ವಿಷಯಕ್ಕೆ ಹೋಗು

ವರ್ಣಾಶ್ರಮ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ತತ್ತ್ವಶಾಸ್ತ್ರ
ಸರಣಿಯ ಲೇಖನ
aum symbol
ಪಂಥಗಳು
ಸಾಂಖ್ಯ · ನ್ಯಾಯ
ವೈಶೇಷಿಕ · ಯೋಗ
ಪೂರ್ವ ಮೀಮಾಂಸಾ · ವೇದಾಂತ
ವೇದಾಂತ ಪಂಥಗಳು
ಅದ್ವೈತ · ವಿಶಿಷ್ಟಾದ್ವೈತ
ದ್ವೈತ
ಪ್ರಮುಖ ವ್ಯಕ್ತಿಗಳು
ಕಪಿಲ · ಗೋತಮ
ಕಣಾದ · ಪತಂಜಲಿ
ಜೈಮಿನಿ · ವ್ಯಾಸ
ಮಧ್ಯಕಾಲೀನ
ಆದಿಶಂಕರ · ರಾಮಾನುಜ
ಮಧ್ವ · ಮಧುಸೂದನ
ವೇದಾಂತ ದೇಶಿಕ · ಜಯತೀರ್ಥ
ಆಧುನಿಕ
ರಾಮಕೃಷ್ಣ · ರಮಣ
ವಿವೇಕಾನಂದ · ನಾರಾಯಣ ಗುರು
ಅರವಿಂದ ·ಶಿವಾನಂದ

ವರ್ಣಾಶ್ರಮ ಪದ್ಧತಿಯು ನಾಲ್ಕು ವರ್ಗಗಳನ್ನು ಹೊಂದಿದ ಹಿಂದೂ ಧರ್ಮದ ಒಂದು ಪದ್ಧತಿ. ವರ್ಣ ಒಂದು ಸಂಸ್ಕೃತ ಶಬ್ದ, ಇದರರ್ಥ ಪ್ರಕಾರ, ಕ್ರಮ, ಬಣ್ಣ ಅಥವಾ ವರ್ಗ.[೧] ವರ್ಣ ಪದವು ಮನುಸ್ಮೃತಿಯಂತಹ ಬ್ರಾಹ್ಮಣೀಯ ಪುಸ್ತಕಗಳಲ್ಲಿ ಸಾಮಾಜಿಕ ವರ್ಗಗಳನ್ನು ಸೂಚಿಸುತ್ತದೆ. ಇವು ಮತ್ತು ಇತರ ಹಿಂದೂ ಸಾಹಿತ್ಯ ಸಮಾಜವನ್ನು ತಾತ್ವಿಕವಾಗಿ ನಾಲ್ಕು ವರ್ಣಗಳಾಗಿ ವರ್ಗೀಕರಿಸಿದವು:

  • ಬ್ರಾಹ್ಮಣರು: ಯಾರು ಶುದ್ಧವಾಗಿ ಇರುತ್ತಾರೆ, ಜ್ಞಾನವಂತರಾಗಿರುತ್ತರೆ, ಇತರರನ್ನು ಅಜ್ಞಾನದಿಂದ ಹೊರತರುವರು ಅವರು ಬ್ರಾಹ್ಮಣ, (ಅಧ್ಯಾಪಕರು, ಶಿಕ್ಷಕರು ಮತ್ತು ವಿದ್ವಾಂಸರು) .
  • ಕ್ಷತ್ರಿಯರು: ಯಾರು ಭಯವನ್ನು ಹೋಗಲಾಡಿಸಿ ಸುರಕ್ಷತೆ ನೀಡುತ್ತಾರೆ ಅವರು ಕ್ಷತ್ರಿಯ, (ಯೋಧರು ಮತ್ತು ಆಡಳಿತಗಾರರು)
  • ವೈಶ್ಯರು: ವ್ಯವಸಾಯ ಮಾಡುವ ಬೆಳೆಗಳನ್ನು ಬೆಳೆಯುವ, ಯಾವುದೇ ರೀತಿಯ ವ್ಯಾಪಾರ ಮಾಡುವವರು ವೈಶ್ಯ (ಎಲ್ಲಾ ರೀತಿಯ ವರ್ತಕರು)
  • ಶೂದ್ರರು: ಕೊನೆಯ ವರ್ಗ ಪರಿಸರವನ್ನು ಶುದ್ಧವಾಗಿ ಇಡುವ ಎಲ್ಲರು ಶೂದ್ರ.

ಇದನ್ನು ಸ್ಥೂಲವಾಗಿ ಬುದ್ಧಿ, ಪರಾಕ್ರಮ, ಸಂಪತ್ತು ಹಾಗೂ ಪರಿಶ್ರಮಗಳ ಆಧಾರದ ಮೇಲೆ ಮಾಡಿದ್ದು. ಪ್ರತಿಯೊಂದು ವರ್ಣದವರೂ ಕೂಡಾ ಒಂದೇ ಪುರುಷನ ಅಂದರೆ ಜಗದ ಕುಟುಂಬದ ವಿವಿಧ ಅಂಗಗಳೇ ಆಗಿದ್ದು ಯಾರು ಯಾರಿಗೆ ಮೇಲಾಗಲೀ ಕೀಳಾಗಲೀ ಆಗಿರುವುದಿಲ್ಲ ಮತ್ತು ಈ ವರ್ಗ ವಿಭಾಗಗಳನ್ನು ವ್ಯಕ್ತಿಯ ಗುಣ-ಕರ್ಮಗಳಿಗೆ ಅನುಸಾರವಾಗಿ ಮಾಡಲಾಗಿದೆ ಎಂಬುದನ್ನು ಹಿಂದೂ ಧರ್ಮದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಈ ನಾಲ್ಕು ವರ್ಣಗಳಲ್ಲಿ ಒಂದಕ್ಕೆ ಸೇರಿದ ಸಮುದಾಯಗಳನ್ನು ಸವರ್ಣ ಎಂದು ಕರೆಯಲಾಗುತ್ತದೆ. ಇಂದಿನ ಸಂದರ್ಭದಲ್ಲಿ, ಇವುಗಳಲ್ಲಿ ಎಲ್ಲ ಪ್ರಗತಿಶೀಲ ಜಾತಿಗಳು ಸೇರಿವೆ. ಯಾವುದೇ ವರ್ಣಕ್ಕೆ ಸೇರದ ದಲಿತರು ಮತ್ತು ಪರಿಶಿಷ್ಟ ಪಂಗಡದವರನ್ನು ಅವರ್ಣ ಎಂದು ಕರೆಯಲಾಗುತ್ತದೆ.

ಈ ನಾಲ್ಕು ವರ್ಣಗಳಲ್ಲಿ ವಿಭಜನೆಯು ಸಾಮಾಜಿಕ ಶ್ರೇಣೀಕರಣದ ಒಂದು ರೂಪ ಮತ್ತು ಇದನ್ನು ಇನ್ನೂ ಹೆಚ್ಚು ಸೂಕ್ಷ್ಮ ವ್ಯತ್ಯಾಸದ ಜಾತಿಯೊಂದಿಗೆ ತಪ್ಪುತಿಳಿಯಬಾರದು.

ವರ್ಣ ಪದ್ಧತಿಯನ್ನು ಹಿಂದೂ ಪಠ್ಯಗಳಲ್ಲಿ ಚರ್ಚಿಸಲಾಗಿದೆ, ಮತ್ತು ಆದರ್ಶೀಕೃತ ಮಾನವ ವೃತ್ತಿಗಳು ಎಂದು ಅರ್ಥಮಾಡಿಕೊಳ್ಳಲಾಗಿದೆ. ಈ ಪರಿಕಲ್ಪನೆಯನ್ನು ಸಾಮಾನ್ಯವಾಗಿ ಋಗ್ವೇದದ ಪುರುಷ ಸೂಕ್ತದ ಶ್ಲೋಕಕ್ಕೆ ಪತ್ತೆಹಚ್ಚಲಾಗಿದೆ. ಆದರೆ, ಬಹುಶಃ ಮೂಲದ ಮಿಥ್ಯಾಕಲ್ಪನೆಯನ್ನು ಸೃಷ್ಟಿಸಲು ಈ ಶ್ಲೋಕವನ್ನು ನಂತರದ ದಿನಾಂಕದಲ್ಲಿ ಸೇರಿಸಲಾಗಿದೆ ಎಂದು ಆಧುನಿಕ ವಿದ್ವತ್ತು ನಂಬುತ್ತದೆ.

ಮನುಸ್ಮೃತಿಯಲ್ಲಿನ ವರ್ಣ ಪದ್ಧತಿ ಮೇಲಿನ ಭಾಷ್ಯವನ್ನು ಹಲವುವೇಳೆ ಉಲ್ಲೇಖಿಸಲಾಗುತ್ತದೆ. ಈ ಪಠ್ಯ ವರ್ಗೀಕರಣಗಳ ವಿರುದ್ಧ, ಅನೇಕ ಹಿಂದೂ ಪಠ್ಯಗಳು ಮತ್ತು ಸಿದ್ಧಾಂತಗಳು ಸಾಮಾಜಿಕ ವರ್ಗೀಕರಣದ ವರ್ಣ ಪದ್ಧತಿಯನ್ನು ಪ್ರಶ್ನಿಸಿ ಅದಕ್ಕೆ ಅಸಮ್ಮತಿ ಸೂಚಿಸುತ್ತವೆ.

ವೇದಗಳು[ಬದಲಾಯಿಸಿ]

(ವರ್ಣ ಪದವನ್ನು ಬಳಸದೆ) ನಾಲ್ಕು ಸಾಮಾಜಿಕ ವರ್ಗಗಳಲ್ಲಿ ಔಪಚಾರಿಕ ವಿಭಜನೆಯ ಅತ್ಯಂತ ಮುಂಚಿನ ಅನ್ವಯ ಋಗ್ವೇದದ ಪುರುಷ ಸೂಕ್ತದಲ್ಲಿ (ಋ ೧೦.೯೦.೧೧-೧೨) ಕಾಣಿಸುತ್ತದೆ. ಇದರಲ್ಲಿ ಬ್ರಾಹ್ಮಣ, (ಕ್ಷತ್ರಿಯ ಬದಲು) ರಾಜನ್ಯ, ವೈಶ್ಯ ಮತ್ತು ಶೂದ್ರ ವರ್ಗಗಳು ಆದಿಸ್ವರೂಪದ ಪುರುಷನ ಬಲಿಯಲ್ಲಿ ಅನುಕ್ರಮವಾಗಿ ಬಾಯಿ, ತೋಳುಗಳು, ತೊಡೆಗಳು ಮತ್ತು ಪಾದಗಳನ್ನು ರೂಪಿಸುತ್ತವೆ:

11. ಪುರುಷನನ್ನು ವಿಭಜಿಸಿದಾಗ ಎಷ್ಟು ಭಾಗಗಳನ್ನಾಗಿ ಮಾಡಿದರು?
ಅವನ ಬಾಯಿ, ತೋಳುಗಳನ್ನು ಏನೆಂದು ಕರೆಯುವರು? ಅವನ ತೊಡೆ, ಪಾದಗಳನ್ನು ಏನೆಂದು ಕರೆಯುವರು?
12. ಬ್ರಾಹ್ಮಣ ಅವನ ಬಾಯಿಯಾಗಿದ್ದ, ಅವನ ಎರಡೂ ತೋಳುಗಳಿಂದ ರಾಜನ್ಯನಾದನು.
ಅವನ ತೊಡೆಗಳು ವೈಶ್ಯನಾದವು, ಅವನ ಪಾದಗಳಿಂದ ಶೂದ್ರನ ಸೃಷ್ಟಿಯಾಯಿತು.

ಪುರುಷ ಸೂಕ್ತದ ಈ ವರ್ಣದ ಬಗ್ಗೆ ಪದ್ಯವನ್ನು ನಂತರದ ದಿನಾಂಕದಲ್ಲಿ ವೈದಿಕ ಪಠ್ಯದಲ್ಲಿ ಸೇರಿಸಲಾಗಿದೆ ಎಂದು ಈಗ ಸಾಮಾನ್ಯವಾಗಿ ಪರಿಗಣಿಸಲಾಗಿದೆ, ಬಹುಶಃ ಮೂಲದ ಮಿಥ್ಯಾಕಲ್ಪನೆಯಾಗಿ. "ವಿಸ್ತಾರವಾದ, ಬಹಳ ವಿಭಜಿಸಲಾದ ಮತ್ತು ಅತಿಕ್ರಮಿಸುವ ಜಾತಿ ಪದ್ಧತಿಗೆ ಋಗ್ವೇದದಲ್ಲಿ ಯಾವುದೇ ಪುರಾವೆಯಿಲ್ಲ", ಮತ್ತು "ವರ್ಣ ಪದ್ಧತಿಯು ಋಗ್ವೇದದಲ್ಲಿ ಮೂಲಾವಸ್ಥೆಯಲ್ಲಿತ್ತು ಎಂದು ತೋರುತ್ತದೆ, ಮತ್ತು ಆಗ ಹಾಗೂ ನಂತರ, ಸಾಮಾಜಿಕ ವಾಸ್ತವದ ಬದಲಾಗಿ ಒಂದು ಸಾಮಾಜಿಕ ಆದರ್ಶವಾಗಿತ್ತು" ಎಂದು ವಿದ್ವಾಂಸರು ಹೇಳುತ್ತಾರೆ.

ವೈದಿಕೋತ್ತರ ಕಾಲದಲ್ಲಿ, ವರ್ಣ ಪದ್ಧತಿಯನ್ನು ಧರ್ಮಶಾಸ್ತ್ರ ಸಾಹಿತ್ಯ, ಮಹಾಭಾರತ, ಮತ್ತು ಪುರಾಣಗಳಲ್ಲಿ ವಿವರಿಸಲಾಗಿದೆ.

ಧರ್ಮಶಾಸ್ತ್ರಗಳು[ಬದಲಾಯಿಸಿ]

ಧರ್ಮಶಾಸ್ತ್ರಗಳಲ್ಲಿ ವರ್ಣ ಪದ್ಧತಿಯನ್ನು ವಿಸ್ತಾರವಾಗಿ ಚರ್ಚಿಸಲಾಗಿದೆ. ಧರ್ಮಶಾಸ್ತ್ರಗಳಲ್ಲಿನ ವರ್ಣ ಪದ್ಧತಿಯು ಸಮಾಜವನ್ನು ನಾಲ್ಕು ವರ್ಣಗಳಾಗಿ ವಿಭಜಿಸುತ್ತದೆ (ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯ ಮತ್ತು ಶೂದ್ರರು). ತಮ್ಮ ಗಂಭೀರ ಪಾಪಗಳ ಕಾರಣ ಈ ಪದ್ಧತಿಯಿಂದ ಹೊರಬೀಳುವವರನ್ನು ಜಾತಿಭ್ರಷ್ಟರೆಂದು (ಅಸ್ಪೃಶ್ಯರು) ಬಹಿಷ್ಕರಿಸಲಾಗುತ್ತದೆ ಮತ್ತು ವರ್ಣ ಪದ್ಧತಿಯ ಹೊರಗಿರುವವರೆಂದು ಪರಿಗಣಿಸಲಾಗುತ್ತದೆ. ಅನಾಗರಿಕರು ಮತ್ತು ಅಪ್ರಾಮಾಣಿಕ ಅಥವಾ ನೀತಿಗೆಟ್ಟವರನ್ನು ಕೂಡ ಜಾತಿಭ್ರಷ್ಟರೆಂದು ಪರಿಗಣಿಸಲಾಗುತ್ತದೆ.

ಈ ಪಠ್ಯಗಳಲ್ಲಿ ವರ್ಣ ಜೊತೆಗೆ ಅಸ್ಪೃಶ್ಯ ಜಾತಿಭ್ರಷ್ಟರ ಚರ್ಚೆ ಭಾರತದಲ್ಲಿನ ಆಧುನಿಕ ಯುಗದ ಜಾತಿ ಪದ್ಧತಿಯನ್ನು ಹೋಲುವುದಿಲ್ಲ ಎಂದು ಇತ್ತೀಚಿನ ವಿದ್ವತ್ತು ಸೂಚಿಸುತ್ತದೆ. ಪ್ರಾಚೀನ ಹಾಗೂ ಮಧ್ಯಯುಗದ ಭಾರತೀಯ ಪಠ್ಯಗಳು ಧರ್ಮಾಚರಣೆ ಮಾಲಿನ್ಯ, ಶುದ್ಧತೆ-ಅಶುದ್ಧತೆಯನ್ನು ವರ್ಣ ಪದ್ಧತಿಗೆ ಆಧಾರವೆಂದು ಬೆಂಬಲಿಸುವುದಿಲ್ಲ ಎಂದು ಒಬ್ಬ ಸಂಸ್ಕೃತ ಹಾಗೂ ಭಾರತೀಯ ಧರ್ಮಗಳ ಪ್ರಾಧ್ಯಾಪಕ ಹೇಳುತ್ತಾನೆ. ಇವನ ಪ್ರಕಾರ, ಧರ್ಮಶಾಸ್ತ್ರಗಳಲ್ಲಿ ಶುದ್ಧತೆ-ಅಶುದ್ಧತೆಯನ್ನು ಕೇವಲ ವ್ಯಕ್ತಿಯ ನೈತಿಕ, ಧರ್ಮಾಚರಣೆ ಹಾಗೂ ಜೈವಿಕ ಮಾಲಿನ್ಯದ (ಮಾಂಸದಂತಹ ನಿರ್ದಿಷ್ಟ ಬಗೆಯ ಆಹಾರವನ್ನು ತಿನ್ನುವುದು, ಶೌಚಾಲಯಕ್ಕೆ ಹೋಗುವುದು) ಸಂಬಂಧದಲ್ಲಿ ಚರ್ಚಿಸಲಾಗಿದೆ. ೧ನೇ ಸಹಸ್ರಮಾನದ ಶಾಸ್ತ್ರ ಪಠ್ಯಗಳಲ್ಲಿ ಅಶುದ್ಧತೆಯ ಏಕೈಕ ಉಲ್ಲೇಖ ಗಂಭೀರ ಪಾಪಗಳನ್ನು ಮಾಡಿ ತಮ್ಮ ವರ್ಣದಿಂದ ಹೊರಬೀಳುವ ಜನರ ಬಗ್ಗೆ ಇದೆ. ಧರ್ಮಶಾಸ್ತ್ರಗಳಲ್ಲಿ ಶುದ್ಧತೆ/ಅಶುದ್ಧತೆಗೆ ಸಂಬಂಧಿಸಿದ ವಿಷಯಗಳಲ್ಲಿ ಅಗಾಧವಾದ ಗಮನ ಅವರ ವರ್ಣ ಸದಸ್ಯತ್ವವನ್ನು ಲೆಕ್ಕಿಸದೆ ವ್ಯಕ್ತಿಗಳ ಮೇಲಿದೆ ಮತ್ತು ಎಲ್ಲ ನಾಲ್ಕು ವರ್ಣಗಳು ತಮ್ಮ ನಡತೆ, ನೈತಿಕ ಉದ್ದೇಶ, ಕ್ರಿಯೆಗಳು, ಮುಗ್ಧತೆ ಅಥವಾ ಅಜ್ಞಾನ, ನಿಬಂಧನೆಗಳು, ಮತ್ತು ಧರ್ಮಾಚರಣಾ ವರ್ತನೆಗಳ ಪ್ರಮಾಣದಿಂದ ಶುದ್ಧತೆ/ಅಶುದ್ಧತೆಯನ್ನು ಪಡೆಯಬಹುದು ಎಂದು ಇವನು ಸೇರಿಸುತ್ತಾನೆ.

ಧರ್ಮಶಾಸ್ತ್ರಗಳಲ್ಲಿ ಮೊದಲ ಮೂರು ವರ್ಣಗಳನ್ನು ದ್ವಿಜರೆಂದು ವರ್ಣಿಸಲಾಗಿದೆ ಮತ್ತು ಅವರಿಗೆ ವೇದಗಳನ್ನು ಅಧ್ಯಯನ ಮಾಡುವ ಅನುಮತಿ ಇದೆ. ಯಾರು ವೇದಗಳನ್ನು ಕಲಿಯಬಹುದು ಎಂಬ ಇಂತಹ ನಿರ್ಬಂಧ ವೈದಿಕ ಯುಗದ ಸಾಹಿತ್ಯದಲ್ಲಿ ಸಿಗುವುದಿಲ್ಲ.

ಮನುಸ್ಮೃತಿಯು ದನ ಸಾಕಣೆ ವೈಶ್ಯ ವೃತ್ತಿಯೆಂದು ಹೇಳುತ್ತದೆ ಆದರೆ ಬ್ರಾಹ್ಮಣರು, ಕ್ಷತ್ರಿಯರು ಮತ್ತು ಶೂದ್ರರು ಕೂಡ ದನ ಸಾಕಾಣೆ ಮಾಡುತ್ತಿದ್ದರು ಮತ್ತು ದನ ಸಂಪತ್ತು ಅವರ ಮನೆಗಳ ಪ್ರಧಾನ ಆಧಾರವಾಗಿತ್ತು ಎಂದು ಐತಿಹಾಸಿಕ ಪುರಾವೆ ತೋರಿಸುತ್ತದೆ. ಅಸ್ಪೃಶ್ಯರೆಂದು ಪಟ್ಟಿಮಾಡಲಾದ ಚಾಮರರು ಕೂಡ ಭೂಮಿ ಮತ್ತು ದನ ಹೊಂದಿದ್ದರು ಮತ್ತು ಸಕ್ರಿಯ ಕೃಷಿಕರಾಗಿದ್ದರು ಎಂದು ೧೯ನೇ ಶತಮಾನದ ಬ್ರಿಟಿಷ್ ದಾಖಲೆಗಳು ತೋರಿಸುತ್ತವೆ ಎಂದು ಪ್ರಾಧ್ಯಾಪಕ ರಾವತ್ ಹೇಳುತ್ತಾರೆ. ಕೋಸಲದ ಸಾಮ್ರಾಟರು ಮತ್ತು ಕಾಶಿಯ ರಾಜಕುಮಾರ ಇತರ ಉದಾಹರಣೆಗಳು.

ಮನುಸ್ಮೃತಿಯು ವರ್ಣ ಪದ್ಧತಿ ಮೇಲಿನ ಬಹಳ ಸಂಕೇತರೂಪದ ಭಾಷ್ಯವಾಗಿದೆ, ಆದರೆ ಅದು ಕೂಡ ವಿವರಗಳ ಬದಲು ಮಾದರಿಗಳನ್ನು ಒದಗಿಸುತ್ತದೆ ಎಂದು ಮಾನವಶಾಸ್ತ್ರಜ್ಞ ಇಂಗೋಲ್ಡ್ ಬರೆಯುತ್ತಾರೆ. ಮನುಸ್ಮೃತಿ ಮತ್ತು ಇತರ ಧರ್ಮಗ್ರಂಥಗಳು ಸಾಮಾಜಿಕ ಶ್ರೇಣಿವ್ಯವಸ್ಥೆಯಲ್ಲಿ ಬ್ರಾಹಣರನ್ನು ಏರಿಸಲು ನೆರವಾದವು ಮತ್ತು ವರ್ಣ ಪದ್ಧತಿಯ ನಿರ್ಮಾಣದಲ್ಲಿ ಒಂದು ಅಂಶವಾಗಿದ್ದವು, ಆದರೆ ಪ್ರಾಚೀನ ಪಠ್ಯಗಳು ಯಾವುದೋ ರೀತಿಯಲ್ಲಿ ಭಾರತದಲ್ಲಿ ಜಾತಿಯ ವಿದ್ಯಮಾನವನ್ನು ಸೃಷ್ಟಿಸಲಿಲ್ಲ ಎಂದು ಒಬ್ಬ ವಿದ್ವಾಂಸೆ ಹೇಳುತ್ತಾಳೆ.

ಮಹಾಕಾವ್ಯಗಳು[ಬದಲಾಯಿಸಿ]

ಸುಮಾರು ಕ್ರಿ.ಶ. ೪ನೇ ಶತಮಾನದ ವೇಳೆಗೆ ಮುಗಿಸಲಾಗಿದ್ದೆಂದು ಅಂದಾಜಿಸಲಾದ ಮಹಾಭಾರತವು ವರ್ಣ ಪದ್ಧತಿಯನ್ನು ವಿಭಾಗ ೧೨.೧೮೧ ರಲ್ಲಿ ಚರ್ಚಿಸುತ್ತದೆ.

ಈ ಮಹಾಕಾವ್ಯವು ವರ್ಣದ ಮೇಲಿನ ಎರಡು ಮಾದರಿಗಳನ್ನು ಒದಗಿಸುತ್ತದೆ. ಮೊದಲ ಮಾದರಿಯು ಭೃಗು ಹೆಸರಿನ ಪಾತ್ರದ ಮೂಲಕ ವರ್ಣವನ್ನು ಬಣ್ಣ ಸಂಕೇತದ ವ್ಯವಸ್ಥೆಯೆಂದು ವರ್ಣಿಸುತ್ತದೆ, "ಬ್ರಾಹ್ಮಣರ ವರ್ಣ ಬಿಳಿಯಾಗಿತ್ತು, ಕ್ಷತ್ರಿಯರದ್ದು ಕೆಂಪಾಗಿತ್ತು, ವೈಶ್ಯರದ್ದು ಹಳದಿಯಾಗಿತ್ತು, ಮತ್ತು ಶೂದ್ರರದ್ದು ಕಪ್ಪಾಗಿತ್ತು". ಈ ವಿವರಣೆಯನ್ನು ಭಾರದ್ವಾಜರು ಪ್ರಶ್ನಿಸಿ ಎಲ್ಲ ವರ್ಣಗಳಲ್ಲಿ ಬಣ್ಣಗಳನ್ನು ಕಾಣಬಹುದು, ಮತ್ತು ಬಯಕೆ, ಕೋಪ, ಭಯ, ದುರಾಸೆ, ದುಃಖ, ಆತಂಕ, ಹಸಿವು ಹಾಗೂ ಹೆಣಗು ಎಲ್ಲ ಮಾನವ ಜೀವಿಗಳ ಮೇಲೆ ಮೇಲುಗೈ ಸಾಧಿಸುತ್ತವೆ, ಮತ್ತು ಪಿತ್ತರಸ ಹಾಗೂ ರಕ್ತ ಎಲ್ಲ ಮಾನವ ದೇಹಗಳಿಂದ ಹರಿಯುತ್ತವೆ, ಹಾಗಾಗಿ ವರ್ಣಗಳ ನಡುವಿನ ವ್ಯತ್ಯಾಸವೇನು?" ಎಂದು ಕೇಳುತ್ತಾರೆ. "ವರ್ಣಗಳ ನಡುವೆ ಏನೂ ವ್ಯತ್ಯಾಸವಿಲ್ಲ. ಈ ಇಡೀ ಬ್ರಹಾಂಡ ಬ್ರಹ್ಮ. ಇದನ್ನು ಹಿಂದೆ ಬಹ್ಮನು ಸೃಷ್ಟಿಸಿದನು, ಮತ್ತು ಕಾಯಿದೆಗಳಿಂದ ವರ್ಗೀಕರಿಸಲ್ಪಟ್ಟಿತು" ಎಂದು ಆಗ ಮಹಾಭಾರತ ಘೋಷಿಸುತ್ತದೆ.

ಆದನಂತರ ಮಹಾಭಾರತವು ವರ್ಣಕ್ಕೆ ಒಂದು ವರ್ತನಾಧಾರಿತ ಮಾದರಿಯನ್ನು ನಿರೂಪಿಸಿತು, ಸಿಟ್ಟು, ಸಂತೋಷಗಳು ಮತ್ತು ಧೈರ್ಯಗಳ ಕಡೆ ಒಲವಿರುವವರು ಕ್ಷತ್ರಿಯ ವರ್ಣವನ್ನು ಪಡೆಯುತ್ತಾರೆ; ದನ ಸಾಕಣೆ ಮತ್ತು ಆರ್ಥಿಕವಾಗಿ ಉಳುಮೆ ಮೇಲೆ ಆಧರಿಸುವ ಒಲವಿರುವವರು ವೈಶ್ಯ ವರ್ಣವನ್ನು ಪಡೆಯುತ್ತಾರೆ; ಹಿಂಸೆ, ಅಪ್ರಾಮಾಣಿಕತೆ ಮತ್ತು ಅಶುದ್ಧತೆಯನ್ನು ಇಷ್ಟಪಡುವವರು ಶೂದ್ರ ವರ್ಣವನ್ನು ಪಡೆಯುತ್ತಾರೆ. ಈ ಮಹಾಕಾವ್ಯದಲ್ಲಿ, ಬ್ರಾಹ್ಮಣ ವರ್ಗವನ್ನು ಸತ್ಯ, ಸಂಯಮ ಮತ್ತು ಶುದ್ಧ ನಡತೆಗೆ ಸಮರ್ಪಿತನಾದ ಮಾನವನ ಮೂಲರೂಪ ಸ್ಥಿತಿಯಾಗಿ ರೂಪಿಸಲಾಗಿದೆ. ವಾಸ್ತವವಾಗಿ, ಎಲ್ಲ ಮನುಷ್ಯರು ಬ್ರಾಹ್ಮಣರ ಮಕ್ಕಳು, ಈ ರೀತಿ ತಿಳಿದುಕೊಂಡರೆ ಮಾತ್ರ ಇದರ ಅರ್ಥವಾಗುತ್ತದೆ ಎಂದು ಇದು ಪ್ರತಿಪಾದಿಸಲು ಮುಂದುವರಿಯುತ್ತದೆ. ಮಹಾಭಾರತ ಮತ್ತು ಮಧ್ಯಯುಗಪೂರ್ವ ಹಿಂದೂ ಪಠ್ಯಗಳಲ್ಲಿ ಸೈದ್ಧಾಂತಿಕವಾಗಿ ವರ್ಣವು ವಂಶಪಾರಂಪರ್ಯವಾದುದಲ್ಲ ಎಂದು ಗುರುತಿಸುವುದು ಮುಖ್ಯ. ನಾಲ್ಕು ವರ್ಣಗಳು ವಂಶಾವಳಿಗಳಲ್ಲ, ಬದಲಾಗಿ ವರ್ಗಗಳು.

ಭಗವದ್ಗೀತೆಯಲ್ಲಿ ಬರುವ 'ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗತ:'ಎಂಬ ಶ್ಲೋಕ ಹಾಗೂ ಮಹಾಭಾರತದ ವನಪರ್ವದ ಒಂದು ಶ್ಲೋಕ "ನ ಯೋನಿ: ನಾಪಿ ಸಂಸ್ಕಾರೋ ನ ಶ್ರುತಂ ಚ ಸಂತತಿ:| ಕಾರಣಾನಿ ದ್ವಿಜತ್ವಸ್ಯ ವೃತ್ತಮೇವ ತು ಕಾರಣಮ್ ||" ಎಂದರೆ ಬ್ರಾಹ್ಮಣತ್ವದ ಕಾರಣವು ಜನ್ಮವಲ್ಲ,ಸಂಸ್ಕಾರವಲ್ಲ,ವೇದಾಧ್ಯಯನವಲ್ಲ,ಕುಲವೂ ಅಲ್ಲ.ಅದರ ಕಾರಣವು ಸದಾಚಾರ ಮಾತ್ರವಾಗಿರುತ್ತದೆ.ಆದುದರಿಂದ ಹಿಂದೂಧರ್ಮದ ಮೂಲ ವರ್ಣಾಶ್ರಮ ವಿಭಾಗವು ಈಗಿನ ಜಾತಿ ಪದ್ಧತಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತೆಂದು ತಿಳಿದುಬರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Stanton, Andrea (2012). An Encyclopedia of Cultural Sociology of the Middle East, Asia, and Africa. USA: SAGE Publications. pp. 12–13. ISBN 978-1-4129-8176-7.