ಬೃಹದಾರಣ್ಯಕ ಉಪನಿಷತ್
ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ |
ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ |
ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ |
ಬೃಹದಾರಣ್ಯಕ ಉಪನಿಷತ್ ಒಂದು ಪ್ರಮುಖ ಉಪನಿಷತ್ತು. ಇದನ್ನು ಸುಮಾರು ಕ್ರಿ.ಪೂ ೮ರಿಂದ ೭ನೇ ಶತಮಾನದಲ್ಲಿ ರಚಿಸಲಾಯಿತು.ಇದು ಶುಕ್ಲ ಯಜುರ್ವೇದದ ಕಾಣ್ವ ಶಾಖೆಗೆ ಸೇರಿದುದಾಗಿದೆ.
ಇದರಲ್ಲಿ ಮಧುಕಾಂಡ,ಯಾಜ್ಞವಲ್ಕೀಯ ಕಾಂಡ ಮತ್ತು ಖಿಲಕಾಂಡ ಎಂದು ಮೂರು ಕಾಂಡಗಳೂ ಆರು ಅಧ್ಯಾಯಗಳೂ ಇವೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಆತ್ಮವಿದ್ಯೆಯ ವಿಚಾರವಾಗಿ ವಿವೇಚನೆ,ವಿವರಣೆ ಹಾಗೂ ವಿಶದೀಕರಣಗಳಿವೆ.ಈ ಹೆಸರು ಪಾಣಿನಿಗಿಂತ ಈಚೆಗೆ ಬಂದ ಶಬ್ದದಿಂದ ಬಂದಿದೆ. ಇದನ್ನು ಬೇರೆ ಬೇರೆ ಕಾಲದಲ್ಲಿದ್ದ ಅನೇಕರು ರಚಿಸಿದ್ದಾರೆ. ಇದರ ಸಂಗ್ರಹವಾದದ್ದು ಛಾಂದೋಗ್ಯಕ್ಕಿಂತ ಈಚೆಗೆ. ಇದು ಶುಕ್ಲ ಯಜುರ್ವೇದಕ್ಕೆ ಸೇರಿದುದು. ಇದರ ಅವಾಂತರ ಭಾಗಗಳನ್ನು ಶತಪಥ ಬ್ರಾಹ್ಮಣದ ಖಿಲಭಾಗಗಳೆಂದು ಎಣಿಸಲಾಗಿತ್ತು. ಆರು ಅಧ್ಯಾಯಗಳೂ ಒಟ್ಟು 57 ಬ್ರಾಹ್ಮಣಗಳೂ ಇವೆ. 5ನೆಯ ಅಧ್ಯಾಯದ ಆರಂಭದಲ್ಲಿ ಬರುವ ‘ಪೂರ್ಣಮದಃ, ಪೂರ್ಣಮಿದಂ’ ಎಂಬುದು ಇದರ ಶಾಂತಿಮಂತ್ರ. ಇದು ಗದ್ಯಮಯವಾಗಿದೆ. ಇದರಲ್ಲಿ ಭಿನ್ನ ಭಿನ್ನವಾದ ವಂಶ ವಿವರಣೆಗಳಿವೆ. ಮಧ್ಯೆ ಮಧ್ಯೆ ಪ್ರಮಾಣ ಶ್ಲೋಕಗಳಿವೆ. ಒಟ್ಟು 3 ಕಾಂಡಗಳೂ ಆರು ಅಧ್ಯಾಯಗಳೂ ಇವೆ.
ಮೊದಲ ಅಧ್ಯಾಯದಲ್ಲಿ ಯಜ್ಞಾಶ್ವದ ವರ್ಣನೆ ಇದೆ. ಈ ಅಶ್ವವೇ ವಿರಾಟ್ಪುರುಷನೆಂದೂ ಆತ್ಮವಸ್ತುವೇ ಸರ್ವಕ್ಕಿಂತ ಶ್ರೇಷ್ಠವೆಂದೂ ಪ್ರೇಯವೆಂದೂ ತಿಳಿಸಲಾಗಿದೆ.
ದ್ವಿತೀಯಾಧ್ಯಾಯದಲ್ಲಿ ದೃಪ್ತಬಾಲಾಕಿ, ಗಾರ್ಗ್ಯ ಮತ್ತು ಅಜಾತಶತ್ರು-ಇವರಲ್ಲಿ ಆತ್ಮವಸ್ತುವನ್ನು ಕುರಿತು ನಡೆದ ಸಂವಾದವಿದೆ. ಇದಲ್ಲದೆ ಯಾಜ್ಞವಲ್ಕ್ಯ ಮತ್ತು ಮೈತ್ರೇಯಿ ಇವರ ಸುಪ್ರಸಿದ್ಧ ಸುಂದರ ಸಂವಾದವಿದೆ. ಸುಂದರವಾದ ಉಪಮಾನಗಳಿಂದ ಬ್ರಹ್ಮ ಸರ್ವಕ್ಕೂ ಏಕಾಯನವಾಗಿದೆ ಎಂಬುದನ್ನೂ ಜೇಡರಹುಳುವಿನ ನಿದರ್ಶನದಿಂದ ಭಗವಂತನೇ ಸಮಸ್ತಕ್ಕೂ ಕಾರಣ ಎಂಬುದನ್ನೂ ವರ್ಣಿಸಿ ಮಹೋನ್ನತ ಉಪದೇಶವನ್ನು ನೀಡಲಾಗಿದೆ. ಇದೇ ಅಧ್ಯಾಯದಲ್ಲಿ ಮಧುವಿಧ್ಯೆಯ ವಿವರಣೆಯೂ ಕೊನೆಯ ಭಾಗದಲ್ಲಿ ವಂಶಕ್ರಮ ನಿರೂಪಣೆಯೂ ಇವೆ.
3ನೆಯ ಅಧ್ಯಾಯದಲ್ಲಿ ಜನಕರಾಜನ ಸಭೆಯಲ್ಲಿ ಯಾಜ್ಞವಲ್ಕ್ಯರಿಗೆ ತತ್ತ್ವಜ್ಞರು ಪ್ರಶ್ನೆಗಳನ್ನು ಕೇಳಿ ಪರಾಭವ ಹೊಂದಿದ್ದು, ಗಾರ್ಗಿ ವಾಚಕ್ನವೀ ಎಂಬ ಬ್ರಹ್ಮವಾದಿನಿ ಈ ಚರ್ಚೆಯಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಯಾಜ್ಞವಲ್ಕ್ಯರಿಗೆ ಜನಕರಾಜನ ಸಂಭಾವನೆ ಸಲ್ಲುವುದು-ಇವನ್ನು ಸ್ವಾರಸ್ಯವಾಗಿ ಚಿತ್ರಿಸಲಾಗಿದೆ.
4ನೆಯ ಅಧ್ಯಾಯದಲ್ಲಿ ಜನಕನಿಗೆ ಯಾಜ್ಞವಲ್ಕ್ಯ ಮಾಡಿದ ಆತ್ಮತತ್ತ್ವ ವಿವರಣೆ ಈ ಉಪನಿಷತ್ತಿಗೇ ರತ್ನಪ್ರಾಯವಾಗಿದೆ. ಮೈತ್ರೇಯಿಯ ವೃತ್ತಾಂತವೂ ಬಂದಿದೆ.
5ನೆಯ ಅಧ್ಯಾಯದಲ್ಲಿ ಪೂರ್ಣಮಿದಂ ಎಂಬ ಮಂತ್ರದ ಆವೃತ್ತದಿಂದ ಪ್ರಾರಂಭವಾಗಿ ನೀತಿ, ಸೃಷ್ಟಿ, ಪರಲೋಕ ಇವುಗಳ ಅನೇಕ ವಿಚಾರಗಳಿವೆ. ದಯೆ, ದಾನ, ಧರ್ಮ ಇವುಗಳ ಪ್ರಶಂಸೆ ಇದೆ.
6ನೆಯ ಅಧ್ಯಾಯದಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ ಬಂದಿರುವ ಆತ್ಮದ (ಪ್ರಾಣ) ಶ್ರೇಷ್ಠತೆಯನ್ನೇ ಪುನಃ ಪ್ರಸ್ತಾಪಿಸಿ ಪಂಚೇಂದ್ರಿಯಗಳನ್ನು ಕುರಿತ ರೂಪಕವನ್ನು ಕೊಡಲಾಗಿದೆ. ಇದರಲ್ಲೂ ಶ್ವೇತಕೇತು ಜೈವಲಿಗಳ ದಾರ್ಶನಿಕ ಸಂವಾದ, ಜೈವಲಿಯ ಪಂಚಾಗ್ನಿ ವಿದ್ಯೆಯ ಉಪದೇಶಗಳು ಇವೆ.
ಗಮನಾರ್ಹ ಅಂಶಗಳು
[ಬದಲಾಯಿಸಿ]ಈ ಉಪನಿಷತ್ತಿನಲ್ಲಿ ಗಮನಾರ್ಹ ಅಂಶಗಳು ಇವು; ದೇವತೆಗಳಲ್ಲೂ ವರ್ಣಭೇದಗಳನ್ನು ನಿರೂಪಿಸಲಾಗಿದೆ. ಪುಷನ್ ಶೂದ್ರ, ಅಗ್ನಿ ಮಾತ್ರ ಬ್ರಾಹ್ಮಣ, ಇಂದ್ರಾದಿಗಳು ಕ್ಷತ್ರಿಯರು, ವೈಶ್ಯರು, ಕ್ಷತ್ರಿಯರು ಸರ್ವಶ್ರೇಷ್ಠರೆಂದೂ ಬ್ರಾಹ್ಮಣಹಿಂಸೆ ಮಹಾಪಾಪವೆಂದೂ ಹೇಳಲಾಗಿದೆ. ಅಹಿಂಸಾ ಪರಮೋಧರ್ಮಃ ಎಂಬ ತತ್ತ್ವ ಬೆಳೆಯುತ್ತ ಇತ್ತು. ಇದರಲ್ಲಿ ಉದಾಹರಿಸಲ್ಪಟ್ಟಿರುವ ಶ್ಲೋಕಗಳು ಸಂಹಿತೆಗಳಿಂದ ತೆಗೆದುಕೊಂಡವಾಗಿರದೆ ಬ್ರಹ್ಮವಾದಿಗಳೂ ಆಚಾರ್ಯರೂ ರಚಿಸಿದವಾಗಿವೆ.
ಪ್ರಸಿದ್ಧ ಶ್ಲೋಕ
[ಬದಲಾಯಿಸಿ]ಈ ಉಪನಿಷತ್ತಿನಲ್ಲಿರುವ ಪ್ರಸಿದ್ಧ ಶ್ಲೋಕ ಇಂತಿದೆ.
ಅಸತೋ ಮಾ ಸದ್ಗಮಯ
ತಮಸೋ ಮಾ ಜ್ಯೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿಃ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Brihadaranyak Upanishad Recitation by Pt. Ganesh Vidyalankar
- Multiple translations (Johnston, Nikhilānanda, Madhavananda)
- GRETIL etext Archived 2015-05-11 ವೇಬ್ಯಾಕ್ ಮೆಷಿನ್ ನಲ್ಲಿ.