ರಾಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಗಿ
ರಾಗಿ
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
E. coracana
Binomial name
ಎಲೂಸಿನ್ ಕೋರಕಾನ

ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗೆಯ ಜನಪ್ರಿಯ ಆಹಾರ ಧಾನ್ಯ. ಪುಷ್ಟಿಕರವಾದ ಸಣ್ಣ ಕಾಳುಗಳುಳ್ಳ ತೆನೆ ಬಿಡುವ ಸಸ್ಯ ಇದು. ಎಲ್ಯೂಸೈನ್ ಕೊರಕೋನ ಇದರ ವೈಜ್ಞಾನಿಕ ಹೆಸರು. ಪೋಯೆಸೀ (ಗ್ರಾಮಿನೀ) ಕುಟುಂಬಕ್ಕೆ ಸೇರಿದೆ.

ವಿವರಗಳು[ಬದಲಾಯಿಸಿ]

ರಾಗಿ ಸಸ್ಯ ವೈಜ್ಞಾನಿಕವಾಗಿ 60-120 ಸೆಂ.ಮೀ. ಎತ್ತರಕ್ಕೆ ಬೆಳೆಯುವಂಥ ವಾರ್ಷಿಕ ಹುಲ್ಲುಸಸ್ಯ. ಕಾಂಡ ಸ್ವಲ್ಪ ಚಪ್ಪಟೆಯಾಗಿರುತ್ತದೆ. ಒಂದೊಂದು ಕಾಂಡದ ತುದಿಯಲ್ಲೂ ಬೆರಳುಗಳಂತೆ ಕಾಣುವ 4 - 6 ಹೂಗೊಂಚಲುಗಳು (ಇಕ್ಕಲು) ಮೂಡುತ್ತವೆ. ಪ್ರತಿಯೊಂದು ಹೂಗೊಂಚಲಿನಲ್ಲಿ ಸುಮಾರು 70 ಕಿರಿಹೂಗುಚ್ಛ (ಸ್ಪೈಕ್‌ಲೆಟ್) ಇರುತ್ತವೆ. ಒಂದೊಂದು ಹೂಗುಚ್ಛದಲ್ಲಿ 4 - 7 ಬೀಜಗಳು ರೂಪುಗೊಳ್ಳುತ್ತವೆ. ಬೀಜಗಳು ಗುಂಡಗಿದ್ದು ಕೆಂಗಂದು ಬಣ್ಣದ್ದವಾಗಿವೆ. ಕೆಲವೊಮ್ಮೆ ಬಿಳಿಬಣ್ಣಕ್ಕಿರುವುದೂ ಉಂಟು.

ಉಗಮ[ಬದಲಾಯಿಸಿ]

ರಾಗಿ ಉಷ್ಣವಲಯದ ಮುಖ್ಯ ಆಹಾರ ಬೆಳೆಗಳ ಪೈಕಿ ಒಂದು. ಭಾರತದಲ್ಲಿ ಮಾತ್ರವಲ್ಲದೆ ಆಫ್ರಿಕ ಖಂಡದ ಪೂರ್ವ ದೇಶಗಳಲ್ಲೂ ಇಥಿಯೋಪಿಯ, ಸೋಮಾಲಿಲ್ಯಾಂಡ್ ಪ್ರದೇಶಗಳಲ್ಲೂ ಇದರ ವ್ಯಾಪಕ ಕೃಷಿ ಉಂಟು. ಇದರ ಉಗಮ ಎಲ್ಲಿ ಆಯಿತೆಂದು ಖಚಿತವಾದ ಮಾಹಿತಿ ಇಲ್ಲ. ಆದರೂ ಭಾರತ ಇಲ್ಲವೆ ಆಫ್ರಿಕ ಇದರ ತವರು ಎನ್ನಲಾಗಿದೆ. ಇತಿಯೋಪಿಯ ಮೂಲದ ಈ ವಾರ್ಷಿಕ ಬೆಳೆಯನ್ನು ಸುಮಾರು ೪೦೦೦ ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು ಎಂದು ಹೇಳಲಾಗಿದೆ. ಪ್ರಪಂಚದ ಉಷ್ಣಪ್ರದೇಶಗಳಲ್ಲಿ ಸ್ವಾಭಾವಿಕವಾಗಿ ಕಾಣಸಿಗುವ ಎಲ್ಯೂಸೈನ್ ಇಂಡಿಕ ಎಂಬ ಪ್ರಬೇಧದಿಂದ ಇದನ್ನು ತಳಿ ಆಯ್ಕೆ ಕ್ರಮದ ಮೂಲಕ ಪಡೆಯಲಾಗಿದೆ ಎಂಬ ಅಭಿಪ್ರಾಯವಿದೆ.

ಬೇಸಾಯ[ಬದಲಾಯಿಸಿ]

ರಾಗಿ ಒಣಬೇಸಾಯಕ್ಕೆ ಹೇಳಿ ಮಾಡಿಸಿದಂಥ ಬೆಳೆ. ಸಾಧಾರಣವಾಗಿ ಇದನ್ನು ಮಳೆಯನ್ನೇ ಅಶ್ರಯಿಸಿರುವ ಜಮೀನುಗಳಲ್ಲಿ ಖಾರಿ ಬೆಳೆಯಾಗಿ ಬೇಸಾಯ ಮಾಡಲಾಗುತ್ತದೆ. ಇದರ ಬೇಸಾಯಕ್ಕೆ ಆರ್ದ್ರಪೂರಿತ ವಾತಾವರಣ, ಹೆಚ್ಚು ಉಷ್ಣತೆ (ಸುಮಾರು 760 ಸೆ.), ಸಾಧಾರಣ ಪ್ರಮಾಣದ ಮಳೆ ಮತ್ತು ನೀರು ಸುಲಭವಾಗಿ ಬಸಿದುಹೋಗುವಂಥ ಮಣ್ಣು ತುಂಬ ಉತ್ತಮ. ನೀರು ನಿಲ್ಲುವಂಥ ಜೌಗು, ಜೇಡಿಭೂಮಿ ಇದರ ಬೇಸಾಯಕ್ಕೆ ಒಳ್ಳೆಯದಲ್ಲ. ಮಳೆ ತುಂಬ ಕಡಿಮೆ ಇರುವೆಡೆಯಲ್ಲಿ ರಾಗಿಯನ್ನು ನೀರಾವರಿಯಿಂದಲೂ ಬೇಸಾಯ ಮಾಡಬಹುದು. ರಾಗಿ ಎತ್ತರ ಬೆಟ್ಟಪ್ರದೇಶಗಳಿಗೂ ಸುಲಭವಾಗಿ ಹೊಂದಿಕೊಳ್ಳುತ್ತದೆ. ಇದರಿಂದಾಗಿ ಪಶ್ಚಿಮ ಘಟ್ಟಗಳ ಉನ್ನತ ಪ್ರದೇಶಗಳಲ್ಲೂ ಹಿಮಾಲಯದ ತಪ್ಪಲಿನ ಬೆಟ್ಟಸೀಮೆಗಳಲ್ಲೂ (ಸು. 2000 - 2500 ಮೀ. ಎತ್ತರದ) ಇದರ ಬೇಸಾಯವನ್ನು ಕಾಣಬಹುದು.[೧]

ರಾಗಿಯ ಬೇಸಾಯಕ್ಕೆ ಕೆಂಪು ಜಂಬುಮಣ್ಣು ಗೋಡು ಮಣ್ಣು ಅತ್ಯುತ್ಕೃಷ್ಟ. ಇನ್ನಿತರ ಬಗೆಯ ಗೋಡುಮಣ್ಣಿನ ಭೂಮಿಯಲ್ಲೂ ಇದನ್ನು ಬೆಳೆಯಬಹುದು. ಬೇರೆ ಪೈರುಗಳಿಗೆ ಹೋಲಿಸಿದರೆ ರಾಗಿ ನೆಲದ ಆಮ್ಲತೆಯನ್ನು ಸುಲಭವಾಗಿ ತಡೆದುಕೊಳ್ಳುತ್ತದೆ.

ಕರ್ನಾಟಕದಲ್ಲಿ ರಾಗಿಯನ್ನು ಎರಡು ಶ್ರಾಯಗಳಲ್ಲಿ ಬೇಸಾಯ ಮಾಡುವುದಿದೆ. ಮೇ - ಆಗಸ್ಟ್ ತಿಂಗಳುಗಳ ಅವಧಿಯಲ್ಲಿ ಕಾರುರಾಗಿಯನ್ನೂ, ಜುಲೈ - ನವೆಂಬರ್ ಇಲ್ಲವೆ ಡಿಸೆಂಬರ್ ತಿಂಗಳುಗಳ ಅವಧಿಯಲ್ಲಿ ಹೈನುರಾಗಿಯನ್ನೂ ಬೆಳೆಯಲಾಗುತ್ತದೆ. ತಮಿಳುನಾಡಿನ ಉತ್ತರ ಹಾಗೂ ಮಧ್ಯ ಪ್ರದೇಶಗಳಲ್ಲಿ ರಾಗಿಯನ್ನು ಮೇ ತಿಂಗಳಲ್ಲಿ ಬಿತ್ತಿದರೆ, ದಕ್ಷಿಣ ಜಿಲ್ಲೆಗಳಲ್ಲಿ ಅಕ್ಟೋಬರ್ - ಡಿಸೆಂಬರ್‌ನಲ್ಲಿ ಬಿತ್ತುತ್ತಾರೆ. ಉಳಿದೆಡೆಗಳಲ್ಲಿ ಆಗಸ್ಟ್ - ಸೆಪ್ಟೆಂಬರ್ ಅಥವಾ ನವೆಂಬರ್ - ಡಿಸೆಂಬರ್ ತಿಂಗಳುಗಳಲ್ಲಿ ಮುಖ್ಯ ಬೆಳೆಯಾಗಿ ಬೇಸಾಯ ಮಾಡುತ್ತಾರೆ. ರಾಗಿಯನ್ನು ಬಿಹಾರ್ - ಪಂಜಾಬ್, ಒರಿಸ್ಸ, ಉತ್ತರಪ್ರದೇಶಗಳಲ್ಲಿ ಮೇ - ಜುಲೈ ತಿಂಗಳುಗಳಲ್ಲಿ ಬಿತ್ತನೆಮಾಡಿ ಆಗಸ್ಟ್ - ನವೆಂಬರ್ ತಿಂಗಳುಗಳಲ್ಲಿ ಕೊಯ್ಲು ಮಾಡುತ್ತಾರೆ.

ರಾಗಿಯನ್ನು ನೇರವಾಗಿ ಚೆಲ್ಲಿ ಇಲ್ಲವೆ ಕೂರಿಗೆಯ ಮೂಲಕ ಬಿತ್ತನೆ ಮಾಡಲಾಗುವುದು. ಕೆಲವೆಡೆ ಮಳೆ ಅನಿಶ್ಚಿತವಾಗಿರುವಂಥ ಸನ್ನಿವೇಶಗಳಲ್ಲಿ ಒಟ್ಲು ಪಾತಿಗಳಲ್ಲಿ ಬಿತ್ತು ಸಸಿ ಪಡೆದು ಬೇಕಾದೆಡೆ ನಾಟಿಯ ಮೂಲಕ ಬೆಳೆಯುವುದಿದೆ.

ರಾಗಿಯನ್ನು ಶುದ್ಧಬೆಳೆಯಾಗಿ ಇಲ್ಲವೆ ಬೇರೆ ಧಾನ್ಯ ಬೆಳೆಗಳ ಜೊತೆಯಲ್ಲಿ ಮಿಶ್ರ ಬೆಳೆಯಾಗಿ ಅಂದರೆ, ಬೇಳೆಕಾಳು, ಹರಳು, ಹುಚ್ಚೆಳ್ಳು, ನೆಲಗಡಲೆ, ಇಲ್ಲವೆ ಎಳ್ಳುಗಳೊಂದಿಗೆ ಬೇಸಾಯ ಮಾಡುವುದಿದೆ. ಕೆಲವೊಮ್ಮೆ ಅಲಸಂದೆ, ಹುರುಳಿ, ಅವರೆಗಳನ್ನೂ ಅಕ್ಕಡಿಬೆಳೆಗಳಾಗಿ ರಾಗಿಯೊಂದಿಗೆ ಬೇಸಾಯ ಮಾಡುವುದುಂಟು.

ರಾಗಿಗೆ ಹಲವಾರು ಬಗೆಯ ಶಿಲೀಂಧ್ರ ರೋಗಗಳೂ ಕೀಟಪಿಡುಗುಗಳೂ ಬರುವುದುಂಟು. ಇವುಗಳಲ್ಲಿ ಮುಖ್ಯವಾದವು ಇಂತಿವೆ: ಮೆಲನೋಪ್ಸಿಕಿಯಮ್ ಎಲ್ಯೂಸೈನಸ್ ಹಾಗೂ ಹೆಲ್ಮಿಂತೊಸ್ಪೋರಿಯಮ್ ಎಂಬ ಶಿಲೀಂಧ್ರರೋಗಗಳು; ಆಮ್‌ಸ್ಯಾಕ್ ಅಲ್ಬಿಸ್ಟ್ರೈಗ ಎಂಬ ಕಂಬಳಿಹುಳು, ಕೋಲ್‌ಮಾನಿಯ ಸ್ಫೀನ ರಾಯ್‌ಡಿಸ ಎಂಬ ಮಿಡತೆ, ಸೆಸೇಮಿಯ ಇನ್‌ಫರೆನ್ಸ್ ಮತ್ತು ಸಾಲೂರಿಯ ಇನ್‌ಫಿಸಿಟ ಎಂಬ ಕಾಂಡಕೊರಕ ಹುಳುಗಳು, ಮರಾಸಾಮಿಯ ಟ್ರಪೀಜಾಲಿಸ್ ಎಂಬ ಎಲೆಸುರುಳಿ ಹುಳು. ಯುಕ್ತ ಶಿಲೀಂಧ್ರ ನಾಶಕಗಳ ಹಾಗೂ ಕೀಟನಾಶಕಗಳ ಬಳಕೆಯಿಂದ ಈ ಪಿಡುಗುಗಳನ್ನು ನಿವಾರಿಸಬಹುದು.

ಭಾರತದಲ್ಲಿ ರಾಗಿಬೆಳೆಯುವ ರಾಜ್ಯಗಳು[ಬದಲಾಯಿಸಿ]

ರಾಗಿ ಬೆಳೆ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿದೆ.[೨] ಕರ್ನಾಟಕ ಬಿಟ್ಟರೆ , ತಮಿಳುನಾಡು, ಮತ್ತು ಮಹಾರಾಷ್ಟ್ರ ರಾಜ್ಯಗಳು ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಿವೆ. ಇದನ್ನು ಇಂಗ್ಲಿಷ್‍ನಲ್ಲಿ ’ಫಿಂಗರ್ ಮಿಲೆಟ್' ಎಂದು ಕರೆಯುತ್ತಾರೆ. ಪುಷ್ಕಳ ಪೋಷಕಾಂಶವಿರುವ ಈ ಧಾನ್ಯ, ವಿಶ್ವದ ತೃಣಧಾನ್ಯ ಬೆಳೆಗಳಲ್ಲಿ, ಸಜ್ಜೆ, ನವಣೆ, ಬರಗು ಬೆಳೆಗಳನಂತರದ ಸ್ಥಾನಪಡೆದಿದೆ. ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ವರ್ಷಂಪ್ರತಿ ಸುಮಾರು ೨೨ ಲಕ್ಷ ಹೆಕ್ಟೇರುಪ್ರದೇಶದಲ್ಲಿ ರಾಗಿ ಬೆಳೆದು ೨೬ ರಿಂದ ೨೮ ಲಕ್ಷ ಟನ್ ರಾಗಿಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತಿದೆ. ಉತ್ಪಾದನೆಯ ಮುಕ್ಕಾಲುಪಾಲು ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಮತ್ತು ಮಹಾರಾಷ್ಟ್ರ ರಾಜ್ಯಗಳು ಉತ್ಪಾದಿಸುತ್ತಿವೆ. ಇನ್ನುಳಿದ ಕಾಲು ಭಾಗ, ಬಿಹಾರ, ಉತ್ತರ ಪ್ರದೇಶ, ಒರಿಸ್ಸ, ಮಧ್ಯ ಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶಗಳು ಪೂರೈಸುತ್ತವೆ.

ರಾಗಿತಳಿಯಲ್ಲಿ ಸುಧಾರಣೆ[ಬದಲಾಯಿಸಿ]

ರಾಗಿ ತಳಿ ಅಭಿವೃದ್ಧಿ ೧೯೧೩ ನೆ ಇಸವಿಯಷ್ಟು ಹಿಂದೆಯೇ ಪ್ರಾರಂಭವಾಗಿತ್ತು. ಖ್ಯಾತ ತಜ್ಞ ಲೆಸ್ಲಿ ಕೋಲ್‍ಮನ್ ರಾಗಿಯ ರೋಗ ನಿರೋಧಕತ್ವ ಮತ್ತು ಬರಸಹಿಷ್ಣುತೆಗಳನ್ನು ಗಮನಿಸಿ, ವಿವಿಧೆಡೆಯ ತಳಿಗಳನ್ನು ಕಲೆಹಾಕಿ, ಅವನ್ನು ತಿದ್ದಲು ಮಾಡಿದ ಪ್ರಯತ್ನಗಳು ಹೆಚ್ಚು ಫಲಕಾರಿಯಾಗಲಿಲ್ಲ. ರಾಗಿ ಸ್ವಭಾವತಃ ಸ್ವಕೀಯ ಪರಾಗಸ್ಪರ್ಶದ ಬೆಳೆ. ಅಸಂಖ್ಯ ಸೂಕ್ಷ್ಮ ಹೂಗಳಿಂದ ಅದರ ತೆನೆಗಳು ಗಾಳಿಯಲ್ಲಿ ತೊನೆದಾಡುತ್ತವೆ. ರಾಗಿ ಲಕ್ಷ್ಮಣಯ್ಯ ಎಂಬ ಸಂಶೋಧನಕರ್ತರು 1949ರಲ್ಲಿ ಸಂಪರ್ಕ ಸಂಕರಣಾವಿಧಾನ(ಸ್ಪೆಷಲ್ ಕಾಂಟಾಕ್ಟ್ ಮೆಥಡ್) ಸ್ವಲ್ಪಮಟ್ಟಿಗೆ ಸರಿಯಾಗಿದೆ. ಈ ವಿಧಾನದಲ್ಲಿ ವಿಭಿನ್ನ ಗುಣಗಳುಳ್ಳ ಎರಡು ಭಿನ್ನ ತಳಿಗಳನ್ನು ಒಟ್ಟೊಟ್ಟಿಗೆ ಬೆಳೆದು ಅವುಗಳ ತೆನೆಗಳನ್ನು ಹೂ ಬಿಡುವ ಸಮಯದಲ್ಲಿ ಒಟ್ಟಾಗಿ ಸೇರಿಸಿ ಕಟ್ಟಿ, ಅವನ್ನು ಪಾಲಿಥೀನ್ ಚೀಲದಿಂದ ಮುಚ್ಚುತ್ತಾರೆ. ಈ ಸಂಪರ್ಕ ಸಾಮೀಪ್ಯದಲ್ಲಿ ಕನಿಷ್ಠ ಕೆಲವು ಹೂಗಳಲ್ಲಾದರೂ ಪರಕೀಯ ಪರಾಗಸ್ಪರ್ಶವೇರ್ಪಟ್ಟು ಅವು ಸಂಕರ ಬೀಜ ನೀಡುತ್ತವೆ. ೧೯೫೧ ರಿಂದ ೧೯೬೪ ರ ಹೊತ್ತಿಗೆ, ರಾಜ್ಯದ ವಿವಿಧ ಹವಾಗುಣಗಳಿಗೆ ಒಗ್ಗುವಂತಹ ’ಅರುಣ’, 'ಉದಯ', 'ಪೂರ್ಣ', 'ಅನ್ನಪೂರ್ಣ', 'ಕಾವೇರಿ',ಮತ್ತು 'ಶಕ್ತಿ' ತಳಿಗಳು ತಯಾರಾದವು. ಭಾರತ ಮತ್ತು ಆಫ್ರಿಕಾ ದೇಶದ ತಳಿಗಳ ಸಮ್ಮಿಳನದಿಂದ ತಯಾರಾದ ತಳಿಗಳನ್ನು ’ಇಂಡಾಫ್’ ಎನ್ನುತ್ತಾರೆ. ಒಣಬೇಸಾಯದ ವ್ಯವಸ್ಥೆಗೆ ಇಂಡಾಫ್-೧, ೩, ೮ ನ್ನು ಶಿಫಾರಸ್ ಮಾಡಲಾಯಿತು. ಮುಂಗಾರು ತಡವಾದಾಗ ಇಂಡಾಫ್-೫ ಬೇಸಿಗೆಗೆ ಉತ್ತಮವೆನ್ನಿಸಿತು. ರಾಗಿ ಬೆಳೆಯ ತಜ್ಞ 'ರಾಗಿ ಬ್ರಹ್ಮ' ಲಕ್ಷ್ಮಯ್ಯರವರ ಪರಿಶ್ರಮದಿಂದ ಮೇಲೆ ಹೇಳಿದ ಸಾಧನೆಗಳಾಗಿವೆ.

ರಾಗಿಯ ಉಪಯೋಗಗಳು[ಬದಲಾಯಿಸಿ]

ರಾಗಿಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು , ದೋಸೆ, ಗಂಜಿ, ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಟಿಕ ಆಹಾರವೆಂದರೆ- ಒಡ್ಡರಾಗಿಹಿಟ್ಟು. ಇದು ಅತ್ಯಂತ ವಿಟಮಿನ್-ಯುಕ್ತ ಆಹಾರ. ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ-ಮುಟ್ಟಾಗಿಯೂ ಇರುತ್ತಾರೆ. ರಾಗಿ ಮಾಲ್ಟನ್ನು ಸರಿಯಾಗಿ ಡಬ್ಬಿಗಳಲ್ಲಿ ಶೇಖರಿಸಿ ಮಾರುವು ಕಂಪೆನಿಗಳು ಚೆನ್ನಾಗಿ ಹಣ ಮಾಡುತ್ತಿವೆ. ಮಧುಮೇಹ (ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಿಸ್ ಪಡೆದ ಪೇಯ. ರಾಗಿ ಅರಳನ್ನು ಹುರಿದು, ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ, ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿ ಬೆರೆಸಿ, ಹುಣಸೆಹುಳಿ, ಯಾಲಕ್ಕಿ ಪುಡಿ ಸೇರಿಸಿ ಸೇವಿಸಿದರೆ, ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ, ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಬಹುದು.[೩]

ಪೋಷಕಾಂಶಗಳ ವಿವರ[ಬದಲಾಯಿಸಿ]

ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ದವರೆನ್ನದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ.

೧೦೦ ಗ್ರಾಮ್ ರಾಗಿಯಲ್ಲಿನ ಪೋಷಕಾಂಶಗಳ ವಿವರ ಈ‌ ಕೆಳಕಂಡಂತಿದೆ:

ಪೋಷಕಾಂಶ ಪ್ರತಿಶತ
ಪ್ರೋಟಿನ್ ೭.೩ ಗ್ರಾಂ
ಕೊಬ್ಬು ೧.೩ ಗ್ರಾಂ
ಪಿಷ್ಟ ೭೨ ಗ್ರಾಂ
ಖನಿಜಾಂಶ ೨.೭ ಗ್ರಾಂ
ಸುಣ್ಣದಂಶ ೩.೪೪ ಗ್ರಾಂ
ನಾರಿನಂಶ ೩.೬ ಗ್ರಾಂ
ಶಕ್ತಿ ೩೨೮ ಕಿ.ಕ್ಯಾ.

ರಾಗಿ ಬೆಳೆಯ ಗುಳಿ ವಿಧಾನ[ಬದಲಾಯಿಸಿ]

ಈ ವಿಧಾನವನ್ನು ನೀರಿನ ಮಿತಬಳಕೆ ಮತ್ತು ಹೆಚ್ಚಿನ ಇಳುವರಿಗಾಗಿ ಅಭಿವೃದ್ಧಿಪಡಿಸಲಾಗಿದೆ.

ರಾಗಿ ಒಂದು ವಾರ್ಷಿಕ ಬೆಳೆಯಾಗಿದ್ದು, ಒಂದು ಬೆಳೆಯಾಗಿ ಅಥವಾ ಮಿಶ್ರಬೆಳೆಯಾಗಿಯೂ (ಶೇಂಗಾ, ಅಲಸಂದಿ ಜೊತೆಯಾಗಿ) ಬೆಳೆಯಬಹುದು. ಕಟಾವಾದ ನಂತರ ಬಹಳ ದಿನಗಳವರೆಗೆ ಸಂರಕ್ಷಿಸಬಹುದು.

ಅಧಿಕ ಇಳುವರಿ ಕೊಡುವ ಅನೇಕ ರಾಸಾಯನಿಕಗಳು ರಸಗೊಬ್ಬರಗಳಿದ್ದರೂ ರೈತರಿಗೆ ಎಕರೆಗೆ ೧೫ ಕ್ವಿಂಟಾಲ್ ಸಿಗುವುದು. ಆದರೆ ಹಾವೇರಿ ಭಾಗದ ರೈತರಿಗೆ ಗುಳಿ ವಿಧಾನ ಬಳಸುವುದರಿಂದ ೧೮-೨೦ ಕ್ವಿಂಟಾಲ್ ದೊರೆಯುತ್ತಿದೆ. ಇದರಿಂದ ಅವರಿಗೆ ಹೈಬ್ರಿಡ್ ಬಳಸುವ ಅವಶ್ಯಕತೆ ಇಲ್ಲ. ಈ ವಿಧಾನ ಅತ್ಯಂತ ಸರಳವಾಗಿದ್ದು ಯಾರು ಬೇಕಾದರೂ ಅಳವಡಿಸಿಕೊಳ್ಳಬಹುದಾಗಿದ್ದು, ಇದು ಹಾವೇರಿ ರೈತರ ಸಾಧನೆಯಾಗಿದೆ.

ಭೂಮಿಯ ಸಿದ್ಧತೆ ಮತ್ತು ರಸಗೊಬ್ಬರಗಳು[ಬದಲಾಯಿಸಿ]

  • ಎರಡು ಬಾರಿ ಉಳುಮೆ ಮಾಡುವುದು ಉತ್ತಮ.
  • ಭೂಮಿಯನ್ನು ಸಮಮಾಡಿ ಕಳೆ ಬೀಜಗಳನ್ನು ತೆಗೆಯುವುದು.
  • ಕೊರಡು ಬಳಸಿ ಭೂಮಿ ಉಳುಮೆ ಮಾಡಿ ಬಿತ್ತುವುದಕ್ಕೆ ಸಿದ್ಧತೆ ಮಾಡುವುದು.
  • ಬಿತ್ತುವ ೧೫ ದಿನಗಳ ಮುಂಚೆ ೧೫ ರಿಂದ ೨೦ ಟನ್ ಸಾವಯವ ಗೊಬ್ಬರ ಪ್ರತಿ ಎಕರೆಗೆ ಬಳಸುವುದು. ಇದರಿಂದ ಉತ್ತಮ ಇಳುವರಿ ಸಾಧ್ಯ.

ಬಿತ್ತನೆ[ಬದಲಾಯಿಸಿ]

ಈ ವಿಧಾನವನ್ನು ಬಳಸಿ. ರಾಗಿ ಬಿತ್ತನೆಯ ವಿವಿಧ ಹಂತಗಳು

  • ಎರಡು ಬಾರಿ ಪೂರ್ವ, ಪಶ್ಚಿಮ ಮತ್ತು ಉತ್ತರ, ದಕ್ಷಿಣಕ್ಕೆ ಉಳುಮೆ ಮಾಡಿ ಗುಳಿ ಬೀಳಿಸಿ.
  • ಸಾಲಿನ ನಡುವಿನ ಅಂತರ ಅರ್ಧ ಅಡಿ ಇರಲಿ.
  • ಎರಡು ಸಾಲು ಸೇರುವಲ್ಲಿ ಗುಳಿ ಮಾಡಿ ಅದರಲ್ಲಿ ಗೊಬ್ಬರ ಹಾಕಿ.
  • ಎಲ್ಲಾ ಗುಳಿಗಳಲ್ಲಿ ಎರಡೆರಡು ೨೦-೨೫ ದಿನದ ಪೈರುಗಳನ್ನು ನೆಡಿ.
  • ಪೈರುಗಳು ೩೦ ದಿನ ಮೀರಿರಬಾರದು.

ಮಿಶ್ರಬಿತ್ತನೆ: ಎಡೆಕುಂಟೆ ಮತ್ತು ಕೊರಡು[ಬದಲಾಯಿಸಿ]

  • ಬಿತ್ತನೆಯ ಒಂದು ವಾರದ ನಂತರ ನಾಲ್ಕು ದಿಕ್ಕುಗಳಲ್ಲಿ ಎಡೆಕುಂಟೆ ಬಳಸಿ ಅನಾವಶ್ಯಕ ಕಳೆಗಳನ್ನು ತೆಗೆಯಿರಿ.
  • ಬಿತ್ತನೆಯ ೨೫ ದಿನಗಳ ನಂತರ ೩-೪ ಬಾರಿ ಕೊರಡು ಉಪಯೋಗಿಸಿ. ಇದು ಪೈರಿನ ಉತ್ತಮ ಬೆಳೆವಣಿಗೆಗೆ ಸಹಾಯಕ ಮತ್ತು ಕ್ರಿಮಿಕೀಟಗಳ ಕಾಟದಿಂದ ಮುಕ್ತಿ ನೀಡುವುದು.
  • ಕೊರಡು ಬಳಕೆಯಿಂದ ಪೈರಿನ ಬೆಳೆವಣಿಗೆ ಉತ್ತಮವಾಗುವುದು.
  • ಎಡೆಕುಂಟೆ ೫ ರಿಂದ ೬ ಬಾರಿ ಮತ್ತು ೩ ರಿಂದ ೪ ಬಾರಿ ಕೊರಡು ಉಪಯೋಗ ಅತ್ಯಾವಶ್ಯಕ.

ಕೊರಡು ಒಂದು ಉಪಯುಕ್ತ ಸಾಧನವಾಗಿದ್ದು, ಗಂಟುಗಳನ್ನು ಒಡೆಯುವುದು ಮತ್ತು ಭೂಮಿ ಸಮತಟ್ಟು ಮಾಡುವುದಕ್ಕೆ ಸಹಾಯಕ. ಬಿತ್ತನೆ ಸಮಯದಲ್ಲಿ ಅನಾವಶ್ಯಕ ಹುಳು ಹುಪ್ಪಟೆ ನಿಯಂತ್ರಣ ಮಾಡುವುದು. ಇದು ಒಂದು ಮರದ ಸಾಧನವಾಗಿದ್ದು (ಬಗನೆ ಮರದಿಂದ) ಐದೂವರೆ ಅಡಿ ಉದ್ದ ಮತ್ತು ಒಂದು ಅಡಿ ದಪ್ಪವಿದ್ದು ಕೆಳಗಡೆ ಟೊಳ್ಳಾಗಿದೆ. ಹಾವೇರಿಯಲ್ಲಿ ಇದರ ಉಪಯೋಗ ಬಹಳ.

ಮಿಶ್ರ ಬೆಳೆ ಬೇಸಾಯ[ಬದಲಾಯಿಸಿ]

  • ಅಲಸಂದಿ, ಹೆಸರು ಮುಂತಾದ ಬೆಳೆಗಳನ್ನು ರಾಗಿ ಬಿತ್ತನೆಯ ಹದಿನೈದು ದಿನಗಳ ನಂತರ ಮಿಶ್ರ ಬೆಳೆಯಾಗಿ ಬೆಳೆಯಬಹುದು.
  • ರಾಗಿ ಮತ್ತು ಮಿಶ್ರಬೆಳೆಯನ್ನು ೬:೧ ರ ಅನುಪಾತದಲ್ಲಿ ಬೆಳೆಯಬಹುದು. ಎಡೆಕುಂಟೆ ಮತ್ತು ಕೊರಡು ಬಳಕೆ ಒಂದೇ ದಿಕ್ಕಿನ ಬಳಕೆ ಅವಶ್ಯಕ.
  • ಅಕ್ಟೋಬರ್ ಅಥವಾ ನವೆಂಬರ್ ತಿಂಗಳು ಹುರುಳಿ ಬೆಳೆಯಬಹುದು.

ತಳಿಗಳು[ಬದಲಾಯಿಸಿ]

ಸ್ಥಳೀಯ ತಳಿಗಳಾದ ಉಂಡೆ (ಹಾವೇರಿ), ಎಡಗು ಮತ್ತು ಬುಲ್ಡೆ (ಶಿಕಾರಿಪುರ) ತಳಿಗಳು ಉತ್ತಮ.

ಉಂಡೆ ತಳಿಯ ವಿಶೇಷಗಳು

  • ಎತ್ತರ ೩-೩.೫ ಅಡಿ
  • ಗುಳಿಗೆ ೨೫ ರಿಂದ ೩೦ ಪೈರುಗಳು
  • ಅವಧಿ ೨೦ ರಿಂದ ೧೩೦ ದಿನಗಳು

ಇಳುವರಿ[ಬದಲಾಯಿಸಿ]

ರೈತರ ಅನುಭವದ ಪ್ರಕಾರ ಕನಿಷ್ಠ ೧೮ ರಿಂದ ೨೦ ಕ್ವಿಂಟಾಲ ಇಳುವರಿ (ಗರಿಷ್ಠ ೨೫) ಮತ್ತು ೮ ರಿಂದ ೧೦ ಗಾಡಿ ಮೇವು ಪ್ರತಿ ಎಕರೆಗೆ ದೊರೆಯುವುದು.

ಗುಳಿ ವಿಧಾನದ ವಿಶೇಷಗಳು[ಬದಲಾಯಿಸಿ]

  • ಸಾಲಿನ ಅಂತರ ೧.೫ ಅಡಿ
  • ಸೂರ್ಯನ ಬೆಳಕು, ತೇವಾಂಶ ಮತ್ತು ರಸಗೊಬ್ಬರದ ಅವಶ್ಯಕತೆ ಕಡಿಮೆ.
  • ಸಾಲಿನ ನಡುವಿನ ಅಂತರ ದ್ಯುತಿಸಂಶ್ಲೇಷಣ ಕ್ರಿಯೆಗೆ ಸಹಾಯಕ.
  • ಕೊರಡು ಬಳಸುವುದು ಉತ್ತಮ ಇಳುವರಿಗೆ ಸಹಾಯಕ.

ಜನಪದ ಸಾಹಿತ್ಯದಲ್ಲಿ ರಾಗಿ[ಬದಲಾಯಿಸಿ]

ಜನಪದರಲ್ಲಿ ರಾಗಿಯ ಬಗೆಗೆ ವಿಶೇಷ ಗೌರವ ಮಮತೆಗಳಿವೆ. ಇದು ಜನಪದರ ಮೂಲ ಜೀವನಾಧಾರ ಆಹಾರ. ರಾಗಿಯನ್ನು ಆಹಾರದ ಅನೇಕ ರೂಪಗಳಲ್ಲಿ ಬಳಸುವುದುಂಟು. ಸೇವಿಗೆಯನ್ನು ರಾಗಿಯಿಂದ ತಯಾರಿಸಲಾಗುತ್ತದೆ. ರಾಗಿಯ ಪೌಷ್ಟಿಕತೆಯನ್ನು ಎತ್ತಿಹಿಡಿಯುವ `ರಾಗಿ ತಿಂದವ ನಿರೋಗಿ' ಎಂಬ ಗಾದೆ ಮಾತು ರೂಢಿಯಲ್ಲಿದೆ. ಜನಪದರು ರಾಗಿಮುದ್ದೆ ಹಾಗೂ ಮಾಂಸದ ಎಸರನ್ನು ಪಂಚಪ್ರಾಣವೆಂದು ಭಾವಿಸುತ್ತಾರೆ. `ಸಿಂಡುಪಂಡು ಎಂದರೆ ಚೆಂಡು ವೋಟು' ಎಂಬ ಗಾದೆ ಮಾಂಸದ ಎಸರಿದ್ದರೆ ಒಂದು ರಾಗಿಮುದ್ದೆಗಿಂತಲೂ ಹೆಚ್ಚು ಉಣ್ಣುವ, ಉಣ್ಣಬಯಸುವ ಅಪೇಕ್ಷೆಯನ್ನು ಸೂಚಿಸುತ್ತದೆ. ಇದೇ ಭಾವವನ್ನು ಬಿಂಬಿಸುವ ಇನ್ನೊಂದು ಗಾದೆ; `ಕೋಳಿಬಾಡ ಎಸರು, ಕೋಲಮ್ಯಾಗಲ ಹಿಟ್ಟು (ಬಿಸಿಹಿಟ್ಟು), ತೊರೆಮಳ್ಳು (ಮರಳು), ಹೊಂಗೆನೆಳ್ಳು (ನೆರಳು), ಸಗ್ಗಸುಳ್ಳು. ಈ ಗಾದೆ ಜನಪದರ ಲೌಕಿಕ ಜೀವನಾಪೇಕ್ಷೆಯ ಪರಾಕಾಷ್ಠತೆಯನ್ನು ಅವರ ಕೈಗೆಟಕುವ ಸ್ವರ್ಗದ ಸುಖವನ್ನೂ ಮನವರಿಕೆ ಮಾಡಿಕೊಡುತ್ತದೆ.

ಕನಕದಾಸರು ಬರೆದಿರುವ, ಜನಪರ ನಿಲುವಿನ, ರಾಗಿಯ ಶ್ರೇಷ್ಠತೆಯನ್ನು ಸಾರುವ 'ರಾಮಧಾನ್ಯ ಚರಿತೆ' ಎಂಬ ಖಂಡಕಾವ್ಯ ಇಲ್ಲಿ ಉಲ್ಲೇಖನೀಯ. ರಾಮನಿಗೆ ಪ್ರಿಯವಾದ `ರಾಮಧಾನ್ಯ' ಎಂದು ಹೆಸರು ಪಡೆದ `ರಾಗಿ' ಮತ್ತು `ವ್ರೀಹಿ' ಭತ್ತ - ಇವುಗಳ ನಡುವೆ ನಡೆದಂಥ ಸ್ವಾರಸ್ಯಕರ ಸಂಘರ್ಷದ ಜೀವಂತ ಚಿತ್ರಣವನ್ನು ಈ ಪುಟ್ಟಕಾವ್ಯದಲ್ಲಿ ನಾವು ಕಾಣುತ್ತೇವೆ. ವ್ರೀಹಿ ಶ್ರೀಮಂತರನ್ನು ರಾಗಿ ಶ್ರೀಸಾಮಾನ್ಯರನ್ನೂ ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ.

ಪುರಂದರ ದಾಸರ `ರಾಗಿ ತಂದೀರಾ ಭಿಕ್ಷಕೆ ರಾಗಿ ತಂದೀರಾ' ಎಂಬ ಪದ್ಯದಲ್ಲಿ ಅವರಿಗಿದ್ದ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ದಾಸರು ಉಪಾದಾನಕ್ಕೆ ಬಂದಾಗ ಒಂದು ಮನೆಯಲ್ಲಿ ಅಕ್ಕಿಗೆ ಬದಲಾಗಿ ರಾಗಿ ದೊರಕಿತು. ರಾಗಿ ಎಂಬ ಮಾತನ್ನೇ (ಅದರ ನಾಮವಾಚಕ ಹಾಗೂ ಕ್ರಿಯಾವಾಚಕ ರೂಪಗಳನ್ನು ಗಮನಿಸಿಕೊಂಡು) ಹಿಡಿದು ಅದರ ಸುತ್ತ ಹೆಣೆದಿರುವ ಜಾಣತನದ ಪದ ಇದು.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Borlaug, Norman E.; Axtell, John; Burton, Glenn W.; Harlan, Jack R.; Rachie, Kenneth O.; Vietmeyer, Noel D. (1996). Lost Crops of Africa: Volume I: Grains. U.S. National Research Council Consensus Study Report (in ಇಂಗ್ಲಿಷ್). Washington, D.C.: National Academies Press. doi:10.17226/2305. ISBN 978-0-309-04990-0. LCCN 93-86876. OCLC 934889803. OL 9872024M.
  2. http://www.agrifarming.in/finger-millet-farming/
  3. https://web.archive.org/web/20180916062008/https://www.kannadigaworld.com/kannada/karnataka-kn/295498.html

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ರಾಗಿ&oldid=1208930" ಇಂದ ಪಡೆಯಲ್ಪಟ್ಟಿದೆ