ಘಂಟಸಾಲ
ಘಂಟಸಾಲ | |
---|---|
ಜನನ | ಘಂಟಸಾಲ ವೆಂಕಟೇಶ್ವರ ರಾವ್ ಡಿಸೆಂಬರ್ ೪, ೧೯೨೨ ಚೌಟಪಲ್ಲಿ, ಗುಡಿವಾಡ, ಕೃಷ್ಣಜಿಲ್ಲೆ, ಆಂದ್ರಪ್ರದೇಶ |
ಮರಣ | ಫೆಬ್ರುವರಿ ೧೧, ೧೯೭೪ ಚೆನ್ನೈ |
ವೃತ್ತಿ(ಗಳು) | ಚಲನಚಿತ್ರ ಹಿನ್ನೆಲೆ ಗಾಯಕರು, ಸಂಗೀತ ನಿರ್ದೇಶಕರು |
ಸಕ್ರಿಯ ವರ್ಷಗಳು | ೧೯೪೨–೧೯೭೪ |
ಗಮನಾರ್ಹ ಕೆಲಸಗಳು | ವಿಶಿಷ್ಟಧ್ವನಿಯ ಚಲನಚಿತ್ರ ಹಿನ್ನೆಲೆ ಗಾಯನ |
ಜಾಲತಾಣ | www |
ಘಂಟಸಾಲ (ಡಿಸೆಂಬರ್ ೪, ೧೯೨೨ - ಫೆಬ್ರುವರಿ ೧೧, ೧೯೭೪) ವಿಶಿಷ್ಟ ಧ್ವನಿಯ ಹಿನ್ನೆಲೆಗಾಯಕರಾಗಿ ಚಲನಚಿತ್ರಲೋಕದಲ್ಲಿ ಅಜರಾಮರರಾಗಿದ್ದಾರೆ. ಹಿಂದಿನ ಪೀಳಿಗೆಯವರಲ್ಲಿ ಘಂಟಸಾಲ ಅವರ ಹಾಡುಗಳನ್ನು ಕೇಳದವರೇ ವಿರಳ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭ ಆಗುತ್ತಿದ್ದುದೇ ಘಂಟಸಾಲ ಅವರು ಹಾಡಿದ ಭಕ್ತಿಗೀತೆ “ನಮೋ ವೆಂಕಟೇಶ ನಮೋ ತಿರುಮಲೇಶ" ಎಂಬ ಹಾಡಿನಿಂದ. ಯಾವುದೇ ಗಣೇಶನ ಹಬ್ಬ ಬಂದರೆ ಘಂಟಸಾಲ ಹಾಡಿರುವ ಹಂಸದ್ವನಿ ರಾಗದ “ವಾತಾಪಿ ಗಣಪತಿಂ ಭಜೇಹಂ” ಇರಲೇಬೇಕು. ತಿರುಪತಿಗೆ ಹೋದರೆ ಏಳೇಳು ಬೆಟ್ಟಗಳಲ್ಲೂ ಹೋದ ಹೋದೆಡೆಗಳಲ್ಲೆಲ್ಲಾ ಘಂಟಸಾಲ ದ್ವನಿಯೇ ಮಾರ್ದನಿಸುತ್ತಿರುತ್ತದೆ. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಘಂಟಸಾಲ ಪ್ರಖ್ಯಾತಿ ಪಡೆದಿದ್ದರು.
ಹಿನ್ನೆಲೆ
[ಬದಲಾಯಿಸಿ]ಘಂಟಸಾಲ ಜನಿಸಿದ್ದು ಡಿಸೆಂಬರ್ ೪, ೧೯೨೨ರಂದು ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ ಚೌಟಿಪಲ್ಲಿ ಎಂಬ ಗ್ರಾಮದಲ್ಲಿ. ಅವರ ತಂದೆ ಸೂರ್ಯನಾರಾಯಣರಾವ್ ಕೂಡಾ ಪ್ರಸಿದ್ಧ ಗಾಯಕರು. ತಮ್ಮ ೧೨ನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡ ಘಂಟಸಾಲ ಬೆಳೆದಿದ್ದು ಚಿಕ್ಕಪ್ಪ ರಾಮಯ್ಯನ ಆಶ್ರಯದಲ್ಲಿ. ಸಂಗೀತದಲ್ಲಿದ್ದ ಆಸಕ್ತಿ ಇವರನ್ನು ಕಲಿಕೆಗೆ ಅವಕಾಶವಿಲ್ಲದ ಚಿಕ್ಕಪ್ಪನ ಮನೆಯಿಂದ ವಿಜಯನಗರಿಗೆ ಓಡಿಹೋಗುವಂತೆ ಪ್ರೇರೇಪಿಸಿತು. ಅಲ್ಲಿ ಸಂಗೀತಶಾಲೆಗೆ ಸೇರಿ, ಕಠಿಣ ಪರಿಶ್ರಮ ನಡೆಸಿ, ’ಸಂಗೀತ ವಿದ್ವಾನ್’ ಪದವಿ ಗಳಿಸಿದರು. ಆ ವೇಳೆಗೆ ದೇಶಾದ್ಯಂತ ಹಬ್ಬಿದ್ದ ‘ಕ್ವಿಟ್ ಇಂಡಿಯಾ ಚಳಿವಳಿ’ಗೆ ಸೇರಿ, ೧೮ ತಿಂಗಳ ಸೆರೆಮನೆವಾಸ ಅನುಭವಿಸಿದರು. ಸೆರೆಮನೆಯಲ್ಲಿ ಪರಿಚಿತರಾದ ಸಮುದ್ರಾಲಾರಿಂದ ಚಿತ್ರರಂಗದತ್ತ ಒಲವು ಬೆಳೆಯಿತು.
ಚಲನಚಿತ್ರಲೋಕದಲ್ಲಿ
[ಬದಲಾಯಿಸಿ]ಆಕಾಶವಾಣಿಯಲ್ಲಿ ಹಾಡುವ ಅವಕಾಶ ಸಿಕ್ಕಿತಾದರೂ, ಎಚ್ಎಂವಿ ಸಂಸ್ಥೆ ಅವರ ಧ್ವನಿ ಸರಿಯಿಲ್ಲವೆಂದು ತಿರಸ್ಕರಿಸಿತು. ನಂತರ ಘಂಟಸಾಲ ಅವರು ಪ್ರಭಾತ್ ಫಿಲಂಸ್‌ನ ತೆಲುಗು ಚಿತ್ರ ’ಸೀತಾರಾಮ ಜನನಂ’ ಮೂಲಕ ಹಿನ್ನೆಲೆ ಗಾಯಕರಾಗಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದರು. ಭಾಗ್ಯಚಕ್ರ ಚಿತ್ರದ ‘ದೇವಾ ನಿನ್ನ ರಾಜ್ಯದ ನ್ಯಾಯವಿದೇನಾ’ ಇವರು ಹಾಡಿದ ಮೊದಲ ಕನ್ನಡ ಚಿತ್ರಗೀತೆ. ಘಂಟಸಾಲ ಅವರ ಜನಪ್ರಿಯ ಹಾಡುಗಳು ಕನ್ನಡದಲ್ಲೂ ಅಪಾರ. ಅವುಗಳಲ್ಲಿ ಹಲವನ್ನು ಹೆಸರಿಸುವುದಾದರೆ ‘ಶಿವಶಂಕರಿ ಶಿವಾನಂದನ ಲಹರಿ’, ‘ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ’, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ’, ‘ಏನಿದೀ ಗ್ರಹಚಾರವೋ ಏನಿದೀ ವನವಾಸವೋ’, ‘ಹೇ ಚಂದ್ರಚೂಡ ಮದನಾಂತಕಾ ಶೂಲಪಾಣೆ’, ‘ಬಾಳೊಂದು ನಂದನ ಅನುರಾಗ ಬಂಧನ’, ‘ದೇವಾ ದರುಶನವ ನೀಡೆಯಾ’, ‘ತಾಯಿ ತಂದೆಯ ಸೇವೆಯಾ ಯೋಗ’, ‘ಮೆಲ್ಲುಸಿರೇ ಸವಿ ಗಾನ’, ‘ಯಾವಕವಿಯ ಶೃಂಗಾರ ಕಲ್ಪನೆಯೋ’, ‘ಈ ದೇಹದಿಂದ ದೂರನಾದೆ ಏಕೆ ಆತ್ಮನೇ’, ‘ಯಾರಿಗೆ ಯಾರುಂಟು ಎರವಿನ ಸಂಸಾರ’, ‘ಏನೋ ಎಂತೋ, ಜುಂ ಎಂದಿತು ತನುವು’, ‘ವಿವಾಹ ಭೋಜನವಿದು ವಿಚಿತ್ರ ಭಕ್ಷ್ಯಗಳಿವು’, ‘ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ’, ‘ಹನುಮನ ಪ್ರಾಣ ಪ್ರಭೋ ರಘುರಾಮ’ ಹೀಗೆ ಬಹಳಷ್ಟು ಹಾಡುಗಳನ್ನು ಹೆಸರಿಸಬಹುದು. ಅವರ ಕಂಚು ಕಂಠದ ಎತ್ತರದ ದ್ವನಿಯ ಮಾಧುರ್ಯದ ಹಾಡುಗಳನ್ನು ಸವಿಯುವುದು ಆಹ್ಲಾದಕರ ಅನುಭವ.
ಘಂಟಸಾಲ ಕನ್ನಡದಲ್ಲಿ ೬೦ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿದ್ದಾರೆ. ವೀರಕೇಸರಿ, ವಾಲ್ಮೀಕಿ ಮುಂತಾದ ಚಿತ್ರಗಳಿಗೆ ಸಂಗೀತ ಸಹಾ ನೀಡಿದ್ದಾರೆ. ಕನ್ನಡ, ತೆಲುಗು ಮುಂತಾದ 8 ಭಾಷೆಗಳಲ್ಲಿ ಒಟ್ಟು ೧೦,೦೦೦ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿ, ೮೭ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ತೆಲುಗಿನ 'ಜಗಮೇ ಮಾಯಾ' ಸಾರ್ವಕಾಲಿಕವಾಗಿ ಪ್ರಸಿದ್ಧ ಹಾಡು.
ಭಕ್ತಿಸಂಗೀತ
[ಬದಲಾಯಿಸಿ]ತಿರುಮಲ ತಿರುಪತಿ ದೇವಸ್ಥಾನವನ್ನು ನೆನೆದಾಗಲೆಲ್ಲ ಘಂಟಸಾಲ ಅವರ ಹೆಸರೂ ನೆನಪಾಗುತ್ತದೆ. ಅವರು ಹಾಡಿದ ತಿರುಮಲ ಒಡೆಯ ಶ್ರೀನಿವಾಸರ ಕುರಿತ ಒಂದೊಂದು ಹಾಡೂ ಅನರ್ಘ್ಯ ರತ್ನಗಳು. ಭಗವದ್ಗೀತೆಯನ್ನು ಮನೆ ಮನೆಗೂ ತಮ್ಮ ಸುಶ್ರಾವ್ಯ ದ್ವನಿಯಲ್ಲಿ ತಲುಪಿಸಿದವರಲ್ಲಿ ಕೂಡ ಘಂಟಸಾಲ ಮೊದಲಿಗರು. ಅದೇ ರೀತಿ ರಾಮದಾಸರ ಕೃತಿ, ಜಯದೇವ ಕವಿಯ ಅಷ್ಟಪದಿ ಹೀಗೆ ಅಸಂಖ್ಯಾತ ಶಾಸ್ತ್ರೀಯ ಹಾಡುಗಳು ಕೂಡ ಘಂಟಸಾಲ ಅವರ ದ್ವನಿಯಲ್ಲಿ ಜನಮಾನಸಕ್ಕೆ ಹತ್ತಿರದಲ್ಲಿ ನಿಂತವು.
ಘಂಟಸಾಲ ಸಂಗೀತ ನಿರ್ದೇಶನದ ಕೆಲವೊಂದು ಚಲನಚಿತ್ರಗಳು
[ಬದಲಾಯಿಸಿ]ಇವರು ಹಲವಾರು ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ.
ಘಂಟಸಾಲ ಅವರು ಹಾಡಿರುವ ಕೆಲವು ಚಲನಚಿತ್ರಗೀತೆಗಳು
[ಬದಲಾಯಿಸಿ]- ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ - ವೀರಕೇಸರಿ
- ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ, ಮತದಲ್ಲಿ ಮೇಲ್ಯಾವುದೋ - ಸತ್ಯ ಹರಿಶ್ಚಂದ್ರ
- ಮೆಲ್ಲುಸಿರೇ ಸವಿ ಗಾನ ಎದೆ ಝಲ್ಲನೆ ಹೂವಿನ ಬಾಣ - ವೀರಕೇಸರಿ
- ಬಾಳೊಂದು ನಂದನ, ಅನುರಾಗ ಬಂಧನ - ಜೇನುಗೂಡು
- ಈ ದೇಹದಿಂದ ದೂರವಾದೆ ಏಕೆ ಆತ್ಮವೇ - ಓಹಿಲೇಶ್ವರ
- ಯಾರಿಗೆ ಯಾರುಂಟು ಎರವಿನ ಸಂಸಾರ -ಗಾಳಿಗೋಪುರ
- ಏನೊ ಎಂತೋ ಝಂ ಎಂದಿತು ಮನವು -ಅಮರಶಿಲ್ಪಿ ಜಕಣಾಚಾರಿ
- ಆಹಾ ನನ್ನ ಮದುವೆಯಂತೆ, ಓಹೋ ನನ್ನ ಮದುವೆಯಂತೆ -ಮಾಯಾಬಜಾರ್
- ಹನುಮನ ಪ್ರಾಣ... - ಶ್ರೀ ರಾಮಾಂಜನೇಯ ಯುದ್ಧ
ಪ್ರಶಸ್ತಿ /ಪುರಸ್ಕಾರ
[ಬದಲಾಯಿಸಿ]ವಿದಾಯ
[ಬದಲಾಯಿಸಿ]ಘಂಟಸಾಲ ಅವರು ಫೆಬ್ರುವರಿ ೧೧, ೧೯೭೪ ರಲ್ಲಿ ಈ ಲೋಕವನ್ನಗಲಿದರು. ಆದರೆ ಅವರು ಹಾಡಿದ ಹಾಡುಗಳು ಮತ್ತು ಅವರ ಹೆಸರು ಚಿರಸ್ಮರಣೀಯ.