ವಿಷಯಕ್ಕೆ ಹೋಗು

ಟಿ.ಜಿ.ಲಿಂಗಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಟಿ. ಜಿ. ಲಿಂಗಪ್ಪ
Bornಆಗಸ್ಟ್ ೨೨, ೧೯೨೭
ತಮಿಳುನಾಡಿನ ತಿರುಚನಾಪಳ್ಳಿ
Diedಫೆಬ್ರುವರಿ ೫, ೨೦೦೫
Occupationಚಲನಚಿತ್ರ ಸಂಗೀತ ನಿರ್ದೇಶಕರು
Known forಚಲನಚಿತ್ರ ಸಂಗೀತ

ಟಿ. ಜಿ. ಲಿಂಗಪ್ಪ ದಕ್ಷಿಣ ಭಾರತದ ಶ್ರೇಷ್ಠ ಚಲನಚಿತ್ರ ಸಂಗೀತ ನಿರ್ದೇಶಕರಲ್ಲೊಬ್ಬರು. ಅವರು ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಚಿರಪರಿಚಿತರಾಗಿದ್ದು ಸುಶ್ರಾವ್ಯ ಸಿನಿಮಾ ಸಂಗೀತಕ್ಕೆ ಪ್ರಸಿದ್ಧಿ ಪಡೆದವರು.

ತಿರುಚನಾಪಳ್ಳಿ ಗೋವಿಂದರಾಜುಲು ಲಿಂಗಪ್ಪನವರು ೧೯೨೭ರ ಆಗಸ್ಟ್ ೨೨ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಜನಿಸಿದರು ಅವರ ತಂದೆ ಗೋವಿಂದ ರಾಜಲು ನಾಯ್ಡು ಅವರೂ ಸಹಾ ತಮಿಳು ಚಿತ್ರರಂಗದ ಪ್ರಾರಂಭಿಕ ಕಾಲದ ಸಂಗೀತ ನಿರ್ದೇಶಕರಾಗಿದ್ದರಲ್ಲದೆ, ರಂಗಭೂಮಿಯಲ್ಲಿ ಹಾರ್ಮೋನಿಯಂ ಮಾಸ್ತರರಾಗಿದ್ದರು. ಆ ಕಾಲದ ಪ್ರಸಿದ್ಧ ಗಾಯಕಿಯಾದ ಕೆ. ಬಿ. ಸುಂದರಂಬಾಳ್ ಅವರಿಗೆ ಗೋವಿಂದ ರಾಜಲು ನಾಯ್ಡು ಅವರೇ ಗುರುಗಳಾಗಿದ್ದರು. ತಾಯಿ ಗೌರಮ್ಮನವರು ಕೂಡಾ ಗಾಯಕಿಯಾಗಿದ್ದರು. ಹೀಗಾಗಿ ಬಾಲ್ಯದಿಂದಲೂ ಸಂಗೀತವೆಂಬುದು ಲಿಂಗಪ್ಪನವರಿಗೆ ಜೊತೆಗೂಡಿಬಂದಿತ್ತು. ಪಿಚ್ಚುಮಣಿ ಅಯ್ಯರ್ ಅವರಿಂದ ಕರ್ನಾಟಕ ಸಂಗೀತವನ್ನು ಕಲಿತ ಲಿಂಗಪ್ಪನವರು ತಂದೆಯವರಿಂದ ಹಾರ್ಮೋನಿಯಂ ಮತ್ತು ಗುರು ಅಯ್ಯರ್ ಅವರಿಂದ ವೀಣಾವಾದನವನ್ನು ಕಲಿತರು. ಲಿಂಗಪ್ಪನವರು ಕೆಲಕಾಲ ವೀಣಾವಾದಕರಾಗಿಯೂ ಜನಪ್ರಿಯರಾಗಿದ್ದರು. ಆದರೆ ಅವರಿಗೆ ಚಿತ್ರರಂಗದಲ್ಲೇನೋ ವಿಶೇಷ ಆಸಕ್ತಿಹುಟ್ಟಿತು.

ಪ್ರಾರಂಭಿಕ ವೃತ್ತಿ ಜೀವನ

[ಬದಲಾಯಿಸಿ]

ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ವಿಶ್ವನಾಥನ್ ಅವರ ‘ಕಾಮಧೇನು’ ಎಂಬ ಚಿತ್ರಕ್ಕೆ ನಟಿಸಲು ಹೋದ ಲಿಂಗಪ್ಪನವರಿಗೆ, ವಿಶ್ವನಾಥನ್ ಅವರು ನೀನು ನನ್ನ ಜೊತೆಯಲ್ಲೇ ಇದ್ದು ಹಾಡುವುದನ್ನೇ ಮುಂದುವರೆಸುತ್ತಿರು ಸೂಕ್ತ ಕಾಲದಲ್ಲಿ ಅವಕಾಶ ಕೊಡುತ್ತೇನೆ ಎಂದರು. ಅದು ಫಲಪ್ರದವಾಗದ ಕಾರಣ ಅವರು ಮಯೂರ ಫಿಲಂ ಆರ್ಕೆಸ್ಟ್ರಾದಲ್ಲಿ ಹಾರ್ಮೋನಿಯಂ, ಮ್ಯಾಂಡೋಲಿನ್ ಮತ್ತು ಗಿಟಾರ್ ವಾದಕರಾಗಿ ಕೆಲಸ ನಿರ್ವಹಿಸಲಾರಂಭಿಸಿದರು. ೧೯೪೧ರಲ್ಲಿ ಅವರು ಅಶೋಕ್ ಕುಮಾರ್ ಅವರಿಗೆ ವಾದ್ಯ ನುಡಿಸಿದ್ದರು. ಅದೇ ಸಮಯದಲ್ಲಿ ಅವರು ಜೆಮಿನಿ ಸ್ಟುಡಿಯೋದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಹೋದರು. ಅಂದಿನ ದಿನಗಳಲ್ಲಿ ಅಲ್ಲಿ ಸಂಗೀತ ನಿರ್ದೇಶಕರಾಗಿದ್ದ ಸಿ. ರಾಮಚಂದ್ರ ಅವರು ಹಿರಿಯ ನುರಿತ ಕಲಾವಿದರುಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಈ ಬಾಲಕ ಲಿಂಗಪ್ಪನನ್ನು ಪರಿಗಣಿಸಲಿಲ್ಲ. ಆದರೂ ಛಲಬಿಡದೆ ಅಲ್ಲಿಂದ ಸೇಲಂಗೆ ತೆರಳಿದ ಲಿಂಗಪ್ಪನವರು, ಅಲ್ಲಿನ ಮಾಡರ್ನ್ ಥಿಯೇಟರ್ಸ್ನಲ್ಲಿ ಪ್ರಯತ್ನಿಸಿದಾಗ ಅಲ್ಲಿದ್ದ ಸಂಗೀತ ನಿರ್ದೇಶಕ ಟಿ. ಎ. ಕಲ್ಯಾಣಂ ಅವರು ಇವರಿಗೆ ಅವಕಾಶವಿತ್ತರು. ಅಲ್ಲಿ ಅವರು ಮುಂದೆ ಪ್ರಸಿದ್ಧ ಸಂಗೀತಗಾರರೆನಿಸಿದ ಟಿ. ಆರ್. ಪಾಪ, ಕೆ. ವಿ. ಮಹಾದೇವನ್ ಮುಂತಾದವರ ಒಡನಾಡಿಯಾದರು. ಆ ನಲವತ್ತರ ದಶಕದಲಿ ಎಲ್ಲಾ ಪ್ರತಿಭಾವಂತರೂ ಸ್ಟುಡಿಯೋದಿಂದ ಸ್ಟುಡಿಯೋಕ್ಕೆ ಅವಕಾಶಗಳಿಗಾಗಿ ಅಲೆದಾಡುತ್ತಿದ್ದವರೇ.

೧೯೪೫ರಲ್ಲಿ ಮದರಾಸಿಗೆ ಹಿಂದಿರುಗಿದೆ ಲಿಂಗಪ್ಪನವರು ಪ್ರಗತಿ ಸ್ಟುಡಿಯೋಸ್ನಲ್ಲಿ ಪ್ರಸಿದ್ಧ ಸಂಗೀತ ನಿರ್ದೇಶಕರಾದ ಆರ್. ಸುದರ್ಶನಂ ಅವರ ‘ಶ್ರೀವಳ್ಳಿ’ ಎಂಬ ಚಿತ್ರಕ್ಕೆ ವಾದ್ಯ ನುಡಿಸಿದರು. ೧೯೪೭ರಲ್ಲಿ ಅವರು ಕರೈಕುಡಿಯ ಎವಿಎಂ ಸ್ಟುಡಿಯೋದಲ್ಲಿ ಸಿ. ಆರ್. ಸುಬ್ರಮಣ್ಯಂ ಅವರ ‘ನಮ್ಮ ಇರುವರ್’ ಎಂಬ ಚಿತ್ರಕ್ಕೆ ವಾದ್ಯನುಡಿಸಿದರು. ಹೀಗೆ ವಿವಿಧ ಸಂಗೀತ ನಿರ್ದೇಶಕರುಗಳ ಬಳಿ ಕೆಲಸ ಮಾಡಿದ ಅವರಿಗೆ ಫ್ರೀಲಾನ್ಸ್ ಸಂಗೀತಗಾರರಾಗಿ ಕೆಲಸ ಮಾಡುವ ಚಿಂತನೆಯೊಂದು ಮೂಡಿಬಂತು. ಅದಕ್ಕಾಗಿ ಅವರು ವಿದೇಶದಿಂದ ಆ ಕಾಲಕ್ಕೆ ಪ್ರಸಿದ್ಧವೆನಿಸಿದ್ದ ಎಲೆಕ್ಟ್ರಿಕ್ ಗಿಟಾರ್ ಮುಂತಾದ ಅನೇಕ ಆಧುನಿಕ ವಾದ್ಯಗಳನ್ನು ತರಿಸಿಕೊಂಡರು. ಗಿಟಾರ್ ವಾದನದಲ್ಲಿ ಅತ್ಯಂತ ಸಮರ್ಥರಾಗಿದ್ದ ಲಿಂಗಪ್ಪನವರನ್ನು ಪ್ರಸಿದ್ಧ ಸಂಗೀತ ನಿರ್ದೇಶಕರಾದ ಜಿ. ರಾಮನಾಥನ್, ಎಸ್. ವಿ. ವೆಂಕಟರಾಮನ್, ಕೆ. ವಿ. ಮಹಾದೇವನ್ ಅವರನ್ನೊಳಗೊಂಡಂತೆ ಎಲ್ಲಾ ಸಂಗೀತ ನಿರ್ದೇಶಕರು ತಮ್ಮ ಸಂಗೀತ ನಿರ್ದೇಶನಗಳಲ್ಲಿ ಬಳಸಿಕೊಳ್ಳತೊಡಗಿದರು.

ಸಂಗೀತ ನಿರ್ದೇಶಕರಾಗಿ

[ಬದಲಾಯಿಸಿ]

ಪ್ರಖ್ಯಾತ ಸಂಗೀತಗಾರರಾದ ಟಿ. ಆರ್. ಮಹಾಲಿಂಗಂ ಅವರು ತಮ್ಮ ಮೊದಲ ಚಿತ್ರ ನಿರ್ಮಾಣದ ಸಂದರ್ಭದಲ್ಲಿ ಸಿ. ಆರ್ ಸುಬ್ರಮಣ್ಯಂ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ನೇಮಿಸಿದ್ದರು. ಸಿ. ಆರ್. ಸುಬ್ರಮಣ್ಯಂ ಅವರು ಹಟಾತ್ತನೆ ನಿಧನರಾದಾಗ, ಲಿಂಗಪ್ಪನವರ ಸಾಮರ್ಥ್ಯವನ್ನು ಮನಗಂಡಿದ್ದ ಟಿ. ಆರ್. ಮಹಾಲಿಂಗಂ ಅವರು ಲಿಂಗಪ್ಪನವರಿಗೆ ೧೯೫೧ರ ವರ್ಷದಲ್ಲಿ ತಮ್ಮ ಎರಡನೇ ಚಿತ್ರವಾದ ‘ಮೋಹನಸುಂದರಂ’ಗೆ ಸಂಗೀತ ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟರು. ಟಿ. ಆರ್. ಮಹಾಲಿಂಗಂ ಮತ್ತು ಟಿ. ಜಿ. ಲಿಂಗಪ್ಪ ಈ ಈರ್ವರೂ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಪರಿಣಿತರಾದ್ದರಿಂದ ‘ಮೋಹನಸುಂದರಂ’ ಚಿತ್ರದ ಹಾಡುಗಳೆಲ್ಲಾ ಅಪಾರ ಜನಪ್ರಿಯತೆ ಪಡೆದವು. ಹೀಗಾಗಿ ಮಹಾಲಿಂಗಂ ಅವರ ಮುಂದಿನ ಚಿತ್ರಗಳಾದ ಚಿನ್ನದುರೈ, ವಿಳೆಯಾಟ್ಟು ಬೊಮ್ಮೈ ಚಿತ್ರಗಳಲ್ಲೂ ಲಿಂಗಪ್ಪನವರ ಸಂಗೀತವಿತ್ತು. ಈ ಸಂದರ್ಭಗಳಲ್ಲಿ ಬಿ. ಆರ್. ಪಂತುಲು ಅವರು ಟಿ. ಆರ್. ಮಹಾಲಿಂಗಂ ಅವರೊಡನೆ ಕಾರ್ಯನಿರ್ವಹಿಸುತ್ತಿದ್ದರು. ಮುಂದೆ ಬಿ. ಆರ್. ಪಂತುಲು ಅವರು ತಮ್ಮದೇ ಆದ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯನ್ನು ತೆರೆದಾಗ ಅವರ ಎಲ್ಲಾ ತಮಿಳು, ಕನ್ನಡ, ತೆಲುಗು ಚಿತ್ರಗಳಿಗೂ ಟಿ. ಜಿ. ಲಿಂಗಪ್ಪನವರು ಖಾಯಂ ಸಂಗೀತ ನಿರ್ದೇಶಕರಾದರು.

ಕನ್ನಡ ಚಿತ್ರರಂಗದಲ್ಲಿ

[ಬದಲಾಯಿಸಿ]

೧೯೫೫ರಲ್ಲಿ ತೆರೆಕಂಡ ಬಿ. ಆರ್. ಪಂತುಲು ಅವರ ‘ಮೊದಲತೇದಿ’ ಟಿ. ಜಿ. ಲಿಂಗಪ್ಪನವರು ಸಂಗೀತ ನೀಡಿದ ಮೊದಲ ಕನ್ನಡ ಚಿತ್ರ. ಮುಂದೆ ಅವರು ಶಿವಶರಣೆ ನಂಬಿಯಕ್ಕ, ಗಾಳಿ ಗೋಪುರ, ಕಿತ್ತೂರು ಚೆನ್ನಮ್ಮ, ಸ್ಕೂಲ್ ಮಾಸ್ಟರ್, ಚಂದವಳ್ಳಿಯ ತೋಟ, ಶ್ರೀಕೃಷ್ಣದೇವರಾಯ, ಚಿನ್ನದ ಬೊಂಬೆ, ರತ್ನಗಿರಿ ರಹಸ್ಯ, ಸತಿ ಶಕ್ತಿ, ಸಾಕು ಮಗಳು, ಗಂಗೆ ಗೌರಿ, ಸ್ವರ್ಣ ಗೌರಿ, ಮಕ್ಕಳ ರಾಜ್ಯ, ರತ್ನಮಂಜರಿ, ಚಿನ್ನಾರಿ ಪುಟ್ಟಣ್ಣ, ಎಮ್ಮೆ ತಮ್ಮಣ್ಣ, ದುಡ್ಡೇ ದೊಡ್ಡಪ್ಪ, ಚಕ್ರತೀರ್ಥ, ಮಾಲತಿ ಮಾಧವ, ಅಮ್ಮಾ, ಬೀದಿ ಬಸವಣ್ಣ, ಗಂಡೊಂದು ಹೆಣ್ಣಾರು, ಕುಲಗೌರವ, ಧೂಮಕೇತು, ಜಾರಿ ಬಿದ್ದ ಜಾಣ, ಬೆಟ್ಟದ ಹುಲಿ, ನಾಗ ಪೂಜಾ, ಬಬ್ರುವಾಹನ, ತಾಯಿಗೆ ತಕ್ಕ ಮಗ, ಹೊಸಿಲು ಮೆಟ್ಟಿದ ಹೆಣ್ಣು, ಕಾಲೇಜು ರಂಗ, ಒಂದು ಹೆಣ್ಣಿನ ಕಥೆ, ದೇವರ ಕಣ್ಣು, ಶಿವಕೊಟ್ಟ ಸೌಭಾಗ್ಯ, ಶ್ರುತಿ ಸೇರಿದಾಗ, ಭಾಗ್ಯವಂತ, ಭಕ್ತ ಸಿರಿಯಾಳ, ಯಡಿಯೂರು ಸಿದ್ಧಲಿಂಗೇಶ್ವರ ಮಹಿಮೆ, ಭಕ್ತ ಪ್ರಹ್ಲಾದ, ಹಾಸ್ಯ ರತ್ನ ರಾಮಕೃಷ್ಣ ಮುಂತಾದ ಅನೇಕ ಪ್ರಸಿದ್ಧ ಚಿತ್ರಗಳಲ್ಲಿ ಸುಶ್ರಾವ್ಯ ಗೀತೆಗಳನ್ನೂ, ಹಿನ್ನೆಲೆ ಚಿತ್ರಸಂಗೀತವನ್ನೂ ಉಣಬಡಿಸಿದ್ದಾರೆ.

ಸುಮಧುರ ಗೀತೆಗಳು

[ಬದಲಾಯಿಸಿ]

ಟಿ. ಜಿ. ಲಿಂಗಪ್ಪನವರ ಸಂಗೀತ ನಿರ್ದೇಶನದ ಹಾಡುಗಳು ಒಂದಕ್ಕಿಂತ ಒಂದು ಎಂಬಂತೆ ಜನಪ್ರಿಯವಾಗಿವೆ. ಸ್ಕೂಲ್ ಮಾಸ್ಟರ್ ಚಿತ್ರ ‘ಸ್ವಾಮಿ ದೇವನೆ ಲೋಕಪಾಲನೆ’ ಗೀತೆಯಂತೂ ಬಹುತೇಕ ಶಾಲೆಗಳಲ್ಲಿ ಪ್ರಾರ್ಥನೆಯಾಗಿ ನಿರಂತರವಾಗಿ ಹಾಡಲ್ಪಡುತ್ತಿತ್ತು.ಇದಲ್ಲದೇ ಇದೇ ಚಿತ್ರದ 'ರಾಧಾಮಾಧವ ವಿನೋದ ಹಾಸವು", 'ಭಾಮೆಯ ನೋಡಲು ತಾ ಬಂದ' ‘ಕಿತೂರು ಚೆನ್ನಮ್ಮ’ ಚಿತ್ರದಲ್ಲಿನ ಅಕ್ಕನ ವಚನವಾದ ‘ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು’ ಗೀತೆಗೆ ಕರಗದ ಮನವೇ ಇಲ್ಲ. ಬಭ್ರುವಾಹನದ ‘ಆರಾಧಿಸುವೆ ಮದನಾರಿ’, ‘ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ’; ಶ್ರೀಕೃಷ್ಣದೇವರಾಯದ ಬಹುಜನ್ಮದ ಪೂಜಾಫಲ, ಶ್ರೀ ಚಾಮುಂಡೇಶ್ವರಿ, ತಿರುಪತಿ ಗಿರಿವಾಸ; ಗಾಳಿಗೋಪುರದ ‘ಯಾರಿಗೆ ಯಾರುಂಟು’; ಚಕ್ರತೀರ್ಥದ ‘ಹಗಲು ಹರಿಯಿತು’, ‘ನಿನ್ನ ರೂಪ ಕಣ್ಣಲಿ’; ದೇವರ ಕಣ್ಣು ಚಿತ್ರದ ‘ನಿನ್ನ ನೀನು ಮರೆತರೇನು ಸುಖವಿದೆ’, ಮೊದಲ ತೇದಿಯ ‘ಒಂದರಿಂದ ಇಪ್ಪತ್ತೊಂದರವರೆಗೆ’, ರತ್ನಗಿರಿ ರಹಸ್ಯದ,'ಅಮರ ಮಧುರ ಪ್ರೇಮ', ‘ಅನುರಾಗದ ಅಮರಾವತಿ’, ಸತಿ ಶಕ್ತಿಯ ‘ಪವಡಿಸು ಪಾಲಾಕ್ಷ’, ಶ್ರುತಿ ಸೇರಿದಾಗ ಚಿತ್ರದ ‘ಬೊಂಬೆಯಾಟವಯ್ಯಾ’, ಭಕ್ತ ಸಿರಿಯಾಳದ ‘ಶಿವ ಶಿವ ಎಂದರೆ ಭಯವಿಲ್ಲ’, ಯಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ ಚಿತ್ರದ ‘ಶ್ರೀಕರ ಶುಭಕರ ಶಿವಶಂಕರ’ ಹೀಗೆ ಅಸಂಖ್ಯಾತ ಸುಶ್ರಾವ್ಯ ಹಾಡುಗಳು ಒಂದಾದ ಮೇಲೊಂದು ಮನಃಪಟಲದಲ್ಲಿ ಮುದವಾಗಿ ಸಂಚಲನಗೊಳ್ಳುತ್ತವೆ. ಇದಲ್ಲದೆ ಟಿ. ಜಿ. ಲಿಂಗಪ್ಪನವರ ನಿರ್ದೇಶನದಲ್ಲಿ ಅನೇಕ ಸುಂದರ ಭಕ್ತಿಗೀತಗಳೂ ಹರಿದು ಬಂದಿದ್ದು ಕೇಳುಗರ ಮನಗಳನ್ನು ನಿರಂತರವಾಗಿ ತಣಿಸಿವೆ.

ಸಂಗೀತದ ಸಮರ್ಥ ಬಳಕೆ

[ಬದಲಾಯಿಸಿ]

ಕರ್ನಾಟಕ ಸಂಗೀತದ ಎಲ್ಲಾ ೭೫ ಮೇಳಕರ್ತರಾಗಗಳನ್ನೂ ತಮ್ಮ ಸಂಗೀತದಲ್ಲಿ ಬಳಸಿದ ಅಪೂರ್ವ ಸಾಧನೆಯ ಜೊತೆಗೆ, ಜಾನಪದ ಸಂಗೀತವನ್ನೂ ಅನನ್ಯವಾಗಿ ತಮ್ಮ ಸಂಗೀತದಲ್ಲಿ ಟಿ. ಜಿ. ಲಿಂಗಪ್ಪನವರು ಹಿತಮಿತವಾಗಿ ಬಳಸಿದ್ದರು. ಕನ್ನಡದ ೫೪ ಚಿತ್ರಗಳೂ ಸೇರಿದಂತೆ, ತೆಲುಗು, ತಮಿಳು, ಮಲಯಾಳಂ ಮತ್ತು ಕೆಲವೊಂದು ಹಿಂದಿ ಭಾಷೆಗಳ ಭಾಷೆಗಳ 200ಕ್ಕೂ ಹೆಚ್ಚು ಚಿತ್ರಗಳಿಗೆ ಟಿ. ಜಿ. ಲಿಂಗಪ್ಪನವರು ಸಂಗೀತ ಸಂಯೋಜಿಸಿದ್ದರು. ಕರ್ನಾಟಕ ಸಂಗೀತ ಹಾಗೂ ಹಿಂದೂಸ್ತಾನೀ ಸಂಗೀತ ಎರಡರಲ್ಲೂ ವಿಶೇಷ ಹಿಡಿತವಿದ್ದ ಲಿಂಗಪ್ಪನವರು ಶಾಸ್ತ್ರೀಯ ಚೌಕಟ್ಟಿನೊಳಗೇ ಸಿನಿಮಾಗಳಿಗೆ ಸಂಗೀತ ನೀಡಿದ್ದು ಒಂದು ವಿಶೇಷ. ಕನ್ನಡದಲ್ಲಿ ಇವರನ್ನು ಬಿಟ್ಟರೆ ಬೇರೆ ಯಾವ ಸಂಗೀತ ನಿರ್ದೇಶಕರೂ ಈ ರೀತಿಯ ಶುದ್ಧ ಶಾಸ್ತ್ರೀಯ ಮಟ್ಟುವಿನಲ್ಲಿ ಸಂಗೀತ ನಿರ್ದೇಶನ ಮಾಡಿದವರಿಲ್ಲ.

ಮುಂದಿನ ತಲೆಮಾರು

[ಬದಲಾಯಿಸಿ]

ಲಿಂಗಪ್ಪನವರ ಪುತ್ರರಾದ ಕಿಶೋರ್ ಅವರು ಸರೋದ್ ವಾದಕರಾಗಿ ಹೆಸರು ಮಾಡಿದ್ದರು. ಅವರ ಪುತ್ರಿಯರಾದ ಶ್ಯಾಮಲಾ ಮತ್ತು ಶ್ರೀಕಲಾ ಅವರೂ ಗಾಯಕಿಯರಾಗಿ ಹೆಸರು ಮಾಡಿದ್ದಾರೆ.

ವಿದಾಯ

[ಬದಲಾಯಿಸಿ]

ಈ ಮಹಾನ್ ಸಾಧಕರಾದ ಟಿ. ಜಿ. ಲಿಂಗಪ್ಪನವರು ೨೦೦೫ರ ವರ್ಷದ ಫೆಬ್ರುವರಿ ೫ರಂದು ಈ ಲೋಕವನ್ನಗಲಿದರು. ತಾವು ಈ ಲೋಕವನ್ನಗಲಿದ ಹಿಂದಿನ ದಿನವೂ ಅವರು ಸಂಗೀತ ಸಂಯೋಜನೆಯನ್ನು ಮಾಡಿದ್ದರಂತೆ. ಈ ಮಹಾನ್ ಚೇತನಕ್ಕೆ ನಮ್ಮ ನಮನಗಳು.

ಮಾಹಿತಿ ಕೃಪೆ

[ಬದಲಾಯಿಸಿ]

ವಿಜಯವಾಣಿ ಪತ್ರಿಕೆಯಲ್ಲಿ ಎನ್ ಎಸ್ ಎಸ್ ಲೇಖನ ಮತ್ತು ಇಂಗ್ಲಿಷ್ ವಿಕಿಪೀಡಿಯಾದಲ್ಲಿನ ಮಾಹಿತಿಗಳು

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ