ಬಂಗಾಳಿ ಭಾಷೆ
ಬಂಗಾಳಿ বাংলা Bangla | ||||
---|---|---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಬಾಂಗ್ಲಾದೇಶ, ಭಾರತ (ಮುಖ್ಯವಾಗಿ ಪಶ್ಚಿಮ ಬಂಗಾಳ, ತ್ರಿಪುರಾ, ಅಸ್ಸಾಂನ ಬರಾಕ್ ಕಣಿವೆ), ಪೂರ್ವ ಭಾರತ ಬಂಗಾಳಿ ಸಮುದಾಯಗಳು ಮತ್ತು ಈಶಾನ್ಯ ಭಾರತ, ಮತ್ತು ಪ್ರಪಂಚದಾದ್ಯಂತ ಬಂಗಾಳಿ ಡಯಾಸ್ಪೊರಾ ನಡುವೆ. | |||
ಒಟ್ಟು ಮಾತನಾಡುವವರು: |
೨೧೦ ದಶಲಕ್ಷ | |||
ಭಾಷಾ ಕುಟುಂಬ: | ಇಂಡೋ ಯುರೋಪಿಯನ್ ಇಂಡೋ-ಆರ್ಯನ್ ಪೂರ್ವ ಅಸ್ಸಾಮಿ-ಬಂಗಾಳಿ ಬಂಗಾಳಿ | |||
ಬರವಣಿಗೆ: | ಬಂಗಾಳಿ ವರ್ಣಮಾಲೆ ಭಾರತೀಯ ಬೆಂಗಾಲಿ ಬ್ರೈಲ್ ಬಾಂಗ್ಲಾದೇಶ ಬೆಂಗಾಲಿ ಬ್ರೈಲ್ | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ಬಾಂಗ್ಲಾದೇಶ ಭಾರತ; ಕೆಳಗಿನ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶ: | |||
ನಿಯಂತ್ರಿಸುವ ಪ್ರಾಧಿಕಾರ: |
ಬಾಂಗ್ಲಾ ಅಕಾಡೆಮಿ (ಬಾಂಗ್ಲಾದೇಶ) ಪಶ್ಚಿಮಬಂಗಾ ಬಾಂಗ್ಲಾ ಅಕಾಡೆಮಿ (ಪಶ್ಚಿಮ ಬಂಗಾಳ) | |||
ಭಾಷೆಯ ಸಂಕೇತಗಳು | ||||
ISO 639-1: | bn
| |||
ISO 639-2: | ben
| |||
ISO/FDIS 639-3: | ben
| |||
|
ಬಂಗಾಳಿ ಅಥವಾ ಬಾಂಗ್ಲ ಇಂಡೊ-ಯೂರೋಪಿಯನ್ ಪಂಗಡಕ್ಕೆ ಸೇರಿದ ಭಾಷೆ.ಸಂಸ್ಕೃತ ಮತ್ತು ಪಾಳಿ ಭಾಷೆಗಳನ್ನು ಪೂರ್ವಜರನ್ನಾಗಿ ಹೊಂದಿರುವ ಈ ಭಾಷೆ, ಭಾರತದ ಪಶ್ಚಿಮ ಬಂಗಾಳದ ರಾಜ್ಯ ಭಾಷೆ ಮತ್ತು ಬಾಂಗ್ಲಾದೇಶದ ರಾಷ್ಟ್ರಭಾಷೆ. ಸುಮಾರು ೨೦.೭ ಕೋಟಿ ಜನ ಈ ಭಾಷೆ ಮಾತನಾಡುತ್ತಾರೆ.
ಬಂಗಾಳೀ ಭಾಷೆ - ಪಶ್ಚಿಮ ಬಂಗಾಳ ರಾಜ್ಯದ ಭಾಷೆ: ನೆರೆಯ ಬಾಂಗ್ಲದೇಶದಲ್ಲಿ ರಾಷ್ಟ್ರಭಾಷೆ: ಗಂಗಾನದಿ ಬಯಲಿನ ಉತ್ತರ ಮತ್ತು ಪೂರ್ವ ಭಾಗದಲ್ಲಿ ಹಬ್ಬಿರುವ ಬಂಗಾಳ ಪ್ರಾಂತ್ಯದ ಜನರ ಭಾಷೆ. ಇದು ಇಂಡೋ ಆರ್ಯನ್ ಭಾಷಾವರ್ಗದ ಮುಖ್ಯಭಾಷೆಗಳಲ್ಲಿ ಒಂದಾಗಿದ್ದು, ಮಾಗಧಿ ಅಪಭ್ರಂಶದ ಪೂರ್ವೀರೂಪದಿಂದ ವಿಕಾಸಗೊಂಡಿದೆ ಎಂದು ಭಾಷಾತಜ್ಞರ ಅಭಿಪ್ರಾಯ. ಭಾರತ, ಪಾಕಿಸ್ತಾನ, ಬಾಂಗ್ಲ ದೇಶಗಳಲ್ಲಿ ವಾಸಿಸುತ್ತಿರುವ ಸುಮಾರು 80,000,000 ಜನ ಈ ಭಾಷೆಯನ್ನಾಡುತ್ತಾರೆ.
ಬಂಗ ಎಂಬ ಪದಕ್ಕೆ ಆಲ್ ಪ್ರತ್ಯಯ ಸೇರುವುದರ ಮೂಲಕ ಬಂಗಾಲಿ (ಬಂಗಾಳಿ) ಪದ ರೂಪುಗೊಂಡಿದೆ. ಈ ಪದ ಭಾಷಾಸೂಚಕ, ಸ್ಥಳಸೂಚಕ, ಹಾಗು ಜನಸಮುದಾಯಸೂಚಕ ರೂಪವಾಗಿ ಬಂದಿವೆ. ಬಂಗಾಳೀ ಪದಕ್ಕೆ ಪರ್ಯಾಯವಾಗಿ ಗೌಡಿ, ಮಾಗಧಿ, ಗೊಲ್ಲ ಎಂದೂ ಕರೆಯುವರು.
779ರಲ್ಲಿ ರಚಿತವಾದ ಕುವಲಯಮಾಲಾ ಎಂಬ ಗ್ರಂಥದಲ್ಲಿ ಈ ಪದವನ್ನು ಭಾಷೆ ಎಂಬಂರ್ಥದಲ್ಲಿ ಮೊತ್ತಮೊದಲು ಬಳಸಲಾಗಿದೆ. ಬಂಗಾಳೀ ಭಾಷೆಯಲ್ಲಿ ಪ್ರಾಚೀನ ಬಂಗಾಳೀ (ಸುಮಾರು 950-1350). ಮಧ್ಯಕಾಲೀನ ಬಂಗಾಳಿ (ಸುಮಾರು 1350-1800) ಮತ್ತು ಆಧುನಿಕ ಬಂಗಾಳಿ (1800ರಿಂದ ಈಚೆಗೆ) ಎಂಬ ಮೂರು ಅವಸ್ಥಾಭೇದಗಳಿವೆ. ಮಧ್ಯಕಾಲೀನ ಬಂಗಾಳಿಯಲ್ಲಿ ಮೊದಲಿನದು ಮತ್ತು ಆಮೇಲಿನದು ಎಂಬ ಎರಡು ಸ್ತರಗಳನ್ನು ಗುರ್ತಿಸಬಹುದು. ಮೊದಲದರ ಕಾಲ 1350-1500ರ ತನಕ; ಆಮೇಲಿನದರ ಕಾಲ 1500-1800ರ ತನಕ. ಮೊದಲಿನ ಮಧ್ಯಕಾಲೀನ ಬಂಗಾಳಿಯಿಂದ ಆಮೇಲಿನ ಮಧ್ಯಕಾಲೀನ ಬಂಗಾಳಿಯನ್ನು ಪ್ರತ್ಯೇಕಿಸುವ ಪ್ರಧಾನ ಲಕ್ಷಣಗಳಿವು: 1. ನಾಮಪದಗಳ ಮತ್ತು ಸರ್ವನಾಮಗಳ ಬಹುವಚನಸೂಚಕ ವಿಭಕ್ತಿ ಪ್ರತ್ಯಯಗಳನ್ನು ನಿರ್ಮಿಸಿದುದು, 2. ನಿರ್ದಿಷ್ಟ ಕ್ರಿಯಾಪದಗಳಿಂದ ವಚನಸೂಚಕಗಳು ಮಾಯವಾದ್ದು ಮತ್ತು ಆಖ್ಯಾತ ಪ್ರತ್ಯಯವನ್ನು ಹಚ್ಚದೆ ಸಹಾಯಕ ಕ್ರಿಯಾಪದವನ್ನು ಕಾಲತ್ರಯದಲ್ಲಿ ನಡೆಸಿದ್ದು; ಮತ್ತು 3. ಅಧಿಕ ಸಂಖ್ಯೆಯ ಪಾರ್ಸಿಯನ್-ಅರಾಬಿಕ್ ಪದಗಳನ್ನು ಸೇರಿಸಿಕೊಂಡುದು. ಮಧ್ಯಕಾಲೀನ ಬಂಗಾಳಿಯಲ್ಲಿ ಉದ್ದಕ್ಕೂ ಪೂರ್ತಿ ಒಂದು ವಿಶಿಷ್ಟವಾದ ಕಾವ್ಯಭಾಷೆ ಅಥವಾ ಪ್ರಕ್ರಿಯಾಪದಗಳು ಬಳಕೆಯಾಗಿವೆ. ಈ ಭಾಷೆಯನ್ನು ಬ್ರಜಬುಲಿ ಎನ್ನುತ್ತಾರೆ. ಅವಹಟ್ಠ ಕಾವ್ಯಸಂಪ್ರದಾಯ ಇದಕ್ಕೆ ಅಧಾರ. ಈ ಭಾಷೆಗೆ ಅನಂತರ ಸಂಸ್ಕøತ ಪದಗಳ ಜೊತೆಗೆ ಪಾರ್ಸಿ (ಅರಾಬಿಕ್ ಮತ್ತು ಸ್ವಲ್ಪ ತುರ್ಕಿ ಸೇರಿ) ಪದಗಳೂ ಸೇರಿದವು. ಬ್ರಿಟಿಷರು ಬಂಗಾಳದ ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ತನಕ ಎಂದರೆ 18ನೆಯ ಶತಮಾನದ ಮಧ್ಯಕಾಲದ ತನಕ ಪರ್ಷಿಯನ್ ಪದಗಳ ಸ್ವೀಕರಣ ನಡೆಯುತ್ತಿತ್ತು. ಆ ವೇಳೆಗೆ ಪರ್ಷಿಯನ್ (ಮತ್ತು ಅರಾಬಿಕ್) ಭಾಷೆಗಳ ಕೆಲವು ವಿಭಕ್ತಿ ಪ್ರತ್ಯಯಗಳ ಬಳಕೆಯೂ ನಡೆದಿತ್ತು ಮತ್ತು ದಸ್ತಾವೇಜಿನ ಗದ್ಯಶೈಲಿಯನ್ನು ರೂಪಿಸಿತ್ತು. ಅನಂತರದ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಜೊತೆಗೆ ಪೋರ್ಚುಗೀಸ್ ಭಾಷೆಯ ಅನೇಕ ಪದಗಳು ಬಂಗಾಳಿ ಭಾಷೆಗೆ ಸೇರಿದುವು. ಇಂಗ್ಲಿಷ್ ವಿದ್ಯಾಭ್ಯಾಸ ಹರಡುತ್ತ ಬಂದಂತೆ ಬಂಗಾಳಿ ಭಾಷೆಯ ಮೇಲೆ ಇಂಗ್ಲಿಷ್‍ಭಾಷಾ ಪ್ರಭಾವ ಅಧಿಕವಾಯಿತು. ಇದನ್ನು ಮುಖ್ಯವಾಗಿ ಎರಡು ರೀತಿ ಗುರುತಿಸಬಹುದು. 1. ಬಂಗಾಳಿಯಲ್ಲಿ ತಕ್ಕ ಸಮಾನಾರ್ಥಕವಾಗಲಿ, ಸಮೀಪಾರ್ಥಕವಾಗಲಿ ಇಲ್ಲದ ಪದಗಳ ಮತ್ತು ಈ ದೇಶಕ್ಕೆ ತಿಳಿಯುವ ವಸ್ತುಗಳನ್ನು ಕುರಿತು ಪದಗಳ ಸೇರುವಿಕೆ, 2. ಇಂಗ್ಲಿಷ್ ಭಾಷೆಯ ಮತ್ತು ಸಾಹಿತ್ಯದ ನೇರವಾದ ಪ್ರಭಾವವೆಂದೇ ಹೇಳಲಾಗದ ರೀತಿಯಲ್ಲಿ ಬಂಗಾಳಿ ಗದ್ಯಶೈಲಿಯೊಂದರ ಬೆಳೆವಣಿಗೆ.
ಬಂಗಾಳಿ ಗ್ರಾಂಥಿಕ ಶೈಲಿ
[ಬದಲಾಯಿಸಿ]ಬಂಗಾಳೀ ಭಾಷೆಯಲ್ಲಿ ಇಂದು ಎರಡು ಗ್ರಾಂಥಿಕ ಶೈಲಿಗಳಿವೆ:
ಸಾಧು ಭಾಷೆ (ಒಪ್ಪವಾದ್ದು)
[ಬದಲಾಯಿಸಿ]16ನೆಯ ಶತಮಾನದ ಮಧ್ಯಕಾಲೀನ ಬಂಗಾಳಿ ಭಾಷೆಯ ಆಧಾರವುಳ್ಳ ಸಾಂಪ್ರದಾಯಿಕ ಸಾಹಿತ್ಯ ಶೈಲಿ, ಎರಡನೆಯದು ಈ ಶತಮಾನದಲ್ಲಿ ನಿರ್ಮಾಣಗೊಂಡದ್ದು. ಈ ಎರಡೂ ರೂಪಗಳ ನಡುವಣ ವ್ಯತ್ಯಾಸವಿರುವುದು ಕ್ರಿಯಾಪದ ಮತ್ತು ಸರ್ವ ನಾಮರೂಪಗಳಲ್ಲಿ. ಮೊದಲ ರೂಪದಲ್ಲಿ ಸಂಸ್ಕøತ ಪದಗಳು ಹೆಚ್ಚಾಗಿ ಕಂಡುಬಂದರೆ,
ಚಲಿತ ಭಾಷೆ (ಬಳಕೆಯ ಭಾಷೆ)
[ಬದಲಾಯಿಸಿ]ಜನಬಳಕೆಯ ಮಾತುಗಳು, ಪದಪುಂಜಗಳು, ನುಡಿಗಟ್ಟುಗಳು ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿಯ ಅಯೋಗಾತ್ಮಕ ಪದಗಳಲ್ಲಿ ಪೂರ್ವಾಕ್ಷರದ ಮೇಲೆ ಬಲಘಾತ ಬೀಳುತ್ತದೆ. ಪುಲ್ಲಿಂಗ ಸ್ತ್ರೀಲಿಂಗ ಭೇದಗಳೂ ಏಕವಚನ ಬಹುವಚನ ರೂಪಗಳೂ ಇವೆ. ಬಹುವಚನ ರೂಪದ ಸಾಮಾನ್ಯ ಅಂತ್ಯಪ್ರತ್ಯಯಗಳೆಂದರೆ_ರಾ,_ಏರಾ,_ದೇರ್,_ಏದೇರ್,-ಗುಲಾ,-ಗಲೀ ಇವು ಸಚೇತನ ಮತ್ತು ಅಚೇತನ ನಾಮಪದಗಳಿಗೆ ಹತ್ತುತ್ತವೆ. ವಿಶೇಷಣರೂಪ ಲಿಂಗ ವಚನ ಅಥವಾ ವಿಭಕ್ತಿ ರೂಪಗಳಲ್ಲಿ ಹೆಚ್ಚಾಗಿ ಪರಿವರ್ತನೆಗೊಳ್ಳುವುದಿಲ್ಲ. ಪುರುಷಾರ್ಥಕ ಸರ್ವನಾಮಗಳಲ್ಲಿಯ ಮಧ್ಯಮ ಪುರುಷದಲ್ಲಿ ಸಾಮಾನ್ಯ (ಕಾಮನ್), ಗೌಣ (ಇನ್‍ಫೀರಿಯರ್) ಮತ್ತು ಗೌರವಸೂಚಕ (ಅನೋರಿಫಿಕ್) ಎಂಬ ಮೂರು ರೂಪಗಳಿವೆ ಮತ್ತು ಪ್ರಥಮ ಪುರುಷದಲ್ಲಿ ಸಾಮಾನ್ಯ ಮತ್ತು ಗೌರವಸೂಚಕ ಎಂಬ ಎರಡು ರೂಪಗಳು ಮಾತ್ರ ಇವೆ. ಪ್ರಥಮ ಪುರುಷದ ಮೂರು ಸರ್ವನಾಮಗಳು ನಿರ್ದೇ ಶಾತ್ಮಕ ಸರ್ವನಾಮಗಳಾಗಿಯೂ ಬಳಕೆಗೊಳ್ಳುತ್ತವೆ. ಕ್ರಿಯಾಪದಗಳಲ್ಲಿ ಏಕವಚನ ಬಹುವಚನ ರೂಪಗಳು ಸ್ಪಷ್ಟವಾಗಿಲ್ಲ. ಧಾತುಗಳಲ್ಲಿ ಸಾಮಾನ್ಯ ಮತ್ತು ಸಂಕೀರ್ಣ ಎಂದು ಎರಡು ವಿಧ: 1. ಸಾಮಾನ್ಯ ಧಾತುಗಳಿಗೆ ಪುರುಷವಾಚಕ ಅಂತ್ಯಪ್ರತ್ಯಯಗಳು ನೇರವಾಗಿ ಹತ್ತುತ್ತವೆ. 2. ಸಂಕೀರ್ಣ ಧಾತುಗಳಿಗೆ ಪುರುಷವಾಚಕ ಅಂತ್ಯಪ್ರತ್ಯಯಗಳು ಸೇರುವ ಮುನ್ನ ಧಾತುಗಳು ಅಂತ್ಯಪ್ರತ್ಯಯೀಕರಣಕ್ಕೆ ಒಳಗಾಗಿರುತ್ತವೆ. ಭೂತ ಕಾಲದ ಅಂತ್ಯಪ್ರತ್ಯಯ-ಲ-, ಭವಿಷ್ಯತ್ ಕಾಲದ್ದು-ಬ ಮತ್ತು ಸಾಪೇಕ್ಷ ರೂಪದ್ದು-ತ-.ಬಂಗಾಳೀ ಭಾಷೆಗೆ ತನ್ನದೇ ಆದ ಲಿಪಿಯಿದೆ. ಇದು ದೇವನಾಗರಿಯ ಒಂದು ರೂಪ. ಇದರ ಉಗಮ ಮತ್ತು ವಿಕಾಸದ ವಿಚಾರದಲ್ಲಿ ಒಮ್ಮತವಿಲ್ಲ. ಇದು ಅಶೋಕ ಶಾಸನಗಳ ಬ್ರಾಹ್ಮೀ ಅಕ್ಷರಮಾಲೆಯಿಂದ ಹುಟ್ಟಿದೆ ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಪ್ರಾಚೀನ ನಾಗರೀ ಲಿಪಿಯ ಪೂರ್ವರೂಪದಿಂದ ವಿಕಾಸಗೊಂಡಿದೆ ಎಂದು ಹೇಳುತ್ತಾರೆ. ಕುಟಲ ಲಿಪಿಯಿಂದ ಬಂಗಾಳಿ, ಅಸ್ಲಾಮಿ ಮತ್ತು ಮೈಥಿüಲಿ ಲಿಪಿಗಳು ವಿಕಾಸಗೊಂಡಿವೆಯೆಂದು ಹೇಳುವವರೂ ಉಂಟು, 1180ರಲ್ಲಿ ಬರೆಯಲಾದ ಬೌದ್ಧಗಯಾದ ಕೆಲವು ಶಿಲಾಲೇಖಗಳಲ್ಲಿ ಈ ಲಿಪಿಯ ಬಗೆಗೆ ಕೆಲವು ಉಲ್ಲೇಖಗಳು ದೊರೆಯುತ್ತವೆ. ಚಾಲ್ರ್ಸ್ ವಿಲ್ಕಿನ್ಸ್ ಎಂಬಾತ 1778ರಲ್ಲಿ ಬಂಗಾಳೀ ಅಕ್ಷರ ಮಾಲೆಯನ್ನು ಮುದ್ರಣಕ್ಕೆ ಮೊದಲಿಗೆ ಅಳವಡಿಸಿದ. ಈ ಭಾಷೆಯಲ್ಲಿ ಗಮನಿಸಬೇಕಾದ ವಿಚಾರವೆಂದರೆ ಲಿಪಿಗೂ ಉಚ್ಚಾರಣೆಗೂ ನಿಕಟ ಸಂಬಂಧವಿಲ್ಲದಿರುವುದು, ಸಾಮಾನ್ಯವಾಗಿ `ವ ಬರುವ ಕಡೆಗಳಲ್ಲೆಲ್ಲ `ಬ ಬರುತ್ತದೆ. (ಕವಿತ>ಕೊಬಿತೊ), `ಅ' ಕಾರಗಳು `ಒ' ಕಾರಗಳಾಗುತ್ತವೆ, (ಜಲ>ಜೊಲ್), ಸ,ಶ,ಷ ಇವುಗಳಲ್ಲಿ ಭೇದ ಕಂಡುಬರುವುದಿಲ್ಲ (ಸಮುದ್ರ>ಶೊಮುದ್ದೊ). ಮತ್ತು ವಿಜಾತೀಯ ಸಂಯುಕ್ತಾಕ್ಷರಗಳು ಸಜಾತೀಯವಾಗುತ್ತವೆ (ಲಕ್ಷ್ಮಿ>ಲೊಕ್ಖಿ).
ಬಂಗಾಳಿ ಭಾಷೆಯ ಪ್ರಾದೇಶಿಕ ವರ್ಗ
[ಬದಲಾಯಿಸಿ]ಬಂಗಾಳೀ ಭಾಷೆಯಲ್ಲಿ ನಾಲ್ಕು ಮುಖ್ಯ ಪ್ರಾದೇಶಿಕ ವರ್ಗಗಳಿವೆ:
- ಪಶ್ಚಿಮ ಬಂಗಾಳಕ್ಕೆ ಸೇರಿದವು
- ಉತ್ತರ ಬಂಗಾಳದವು
- ಈಶಾನ್ಯ ಬಂಗಾಳವು
- ಪೂರ್ವ ಮತ್ತು ಆಗ್ನೇಯ ಬಂಗಾಳದವು.
ಮೊದಲೆಡರ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವುದಿಲ್ಲ. ಮೂರನೆಯ ವರ್ಗದಲ್ಲಿ ಆರ್ಯೇತರ ಭಾಷಾ ಪ್ರಭಾವ ಕಾಣಬಹುದು. ಆಗ್ನೇಯ ಬಂಗಾಳ ಉಪಭಾಷೆಯ ಮೇಲೆ ಟಿಬೆಟೋ-ಬರ್ಮನ್ ಭಾಷಾ ಪ್ರಭಾವವನ್ನು ಗುರುತಿಸಬಹುದು, ಪೂರ್ವ ಮತ್ತು ಪಶ್ಚಿಮ ಬಂಗಾಳದ ಉಪಭಾಷೆಗಳ ನಡುವೆ ಹೊಂದಾಣಿಕೆ ಇರುವುವು ಕಂಡುಬರುತ್ತದೆ. ಬಂಗಾಳೀ ಭಾಷೆಯ ಉಪಭಾಷೆಗಳನ್ನು ಗ್ರಿಯರ್‍ಸನ್ ಮಹಾಶಯ ಪರಿನಿಷ್ಟಿತ ಬಂಗಾಳೀ (ಶಿಷ್ಟಭಾಷೆ), ಪಶ್ವಿಮೀ ಬಂಗಾಳಿ, ದಕ್ಷಿಣ-ಪಶ್ಚಿಮೀ ಬಂಗಾಳಿ, ಉತ್ತರಿ ಬಂಗಾಳಿ, ರಾಜಭಾಂಗ್ಸಿ, ಪೂರ್ವೀಬಂಗಾಳಿ, ದಕ್ಷಿಣ-ಪೂರ್ವೀಬಂಗಾಳಿ ಎಂದು ವಿಭಾಗಿಸಿದ್ದಾನೆ, ಇವುಗಳ ಜೊತೆಗೆ ಪಶ್ಚಿಮೀ ಬಂಗಾಳಿಯಲ್ಲಿ ಸರಾಕಿ, ಖಡಿಯಠಾರ್, ಪಹಾಡಿಯಠಾರ್ ಮತ್ತು ಮಾಲ್‍ಪಹಾಡಿಯ ಎಂಬ ರೂಪಗಳೂ ಉತ್ತರಿ ಬಂಗಾಳಿಯಲ್ಲಿ ಕೋಚ್, ಸಿರ್ಪುರಿಯ ಎಂಬ ರೂಪಗಳೂ ಪೂರ್ವೀಬಂಗಾಳಿಯಲ್ಲಿ ಹೈಜೊಂಗ್, ಸಿಲ್ಹಟಿಯ ಮುಂತಾದ ರೂಪಗಳೂ ಇವೆ. ಹೈಜೊಂಗ್ ಎಂಬುದು ಬರ್ಮಿ, ಬಂಗಾಳಿ ಮತ್ತು ಟಿಬೆಟ್ಟಿ ಭಾಷಾರೂಪಗಳ ಮಿಶ್ರಣವಾಗಿ ಕಂಡುಬರುತ್ತದೆ. ಭಾರತ ಸ್ವತಂತ್ರವಾದ ಮೇಲೆ ಪಶ್ಚಿಮ ಬಂಗಾಳದ ಬಂಗಾಳೀ ಭಾಷೆ ಮತ್ತು ಸಾಹಿತ್ಯವು ಪೂರ್ಣ ಬಂಗಾಳದ (ಬಾಂಗ್ಲಾದೇಶ) ಭಾಷೆ ಮತ್ತು ಸಾಹಿತ್ಯಕ್ಕಿಂತ ಭಿನ್ನವಾಗಿ ಬೆಳೆಯಲು ಅವಕಾಶವಾಗಿದೆ.
ಆಧುನಿಕ ಬಂಗಾಳೀ ಭಾಷೆ ಮತ್ತು ಸಾಹಿತ್ಯವನ್ನು ಕುರಿತು ವ್ಯಾಪಕ ಅಧ್ಯಯನ ನಡೆಯುತ್ತಿದೆ. ಇದರಿಂದ ಅನೇಕ ಹೊಸ ವಿಚಾರಗಳು ತಿಳಿದುಬರುತ್ತಿವೆ.
ಉಲ್ಲೇಖಗಳು
[ಬದಲಾಯಿಸಿ]- ↑ cite web|url=http://andamandt.nic.in/profile.htm%7Ctitle=Profile: A&N Islands at a Glance|work=Andaman District|publisher=National Informatics Center|accessdate=2008-05-27
- ↑ cite web|url=http://police.and.nic.in/andaman.htm%7Ctitle=Andaman District|work=Andaman & Nicobar Police|publisher=National Informatics Center|accessdate=2008-05-27
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Biswas, Sailendra. Samsada Bangala abhidhana. 7th ed. Calcutta, Sahitya Samsad, 2004. Requires Unicode enabled browser.
- Biswas, Sailendra. Samsad Bengali-English dictionary. 3rd ed. Calcutta, Sahitya Samsad, 2000. Requires Unicode enabled browser.
- Free Bengali Unicode Solutions.
- The South Asian Literary Recordings Project, The Library of Congress. Bengali Authors.
- Bengali computing resources at TDIL
- Bangla Language and Literary Society Archived 2014-03-02 ವೇಬ್ಯಾಕ್ ಮೆಷಿನ್ ನಲ್ಲಿ.
- All Bangla Newspaper link Archived 2013-04-24 ವೇಬ್ಯಾಕ್ ಮೆಷಿನ್ ನಲ್ಲಿ.
- Bengali - English Online Dictionary at Hablaa