ಕುಮಾರವ್ಯಾಸ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕುಮಾರವ್ಯಾಸ ಕನ್ನಡದ ಅತ್ಯುನ್ನತ ಕವಿಗಳಲ್ಲಿ ಒಬ್ಬ. ಕನ್ನಡ ಸಾಹಿತ್ಯದ ದಿಗ್ಗಜರಲ್ಲಿ ಒಬ್ಬ ಎಂದರೆ ತಪ್ಪಾಗಲಾರದು. ಕುಮಾರವ್ಯಾಸನ ಮೂಲ ಹೆಸರು ನಾರಣಪ್ಪ. "ಗದುಗಿನ ನಾರಣಪ್ಪ" ಎಂದು ಸಾಮಾನ್ಯವಾಗಿ ಕುಮಾರವ್ಯಾಸನನ್ನು ಗುರುತಿಸಲಾಗುತ್ತದೆ. ಈತನ ಕಾವ್ಯ ನಾಮ ಕುಮಾರವ್ಯಾಸ. ವ್ಯಾಸ ಮಹಾಕವಿಯ ಸಂಸ್ಕೃತ ಮಹಾಭಾರತದ ಅತ್ಯದ್ಭುತ ಕನ್ನಡ ರೂಪವನ್ನು ರಚಿಸಿದ್ದರಿಂದ ಈ ಹೆಸರು ಕುಮಾರವ್ಯಾಸನಿಗೆ ಅನ್ವರ್ಥವಾಗಿದೆ.

ಗದುಗಿನಲ್ಲಿರುವ ಕುಮಾರವ್ಯಾಸನ ಪ್ರತಿಮೆ

ಕುಮಾರವ್ಯಾಸ ಈ ಕಂಬದ ಅಡಿಯಲ್ಲೇ ಗದುಗಿನ ಭಾರತವನ್ನು ರಚಿಸಿ ಓದುತ್ತಿದ್ದ ಎಂಬ ಪ್ರತೀತಿ ಸಹ ಇದೆ.

ಕುಮಾರವ್ಯಾಸನ ಕಾಲ[ಬದಲಾಯಿಸಿ]

 • ಕುಮಾರವ್ಯಾಸನ ಕಾಲದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಸುಮಾರು ಕ್ರಿ.ಶ. ೧೫೦೦ ರಲ್ಲಿದ್ದ 'ತೊರವೆ ರಾಮಾಯಣ' ಬರೆದ ಕುಮಾರ ವಾಲ್ಮೀಕಿ ಅಥವಾ ತೊರವೆ ನರಹರಿ ಮತ್ತು ಕೃಷ್ಣರಾಯ ಭಾರತ ಬರೆದ ತಿಮ್ಮಣ್ಣ ಕವಿ ಕುಮಾರವ್ಯಾಸನನ್ನು ಹೊಗಳಿರುವುದರಿಂದ ಕುಮಾರವ್ಯಾಸನು ಆ ಕಾಲಕ್ಕಿಂತ ಹಿಂದಿನವನೆಂದು ಸಿದ್ಧವಾಗಿದೆ.
 • ಜೀವಂಧರ ಚರಿತೆ ಬರೆದ ಕ್ರಿ.ಶ. ೧೪೨೪ ರಲ್ಲಿದ್ದ ಭಾಸ್ಕರ ಕವಿಯು ಕುಮಾರವ್ಯಾಸನ ಅನೇಕ ನುಡಿಕಟ್ಟುಗಳನ್ನು ಬಳಸಿ ಅವನಿಂದ ಪ್ರಭಾವಿತನಾಗಿರುವುದರಿಂದ, ಕುಮಾರವ್ಯಾಸನು ಅವನಿಗಿಂತ ಹಿಂದಿನವನೆಂದು ಸಂಶೋಧಕರು ನಿರ್ಧರಿಸಿದ್ದಾರೆ.
 • ಗದುಗಿನ ವೀರನಾರಾಯಣನ ದೇವಸ್ಥಾನದ ಆವರಣದಲ್ಲಿರುವ ಕ್ರ.ಶ. ೫-೯-೧೫೩೯ ರಲ್ಲಿ ಬರೆದ ಶಾಸನದಲ್ಲಿ ವಿ ಕವಿ ಕುಮಾರವ್ಯಾಸಂಗೆ ಪ್ರಸನ್ನನಾದ ಗದುಗಿನ ವೀರನಾರಾಯಣನ ಸಂನ್ನಿಧಿಯಲ್ಲಿ .... ಎಂದು ಕುಮಾರವ್ಯಾಸನ ಹೆಸರನ್ನು ಉಲ್ಲೇಖಿಸಿರುವುದರಿಂದ ಅವನು ಅದಕ್ಕಿಂತ ಹಿಂದಿನವನೆmದು ಸ್ಪಷ್ಟವಾಗಿದೆ. ಆದ್ದರಿಂದ ಅವನ-ಕುಮಾರವ್ಯಾಸನ ಕಾಲವನ್ನು ಕ್ರಿ.ಶ. ೧೩೫೦-೧೪೦೦ ಎಂದು ನಿರ್ಣಯಿಸಿರುತ್ತಾರೆ. (ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ : ಕುಮಾರವ್ಯಾಸ ಭಾರತ ಸಂಗ್ರಹ ಪ್ರ : ಬಿ.ಎಂ.ಶ್ರೀ. ಪ್ರತಿಷ್ಠಾನ).

ಕುಮಾರವ್ಯಾಸನ ಊರು[ಬದಲಾಯಿಸಿ]

ಹುಟ್ಟೂರು ಹುಬ್ಬಳ್ಳಿ ತಾಲ್ಲೂಕಿನ ಕೋಳೀವಾಡವೆಂಬ ಗ್ರಾಮವೆಂದೂ ಅವನ ವಂಶಸ್ಥರು ಈಗಲೂ ಅಲ್ಲಿ ವಾಸಿಸುತ್ತಾರೆಂದೂ ಜನಜನಿತವಾಗಿದೆ. ಈ ಬಗ್ಗೆ ಸಂಶೋಧನೆ ಮಾಡಿದ ಶ್ರೀ ಎ.ವಿ. ಪ್ರಸನ್ನ ಕೆ.ಎ.ಎಸ್. ಅವರು ಅವರ ಮನೆಗೆ ಹೋಗಿ ವಿಚಾರ ವಿನಿಮಯಮಾಡಿ ಅವರಲ್ಲಿರುವ ಕಾಗದ ಪತ್ರಗಳನ್ನೂ ಕುಮಾರವ್ಯಾಸ ಭಾರತದ ಓಲೆಗರಿ ಪ್ರತಿಗಳನ್ನೂ ಪರಿಶೀಲಿಸಿರುವುದಾಗಿ ತಿಳಿಸಿದ್ದಾರೆ. ಈಎಲ್ಲಾ ಪತ್ರಗಳ ಆಧಾರದ ಮೇಲೆ ಕವಿಯ ವಂಶಸ್ಥರು ತಮ್ಮ ವಂಶದ ಚರಿತ್ರೆಯನ್ನು ಈ ರೀತಿ ತಿಳಿಸು ತ್ತಾರೆ . ಕುಮಾರವ್ಯಾಸನ ಪೂರ್ವಿಕರಾದ ಚಿನ್ನದ ಕೈ ಮಾಧವರಸಯ್ಯನು ಹಿರೇಹಂದಿಗೋಳ ಗ್ರಾಮದವನಾಗಿದ್ದು ಕೋಳೀವಾಡ ಗ್ರಾಮವನ್ನು ಕ್ರಯಕ್ಕೆ ಪಡೆದು, ಕೋಳೀವಾಡದಲ್ಲಿಯೇ ನೆಲಸಿದ. ಅವರು ಅದ್ವೈತಿಗಳಾಗಿದ್ದು ಹರಿ-ಹರರಲ್ಲಿ ಅಬೇಧವನ್ನು ಕಾಣುವವರು. ಇವರು ಅಗಸ್ತ್ಯ ಗೋತ್ರಕ್ಕೆ ಸೇರಿದವರು. ಈ ಬಗ್ಗೆ ಗದುಗಿನ ಕುಮಾರವ್ಯಾಸ ಸಂಘದ ಅಧ್ಯಕ್ಷರೂ ಆದ ಶ್ರೀ ಎಂ.ಎಚ್. ಹರಿದಾಸ ಅವರು ರಚಿಸಿರುವ ಮಹಾಕವಿ ಕುಮಾರವ್ಯಾಸ (ಪ್ರ.ವಿಕ್ರಮ ಪ್ರಕಾಶನ ಗದಗ) ಕಿರು ಹೊತ್ತಿಗೆಯಲ್ಲಿ ಹೆಚ್ಚನ ವಿಷಯವಿದೆ. ಅವನ ವಂಶಸ್ಥರಾದ ದತ್ತಾತ್ರೇಯ ಪಾಟೀಲರು ಶ್ರೀ ಎ.ವಿ.ಪ್ರಸನ್ನ ಅವರಿಗೆ ಕೊಟ್ಟ ಕುಮಾರವ್ಯಾಸನ ವಂಶಾವಳಿಯನ್ನು ಗಮಕ ಸಂಪದ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ವಂಶಾವಳಿ[ಬದಲಾಯಿಸಿ]

ಈ ವಂಶಾವಳಿಯಂತೆ, ವೀರನಾರಾಯಣೆಂಬ ಹೆಸರಿನವರು ಐದು ಜನ ಬರುತ್ತಾರೆ. ಅದರಲ್ಲಿ ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ನಂತರ ನಾಲ್ಕನೆಯವನಿಗೆ ೧ನೇ ವೀರನಾರಾಯಣ ಗೌಡ ಎಂದಿದೆ. ಅವನೇ ಕುಮಾರವ್ಯಾಸ ನೆಂದು ನಿರ್ಧರಿಸಿದ್ದಾರೆ. ಇಲ್ಲಿ ಗೌಡ ಎಂಬ ಪದ ಜಾತಿ ಸೂಚಕವಲ್ಲ. ಅದು ಗ್ರಾಮವೃದ್ಧ -ಗಾಮುಂಡ- ಗೌಡ ಎಂಬ ತದ್ಭವವರಂದು ನಿರ್ಣಯಿಸಿದ್ದಾರೆ. ಆನವ್ಮತರ ಕೆಲವು ಅದೇ ಮನೆತನದವರು ಅಯ್ಯ ,ಪಾಟೀಲ,. ಎಂದು ಹೆಸರಿನ ಕೊನೆಗೆ ಸೇರಿಸಿಕೊಂಡಿದ್ದಾರೆ. ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯನ ಕಾಲ ಕ್ರಿ.ಶ. ೧೧೪೮. ಇವನ ನಂತರದ ನಾಲ್ಕನೆಯ ತಲೆಮಾರಿನವ ಕುಮಾರವ್ಯಾಸ. ಪ್ರತಿತಲೆಮಾರಿಗೆ ೨೫ ವರ್ಷವೆಂದು ಹಿಡಿದರೆ , ಕುಮಾರವ್ಯಸನ ಕಾಲ ಕ್ರಿ.ಶ. ೧೨೪೮ . ಅವನು ಸುಮಾರು ೭೦ ವರ್ಷಬದುಕಿದ್ದನೆಂದು ಭಾವಿಸಿದರೂ ಕ್ರಿ.ಶ. ೧೨೪೮ ರಿಂದ ೧೩೧೮ ಎಂದರೆ ೩೦-೪೦ ವರ್ಷ ವ್ಯತ್ಯಾಸ ಬರುತ್ತದೆ.

 • ವಂಶಾವಳಿ :
 • ||ಶ್ರೀ ವೀನಾರಾಯಣ ಪ್ರಸನ್ನಃ||
 • ೧.ವಂಶ ಪ್ರವರ್ತಕ ಚಿನ್ನದ ಕೈ ಮಾಧವರಸಯ್ಯ.
 • ೨. ತಿರುಮಲಯ್ಯ.
 • ೩. ಲಕ್ಕರಸಯ್ಯ.
 • ೪. ವೀರನಾರಾಯಣ ಗೌಡ.; ಕೃಷ್ಣರಸಯ್ಯ ; ತಂಕರಸಯ್ಯ ; ತಿರುಮಲಯ್ಯ. ಅಶ್ಯತ್ಥಯ್ಯ ?
 • ೪-೧ ನೇ ವೀರನಾರಾಯಣ ನೇ ಕುಮಾರವ್ಯಾಸ
 • ನಂತರ ೧೯೪೧ ಕ್ಕೆ ೧೯ ತಲೆಮಾರಿನ ಪಟ್ಟಿ ಇದೆ

(ಆಧಾರ : ಶ್ರೀಎ.ವಿ. ಪ್ರಸನ್ನ ಕೆ.ಎ. ಎಸ್. ಬೆಂಗಳೂರು ಅವರ ಲೇಖನ -ಗಮಕ ಸಂಪದ ಸಂಚಿಕೆ ೪ ಮತ್ತು ೫ ಸಂಪುಟ ೧೦. ಹೊಸ ಹಳ್ಳಿ)

ಕುಮಾರವ್ಯಾಸನ ಕಂಬ

ಕೃತಿಗಳು[ಬದಲಾಯಿಸಿ]

ಕುಮಾರವ್ಯಾಸನ ಅತಿ ಪ್ರಸಿದ್ಧ ಕೃತಿ ಕರ್ಣಾಟ ಭಾರತ ಕಥಾಮಂಜರಿ. ಇದಕ್ಕೆ ಗದುಗಿನ ಭಾರತ, ಕನ್ನಡ ಭಾರತ, ಕುಮಾರವ್ಯಾಸ ಭಾರತ ಎಂದೂ ಹೆಸರು. ಮಹಾಕವಿ ವ್ಯಾಸರ ಸಂಸ್ಕೃತ ಮಹಾಭಾರತದ ಅನುವಾದ ಎನ್ನಬಹುದು. ಆದರೆ ಕೇವಲ ಅನುವಾದವಾಗಿ ಉಳಿಸದೆ ಕುಮಾರವ್ಯಾಸ ತನ್ನ ಕಾವ್ಯಸಾಮರ್ಥ್ಯವನ್ನು ಈ ಕೃತಿಯಲ್ಲಿ ಸಂಪೂರ್ಣವಾಗಿ ಧಾರೆಯೆರೆದಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ಮೇರುಕೃತಿಯಾಗಿ ಪರಿಗಣಿತವಾಗಿರುವ ಕನ್ನಡ ಭಾರತ, ಸಂಸ್ಕೃತ ಮಹಾಭಾರತದ ಮೊದಲ ಹತ್ತು ಪರ್ವಗಳನ್ನು ಒಳಗೊಂಡಿದೆ.

ಸಂಪೂರ್ಣ ಕಾವ್ಯ ಭಾಮಿನೀ ಷಟ್ಪದಿ ಛಂದಸ್ಸಿನಲ್ಲಿ ರಚಿತವಾಗಿದ್ದು ಕುಮಾರವ್ಯಾಸನ ಕಾವ್ಯ ಪ್ರತಿಭೆ ಓದುಗರನ್ನು ದಂಗುಬಡಿಸುತ್ತದೆ. ಅವನ ಕಾವ್ಯಪ್ರತಿಭೆ ಪೂರ್ಣಶಕ್ತಿಯಲ್ಲಿ ಹೊರಹೊಮ್ಮುವುದು ಅವನ ರೂಪಕಗಳಲ್ಲಿ. ಕುಮಾರವ್ಯಾಸನ ರೂಪಕಗಳ ವೈವಿಧ್ಯತೆ ಮತ್ತು ಆಳ ಅಪಾರವಾದದ್ದು. ಇದೇ ಕಾರಣಕ್ಕಾಗಿ ಕುಮಾರವ್ಯಾಸನ ಹೆಸರು ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದೇ ಖ್ಯಾತಿ ಪಡೆದಿದೆ. ಉದಾಹರಣೆಗೆ ಪರಿಶೀಲಿಸಿ:

"ಬವರವಾದರೆ ಹರನ ವದನಕೆ ಬೆವರ ತಹೆನು" (ಅಭಿಮನ್ಯುವಿನ ವೀರೋಕ್ತಿ!) "ನರಶರದ ಜುಂಜುವೊಳೆಯಲಿ ಜಾರುವನೆ ಜಾಹ್ನವೀಧರ" (ಕಿರಾತಾರ್ಜುನೀಯ ಪ್ರಸಂಗದಲ್ಲಿ) "ಜವನ ಮೀಸೆಯ ಮುರಿದನೋ" (ಉತ್ತರನ ಪೌರುಷದಲ್ಲಿ) "ಅರಿವಿನ ಸೆರಗು ಹಾರಿತು"

ರೂಪಕಗಳೊಂದಿಗೆ ಕುಮಾರವ್ಯಾಸನ ಇನ್ನೊಂದು ಸಾಮರ್ಥ್ಯ ಮಾನವಪ್ರಕೃತಿಯ ವರ್ಣನೆ. ಕುಮಾರವ್ಯಾಸನ ಪಾತ್ರಗಳು ಕಣ್ಣಿಗೆ ಕಟ್ಟುವಷ್ಟು ಸ್ಪಷ್ಟ. ಅವನ ಎಲ್ಲ ಪಾತ್ರಗಳು ಅವರವರದೇ ರೀತಿಯಲ್ಲಿ ಮಾತನಾಡುತ್ತಾರೆ, ಬೈಯುತ್ತಾರೆ, ನಗುತ್ತಾರೆ, ಹಾಗೂ ಅಳುತ್ತಾರೆ ಸಹ.

ಕುಮಾರವ್ಯಾಸ ಅಷ್ಟೇ ಆಳವಾದ ದೈವಭಕ್ತ ಸಹ. ಶ್ರೀ ಕೃಷ್ಣನ ವರ್ಣನೆ ಅವನ ಕಾವ್ಯರಚನೆಯ ಮೂಲೋದ್ದೇಶಗಳಲ್ಲಿ ಒಂದು. ("ತಿಳಿಯ ಹೇಳುವೆ ಕೃ‍ಷ್ಣ ಕಥೆಯನು") ಅವನ ಮಹಾಭಾರತ ಕಥೆ ಕೃಷ್ಣನ ಸುತ್ತಲೂ ಸುತ್ತುತ್ತದೆ, ಕುಮಾರವ್ಯಾಸ ಕೃಷ್ಣನ ಭಕ್ತ .. ಮಹಾಭಾರತದ ಹದಿನೆಂಟು ಪರ್ವಗಳಲ್ಲಿ ಹತ್ತರ (ಗದಾಪರ್ವ) ವರೆಗೆ.ಬರೆದು ದುರ್ಯೋಧನನ ಅವಸಾನದ ನಂತರ, ಕುಮರವ್ಯಾಸನು, ಮುಂದೆ ಸಂಕ್ಷಿಪ್ತವಾಗಿ, ಶ್ರೀಕೃಷ್ಣನು ಧರ್ಮರಾಜನಿಗೆ ಪಟ್ಟಾಭಿಷೇಕವನ್ನು ಮಾಡಿಸಿ ದ್ವಾರಕೆಗೆ ಹಿಂದಿರುಗುವವರೆಗೆ ಬರೆದಿದ್ದಾನೆ;

ಕುಮಾರವ್ಯಾಸನ ಪ್ರತಿಭೆಗೆ ಕನ್ನಡಿಯಾಗಿ ಹಿಡಿದ ಕುವೆಂಪು ರವರ ಸಾಲುಗಳನ್ನು ನೋಡಿ:

"ಕುಮಾರ ವ್ಯಾಸನು ಹಾಡಿದನೆಂದರೆ

ಕಲಿಯುಗ ದ್ವಾಪರವಾಗುವುದು

ಭಾರತ ಕಣ್ಣಲಿ ಕುಣಿವುದು! ಮೈಯಲಿ

ಮಿಂಚಿನ ಹೊಳೆ ತುಳುಕಾಡುವುದು!"

ಕುಮಾರವ್ಯಾಸನ ಇನ್ನೊಂದು ಕೃತಿ ಐರಾವತ. ಇದು ಅಷ್ಟಾಗಿ ಪ್ರಸಿದ್ಧವಾಗಿಲ್ಲ.

ಪ್ರಭಾವ[ಬದಲಾಯಿಸಿ]

ಕುಮಾರವ್ಯಾಸ ಕನ್ನಡ ಸಾಹಿತ್ಯದ ಬೆಳವಣಿಗೆಯ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಾನೆ. ಕುಮಾರವ್ಯಾಸ ಭಾರತವನ್ನು ಇಂದಿಗೂ ಸಹ ಕರ್ನಾಟಕದಲ್ಲಿ ಓದಲಾಗುತ್ತದೆ, ವ್ಯಾಖ್ಯಾನ ಮಾಡಲಾಗುತ್ತದೆ. ಕುಮಾರವ್ಯಾಸ ಭಾರತವನ್ನು ಓದುವ ಒಂದು ವಿಶಿಷ್ಟ ಶೈಲಿಯಾದ ಗಮಕ ಕಲೆ ಸಾಕಷ್ಟು ಪ್ರಸಿದ್ಧವಾಗಿದೆ.

 • ಕುಮಾರವ್ಯಾಸನು ತನ್ನ ಕಾವ್ಯದಲ್ಲಿ ಕೆಲವು ಒಗಟು ಪದ್ಯಗಳನ್ನು ಬಳಸಿದ್ದಾನೆ. ಅವಕ್ಕೆ ಮಂಡಿಗೆಗಳೆಂದು(೧) ಕರೆಯುತ್ತಾರೆ ಅವು ವ್ಯಾಖ್ಯಾನ ಮಾಡುವವರಿಲ್ಲದಿದ್ದರೆ ಅರ್ಥವಾಗುವುದುಕಷ್ಟ . ಉದಾಹರಣೆಗೆ : "ವೇದ ಪುರುಷನ --" ಮಂಡಿಗೆ ತಾಣಕ್ಕೆ ಹೋಗಿ.

ಇವನ್ನೂ ನೋಡಿ[ಬದಲಾಯಿಸಿ]

ಕನ್ನಡ ಸಾಹಿತ್ಯ

ಆಧಾರ[ಬದಲಾಯಿಸಿ]

ಶ್ರೀಎ.ವಿ. ಪ್ರಸನ್ನ ಕೆ.ಎ. ಎಸ್. ಬೆಂಗಳೂರು ಅವರ ಲೇಖನ- 'ಕುಮಾರವ್ಯಾಸನ ವಂಶಾವಳಿ' -ಗಮಕ ಸಂಪದ ಸಂಚಿಕೆ ೪ ಮತ್ತು ೫ ಸಂಪುಟ ೧೦. ಹೊಸ ಹಳ್ಳಿ)

 • (೧)ಗಮಕಸಿರಿ -ಸ್ಮರಣ ಸಂಚಿಕೆ ೧೯೯೭ -( ಶ್ರೀ ಜಗನ್ನಾಥ ಶಾಸ್ತ್ರೀ)

ಕನ್ನಡ

ಬಾಹ್ಯ ಅಂತರ್ಜಾಲ ಸಂಪರ್ಕಗಳು[ಬದಲಾಯಿಸಿ]

ಕುಮಾರವ್ಯಾಸ