ವಿಷಯಕ್ಕೆ ಹೋಗು

ಪ್ರಹ್ಲಾದಾಚಾರ್ಯ ಬಾಳಾಚಾರ್ಯ ಗಜೇಂದ್ರಗಡಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಹ್ಲಾದಾಚಾರ್ಯ ಬಾಳಾಚಾರ್ಯ ಗಜೇಂದ್ರಗಡಕರ ಭಾರತದ ೭ನೇ ಮುಖ್ಯ ನ್ಯಾಯಾಧಿಪತಿಗಳಾಗಿದ್ದರು (1964-1966). 1966 ರಿಂದ ಮುಂಬೈ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದರು.

ಜನನ, ವಿದ್ಯಾಭ್ಯಾಸ

[ಬದಲಾಯಿಸಿ]

ಜನನ 1901ರ ಮಾರ್ಚ್ 16ರಂದು ಮಹಾರಾಷ್ಟ್ರದ ಸತಾರದಲ್ಲಿ. ತಂದೆ ಬಾಳಾಚಾರ್ಯ ಅನಂತಾಚಾರ್ಯ.[] ತಾಯಿ ಲಕ್ಷ್ಮಿಬಾಯಿ. ಉತ್ತಮ ವಿದ್ಯಾರ್ಥಿಯಾಗಿದ್ದ ಇವರು ಮುಂಬೈ ವಿಶ್ವವಿದ್ಯಾಲಯದ ಎಂ.ಎ., ಎಲ್‌ಎಲ್.ಬಿ. ಪದವೀಧರು. 1922-1924ರಲ್ಲಿ ಇವರು ಡೆಕ್ಕನ್ ಕಾಲೇಜಿನಲ್ಲಿ ದಕ್ಷಿಣ ಫೆಲೊ ಆಗಿದ್ದರು. ಝಾಲಾ ವೇದಾಂತ್ ಬಹುಮಾನವನ್ನೂ ಭಗವಾನ್‌ದಾಸ್ ಪುರುಷೋತ್ತಮದಾಸ್ ಸಂಸ್ಕೃತ ವಿದ್ಯಾರ್ಥಿವೇತನವನ್ನೂ ಗಳಿಸಿದರು (1924).

ವೃತ್ತಿಜೀವನ, ಸಾಧನೆಗಳು

[ಬದಲಾಯಿಸಿ]

1926ರಲ್ಲಿ ಮುಂಬಯಿಯಲ್ಲಿ ವಕೀಲರಾದರು. 1945ರಲ್ಲಿ ಭಾರತ ಸರ್ಕಾರ ಇವರನ್ನು ಮುಂಬೈ ಉಚ್ಛನ್ಯಾಯಲಯದ ನ್ಯಾಯಾಧಿಪತಿಯನ್ನಾಗಿ ನೇಮಿಸಿತು. 1957ರಲ್ಲಿ ಇವರು ಪರಮೋಚ್ಚ ನ್ಯಾಯಾಲಯದ ನ್ಯಾಯಾಧಿಪತಿಯಾದರು. 1964ರಿಂದ 1966 ವರೆಗೆ ಭಾರತದ ಮುಖ್ಯ ನ್ಯಾಯಾಧಿಪತಿಯಾಗಿ ಕೆಲಸ ಮಾಡಿದರು. ಇದಲ್ಲದೆ ಬ್ಯಾಂಕ್ ಅವಾರ್ಡ್ ಆಯೋಗ (1955), ತುಟ್ಟಿಭತ್ಯ ಆಯೋಗ (1966-67), ಕಾರ್ಮಿಕರನ್ನು ಕುರಿತ ರಾಷ್ಟ್ರೀಯ ಆಯೋಗ (1967-69), ಜಮ್ಮು ಮತ್ತು ಕಾಶ್ಮೀರ ವಿಚಾರಣಾ ಆಯೋಗ (1968-68), ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಿಚಾರಣಾ ಸಮಿತಿ (1968-69) ಇವುಗಳ ಅಧ್ಯಕ್ಷರಾಗಿದ್ದರು. ಇವರು ವಿಶ್ವವಿದ್ಯಾಲಯಗಳ ಅನುದಾನ ಆಯೋಗದ ನಾಮಕರಣ ಸದಸ್ಯರು ಮತ್ತು ರಾಷ್ಟ್ರೀಯ ಐಕ್ಯ ಸಭೆಯ ಸದಸ್ಯರು, ಮುಂಬೈ ಏಷಿಯಾಟಿಕ್ ಸೊಸೈಟಿ, ರಾಮಕೃಷ್ಣ ಮಿಷನ್, ಸ್ವಸ್ತಿಕ್ ಲೀಗ್ ಇವುಗಳ ಅಧ್ಯಕ್ಷರಾಗಿದ್ದರು. ಇವರು ಅನೇಕ ಸಂಘ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳೊಂದಿಗೆ ಸಂಬಂಧ ಹೊಂದಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನದ ಮುಖ್ಯ ನ್ಯಾಯಾಧೀಶರ ಆಮಂತ್ರಣದ ಮೇರೆಗೆ 1965ರಲ್ಲಿ ಆ ದೇಶಕ್ಕೆ ಭೇಟಿ ನೀಡಿದ್ದರು. ಅದೇ ವರ್ಷ ಲಂಡನ್ನಿನಲ್ಲಿ ನಡೆದ ಮ್ಯಾಗ್ನ ಕಾರ್ಟ ಉತ್ಸವಗಳಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದರು, ಭಾರತೀಯ ನಿಯೋಗದ ನಾಯಕರಾಗಿ 1965ರ ಜುಲೈ ತಿಂಗಳಲ್ಲಿ ಸೋವಿಯತ್ ದೇಶಕ್ಕೂ, ಆಗಸ್ಟ್ ತಿಂಗಳಲ್ಲಿ ಕಾಮನ್‌ವೆಲ್ತ್ ರಾಷ್ಟ್ರಗಳ ಸಭೆಯಲ್ಲಿ ಭಾಗವಹಿಸಲು ಆಸ್ಟ್ರೇಲಿಯಕ್ಕೂ ಪ್ರವಾಸ ಕೈಗೊಂಡಿದ್ದರು. ಲಾಲಾ ಲಜಪತ ರಾಯ್ ಸ್ಮಾರಕ ಉಪನ್ಯಾಸಗಳು (1964), ಸರದಾರ್ ಪಟೇಲ್ ಸ್ಮಾರಕ ಉಪನ್ಯಾಸಗಳು (1966), ನಾಗಪುರ ವಿಶ್ವವಿದ್ಯಾಲಯ ವಿಸ್ತರಣೋಪನ್ಯಾಸಗಳು (1967), ನೈರೋಬಿ ವಿಶ್ವವಿದ್ಯಾಲಯಲ್ಲಿ ಗಾಂಧೀ ಸ್ಮಾರಕ ಉಪನ್ಯಾಸಗಳು (1968)-ಇವು ಗಜೇಂದ್ರಗಡಕರ್ ನೀಡಿರುವ ಕೆಲವು ಮುಖ್ಯ ಉಪನ್ಯಾಸಗಳು. ಇವುಗಳಲ್ಲೂ ಇತರ ಲೇಖನೋಪನ್ಯಾಸಗಳಲ್ಲೂ ರಾಷ್ಟ್ರದ ನ್ಯಾಯಿಕ ಸಮಸ್ಯೆಗಳನ್ನೂ, ಪ್ರಚಲಿತ ವಿಚಾರಗಳನ್ನೂ ವಿವೇಚಿಸಿದ್ದಾರೆ. ಇವರ ತೀರ್ಪುಗಳೂ, ನಿರ್ಣಯಗಳೂ, ಸಂವಿಧಾನ ನ್ಯಾಯ, ಕಾರ್ಮಿಕ ಕಾನೂನು, ಹಿಂದೂ ನ್ಯಾಯ ಇವುಗಳ ವಿಶಿಷ್ಟ ಕೊಡುಗೆಗಳಾಗಿವೆ. 1969ರಲ್ಲಿ ಇವರಿಗೆ ಸರ್ ಜಹಾಂಗೀರ್ ಫಾಂಡಿ ಪದಕ ಪ್ರಾಪ್ತಿವಾಯಿತು. ಕರ್ನಾಟಕದ ವಿಶ್ವವಿದ್ಯಾಲಯ ಇವರಿಗೆ ಎಲ್‌ಎಲ್.ಡಿ. ಪದವಿಯನ್ನಿತ್ತು ಗೌರವಿಸಿತು.

ಗಾಂಧಿ ತತ್ತ್ವದ ಆಧಾರದ ಮೇಲೆ, ಪರಿವರ್ತಶೀಲ ಹಾಗೂ ಪ್ರಗತಿಪರ ಸ್ವರೂಪದ ನ್ಯಾಯದ ಚೌಕಟ್ಟಿನಲ್ಲಿ, ಸಾಮಾಜಿಕ ಆರ್ಥಿಕ ಸಮಾನತೆಯ, ವ್ಯಕ್ತಿ ಸ್ವಾತಂತ್ರ್ಯನಿಷ್ಠ ಧರ್ಮಸಹಿಷ್ಣುತೆಯ ಸುಖೀಪ್ರಭುತ್ವದ ಕಲ್ಪನೆ ಇವರ ವೈಚಾರಿಕ ಪ್ರಜ್ಞೆಗೆ ಚೋದಕ ಶಕ್ತಿಯಾಗಿದೆ. ಅಂತೆಯೇ ಮೌಲ್ಯಗಳು ಇವರ ಕಾರ್ಯ ಚಟುವಟಿಕೆಗಳು ಮತ್ತು ಭಾಷಣಗಳಲ್ಲಿ ಹಾಸುಹೊಕ್ಕಾಗಿವೆ.

ಗ್ರಂಥಗಳು

[ಬದಲಾಯಿಸಿ]

ನಂದ ಪಂಡಿತನ ದತ್ತಕ ಮೀಮಾಂಸ ಎಂಬ ಸಂಸ್ಕೃತ ಗ್ರಂಥದ ಸಂಪಾದನೆ ಮತ್ತು ಇಂಗ್ಲಿಷ್ ಅನುವಾದ; ಲಾ, ಲಿಬರ್ಟಿ ಅಂಡ್ ಸೋಷಿಯಲ್ ಜಸ್ಟಿಸ್; ಕಾಶ್ಮೀರ್-ರೆಟ್ರೊಸ್ಪೆಕ್ಟ್ ಅಂಡ್ ಪ್ರಾಸೆಕ್ಟ್; ಜವಾಹರ್‌ಲಾಲ್ ನೆಹ್ರು-ಎ ಗ್ಲಿಂಪ್ಸ್ ಆಫ್ ದ ಮ್ಯಾನ್ ಅಂಡ್ ಹಿಸ್ ಟೀಚಿಂಗ್ಸ್; ದ ಕಾನ್ಸ್ಟಿಟೂಷನ್ ಆಫ್ ಇಂಡಿಯ-ಇಟ್ಸ್ ಫಿಲಾಸೊಫಿ ಅಂಡ್ ಬೇಸಿಕ್ ಪಾಸ್ಟ್ಯುಲೆಟ್ಸ್-ಇವು ಇವರು ಬರೆದಿರುವ ಪುಸ್ತಕಗಳು.

  • ಓಪನ್ ಲೈಬ್ರರಿ P. B. Gajendragadkar[]

ಉಲ್ಲೇಖಗಳು

[ಬದಲಾಯಿಸಿ]

ಗ್ರಂಥಸೂಚಿ

[ಬದಲಾಯಿಸಿ]
  • Sharma, B. N. Krishnamurti (2000). A History of the Dvaita School of Vedānta and Its Literature, 3rd Edition. Motilal Banarsidass (2008 Reprint). ISBN 978-8120815759.