ಗಂಟು
ಗಂಟು ಎನ್ನುವುದು ಭಾರವಾದ ಪದಾರ್ಥಗಳನ್ನು ಎಳೆಯಲು, ಎತ್ತಲು, ಎರಡು ಪದಾರ್ಥಗಳನ್ನು ಬಂಧಿಸಲು ಅನುಕೂಲವಾಗುವಂತೆ ದಾರ, ಹುರಿ, ಹಗ್ಗಗಳಿಂದ ಹಾಕುವ ಕಟ್ಟು (ನಾಟ್). ಸಾಮಾನ್ಯ ಬಳಕೆಯಲ್ಲಿ ಅನೇಕ ಮಾದರಿಯ ಗಂಟುಗಳನ್ನೂ ಕಾಣಬಹುದು. ಗಣಿತಶಾಸ್ತ್ರದಲ್ಲಿ ರೇಖೆಯ ಮಡಿಕೆಗೂ ವರ್ತುಲಕ್ಕೂ ಸಂಬಂಧಿಸಿದ ಆಕೃತಿಗೆ ಇದೇ ಹೆಸರಿದೆ.
ಯಾವ ಹಗ್ಗ ಬಳಸಿ ಗಂಟು ಹಾಕುತ್ತೇವೆಯೋ ಆ ಹಗ್ಗ ದುರ್ಬಲವಾಗುತ್ತದೆ.[೧]
ಮೊದಲನೆಯ ಸಾಮರ್ಥ್ಯದ ಗಂಟು ದಿನಬಳಕೆ ಉಪಯೋಗದಲ್ಲಿರುವಂಥದು. ಆಯಾ ವೃತ್ತಿಯವರು ತಮ್ಮ ತಮಗೆ ಅನುಕೂಲವಾದ ಗಂಟು ಮಾದರಿಗಳನ್ನು ಬಳಸುತ್ತಾರೆ. ದಾರ ಅಥವಾ ನೂಲು, ಹುರಿ, ಹಗ್ಗಗಳನ್ನು ಉಪಯೋಗಿಸಿ ಬೇಕಾದ ಗಂಟುಗಳನ್ನು ಹಾಕಬಹುದು. ದಾರ ತೆಳು. ಮೂರುನಾಲ್ಕು ದಾರಗಳನ್ನು ಒಟ್ಟಿಗೆ ಹೊಸೆದರೆ ಹುರಿ ಆಗುತ್ತದೆ. ಮೂರೊ ನಾಲ್ಕೊ ಹೆಚ್ಚೊ ಹುರಿಗಳು ಸೇರಿದಾಗ ಹಗ್ಗ ಆಗುತ್ತದೆ. ಅಂಥ ಮೂರೊ ನಾಲ್ಕೊ ಹಗ್ಗಗಳನ್ನು ಹೊಸೆದಾಗ ಹೊರಜಿ ಆಗುತ್ತದೆ. ಹಿಂದೆ ಬಳಕೆಯಲ್ಲಿದ್ದ ಕೂವೆ ಪಟಗಳುಳ್ಳ ನೌಕೆಗಳಿಗೆ ಹಗ್ಗ, ಹೊರಜಿ ಬಹಳ ಅಗತ್ಯವಾಗಿದ್ದವು. ತಮ್ಮ ಅನುಕೂಲಗಳಿಗೆ ತಕ್ಕಂತೆ ನಾವಿಕರು ಬಗೆಬಗೆಯ ಗಂಟುಗಳನ್ನು ಬಳಸಲುಪಕ್ರಮಿಸಿದರಾಗಿ ಅವಕ್ಕೆ ನಾವಿಕರ ಗಂಟುಗಳೆಂಬ (sailors' knot) ಹೆಸರೇ ಉಳಿದು ಹೋಯಿತು.
ಗಂಟುಗಳ ಬಗೆಗಳು
[ಬದಲಾಯಿಸಿ]ತುಂಡು ಹಗ್ಗವನ್ನು ಹಿಡಿದು ಎಡಭಾಗದ ಮೇಲೆ ಬಲಭಾಗ ಇಲ್ಲವೆ ಬಲಭಾಗದ ಮೇಲೆ ಎಡಭಾಗ ಬರುವಂತೆ ಇಟ್ಟರೆ ಒಂದು ವಂಕಿ ಅಥವಾ ಬಳೆ ಏರ್ಪಡುತ್ತದೆ. ಹಾಗೆ ಹಗ್ಗವನ್ನು ತಿರುಚುವುದಕ್ಕೆ ಮಡಿಕೆ ಅಥವಾ ಗೂಲೆ ಎಂದು ಹೆಸರು. ಗೂಲೆಯನ್ನು ಅರೆಗಂಟು ಎಂದು ಕರೆದಿದ್ದಾರೆ. ಬಿ ಭಾಗದ ಮೇಲೆ ಕೂತಿರುವ ಎ ಭಾಗವನ್ನು ಸಿ ವಂಕಿಯ ಒಳಗಿನಿಂದ ತೂರಿಸಿ ಎತ್ತಿದರೆ ಸಾಧಾರಣ ಗಂಟು ಏರ್ಪಡುತ್ತದೆ. ಹಾಗೆಯೇ ಬಿ ಭಾಗವನ್ನು ವಂಕಿಯಲ್ಲಿ ತೂರಿಸಿದಾಗಲು ಅದೇ ಗಂಟು ಏರ್ಪಡುತ್ತದೆ.
ಗಂಟುಗೊಳ್ಳುವಂತೆ ಮಾಡದೆ ಒಂದರ ಮೇಲೊಂದರಂತೆ ಎರಡು ಗೂಲೆಯನ್ನು ಗೂಟದ ಸುತ್ತ ಹಾಕಿದರೆ ಕೊಟ್ಟಿಗೆ ಗೂಲೆ (ಕ್ಲೋವ್ ಹಿಚ್) ಏರ್ಪಡುತ್ತದೆ.[೨] ಗಂಟಿನಲ್ಲಿ ಇರಬೇಕಾದ ನಾಲ್ಕು ಲಕ್ಷಣಗಳೂ ಇದಕ್ಕಿದೆ:
- ಹಾಕುವುದು ಸುಲಭ.
- ಹಾಕಿದಮೇಲೆ ಭದ್ರವಾಗಿರುತ್ತದೆ.
- ಬಿಚ್ಚುವುದೂ ಸುಲಭ
- ನೋಡಲು ಚೆಂದ
ಗೂಲೆಯ ಒಂದು ಬಿಡಿ ತುಂಡನ್ನು ಅದರ ಬಳೆಯೊಳಗೆ ತೂರಿಸಿ ಮೇಲಕ್ಕೆ ಎಳೆದು ತಂದರೆ ಮೇಲ್ಗೈ ಗಂಟು (ಓವರ್‌ಹ್ಯಾಂಡ್ ನಾಟ್) ಆಗುತ್ತದೆ. ಸಾಮಾನ್ಯಾವಾಗಿ ದೈನಂದಿನ ಜೀವನದಲ್ಲಿ ಇದರ ಉಪಯೋಗವೇ ಹೆಚ್ಚು. ಬಿಡಿ ತುಂಡನ್ನು ಇನ್ನೂ ಒಂದು ಬಾರಿ ಬಳೆಯೊಳಗೆ ನುಸಿಸಿ ಜೀರಿದರೆ ಗಂಟು ಹೆಚ್ಚು ಭದ್ರವಾಗುತ್ತದೆ. ಸ್ವಲ್ಪ ತೊಡಕೂ ಆಗಬಹುದು. ಹ್ಯಾಗ್ ಮೀನುಗಳು ಅವುಗಳ ಬೇಟೆಯ ಮಾಂಸದ ತುಂಡುಗಳನ್ನು ಸಿಗಿಯುವುದಕ್ಕಾಗಿ ಶಕ್ತಿಯನ್ನು ಸೃಷ್ಟಿಸಿಕೊಳ್ಳಲು ತಮ್ಮ ದೇಹಗಳನ್ನು ಮೇಲ್ಗೈ ಗಂಟುಗಳಲ್ಲಿ ಕಟ್ಟಿಕೊಳ್ಳುತ್ತವೆ.[೩]
ಮರದ ದಪ್ಪ ತುಂಡುಗಳನ್ನು ಎತ್ತುವುದಕ್ಕೂ ಎಳೆಯುವುದಕ್ಕೂ ನಾಟಾ ಗೂಲೆ (ಟಿಂಬರ್ ಹಿಚ್) ಹಾಕಬೇಕಾಗುತ್ತದೆ. ಗೂಲೆಯ ಒಂದು ಬಿಡಿ ತುಂಡನ್ನು ಉದ್ದವಾಗಿ ಇಟ್ಟುಕೊಂಡು, ಇನ್ನೊಂದನ್ನು ಒಳಕ್ಕೂ ಹೊರಕ್ಕೂ ಮತ್ತೆ ಒಳಕ್ಕೂ ನುಸಿಸಿ ಬಿಗಿಯಬೇಕು. ಇನ್ನೊಮ್ಮೆ ಹಾಗೆಯೇ ನುಸಿಸಿದರೆ ಇನ್ನೂ ಗಟ್ಟಿ. ಬಹಳ ಭಾರವನ್ನು ಹೊತ್ತ ಮೇಲೂ ಇದನ್ನು ಸುಲಭವಾಗಿ ಬಿಚ್ಚಬಹುದು.[೪][೫]
ನಾಟಾ ಗೂಲೆಯಂತೆಯೇ ಕೆಲಸಮಾಡಬಲ್ಲ ಇನ್ನೊಂದು ಗಂಟಿದೆ. ಅದರ ಹೆಸರು ಸುತ್ತು ಮತ್ತು ಎರಡು ಗೂಲೆ (ರೌಂಡ್ ಟರ್ನ್ ಅಂಡ್ ಟು ಹಿಚಸ್). ಬಿಡಿ ತುಂಡುಗಳ ಕೊನೆಯನ್ನು ಸೇರಿಸಿ ಹುರಿಯಿಂದ ಕಟ್ಟಿಬಿಟ್ಟರೆ ಒಳ್ಳೆಯದು.
ಜೀರುಗುಣಿಕೆ ಅಥವಾ ನೇಣು (ಉರಲು) ಸರಳವಾದ ಗಂಟು (ನೂಸ಼್, ರನಿಂಗ್ ನೂಸ಼್). ಎಷ್ಟು ಬೇಕೋ ಅಷ್ಟು ವ್ಯಾಸದ ಬಳೆಯನ್ನು (ಸಿ) ಇರಿಸಿಕೊಂಡು ಉದ್ದ ಭಾಗದ (ಬಿ) ಸುತ್ತ ಮೇಲ್ಮೈಗಂಟನ್ನು ಹಾಕಬೇಕು; ತುಂಡು ತುದಿಯನ್ನು (ಎ) ಎಳೆದರೆ ಗಂಟು ಬಿಗಿಯಾಗುತ್ತದೆ; ಅದು ಸರಿದಾಡುವ ಕುಣಿಕೆಯಾದ್ದರಿಂದ ಉದ್ದಭಾಗದ ಮೇಲೆ ಹಿಂದಕ್ಕೂ ಮುಂದಕ್ಕೂ ಜಾರುಬಲ್ಲುದು. ತುಂಟಕುದುರೆ ಅಥವಾ ತೊಂಡುದನವನ್ನು ಇದರಿಂದ ಹಿಡಿದು ಹತೋಟಿಗೆ ತರಬಹುದು. ಅಮೆರಿಕ ಮತ್ತು ಆಸ್ಟ್ರೇಲಿಯ ದನಗಾಹಿಗಳು ಓಡುತ್ತಿರುವ ಪ್ರಾಣಿಗಳನ್ನು ಹಿಡಿಯಲು ಇಂದಿಗೂ ಈ ಗಂಟನ್ನು ಬಳಸುತ್ತಾರೆ. ಕುದುರೆಯ ಮೇಲೆ ಕುಳಿತು ಓಡುತ್ತ ಪ್ರಾಣಿಯನ್ನು ಹಿಂಬಾಲಿಸಿ ಅದು ಹತ್ತಿರವಾದಂತೆ ಕೈಯಲ್ಲಿನ ಕುಣಿಕೆ ಹಾಕಿದ ಹಗ್ಗವನ್ನು ಪ್ರಾಣಿಯ ಕಡೆಗೆ ಗುರಿಯಿಟ್ಟು ಎಸೆಯುತ್ತಾರೆ. ನಿರಾಯಾಸವಾಗಿ ಕುಣಿಕೆ ಪ್ರಾಣಿಯ ಕತ್ತಿಗೆ ಸೇರಿ ಬಿಗಿಯಾಗಿ ಕೂಡುತ್ತದೆ. ಇದಕ್ಕೆ ಹೆಚ್ಚಿನ ಕೈಚಳಕ ಅವಶ್ಯಕ.
ಜಾರದೆ ಭದ್ರವಾಗಿ ನಿಲ್ಲಬಲ್ಲ ಕುಣಿಕೆ ಗಂಟು (ಬೊ ಲೈನ್) ಬಲು ಉಪಯುಕ್ತವಾದದ್ದು. ಕುಣಿಕೆ ಗಂಟನ್ನು ಹಲವುವೇಳೆ ಅತ್ಯಂತ ಅಗತ್ಯವಾದ ಗಂಟುಗಳ ಪೈಕಿ ಒಂದೆಂದು ಪರಿಗಣಿಸಲಾಗುತ್ತದೆ.[೬] ಉದ್ದಭಾಗದ (ಬಿ) ಸುತ್ತ ಒಂದು ಗಂಟನ್ನು ಹಾಕಿ ಅವಶ್ಯಕವಾದಷ್ಟು ಅಗಲದ ಬಳೆಗೆ (ಸಿ) ಅವಕಾಶವಿರುವಂತೆ ಮಾಡಿಕೊಳ್ಳುವುದೇ ಅವಶ್ಯಕವಾದಷ್ಟು ಅಗಲದ ಬಳೆಗೆ (ಸಿ) ಅವಕಾಶವಿರುವಂತೆ ಮಾಡಿಕೊಳ್ಳುವುದೇ ಉದ್ದೇಶ. ಬೆಂಕಿ ಬಿದ್ದ ಮನೆಯಲ್ಲಿ ಸಿಕ್ಕಿ ಉಸಿರುಕಟ್ಟಿರುವವನ ಸುತ್ತ ಬಳೆಯನ್ನು ಅಳವಡಿಸಿ, ಉದ್ದಭಾಗದಿಂದ ತನ್ನ ಸುತ್ತಲೂ ಒಂದು ಕುಣಿಕೆ ಗಂಟನ್ನು ಕಟ್ಟಿಕೊಂಡು, ನೆಲದಮೇಲೆ ತೆವಳುತ್ತ ಮುಂಬರಿದು ಅಪಾಯದಿಂದ ಅವನನ್ನು ರಕ್ಷಿಸಬಹುದು. ಭಾರವಸ್ತುಗಳನ್ನು ಎಳೆಯಲೂ ಎತ್ತಲೂ ಇದೇ ಕುಣಿಕೆ ಗಂಟು ನೆರವಾಗುತ್ತದೆ. ನೀರಿನಲ್ಲಿ ಮುಳುಗಿ ಸಾಯುತ್ತಿದ್ದವರನ್ನು ಇದೇ ಗಂಟಿನಿಂದ ಪಾರುಮಾಡಿದ ನಿದರ್ಶನಗಳಿವೆ. ಸ್ವಾರಸ್ಯವೆಂದರೆ ಜೀರುಗುಣಿಕೆಯಂತೆ ಇದು ವ್ಯಕ್ತಿಯ ಗಂಟಲನ್ನೊ ಹೊಟ್ಟೆಯನ್ನೊ ಬಿಗಿದು ಉಸಿರು ಕಟ್ಟಿಸುವುದಿಲ್ಲ. ಅಂದರೆ ಮೊದಲು ಹಾಕಿದ ಬಳೆ ಗಾತ್ರದಲ್ಲಿ ವ್ಯತ್ಯಾಸವಾಗುವುದಿಲ್ಲ.
ಹಗ್ಗ, ಹುರಿಗಳ ಉದ್ದವನ್ನು ಸಣ್ಣದಾಗಿಸುವುದು
[ಬದಲಾಯಿಸಿ]ಹಗ್ಗ, ಹುರಿಗಳನ್ನು ಕತ್ತರಿಸಿ ತುಂಡುಮಾಡುವುದು ಮಿತವ್ಯಯವಲ್ಲ. ಅದು ಹೆಚ್ಚು ಉದ್ದವಾಗಿದ್ದ ಪಕ್ಷದಲ್ಲಿ ಅದನ್ನು ಸಣ್ಣದನ್ನಾಗಿ ಮಾಡಿಕೊಳ್ಳವುದಕ್ಕೆ ಎರಡು ಗಂಟು ಇವೆ-ತುಂಡು ಗಂಟು (ಷೀಪ್‌ಷ್ಯಾಂಕ್), ಬೆಸ್ತ ಗಂಟು (ಫಿಷರ್‌ಮನ್ಸ್ ನಾಟ್). ಹಗ್ಗವನ್ನು 1 ನೆಯ ಚಿತ್ರದಲ್ಲಿರುವಂತೆ ಮಡಿಸಿ, 2ನೆಯದರಂತೆ ಎರಡು ಕಡೆಯಲ್ಲೂ ಮಡಿಕೆಯ ಸುತ್ತ ಬಿಡಿ ತುಂಡುಗಳಿಂದ ಗೂಲೆ ಹಾಕಿ ಬಿಗಿಮಾಡಿದರೆ ಹಗ್ಗ ಸಣ್ಣದಾಗುತ್ತದೆ. ಇದೇ ತುಂಡುಗಂಟು. ಎರಡು ಹುರಿಗಳನ್ನು ಕೂಡಿಸುವುದಕ್ಕೆ ಬೆಸ್ತಗಂಟು ನೆರವಾಗುತ್ತದೆ. ಡಾಗ್‍ಶ್ಯಾಂಕ್ ಎನ್ನುವುದು ತುಂಡು ಗಂಟಿನ ಒಂದು ರೂಪಾಂತರವಾಗಿದ್ದು ಇದು ತಾನು ಸೃಷ್ಟಿಸುವ ಜೋಲುಮಂಚದಂತಹ ಅಂತರಕ್ಕೆ ಹೆಚ್ಚಾಗಿ ಉಪಯುಕ್ತವಾಗಿದೆ.[೭]
ಕುಣಿಕೆ ಭದ್ರವಾಗಿ ನಿಲ್ಲುವ ಇನ್ನೊಂದು ಗಂಟೂ ಉಂಟು. ಅದಕ್ಕೆ ಮಧ್ಯವರ್ತಿಗಂಟು (ಮಿಡ್ಲ್‌ಮನ್ಸ್ ನಾಟ್) ಎಂದು ಹೆಸರು. ಇದಕ್ಕೆ ಶ್ಯಾಮ್‍ರಾಕ್ ಗಂಟು ಎಂದೂ ಕರೆಯುತ್ತಾರೆ.[೮] ಚಿತ್ರದಲ್ಲಿರುವಂತೆ ಬಳೆಯ ಮುಂಭಾಗಕ್ಕೆ ಗೊತ್ತಾಗುವಂತೆ ಎರಡು ಮೇಲ್ಮೈಗಂಟನ್ನು ಹಾಕಿ ಅದನ್ನು ಒತ್ತೊತ್ತಾಗಿ ಸರಿಸತಕ್ಕದ್ದು.
ಎಷ್ಟೋ ವೇಳೆ ಹಗ್ಗಕ್ಕಾಗಿ ಕಾಯುವುದಕ್ಕೆ ಸಮಯ ಇರುವುದಿಲ್ಲ. ನದಿ ದಾಟಿಸಲು ಬೊಂಬಿನಿಂದ ತಾತ್ಕಾಲಿಕ ತೆಪ್ಪ ಕಟ್ಟಬೇಕಾದರೆ ದಡದಲ್ಲಿ ಬೆಳೆದಿರುವ ಹಂಬು ಸಾಕು. ಅದರಿಂದ ಚಿತ್ರದಲ್ಲಿರುವಂತೆ ಗಂಟು ತಯಾರಿಸಬಹುದು. ಹಗ್ಗದಷ್ಟು ಲಲಿತವಾಗಿ ಹಂಬನ್ನು ಕೊಂಕಿಸಲಾಗುವುದಿಲ್ಲವಾಗಿ ಸುತ್ತುಗಳನ್ನು ಹಾಕಿ ಅದನ್ನು ಭದ್ರಗೊಳಿಸಬೇಕಾಗುತ್ತದೆ.
ತೂಕವಾದ ಮೂಡೆ, ತೊಲೆ ಮುಂತಾದುವನ್ನು ಮೇಲಕ್ಕೆತ್ತಲೂ ಕೆಳಕ್ಕೆ ಇಳಿಸಲೂ ಜೋಲಿ ಅಥವಾ ಜೋತ (ಸ್ವಿಂಗ್) ಅವಶ್ಯಕವಾಗುತ್ತದೆ. ಅದರಲ್ಲಿ ಎರಡು ಬಳೆಗಳಿರುತ್ತವೆ. ಅವುಗಳಲ್ಲಿ ಮೇಲ್ಮೈಗಂಟೂ ಉದ್ದಭಾಗವೂ ಇರುತ್ತವೆ. ಎತ್ತುವ ಸಾಧನ (ಕ್ರೇನ್) ಇದ್ದ ಪಕ್ಷದಲ್ಲಿ ಅದರ ಕೊಕ್ಕೆಗೆ ಮೂಡೆಯನ್ನು, ಹಿಡಿದುಕೊಂಡಿರುವ ಹಗ್ಗವನ್ನು ಸಿಕ್ಕಿಸುವುದು ಸುಲಭ. ಮೂಡೆಯ ಸುತ್ತ ಹಗ್ಗ ಎರಡು ಸಾರಿ ಬರುವಂತೆ ಮಾಡಿ ಹಗ್ಗವನ್ನು ಬಳೆಯೊಳಗೆ ಸೆಳೆದುಕೊಂಡು ಅದರ ಎರಡು ಕೊನೆಯನ್ನು ಸೇರಿಸಿ ಕಟ್ಟಿದರೆ ಸಾಕು. ಈ ಜೋಲಿಗೆ ಹಿಂದಣದಂತೆ ಯಾವ ಗಂಟೂ ಬೇಕಿಲ್ಲ; ಹೆಚ್ಚು ಗೂಲೆಯೂ ಬೇಕಿಲ್ಲ. ಮನುಷ್ಯನ ಜಾಣ್ಮೆಗೂ ಕರಕೌಶಲಕ್ಕೂ ಇದೊಂದು ಉದಾಹರಣೆ.
ಲ್ಯಾಷಿಂಗ್
[ಬದಲಾಯಿಸಿ]ನಾನಾ ಬಗೆಯ ಬಿಗಿತಗಳುಂಟು (ಲ್ಯಾಷಿಂಗ್). ಲಾಟೀನು ತೂಗುಹಾಕುವುದಕ್ಕೆ ಮೂರು ದೊಣ್ಣೆಗಳಿಂದ ಒಂದು ಮೂರುಕಾಲಿನ ನಿಲುವನ್ನು ಸಿದ್ಧಪಡಿಸುತ್ತಾರೆ. ಇಲ್ಲಿನ ಬಿಗಿತ, ಕಾಲುಗಳು ಅರಳಿ ನಿಲ್ಲಲು ಆಸ್ಪದವೀಯುವುದಷ್ಟು ಅಳ್ಳಕವಾಗಿರಬೇಕು; ಸಡಿಲ ಬೀಳದಷ್ಟು ಬಿಗಿಯಾಗಿಯೂ ಇರಬೇಕು. ಮೂರು ದೊಣ್ಣೆಗಳನ್ನೂ ಕೂಡಿಸಿ ಹಿಡಿದುಕೊಂಡು, ದಪ್ಪ ಹುರಿಯಿಂದಲೊ ಸಣ್ಣಹಗ್ಗದಿಂದಲೊ ಮೊದಲು ಕೊಟ್ಟಿಗೆ ಗೂಲೆಯನ್ನು ಒಂದು ದೊಣ್ಣೆಯ ಸುತ್ತ ಹಾಕಿ, ಅಮೇಲೆ ಹುರಿ ಒಂದರ ಮೇಲೆ ಇನ್ನೊಂದರ ಕೆಳಗೆ ಮೂರನೆಯದರ ಮೇಲೆ ಬರುವಂತೆ ಹಲವು ಸಾರಿ ಪೂರ್ತಿ ಬಿಗಿ ಮಾಡದೆ ಸುತ್ತಿ, ಅನಂತರ ಎರಡು ದೊಣ್ಣೆಗಳ ಮಧ್ಯೆ ಕೆಲವು ಸುತ್ತುಗಳನ್ನು ತಿರುವಿ, ಕೊನೆಗೆ ಕೊಟ್ಟಿಗೆ ಗಂಟು ಹಾಕಬೇಕು. ಇದಕ್ಕೆ ಸಂಖ್ಯೆ ಎಂಟರ ಬಿಗಿತ (ಫಿಗರ್ ಆಫ್ ಎಯ್ಟ್ ಲ್ಯಾಷಿಂಗ್) ಎಂದು ಹೆಸರು.
ಇನ್ನೊಂದು ಚೌಕ ಬಿಗಿತ (ಸ್ಕ್ವೇರ್ ಲ್ಯಾಷಿಂಗ್). ನೆಟ್ಟಗೆ ನಿಂತ ಕಂಬಕ್ಕೆ ಅಡ್ಡ ತೊಲೆ ಬಿಗಿಯುವುದಕ್ಕೆ ಇದು ಅನುಕೂಲ. ಕೊಟ್ಟಿಗೆ ಗೂಲೆಯಿಂದ ಬಿಗಿತೆಯ ಪ್ರಾರಂಭ, ಮುಕ್ತಾಯ. ಮಧ್ಯೆ ತೊಲೆಗಳ ಕೂಡಣೆಜಾಗದಲ್ಲಿ ಕೆಳಗೆ, ಮೇಲೆ, ಆ ಕಡೆ, ಈ ಕಡೆ ಕ್ರಮವಾಗಿ ಹಗ್ಗದ ಸುತ್ತುಗಳನ್ನು ಒತ್ತೊತ್ತಾಗಿಯೂ ಬಿಗಿಯಾಗಿಯೂ ಜೋಡಿಸತಕ್ಕದ್ದು. ನಯನಮನೋಹರವಾದ ಬಿಗಿತ ಇದು.
ತೊಲೆಗಳು ಕೋನಕೋನವಾಗಿ ಬಂಧಿತವಾಗಬೇಕಾದಾಗ ಮೂಲೆ ಬಿಗಿತೆಯನ್ನು (ಡಯಾಗ್ನಲ್ ಲ್ಯಾಷಿಂಗ್) ಬಳಸಿಕೊಳ್ಳಬೇಕು. ಕೊಟ್ಟಿಗೆ ಗೂಲೆಯೇ ಅದಕ್ಕೆ ಮುಖ್ಯವಾದ್ದು. ಸುತ್ತುವಿಕೆಗಳು ಕೋಲುಗಳನ್ನು ಕರ್ಣಮಾರ್ಗವಾಗಿ ದಾಟುವುದರಿಂದ ಇದಕ್ಕೆ ಈ ಹೆಸರು ಬರಲು ಕಾರಣವಾಗಿದೆ.[೯]
ಹಗ್ಗಗಳನ್ನು ಜಂಟಿಮಾಡುವುದು
[ಬದಲಾಯಿಸಿ]ಎರಡು ಹಗ್ಗಗಳನ್ನು ಜಂಟಿಮಾಡುವಲ್ಲಿ ಹಗ್ಗ ಎರಡೂ ಒಂದೇ ದಪ್ಪವಾದರೆ ಸಮಗಂಟು (ರೀಫ್ ನಾಟ್) ಯುಕ್ತವಾದದ್ದು. ಇದು ಮಕ್ರಾಮಿ ಬಟ್ಟೆಗಳ ಪ್ರಧಾನ ಗಂಟುಗಳಲ್ಲಿ ಒಂದಾಗಿದೆ.[೧೦] ಒಂದು ಹಗ್ಗದ ಬಳೆಯೂ, ಬಿಡಿತುಂಡುಗಳೂ ಇನ್ನೊಂದರ ಕೆಳಗೆ ಮೇಲೆ ಪುನಃ ಕೆಳಗೆ ನುಸಿಯಂತೆ ಎಚ್ಚರಿಕೆಯಿಂದ ಇದನ್ನು ನಿರ್ವಹಿಸಬೇಕು; ಇನ್ನೊಂದು ಹಗ್ಗ ವಿಲೋಮವಾಗಿ ಮೇಲೆ ಕೆಳಗೆ ಪುನಃ ಮೇಲೆ ಬರುತ್ತದೆ. ಗಂಟುಗಳೆಲ್ಲೆಲ್ಲ ಇದು ಪ್ರಾಯಶಃ ಅತ್ಯಂತ ಸುಂದರ. ಬ್ಯಾಂಡೇಜಿನ ಎರಡು ಕೊನೆಗಳನ್ನು ಕೂಡಿಸುವುದಕ್ಕೂ ವೈದ್ಯರು ಉಪಯೋಗಿಸುವ ಶ್ರೇಷ್ಠ ಗಂಟು ಇದು. ಶಿಲ್ಪದಲ್ಲಿ ಅಲಂಕಾರಕ್ಕೂ ಇದೇ ಬರುತ್ತದೆ. ಇದಕ್ಕೆ ಪವಿತ್ರದ ಗಂಟು ಎಂಬ ಅಂಕಿತವು ದತ್ತವಾಗಿದೆ.
ಸಮಗಂಟನ್ನು ಹಾಕಹೋಗಿ ಒಂದು ಕೈ ತಪ್ಪಿದರೆ ವಿಷಮ ಗಂಟು ಅಥವಾ ಅಜ್ಜಿಗಂಟು (ಗ್ರ್ಯಾನಿ ನಾಟ್) ಆಗುತ್ತದೆ. ಅಜ್ಜಿಗಂಟು ಕನಿಷ್ಠಪಕ್ಷ ೧೮೪೯ರಷ್ಟು ಹಳೆಯದು. ಇದು ಮಹಿಳೆಯರು ಅಥವಾ ನೆಲವಾಸಿಗಳು ಕಟ್ಟುತ್ತಿದ್ದ ಸಹಜ ಗಂಟಾದ್ದರಿಂದ ಇದಕ್ಕೆ ಈ ಹೆಸರು.[೧೧][೧೨] ತುಂಡುಗಳು ಕುಣಿಕೆಯಲ್ಲಿ ಒಂದು ಮೇಲೆ ಒಂದು ಕೆಳಗೆ ಇರುವುದರಿಂದ ಗಂಟು ತೊಡಕಾಗುವ ಸಂಭವವುಂಟು. ಇದನ್ನು ಬಿಚ್ಚುವುದಂತೂ ಪ್ರಯಾಸಕರ.
ಎರಡು ಹಗ್ಗಗಳನ್ನು ಜಂಟಿಸುವ ಗಂಟಿಗೆ ಬೆಂಡ್ ಎನ್ನುತ್ತಾರೆ.[೧೩] ಜಂಟಿಸಬೇಕಾದ ಹಗ್ಗಗಳಲ್ಲಿ ಒಂದು ದಪ್ಪ ಇನ್ನೊಂದು ಸಣ್ಣ ಆದಲ್ಲಿ ಸಮಗಂಟುನೇರ್ಪಲ್ಲ. ಆಗ ಜಂಟಿಗಂಟನ್ನು (ಷೀಟ್ ಬೆಂಡ್) ಬಳಸಬೇಕು. ಇಲ್ಲಿ ಎ ದಪ್ಪ ಹಗ್ಗ ಅಥವಾ ಹೊರಜಿ ಅಥವಾ ನೌಕೆಯ ಹಾಯಿಪಟದ ಒಂದು ಮೂಲೆ; ಅದನ್ನು ಕೊಂಚ ಕೊಂಕಿಸಬಹುದೇ ವಿನಾ ಮಡಿಚಿ ನುಸಿಸಿ ಗಂಟುಹಾಕಲಾಗುವುದಿಲ್ಲ. ಬಿ ಸಣ್ಣ ಹಗ್ಗ; ಅದನ್ನು ಚಿತ್ರದಲ್ಲಿರುವಂತೆ ಎ ಯ ಕೊಂಕಿನ ಕೆಳಗೆ, ಮೇಲೆ, ಕೆಳಗೆ, ಮೇಲೆ, ಪುನಃ ಕೆಳಗೆ ತೂರಿಸಿ ಎರಡರಲ್ಲಿ ದೊಡ್ಡ ತುಂಡನ್ನು ಎಳೆದು ಬಿಗಿಮಾಡಿದರೆ ಸಾಕಷ್ಟು ಭದ್ರದ ಗಂಟಾಗುತ್ತದೆ. ಸ್ವಲ್ಪವಾದರೂ ಬಲ ಇರಬೇಕಾದರೆ, ಎರಡೂ ಮುಕ್ತ ಕೊನೆಗಳು ಗಂಟಿನ ಒಂದೇ ಕಡೆ ಅಂತ್ಯಗೊಳ್ಳಬೇಕು.[೧೪]
ಇನ್ನೂ ಬಿಗಿ ಬೇಕಾದರೆ ಕ್ಯಾರಿಕ್ ಜಂಟಿ ಗಂಟು ಇದ್ದೇ ಇದೆ. ದಪ್ಪ ಹಗ್ಗದ ಬಿಡಿತುಂಡುಗಳು ಒಂದರ ಮೇಲೊಂದು ಹಾಯುವುದರಿಂದ ಸಣ್ಣ ಹಗ್ಗ ಒಂದರ ಮೇಲೆ ಇನ್ನೊಂದರ ಕೆಳಗೆ ಸರಿಯುತ್ತದೆ. ಬಹಳ ಭಾರ ಹೊತ್ತರೂ ಅಥವಾ ನೀರಿನಿಂದ ತೊಯ್ದ ನಂತರವೂ ಇದು ಸಿಕ್ಕಿಕೊಳ್ಳುವುದಿಲ್ಲ.[೧೫]
ಹಗ್ಗಗಳ ತುದಿಗಳನ್ನು ಕಟ್ಟುವುದು
[ಬದಲಾಯಿಸಿ]ಹಗ್ಗದ ತುದಿಯಲ್ಲಿ ಎಳೆಗಳು ಸಡಿಲ. ಬೇರೆ ಬೇರೆಯಾಗುವ ಅಪಾಯ ಹೆಚ್ಚಾಗಿದೆ; ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಬೇಗ ಹಗ್ಗ ಸೀಳಿ ಎಳೆಎಳೆಯಾಗಿ ನಿಷ್ಪ್ರಯೋಜಕವಾಗುತ್ತದೆ. ಹಾಗಾಗದಂತೆ ನೋಡಿಕೊಳ್ಳಲು ಕೆಲವು ಉಪಾಯಗಳಿವೆ. ಅವುಗಳಲ್ಲಿ ಹುರಿ ಸುತ್ತಿಕೆ (ಹ್ವಿಪಿಂಗ್) ಒಂದು. ಹಗ್ಗದ ತುದಿಭಾಗದ ಮೇಲೆ ಟ್ವೈನ್ ದಾರವನ್ನು ಇರಿಸಿ, ಒಂದು ಕೊನೆಯನ್ನು ಗೂಲಸುಮಾಡಿ ಇನ್ನೊಂದು ಕೊನೆಯಿಂದ ದಾರವನ್ನು ಹಗ್ಗದ ಸುತ್ತ ಸುತ್ತುತ್ತ ಕೆಳಗಿಂದ ಮೇಲಕ್ಕೆ ಹೋಗಿ ಅಲ್ಲಿರುವ ಗೂಲಸಿನೊಳಕ್ಕೆ ದಾರದ ತುದಿಯನ್ನು ತೂರಿಸಿ ಕೆಳಗಿರುವ ಕೊನೆಯನ್ನು ಎಳೆದರೆ, ಹಗ್ಗದ ತುದಿಗೆ ಟ್ವೈನ್‌ದಾರದ ಗಟ್ಟಿ ಹೊರಮೈ ಲಭಿಸುತ್ತದೆ. ಇದರಿಂದ ಎಳೆಗಳಿಗೆ ಕ್ಷೇಮ. ಇದರ ಒಂದು ಬಗೆಯಾದ ಫ಼್ರೆಂಚ್ ಹ್ವಿಪಿಂಗ್‍ನ್ನು ಹಗ್ಗಗಳ ತುದಿಗಳು ಬಿಚ್ಚಿಕೊಳ್ಳುವುದನ್ನು ತಡೆಯಲು, ಜೊತೆಗೆ, ಅಡ್ಡಕಂಬಿಗಳ ಮೇಲೆ ಬಿಗಿಹಿಡಿತವನ್ನು ಬಳಸಲಾಗುತ್ತದೆ.[೧೬]
ಇದಕ್ಕಿಂತ ಹೆಚ್ಚು ಬಲವುಳ್ಳದ್ದೂ ಚೆಲುವುಳ್ಳದ್ದೂ ಆದ ಜಡೆ ಹೆಣೆಯುವ ವಿಧಾನದ ಗಂಟು; ಅದಕ್ಕೆ ಸಿಂಗಲ್ ವಾಲ್‌ನಾಟ್ ಎಂದು ಹೆಸರು.[೧೭] ಹಗ್ಗದ ತುದಿಯಲ್ಲಿ ಸ್ವಲ್ಪ ದೂರ ಎಳೆ ಬಿಡಿಸಿಕೊಂಡು ಅವನ್ನು ಒಂದರ ಒಳಗೆ ಮಗ್ಗುಲಿನದು ತೂರುವಂತೆ ಮಾಡುತ್ತ ಹೋಗಿ, ಭದ್ರವಾಗಿ ಬಿಗಿದೆಳೆದು, ಕಟ್ಟ ಕಡೆಯಲ್ಲಿ ಎಳೆಗಳ ಅಂಚುಗಳನ್ನು ಕತ್ತರಿಸಬಹುದು. ಎಳೆಗಳನ್ನು ಕಡೆಯಲ್ಲಿ ಕಿರೀಟದಂತೆ ರೂಪಿಸಬೇಕು.
ಚಿತ್ರದಲ್ಲಿ ಡಬ್ಬಲ್ ವಾಲ್ ನಾಟ್ ಹೆಣಿಗೆ ಮತ್ತು ಕಿರೀಟಗಳನ್ನು ಕಾಣಬಹುದು.
ಇವೇ ಅಲ್ಲದೆ ಇನ್ನೂ ಹತ್ತೆಂಟು ವಿಧದ ಗಂಟುಗಳುಂಟು. ಕೆಲವು ಮಕ್ಕಳ ಆಟಕ್ಕೆ ಬರುತ್ತವೆ; ಮತ್ತೆ ಕೆಲವು ವಿನೋದ ವ್ಯಾಪಾರಕ್ಕೆ ಬರುತ್ತವೆ; ಮತ್ತೂ ಕೆಲವು ಜಾದೂಗಾರರ ಮಾಯಮಂತ್ರಕ್ಕೆ ಬರುತ್ತವೆ. ಅವುಗಳನ್ನು ಇಲ್ಲಿ ವಿವರಿಸಿಲ್ಲ.
ವಿಜ್ಞಾನದ ರೀತ್ಯ ಭೌತಿಕ ರೇಖೆ ಶುದ್ಧ ವರ್ತುಲವಾಗದೆ ತನ್ನ ಕೊನೆಗಳನ್ನು ಕಳೆದುಕೊಂಡು ಅನಂತ್ಯವಾಗುವುದೇ ಗಂಟು. ಗಂಟುಗಳ ತತ್ತ್ವವನ್ನು ಮೊದಲು ಪ್ರಸ್ತಾಪಿಸಿದಾಗ ಲಿಸ್ಟಿಂಗ್, 1847ರಲ್ಲಿ ಆತ ಹೊರತಂದ ಒಂದು ಗ್ರಂಥದಲ್ಲಿ ಕೆಲವು ಸರಳ ಗಂಟುಗಳ ವಿವರಗಳಿವೆ. ದಾರದ ಗಂಟು ಸಮತಲದ ಮೇಲೆ ಪ್ರಕ್ಷೇಪಣಗೊಂಡಲ್ಲಿ ಅದರ ಸುತ್ತುಕಗಳು ಅನ್ಯೋನ್ಯವಾಗಿ ಯಾವ ರೀತಿಯಲ್ಲಿವೆ, ಎಂಬುದನ್ನು ಅರಿಯಬಹುದು ಎಂದು ಅವನ ವಾದ. ಚಿತ್ರದಲ್ಲಿರುವುವು ಬಲಗೈ ಮತ್ತು ಎಡಗೈ ತಿರಿಚಿನಿಂದಾದ ಗಂಟುಗಳು. ಒಂದು ಇನ್ನೊಂದರ ಕನ್ನಡಿ ಪ್ರತಿಬಿಂಬ. ಸ್ವಲ್ಪ ಪರಿಶೀಲನೆ ನಡೆಸಿ ಲಿಸ್ಟಿಂಗ್ ಆ ವಿಚಾರವನ್ನು ಅಲ್ಲಗೇ ಕೈಬಿಟ್ಟ.
1876-77 ರಂದು ಟೇಟ್ ಎಂಬ ಶಾಸ್ತ್ರಜ್ಞ ಪ್ರಕಟಿಸಿದ ಪ್ರಬಂಧದಲ್ಲಿ ಗಂಟುಗಳ ಚರ್ಚೆ ವಿಪುಲವಾಗಿ ಬಂದಿದೆ. ಟೇಟ್‍ಗೆ ಲಿಸ್ಟಿಂಗನ ಅಭಿಪ್ರಾಯಗಳು ಅಷ್ಟಾಗಿ ತಿಳಿದಿರಲಿಲ್ಲ. ವಕ್ರರೇಖೆ ತಿರಿಚಿಕೊಳ್ಳುವಾಗ ಉಂಟಾಗುವ ಅಡ್ಡಹಾಯಿಕೆಗಳೆಷ್ಟು, ಗಂಟಿನ ಆಕೃತಿಗಳೆಷ್ಟು, ಎಂಬುದನ್ನು ಕೂಲಂಕಷವಾಗಿ ಪರಿಶೋಧಿಸಿ ಅಡ್ಡಹಾಯಿಕೆ 3,4,5,6 ಅಥವಾ 7 ಸಲ ಮಾತ್ರ ಆಗುತ್ತದೆಂದು ಈಗ ನಿರ್ಧರಿಸಿದೆ. ಚಿತ್ರದಲ್ಲಿ ನಾಲ್ಕು ಅಡ್ಡಹಾಯಿಕೆ; ಅವುಗಳ ಪ್ರತಿಬಿಂಬಗಳಲ್ಲೂ ಅಷ್ಟೆ. ರೇಖೆಗಳ ಜೋಡಣೆಯಲ್ಲಿ ಸಮಾನ ಲಕ್ಷಣಗಳಿರುವುದನ್ನು ವಿಶಿಷ್ಟ ಲಕ್ಷಣದ ಒಂದು ಆಕೃತಿಯನ್ನೂ ಈತ ತೋರಿ ಕೊಟ್ಟ. ಚಿತ್ರದಲ್ಲಿ ಗಂಟಾಗಲಿ ಜೋಡಣೆಯಾಗಲಿ ಇಲ್ಲ; ಆದರೂ ಮೂರೂ ಹೇಗೋ ಒಂದಾಗಿ ಕೂಡಿಕೊಂಡಿವೆ. ಜಾದೂಗಾರರು ಮೂರು ಸಣ್ಣ ಚಕ್ರಗಳನ್ನು ಒಂದರೊಳಗೊಂದು ಹೊಕ್ಕಿರುವಂತೆ ತೋರಿಸಿ ತಕ್ಷಣ ಅವು ಬೇರೆ ಬೇರೆಯೆಂದು ವಿಸ್ಮಯಗೊಳಿಸುವ ಕೈಚಳಕಕ್ಕೆ ಈ ಆಕೃತಿ ಆಧಾರ. ಗಂಟುತನ (ನಾಟಿನೆಸ್). ಗಂಟಾಗಿರುವಿಕೆ (ಬಿ-ನಾಟೆಡ್‌ನೆಸ್), ಗಂಟು ಒಳಗೊಂಡಿರುವಿಕೆ (ನಾಟ್‌ಫುಲ್‌ನೆಸ್) ಮುಂತಾದ ವಿಚಾರಗಳನ್ನು ಅಂಕಿಗಳ ಮೂಲಕ ಟೇಟ್ ವರ್ಣಿಸಿದ್ದಾನೆ.
ಉಲ್ಲೇಖಗಳು
[ಬದಲಾಯಿಸಿ]- ↑ Richards, Dave (2005). "Knot Break Strength vs Rope Break Strength". Nylon Highway. Vertical Section of the National Speleological Society (50). Retrieved 2010-10-11.
- ↑ Ashley, Clifford Warren (1944). The Ashley Book of Knots (in ಇಂಗ್ಲಿಷ್). Knopf Doubleday Publishing Group. ISBN 9780385040259.
- ↑ Helfman, Gene; Collette, Bruce B.; Facey, Douglas E.; Bowen, Brian W. (2009-04-03). The Diversity of Fishes: Biology, Evolution, and Ecology (2nd ed.). Wiley–Blackwell. pp. 234–236. ISBN 978-1-4051-2494-2.
- ↑ Day, Cyrus Lawrence (1986), The Art of Knotting and Splicing (4th ed.), Annapolis: Naval Institute Press, pp. 94–95
- ↑ Jepson, Jeff (2000), The Tree Climber's Companion (2nd ed.), Minneapolis: Beaver Tree Publishing, p. 78
- ↑ Cassidy 1985, The Klutz Book of Knots
- ↑ Sheepshank & Variants knots.neocities.org, accessed 26 August 2023
- ↑ Scouting Resources, A-Z of Knots: S-T, retrieved 2009-06-14
- ↑ Green, Larry (14 December 2014). "Traditional Diagonal Lashing". scoutpioneering.com.
- ↑ Ashley, pp. 399-400.
- ↑ Smyth, William Henry (2008) [1867], Sir Edward Belcher (ed.), The Sailor's Word-Book, Project Gutenberg, p. 346
- ↑ Melville, Herman (1849). Redburn.
- ↑ Chisholm, Hugh, ed. (1911). . Encyclopædia Britannica. Vol. 15 (11th ed.). Cambridge University Press. p. 871.
{{cite encyclopedia}}
: Cite has empty unknown parameters:|separator=
and|HIDE_PARAMETER=
(help) - ↑ "Knots and Splicing". ropeinc.com. Single Sheet Bend. Archived from the original on 24 September 2015.
- ↑ Clifford W. Ashley, The Ashley Book of Knots (New York: Doubleday, 1944), 262–263.
- ↑ "French Whipping". marinews.com. Archived from the original on 2014-06-06. Retrieved 2012-10-29.
- ↑ Verrill, A. Hyatt (1917). Knots, Splices and Rope Work, p84.. at Project Gutenberg.