ವಿಷಯಕ್ಕೆ ಹೋಗು

ಉಪನ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪನ್ಯಾಸವು ಒಂದು ನಿರ್ದಿಷ್ಟ ವಿಷಯದ ಬಗ್ಗೆ ಮಾಹಿತಿಯನ್ನು ಪರಿಚಯ ಮಾಡಿಸಲು ಅಥವಾ ಜನರಿಗೆ ಕಲಿಸಲು ಉದ್ದೇಶಿತವಾದ ಮೌಖಿಕ ನಿರೂಪಣೆ, ಉದಾಹರಣೆಗೆ ಒಬ್ಬ ವಿಶ್ವವಿದ್ಯಾಲಯ ಅಥವಾ ಕಾಲೇಜು ಶಿಕ್ಷಕನಿಂದ. ಮಹತ್ವದ ಮಾಹಿತಿ, ಇತಿಹಾಸ, ಹಿನ್ನೆಲೆ, ಸಿದ್ಧಾಂತಗಳು, ಮತ್ತು ಸಮೀಕರಣಗಳನ್ನು ತಿಳಿಸಿಕೊಡಲು ಉಪನ್ಯಾಸಗಳನ್ನು ಬಳಸಲಾಗುತ್ತದೆ. ಒಬ್ಬ ರಾಜಕಾರಣಿಯ ಭಾಷಣ, ಮಂತ್ರಿಯ ಉಪದೇಶ, ಅಥವಾ ವ್ಯಾಪಾರಿಯ ಮಾರಾಟ ಪ್ರಸ್ತುತಿ ಕೂಡ ರೂಪದಲ್ಲಿ ಉಪನ್ಯಾಸವನ್ನು ಹೋಲಬಹುದು. ಸಾಮಾನ್ಯವಾಗಿ ಉಪನ್ಯಾಸಕನು ಕೋಣೆಯ ಎದುರುಭಾಗದಲ್ಲಿ ನಿಂತುಕೊಂಡು ಉಪನ್ಯಾಸದ ವಿಷಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ವಾಚಿಸುತ್ತಾನೆ.

ಒಂದು ಬೋಧನಾ ವಿಧಾನವಾಗಿ ಉಪನ್ಯಾಸಗಳನ್ನು ಬಹಳ ಟೀಕಿಸಲಾಗಿದೆಯಾದರೂ, ವಿಶ್ವವಿದ್ಯಾಲಯಗಳು ಇಲ್ಲಿಯವರೆಗೂ ತಮ್ಮ ಬಹುಪಾಲು ಪಠ್ಯಕ್ರಮಗಳಿಗೆ ಕಾರ್ಯರೂಪದ ಪರ್ಯಾಯ ಬೋಧನಾ ವಿಧಾನಗಳನ್ನು ಕಂಡುಕೊಂಡಿಲ್ಲ.[೧] ಉಪನ್ಯಾಸವು ಗಣನೀಯ ಪ್ರಮಾಣದ ಶ್ರಾವಕ ಭಾಗವಹಿಕೆಯನ್ನು ಒಳಗೊಳ್ಳದ, ಮತ್ತು ನಿಷ್ಕ್ರಿಯ ಕಲಿಕೆ ಮೇಲೆ ಅವಲಂಬಿಸುವ, ಮುಖ್ಯವಾಗಿ ಏಕಮಾರ್ಗದ ಸಂವಹನ ವಿಧಾನವೆಂದು ಟೀಕಾಕಾರರು ಹೇಳುತ್ತಾರೆ. ಹಾಗಾಗಿ ಹಲವುವೇಳೆ ಉಪನ್ಯಾಸ ನೀಡಿಕೆಯನ್ನು ಸಕ್ರಿಯ ಕಲಿಕೆಯಿಂದ ವ್ಯತ್ಯಾಸ ಮಾಡಲಾಗುತ್ತದೆ. ಪ್ರತಿಭಾವಂತ ವಕ್ತೃಗಳು ನೀಡುವ ಉಪನ್ಯಾಸಗಳು ಅತ್ಯಂತ ಉತ್ತೇಜನಕಾರಿಯಾಗಿರಬಹುದು; ಅದೇನೇ ಇದ್ದರೂ ಉಪನ್ಯಾಸಗಳು ಅಕಾಡೆಮಿ ಸಮುದಾಯದಲ್ಲಿ ಒಂದು ನಿರ್ದಿಷ್ಟ ಅಧ್ಯಯನ ಕ್ಷೇತ್ರಕ್ಕೆ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳನ್ನು ಪರಿಚಯಿಸುವ ಕ್ಷಿಪ್ರ, ಅಗ್ಗದ, ಮತ್ತು ಸಮರ್ಥ ರೀತಿಯಾಗಿ ಉಳಿದುಕೊಂಡಿವೆ.

ಉಪನ್ಯಾಸಗಳು ತರಗತಿಯ ಹೊರಗೂ ಗಣನೀಯ ಪಾತ್ರ ಹೊಂದಿವೆ. ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಶಸ್ತಿಗಳು ಗೌರವದ ಭಾಗವಾಗಿ ಒಂದು ಉಪನ್ಯಾಸವನ್ನು ಒಳಗೊಂಡಿರುತ್ತವೆ, ಮತ್ತು ಅಧ್ಯಯನ ಸಂಬಂಧಿ ಸಮಾವೇಶಗಳು ಹಲವುವೇಳೆ "ಪ್ರಧಾನ ಭಾಷಣ"ಗಳ ಮೇಲೆ, ಅಂದರೆ ಉಪನ್ಯಾಸಗಳ ಮೇಲೆ ಕೇಂದ್ರೀಕರಿಸುತ್ತವೆ. ಸಾರ್ವಜನಿಕ ಉಪನ್ಯಾಸವು ವಿಜ್ಞಾನಗಳಲ್ಲಿ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ಒಂದು ದೀರ್ಘ ಇತಿಹಾಸವನ್ನು ಹೊಂದಿದೆ. ಉದಾಹರಣೆಗೆ, ಸಂಘ ಸಭಾಂಗಣಗಳಲ್ಲಿ ಐತಿಹಾಸಿಕವಾಗಿ ವಿವಿಧ ರೀತಿಯ ವಿಷಯಗಳ ಮೇಲೆ ಅಸಂಖ್ಯಾತ ಉಚಿತ ಮತ್ತು ಸಾರ್ವಜನಿಕ ಉಪನ್ಯಾಸಗಳು ನಡೆದಿವೆ. ಹಾಗೆಯೇ, ಚರ್ಚುಗಳು, ಸಮುದಾಯ ಕೇಂದ್ರಗಳು, ಗ್ರಂಥಾಲಯಗಳು, ಸಂಗ್ರಹಾಲಯಗಳು ಮತ್ತು ಇತರ ಸಂಸ್ಥೆಗಳಲ್ಲಿ ಅವುಗಳ ಗುರಿಗಳ ಅಥವಾ ಅವುಗಳ ಘಟಕಗಳ ಹಿತಾಸಕ್ತಿಗಳಿಗೆ ಪ್ರಯೋಜನಕಾರಿಯಾದ ಉಪನ್ಯಾಸಗಳು ನಡೆದಿವೆ.

ಉಲ್ಲೇಖಗಳು[ಬದಲಾಯಿಸಿ]

  1. "Lecturing: Advantages and Disadvantages of the Traditional Lecture Method". CIRTL Network. Archived from the original on 11 March 2014. Retrieved 11 March 2014. {{cite web}}: Unknown parameter |deadurl= ignored (help)
"https://kn.wikipedia.org/w/index.php?title=ಉಪನ್ಯಾಸ&oldid=1014161" ಇಂದ ಪಡೆಯಲ್ಪಟ್ಟಿದೆ