್ಯಾಪಿಸುವ ಸೌರ ಮಾರುತದ ಜೊತೆ ಪ್ರಭಾವಲಯವು ಕ್ರಮೇಣವಾಗಿ ಒಂದಾಗುತ್ತದೆ (ಅಂದರೆ, ಇವೆರಡರ ನಡುವೆ ಸ್ಫುಟವಾದ ಯಾವುದೇ ಮಿತಿರೇಖೆಯಿಲ್ಲ). ಸೂರ್ಯನ ಮೇಲ್ಮೈ ಬಳಿಯಿರುವ ಕೆಳ ಪ್ರಭಾವಲಯವು ಸುಮಾರು ೧೦೧೪ ಮೀ-೩−೧೦೧೬ ಮೀ.-೩ ನಷ್ಟು ಸಾಂದ್ರವಾಗಿದೆ (ಸಾಗರದ ಮಟ್ಟದಲ್ಲಿ ಭೂಮಿಯ ವಾಯುಮಂಡಲವು ಸುಮಾರು ೨×೧೦೨೫ ಮೀ.−೩ ನಷ್ಟು ಸಾಂದ್ರತೆಯನ್ನು ಹೊಂದಿದೆ) ಪ್ರಭಾವಲಯದ ತಾಪಮಾನವು ಹಲವು ಲಕ್ಷ ಕೆಲ್ವಿನ್‌ಗಳಷ್ಟು ಇರುತ್ತದೆ. ಪ್ರಭಾವಲಯದ ತಾಪಮಾನವನ್ನು ಯಶಸ್ವಿಯಾಗಿ ವಿವರಿಸುವ ಯಾವುದೇ ಸಿದ್ಧಾಂತವು ಇನ್ನೂ ಇಲ್ಲದಿದ್ದರೂ, ಪ್ರತ್ಯೇಕ ಕಾಂತಕ್ಷೇತ್ರ ವ್ಯವಸ್ಥೆಗಳ ಒಡನಾಟದಿಂದ ಸ್ವಲ್ಪ ಶಾಖೋತ್ಪತ್ತಿ ಆಗುತ್ತದೆಯೆಂದು ತಿಳಿದುಬಂದಿದೆ.
ಸೌರಗೋಳವು ಸುಮಾರು ೨೦ ಸೌರ ತ್ರಿಜ್ಯಗಳಿಂದ (0.1 AU) ಸೌರಮಂಡಲದ ಹೊರತುದಿಯವರೆಗೂ ವ್ಯಾಪಿಸಿದೆ. ವಾಯು ಪ್ರಕ್ಷುಬ್ಧತೆಗಳು ಆಲ್ಫ್‌ವೆನ್ ತರಂಗಗಳಿಗಿಂತ ವೇಗವಾಗಿ ಚಲಿಸಲಾರವು. ಈ ಕಾರಣದಿಂದ, ಸೌರಗೋಳದಲ್ಲಿ ಉಂಟಾಗುವ ಪ್ರಕ್ಷುಬ್ಧತೆಗಳು ಮತ್ತು ಇತರ ಬಲಗಳು ಪ್ರಭಾವಲಯದ ಆಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಸೌರಮಾರುತವು ಸುರುಳಿಯಾಕಾರದ ಸೌರ ಕಾಂತಕ್ಷೇತ್ರವನ್ನು ರೂಪಿಸುತ್ತಾ, ಸೂರ್ಯನಿಂದ ೫೦ AUಗಳ ದೂರದಲ್ಲಿರುವ ಸೌರವಿರಾಮವನ್ನು ತಲುಪುವವರೆಗೂ ನಿರಂತರವಾಗಿ ಸೂರ್ಯನಿಂದ ದೂರ ಹೋಗುತ್ತಿರುತ್ತದೆ. ಡಿಸೆಂಬರ್ ೨೦೦೪ರಲ್ಲಿ, ಸೌರವಿರಾಮದ ಒಂದು ಭಾಗವೆನ್ನಲಾದ ಆಘಾತ ತರಂಗವೊಂದರ ಮೂಲಕ ವಾಯೇಜರ್ ೧ ಶೋಧಕವು ಹಾದುಹೋಯಿತು. ಸೌರವಿರಾಮವನ್ನು ಸಮೀಪಿಸುತ್ತಿದ್ದಂತೆ, ಈ ಎರಡೂ ಶೋಧಕಗಳು ಹೆಚ್ಚು ಶಕ್ತಿ ಕಣಗಳನ್ನು ದಾಖಲಿಸಿಕೊಂಡವು.[೧೦]
[ಬದಲಾಯಿಸಿ] ಸೌರ ಚಟುವಟಿಕೆಗಳು
[ಬದಲಾಯಿಸಿ] ಸೌರಕಲೆಗಳು ಮತ್ತು ಸೌರಾವರ್ತ
ಸೂಕ್ತವಾದ ಸೋಸಕಗಳಿಂದ ಸೂರ್ಯನನ್ನು ಅವಲೋಕಿಸಿದಾಗ ತಕ್ಷಣ ಕಂಡುಬರುವ ವೈಶಿಷ್ಟ್ಯತೆಗಳಲ್ಲಿ ಸೌರಕಲೆಗಳು ಒಂದು. ಇವು ಸುತ್ತುಮುತ್ತಲಿಗಿಂತ ಕಡಿಮೆ ತಾಪಮಾನದಲ್ಲಿದ್ದು, ಸ್ವಲ್ಪ ಗಾಢವಾಗಿ ಕಾಣುತ್ತವೆ. ಸೌರಕಲೆಗಳಲ್ಲಿ ತೀವ್ರವಾದ ಕಾಂತೀಯ ಚಟುವಟಿಕೆಗಳು ನಡೆಯುತ್ತಿದ್ದು, ಕಾಂತಕ್ಷೇತ್ರವು ಸಂವಹನೆಗೆ ತಡೆಯೊಡ್ಡಿ, ಬಿಸಿಯಾದ ಒಳಭಾಗದಿಂದ ಮೇಲ್ಮೈಗೆ ಶಾಖದ ಸಾರಿಗೆಯನ್ನು ಕಡಿಮೆ ಮಾಡುತ್ತದೆ. ಈ ಕಾಂತಕ್ಷೇತ್ರವು ಪ್ರಭಾವಲಯವನ್ನು ಚೆನ್ನಾಗಿ ಬಿಸಿಮಾಡಿ, ಸೌರ ಜ್ವಾಲೆ ಮತ್ತು ಪ್ರಭಾವಲಯದ ಪದಾರ್ಥದ ವಿಸರ್ಜನೆಗಳ ಮೂಲವಾದ ಸಕ್ರಿಯ ವಲಯಗಳನ್ನು ಉಂಟುಮಾಡುತ್ತದೆ. ದೊಡ್ಡ ಸೌರಕಲೆಗಳು ಸಾವಿರಾರು ಕಿ.ಮೀ. ಗಳಷ್ಟು ಅಗಲ ಇರುತ್ತವೆ.
ಸೂರ್ಯನ ಮೇಲೆ ಕಾಣಬರುವ ಸೌರಕಲೆಗಳ ಸಂಖ್ಯೆಯು ಸ್ಥಿರವಾಗಿರದೆ, ಸೌರಾವರ್ತ ವೆಂದು ಕರೆಯಲಾಗುವ ೧೦-೧೨ ವರ್ಷಗಳ ಅವಧಿಯಲ್ಲಿ ಬದಲಾಗುತ್ತದೆ. ಆವರ್ತದ ಆರಂಭದಲ್ಲಿ ಕೆಲವೇ ಸೌರಕಲೆಗಳು ಕಾಣುತ್ತವೆ ಮತ್ತು ಒಮ್ಮೊಮ್ಮೆ ಒಂದೂ ಕಾಣುವುದಿಲ್ಲ. ಆವರ್ತವು ಮುನ್ನಡೆದಂತೆ, ಈ ಸಂಖ್ಯೆಯು ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಸೌರಕಲೆಗಳು ವಿರುದ್ಧವಾದ ಕಾಂತಧ್ರುವಗಳನ್ನು ಹೊಂದಿರುವ ಜೋಡಿಗಳಾಗಿ ಇರುತ್ತವೆ. ಪ್ರತಿ ಪರ್ಯಾಯ ಆವರ್ತದಲ್ಲಿ ಧ್ರುವೀಯತೆಯು ಬದಲಾಗುತ್ತದೆ. ಅಂದರೆ, ಒಂದು ಆವರ್ತದಲ್ಲಿ ಉತ್ತರ ಕಾಂತೀಯ ಧ್ರುವವನ್ನು ಹೊಂದಿದ ಸೌರಕಲೆಯು ಮುಂದಿನ ಆವರ್ತದಲ್ಲಿ ದಕ್ಷಿಣ ಕಾಂತೀಯ ಧ್ರುವವನ್ನು ಹೊಂದಿರುತ್ತದೆ.
ಅಂತರಿಕ್ಷ ಹವಾಮಾನದ ಮೇಲೆ ಆಳವಾದ ಪ್ರಭಾವವನ್ನು ಬೀರುವ ಸೌರಾವರ್ತವು ಭೂಮಿಯ ಹವಾಮಾನದ ಮೇಲೂ ಪರಿಣಾಮವನ್ನು ಉಂಟುಮಾಡುವಂತೆ ಕಾಣುತ್ತದೆ. ಸೌರಾವರ್ತದ ಆರಂಭ ಕಾಲದಲ್ಲಿ ಭೂಮಿಯ ಮೇಲೆ ತಾಪಮಾನವು ಕಡಿಮೆಯಿರುತ್ತದೆ ಮತ್ತು ಹೆಚ್ಚು ಕಾಲ ವ್ಯಾಪಿಸುವ ಆವರ್ತಗಳಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ೧೭ನೇ ಶತಮಾನದಲ್ಲಿ ಸೌರಾವರ್ತವು ಹಲವು ದಶಕಗಳವರೆಗೆ ಪೂರ್ಣವಾಗಿ ನಿಂತುಹೊಗಿತ್ತೆಂದು ಕಂಡುಬರುತ್ತದೆ; ಈ ಕಾಲದಲ್ಲಿ ಕೆಲವೇ ಸೌರಕಲೆಗಳನ್ನು ಕಾಣಲಾಯಿತು. ಅಲ್ಪಾಯುಷಿ ಹಿಮಯುಗವೆಂದು ಕರೆಯಲಾದ ಈ ಕಾಲದಲ್ಲಿ ಯೂರೋಪ್ ಖಂಡವು ಬಹಳ ತಣ್ಣ ಹವೆಗೆ ಒಳಗಾಯಿತು.[೧೧] ಮರಗಳ ಕಾಂಡದ ಉಂಗುರಗಳ ವಿಶ್ಲೇಷಣೆಗಳಿಂದ ಇದಕ್ಕೂ ಮುಂಚಿನ ಅಲ್ಪಾಯುಷಿ ಸೌರಾವರ್ತಗಳನ್ನು ಕಂಡುಹಿಡಿಯಲಾಗಿದೆ. ಈ ಆವರ್ತಗಳಲ್ಲೂ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿತ್ತು.
[ಬದಲಾಯಿಸಿ] ಸೈದ್ಧಾಂತಿಕ ಸಮಸ್ಯೆಗಳು
[ಬದಲಾಯಿಸಿ] ಸೌರ ನ್ಯೂಟ್ರಿನೊ ಸಮಸ್ಯೆ
ಹಲವು ವರ್ಷಗಳವರೆಗೆ, ಭೂಮಿಯಿಂದ ಪತ್ತೆ ಹಚ್ಚಲಾದ ಸೌರ ಎಲೆಕ್ಟ್ರಾನ್ ನ್ಯೂಟ್ರಿನೊಗಳ ಪ್ರಮಾಣವು, ಸಿದ್ಧಾಂತಗಳು ಸೂಚಿಸಿದ ಪ್ರಮಾಣದ ೩ನೇ ೧ಭಾಗದಷ್ಟು ಮಾತ್ರ ಇದ್ದಿತು. ಅಸಮಂಜಸವೆನಿಸುವ ಈ ಪರಿಣಾಮವನ್ನು ಸೌರ ನ್ಯೂಟ್ರಿನೊ ಸಮಸ್ಯೆ ಎಂದು ಕರೆಯಲಾಯಿತು. ಈ ಸಮಸ್ಯೆಯನ್ನು ಬಗೆಹರಿಸಲೆತ್ನಿಸಿದ ವಾದಗಳು, ಸೂರ್ಯನ ಒಳ ತಾಪಮಾನವು ಕಡಿಮೆಯಿದೆ ಮತ್ತು ಇದರಿಂದ ನ್ಯೂಟ್ರಿನೊಗಳು ಕಡಿಮೆಯಾಗುತ್ತಿವೆಯೆಂದೋ, ಅಥವಾ ನ್ಯೂಟ್ರಿನೊಗಳು ಓಲಾಡಿ, ಕಂಡುಹಿಡಿಯಲಾಗದಂತಹ ಟೌ ಮತ್ತು ಮ್ಯುಆನ್ ರೂಪಗಳಿಗೆ ಮಾರ್ಪಡುತ್ತಿವೆಯೆಂದೋ ಸೂಚಿಸಿದವು.[೧೨] ಸೌರ ನ್ಯೂಟ್ರಿನೊ ಪ್ರಮಾಣವನ್ನು ನಿಖರವಾಗಿ ಮಾಪಿಸಲು ಸಡ್ಬರಿ ನ್ಯೂಟ್ರಿನೊ ವೀಕ್ಷಣಾಲಯ ಮತ್ತು ಕಮಿಯೋಕಂಡೆ ಸೇರಿದಂತೆ, ೮೦ರ ದಶಕದಲ್ಲಿ ಹಲವು ನ್ಯೂಟ್ರಿನೊ ವೀಕ್ಷಣಾಲಯಗಳನ್ನು ನಿರ್ಮಿಸಲಾಯಿತು. ಕಡೆಗೆ, ನ್ಯೂಟ್ರಿನೊಗಳು ಜಡ ಸ್ಥಿತಿಯಲ್ಲಿದ್ದಾಗ ಬಹಳ ಕಡಿಮೆ ದ್ರವ್ಯರಾಶಿಯನ್ನು ಹೊಂದಿದ್ದು ನಿಜವಾಗಿಯೂ ಓಲಾಡುತ್ತವೆ ಎಂದು ಈ ವೀಕ್ಷಣಾಲಯಗಳಲ್ಲಿ ನಡೆದ ಅಧ್ಯಯನಗಳಿಂದ ಕಂಡುಬಂದಿತು.[೧೩]. ಇದಲ್ಲದೆ, ಈ ೩ ವಿಧದ ನ್ಯೂಟ್ರಿನೊಗಳನ್ನು ಸಡ್ಬರಿ ವೀಕ್ಷಕನಾಲಯವು ಪ್ರತ್ಯಕ್ಷವಾಗಿ ಪತ್ತೆ ಹಚ್ಚಿ, ಇವುಗಳ ಒಟ್ಟು ಪ್ರಮಾಣವು ಸೌರ ಮಾದರಿಯ ಸಿದ್ಧಾಂತಗಳೊಂದಿಗೆ ಸಮಂಜಸವಾಗಿದೆ ಎಂದು ಸಾಬೀತು ಮಾಡಿತು. ಆದರೆ, ಇವುಗಳಲ್ಲಿ ೩ನೇ ೧ಭಾಗ ನ್ಯೂಟ್ರಿನೊಗಳು ಮಾತ್ರ ಎಲೆಕ್ಟ್ರಾನ್ ಬಗೆಯ ನ್ಯೂಟ್ರಿನೊಗಳಾಗಿದ್ದವು. ಈ ೩ನೇ ೧ ಅನುಪಾತವು ಕೂಡ ಸಿದ್ಧಾಂತಗಳೊಂದಿಗೆ ಸಮಂಜಸವಾಗಿದೆ.
[ಬದಲಾಯಿಸಿ] ಪ್ರಭಾವಲಯದ ಉಷ್ಣದ ಸಮಸ್ಯೆ
ಸೂರ್ಯನ ಗೋಚರ ಮೇಲ್ಮೈಯು (ದ್ಯುತಿಗೋಳ) ಸುಮಾರು ೬,೦೦೦ ಕೆ. ಗಳ ತಾಪಮಾನವನ್ನು ಹೊಂದಿದೆ. ಇದರ ಮೇಲಿರುವ ಸೌರ ಪ್ರಭಾವಲಯವು ಸುಮಾರು ೧,೦೦೦,೦೦೦-ಕೆ. ಗಳ ತಾಪಮಾನದ ವ್ಯಾಪ್ತಿಯಲ್ಲಿದೆ. ಪ್ರಭಾವಲಯದ ಇಷ್ಟು ಹೆಚ್ಚಿನ ತಾಪಮಾನವು, ಇದು ಕೇವಲ ದ್ಯುತಿಗೋಳದ ನೇರ ಶಾಖದಿಂದಲ್ಲದೆ ಬೇರಾವುದೋ ಶಾಖದ ಮೂಲದಿಂದಲೂ ಬಿಸಿಯಾಗುತ್ತದೆ ಎಂದು ಸೂಚಿಸುತ್ತದೆ.
ದ್ಯುತಿಗೋಳದ ಕೆಳಗಿರುವ ಸಂವಹನ ವಲಯದಲ್ಲಿ ಉಂಟಾಗುವ ಪ್ರಕ್ಷುಬ್ಧ ಚಲನೆಯು ಈ ಹೆಚ್ಚುವರಿ ಶಾಖವನ್ನು ಒದಗಿಸುತ್ತದೆ ಎಂದು ನಂಬಲಾಗಿ, ಇದರ ಬಗ್ಗೆ ಎರಡು ಮುಖ್ಯ ಪ್ರಕ್ರಿಯೆಗಳನ್ನು ಪ್ರತಿಪಾದಿಸಲಾಗಿದೆ. ಮೊದಲನೆಯದು ತರಂಗ ಶಾಖ - ಸಂವಹನ ವಲಯದಲ್ಲಿ ಶಬ್ದ, ಗುರುತ್ವ ಮತ್ತು ಕಾಂತೀಯ ತರಗಂಗಗಳು ಉದ್ಭವವಾಗುತ್ತವೆ. ಈ ಅಲೆಗಳು ಹೊರ ಚಲಿಸಿ ತಮ್ಮ ಶಕ್ತಿಯನ್ನು ಪ್ರಭಾವಲಯದಲ್ಲಿ ಶಾಖದ ರೂಪದಲ್ಲಿ ಹೊರಹಾಕುತ್ತವೆ. ಎರಡನೇ ಪ್ರಕ್ರಿಯೆಯು ಕಾಂತೀಯ ಶಾಖ - ದ್ಯುತಿಗೋಳದ ಚಲನೆಯಿಂದ ನಿರಂತರವಾಗಿ ಕಾಂತೀಯ ಶಕ್ತಿಯು ಉದ್ಭವವಾಗಿ, ಸೌರ ಜ್ವಾಲೆಗಳ ರೂಪದಲ್ಲಿ ಹೊರಹಾಕಲ್ಪಡುತ್ತವೆ.[೧೪]
ಸಧ್ಯದಲ್ಲಿ, ತರಂಗಗಳು ಸಮರ್ಥವಾಗಿ ಶಾಖವನ್ನು ಸಾಗಿಸುತ್ತವೆಯೇ ಎಂದು ದೃಢವಾಗಿ ತಿಳಿದಿಲ್ಲ. ಅಲ್ಫ್ವೆನ್ ತರಂಗಗಳನ್ನು ಉಳಿದು ಬೇರೆಲ್ಲ ತರಂಗಗಳೂ ಪ್ರಭಾವದಿಂದವನ್ನು ತಲುಪುವುದಕ್ಕೆ ಮುಂಚೆಯೇ ವಕ್ರೀಕರಿಸುತ್ತವೆ ಅಥವಾ ಚದುರುತ್ತವೆ ಎಂದು ಕಂಡುಹಿಡಿಯಲಾಗಿದೆ.[೧೫] ಇದಲ್ಲದೆ, ಆಲ್ಫ್‌ವೆನ್ ತರಂಗಗಳು ಪ್ರಭಾವಲಯದಲ್ಲಿ ಸುಲಭವಾಗಿ ಚದುರುವುದಿಲ್ಲ. ಆದ್ದರಿಂದ, ಪ್ರಸ್ತುತದ ಸಂಶೋಧನೆಗಳು ಸೌರ ಜ್ವಾಲೆಯ ಶಾಖದ ಮೂಲವನ್ನು ತಿಳಿಯಲು ಯತ್ನಿಸುತ್ತಿವೆ.
[ಬದಲಾಯಿಸಿ] ದುರ್ಬಲ ಸೂರ್ಯ ಸಮಸ್ಯೆ
ಸುಮಾರು ೩.೮ ರಿಂದ ೨.೫ ಶತಕೋಟಿ ವರ್ಷಗಳ ಹಿಂದೆ ಅರ್ಕಿಯನ್ ಕಾಲದಲ್ಲಿ ಸೂರ್ಯವು ಈಗಿನ ಕೇವಲ ೭೫% ಪ್ರಕಾಶತೆಯನ್ನು ಹೊಂದಿತ್ತೆಂದು ಅದರ ಸೈದ್ಧಾಂತಿಕ ಮಾದರಿಗಳು ಸೂಚಿಸುತ್ತವೆ. ಇಷ್ಟು ದುರ್ಬಲವಾದ ಸೂರ್ಯನ ಶಕ್ತಿಯಿಂದ ಭೂಮಿಯ ಮೇಲಿನ ನೀರು ದ್ರವರೂಪದಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ ಹಾಗೂ ಇದರಿಂದ ಜೀವಿಗಳು ಉದ್ಭವಿಸಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಭೂಮಿಯು ತನ್ನ ಇತಿಹಾಸದಲ್ಲಿ ಸುಮಾರು ಒಂದೇ ತಾಪಮಾನದಲ್ಲಿತ್ತೆಂದೂ, ಮತ್ತು ಹಿಂದಿನ ಕಾಲದ ಭೂಮಿಯು, ವಾಸ್ತವದಲ್ಲಿ ಈಗಿಗಿಂತ ಸ್ವಲ್ಪ ಹೆಚ್ಚೇ ಬಿಸಿಯಾಗಿತ್ತೆಂದೂ, ಭೂವೈಜ್ಞಾನಿಕ ದಾಖಲೆಗಳು ಹೇಳುತ್ತವೆ. ಇದರ ಬಗ್ಗೆ ವಿಜ್ಞಾನಿಗಳಲ್ಲಿ ಈಗಿರುವ ಸಾಮಾನ್ಯ ಒಮ್ಮತವೆಂದರೆ: ಹಿಂದಿನ ಕಾಲದಲ್ಲಿ ಭೂಮಿಯ ವಾಯುಮಂಡಲವು ಈಗಿಗಿಂತ ಹೆಚ್ಚು ಪ್ರಮಾಣದಲ್ಲಿ ಹರಿತ್‌ಗೃಹ ಅನಿಲಗಳನ್ನು ಹೊಂದಿತ್ತು (ಉದಾ: ಇಂಗಾಲದ ಡೈ ಆಕ್ಸೈಡ್ ಮತ್ತು ಅಮೋನಿಯಾ). ಈ ಅನಿಲಗಳು ಶಾಖವನ್ನು ಶೇಖರಿಸಿ, ಅದರಿಂದ ಭೂಮಿಯ ತಾಪಮಾನವನ್ನು ಹೆಚ್ಚಿಸಿದವು.[೧೬]
[ಬದಲಾಯಿಸಿ] ಕಾಂತಕ್ಷೇತ್ರ
ಅದರ ವಿಪರೀತ ತಾಪಮಾನದ ಕಾರಣದಿಂದ, ಸೂರ್ಯನಲ್ಲಿರುವ ಎಲ್ಲಾ ವಸ್ತುಗಳೂ ಅನಿಲ ರೂಪದಲ್ಲಿ ಅಥವಾ ಪ್ಲಾಸ್ಮಾ ರೂಪದಲ್ಲಿವೆ. ಇದರಿಂದ, ಸೂರ್ಯನ ಸಮಭಾಜಕದ ಬಳಿ ಪರಿಭ್ರಮಣವು (ಸುಮಾರು ೨೫ ದಿನಗಳು) ಅದರ ಧ್ರುವಗಳ ಬಳಿಯ ಪರಿಭ್ರಮಣ (ಸುಮಾರು ೩೫ ದಿನಗಳು) ಕಾಲಕ್ಕಿಂತ ಭಿನ್ನವಾಗಿದೆ. ಸೂರ್ಯನ ಅಕ್ಷಾಂಶಗಳ ಭೇದಾತ್ಮಕ ಪರಿಭ್ರಮಣದಿಂದ ಅದರ ಕಾಂತಕ್ಷೇತ್ರದ ರೇಖೆಗಳು ತಿರುಚಿಕೊಳ್ಳುತ್ತವೆ. ಈ ತಿರುಚಿಕೊಂಡ ಕಾಂತ ರೇಖೆಗಳು ಸೂರ್ಯನ ಮೇಲ್ಮೈಯಿಂದ ಕುಣಿಕೆಯಾಕಾರದಲ್ಲಿ ಹೊರಚಿಮ್ಮಿ, ಸೌರಕಲೆಗಳನ್ನು ನಿರ್ಮಿಸುತ್ತವೆ. ಈ ತಿರುಚುವಿಕೆಯಿಂದ ಸೌರ ಉತ್ಪಾದಕವು ಉಂಟಾಗುವುದಲ್ಲದೆ, ಸೂರ್ಯನ ಕಾಂತಕ್ಷೇತ್ರವು ಸುಮಾರು ೧೧ ವರ್ಷಗಳಿಗೊಮ್ಮೆ ದಿಕ್ಕು ಬದಲಾಯಿಸುವುದರಿಂದ, ೧೧-ವರ್ಷಗಳ ಸೌರಾವರ್ತವೂ ಉಂಟಾಗುತ್ತದೆ.
ಅಂತರಗ್ರಹ ಮಾಧ್ಯಮದಲ್ಲಿ ಪ್ಲಾಸ್ಮಾದ ಮೇಲೆ ಸೂರ್ಯನ ಪರಿಭ್ರಮಿಸುವ ಕಾಂತಕ್ಷೇತ್ರದ ಪ್ರಭಾವವು ಸೌರಗೋಳದ ಪ್ರವಾಹ ತೆರೆಯನ್ನು ಉಂಟುಮಾಡುತ್ತದೆ. ಈ ತೆರೆಯು ಬೇರೆ ಬೇರೆ ದಿಕ್ಕುಗಳಲ್ಲಿ ಹೊರಟಿರುವ ಕಾಂತಕ್ಷೇತ್ರಗಳನ್ನು ಬೇರ್ಪಡಿಸುತ್ತದೆ. ಭೂಮಿಯ ಬಳಿ ಸೂರ್ಯನ ಕಾಂತಕ್ಷೇತ್ರಕ್ಕಿರುವ ಶಕ್ತಿಗೂ ಅಂತರಗ್ರಹ ಮಾಧ್ಯಮದಲ್ಲಿರುವ ಪ್ಲಾಸ್ಮಾವೇ ಕಾರಣ. ಅಂತರಿಕ್ಷವು ಸಂಪೂರ್ಣ ನಿರ್ವಾತವಾಗಿದ್ದಿದ್ದರೆ, ಸೂರ್ಯನ ೧೦-೪ ಟೆಸ್ಲ ಕಾಂತಕ್ಷೇತ್ರವು ದೂರದ ಘನಕ್ಕೆ ವಿಲೋಮಾನುಪಾತದಲ್ಲಿ ಕಡಿಮೆಯಾಗಿ, ಸುಮಾರು ೧೦-೧೧ ಟೆಸ್ಲಗಳಷ್ಟು ಇರುತ್ತಿತ್ತು. ಆದರೆ ವಾಸ್ತವದಲ್ಲಿ, ಇದು ಸುಮಾರು ೧೦-೯ ಟೆಸ್ಲಗಳಿರುವಂತೆ ಉಪಗ್ರಹ ಅವಲೋಕನೆಗಳಿಂದ ಕಂಡುಬರುತ್ತದೆ. ಕಾಂತಕ್ಷೇತ್ರದಲ್ಲಿ ಯಾವುದೇ ವಾಹಕ ದ್ರವದ (ಉದಾ: ಅಂತರಗ್ರಹ ಮಾಧ್ಯಮ) ಚಲನೆಯು ವಿದ್ಯುತ್ ಪ್ರವಾಹವನ್ನು ಉಂಟುಮಾಡುತ್ತದೆ. ಈ ಪ್ರವಾಹವು ಇನ್ನಷ್ಟು ಕಾಂತಕ್ಷೇತ್ರವನ್ನು ಉತ್ಪತ್ತಿ ಮಾಡುತ್ತದೆ.
[ಬದಲಾಯಿಸಿ] ಸೌರ ಅವಲೋಕನೆಗಳ ಇತಿಹಾಸ
[ಬದಲಾಯಿಸಿ] ಮುಂಚಿನ ಸೂರ್ಯಾಧ್ಯಯನ
ತನ್ನ ಉಪಸ್ಥಿತಿಯಿಂದ ದಿನವನ್ನೂ ಮತ್ತು ತನ್ನ ಅನುಪಸ್ಥಿತಿಯಿಂದ ರಾತ್ರಿಯನ್ನೂ ಉಂಟುಮಾಡುವ ಒಂದು ಹೊಳಪಿನ ತಟ್ಟೆಯೆಂದು ಸೂರ್ಯನನ್ನು ಮಾನವರು ಮೂಲಭೂತವಾಗಿ ಅರ್ಥಮಾಡಿಕೊಂಡಿದ್ದರು. ಹಲವು ಪ್ರಾಚೀನ ಮತ್ತು ಇತಿಹಾಸಪೂರ್ವ ಸಂಸ್ಕೃತಿಗಳಲ್ಲಿ ಸೂರ್ಯನನ್ನು ಒಂದು ದೇವತೆ ಅಥವಾ ಅಲೌಕಿಕ ಸಂಗತಿಯೆಂದು ಭಾವಿಸಲಾಗಿತ್ತು. ದಕ್ಷಿಣ ಅಮೆರಿಕದ ಇಂಕಾ ಮತ್ತು ಆಜ್‌ಟೆಕ್ ನಾಗರಿಕತೆಗಳಲ್ಲಿ ಸೂರ್ಯನ ಪೂಜೆಯು ಪ್ರಮುಖ ಸ್ಥಾನವನ್ನು ಪಡೆದಿತ್ತು. ಪ್ರಾಚೀನ ಕಾಲದಲ್ಲಿ ಹಲವು ಸ್ಮಾರಕಗಳು ಸೂರ್ಯನಿಗಾಗಿ ನಿರ್ಮಿತವಾಗಿದ್ದವು. ಉದಾಹರಣೆಗೆ, ದೊಡ್ಡ ಕಲ್ಲಿನ ಕಟ್ಟಡಗಳು ಕರ್ಕಾಟಕ ಸಂಕ್ರಾಂತಿಯನ್ನು ನಿಖರವಾಗಿ ಗುರುತಿಸುತ್ತಿದ್ದವು (ಇಂತಹ ಕಟ್ಟಡಗಳು ಈಜಿಪ್ಟ್‌ನ ನಬ್ತ ಪ್ಲಯ ಮತ್ತು ಇಂಗ್ಲೆಂಡ್‌ನ ಸ್ಟೋನ್ ಹೆಂಜ್ನಲ್ಲಿ ಕಾಣಬರುತ್ತವೆ); ಮೆಕ್ಸಿಕೊನ ಎಲ್ ಕ್ಯಾಸ್ಟಿಲೊ ಪಿರಮಿಡ್, ತುಲಾ ಮತ್ತು ಮಕರ ಸಂಕ್ರಾಂತಿಯಂದು ಸರ್ಪಗಳ ಆಕಾರದ ನೆರಳನ್ನು ಉಂಟುಮಾಡುವಂತೆ ರಚಿತವಾಗಿದೆ.