ವಿಷಯಕ್ಕೆ ಹೋಗು

ನಾಗಾಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗಾಲ್ಯಾಂಡ್
Map of India with the location of ನಾಗಾಲ್ಯಾಂಡ್ highlighted.
Map of India with the location of ನಾಗಾಲ್ಯಾಂಡ್ highlighted.
ರಾಜಧಾನಿ
 - ಸ್ಥಾನ
ಕೊಹಿಮಾ
 - 25.4° N 94.08° E
ಅತಿ ದೊಡ್ಡ ನಗರ ದೀಮಾಪುರ್
ಜನಸಂಖ್ಯೆ (2001)
 - ಸಾಂದ್ರತೆ
1,988,636 (24th)
 - 120/km²
ವಿಸ್ತೀರ್ಣ
 - ಜಿಲ್ಲೆಗಳು
16,579 km² (25th)
 - 11
ಸಮಯ ವಲಯ IST (UTC+5:30)
ಸ್ಥಾಪನೆ
 - ರಾಜ್ಯಪಾಲ
 - ಮುಖ್ಯ ಮಂತ್ರಿ
 - ಶಾಸನಸಭೆ (ಸ್ಥಾನಗಳು)
ಡಿಸೆಂಬರ್ ೦೧, ೧೯೬೩
 - ಶ್ಯಾಮಲ್ ದತ್ತ
 - ನೀಫಿಉ ರಿಯೊ
 - Unicameral (60)
ಅಧಿಕೃತ ಭಾಷೆ(ಗಳು) ಆಂಗ್ಲ
Abbreviation (ISO) IN-NL
ಅಂತರ್ಜಾಲ ತಾಣ: nagaland.nic.in

ನಾಗಾಲ್ಯಾಂಡ್ ರಾಜ್ಯದ ಮುದ್ರೆ

ನಾಗಾಲ್ಯಾಂಡ್ ಈಶಾನ್ಯ ಭಾರತದ ರಾಜ್ಯಗಳಲ್ಲೊಂದು. ಇದು ಪಶ್ಚಿಮದಲ್ಲಿ ಅಸ್ಸಾಂ, ಉತ್ತರದಲ್ಲಿ ಅರುಣಾಚಲ ಪ್ರದೇಶ, ಪೂರ್ವದಲ್ಲಿ ಮ್ಯಾನ್ಮಾರ್ ಮತ್ತು ದಕ್ಷಿಣದಲ್ಲಿ ಮಣಿಪುರದ ಜೊತೆಗೆ ತನ್ನ ಗಡಿಯನ್ನು ಹಂಚಿಕೊಂಡಿದೆ. ನಾಗಾಲ್ಯಾಂಡಿನ ರಾಜಧಾನಿ ಕೊಹಿಮ.

ಭೌಗೋಳಿಕ ಸ್ಥಾನ

[ಬದಲಾಯಿಸಿ]

ನಾಗಾಲ್ಯಾಂಡ್ ಭಾರತ ಗಣರಾಜ್ಯದ ಈಶಾನ್ಯ ಭಾಗದಲ್ಲಿರುವ ಒಂದು ಪರ್ವತಮಯ ರಾಜ್ಯ. ಅಸ್ಸಾಂ ರಾಜ್ಯಕ್ಕೂ ಮೈನ್‍ಮಾರ್ ನಡುವೆ ಇದೆ. ಈ ರಾಜ್ಯದ ಪಶ್ಚಿಮ ಮತ್ತು ವಾಯವ್ಯಕ್ಕೆ ಅಸ್ಸಾಮ್ ರಾಜ್ಯ, ಪೂರ್ವಕ್ಕೆ ಮೈನ್‍ಮಾರ್ ಮತ್ತು ದಕ್ಷಿಣಕ್ಕೆ ಮಣಿಪುರ ಇದೆ; ಪೂರ್ವದಲ್ಲಿ ಮೈನ್‍ಮಾರ್ ಗಡಿಯಿಂದ ನಾಗಾಲ್ಯಾಂಡಿನ ಉತ್ತರದ ಮೊನಚಾದ ತುದಿಯವರೆಗೆ ಅರುಣಾಚಲ ಪ್ರದೇಶ ಹಬ್ಬಿದೆ. ನಾಗಾಲ್ಯಾಂಡಿನ ವಿಸ್ತೀರ್ಣ 16,579 ಚ.ಕಿಮೀ. ಜನಸಂಖ್ಯೆ ೧೯,೮೦,೬೦೨ (೨೦೧೧)[] , ರಾಜಧಾನಿ ಕೋಹಿಮ.

ಭೌತಲಕ್ಷಣ

[ಬದಲಾಯಿಸಿ]

ರಾಜ್ಯದ ಬಹುಭಾಗ ಹಿಮಾಲಯ ಪರ್ವತ ವ್ಯವಸ್ಥೆಗೆ ಒಳಪಟ್ಟಿದೆ. ಉತ್ತರದಲ್ಲಿ ಬ್ರಹ್ಮಪುತ್ರಾ ಬಯಲಿನಿಂದ ಥಟ್ಟನೆ ಸುಮಾರು 600 ಮೀ.ಗೆ ಏರುವ ನಾಗಾ ಬೆಟ್ಟಗಳು ಪಶ್ಚಿಮದಲ್ಲಿ 1,800 ಮೀ.ಗೂ ಹೆಚ್ಚು ಎತ್ತರವಾಗಿವೆ. ಅಲ್ಲಲ್ಲಿ ಕೆಲವು ಶಿಖರಗಳು 3,050 ಮೀ.ಗಿಂತ ಎತ್ತರವಾಗಿವೆ. ಇವುಗಳ ಪೂರ್ವಕ್ಕೆ ಇದಕ್ಕೆ ಸೇರಿಕೊಂಡಂತೆ ಇರುವ ಪಾಟ್ಕೈ ಶ್ರೇಣಿ ಈ ರಾಜ್ಯವನ್ನು ಮೈನ್‍ಮಾರ್‍ನಿಂದ ಪ್ರತ್ಯೇಕಿಸುತ್ತದೆ. ಮೈನ್‍ಮಾರ್ ಗಡಿಯಲ್ಲಿರುವ ಸಾರಮತಿ ಶಿಖರದ ಎತ್ತರ 3,826 ಮೀ. ರಾಜ್ಯದ ವಾಯವ್ಯ ಭಾಗದಲ್ಲಿ ಬ್ರಹ್ಮಪುತ್ರಾ ನದಿಯ ಉಪನದಿಗಳು ಹರಿಯುತ್ತವೆ. ಆಗ್ನೇಯ ಭಾಗ 1,200 ಮೀ.ಗಿಂತ ಎತ್ತರವಾಗಿದೆ. ಮೈನ್‍ಮಾರ್‍ನಲ್ಲಿ ಹರಿಯುವ ಚಿಂದ್ವಿನ್ ನದಿಯ ಉಪನದಿಗಳ ಜಲಾನಯನ ಭೂಮಿ ಇದು. ನೈಋತ್ಯ ಭಾಗದಲ್ಲಿ ಬರಾಕ್ ನದಿ ಉಗಮಿಸುತ್ತದೆ. ಬೆಟ್ಟಗಳು ಅಲ್ಲಲ್ಲಿ ಕತ್ತರಿಸಿದಂತಿವೆ.

ವಾಯುಗುಣ

[ಬದಲಾಯಿಸಿ]

ನಾಗಾಲ್ಯಾಂಡಿನದು ಮಾನ್ಸೂನ್ ವಾಯುಗುಣ. ಸರಾಸರಿ ವಾರ್ಷಿಕ ಮಳೆ ಆಗ್ನೇಯದಲ್ಲಿ 1,813 ಮಿ.ಮೀ. ಈಶಾನ್ಯದಲ್ಲಿ 2590 ಮಿ.ಮೀ.ಗಿಂತ ಅಧಿಕ. ಉಷ್ಣತೆ ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ. ನೆಲೆದ ಎತ್ತರಕ್ಕೆ ಅನುಗುಣವಾಗಿ ಬೇಸಗೆಯಲ್ಲಿ 21(ಛಿ ನಿಂದ 40(ಛಿ ವರೆಗೆ ವ್ಯತ್ಯಾಸವಾಗುತ್ತದೆ. ಚಳಿಗಾಲದಲ್ಲಿ 4(ಛಿ ಕನಿಷ್ಠ ಮಿತಿ. ವಾತಾವರಣದಲ್ಲಿಯ ತೇವದಿಂದಾಗಿ ಬೇಸಗೆಯಲ್ಲಿ ತಗ್ಗಿನ ಪ್ರದೇಶಗಳಲ್ಲಿ ಧಗೆ ಹೆಚ್ಚು.

ಸಸ್ಯಪ್ರಾಣಿ ಜೀವನ

[ಬದಲಾಯಿಸಿ]
Great hornbill
Blyth's tragopan or the grey-bellied tragopan
About a million Amur falcons roost in Nagaland.[] That is about 50 falcons per square kilometre.

ಬೆಟ್ಟಗಳು ದಟ್ಟವಾದ ಕಾಡಿನಿಂದ ಆವೃತವಾಗಿವೆ. ಇಲ್ಲಿಯ ಕಾಡುಗಳನ್ನು ನಿತ್ಯಹಸುರಿನ ಮರಗಳ ಕಾಡು. ಅಗಲ ಎಲೆಗಳ ಮರಗಳ ಕಾಡು. ಪೀತದಾರು ಮರಗಳ ಕಾಡು ಎಂದು ವಿಂಗಡಿಸಬಹುದು. ಸರದಿ ಬೇಸಾಯಕ್ಕಾಗಿ (ಝೂಮ್) ಕಾಡುಗಳನ್ನು ಕಡಿದ ಎಡೆಗಳಲ್ಲಿ ಎತ್ತರವಾದ ಹುಲ್ಲು, ಬಿದಿರು, ಕುರುಚಲು ಬೆಳೆದಿವೆ. 1,220 ಮೀ.ಗಳಿಗಿಂತ ಕೆಳಗಿನ ಪ್ರದೇಶದಲ್ಲಿ ನಿತ್ಯಹಸಿರು ಕಾಡುಗಳಿವೆ. ಬೆಲೆಬಾಳುವ ಸಾಗುವಾನಿ ಮರಗಳೂ, ಬಿದಿರೂ ಇವೆ. ಪೂರ್ವ ಮತ್ತು ಆಗ್ನೇಯ ಭಾಗದ ಎತ್ತರದ ಪ್ರದೇಶಗಳಲ್ಲಿ ಓಕ್, ಪೈನ್ ಮತ್ತು ಇತರ ಶಂಕುಪರ್ಣಿ ಮರಗಳಿವೆ.

ತಗ್ಗಿನ ಬೆಟ್ಟಗಳಲ್ಲಿರುವ ಪ್ರಾಣಿಗಳು ಖಡ್ಗಮೃಗ, ಆನೆ, ಹುಲಿ, ಚಿರತೆ, ಕರಡಿ, ಜಿಂಕೆ, ಕಾಡೆಮ್ಮೆ, ಕಾಡುಹಂದಿ ಮತ್ತು ಕಾಡೆತ್ತು, ಹಲವು ಬಗೆಯ ಕೋತಿಗಳು, ಮುಳ್ಳುಹಂದಿ, ಪ್ಯಾಂಗೊಲಿನ್, ಆಡು, ಕಾಡುನಾಯಿ, ನರಿ, ಪುನುಗಿನ ಬೆಕ್ಕು ಮತ್ತು ಮುಂಗುಸಿ. ಇಲ್ಲಿ ಹಲವು ಬಗೆಯ ಹಕ್ಕಿಗಳಿವೆ.

ರಾಜ್ಯದ ಜನಸಾಂದ್ರತೆ ಚ.ಕೀ.ಮೀ.ಗೆ 31 ಇದ್ದು ಪ್ರತಿ 1000 ಪುರುಷರಿಗೆ 871 ಸ್ತ್ರೀಯರಿದ್ದರು. ಈ ರಾಜ್ಯದಲ್ಲಿ ಹಿಂದುಗಳು. ಮುಸ್ಲಿಮರು, ಕ್ರೈಸ್ತರು, ಸಿಖ್ಖರು, ಜೈನರು ಮತ್ತು ಬೌದ್ಧರು ಇದ್ದಾರೆ. ನಾಗಾಗಳು ಇಂಡೋ-ಮುಂಗೊಲಾಯಿಡ್ ಬುಡಕಟ್ಟಿಗೆ ಸೇರಿದವರು. ವಿವಿಧ ಭಾಗಗಳಲ್ಲಿ ವಿವಿಧ ರೀತಿ-ನೀತಿ ಅನುಸರಿಸುವ ಅಂಗಮಿ, ಸೇಮಾ, ರೆಂಗ್ಮಾ, ಜಾಕೇಸಾಂಗ್, ಸಂಗ್‍ತಮ್, ಚಾಂಗ್, ಪೋಮ್, ಇಮ್, ಚುಂಗರ್, ಬೇನ್‍ಮುಂಗರ್, ಜೇóಲಿಯಾಂಗ್, ಕುಕೀ ಮುಂತಾದ ಹದಿನೇಳು ವಿಭಿನ್ನ ಪಂಗಡಗಳಿವೆ. ಅವರೆಲ್ಲ ಇಂಡೋ-ಟಿಬೆಟನ್ ಮೂಲದ ಮೂವತ್ತು ಭಾಷೆ-ಉಪಭಾಷೆಗಳನ್ನು ಬಳಸುತ್ತಾರೆ. ಈ ಜನ ಮಾತನಾಡುವಾಗ ಹೇರಳವಾಗಿ ಸಂಯುಕ್ತ ಪದಗಳನ್ನು ಬಳಸುತ್ತಾರಾದರೂ ಮಾತಾಡುವ ರೀತಿಯೊಳಗೊಂದು ಗೇಯತೆ ಇದೆ. ಯುದ್ಧ ಜನಾಂಗವೆಂದು ಹೆಸರಾದ ನಾಗಾಗಳು ಇಂದಿಗೂ ಯುದ್ಧ ಮತ್ತು ಬೇಟೆಯ ಉತ್ಸಾಹ ಮತ್ತು ಕ್ಷಾತ್ರಪರಂಪರೆಗಳನ್ನು ಕಾಯ್ದುಕೊಂಡು ಬಂದಿರುವುದು ಅವರ ಯುದ್ಧ ನೃತ್ಯಗಳಲ್ಲೂ ಆಟ ಪಂದ್ಯಗಳಲ್ಲೂ ಉತ್ಸವ ಮೇಳಗಳಲ್ಲೂ ಕಂಡುಬರುತ್ತದೆ. 19ನೆಯ ಶತಮಾನದವರೆಗೂ ಈ ಜನಗಳಲ್ಲಿ ಗುಲಾಮಗಿರಿ ಪದ್ಧತಿ, ದೇವತೆಗಳಿಗೆ ಮನುಷ್ಯನ ಬಲಿ ಕೊಡುವ ರೂಢಿ, ಮನುಷ್ಯರ ತಲೆ ಬೇಟೆಯಾಡುವ ಹವ್ಯಾಸ ಇವೆಲ್ಲ ಬಹು ಪ್ರಿಯವಾಗಿದ್ದುವು. ನೆರೆಹಳ್ಳಿಗಳಲ್ಲಿರುವ ವೈರಿಗಳ ತಲೆ ಬೇಟೆಯಾಡಿ ಬರುವವರು ನಿಜವಾದ ಬಂಟಾಳುಗಳೆಂಬ ಭಾವನೆ ಈ ಜನರಲ್ಲಿತ್ತು. ವೈರಿಗಳ ತಲೆಗಳನ್ನು ತುಂಡರಿಸಿ ತಂದವನು ಅವಿವಾಹಿತ ಯುವಕನಾಗಿದ್ದರಂತೂ ಅವನಿಗೆ ಅಪಾರ ಸನ್ಮಾನ. ಅವನ ಹಳ್ಳಿಯ ಅತ್ಯಂತ ಸುಂದರ ಕನ್ಯೆಯ ಕೈಹಿಡಿಯುವ ಬಹುಮಾನ ಇವು ದೊರಕುತ್ತಿದ್ದುವು. ಇಲ್ಲಿಯ ಕೆಲವು ಪಂಗಡಗಳಲ್ಲಿ ಬಹುಪತ್ನೀತ್ವವೂ ಮತ್ತೆ ಕೆಲವರಲ್ಲಿ ಏಕಪತ್ನೀತ್ವವೂ ಜಾರಿಯಲ್ಲಿವೆ. ಮನಸ್ಸಿಗೆ ಬಂದಾಗ ವಿವಾಹವಿಚ್ಛೇದನ ಪಡೆದು ಬೇರೆ ಮದುವೆಯಾಗುವ ರೂಢಿಯೂ ಬಳಕೆಯಲ್ಲಿದೆ. ಈ ಜನರಿಗೆ ದೆವ್ವ ಮತ್ತು ಭೂತಗಳಲ್ಲಿ ನಂಬಿಕೆಯುಂಟು. ಪುರುಷರು ನಡುವಿಗೊಂದು ತುಂಡು ಬಟ್ಟೆಯನ್ನೂ ಸ್ತ್ರೀಯರು ಸೋಗಾಮಿನಿ, ತಾಟ್-ನೀ ಟುಕೋ-ಲೀ-ಮಿನಿ, ಜೋಯೀ-ಲೀ-ಮಿನಿ, ಲಹು ಪಿಟಿಕಾ ಮುಂತಾದ ಹೆಸರುಗಳುಳ್ಳ ಮಿಶ್ರಬಣ್ಣದ ವಸ್ತ್ರಗಳನ್ನೂ ತೊಟ್ಟು ಕೈ ಕೊರಳು ಕಿವಿಗಳಲ್ಲಿ ಕವಡೆ, ಹರಳು, ಬಿದಿರುಗಳ ಆಭರಣಗಳನ್ನು ಧರಿಸುತ್ತಾರೆ. ಇವರ ಮುಖ್ಯ ಆಹಾರ ಅನ್ನ. ಅತಿಥಿಗಳೂ ವಯೋವೃದ್ಧರೂ ಊಟ ಮಾಡಿಯಾದ ಬಳಿಕ ಇತರರ ಊಟ ನಡೆಯುವುದು ಇಲ್ಲಿಯ ರೂಢಿ. ಬೇಟೆ ಈ ಜನರಿಗೆ ಬಲು ಪ್ರಿಯವಾದ ಹವ್ಯಾಸ.

ಆಡಳಿತ

[ಬದಲಾಯಿಸಿ]

ನಾಗಾಲ್ಯಾಂಡ್ ರಾಜ್ಯವನ್ನು ಕೋಹಿಮ, ಮೊಕೋಕ್‍ಚಂಗ್, ತುಯೆನ್‍ಸಾಂಗ್ ಮಾನ್, ಜûುನ್ಹಿಬೊಟೊ, ವೊಕಾ, ಧೀಮಾಪುರ್ ಮತ್ತು ಫೆಕ್ ಎಂಬ ಎಂಟು ಜಿಲ್ಲೆಗಳಾಗಿ ವಿಂಗಡಿಸಲಾಗಿದೆ. ಕೋಹಿಮ, ಮೊಕೋಕ್‍ಚಂಗ್ ಮತ್ತು ತುಯೆನ್‍ಸಾಂಗ್ ಇವು ಆಯಾ ಜಿಲ್ಲೆಗಳ ಮುಖ್ಯ ಪಟ್ಟಣಗಳು. ರಾಜ್ಯದ ರಾಜಧಾನಿ ಕೋಹಿಮ. ರಾಜ್ಯದಲ್ಲಿ ಒಟ್ಟು 960 ಗ್ರಾಮಗಳಿವೆ. 169 ಗ್ರಾಮಗಳಲ್ಲಿ ತಲಾ 1,000ಕ್ಕಿಂತ ಕಡಿಮೆ ಜನವಸತಿಯಿತ್ತು.

ಈ ರಾಜ್ಯದ 90% ಜನ ಬೇಸಾಯಗಾರರು. ಗುಡ್ಡಬೆಟ್ಟಗಳಲ್ಲಿರುವ ಗಿಡಗಂಟೆಗಳಿಗೆ ಬೆಂಕಿ ಹಚ್ಚಿ ಸುಟ್ಟು ತೆರವಾದ ಜಾಗದಲ್ಲಿ ವ್ಯವಸಾಯ ಮಾಡುವ ಪದ್ಧತಿ ಇದೆ. ಕೋಗಿಲೆ ಕೂಗಿದ ಅನಂತರ ಬತ್ತದ ಬಿತ್ತನೆ ಮಾಡಿದರೆ ಹುಲುಸಾದ ಬೆಳೆ ಬರುತ್ತದೆಂದು ಜನರ ನಂಬಿಕೆ. ಈ ರಾಜ್ಯದಲ್ಲಿ ಬತ್ತವೇ ಪ್ರಮುಖ ಬೆಳೆ. ಇತರ ಧಾನ್ಯಗಳೂ ಮೆಣಸಿನಕಾಯಿ ಬೇಳೆಕಾಳುಗಳೂ ಹತ್ತಿ, ಕಬ್ಬು, ಬಟಾಟೆಗಳೂ ಬೆಳೆಯುತ್ತವೆ. ಬೇಸಾಯ ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ಆರಂಭವಾಗುತ್ತದೆ. ಮೊದಲು ಹೆಂಗಸರು ಹೊಲಗಳಲ್ಲಿಯ ಹಳೆಯ ಕಸ ಕೊಳೆ ತೆಗೆಯುತ್ತಾರೆ. ಗಂಡಸರು ಅಗೆಯುವ ಕೆಲಸ ಮಾಡುತ್ತಾರೆ. ಎರಡು ತಿಂಗಳಲ್ಲಿ ಗಿಡಮರಗಳನ್ನು ಸುಡುವ ಕೆಲಸ ನಡೆಯುತ್ತದೆ. ಫೆಬ್ರುವರಿ-ಮಾರ್ಚ್ ತಿಂಗಳಲ್ಲಿ ಸಣ್ಣ ಕಾಳುಗಳ ಬಿತ್ತನೆಯೂ ಏಪ್ರಿಲ್ ತಿಂಗಳಲ್ಲಿ ಬತ್ತದ ಬಿತ್ತನೆಯೂ ನಡೆಯುತ್ತದೆ. ಕೊಯಿಲಿಗೆ ಬಂದ ಬೆಳೆಗಳನ್ನು ಕೆಲವರು ಕೈಯಿಂದಲೇ ಕೀಳುತ್ತಾರೆ. ಕುಡುಗೋಲು ಬಳಸುವುದೂ ಉಂಟು. ಸುಗ್ಗಿಯಾದ ಬಳಿಕ ಧಾನ್ಯಗಳನ್ನು ಬಿದಿರಿನ ಕಣಜಗಳಲ್ಲಿ ಸಂಗ್ರಹಿಸಿಡುತ್ತಾರೆ. ರಾಜ್ಯದ ಕೆರೆಕೊಳ್ಳಗಳಲ್ಲಿ ಮೀನು ಹಿಡಿಯುತ್ತಾರೆ. ಅರಣ್ಯಗಳಿಂದ ಬಿದಿರು, ಓಕ್, ಮನೆ ಕಟ್ಟುವ ಮತ್ತು ಚಪ್ಪರಗಳಿಗೆ ಬಳಸುವ ಮರ ಉರುವಲು, ಗೋಂದು ಮುಂತಾದವು ದೊರೆಯುತ್ತವೆ.

ಕೈಗಾರಿಕೆಗಳು

[ಬದಲಾಯಿಸಿ]

ರಾಜ್ಯದಲ್ಲಿ ದೊಡ್ಡ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಕಡಿಮೆ. ಅನೇಕ ಗ್ರಾಮಗಳಲ್ಲಿ ನೇಯ್ಗೆ ಕೆಲಸ ನಡೆಯುತ್ತದೆ. ಬಟ್ಟೆ, ರೇಷ್ಮೆ, ಬಿದಿರಿನ ಬುಟ್ಟಿಹೆಣಿಗೆ, ಕೃಷಿಗಾಗಿ ಮತ್ತು ಬೇಟೆಗಾಗಿ ಮರದ ಉಪಕರಣಗಳ ತಯಾರಿಕೆ- ಇವು ಕೆಲವು ಸಣ್ಣ ಕೈಗಾರಿಕೆಗಳು. 3 ನೇಯ್ಗೆ ಕೇಂದ್ರಗಳನ್ನೂ 3 ಗುಡಿಕೈಗಾರಿಕೆಗಳ ಕೇಂದ್ರಗಳನ್ನೂ 3 ರೇಷ್ಮೆ ಕ್ಷೇತ್ರಗಳನ್ನೂ ಒಂದು ಕುಶಲ ವಸ್ತು ತಯಾರಿಕೆಯ ತರಬೇತಿ ಮತ್ತು ಉತ್ಪಾದನ ಕೇಂದ್ರವನ್ನೂ ಸಣ್ಣ ಕೈಗಾರಿಕೆಗಳ ಸೇವಾಕೇಂದ್ರವೊಂದನ್ನೂ ಸರ್ಕಾರ ನಡೆಸುತ್ತಿದೆ. ದಿಮಾಪುರ (3,08,382) ಈ ಕೈಗಾರಿಕೆಗಳ ವ್ಯಾಪಾರ ಕೇಂದ್ರ. ರಾಜಧಾನಿ ಕೋಹಿಮ (3,14,366). ಮೊಕೋಕ್‍ಚಂಗ್ (2,27,320) ಇತರ ಪಟ್ಟಣಗಳು. ಸಾರಿಗೆ-ಸಂಪರ್ಕ: ಪರ್ವತ ಪ್ರಧಾನವಾದ ಈ ರಾಜ್ಯದಲ್ಲಿ ಸಾರಿಗೆ-ಸಂಪರ್ಕ ಕಷ್ಟಕರ. ರಾಜ್ಯದ 9,860 ಕಿ.ಮೀ. ಉದ್ದದ ರಸ್ತೆಯಲ್ಲಿ 996 ಗ್ರಾಮಗಳಿಗೆ ಸಂಪರ್ಕವೇರ್ಪಡಿಸಿದೆ. ರಾಜ್ಯದಲ್ಲಿ 8.04 ಕಿ.ಮೀ. ರೈಲು ಮಾರ್ಗವಿದ್ದು ಈಗ ಮತ್ತಷ್ಟು ದೂರ ವಿಸ್ತರಿಸಿದೆ. ದಿಮಾಪುರ ಮುಖ್ಯ ರೈಲ್ವೆ ನಿಲ್ದಾಣ. ಇದು ನಾಗಾಲ್ಯಾಂಡಿನ ಪ್ರವೇಶದ್ವಾರವೆಂದು ಪ್ರಸಿದ್ಧವಾಗಿದೆ. ಆರೋಗ್ಯ: ಈ ಪ್ರದೇಶದ ಜನ ಸಾಮಾನ್ಯವಾಗಿ ದೃಢಕಾಯರು. ಇವರು ಯುದ್ಧ ಜನಾಂಗವೆಂದೇ ಹೆಸರಾದವರು. ಇಲ್ಲಿಯ ಸ್ತ್ರೀಪುರುಷರಿಗೆ ತಮ್ಮ ಮೈಕಟ್ಟು ಮತ್ತು ಸ್ನಾಯುಬಲಗಳ ಬಗ್ಗೆ ಬಲು ಅಭಿಮಾನ. ರಾಜ್ಯದಲ್ಲಿ ಸಾರ್ವಜನಿಕ ಆಸ್ಪತ್ರೆಗಳೂ ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಉಪ ಕೇಂದ್ರಗಳೂ ಕ್ಷಯರೋಗ ಆಸ್ಪತ್ರೆಗಳೂ ಇವೆ.

ಶಿಕ್ಷಣ

[ಬದಲಾಯಿಸಿ]

ಈ ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳೂ ಮಾಧ್ಯಮಿಕ ಶಾಲೆಗಳೂ ಪ್ರೌಢಶಾಲೆಗಳೂ ಕಾಲೇಜುಗಳೂ ತರಬೇತಿ ಕೇಂದ್ರಗಳೂ ಒಂದು ತಾಂತ್ರಿಕ ವಿದ್ಯಾಲಯವೂ ಇದೆ.

ಇತಿಹಾಸ

[ಬದಲಾಯಿಸಿ]
A sketch of Angami Naga tribesman from 1875.
A British India 1940 map showing Nagaland and Kohima City as part of Assam.

ಹದಿಮೂರನೆಯ ಶತಮಾನದಲ್ಲಿ ಈಗಿನ ಮೈನ್‍ಮಾರ್ ಪ್ರದೇಶದ ಸರದಾರನೊಬ್ಬ ಪಾಟ್ಕೈ ಶ್ರೇಣಿಯನ್ನು ದಾಟಿ ಬಂದು ನಾಗಾ ಜನರ ಮೇಲೆ ದಾಳಿ ಮಾಡಿ ಸೋಲಿಸಿ, ಅವರ ಮೇಲೆ ಪ್ರಭುತ್ವ ಸ್ಥಾಪಿಸಿಕೊಂಡಿದ್ದನೆಂದು ದಾಖಲೆಯಿದೆ. ತದನಂತರ ಅಸ್ಸಾಮಿನ ಅಹೋಮ್ ದೊರೆಗಳು ಈ ಪ್ರದೇಶವನ್ನಾಳಿದರು. 19 ನೆಯ ಶತಮಾನದಲ್ಲಿ ಭಾರತದ ಇತರ ಪ್ರದೇಶಗಳಂತೆ ಅಸ್ಸಾಂ ಕೂಡ ಬ್ರಿಟಿಷರ ಆಡಳಿತಕ್ಕೊಳಪಟ್ಟಿತು. ನಾಗಾ ಪರ್ವತಪ್ರದೇಶವೂ ಅವರ ಅಧೀನವಾಯಿತು. 1866ರಲ್ಲಿ ಬ್ರಿಟಿಷರು ಅಸ್ಸಾಮನ್ನು ಗಡಿಜಿಲ್ಲೆ ಎಂದು ಪರಿಗಣಿಸಿದರು. 1880ರಿಂದ ನಾಗಾಲ್ಯಾಂಡನ್ನು ಬ್ರಿಟಿಷ್ ಆಡಳಿತ ಪ್ರದೇಶವೆಂದು ಕಾದಿಡಲಾಯಿತು. ಆಡಳಿತ ಯಾರದಿದ್ದರೂ ನಾಗಾ ಜನರು ತಮ್ಮ ಸ್ವಯಂ ಪಂಗಡ ಪದ್ಧತಿಯನ್ನು ಬಿಟ್ಟುಕೊಡಲಿಲ್ಲ. 1928ರಲ್ಲಿ ಇಂಗ್ಲೆಂಡಿನಿಂದ ಸೈಮನ್ ಆಯೋಗ ಭಾರತಕ್ಕೆ ಬಂದಾಗ ನಾಗಾ ಜನರ ಪ್ರಮುಖ ಪ್ರತಿನಿಧಿಗಳೆಲ್ಲ ಸೇರಿ ಒಂದು ಬಿನ್ನವತ್ತಳೆ ಸಲ್ಲಿಸಿ ನಾಗಾ ಪ್ರದೇಶದ ಅಭಿವೃದ್ಧಿ ಪ್ರತ್ಯೇಕವಾಗಿಯೇ ನಡೆಯಬೇಕೆಂದೂ ಭಾರತದ ಒಳನಾಡಿನೊಂದಿಗೆ ಈ ಪ್ರದೇಶವನ್ನು ಸೇರಿಸಕೂಡದೆಂದು ಕೇಳಿಕೊಂಡರು. ಈ ಪ್ರದೇಶದಲ್ಲಿ ಕೆಲಸಮಾಡುತ್ತಿದ್ದ ಕ್ರೈಸ್ತ ಪಾದ್ರಿಗಳು ಸದಾಕಾಲವೂ ಈ ಪ್ರತ್ಯೇಕತಾಭಾವನೆಯನ್ನು ನೀರೆರೆದು ಬೆಳೆಸಿದರು. ಭಾರತ 1947ರಲ್ಲಿ ಸ್ವತಂತ್ರವಾದಾಗ ನಾಗಾಗಳಲ್ಲಿ ಕೆಲವರು ತಮ್ಮದು ಸ್ವತಂತ್ರ ರಾಷ್ಟ್ರವೆಂದು ಪ್ರಚಾರ ಮಾಡುತ್ತ, ಭಾರತದಿಂದ ಪ್ರತ್ಯೇಕಗೊಳ್ಳಲು ಸಶಸ್ತ್ರ ಬಂಡಾಯ ಹೂಡಿದರು. ಆದರೆ ನಾಗಾಗಳಲ್ಲೇ ಇದ್ದ ನಾನಾ ಪಂಗಡಗಳಲ್ಲಿ ಒಗ್ಗಟ್ಟು ಇರಲಿಲ್ಲ. 1957ರಲ್ಲಿ ಭಾರತ ಸರ್ಕಾರ ನಾಗಾ ಬೆಟ್ಟಗಳ ಜಿಲ್ಲೆಯನ್ನೂ ತುಯೆನ್‍ಸಾಂಗನ್ನೂ ಕೇಂದ್ರ ಆಡಳಿತಕ್ಕೆ ಒಳಪಡಿಸಿತು. ಆದರೆ ನಾಗಾಗಳಲ್ಲಿ ಕೆಲವರು ಇದನ್ನು ಒಪ್ಪಲಿಲ್ಲ. ಅಶಾಂತಿ ಮುಂದುವರಿಯಿತು. ಇವರು ಭಾರತ ಸರ್ಕಾರದೊಂದಿಗೆ ಸಹಕರಿಸಲಿಲ್ಲ. ಸಂಧಾನವೂ ಮುಂದುವರಿಯಿತು. ಪ್ರತ್ಯೇಕತೆಯ ಹೆಸರಿನಲ್ಲಿ ನಡೆದ ಹಿಂಸಾಕೃತ್ಯಗಳಿಗೆ ನಾಗಾ ಜನರಲ್ಲಿ ಅನೇಕರು ಹೇಸಿ ದೂರ ಸರಿದರು. ವಿಚಾರಶೀಲ ನಾಗಾ ಜನ 1955ರಲ್ಲಿ ತಮ್ಮದೇ ಅದೊಂದು ಹೊಸ ಸಂಘಟನೆ ಮಾಡಿಕೊಂಡರು. ಆದರೆ ಮರುವರ್ಷ ಅವರ ಮುಖಂಡನ ಕೊಲೆಯಾಯಿತು. 1957ರಲ್ಲಿ ನಾಗಾ ಪಂಗಡಗಳ ಮಹಾಪರಿಷತ್ತು ಸೇರಿತು. ಭಾರತ ಸರ್ಕಾರದ ಪ್ರೇರಣೆಯಿಂದ ವಿಶಾಲ ತಳಹದಿಯ ಮೇಲೆ ನಡೆದ ಈ ಪರಿಷತ್ತಿನಲ್ಲಿ ಎಲ್ಲ ನಾಗಾ ಪಂಗಡಗಳ 1,765 ಪ್ರತಿನಿಧಿಗಳೂ ಸುಮಾರು 2,000 ವೀಕ್ಷಕರೂ ಸೇರಿದ್ದರು. ನಾಗಾ ಜನರ ಭವಿಷ್ಯವನ್ನು ಶಾಂತಿಯುತ ಮಾತುಕತೆಗಳ ಮೂಲಕ ನಿರ್ಣಯಿಸಬೇಕು; ನಾಗಾ ಪಂಗಡಗಳು ವಾಸಿಸುವ ವಿವಿಧ ಭಾಗಗಳನ್ನು ಸೇರಿಸಿ ಭಾರತ ಒಕ್ಕೂಟದಲ್ಲಿ ಒಂದು ರಾಜ್ಯದ ನಿರ್ಮಾಣವಾಗಬೇಕು ಎಂದು ತೀರ್ಮಾನವಾಯಿತು. 1963ರಲ್ಲಿ ಭಾರತದ ಸಂಸತ್ತು ನಾಗಾಲ್ಯಾಂಡು ಭಾರತದ ಹದಿನಾರನೆಯ ರಾಜ್ಯವೆಂದು ಮನ್ನಣೆ ನೀಡಿತು. ಜನಪ್ರತಿನಿಧಿಗಳ ಸರ್ಕಾರ ಸ್ಥಾಪಿತವಾಯಿತು. ಆದರೆ ತಲೆಮರೆಸಿಕೊಂಡ ಕೆಲವು ಜನರು ಶಾಂತಿಪ್ರಿಯ ಜನರಿಗೆ ಕಿರುಕುಳ ನೀಡುವ ಕೃತ್ಯಗಳನ್ನು ಮುಂದುವರಿಸಿಯೇ ಇದ್ದರು. ಆದರೆ 1975ರ ಕೊನೆಕೊನೆಯಲ್ಲಿ ಭಾರತ ಸರ್ಕಾರ ಒಂದು ಒಪ್ಪಂದದ ಮೂಲಕ ನಾಗಾ ಜನರ ಸರ್ವಾಂಗೀಣ ಅಭಿವೃದ್ಧಿಯ ದಾರಿಯನ್ನು ಸುಗಮಗೊಳಿಸಿತು. ಭಾರತದ ಸಂವಿಧಾನಕ್ಕೆ ಅಧೀನವಾಗಿರುವ ಇತರ ರಾಜ್ಯಗಳಂತೆಯೇ ನಾಗಾಲ್ಯಾಂಡ್ ಕೂಡ ತನ್ನ ಜನತೆಯ ಜೀವನ ಸಂಸ್ಕøತಿಗಳನ್ನೂ ನಡೆನುಡಿಗಳನ್ನೂ ಮತಧರ್ಮಗಳನ್ನೂ ಅಭಿವೃದ್ಧಿಪಡಿಸಬಹುದೆಂಬುದು ಭಾರತ ಸರ್ಕಾರದ ನಿಲುವು. ಅಂತೆಯೇ ನಾಗಾ ಜನಗಳಲ್ಲಿ ಮೊದಲಿನಿಂದಲೂ ಬೇರೂರಿದ್ದ ಪ್ರತ್ಯೇಕತಾಭಾವನೆಯನ್ನು ತೊಡೆದುಹಾಕಿ ಅವರು ಭಾರತದಲ್ಲಿ ಒಂದಾಗಿ ಬೆಳೆಯುವಂತೆ ಮಾಡಲು ಕ್ರಮಗಳನ್ನು ಸರ್ಕಾರ ಮುಂದುವರಿಸಿದೆ.

ರಾಜ್ಯಪಾಲರು

[ಬದಲಾಯಿಸಿ]

ಕೊಹಿಮಾ (ಪಿಟಿಐ): ಮಂಗಳೂರು ಮೂಲದ ಮುಂಬಯಿ ಕನ್ನಡಿಗ ಪದ್ಮನಾಭ ಬಾಲಕೃಷ್ಣ ಆಚಾರ್ಯ ಅವರು ದಿ.19/7/2014 ಶನಿವಾರ ನಾಗಲ್ಯಾಂಡ್‌ನ 19ನೇ ರಾಜ್ಯಪಾಲ­ರಾಗಿ ಅಧಿಕಾರ ಸ್ವೀಕರಿಸಿದರು.

ಹೆಚ್ಚುವರಿಯಾಗಿ ತ್ರಿಪುರಾ ರಾಜ್ಯದ ರಾಜ್ಯಪಾಲರ ಹೊಣೆಯನ್ನು ಆಚಾರ್ಯ ಅವರಿಗೆ ವಹಿಸಲಾಗಿದ್ದು, ರಾಜಭವನದಲ್ಲಿ ನಡೆದ ಕಾರ್ಯ­ಕ್ರಮದಲ್ಲಿ ಗುವಾಹಟಿ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಕೆ.ಸೈಕೈ ಅವರು ಪ್ರಮಾಣವಚನ ಬೋಧಿಸಿದರು. (ಹಿಂದಿನ ವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಹೊಸ ವಿಧಾನ ಸಭೆಯ ಅಸ್ಥಿತ್ವಕ್ಕೆ ಬಂದಿತು ಹೊಸ ಮಂತ್ರಿ ಮಂಡಳ- ವಿವರ -ಕೆಳಗೆ--) ನಾಗಲ್ಯಾಂಡ್‌ ಮುಖ್ಯಮಂತ್ರಿ ಟಿ.ಆರ್‌. ಜಿಲ್ಲಾಂಗ್‌ ಸೇರಿದಂತೆ ಸಂಪುಟ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಚಾರ್ಯ ಅವರು 1948–50ರಲ್ಲಿ ಮಂಗಳೂರಿನ ಎಂಜಿಎಂ ಪದವಿ ಕಾಲೇಜಿನ ಮೊದಲ ಬ್ಯಾಚ್‌ ವಿದ್ಯಾರ್ಥಿ. ನಂತರ ಕೆಲಕಾಲ ಇಲ್ಲಿನ ಕಾಡಬೆಟ್ಟು ವಿದ್ಯಾರಣ್ಯ ಶಾಲೆ­ಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿ­ಸಿದ್ದರು.ಆಮೇಲೆ ಆರ್‌ಎಸ್‌ಎಸ್‌ (ರಾಷ್ಟ್ರೀಯ ಸ್ವಯಂಸೇವಾ ಸಂಘ) ಸೇರಿದ ಅವರು, 1948ರಲ್ಲಿ ಆರ್‌ಎಸ್‌ಎಸ್‌ ನಿಷೇಧ­ಕ್ಕೊಳಗಾದ ನಂತರ 30 ವರ್ಷಗಳ ಕಾಲ ಮುಂಬಯಿ ವಿಶ್ವ­ವಿದ್ಯಾಲಯದ ಸೆನೆಟ್‌ ಸದಸ್ಯರೂ ಆಗಿದ್ದರು. ಕೆಲಕಾಲ ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.1995ರಿಂದ 2000ರವರೆಗೆ ಬಿಜಿಪಿ ರಾಷ್ಟ್ರೀಯ ಪ್ರಧಾನ ಕಾರ್ಯ­ದರ್ಶಿ­ಯಾಗಿದ್ದ ಆಚಾರ್ಯ ಅವರು, ಈಶಾನ್ಯ ರಾಜ್ಯಗಳ ಬಿಜೆಪಿ ಉಸ್ತುವಾರಿ­­ಯಾಗಿದ್ದರು.

ನಾಗಾಲ್ಯಾಂಡ್‌ನ ಲಾಂಗ್ವಾ ಗ್ರಾಮದಲ್ಲಿ ಹೆಡ್‌ಹಂಟರ್

ರಾಜಕೀಯ-ವಿಧಾನ ಸಭೆ

[ಬದಲಾಯಿಸಿ]

ನಾಗಾಲ್ಯಾಂಡಿನ ವಿಧಾನ ಸಭೆಯ ಚುನಾವಣೆ ೨೦೧೩ ಫೆಬ್ರವರಿ 2013 ,23/೨೩ ಕ್ಕೆ ನೆಡೆದು ;ಹಿಂದಿನವಿಧಾನ ಸಭೆಯ ಅವಧಿ ಮುಗಿದ ದಿನಾಂಕ ೧೦-೩-೨೦೧೩ /10-3-2013 ರಿಂದ ಅಸ್ಥಿತ್ವಕ್ಕೆ ಬಂದಿತು

ಫಲಿತಾಂಶ
ಪಾರ್ಟಿ ಗೆಲವು-ಸ್ಥಾನ ಬದ ಲಾವಣೆ
ನಾಗಾಲ್ಯಾಂಡ್ ಪೀಪಲ್ ಫ್ರಂಟ್, ೩೭/37 +೧೧/10
ಭಾರತೀಯ ಜನತಾಪಾರ್ಟಿ ೧/1 -೧/1
ಜನತಾದಳ (ಯು) ೧/ 1 +೧/1
ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ೮/8 -೧೫/-15
ಪಕ್ಷೇತರ ೮/8 +೧ /+1

ಉಲ್ಲೇಖಗಳು

[ಬದಲಾಯಿಸಿ]
  1. Census of India 2011 Govt of India
  2. Nagaland declared 'Falcon capital of the World' Archived 7 April 2014 ವೇಬ್ಯಾಕ್ ಮೆಷಿನ್ ನಲ್ಲಿ. Assam Tribune (26 November 2013)

ಬಾಹ್ಯ ಸಂಫರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: