ಪಾಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Moss
Temporal range: Carboniferous[೧] – recent
"Muscinae" from Ernst Haeckel's Kunstformen der Natur, 1904
Scientific classification
ಸಾಮ್ರಾಜ್ಯ:
Plantae
Division:
Bryophyta

Classes [೨]

ಪಾಚಿಗಳು ಸಣ್ಣ, ಮೆದು ಸಸ್ಯಗಳು. ಇವುಗಳಲ್ಲಿ ಕೆಲವು ಜಾತಿಗಳು ಹೆಚ್ಚು ದೊಡ್ಡದಿದ್ದರೂ, ಮಾದರಿಯಾಗಿ 1–10 ಸೆಂ.ಮೀ (0.4–4 ಇಂಚು)ನಷ್ಟು ಉದ್ದವಿರುತ್ತವೆ. ಅವು ಸಾಮಾನ್ಯವಾಗಿ ತೇವ ಮತ್ತು ನೆರಳಿನ ಪ್ರದೇಶಗಳಲ್ಲಿ ಒಟ್ಟಿಗೆ ಗುಂಪಾಗಿ ಅಥವಾ ಪೊದೆಗಳಾಗಿ ಬೆಳೆಯುತ್ತವೆ. ಅವು ಹೂವು ಅಥವಾ ಬೀಜಗಳನ್ನು ಹೊಂದಿರುವುದಲ್ಲಿ ಹಾಗೂ ಅವುಗಳ ಎಲೆಗಳು ತೆಳ್ಳಗಿನ ತಂತಿಯಂಥ ಕಾಂಡಗಳನ್ನು ಮುಚ್ಚಿರುತ್ತವೆ. ಕೆಲವೊಮ್ಮೆ ಪಾಚಿಗಳು ಬೀಜಕ ಕೋಶಗಳನ್ನು ಉತ್ಪತ್ತಿ ಮಾಡುತ್ತವೆ. ಅವು ತೆಳ್ಳಿಗಿನ ಕಾಂಡಗಳ ಮೇಲೆ ಕೊಕ್ಕಿನಂಥ ಕೋಶಗಳಂತೆ ಕಾಣಿಸುತ್ತವೆ.

ಪಾಚಿಯ ಸರಿಸುಮಾರು 12,000 ಜಾತಿಗಳನ್ನು ಬ್ರಯೋಫೈಟ ದಲ್ಲಿ ವರ್ಗೀಕರಿಸಲಾಗಿದೆ.[೨] ಬ್ರಯೋಫೈಟ ವಿಭಾಗವು ಹಿಂದೆ ಪಾಚಿಗಳನ್ನು ಮಾತ್ರವಲ್ಲದೆ ಲಿವರ್‌ವರ್ಟ್‌ಗಳು ಮತ್ತು ಹಾರ್ನ್‌ವರ್ಟ್‌ಗಳನ್ನೂ ಒಳಗೊಂಡಿತ್ತು. ಬ್ರಯೋಫೈಟ್ಗಳ ಈ ಎರಡು ಇತರ ಗುಂಪುಗಳನ್ನು ಈಗ ಅವುಗಳ ಸ್ವಂತ ವಿಭಾಗದಲ್ಲಿರಿಸಲಾಗಿದೆ.

ಭೌತಿಕ ಲಕ್ಷಣಗಳು[ಬದಲಾಯಿಸಿ]

ವಿವರಣೆ[ಬದಲಾಯಿಸಿ]

ಸಸ್ಯ ವಿಜ್ಞಾನದ ಪ್ರಕಾರ, ಪಾಚಿಗಳು ಬ್ರಯೋಫೈಟ್‌ಗಳು ಅಥವಾ ನಾಳಗಳಿಲ್ಲದ ಸಸ್ಯಗಳಾಗಿವೆ. ಅವುಗಳನ್ನು ತೋರಿಕೆಗೆ ಅದೇ ರೀತಿಯ ಕಾಣುವ ಲಿವರ್‌ವರ್ಟ್‌ಗಳಿಂದ (ಮಾರ್ಚಂಟಿಯೊಫೈಟ ಅಥವಾ ಹೆಪಾಟಿಕೆ) ಅವುಗಳ ಬಹು-ಕೋಶೀಯ ರೈಸಾಯ್ಡ್(ಪಾಚಿಗಳ, ಜರೀಗಿಡ ಮೊದಲಾದವುಗಳ ಬೇರಿನ ರೋಮ)ಗಳ ಮೂಲಕ ಪ್ರತ್ಯೇಕಿಸಬಹುದು. ಎಲ್ಲಾ ಪಾಚಿಗಳಿಗೆ ಮತ್ತು ಎಲ್ಲಾ ಲಿವರ್‌ವರ್ಟ್‌ಗಳಿಗೆ ಇತರ ವ್ಯತ್ಯಾಸಗಳು ಸರ್ವಸಾಮಾನ್ಯವಾದುದಲ್ಲ. ಆದರೆ ಸ್ಪಷ್ಟವಾಗಿ ಬೇರ್ಪಡಿಸಬಹುದಾದ "ಕಾಂಡ" ಮತ್ತು "ಎಲೆಗಳು", ಅಧಿಕವಾಗಿ ಹಾಲೆಗಳಿರುವ ಅಥವಾ ವಿಭಜಿತವಾಗಿರುವ ಎಲೆಗಳು ಇಲ್ಲದಿರುವುದು ಮತ್ತು ಮೂರು ಶ್ರೇಣಿಗಳಲ್ಲಿ ಜೋಡಿಸಲ್ಪಟ್ಟಿರುವ ಎಲೆಗಳು ಇವೆಲ್ಲವೂ ಸಸ್ಯವು ಪಾಚಿಯೆಂಬುದನ್ನು ಸೂಚಿಸುತ್ತವೆ.

ನಾಳೀಯ ರಚನೆಯನ್ನು ಹೊಂದಿಲ್ಲದೆ ಇರುವುದರೊಂದಿಗೆ ಪಾಚಿಗಳು ಗ್ಯಾಮಿಟೊಫೈಟ್-ಪ್ರಧಾನ ಜೀವನ ಚಕ್ರವನ್ನು ಹೊಂದಿರುತ್ತವೆ. ಅಂದರೆ ಸಸ್ಯದ ಕೋಶಗಳು ಅವುಗಳ ಜೀವಿತದ ಹೆಚ್ಚಿನ ಅವಧಿಯಲ್ಲಿ ಹ್ಯಾಪ್ಲಾಯ್ಡ್ಗಳಾಗಿರುತ್ತವೆ. ಸ್ಪೋರೊಫೈಟ್‌ಗಳು (ಅಂದರೆ ಜೋಡಿ ವರ್ಣತಂತುಕ(ಡಿಪ್ಲಾಯ್ಡ್) ಸಸ್ಯ) ಅಲ್ಪ-ಕಾಲ ಬದುಕುತ್ತವೆ ಮತ್ತು ಗ್ಯಾಮಿಟೊಫೈಟ್‌ಗಳನ್ನು ಅವಲಂಬಿಸಿರುತ್ತವೆ. ಇದು ಹೆಚ್ಚಿನ "ಎತ್ತರದ" ಸಸ್ಯಗಳು ಮತ್ತು ಹೆಚ್ಚಿನ ಪ್ರಾಣಿಗಳು ವ್ಯಕ್ತಪಡಿಸುವ ಮಾದರಿಗೆ ವಿರುದ್ಧವಾಗಿದೆ. ಬೀಜದ ಸಸ್ಯಗಳಲ್ಲಿ, ಉದಾಹರಣೆಗಾಗಿ, ಹ್ಯಾಪ್ಲಾಯ್ಡ್ ಸಂತಾನೋತ್ಪತ್ತಿಯನ್ನು ಪರಾಗ ಮತ್ತು ಅಂಡಾಣುಗಳಿಂದ ನಡೆಯುತ್ತದೆ. ಜೋಡಿ ವರ್ಣತಂತುಕ ಸಂತಾನೋತ್ಪತ್ತಿಯು ಹೂಬಿಡುವ ಸಸ್ಯಗಳಲ್ಲಿ ಸಾಮಾನ್ಯವಾಗಿರುತ್ತದೆ.

ಜೀವನ ಚಕ್ರ[ಬದಲಾಯಿಸಿ]

ಹೆಚ್ಚಿನ ರೀತಿಯ ಸಸ್ಯಗಳು ಅವುಗಳ ಸಸ್ಯಕ ಜೀವಕೋಶಗಳಲ್ಲಿ ಎರಡು ಜೊತೆ ಕ್ರೋಮೋಸೋಮ್ಗಳನ್ನು ಹೊಂದಿರುತ್ತವೆ ಮತ್ತು ಅವನ್ನು ಜೋಡಿ ವರ್ಣತಂತುಕಗಳೆಂದು ಕರೆಯಲಾಗುತ್ತದೆ. ಅಂದರೆ ಪ್ರತಿಯೊಂದು ಕ್ರೋಮೋಸೋಮ್ ಅದೇ ರೀತಿಯ ಆನುವಂಶಿಕ ಸಂದೇಶವನ್ನು ಒಳಗೊಂಡಿರುವ ಜೊತೆಯನ್ನು ಹೊಂದಿರುತ್ತದೆ. ಇದಕ್ಕೆ ವಿರುದ್ಧವಾಗಿ, ಪಾಚಿಗಳು ಮತ್ತು ಇತರ ಬ್ರಯೋಫೈಟ್‌ಗಳು ಒಂದು ಜೊತೆ ಕ್ರೋಮೋಸೋಮ್‌ಗಳನ್ನು ಹೊಂದಿರುತ್ತವೆ, ಆದ್ದರಿಂದ ಅವುಗಳನ್ನು ಹ್ಯಾಪ್ಲಾಯ್ಡ್ಗಳೆಂದು ಕರೆಯಲಾಗುತ್ತದೆ (ಅಂದರೆ ಪ್ರತಿಯೊಂದು ಕ್ರೋಮೋಸೋಮ್‌ ಜೀವಕೋಶದೊಳಗೆ ಏಕಮಾತ್ರವಾಗಿರುತ್ತದೆ). ಪಾಚಿಯು ಎರಡು ಜೊತೆ ಕ್ರೋಮೋಸೋಮ್‌ಗಳನ್ನು ಹೊಂದುವಾಗ ಅದರ ಜೀವನ ಚಕ್ರದಲ್ಲಿ ಅದಕ್ಕಾಗಿ ಅವಧಿಗಳಿರುತ್ತವೆ. ಆದರೆ ಇದು ಕೇವಲ ಸ್ಪೋರೊಫೈಟ್ ಹಂತದಲ್ಲಿ ಮಾತ್ರ ನಡೆಯುತ್ತದೆ.

ಮಾದರಿ ಪಾಚಿಯ (ಪಾಲಿಟ್ರಿಕಮ್ ಕಮ್ಯೂನ್) ಜೀವನ ಚಕ್ರ

ಪಾಚಿಯ ಜೀವನವು ಹ್ಯಾಪ್ಲಾಯ್ಡ್ ಬೀಜಕದಿಂದ ಆರಂಭವಾಗುತ್ತದೆ. ಬೀಜಕವು ಎಳೆಯಂಥ ತಂತು ಅಥವಾ ಥ್ಯಾಲಸ್‌ಗಳಿರುವ (ಚಪ್ಪಟೆ ಮತ್ತು ಥ್ಯಾಲಸ್‌ನಂಥ) ರಟನೆಯಾದ ಪ್ರೋಟೊನೆಮ (ಬಹುವಚನ ಪ್ರೋಟೊನೆಮಟ)ವನ್ನು ಉತ್ಪತ್ತಿ ಮಾಡಲು ಚಿಗುರೊಡೆಯುತ್ತದೆ. ಪಾಚಿ ಪ್ರೋಟೊನೆಮಟವು ವೈಶಿಷ್ಟ್ಯವಾಗಿ ತೆಳು ಹಸಿರು ಫೆಲ್ಟಿನಂತೆ ಕಾಣಿಸುತ್ತದೆ. ಇದು ತೇವ ಮಣ್ಣು, ಮರದ ತೊಗಟೆ, ಕಲ್ಲು, ಕಾಂಕ್ರೀಟ್ ಅಥವಾ ಇತರ ಯಾವುದೇ ಹೆಚ್ಚುಕಡಿಮೆ ಸ್ಥಿರ ಮೇಲ್ಮೈನಲ್ಲಿ ಬೆಳೆಯುತ್ತದೆ. ಇದು ಪಾಚಿಯ ಜೀವನ ಚಕ್ರದಲ್ಲಿ ಕಿಂಚಿತ್ ಕಾಲದ ಹಂತವಾಗಿದೆ. ನಂತರ ಪ್ರೋಟೊನೆಮದಿಂದ ಗ್ಯಾಮಿಟೊಫೋರ್ ("ಗ್ಯಾಮಿಟ್-ಧಾರಕ") ಬೆಳೆಯುತ್ತದೆ. ಅದನ್ನು ಕಾಂಡ ಮತ್ತು ಎಲೆಗಳಾಗಿ ರಚನಾತ್ಮಕವಾಗಿ ಪ್ರತ್ಯೇಕಿಸಬಹುದಾಗಿರುತ್ತದೆ. ಒಂದು ಸಣ್ಣ ಗುಂಪಿನಷ್ಟು ಪ್ರೋಟೊನೆಮಟವು ಅನೇಕ ಗ್ಯಾಮಿಟೊಫೋರ್ ಕುಡಿಗಳನ್ನು ಬೆಳೆಸುತ್ತದೆ. ಇದರಿಂದ ಪಾಚಿಯ ಒಂದು ರಾಶಿಯೇ ಉತ್ಪತ್ತಿಯಾಗುತ್ತದೆ.

ಗ್ಯಾಮಿಟೊಫೋರ್ ಕಾಂಡ ಮತ್ತು ರೆಂಬೆಗಳ ತುದಿಯಿಂದ ಪಾಚಿಗಳ ಸಂತಾನೋತ್ಪತ್ತಿ ಅಂಗಗಳು ಬೆಳೆಯುತ್ತವೆ. ಹೆಣ್ಣು ಭಾಗಗಳನ್ನು ಆರ್ಕಿಗೋನಿಯಾ (ಏಕವಚನ ಆರ್ಕಿಗೋನಿಯಂ) ಎಂದು ಕರೆಯಲಾಗುತ್ತದೆ. ಇವು ಪೆರಿಚೇಟಮ್ (ಬಹುವಚನದಲ್ಲಿ ಪೆರಿಚೇಟ) ಎಂಬ ಮಾರ್ಪಡಿತ ಎಲೆಗಳ ಗುಂಪಿನಿಂದ ರಕ್ಷಿಸಲ್ಪಡುತ್ತವೆ. ಆರ್ಕಿಗೋನಿಯಾ ಕೆಳಗೆ ಗಂಡು ಸ್ಪರ್ಮ್ ಇರುವ ತೆರೆದ ಕತ್ತಿನೊಂದಿಗೆ (ವೆಂಟರ್) ಸೀಸೆಯಾಕಾರದ ಕೋಶಗಳ ಗುಂಪುಗಳಾಗಿವೆ. ಗಂಡು ಭಾಗಗಳನ್ನು ಆಂತೆರಿಡಿಯಾ (ಏಕವಚನ ಆಂತೆರಿಡಿಯಮ್) ಎಂದು ಕರೆಯಲಾಗುತ್ತದೆ. ಇವು ಪೆರಿಗೋನಿಯಮ್ (ಬಹುವಚನ ಪೆರಿಗೋನಿಯ) ಎನ್ನುವ ಮಾರ್ಪಡಿತ ಎಲೆಗಳಿಂದ ಆವೃತವಾಗಿರುತ್ತವೆ. ಕೆಲವು ಪಾಚಿಗಳಲ್ಲಿ ಈ ಆವೃತವಾಗಿರುವ ಎಲೆಗಳು ಎರಚುವ-ಬಟ್ಟಲಿನ ರಚನೆಯನ್ನು ರೂಪಿಸುತ್ತವೆ. ಇದು ಬಟ್ಟಲಿನಲ್ಲಿರುವ ಸ್ಪರ್ಮ್ ನೀರಿನ ಹನಿಗಳು ಬೀಳುವುದರಿಂದ ಹತ್ತಿರದ ಕಾಂಡಕ್ಕೆ ಎರಚಲ್ಪಡುತ್ತದೆ.

ಪಾಚಿಗಳು ಡಯೋಕಸ್(dioicous) (ಬೀಜದ ಸಸ್ಯಗಳ ಡಯಾಶಿಯಸ್(dioecious ) ಒಂದಿಗೆ ಹೋಲಿಸಿ) ಅಥವಾ ಮೋನೊಯ್ಕಸ್(monoicous) (ಮೋನೊಶಿಯಸ್(monoecious) ಒಂದಿಗೆ ಹೋಲಿಸಿ) ಆಗಿರುತ್ತದೆ. ಡಯೋಕಸ್ ಪಾಚಿಗಳಲ್ಲಿ, ಗಂಡು ಮತ್ತು ಹೆಣ್ಣು ಸಂತಾನೋತ್ಪತ್ತಿ ಅಂಗಗಳು ಬೇರೆ ಬೇರೆ ಗ್ಯಾಮಿಟೊಫೈಟ್ ಸಸ್ಯಗಳಲ್ಲಿ ಬೆಳೆಯುತ್ತವೆ. ಮೋನೊಯ್ಕಸ್ (ಆಟೊಯ್ಕಸ್ ಎಂದೂ ಕರೆಯುತ್ತಾರೆ) ಪಾಚಿಗಳಲ್ಲಿ, ಎರಡೂ ಒಂದೇ ಸಸ್ಯದಲ್ಲಿ ಬೆಳೆಯುತ್ತವೆ. ನೀರಿನ ಅಸ್ತಿತ್ವದಲ್ಲಿ, ಆಂತೆರಿಡಿಯಾದ ಸ್ಪರ್ಮ್ ಆರ್ಕಿಗೋನಿಯಾಕ್ಕೆ ಹರಿಯಲ್ಪಡುತ್ತದೆ. ಇದರಿಂದ ಫಲೀಕರಣ ಉಂಟಾಗಿ, ಜೋಡಿ ವರ್ಣತಂತುಕ ಸ್ಪೋರೊಫೈಟ್‌ನ ಉತ್ಪತ್ತಿಯಾಗುತ್ತದೆ. ಪಾಚಿಗಳ ಸ್ಪರ್ಮ್ ಬೈಫ್ಲಾಗೆಲ್ಲೇಟ್ ಆಗಿರುತ್ತದೆ, ಅಂದರೆ ಅವು ಮುಂದೂಡುವಿಕೆಯಲ್ಲಿ ನೆರವಾಗುವ ಎರಡು ಫ್ಲಾಗೆಲ್ಲಾವನ್ನು ಹೊಂದಿರುತ್ತವೆ. ಸ್ಪರ್ಮ್ ಆರ್ಕೆಗೋನಿಯಮ್‌ಗೆ ಹರಿದುಕೊಂಡು ಹೋಗಬೇಕಾದ್ದರಿಂದ, ಫಲೀಕರಣವು ನೀರಿಲ್ಲದೆ ನಡೆಯುವುದಿಲ್ಲ. ಫಲೀಕರಣದ ನಂತರ, ಬೆಳೆದಿರದ ಸ್ಪೋರೊಫೈಟ್ ಅದರ ದಾರಿಯನ್ನು ಆರ್ಕಿಗೋನಿಯಲ್ ವೆಂಟರ್‌ನಿಂದ ಹೊರಗೆ ತಳ್ಳುತ್ತದೆ. ಸ್ಪೋರೊಫೈಟ್ ಬೆಳೆಯಲು ಮೂರು ತಿಂಗಳಿಂದ ಆರು ತಿಂಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಸ್ಪೋರೊಫೈಟ್, ಸೇಟ ಎನ್ನುವ ಉದ್ದನೆಯ ಕಾಂಡವನ್ನು ಮತ್ತು ಒಪೆರ್ಕಲಮ್ ಎನ್ನುವ ಟೋಪಿಯಿಂದ ಮುಚ್ಚಲ್ಪಟ್ಟ ಬೀಜಕೋಶವನ್ನು ಹೊಂದಿರುತ್ತದೆ. ಬೀಜಕೋಶ ಮತ್ತು ಒಪೆರ್ಕಲಮ್, ಆರ್ಕಿಗೋನಿಯಲ್ ವೆಂಟರ್‌ನ ಉಳಿದ ಭಾಗವಾದ ಹ್ಯಾಪ್ಲಾಯ್ಡ್ ಕ್ಯಾಲಿಪ್ಟ್ರದಿಂದ ಆವರಿಸಲ್ಪಟ್ಟಿರುತ್ತದೆ. ಕ್ಯಾಲಿಪ್ಟ್ರವು ಸಾಮಾನ್ಯವಾಗಿ ಬೀಜಕೋಶವು ಬೆಳೆದಂತೆ ಬಿದ್ದುಹೋಗುತ್ತದೆ. ಬೀಜಕೋಶದೊಳಗೆ ಬೀಜಕ-ಉತ್ಪತ್ತಿ ಮಾಡುವ ಜೀವಕೋಶಗಳು ಮಿಯಾಸಿಸ್ಗೆ ಒಳಗಾಗಿ ಹ್ಯಾಪ್ಲಾಯ್ಡ್ ಬೀಜಕಗಳನ್ನು ಉತ್ಪಾದಿಸುತ್ತವೆ. ಇದರಿಂದ ಚಕ್ರವು ಮತ್ತೆ ಆರಂಭವಾಗುತ್ತದೆ. ಬೀಜಕೋಶಗಳ ತೆರೆದ ಭಾಗವು ಸಾಮಾನ್ಯವಾಗಿ ಪೆರಿಸ್ಟೋಮ್ ಎನ್ನುವ ಚೂಪುತುದಿಗಳಿಂದ ಸುತ್ತಲ್ಪಟ್ಟಿರುತ್ತದೆ. ಇದು ಕೆಲವು ಪಾಚಿಗಳಲ್ಲಿ ಇಲ್ಲದಿರಬಹುದು.

ಕೆಲವು ಪಾಚಿಗಳಲ್ಲಿ, ಉದಾ. ಉಲೋಟ ಫಿಲ್ಲಾಂತ , ಗೆಮ್ಮೆ ಎನ್ನುವ ಹಸಿರು ಸಸ್ಯಕ ರಚನೆಗಳು ಎಲೆಗಳಲ್ಲಿ ಅಥವಾ ರೆಂಬೆಗಳಲ್ಲಿ ಹುಟ್ಟಿಕೊಳ್ಳುತ್ತವೆ. ಅವು ಫಲೀಕರಣದ ಚಕ್ರವನ್ನು ಪ್ರವೇಶಿಸದೆ, ತುಂಡಾಗಿ ಹೊಸ ಸಸ್ಯಗಳಾಗುತ್ತವೆ. ಇದನ್ನು ನಿರ್ಲಿಂಗ ಸಂತಾನೋತ್ಪತ್ತಿ ಎನ್ನಲಾಗುತ್ತದೆ. ಆನುವಂಶಿಕವಾಗಿ ಅಭಿನ್ನವಾದ ಅಂಶಗಳು ಅಬೀಜ ಸಂತಾನದ ತಳಿಗಳನ್ನು ಸೃಷ್ಟಿಸುತ್ತವೆ.

ವರ್ಗೀಕರಣ[ಬದಲಾಯಿಸಿ]

ಸಾಂಪ್ರದಾಯಿಕವಾಗಿ, ಪಾಚಿಗಳನ್ನು ಲಿವರ್‌ವರ್ಟ್‌ಗಳು ಮತ್ತು ಹಾರ್ನ್‌ವರ್ಟ್‌ಗಳೊಂದಿಗೆ ಬ್ರಯೋಫೈಟ (ಬ್ರಯೋಫೈಟ್‌ಗಳು) ವಿಭಾಗದಲ್ಲಿ ವರ್ಗೀಕರಿಸಲಾಗಿತ್ತು. ಅದರಲ್ಲಿ ಪಾಚಿಗಳು ಮಸ್ಕಿ ಎನ್ನುವ ವರ್ಗದಲ್ಲಿ ಬರುತ್ತಿದ್ದವು. ಬ್ರಯೋಫೈಟದ ಈ ನಿರೂಪಣೆಯು ಪ್ಯಾರಫೆಲಿಟಿಕ್ ಆಗಿತ್ತು. ಈಗ ಅದನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ವರ್ಗೀಕರಣದಲ್ಲಿ, ಬ್ರಯೋಫೈಟ ವಿಭಾಗವು ಕೇವಲ ಪಾಚಿಗಳನ್ನೂ ಮಾತ್ರ ಹೊಂದಿದೆ.

ಪಾಚಿಗಳನ್ನು ಈಗ ಹೆಸರಿಸಿದ ಬ್ರಯೋಫೈಟ ಎಂಬ ಏಕ ವಿಭಾಗವಾಗಿ ಹಾಗೂ ಎಂಟು ವರ್ಗಗಳಾಗಿ ವರ್ಗೀಕರಿಸಲಾಗಿದೆ:

ವಿಭಾಗ ಬ್ರಯೋಫೈಟ
ವರ್ಗ ಟ್ಯಾಕಕಿಯೊಪ್ಸಿಡ
ವರ್ಗ ಸ್ಫ್ಯಾಗ್ನೊಪ್ಸಿಡ
ವರ್ಗ ಆಂಡ್ರಿಯೋಪ್ಸಿಡ
ವರ್ಗ ಆಂಡ್ರಿಯೋಬ್ರಿಯಾಪ್ಸಿಡ
ವರ್ಗ ಆಡಿಪೊಡಿಯೋಪ್ಸಿಡ
ವರ್ಗ ಪಾಲಿಟ್ರಿಕಾಪ್ಸಿಡ
ವರ್ಗ ಟೆಟ್ರಾಫಿಡಾಪ್ಸಿಡ
ವರ್ಗ ಬ್ರಿಯಾಪ್ಸಿಡ


liverworts






hornworts



vascular plants



Bryophyta

Takakiopsida



Sphagnopsida




Andreaeopsida



Andreaeobryopsida




Oedipodiopsida




Tetraphidopsida



Polytrichopsida



Bryopsida









ಬ್ರಯೋಫೈಟದ ಪ್ರಸ್ತುತದ ಜೀವವಿಕಾಸ ಮತ್ತು ಸಂಯೋಜನೆ.[೨][೩]
USAಯ ಪೆನ್ನಿಸಿಲ್ವೇನಿಯಾದ ಅಲ್ಲೆಘೆನಿ ನ್ಯಾಷನಲ್ ಫಾರೆಸ್ಟ್‌ನ ಪಾಚಿ

ಎಂಟರಲ್ಲಿ ಆರು ವರ್ಗಗಳು ಕೇವಲ ಒಂದು ಅಥವಾ ಎರಡು ಜಾತಿಗಳನ್ನು ಮಾತ್ರ ಹೊಂದಿವೆ. ಪಾಲಿಟ್ರಿಕಾಪ್ಸಿಡವು 23 ಜಾತಿಗಳನ್ನು ಒಳಗೊಂಡಿದೆ. ಬ್ರಿಯಾಪ್ಸಿಡವು ಹೆಚ್ಚಿನ ಪಾಚಿ ವೈವಿಧ್ಯತೆಗಳನ್ನು ಒಳಗೊಳ್ಳವುದರೊಂದಿಗೆ, ಸುಮಾರು 95%ನಷ್ಟು ಪಾಚಿ ಜಾತಿಗಳು ಈ ವರ್ಗಕ್ಕೆ ಸೇರಿವೆ.

ಇದ್ದಿಲು-ಪಾಚಿಗಳಾದ ಸ್ಫ್ಯಾಗ್ನೋಪ್ಸಿಡವು ಎರಡು ಈಗಲೂ ಇರುವ ಜಾತಿಗಳಾದ ಆಂಬುಚನೇನಿಯ ಮತ್ತು ಸ್ಫ್ಯಾಗ್ನಮ್ ಅನ್ನು ಹಾಗೂ ಪುರಾತನ ಗುಂಪುಗಳನ್ನೂ ಒಳಗೊಂಡಿದೆ. ಸ್ಫ್ಯಾಗ್ನಮ್ ಜಾತಿಯು ಭಿನ್ನವಾದ, ವ್ಯಾಪಕವಾಗಿ ಹರಡಿರುವ ಮತ್ತು ಆರ್ಥಿಕವಾಗಿ ಪ್ರಮುಖವಾದುದಾಗಿದೆ. ಈ ದೊಡ್ಡ ಪಾಚಿಗಳು ಇದ್ದಿಲು-ಜೌಗು ಪ್ರದೇಶಗಳಲ್ಲಿ ವ್ಯಾಪಕವಾಗಿ ಆಮ್ಲೀಯ ಜೌಗನ್ನು ಉಂಟುಮಾಡುತ್ತವೆ. ಸ್ಫ್ಯಾಗ್ನಮ್ ನ ಎಲೆಗಳು ದ್ಯುತಿಸಂಶ್ಲೇಷಣೆಯ ಜೀವಕೋಶಗಳೊಂದಿಗೆ ಪರ್ಯಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಸತ್ತ ಜೀವಕೋಶಗಳನ್ನು ಹೊಂದಿರುತ್ತವೆ. ಈ ಸತ್ತ ಜೀವಕೋಶಗಳು ನೀರು ಸಂಗ್ರಹಿಸಲು ಸಹಾಯ ಮಾಡುತ್ತವೆ. ಈ ಲಕ್ಷಣದ ಹೊರತಾಗಿ, ಅಭಿನ್ನ ಕೊಂಬೆ ಥ್ಯಾಲಸ್ (ಚಪ್ಪಟೆ ಮತ್ತು ವಿಸ್ತಾರವಾದ) ಪ್ರೋಟೊನೆಮ ಮತ್ತು ಸಿಡಿದು ಹೋಗುವ ಬೀಜಕಧಾರಿಗಳು ಇದನ್ನು ಇತರ ಪಾಚಿಗಳಿಂದ ಪ್ರತ್ಯೇಕವಾಗಿಸುತ್ತವೆ.

ಆಂಡ್ರಿಯೋಪ್ಸಿಡ ಮತ್ತು ಆಂಡ್ರಿಯೋಬ್ರಿಯಾಪ್ಸಿಡ, ಬೈಸೆರಿಯೇಟ್ (ಎರಡು ಸಾಲಿನ ಜೀವಕೋಶಗಳು) ರೈಸಾಯ್ಡ್‌ಗಳು, ಮಲ್ಟಿಸೆರಿಯೇಟ್ (ಅನೇಕ ಸಾಲುಗಳ ಜೀವಕೋಶಗಳು) ಪ್ರೋಟೊನೆಮ ಮತ್ತು ಉದ್ದದ್ದವಾಗಿ ಸಿಡಿಯುವ ಬೀಜಕಧಾರಿಗಳಿಂದ ಭಿನ್ನವಾಗಿರುತ್ತವೆ. ಹೆಚ್ಚಿನ ಪಾಚಿಗಳು ಮೇಲ್ಭಾಗದಲ್ಲಿ ತೆರೆದಿರುವ ಬೀಜಕೋಶಗಳನ್ನು ಹೊಂದಿರುತ್ತವೆ.

ಪಾಲಿಟ್ರಿಕೋಪ್ಸಿಡವು ಸಮಾಂತರ ಲ್ಯಾಮೆಲ್ಲಾಗಳ ರಚನೆಯಿರುವ ಎಲೆಗಳನ್ನು ಹೊಂದಿರುತ್ತವೆ. ಇವು ಬಿಸಿಮಾಡಿದಾಗ ರೆಕ್ಕೆಗಳಂತೆ ಕಾಣುವ ಕ್ಲೋರೊಪ್ಲಾಸ್ಟ್-ಹೊಂದಿರುವ ಜೀವಕೋಶಗಳಾಗಿವೆ. ಇವು ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಉಂಟುಮಾಡುತ್ತವೆ ಹಾಗೂ ಅನಿಲವನ್ನು ವಿನಿಯಮ ಮಾಡಿಕೊಳ್ಳುವ ಮೇಲ್ಮೆಯನ್ನು ಭಾಗಶಃ ಮುಚ್ಚುವ ಮೂಲಕ ತೇವವನ್ನು ಉಳಿಸಲು ನೆರವಾಗುತ್ತವೆ. ಪಾಲಿಟ್ರಿಕೋಪ್ಸಿಡವು ಇತರ ಪಾಚಿಗಳಿಂದ ಅದರ ಬೆಳವಣಿಗೆ ಮತ್ತು ರಚನೆಯ ವಿವರಗಳಲ್ಲಿ ಭಿನ್ನವಾಗಿದೆ ಹಾಗೂ ಇದು ಹೆಚ್ಚಿನ ಇತರ ಪಾಚಿಗಳಿಂದ ದೊಡ್ಡದಾಗಿ ಬೆಳೆಯುತ್ತದೆ, ಉದಾ. ಪಾಲಿಟ್ರಿಕಮ್ ಕಮ್ಯೂನ್ ಸುಮಾರು 40 ಸೆಂ.ಮೀ (16 ಇಂಚು)ನಷ್ಟು ಎತ್ತರಕ್ಕೆ ಬೆಳೆಯುತ್ತದೆ. ಪಾಲಿಟ್ರಿಕಿಡೆ ಗುಂಪಿಗೆ ಸೇರಿದ ಅತಿ ಎತ್ತರದ ನೆಲದ ಪಾಚಿಯೆಂದರೆ ಡ್ಯಾವ್ಸೋನಿಯಾ ಸೂಪರ್ಬ . ಇದು ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾದ ಇತರ ಭಾಗಗಳ ಸ್ಥಳೀಯ ಸಸ್ಯವಾಗಿದೆ.

ಅವು ನಾಳೀಯ ಸಸ್ಯಗಳ ಈಗಲೂ ಇರುವ ಹತ್ತಿರದ ಸಂಬಂಧಗಳಂತೆ ಕಾಣುತ್ತವೆ.

ಕೆಂಪು ಪಾಚಿ ಕೋಶಬೀಜಗಳು, ಯಾರ್ಕ್‌ಶೈರ್ ಡೇಲ್ಸ್ ಕುರುಚಲು ಪ್ರಾಂತದ ಚಳಿಗಾಲದ ಸ್ಥಳೀಯ ಸಸ್ಯ

ಭೂವೈಜ್ಞಾನಿಕ ಇತಿಹಾಸ[ಬದಲಾಯಿಸಿ]

ಪಾಚಿಯ ಮೃದು ಮತ್ತು ಸೂಕ್ಷ್ಮ ರಚನೆಯಿಂದಾಗಿ ಅದರ ಪುರಾತನ ದಾಖಲೆಯು ವಿರಳವಾಗಿದೆ. ಪಾಚಿಯ ಬಗೆಗಿನ ಸ್ಪಷ್ಟ ದಾಖಲೆಯು ಅಂಟಾರ್ಟಿಕ ಮತ್ತು ರಷ್ಯಾದ ಪರ್ಮಿಯನ್ ಅವಧಿಯಷ್ಟು ಹಿಂದಿನದಾಗಿದೆ ಹಾಗೂ ಕೆಲವು ದಾಖಲೆಗಳು ಇದು ಕಾರ್ಬನಿಫೆರಸ್ ಅವಧಿಯ ಪಾಚಿಗಳ ಬಗ್ಗೆಯೂ ತಿಳಿಸುತ್ತವೆ.[೪] ಸೈಲೂರಿಯನ್‌ನ ನಳಿಕೆಯ-ರೀತಿಯ ಪಳೆಯುಳಿಕೆಗಳು ಪಾಚಿಯ ಕ್ಯಾಲಿಪ್ಟ್ರದ ನಮೆದು ಹೋದ ಅವಶೇಷಗಳಾಗಿವೆ ಎಂದೂ ಹೇಳಲಾಗುತ್ತದೆ.[೫]

ಆವಾಸ ಸ್ಥಾನ[ಬದಲಾಯಿಸಿ]

ತಂಪಾದ ಕರಾವಳಿ ಕಾಡಿನಲ್ಲಿ ಒತ್ತಾಗಿರುವ ಪಾಚಿಗಳ ಗುಂಪು
ಪಾಚಿಯ ಸಣ್ಣ ಗುಂಪು.

ಪಾಚಿಗಳು ಜೌಗು ಕಡಿಮೆ ಬೆಳಕಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಪಾಚಿಗಳು ಕಾಡು ಪ್ರದೇಶಗಳಲ್ಲಿ ಮತ್ತು ಹಳ್ಳಗಳ ಅಂಚಿನಲ್ಲಿ ಸಾಮಾನ್ಯವಾಗಿರುತ್ತವೆ. ಇವು ಜೌಗು ನಗರಗಳ ರಸ್ತೆಗಳ ನೆಲಗಟ್ಟು ಕಲ್ಲುಗಳ ಎಡೆಗಳಲ್ಲಿಯೂ ಕಂಡುಬರುತ್ತವೆ. ಕೆಲವು ಪ್ರಕಾರಗಳು ನಗರದ ಪರಿಸ್ಥಿತಿಗಳಿಗೆ ಮಾರ್ಪಾಡುಗೊಂಡಿವೆ ಹಾಗೂ ಅವು ನಗರಗಳಲ್ಲಿ ಮಾತ್ರ ಕಂಡುಬರುತ್ತವೆ. ಕೆಲವು ಜಾತಿಗಳು ಸಂಪೂರ್ಣವಾಗಿ ನೀರುವಾಸಿಗಳಾಗಿವೆ, ಉದಾ. ಫಾಂಟಿನಾಲಿಸ್ ಆಂಟಿಪೈರೆಟಿಕ . ಸ್ಫ್ಯಾಗ್ನಮ್ ನಂತಹ ಮತ್ತೆ ಕೆಲವು ಜೌಗು ಪ್ರದೇಶ, ತಗ್ಗುನೆಲ ಮತ್ತು ತುಂಬಾ-ನಿಧಾನವಾಗಿ ಹರಿಯುವ ನೀರಿನ ಪ್ರದೇಶಗಳಲ್ಲಿ ಕಂಡುಬರುತ್ತವೆ. ಕೆಲವು ನೀರುವಾಸಿ ಅಥವಾ ಅರೆ-ನೀರುವಾಸಿ ಪಾಚಿಗಳು ಭೂಮಿಯ ಮೇಲೆ ಇರುವ ಪಾಚಿಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ. ಉದಾಹರಣೆಗಾಗಿ 20–30 ಸೆಂ.ಮೀ (8–12 ಇಂಚು) ಅಥವಾ ಅದಕ್ಕಿಂತ ಹೆಚ್ಚಿನ ಉದ್ದದ ಸಸ್ಯಗಳು ಸ್ಫ್ಯಾಗ್ನಮ್ ಜಾತಿಗಳಲ್ಲಿ ಸಾಮಾನ್ಯವಾಗಿರುತ್ತವೆ.

ಕಾಂಡಗಳು ಸಣ್ಣದಾಗಿದ್ದು, ತೆಳ್ಳಗಿರುವುದರಿಂದ, ಹೊರಪೊರೆಯ (ನೀರು ನಷ್ಟವಾಗುವುದನ್ನು ತಡೆಯಲು ಇರುವ ಮೇಣದಂತ ಪೊರೆ) ಕೊರತೆಯಿರುವುದರಿಂದ ಮತ್ತು ಫಲೀಕರಣವನ್ನು ಪೂರ್ಣಗೊಳಿಸಲು ದ್ರವದ ಅವಶ್ಯಕತೆ ಇರುವುದರಿಂದ ಪಾಚಿಗಳು ಜೀವಿಸುವಲ್ಲೆಲ್ಲಾ ತೇವಾಂಶದ ಅಗತ್ಯ ಇರುತ್ತದೆ. ಕೆಲವು ಪಾಚಿಗಳು ಶುಷ್ಕಸ್ಥಿತಿಯಲ್ಲೂ ಬದುಕುತ್ತವೆ. ಇವು ಕೆಲವು ಗಂಟೆಗಳೊಳಗಾಗಿ ಪುನಃ ನೀರನ್ನು ಹೀರಿಕೊಳ್ಳುವ ಮೂಲಕ ಜೀವಿಸುತ್ತವೆ.

ಉತ್ತರ ಅಕ್ಷಾಂಶ ಪ್ರದೇಶಗಳಲ್ಲಿ, ಸಾಮಾನ್ಯವಾಗಿ ಇತರ ಬದಿಗಳಿಗಿಂತ ಮರಗಳ ಮತ್ತು ಕಲ್ಲುಗಳ ಉತ್ತರದ ಬದಿಯಲ್ಲಿ ಹೆಚ್ಚು ಪಾಚಿಗಳು ಬೆಳೆಯುತ್ತವೆ (ಆದರೆ ದಕ್ಷಿಣ-ಬದಿಯ ಬೆಳವಣಿಗೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ). ಇದು ಮರಗಳ ಸೂರ್ಯನ-ಬೆಳಕಿಗೆ ಒಡ್ಡಿದ ಬದಿಯಲ್ಲಿ ಸಂತಾನೋತ್ಪತ್ತಿ ಕ್ರಿಯೆಗೆ ಸಾಕಷ್ಟು ನೀರಿನ ಕೊರತೆಯ ಕಾರಣದಿಂದ ಉಂಟಾಗಬಹುದೆಂದು ಊಹಿಸಲಾಗಿದೆ. ಸಮಭಾಜಕ ವೃತ್ತದ ದಕ್ಷಿಣದಲ್ಲಿ ಇದಕ್ಕೆ ವಿರುದ್ಧವಾಗಿ ಕಂಡುಬರುತ್ತದೆ. ಸೂರ್ಯನ ಬೆಳಕು ಒಳಪ್ರವೇಶಿಸದ ಹೆಚ್ಚು ಗಾಢ ಅರಣ್ಯಗಳಲ್ಲಿ, ಪಾಚಿಗಳು ಮರದ ತೊಗಟೆಯ ಎಲ್ಲಾ ಬದಿಗಳಲ್ಲೂ ಸಮಾನವಾಗಿ ಬೆಳೆಯುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಕೃಷಿ[ಬದಲಾಯಿಸಿ]

ಪಾಚಿಯನ್ನು ಹುಲ್ಲು ಮೈದಾನಗಳಲ್ಲಿ ಕಳೆಯೆಂದು ಪರಿಗಣಿಸಲಾಗುತ್ತದೆ. ಆದರೆ ಜಪಾನಿನ ತೋಟಗಾರಿಕೆಯ ನಿದರ್ಶನದಿಂದಾಗಿ ಇದನ್ನು ಸೌಂದರ್ಯ ದೃಷ್ಟಿಯಿಂದ ಬೆಳೆಸಲು ಪ್ರೋತ್ಸಾಹಿಸಲಾಗುತ್ತದೆ. ಹಳೆಯ ದೇವಾಲಯಗಳಲ್ಲಿ ಪಾಚಿಯನ್ನು ಕಾಡಿನ ದೃಶ್ಯದಂತೆ ಹಾಸಲಾಗುತ್ತದೆ. ಪಾಚಿಯು ಉದ್ಯಾನಕ್ಕೆ ಪ್ರಶಾಂತತೆ, ಪುರಾತನತೆ ಮತ್ತು ನೀರವತೆಯನ್ನು ಕೊಡುತ್ತದೆಂದು ತಿಳಿಯಲಾಗುತ್ತದೆ. ಕೃಷಿ ಮಾಡುವುದರ ನಿಯಮಗಳು ವ್ಯಾಪಕವಾಗಿ ಕಂಡುಬರುವುದಿಲ್ಲ. ಪಾಚಿಯ ಸಂಗ್ರವು, ನೀರಿರುವ ಚೀಲದಲ್ಲಿ ನಿಸರ್ಗ ಸಹಜ ಪಾಚಿಯನ್ನು ಕಸಿ ಮಾಡಿದ ಮಾದರಿಗಳನ್ನು ಬಳಸಿಕೊಂಡು ಆರಂಭವಾಯಿತು. ಪಾಚಿಯ ವಿಶೇಷ ಜಾತಿಗಳನ್ನು ಅವುಗಳ ಅನನ್ಯವಾದ ಬೆಳಕಿನ ಸಂಯೋಜನೆ, ತೇವಾಂಶ, ಗಾಳಿಯಿಂದ ರಕ್ಷಣೆ ಇತ್ಯಾದಿಗಳಿಂದಾಗಿ, ಅವುಗಳ ನೈಸರ್ಗಿಕವಾಗಿ ಬೆಳೆಯುವ ಸ್ಥಿತಿಗಳಿಂದ ಹೊರಗಡೆ ಬೆಳೆಸಲು ಬಲು ಕಷ್ಟವಾಗಿರುತ್ತದೆ.

ಪಾಚಿಯನ್ನು ಬೀಜಕಗಳಿಂದ ಬೆಳೆಸುವುದು ಮತ್ತೂ ಹೆಚ್ಚು ಕಷ್ಟವಾಗಿರುತ್ತದೆ. ಪಾಚಿ ಬೀಜಕಗಳು ನಿರಂತರ ಮಳೆಯಿಂದಾಗಿ ತೆರೆದ ಸಮತಲದ ಮೇಲೆ ಬೀಳುತ್ತವೆ; ಕೆಲವು ಜಾತಿಯ ಪಾಚಿಗಳಿಗೆ ಸೂಕ್ತವಾದ ಆ ಸಮತಲಗಳು ಕೆಲವು ವರ್ಷಗಳ ಗಾಳಿ ಮತ್ತು ಮಳೆಗೆ ಒಡ್ಡುವುದರಿಂದ ಆ ಪಾಚಿಯು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳುತ್ತದೆ. ಇಟ್ಟಿಗೆ, ಮರ ಮತ್ತು ಕೆಲವು ಕಳಪೆ ಕಾಂಕ್ರೀಟ್ ಮಿಶ್ರಣಗಳಂತಹ ರಂಧ್ರಗಳಿಂದ ಮತ್ತು ತೇವಾಂಶ ಹೆಚ್ಚಾಗಿರುವ ಪ್ರದೇಶಗಳು ಪಾಚಿಯ ಬೆಳವಣಿಗೆಗೆ ಅಧಿಕ ಸೂಕ್ತವಾಗಿರುತ್ತವೆ. ಮಜ್ಜಿಗೆ, ಮೊಸರು, ಮೂತ್ರ ಹಾಗೂ ಪಾಚಿ ಮಾದರಿಗಳು, ನೀರು ಮತ್ತು ಎರಿಕ ಕುಲದ ಕಾಂಪೋಸ್ಟ್ನ ಮಿಶ್ರಣಗಳನ್ನೂ ಒಳಗೊಂಡಂತೆ ಆಮ್ಲೀಯ ಅಂಶಗಳಿಂದಲೂ ಸಮತಲಗಳನ್ನು ತಯಾರಿಸಬಹುದು.

ಪಾಚಿಯ ಬೆಳೆವಣಿಗೆಯನ್ನು ತಡೆಯುವುದು[ಬದಲಾಯಿಸಿ]

ಪಾಚಿಯ ಬೆಳವಣಿಗೆಯನ್ನು ಅನೇಕ ವಿಧಾನಗಳಿಂದ ನಿರ್ಬಂಧಿಸಬಹುದು:

  • ನೀರು ಹರಿದು ಹೋಗುವಂತೆ ಮಾಡುವ ಮೂಲಕ ಅಥವಾ ನೇರ ಬಳಕೆಯ ಬದಲಾವಣೆಗಳ ಮೂಲಕ ನೀರು ನಿಲ್ಲದಂತೆ ಮಾಡುವುದು.
  • ಸೂರ್ಯನ ಬೆಳಕು ನೇರವಾಗಿ ಬೀಳುವುದನ್ನು ಹೆಚ್ಚಿಸುವುದು.
  • ಹುಲ್ಲುಗಳಂತಹ ಪೈಪೋಟಿ ಸಸ್ಯಗಳಿಗೆ ಲಭ್ಯವಾಗಿರುವ ಸಂಖ್ಯೆ ಮತ್ತು ಮೂಲಗಳನ್ನು ಹೆಚ್ಚಿಸುವುದು.
  • ಸುಣ್ಣದ ಬಳಕೆಯಿಂದ ಮಣ್ಣಿನ pHಅನ್ನು ಏರಿಸುವುದು.

ಹೆಚ್ಚು ಒತ್ತಾಗಿರುವ ಅಥವಾ ಕೈಯಿಂದ ಕೀಳಲು ಅಡ್ಡಿಯಾಗಿರುವ ಪಾಚಿಯ ಬೆಳವಣಿಗೆಯನ್ನು ಕುಂಟೆ(ರೇಕ್)ಅನ್ನೂ ಬಳಸಿ ತಡೆಯಬಹುದು.

ಫೆರಸ್ ಸಲ್ಫೇಟ್ ಅಥವಾ ಫೆರಸ್ ಅಮೋನಿಯಂ ಸಲ್ಫೇಟ್ಅನ್ನು ಹೊಂದಿರುವ ಉತ್ಪನ್ನಗಳ ಬಳಕೆಯು ಪಾಚಿಯನ್ನು ಸಾಯಿಸುತ್ತದೆ. ಈ ಘಟಕಗಳನ್ನು ವೈಶಿಷ್ಟ್ಯವಾಗಿ ವಾಣಿಜ್ಯ ಪಾಚಿ-ನಿಯಂತ್ರಣ ಉತ್ಪನ್ನಗಳಲ್ಲಿ ಮತ್ತು ಕೃತಕ ಗೊಬ್ಬರಗಳಲ್ಲಿ ಉಪಯೋಗಿಸಲಾಗುತ್ತದೆ. ಗಂಧಕ ಮತ್ತು ಕಬ್ಬಿಣವು ಹುಲ್ಲುಗಳಂತಹ ಕೆಲವು ಪೈಪೋಟಿಯ ಸಸ್ಯಗಳಿಗೆ ಅವಶ್ಯಕ ಪುಷ್ಠಿಕಾರಿಯಾಗಿದೆ. ಪಾಚಿಯನ್ನು ಕೊಲ್ಲುವುದು, ಅವುಗಳ ಬೆಳವಣಿಗೆಗೆ ಅನುಕೂಲಕರವಾದ ಸ್ಥಿತಿಗಳು ಬದಲಾಗದಿದ್ದರೆ ಅವುಗಳ ಪುನಃಹುಟ್ಟುವಿಕೆಯು ತಡೆಗಟ್ಟಲ್ಪಡುವುದಿಲ್ಲ.[೬]

ಮಾಸರಿ[ಬದಲಾಯಿಸಿ]

ಪಾಚಿಯನ್ನು-ಸಂಗ್ರಹಿಸುವ ವಿಶೇಷ ಒಲವು 19ನೇ ಶತಮಾನದಲ್ಲಿ ಅನೇಕ ಬ್ರಿಟಿಷ್ ಮತ್ತು ಅಮೆರಿಕನ್ ಉದ್ಯಾನಗಳಲ್ಲಿ ಮಾಸರಿಗಳ ಸ್ಥಾಪನೆಗೆ ಕಾರಣವಾಯಿತು. ಮಾಸರಿಯನ್ನು ವೈಶಿಷ್ಟ್ಯವಾಗಿ ಉತ್ತರಕ್ಕೆ ತೆರೆದ (ನೆರಳನ್ನು ನಿರ್ವಹಿಸಿಕೊಂಡು), ಚಪ್ಪಟೆ ಚಾವಣಿಯೊಂದಿಗೆ ಮರದ ಹಲಗೆಗಳಿಂದ ನಿರ್ಮಿಸಲಾಗುತ್ತದೆ. ಪಾಚಿಯ ಮಾದರಿಗಳನ್ನು ಮರದ ಹಲಗೆಗಳ ಮಧ್ಯದ ಬಿರುಕಿನಲ್ಲಿರಿಸಲಾಗುತ್ತದೆ. ನಂತರ ಸಂಪೂರ್ಣ ಮಾಸರಿಯನ್ನು ಬೆಳವಣಿಗೆಯನ್ನು ನಿರ್ವಹಿಸುವುದಕ್ಕಾಗಿ ಯಾವಾಗಲೂ ತೇವಗೊಳಿಸಲಾಗುತ್ತದೆ.

ವಾಣಿಜ್ಯ ಬಳಕೆ[ಬದಲಾಯಿಸಿ]

ನಿಸರ್ಗ ಸಹಜ ಸ್ಥಿತಿಯಿಂದ ಒಂದುಗೂಡಿಸಿದ ಪಾಚಿಗಳಲ್ಲಿ ಗಣನೀಯ ಪ್ರಮಾಣದ ಮಾರುಕಟ್ಟೆಯಿದೆ. ಪಾಚಿಯ ಬಳಕೆಗಳು ಹೂತೋಟಗಾರರ ವ್ಯಾಪಾರದಲ್ಲಿ ಮತ್ತು ಮನೆಯ ಅಲಂಕಾರದಲ್ಲಿ ಮುಖ್ಯವಾಗಿರುತ್ತವೆ. ಸ್ಫ್ಯಾಗ್ನಮ್ ಜಾತಿಯಲ್ಲಿನ ಕೊಳೆತ ಪಾಚಿಯು ಸಸ್ಯದಿದ್ದಿಲಿನ ಪ್ರಮುಖ ಅಂಶವಾಗಿದೆ. ಇದನ್ನು ಇಂಧನವಾಗಿ ಬಳಸಲು, ತೋಟಗಾರಿಕೆಯಲ್ಲಿ ಮಣ್ಣಿನಲ್ಲಿ ಸೇರಿಸಲು ಮತ್ತು ಸ್ಕಾಚ್ ವಿಸ್ಕಿಯ ಉತ್ಪಾದನೆಯಲ್ಲಿ ಹೊಗೆಯಾಡಿಸಿ ಸಂರಕ್ಷಿಸುವ ಮೊಳೆಯಿಸಿದ ಧಾನ್ಯಗಳಲ್ಲಿ ಉಪಯೋಗಿಸಲು "ಅಗೆದು ತೆಗೆಯಲಾಗುತ್ತದೆ".

ಸ್ಫ್ಯಾಗ್ನಮ್ ಪಾಚಿಯನ್ನು, ಸಾಮಾನ್ಯವಾಗಿ ಕ್ರಿಸ್ಟೇಟಮ್ ಮತ್ತು ಸಬ್ನಿಟನ್ಸ್ ಅನ್ನು, ಬೆಳೆಯುತ್ತಿರುವಾಗಲೇ ಕಟಾವು ಮಾಡಿ, ಒಣಗಿಸಿ, ಸಸ್ಯೋದ್ಯಾನ ಮತ್ತು ತೋಟಗಾರಿಕೆಯಲ್ಲಿ ಸಸ್ಯ ಬೆಳೆಸುವ ಮಾಧ್ಯಮವಾಗಿ ಬಳಸಲಾಗುತ್ತದೆ. ಇದ್ದಿಲುಪಾಚಿ ಯ ಕಟಾವಿನ ಅಭ್ಯಾಸವನ್ನು ಪಾಚಿಯ ಸಸ್ಯದಿದ್ದಿಲಿನ ಕಟಾವಿನೊಂದಿಗೆ ಬೆರೆಸಿ ತಪ್ಪಾಗಿ ಗ್ರಹಿಸಬಾರದು.

ಇದ್ದಿಲುಪಾಚಿ ಯನ್ನು ಸಮರ್ಥನೀಯ ಆಧಾರದಲ್ಲಿ ಕಟಾವು ಮಾಡಲಾಗುತ್ತದೆ ಮತ್ತು ಅದರ ಪುನಃಬೆಳವಣಿಗೆಗೆ ಅನುವು ಮಾಡಿಕೊಟ್ಟು ನಿರ್ವಹಿಸಲಾಗುತ್ತದೆ. ಪಾಚಿಯ ಸಸ್ಯದಿದ್ದಿಲಿನ ಕಟಾವನ್ನು ಸಾಮಾನ್ಯವಾಗಿ, ಸಸ್ಯದಿದ್ದಿಲು ಪುನಃಬೆಳೆಯಲು ಅವಕಾಶವಿಲ್ಲದಂತೆ ಕೀಳಲಾಗುವುದರಿಂದ ಗಮನಾರ್ಹವಾದ ಪರಿಸರ ಹಾನಿಗೆ ಕಾರಣವಾಗುತ್ತದೆಂದು ಪರಿಗಣಿಸಲಾಗುತ್ತದೆ.

ವಿಶ್ವ ಸಮರ IIರಲ್ಲಿ, ಸ್ಫ್ಯಾಗ್ನಮ್ ಪಾಚಿಗಳು ಹೆಚ್ಚು ಹೀರಿಕೊಳ್ಳುವ ಮತ್ತು ಬ್ಯಾಕ್ಟೀರಿಯಾ-ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಅವುಗಳನ್ನು ಸೈನಿಕರ ಗಾಯಗಳಿಗೆ ಪ್ರಥಮ-ಚಿಕಿತ್ಸೆಯ ಔಷಧವಾಗಿ ಬಳಸಲಾಗಿತ್ತು. ಹೆಚ್ಚು ಹೀರಿಕೊಳ್ಳುವ ಸಾಮರ್ಥ್ಯದಿಂದಾಗಿ ಇದನ್ನು ಹಿಂದೆ ಕೆಲವರು ಬೆವರು ಒರೆಸುವ ಬಟ್ಟೆಗಳಾಗಿ ಬಳಸುತ್ತಿದ್ದರು.[ಸೂಕ್ತ ಉಲ್ಲೇಖನ ಬೇಕು]

UKಯ ಗ್ರಾಮೀಣ ಪ್ರದೇಶಗಳಲ್ಲಿ, ಫೋಂಟಿನಾಲಿಸ್ ಆಂಟಿಪೈರಿಟಿಕ ವನ್ನು ಸಾಂಪ್ರದಾಯಿಕವಾಗಿ ಬೆಂಕಿಯನ್ನು ನಂದಿಸಲು ಉಪಯೋಗಿಸುತ್ತಿದ್ದರು. ಇವು ನಿಧಾನವಾಗಿ ಹರಿಯುವ ನದಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದರಿಂದ ಮತ್ತು ಅವು ಅಧಿಕ ಪ್ರಮಾಣದಲ್ಲಿ ನೀರನ್ನು ಉಳಿಸಿಕೊಂಡಿದ್ದು ಬೆಂಕಿಯನ್ನು ಆರಿಸಲು ಸಹಾಯ ಮಾಡುತ್ತವೆ. ಈ ಐತಿಹಾಸಿಕ ಬಳಕೆಯು ಅದರ ವಿಶೇಷ ಲ್ಯಾಟಿನ್/ಗ್ರೀಕ್ ಹೆಸರಿನಲ್ಲಿ ಪ್ರತಿಬಿಂಬಿತವಾಗಿದೆ, ಅದರ ಅಂದಾಜಿನ ಅರ್ಥವೆಂದರೆ "ಬೆಂಕಿ ವಿರೋಧಿ".

ಫಿನ್‌ಲ್ಯಾಂಡ್ನಲ್ಲಿ ಇದ್ದಿಲುಪಾಚಿಗಳನ್ನು ಬರಗಾಲದ ಸಂದರ್ಭದಲ್ಲಿ ಬ್ರೆಡ್ ತಯಾರಿಸಲು ಬಳಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಮೆಕ್ಸಿಕೊದಲ್ಲಿ ಪಾಚಿಯನ್ನು ಕ್ರಿಸ್‌ಮಸ್‌ನ ಅಲಂಕಾರವಾಗಿ ಉಪಯೋಗಿಸಲಾಗುತ್ತದೆ.

ಫಿಸ್ಕೊಮಿಟ್ರೆಲ್ಲ ಪೇಟೆನ್ಸ್ ಅನ್ನು ಜೈವಿಕ ತಂತ್ರಜ್ಞಾನದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಪ್ರಮುಖ ಉದಾಹರಣೆಗಳೆಂದರೆ - ಬೆಳೆಯ ಅಭಿವೃದ್ಧಿಗಾಗಿ ಅಥವಾ ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುವುದಕ್ಕಾಗಿ ಪಾಚಿ ಜೀನ್ಗಳ ಗುರುತಿಸುವಿಕೆ ಹಾಗೂ ಪಾಚಿ ಜೈವಿಕ ಕ್ರಿಯಾಕಾರಿಗಳಲ್ಲಿ ಜೈವಿಕ ಔಷಧ ವಸ್ತುಗಳ ಸುರಕ್ಷಿತ ಉತ್ಪಾದನೆ, ಇದನ್ನು ರಾಲ್ಫ್ ರೆಸ್ಕಿ ಮತ್ತು ಅವನ ಸಹ-ಕೆಲಸಗಾರರು ಅಭಿವೃದ್ಧಿಪಡಿಸಿದರು[೭].

ಇವನ್ನೂ ಗಮನಿಸಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Gensel, Patricia G. (1999). "Bryophytes". In Singer, Ronald (ed.). Encyclopedia of Paleontology. Fitzroy Dearborn. pp. 197–204. ISBN 1884964966.
  2. ೨.೦ ೨.೧ ೨.೨ Goffinet, Bernard (2004). "Systematics of the Bryophyta (Mosses): From molecules to a revised classification". Monographs in Systematic Botany. Molecular Systematics of Bryophytes. Missouri Botanical Garden Press. 98: 205–239. ISBN 1-930723-38-5. {{cite journal}}: Unknown parameter |coauthors= ignored (|author= suggested) (help)
  3. ಬಕ್, ವಿಲಿಯಂ R. ಮತ್ತು ಬರ್ನಾರ್ಡ್ ಗೋಫಿನೆಟ್. (2000). "ಮಾರ್ಫಾಲಜಿ ಆಂಡ್ ಕ್ಲಾಸಿಫಿಕೇಶನ್ ಆಪ್ ಮಾಸಸ್", ಪುಟಗಳು 71-123 ಇನ್ A. ಜೊಮೈಥನ್ ಶಾ ಮತ್ತು ಬರ್ನಾರ್ಡ್ ಗೋಫಿನೆಟ್ (ಸಂಪಾದಕರು), ಬ್ರಯೋಫೈಟ್‌ ಬಯಾಲಜಿ . (ಕೇಂಬ್ರಿಡ್ಜ್: ಕೇಂಬ್ರಿಡ್ಜ್ ಯೂನಿವರ್ಸಿಟಿ ಪ್ರೆಸ್). ISBN 0-521-66097-1.
  4. Thomas, B.A. (1972). "A probable moss from the Lower Carboniferous of the Forest of Dean, Gloucestershire". Annals of Botany. 36 (1): 155–161. ISSN 1095-8290.
  5. Kodner, R. B. (2001). "High-temperature, acid-hydrolyzed remains of Polytrichum (Musci, Polytrichaceae) resemble enigmatic Silurian-Devonian tubular microfossils". American Journal of Botany. 88 (3): 462–466. doi:10.2307/2657111. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)
  6. Steve Whitcher, Master Gardener (1996). "Moss Control in Lawns". Gardening in Western Washington. Washington State University. Archived from the original (Web) on 2007-02-05. Retrieved 2007-02-10. {{cite web}}: Cite has empty unknown parameter: |coauthors= (help)
  7. ಈವ L. ಡೆಕರ್ ಮತ್ತು ರಾಲ್ಫ್ ರೆಸ್ಕಿ (2007): ಸುಧಾರಿತ ಜೈವಿಕ ಔಷಧವಸ್ತುಗಳನ್ನು ಉತ್ಪತ್ತಿ ಮಾಡುವ ಪಾಚಿ ಜೈವಿಕ ಕ್ರಿಯಾಕಾರಿಗಳು. ಪ್ರಸ್ತುತ ಜೈವಿಕ ತಂತ್ರಜ್ಞಾನದಲ್ಲಿನ ಅಭಿಪ್ರಾಯ 18, 393-398.

ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಪಾಚಿ&oldid=1056358" ಇಂದ ಪಡೆಯಲ್ಪಟ್ಟಿದೆ