ವಿಷಯಕ್ಕೆ ಹೋಗು

ಜೈಮಿನಿ ಭಾರತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಕ್ಮೀಶನ ಕೃತಿ

[ಬದಲಾಯಿಸಿ]
Jaimini Bharata, Wesleyan Mission Press, Bangalore, 1852[]

ಲಕ್ಷ್ಮೀಶನ ಕೃತಿಯಾದ ಜೈಮಿನಿ ಭಾರತದಲ್ಲಿ ಮಹಾಭಾರತದ ಅಶ್ವಮೇಧ ಪರ್ವದ ಕಥೆಯನ್ನು ಹೇಳಿದೆ. ಇದರಲ್ಲಿ ವೀರ ರಸ ಪ್ರಧಾನವಾಗಿದ್ದು, ಭಕ್ತಿ ಮತ್ತು ಶೃಂಗಾರ ವರ್ಣನೆಗಳನ್ನು ಒಳಗೊಂಡಿದೆ. ಜೈಮಿನಿ ಭಾರತವು ಒಂದು ಕಥೆ ಎನ್ನುವುದಕ್ಕಿಂತ ಕಥಾಸಂಗ್ರಹವೆನ್ನಲು ಯೋಗ್ಯವಾಗಿದೆ. ಕಾವ್ಯದಲ್ಲಿ ಪಾಂಡವರ ಕಥೆ ಆನುಷಂಗಿಕವಾಗಿದ್ದು ಕೃಷ್ಣನ ಪಾರಮ್ಯ ಅಥವಾ ಹೆಚ್ಚುಗಾರಿಕೆಗೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಇದನ್ನು ಕೃಷ್ಣಭಕ್ತರ ಕಥಾಗುಚ್ಛವಾಗಿ ಕವಿ ನಿರೂಪಿಸಿದ್ದಾನೆ.

  • "ಅಶ್ವಮೇಧಯಾಗ' ವೆಂದರೆ ಚಕ್ರವರ್ತಿ/ರಾಜನಾದವನು ತನ್ನ ಅಸಮ ಪ್ರಾಬಲ್ಯವನ್ನು ತೋರಿಸಲು ಮತ್ತು ಪುಣ್ಯ ಸಂಪಾದನೆಗಾಗಿ ಅಥವಾ ಯವುದೋ ದೋಷ ಪರಿಹಾರಾರ್ಥವಾಗಿ ವಿಧಿಪೂರ್ವಕವಾಗಿ ಮಾಡುವ ಒಂದು ಯಜ್ಞ. ಇದರಲ್ಲಿ ಕೊನೆಗೆ ಯಜ್ಞಕ್ಕೆ ಬಲಿಕೊಡುವ ಒಂದು ಲಕ್ಷಣವಾದ ಕುದುರೆಯನ್ನು, ಅದು ಒಂದು ವರ್ಷ ಮನಬಂದಂತೆ ದೇಶ ಸುತ್ತಲು ಬಿದುವರು. ಅದರ ಹಣೆಯ ಮೇಲೆ, "ಶಕ್ತಿಯಿದ್ದವರು ಇದನ್ನು ಕಟ್ಟಿ ಬೆಂಗಾವಲಿನವರೊಡನೆ ಯುದ್ಧಮಾಡುವುದು, ಇಲ್ಲವೆ ಶರಣಾಗಿ ಕಪ್ಪ ಕೊಡುವುದು" ಎಂದು ಬರೆದ ಒಂದು ಬಂಗಾರದ ತಗಡಿನ ಫಲಕವಿರುವುದು. ಅಥವಾ ಸ್ನೇಹದಿಂದ ಯಜ್ಞಕ್ಕೆ ಸಹಕಾರ ನೀಡಬಹುದು. ಒಂದು ವರ್ಷದ ನಂತರ ಕುದುರೆಯನ್ನು ಮರಳಿ ತಂದ ನಂತರ ಯಜ್ಞಮಾಡಿ ಅನೇಕ ದಾನಗಳನ್ನು ಮಾಡಿ ಎಲ್ಲರನ್ನೂ ಸತ್ಕರಿಸಿ ಬೀಳ್ಕೊಡುವರು.
  • ವ್ಯಾಸಭಾರತದಲ್ಲಿ ಅಶ್ವಮೇಧ ಪರ್ವವು ಅಷ್ಟು ವಿಸ್ತಾರವಾಗಿಲ್ಲ. ವ್ಯಾಸಮುನಿಯ ಪ್ರಿಯ ಶಿಷ್ಯನಾದ ಜೈಮಿನಿ ಮುನಿಯು ಅಶ್ವಮೇಧ ಪರ್ವವನ್ನು ವಿಸ್ತಾರವಾದ ಕಥಾ ಸಂವಿಧಾನದೊಡನೆ ಸಂಸ್ಕೃತದಲ್ಲಿ ರಚಿಸಿದ್ದಾನೆ. ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ಲಕ್ಷ್ಮೀಶ ಕನ್ನಡದಲ್ಲಿ 'ಜೈಮಿನಿ ಭಾರತ' ವೆಂಬ ಕಾವ್ಯವನ್ನು ರಚಿಸಿದ್ದಾನೆ. ಈ ಕಾವ್ಯದಲ್ಲಿ ಭಾಗವತ ದೃಷ್ಟಿಯೇ ಎಂದರೆ ಕೃಷ್ಣನ ಮಹಿಮೆಯು ಇದರ ವಿಶೇಷ.
  • ವ್ಯಾಸ ಭಾರತದ ಮೊದಲ ೧೦ ಪರ್ವಗಳನ್ನು ಕುಮಾರವ್ಯಾಸನು ಕನ್ನಡಕ್ಕೆ ತಂದರೆ ಉಳಿದ ಎಂಟು ಪರ್ವಗಳನ್ನು ತಿಮ್ಮಣಕವಿಯು ಕನ್ನಡದಲ್ಲಿ ಮೂಡಿಸಿದ್ದಾನೆ. ಲಕ್ಷ್ಮೀಶನು ಮಹಾಭಾರತದ ಅಶ್ವಮೇದ ಪರ್ವವನ್ನು ಮಾತ್ರಾ ವಿಸ್ತರಿಸಿ ಬರೆದಿದ್ದಾನೆ.
  • ಲಕ್ಷ್ಮೀಶನ ಕಾಲ ಸ್ಪಷ್ಟವಾಗಿ ತಿಳಿದಿಲ್ಲ. ಅವನು ಹದಿನಾಲ್ಕನೇ ಶತಮಾದಿಂದ ಹದಿನೇಳನೇ ಶತಮಾನದ ನಡುವಿನ ಕಾಲದಲ್ಲಿದ್ದ ಬ್ರಾಹ್ಮಣ ಕವಿ. ಹದಿನಾರು - ಹದಿನೇಳನೇ ಶತಮಾನದವನೆಂಬುದಕ್ಕೆ ಹೆಚ್ಚು ಸಂಶೋಧಕರ ಒಲವಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ದೇವನೂರಿನವನು.

ಮೂಲ ಕಾವ್ಯ ಮತ್ತು ಮುದ್ರಣ

[ಬದಲಾಯಿಸಿ]
  • ಈತನು ವರಕವಿ. ಕುಮಾರವ್ಯಾಸನ ನಂತರದ ಹೆಚ್ಚು ಜನಪ್ರಿಯ ಕವಿ. ಸಂಸ್ಕೃತ, ಹಳಗನ್ನಡ ಮತ್ತು ಹೊಸಗನ್ನಡ ಇವುಗಳಲ್ಲಿ ಸಂಪೂರ್ಣ ಪಾಂಡಿತ್ಯ ಪಡೆದವನು. ರಸಗರ್ಭಿತವಾದ ಈ ಉದ್ಗ್ರಂಥವನ್ನು ಮೂವತ್ನಾಲ್ಕು ಸಂಧಿಗಳಾಗಿ ವಿಭಾಗಿಸಿ ಜನರ ಮನಮೆಚ್ಚುವಂತೆ ವಾರ್ಧಿಕ ಷಟ್ಪದಿಯಲ್ಲಿಬರೆದಿದ್ದಾನೆ. ಆಗ ಕಾಗದ ಮುದ್ರಣವಿರದಿದ್ದರಿಂದ ಇದನ್ನು ತಾಳೆಗರಿಯಲ್ಲಿ ಬರೆದಿದ್ದಾನೆ. ಕರ್ನಾಟಕ ಕವಿಚೆರಿತೆ ಬರೆದ ಆರ್.ನರಸಿಂಹಾಚಾರ್ಯರು ಅದರಲ್ಲಿ, ಈ ಬಗೆಯ ಷಟ್ಪದಿಯ ಅತ್ಯುತ್ತಮ ಮಾದರಿಯನ್ನು ಈ ಕಾವ್ಯದಲ್ಲಿ ಕಾಣಬಹುದು ಎಂದು ಬರೆದಿದ್ದಾರೆ. ಅಲ್ಲದೆ ಇವನೇ ಎಲ್ಲರಿಗಿಂತ ಹೆಚ್ಚು ಜನಪ್ರಿಯ ಕವಿ ಎಂದಿದ್ದಾರೆ.
  • ಈ ಕಾವ್ಯದ ಸವಿಯನ್ನು ಅನುಭವಿಸಿದವರು ಈ ಗ್ರಂಥವನ್ನು ಅನೇಕ ಪ್ರತಿಗಳನ್ನು ಮಾಡಿ ಕನ್ನಡ ನಾಡಿನಾದ್ಯಂತ ಹಬ್ಬಿಸಿದ್ದಾರೆ. ಹೀಗೆ ಗ್ರಂಥವನ್ನು ಪ್ರತಿಮಾಡುವಾಗ ಅಲ್ಲಲ್ಲಿ ವ್ಯತ್ಯಾಸವು ತಲೆದೋರಿದೆ. ಮೊದಲಿಗೆ ವೇ|ಭಾರತೀ ಸಂಪಂಗಿರಾಮಯ್ಯ ನವರೇ ಮೊದಲಾದವರು ಕಷ್ಟಪಟ್ಟು ಅನೇಕ ಪ್ರತಿಗಳನ್ನು ಪರಿಶೀಲಿಸಿ ಒಂದು ಉತ್ತಮ ಪಾಠದ ಪ್ರತಿಯನ್ನು ತಯಾರಿಸಿದರು.
  • ಅದಕ್ಕೆ ಪದವಿಂಗಡಣೆ ಮತ್ತು ಅಗತ್ಯ ಚಿನ್ಹೆಗಳನ್ನು ಬುರುಗನಹಳ್ಳಿ ಭೀಮಸೇನ ಶರ್ಮರು ಹಾಕಿಕೊಟ್ಟರು ಅದನ್ನು ಬೆಂಗಳೂರಿನ ಶ್ರೀ ಟಿ.ಎನ್ ಕೃಷ್ಣಯ್ಯಶೆಟ್ಟರು ಮೊದಲು ಮುದ್ರಿಸಿದರು. ಆನಂತರ ಸಾಹಿತ್ಯ ಪರಿಷತ್ತಿನವರು ಪುನಃ ಪರಿಷ್ಕರಿಸಿ ಮುದ್ರಿಸಿರುವರು.

ಕಾವ್ಯ

[ಬದಲಾಯಿಸಿ]

ಕಾವ್ಯದಲ್ಲಿ ಮೂವತ್ನಾಲ್ಕು ಸಂಧಿಗಳು ಈ ಕೆಳಗೆ ತಿಳಿಸಿದ ರೀತಿ ಇವೆ:

  • ೧. ಪೀಠಿಕಾ ಸಂಧಿ:

ಶ್ರೀವಧುವಿನಂಬಕ ಚಕೋರಕಂ ಪೊರೆಯೆ, ಭ|
ಕ್ತಾವಳಿಯ ಹೃತ್ಕುಮುದ ಕೋರಕಂ ಬಿರಿಯೆ ಜಗ|
ತೀವಲಯದಮಲ ಸೌಭಾಗ್ಯ ರತ್ನಾಕರಂ ಪೇರ್ಚಿನಿಂ ಮೇರೆವರಿಯೆ||
ಆವಗಂಸರಸಕರುಣಾಮೃತದ ಕಲೆಗಳಿಂ|
ತೀವಿದೆಳೆನೆಗೆಯಬೆಳದಿಂಗಳಂ ಪಸರಿಸುವ|
ದೇವಪುರನಿಲಯ ಲಕ್ಷ್ಮೀರಮಣನಾಸ್ಯ ಚಂದ್ರಾನಂದವೆಮಗೀಯಲಿ||

  • ಹೀಗೆ ತನ್ನ ಊರಿನ ಅಧಿದೇವತೆಯಾದ ದೇವಪುರನಿಲಯ ಲಕ್ಷ್ಮೀರಮಣನ ಸ್ತುತಿ ಮಾಡಿ ನಂತರ ಶಿವ, ಸಿದ್ದಿವಿನಾಯಕ ಮತ್ತು ವಾಣಿಯರ ಪ್ರಾರ್ಥನೆ ಮಾಡಿ, ತನ್ನ ಕಾವ್ಯದ ಬಗೆಗೆ ಮೆಚ್ಚುಗೆಯ ಮಾತು, ಹಾಗೆಯೇ ಓದುಗರಿಗೆ "ಕಾವ್ಯಂ ಕೇಳ್ದು ಮಥಿಸಿ ... ಮತ್ಸರವನುಳಿದಾಲಿಸುವುದು. ಲಕ್ಮೀವರಂ ತಾನೆ...ಪೇಳಿಸಿದನೆಂದರಿದು ಕೇಣಮಂ ತೊರೆದು ...ಕಿವಿದೆರೆದು ಕೇಳ್ವದು ಸುಜನರು" ಎಂದು ಕೇಳಿಕೊಳ್ಳತ್ತಾನೆ. ತನ್ನ ಬಗೆಗೆ "ವಿರಚಿಸಿದಂ ಭರದ್ವಾಜಗೋತ್ರ ಭವನಣ್ಣಮಾಂಕನಸುತಂ ಸದ್ವಿನುತ ಕರ್ನಾಟಕವಿಚೂತವನಚೈತ್ರ ಲಕ್ಷ್ಮೀಶನೆಂಬೋರ್ವನು" ಎಂದು ಪರಿಚಯ ಹೇಳಿಕೊಂಡಿದ್ದಾನೆ.
  • ಇವನ ಕಾವ್ಯವು ಉಪಮಾನಕ್ಕೆ ಪ್ರಸಿದ್ಧವಾಗಿದೆ. ಇವನು ಕಾವ್ಯದಲ್ಲಿ ಉಪಯೊಗಿಸಿದ ಅನೇಕ ಉಪಮಾನಗಳು ನಾಡುನುಡಿಯಲ್ಲಿ ಸೇರಿಕೊಂಡಿವೆ.

ಅಶ್ವಮೇಧ ಯಾಗದ ಕಥೆಯ ಆರಂಭ

[ಬದಲಾಯಿಸಿ]
  • ಎರಡನೇ ಸಂಧಿಯಿಂದ ಕಥೆಯು ಆರಂಭವಾಗುವುದು.ಹಸ್ತನಾಪುರದ ಅರಸನಾದ ಜನಮೇಜಯನು ಜೈಮಿನಿ ಮುನೀಂದ್ರನನ್ನು ಕುರಿತು,"ಕೌರವರನ್ನು ಜಯಿಸಿದ ನಂತರ 'ಪಾಂಡವರು ಅದು ಎಂತಿಳೆಯನೋವಿದರದೇಗೈಯ್ದರೆಂದು", ಕೇಳಿದನು ಅದಕ್ಕೆ ಮನಿಪನು ಪೇಳ್ದನು ಆ ಭೂಪಂಗೆ "ಜನಸಂತತಿಗೆ ಕರ್ಣಾವಸಂತಮೆನೆ ಮಧುರತರ ಭಾರತದ ಸತ್ಕಥೆಯನು. ಎಂದು ಅಶ್ವಮೇಧ ಯಾಗದ ಕಥೆಯು ಆರಂಭವಾಗುವುದು.
  • ಮಹಾಭಾರತದ ಕಥೆಯನ್ನು ಜನಮೇಜಯನಿಗೆ ಸರ್ಪಯಾಗ ದೋಷದಿಂದ ಬಂದ ಕುಷ್ಠರೋಗನಿ ವಾರಣೆಗಾಗಿ ವ್ಯಾಸಮಹರ್ಷಿಯು ಅವರ ಶಿಷ್ಯನಾದ ವೈಶಂಪಾಯನ ಮುನಿಯಿಂದ ಮಹಾಭಾರತದ ಕಥೆಯನ್ನು ಕೇಳಲು ಹೇಳಿದನು. ಅದರಂತೆ ಜನಮೇಜಯನ ಕೋರಿಕೆ ಮೇರೆಗೆ ವೈಶಂಪಅಯನ ಮುನಿಯು ಮಹಾಭಾರತದ ಕಥೆಯನ್ನು ಪೂರ್ಣವಾಗಿ ಹೇಳಿದನು. ಆದರೆ ಕುಷ್ಠರೋಗವು ಸ್ವಲ್ಪ ಉಳಿಯಿತು. ಅದಕ್ಕೆ ವ್ಯಾಸನು ಜನಮೇಜಯನಲ್ಲಿದ್ದ ಕೆಲವು ಸಂದೇಹ ನಿವಾರಣೆ ಮಾಡಿಕೊಳ್ಳಲು ಪುನಃ ಅದೇ ಕಥೇಯನ್ನು ಕೇಳಲು ಹೇಳಿದನು. ಆಗ ವ್ಯಾಸರ ಶಿಷ್ಯನಾದ ಜೈಮಿನಿಯನ್ನು ಜನಮೇಜಯನು, ಪನಃ ಮಹಾಭಾರತದ ಕಥೆಯನ್ನು ವಿಸ್ತಾರವಾಗಿ ಹೇಳಲು ಕೋರಿಕೊಂಡನು.[]
  • ಅದರಂತೆ ಜೈಮಿನಿ ಮುನಿಯು ಮೊದಲಿಂದ ಹೇಳಿದ ಪೂರ್ಣ ಕಥೆಯಲ್ಲಿ ಅಶ್ವಮೇಧ ಪರ್ವದ ಕಥೆ ಮಾತ್ರಾ ಇಲ್ಲಿ ಪ್ರಸ್ತುತವಾಗಿದೆ.ಅದನ್ನು ಆಧಾರವಾಗಿಟ್ಟುಕೊಂಡು ಲಕ್ಷ್ಮೀಶಕವಿಯು ತನ್ನ ಸ್ವಂತ ಪ್ರತಿಭೆ ಉಪಯೋಗಿಸಿ ಅಗತ್ಯ ಬದಲಾವಣೆ ಮಾಡಿಕೊಂಡು ಬರೆದುದು. ಕನ್ನಡ ಜೈಮಿನಿ ಭಾರತ. ಕುಮಾರವ್ಯಾಸ ಮತ್ತು ತಿಮ್ಮಣ್ಣಕವಿ ಬರೆದುದು ವೈಶಂಪಾಯನ ಮುನಿ ಜನಮೇಜಯನಿಗೆ ಹೇಳಿದ ಮಹಾಭಾರತದ ಕಥೆ.

ಜೈಮಿನಿ ಭಾರತ ಕಥಾ ಸಾರಾಂಶ

[ಬದಲಾಯಿಸಿ]
ಕುದುರೆಯು ಸಂಚರಿಸಿದ ರಾಜ್ಯಗಳು
  • ಮೊದಲು ಭೀಮನು ಯಜ್ಞದ ಕುದುರೆಯನ್ನು ತರಲು ಪಕ್ಕದ ರಾಜ್ಯ ಭದ್ರಾವತಿಗೆ ಹೋಗಿ ಅಲ್ಲಿಯ ರಾಜನನ್ನು ಸೋಲಿಸಿ, ದ್ವಾರಕೆಗೆ ಹೋಗಿ ಕೃಷ್ಣನ್ನು ಹಸ್ತಿನಾವತಿಗೆ ಕರೆತರುವನು.
  • ನಂತರ 'ಶಕ್ತರು ಕಟ್ಟಿ ಕಾದುವುದೆಂದು' ಹಣೆಯ ಮೇಲೆ ಬರೆದ ಯಜ್ಞದ ಕುದುರೆಯನ್ನು ದೇಶ ಸುತ್ತಲು ಬಿಡುವರು. ಅರ್ಜುನ ನಂತರ ಕೃಷ್ಣ ಅದರ ಬೆಂಗಾವಲಾಗಿ ಹೋಗುವರು. ಅದು ಮಾಹಿಷ್ಮತಿ, ಚಂಪಕಪುರ, ಸ್ತ್ರೀ ರಾಜ್ಯ, (ಮಲಯಾಳ-ಪಾಂಡ್ಯ), ರಾಕ್ಷಸರ ರಾಜ್ಯ, ಮಣಿಪುರ (ಮೈಸೂರಿನ ದಕ್ಣಿದ ನಗರರಾಜ್ಯ ವೆಂದು ಊಹೆ) , ರತ್ನಪುರ, ಸಾರಸ್ವತ, ಮತ್ತು ಕುಂತಲ ಈ ರಾಜ್ಯಗಳನ್ನು ದಾಟಿ, ನಂತರ ಸಮುದ್ರ ದಾಟಿ, ಸಿಂಧೂ ದೇಶಕ್ಕೆ ಹೋಗಿ ಅಲ್ಲಿಂದ ಹಸ್ತಿನಾಪುರಕ್ಕೆ ಹಿಂತಿರುಗುವುದು.
  • (ಈ ಭೂಪ್ರದೇಶಗಳು ಬಹಳಷ್ಟು ಊಹಾತ್ಮಕವೆಂದು ಪರಿಗಣಿಸುವರು.) []
.

ಸಂಧಿಯ ಅಂಕಗಳನ್ನು ಆವರಣದಲ್ಲಿ ಕೊಟ್ಟಿದೆ.

  • ಎರಡನೆಯ ಸಂಧಿ:ಧರ್ಮರಾಯನು ವ್ಯಾಸಮುನಿಯಿಂದ ಅಶ್ವಮೇಧ ಯಾಗದ ಕ್ರಮವನ್ನು ತಿಳಿದು, ಶ್ರೀಕೃಷ್ಣನ ಅನುಮತಿಯಿಂದ ಯಜ್ಞಪಶುವನ್ನು ತರಲು ಭೀಮನನ್ನು ಕಳುಹಿಸಿದನು. ೩) ಭೀಮನು ಭದ್ರಾವತಿ ಬಳಿಗೆ ಬಂದು ಅದರ ಸೊಬಗನ್ನು ವೃಷಕೇತುವಿಗೆ ವರ್ಣಿಸಿದನು. ೪.)ಭೀಮನು ಯೌನಾಶ್ವನನ್ನು ಸೋಲಿಸಿ ಸರ್ವಲಕ್ಷಣಸಂಪನ್ನ ವಾಧ ಯಜ್ಞಾಶ್ವವನ್ನು ಹಸ್ತಿನಾವಿಗೆ ತಂದನು. ೫)ಧರ್ಮರಾಯನು ಭೀಮನಜೊತೆಬಂದ ಯೌನಾಶ್ವನನ್ನು ಗೌರವದಿಂದ ಸತ್ಕರಿಸಿ, ಕೃಷ್ಠನನ್ನು ದ್ವಾರಕೆಗೆ ಕಳಿಸಿ ವ್ಯಾಸರು ಹೇಳಿದ ಧರ್ಮರಹಸ್ವನ್ನು ಕೇಳಿದನು. ೬)ಯಜ್ನ ದಿನ ಗೊತ್ತಾದನಂತರ ಭೀಮನು ಕೃಷ್ಣನನ್ನು ಕರೆತರಲು ದ್ವಾರಕೆಗೆ ಹೋದನು. ೭) ಭೀಮನೊಡನೆ ಶ್ರೀಕೃಷ್ಣನು ಹಸ್ತಿನಾವತಿಗೆ ಯಾದವರೊಡನೆ ಬರುವಾಗ ಅನುಸಾಲ್ವನನ್ನು ಸೋಲಿಸಿದನು.

ಅರ್ಜುನನಿಗೆ ಗಂಗೆಯ ಶಾಪ

[ಬದಲಾಯಿಸಿ]
  • ೮)ಅರ್ಜುನನ ಬೆಂಗಾವಲಿನಲ್ಲಿ, ದೇಶ ಸುತ್ತಲು 'ಇದು ಯುಧಿಷ್ಟಿರನ ಯಜ್ಞಾಶ್ವ ದಿಟ್ಟರು ಶಕ್ತರು ಕಟ್ಟಿಕೊಳ್ಳಬಹುದು -ಇಲ್ಲ ಶರಣಾಗಿ' ಎಂದು ಹಣೆಯಮೇಲೆ ಬರೆದ ಅಶ್ವಮೇಧ ಕುದುರೆಯನ್ನು ಬಿಡಲು ಮೊದಲು ಅದು ಮಾಹಿಷ್ಮತಿನಗರಕ್ಕೆ ಅದು ಬಂತು. ಅದನ್ನು ಅಗ್ನಿರಕ್ಷಣೆಯುಳ್ಳ ನೀಲಧ್ವಜ ರಾಜ ಕಟ್ಟಿದ. ಅರ್ಜುನ ಅಗ್ನಿಯನ್ನು ಮೆಚ್ಚಿಸಿ ರಾಜನನ್ನು ಗೆದ್ದು ಕುದುರೆಯೊಡನೆ ಮುಂದೆ ಸಾಗಿದನು. ೯)ನೀಲಧ್ವಜನ ಹೇಡತಿ ಸಿಟ್ಟಿನಿಂದ ಗಂಡನನ್ನು ತೊರೆದು ತಂತ್ದಿಂದ ಗಂಗೆಯಿಂದ ತನ್ನ ಮಗ ಭೀಷ್ಮನನ್ನು ಕೊಂದ ಅರ್ಜುನನಿಗೆ ಅವನ ಮಗನೇ ಅವನನ್ನು ಕೊಲ್ಲಲಿ ಎಂದು ಶಾಪವನ್ನು ಕೊಡಿಸಿದಳು. ೧೦)ಯಜ್ಞಾಶ್ವವು ಮುಂದೆ ಕಲ್ಲಿನಲ್ಲ ಸಿಕ್ಕಿದಾಗ ಸೌರಭ ಮುನಿಯಿಂದ ಉದ್ದಾಲಕನ ಮತ್ತು ಚಂಡಿಯ ಕಥೆ ಕೇಳಿ, ಕುದುರೆಯನ್ನು ಬಿಡಿಸಿಕೊಂಡು ಮುಂದೆ ಹಂಸಧ್ವಜನ ಪಟ್ಟಣಕ್ಕೆ ಹೋಗಲು ಅವನು ಕುದುರೆಯನ್ನು ಕಟ್ಟಿದನು.
  • ೧೧)ಸಮಯಕ್ಕೆ ಬರದೆ ಯುದ್ಧಕ್ಕೆ ತಪ್ಪಿಸಿಕೊಂಡನೆಂದು ಮಗ ಸುಧನ್ವನನ್ನು ಕುದಿಯುವ ಎಣ್ಣೆಕೊಪ್ಪರಿಗೆಗೆ ಹಾಕಿಸಿದನು, ಅವನು ಹರಿಧ್ಯಾನದಿಂದ ಸುಡದೆ ಬದುಕಿದನು. ೧೨) ನಂತರ ಕೃಷ್ಣನನ್ನೇ ಕರೆಸುವೆನೆಂದ ಸುಧನ್ವನು ವೃಷಕೇತುವನ್ನು ಯುದ್ಧದಲ್ಲಿ ಸೋಲಿಸಿದನು. ೧೩) ಆಗ ಅರ್ಜುನನು ಕೃಷ್ಣನನ್ನು ಸಾರಥಿಯಾಗಿ ಮಾಡಿಕೊಂಡು ಯುದ್ಧದಲ್ಲಿ ಸುಧನ್ವನ ತಲೆಯನ್ನು ಕತ್ತರಿಸಿದನು. ಸುಧನ್ವನ ತಮ್ಮ ವೀರ ಸುರಥನ ತಲೆಯನ್ನು ಯುದ್ಧದಲ್ಲಿ ಅರ್ಜುನನು ಕತ್ತರಿಸಲು ಕೃಷ್ಣನು ಅವನ ತಲೆಯನ್ನು ಪ್ರಯಾಗದಲ್ಲಿ ಹಾಕಲು ಗರುಡನಿಗೆ ಆಜ್ಞೆ ಮಾಡಿದನು. ಆದರೆ ಆ ತಲೆಯನ್ನು ಶಿವನು ಸ್ವೀಕರಿಸಿ ತನ್ನ ರುಂಡ ಮಾಲೆಯಲ್ಲಿ ಸೇರಿಸಿಕೊಂಡನು.

ಪ್ರಮೀಳೆಯ ಸ್ತ್ರೀ ರಾಜ್ಯಕ್ಕೆ ನಂತರ ಮಣಿಪುರಕ್ಕೆ

[ಬದಲಾಯಿಸಿ]
  • ೧೫)ಯಜ್ಞದ ಕುದುರೆಯು ಪಾರ್ವತಿಯ ತಪೋಭೂಮಿಯಾಗಿದ್ದ ಕಾಡಿನಲ್ಲಿ ಹೆಣ್ಣುಕುದುರೆಯಾಗಿ ನಂತರ ಕೊಳದ ನೀರು ಕುಡಿದು ಬ್ರಹ್ಮಶಾಪದಿಂದ ಹುಲಿಯಾಗಿ ಕೃಷ್ಣನ ಕೃಪೆಯಿಂದ ಮೊದಲಿನಂತಾಯಿತು. ನಂತರ ಪ್ರಮೀಳೆಯ ಸ್ತ್ರೀರಾಜ್ಯ ಪ್ರವೇಶ ಮಾಡಿತು. ೧೬)ಅರ್ಜುನನು ಆ ರಾಣಿಯನ್ನು ಸಂತೈಸಿ ನಂತರ ಮುಂದೆ ರಾಕ್ಷಸ ರಾಜ್ಯವನ್ನು ಪ್ರವೇಶಿಸುವನು. ಅಲ್ಲಿ ಭೀಷಣನೆಂಬ ರಾಕ್ಷಸನನ್ನೂ ಮೇಧೋಹೋತನನ್ನೂ ಯೋಜನಸ್ತನಿ ಮೊದಲಾದ ಅನೇಕ ರಾಕ್ಷಸಿಯರನ್ನೂ ಸಂಹರಿಸಿ ಉತ್ತರದ ಬಬ್ರುವಾಹನನ ರಾಜ್ಯ ಮಣಿಪುರಕ್ಕೆ ಕುದುರೆಯನ್ನು ಹಿಂಬಾಲಿಸಿ ಹೋದನು.
  • ೧೭) ಕುದುರೆಯನ್ನು ಕಟ್ಟಿದ ಬಬ್ರುವಾಹನ ಅರ್ಜುನನು ತಂದೆಯೆಂದು ತೀದು ಅವನನ್ನು ಸನ್ಮಾನಿಸಲು, ಅರ್ಜುನನು ಅವನನ್ನು ಹೇಡಿಯೆಂದು ಜರೆಯಲು ಬಬ್ರುವಾಹನನು ಅರ್ಜುನನ ಮೇಲೆ ಯುದ್ಧಕ್ಕೆ ನಿಂತನು.
  • ಆಗ ಹಿಂದೆ ರಾಮನಿಗೂ ಅವನ ಮಕ್ಕಳಿಗೂ ಯುದ್ಧವಾದಂತೆ ಎಂದು ಜೈಮಿನಿ ಹೇಳಲು, ಜನಮೇಜಯನು ಆಕಥೆಯನ್ನಹೇಳಿ ಎಂದು ಕೀಳಿಕೊಂಡನು' ಅದಕ್ಕೆ ರಾಮನು ಅಶ್ವಮೇಧ ಯಾಗದ ಕೊನೆಯಲ್ಲಿ ತನ್ನ ಮಕ್ಕಳೋಡನೆ ಯುದ್ಧಮಾಡಿದ ಕಥೆಯನ್ನು ಹೇಳುತ್ತಾನೆ.

ರಾಮಾಯಣದ ಅಶ್ವಮೇಧ ಯಾಗದ ಕಥೆ

[ಬದಲಾಯಿಸಿ]
  • ೧೮) ಶ್ರೀ ರಾಮನ ಸಂಕ್ಷಿಪ್ತ ಚರಿತ್ರೆ. ಅಯೋದ್ಯಗೆ ರಾಮ ಸೀತೆ ಬಂದ ನಂತರ ಕೆಲವು ವರ್ಷಗಳ ಬಳಿಕ ಸೀತೆ ಗರ್ಭಿಣಿಯಾದಳು. ಲೋಗರ ಅಪವಾದಕ್ಕೆ ನೊಂದು, ರಾಮನು ಸೀತೆಯನ್ನು ಕಾಡಿನಲ್ಲಿ ಬಿಡಲು ಲಕ್ಷ್ಮಣನಿಗೆ ಆಜ್ಞೆಮಾಡಿದನು. ಅವನು ವಾಲ್ಮೀಕಿ ಆಶ್ರಮದ ಹತ್ತಿರ ಅವರು ಬರುವ ಸುಳಿವನ್ನು ಕಂಡು ಅಲ್ಲಿ ಬಿಟ್ಟು ಬಂದನು. ೧೯) ವಾಲ್ಮೀಕಿ ಅವಳನ್ನು ಕಂಡು ಸಮಾಧಾನ ಪಡಿಸಿ ಆಶ್ರಮಕ್ಕೆ ಕರೆದೊಯ್ದನು. ಅಲ್ಲಿ ಸೀತೆ ಕುಶ ಲವರೆಂಬ ಅವಳಿ ಮಕ್ಕಳನ್ನು ಹೆರಲು, ಋಷಿಯ ಪೋಷಣೆ - ಶಿಕ್ಷಣದಲ್ಲಿ ಬೆಳೆದು ಎಂಟು ವರ್ಷದವರಾದರು. ೨೦)ವಾಲ್ಮೀಕಿ ಇಲ್ಲದಾಗ ಅವರು ರಾಮನ ಅಶ್ವಮೇಧ ಕುದುರೆ ಅಲ್ಲಿ ಬರಲು ಬಾಲಭಾವದಿಂದ ಅದನ್ನು ಕಟ್ಟಿಹಾಕಿದರು. ಆದರೆ ಕುದುರೆ ರಕ್ಷಣೆಗೆ ಬಂದ ಲಕ್ಷ್ಮಣ ಶತ್ರುಘ್ನರಿಗೆ ಅವರನ್ನು ಸೋಲಿಸಿ ಕುದುರೆಯನ್ನು ಪಡೆಯಲಾಗಲಿಲ್ಲ. ಆಗ ರಾಮನೇ ಬಂದು ಯುದ್ಧಮಾಡಲು ಅವನು ಮೂರ್ಛೆ ಹೋದನು. ಆಗ ವಾಲ್ಮೀಕಿ ಮಹರ್ಷಿ ಬಂದು ಅವರನ್ನೆಲ್ಲಾ ಸಂತೈಸಿ ಒಟ್ಟುಗೂಡಿಸಿ ಅಯೋಧ್ಯೆಗೆ ಕರೆತಂದು ಯಜ್ಞವನ್ನು ಪೂರೈಸಿ ಕೊಟ್ಟರು.

ಅರ್ಜುನ ಬಬ್ರುವಾಹನರ ಯುದ್ಧ

[ಬದಲಾಯಿಸಿ]
  • ೨೨) ಬಬ್ರುವಾಹನ ಯುದ್ಧಕ್ಕೆ ಬಂದಾಗ ಪ್ರದ್ಯುಮ್ನ ಮೊದಲಾದವರು ಹೋರಾಡಿದರು. ಆದರೆ ಎಲ್ಲಾ ಸೋತರು.ವೃಷಕೇತು ಅವನನ್ನು ಎದುರಿಸಿ ತಲೆದಂಡಕೊಟ್ಟನು. ೨೩) ಕೊನೆಗೆ ಗಂಗೆಯ ಶಾಪದ ಫಲವಾಗಿ ಅರ್ಜುನ ತಲೆಯನ್ನು ತರಿದನು. ೨೪)ಶ್ರೀಕೃಷ್ಣನು ಗರುಡಗಮನದಿಂದ ಬಂದು ಸತ್ತುಬಿದ್ದಿದ್ದ ಅರ್ಜುನ ಕರ್ಣಸುತರನ್ನು ಬಬ್ರವಾಹನ ತಂದ ಸಂಜೀವಕ ಮಣಿಯ ಸಹಾಯದಿಂದ ಬದುಕಿಸಿದನು.

ಮಯೂರಧ್ವಜನ ತ್ಯಾಗದ ಕಥೆ

[ಬದಲಾಯಿಸಿ]
  • ೨೫)ಮುಂದೆ ಯಜ್ಞದ ಕುದುರೆ ಮಯೂರಧ್ವಜನ ರಾಜ್ಯ ಪ್ರವೇಶಿಸಿತು. ಅಲ್ಲಿ ಮಯೂರಧ್ವಜನ ಮಗ ತಾಮ್ರಧ್ವಜನು ಕುದುರೆಯನ್ನು ಕಟ್ಟಿ ಕೃಷ್ಣಾರ್ಜುನರಾದಿಯಾಗಿ ಎಲ್ಲರನ್ನೂ ಸೋಲಿಸಿ ಕುದುರೆಯನ್ನು ತಂದೆಗೆ ತಂದೊಪ್ಪಿಸಿದನು. ೨೬) ಆಗ ಕೃಷ್ಣನು ಬ್ರಾಹ್ಮಣ ವೇಶಧಾರಿಯಾಗಿ ಬಂದು ತನ್ನ ಮಗನನ್ನು ಉಳಿಸಲು ಅವನನ್ನು ಹಿಡಿದ ಸಿಂಹಕ್ಕೆ ರಾಜನ ಅರ್ಧ ದೇಹ ಬೇಕಂತೆ ಕೊಡುವೆಯಾ ಎನಲು, ಮಯೂರದ್ವಜನು ಒಪ್ಪಿ ತನ್ನ ದೇಹವನ್ನು ಸೀಳಿಸಿಕೊಂಡ ಮಯೂರಧ್ವಜನನ್ನು ಕೃಷ್ಣನು ಮೆಚ್ಚಿ ತನ್ನ ನಿಜ ರೂಪತೋರಿದನು. ಮಯೂರಧ್ವಜನು ಕುದುರೆಯನ್ನು ಬಿಟ್ಟುಕೊಟ್ಟನು.
  • ೨೭)ಕುದುರೆ ಮುಂದೆ ಹೋದಾಗ ಸಾರಸ್ವತ ಪುರದ ಅರಸನಾದ ವೀರವರ್ಮನು ಕುದುರೆಯನ್ನು ಕಟ್ಟಲು,ಅರ್ಜುನನು ಕೃಷ್ಣನ ಮೂಲಕ ಯಮನ ವೃತ್ತಾಂತವನ್ನು ಕೇಳಿ ತಿಳಿದು ಯಮನ ಮಾವನಾದ ವೀರವರ್ಮನನ್ನು ಸ್ನೇಹದಿಂದ ಕೃಷ್ಣನ ಸಂಧಾನದಿಂದ ಜಯಿಸಿದನು.

ಚಂದ್ರಹಾಸನ ಕಥೆ

[ಬದಲಾಯಿಸಿ]
  • ೨೮)ಮುಂದೆ ಹೋದಂತೆ ಅರ್ಜುನನ ಕುದುರೆ ಕಾಣದಿರಲು ನಾರದರು ಬಂದು ಚಂದ್ರಹಾಸನ ಕಥೆಯನ್ನು ಹೇಳಿದರು. ೨೯) ಕುಂತಳ ದೇಶದ ಮಂತ್ರಿ ದುಷ್ಟಬುದ್ಧಿಯು ಅವನ ರಾಜಯೋಗ ತಿಳಿದು, ಅದನ್ನು ತಡೆಯಲು ಚಂದ್ರಹಾಸನನ್ನು ಕೊಲ್ಲಲು ಮಗನ ಬಳಿಗೆ ಕಳಿಸಿದನು. ೩೦) ಉದ್ಯಾನವನದಲ್ಲಿ ಬಂದು ಮಲಗಿ ನಿದ್ರಿಸುತ್ತಿದ್ದ ಚಂದ್ರಹಾಸನ ಸೊಂಟದಲ್ಲಿದ್ದ ಪತ್ರವನ್ನು ದುಷ್ಟಬುದ್ಧಿಯ ಮಗಳು ಓದಿ ಅರ್ಥಾನುಸಾರವಾಗಿ ಅವನೇ ತನ್ನ ಪತಿಯಾಗುವಂತೆ ತಿದ್ದಿದಳು. ೩೧)ವಿಧಿವಿಲಾಸದಿಂದ ರಾಜಪುತ್ರಿಯನ್ನೂ ಮಂತ್ರಿಪುತ್ರಿಯನ್ನೂ ಮದುವೆಯಾದ ಚಂದ್ರಹಾಸನು ತನ್ನನ್ನು ಕೊಲ್ಲಲು ಹವಣಿಸಿದ ಮಂತ್ರಿಯು ಮಗನೊಡನೆ ತಾನೇ ಹತನಾದುದನ್ನು ತಿಳಿದನು. ಚಂದ್ರಹಾಸನು ಚಂಡಿಕಾದೇವಿಯನ್ನು ಪ್ರಾರ್ಥಿಸಿ ಅವಳ ವರಪ್ರಸಾದದಿಂದ ಅಲ್ಲಿ ಹತರಾಗಿ ಬಿದ್ದಿದ್ದ ಮಂತ್ರಿ ಮತ್ತು ಅವನ ಮಗ ಮದನನ್ನು ಬದುಕಿಸಿದನು. ೩೨)ಚಂದ್ರಹಾಸನು ಮಕ್ಕಳು ಕಟ್ಟಿದ ಕುದುರೆಯನ್ನ ಕೃಷ್ಣಾರ್ಜುನರಿಗೆ ಒಪ್ಪಿಸಿದನು.ಹಿಂತಿರಗುವಾಗ ಕುದುರೆಗಳು ಅವರನ್ನು ಸಮುದ್ರದೊಳಗೆ ಕೊಂಡೊಯ್ದವು. ಕೃಷ್ಣನು ಸಮುದ್ರಗಮನ ಸಾಧ್ಯರಾದ ಐವರನ್ನು ಕೂಡಿಕೊಂಡು ಸಮುದ್ರ ಮಧ್ಯದಲ್ಲಿದ್ದ ಬಕದಾಲ್ಬ್ಯ ಮುನಿಯನ್ನು ಕಂಡನು. ಅನೇಕ ಚತುರ್ಯುಗಗಳಿಂದ ತಪವನ್ನು ಮಾಡುತ್ತಿದ್ದ ಅವನ ಕಥೆಯನ್ನು ಕೇಳಿ ಸಿಂಧೂದೇಶದ ಮೂಲಕ ಹಸ್ತಿನಾವತಿಗೆ ಯಜ್ನಾಶ್ವ ಮತ್ತು ಪರಿವಾರ ಸಮೇತ ಹಿಂದಿರುಗಿದರು.

ಯಜ್ಞ ಪೂರೈಕೆ

[ಬದಲಾಯಿಸಿ]
  • ೩೩) ದಿಗ್ವಿಜಯ ವೃತ್ತಾಂತವನ್ನು ಕೃಷ್ಣನಿಂದ ತಿಳಿದು ಧರ್ಮರಾಯನು ಯಜ್ನವನ್ನು ಆರಂಭಿಸಿದನು. ೩೪) ಸಕಲರೂ ಮೆಚ್ಚುವಂತೆ ಯಜ್ಞವನ್ನು ಪೂರೈಸಿ, ಶ್ರೀ ಕೃಷ್ಣಾದಿ ಅತಿಥಿಗಳನ್ನು ಸತ್ಕರಿಸಿಅವರವರ ಸ್ಥಳಕ್ಕೆ ಕಳುಹಿಸಿಕೊಟ್ಟು, ತಾನು ಧರ್ಮದಿಂದ ರಾಜ್ಯವನ್ನು ಪಾಲಿಸುತ್ತಿದ್ದನು.
  • ಕವಿ ತನ್ನ ಕಾವ್ಯ ರಚನೆಯ ವಿಷಯವನ್ನು ವಿನಯವಾಗಿಮಂಡಿಸುತ್ತಾನೆ.
'ಭೂಚಕ್ರದೊಳ್ಪಸರಿಸುವ ಕೀರ್ತಿಲತೆ ಮೂಡ|
ಲಾಚಂದ್ರಾರ್ಕಮಾಗಿರ್ಪ ತೆರದಿಂದ ಕವಿಮತಿಗೆ|
ಗೋಚರಿಸೆ, ಕೃತಿಗೆ ನಾಯಕನಾದನಮರಪುರದೊಡೆಯ ಲಕ್ಷ್ಮೀಕಾಂತನು'||
  • ಕೃತಿಗೆ ನಾಯಕನು ಆದನು ಅಮರಪುರದ ಒಡೆಯ ಲಕ್ಷ್ಮೀಕಾಂತನು, ಎಂದು, ಕೃಷ್ಣನೇ ಕಾವ್ಯದ ನಾಯಕನೆಂದಿದ್ದಾನೆ. ಈ ಪಣ್ಯ ಕಥೆಯನ್ನು ಕೇಳಿದವರಿಗೆ ಸರ್ವ ಬಗೆಯ ಪುಣ್ಯವೂ ಲಭಿಸುವುದೆಂದು ಹೇಳುವ ಫಲಶ್ರುತಿಯೊಂದಿಗೆ ಕಾವ್ಯದ ಮಂಗಳಾಚರಣೆಯಾಗುವುದು.

ಮಂಗಳಾಚರಣೆಯ ಕೊನೆಯ ಪದ್ಯ

[ಬದಲಾಯಿಸಿ]

ಪುಣ್ಯಮಿದು ಕೃಷ್ಣಚರಿತಾಮೃತಂ ಸುಕವೀಂದ್ರ|
ಗಣ್ಯಮಿದು ಶೃಂಗಾರ ಕುಸುಮತರು ತುರುಗಿದಾ|
ರಣ್ಯಮಿದು ನವರಸ ಪ್ರೌಢಿ ಲಾಲಿತ್ಯ ನಾನಾ ವಿಚಿತ್ರಾರ್ಥಂಗಳ||
ಗಣ್ಯಮಿದು ಶಾರದೆಯ ಸನ್ಮೋಹನಾಂಗ ಲಾ|
ವಣ್ಯಮಿದು ಭಾವಕರ ಕಿವಿದೊಡವಿಗೊದಗಿದ ಹಿ|
ರಣ್ಯಮಿದು ಭೂತಳದೊಳೆನೆ ವಿರಾಜಿಪುದು ಲಕ್ಷ್ಮೀಪತಿಯ ಕಾವ್ಯರಚನೆ||

  • ಕವಿ ಲಕ್ಷ್ಮೀಪತಿಯು ತನ್ನ ಕಾವ್ಯವು ಜನಪ್ರಿಯವಾಗಿ ವಿರಾಜಿಸುವುದೆಂದು, ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾನೆ.
  • ಒಟ್ಟು ಸಂಧಿಗಳು ೩೪: ; ಪದ್ಯಗಳು ೧೯೦೬.[]
  • ಲಕ್ಷ್ಮೀಶ ಕವಿ ವಿರಚಿತ ಕರ್ನಾಟಕ ಜೈಮಿನಿ ಭಾರತವು : ಭೀಮಸೇನರಾವ್ ಪರಿಷ್ಕರಿಸಿದ್ದು; ಪ್ರಕಾಶಕರು ಟಿ.ಎನ್. ಕೃಷ್ಣಶೆಟ್ಟಿ ಅಂಡ್ ಸನ್ ಬುಕ್ ಡಿಪೊ ಚಿಕ್ಕಪೇಟೆ ಬೆಂಗಳೂರು ನಗರ.(ಮದ್ರಣ ೧೯೫೬)

ಹೆಚ್ಚಿನ ಓದಿಗೆ

[ಬದಲಾಯಿಸಿ]
  • ಜೈಮಿನಿ ಭಾರತದ 'ಪಠ್ಯ, ಪದವಿಭಾಗ ಮತ್ತು ತಾತ್ಪರ್ಯ', ನೋಡಲು ಕೆಳಗಿನ ವಿಕಿಸೋರ್ಸಿನ ಮುದ್ರೆಯಲ್ಲಿ 'ಜೈಮಿನಿ ಬಾರತ'ಕ್ಕೆ ಚುಚ್ಚಿ.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖ

[ಬದಲಾಯಿಸಿ]
  1. Sanderson, Daniel (1852). The Jaimini Bharata: A Celebrated Canarese Poem, with Translations and Notes. Bangalore: Wesleyan Mission Press. Retrieved 3 March 2017.
  2. ಪುರಾಣ ಭಾರತಕೋಶ ಯಜ್ಞನಾರಾಯಣ ಉಡುಪ:ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.
  3. ಹಿಸ್ಟರಿ ಆಫ್ ಕ್ಯಾನರೀಸ್ ಲಿಟರೇಚರ್ :ಲೇಖಕ-ಎಡ್ವರ್ಡ ಪಿ ರೈಸ್, ಅಸೊಸಿಯೇಶನ್ ಪ್ರೆಸ್, ೫ ರಸಲ್ ಸ್ಟ್ರೀಟ್, ಕಲ್ಕತ್ತಾ ೧೯೨೧ರ ಮುದ್ರಣ.
  4. ಲಕ್ಷ್ಮೀಶ ಕವಿ ವಿರಚಿತ ಕರ್ನಾಟಕ ಜೈಮಿನಿ ಭಾರತವು : ಭೀಮಸೇನರಾವ್ ಪರಿಷ್ಕರಿಸಿದ್ದು; ಪ್ರಕಾಶಕರು ಟಿ.ಎನ್. ಕೃಷ್ಣಶೆಟ್ಟಿ ಅಂಡ್ ಸನ್ ಬುಕ್ ಡಿಪೊ ಚಿಕ್ಕಪೇಟೆ ಬೆಂಗಳೂರು ನಗರ.(ಮದ್ರಣ ೧೯೫೬)