ವಿಷಯಕ್ಕೆ ಹೋಗು

ಬಿ.ಸುರೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಿ. ಸುರೇಶ
Born೧೯೬೨
ದಾವಣಗೆರೆ
Occupation(s)ನಟ, ನಿರ್ದೇಶಕ
Parentವಿಜಯಮ್ಮ
Awardsಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ
Websitehttp://www.bsuresha.com/

ಬಿ. ಸುರೇಶ (ಜನನ :೧೯೬೨) ಅವರು ಕನ್ನಡ ಕಿರುತೆರೆಯ ನಿರ್ದೇಶಕರಲ್ಲೊಬ್ಬರು. ಹದಿನೈದು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಶೇಕ್ಸ್‍ಪಿಯರನ ಮ್ಯಾಕ್ಬೆತ್, ಕಿಂಗ್ಲಿಯರ್‍ ನಾಟಕಗಳನ್ನೂ ಒಳಗೊಂಡಂತೆ ೨೫ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಬಿ.ಸುರೇಶ ಅವರು ಬರೆದ ಷಾಪುರದ ಸೀನಿಂಗಿ-ಸತ್ಯ ನಾಟಕವು ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.[][]

ಪರಿಚಯ

[ಬದಲಾಯಿಸಿ]

ದಾವಣಗೆರೆ ಇವರ ಹುಟ್ಟೂರು. ಸುರೇಶ ಅವರು, ಕನ್ನಡದ ಪ್ರಸಿದ್ಧ ಪತ್ರಕರ್ತೆ ಹಾಗೂ ನಾಟಕಗಾರ್ತಿಯೂ ಆಗಿರುವ ವಿಜಯಮ್ಮನವರ ಪುತ್ರರು. ೧೯೭೩ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಕಿರುತೆರೆಯ ಕಲಾವಿದರು ತಂತ್ರಜ್ಞರು ಕಾರ್ಮಿಕರ ಸಂಘದ ನಿಕಟಪೂರ್ವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಸುರೇಶ್ ಅವರು ಪ್ರಸ್ತುತ ಬೆಂಗಳೂರಿನ ಪೌರ ಕಾರ್ಮಿಕರ ಸಂಘದ ಸಲಹೆಗಾರ. ೨೦೦೮ ಡಿಸೆಂಬರ್‍ ತಿಂಗಳಿನಿಂದ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರೆ. ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಕ್ರಿಯಾಶೀಲರಾಗಿ ಮುಂದುವರೆದಿರುವರು..[][][]

ನಿರ್ದೇಶಕರಾಗಿ ಬಿ. ಸುರೇಶ್

[ಬದಲಾಯಿಸಿ]
  • ೧೯೭೬ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ಧ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಬದುಕು ಪ್ರಾರಂಭವಾಯಿತು. ೧೯೮೮ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ: ಕೆ.ಎಸ್.ಎಲ್.ಸ್ವಾಮಿ(ರವೀ) ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ.ಸುರೇಶ ಅಲ್ಲಿಂದಾಚೆಗೆ ೧೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ. ೨೦೦೨ರಲ್ಲಿ `ಠಪೋರಿ’ ಮತ್ತು `ಅರ್ಥ’ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.[]
  • `ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ೨೦೧೦ರಲ್ಲಿ ಬಿ.ಸುರೇಶ ನಿರ್ದೇಶಿಸಿದ "ಪುಟ್ಟಕ್ಕನ ಹೈವೇ" ಚಿತ್ರವೂ ರಾಷ್ಟ್ರಪ್ರಶಸ್ತಿಯನ್ನು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂತಲೂ, ಅತ್ಯುತ್ತಮ ಚಿತ್ರಕತೆ ಎಂಬ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.[]

ನಟರಾಗಿ

[ಬದಲಾಯಿಸಿ]

ಸ್ಲಮ್ ಬಾಲ, ಪೆರೋಲ್ ಎಂಬ ಕೆಲವು ಕನ್ನಡ ಸಿನಿಮಾಗಳಲ್ಲಿ ನಟರಾಗಿಯೂ ಜನರನ್ನು ಆಕರ್ಷಿಸಿರುವ ಸುರೇಶರು ಮಲಯಾಳಂನಲ್ಲು ಒಂದು ಮೂಕನ ಪಾತ್ರ ನಿರ್ವಹಿಸಿದ್ದಾರೆ..z

ಕಿರುತೆರೆ ನಿರ್ದೇಶಕರಾಗಿ

[ಬದಲಾಯಿಸಿ]
  • ೧೯೯೨ರಿಂದ ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿಯಲಾರಂಭಿಸಿದ ಬಿ.ಸುರೇಶ ಅವರ ದೈನಿಕ ಧಾರಾವಾಹಿ `ಸಾಧನೆ’ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ೨೦೦೧ ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಪಡೆದು ಕೊಂಡಿತ್ತು. ೨೦೦೪ರಿಂದ ಉದಯ ವಾಹಿನಿಗಾಗಿ ಇವರು ಬರೆದು ನಿರ್ದೇಶಿಸುತ್ತಾ ಇರುವ `ನಾಕುತಂತಿ’ ಧಾರಾವಾಹಿ ಪ್ರಸಾರವಾಗುತ್ತಿದೆ.
  • ಈ ಧಾರಾವಾಹಿ ಈಗಾಗಲೇ ೧೪೦೦ ಕಂತುಗಳಿಗೆ (ಏಪ್ರಿಲ್ ೨೦೦೯ರಲ್ಲಿ) ಮುಗಿಯಿತು. ಇದೇ ಉದಯವಾಹಿನಿಗಾಗಿ ಬಿ.ಸುರೇಶ ಅವರ ಸಾರಥ್ಯದಲ್ಲಿ ತಯಾರಾಗುತ್ತಿರುವ ಮತ್ತೊಂದು ಧಾರಾವಾಹಿ `ತಕಧಿಮಿತಾ’. ಇದು ಸಹ ಈಗ ೯೦೦ ಕಂತುಗಳಿಗೆ (ಜನವರಿ ೨೦೦೯ರಲ್ಲಿ) ಮುಗಿಯಿತು. ೨೦೧೦ರಲ್ಲಿ ವಾರಾಂತ್ಯಕ್ಕೊಂದು ಕತೆ ಎಂಬಂತೆ ಆರಂಭಿಸಿದ "ಪ್ರೀತಿ-ಪ್ರೇಮ" ಟೆಲಿಫಿಲ್ಮ್ ಸರಣಿಯು ಅತ್ಯಂತ ಯಶಸ್ವಿಯಾಗಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಇದೆ. ಆರಂಭದಲ್ಲಿ ಪ್ರತಿ ಭಾನುವಾರ ಪ್ರಸಾರವಾಗುತ್ತಾ ಇದ್ದ ಈ ಟೆಲಿಫಿಲ್ಮ್ ಗಳು ಯಶಸ್ಸಿನ ಕಾರಣವಾಗಿಯೇ ೨೦೧೨ರ ನವೆಂಬರ್ ತಿಂಗಳಿಂದ ಶನಿವಾರವೂ ಪ್ರಸಾರವಾಗಲು ಆರಂಭಿಸಿದೆ.
  • ಈ ಟೆಲಿಫಿಲ್ಮ್ ಕಾರಣವಾಗಿ ಈ ವರೆಗೆ ೨೫ಕ್ಕೂ ಹೆಚ್ಚು ಹೊಸ ನಿರ್ದೇಶಕರನ್ನು ಬಿ.ಸುರೇಶ್ ಕಿರುತೆರೆಗೆ ಪರಿಚಿಯಿಸಿದ್ದಾರೆ. ೩೦ಕ್ಕೂ ಹೆಚ್ಚು ಹೊಸ ಲೇಖಕರು ಕಿರುತೆರೆಗಾಗಿ ಬರೆಯಲು ಸಿದ್ಧರಾಗಿದ್ದಾರೆ. ಅನೇಕ ಹೊಸ ಕಲಾವಿದರು ಈ ಕಾರ್ಯಕ್ರಮದ ಮೂಲಕ ನಟನೆಯ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ೨೦೧೨ರಲ್ಲಿ ಬಿ.ಸುರೇಶ ಅವರು ಉದಯವಾಹಿನಿಗಾಗಿ ಆರಂಭಿಸಿದ ಮತ್ತೊಂದು ದೈನಿಕ ಧಾರಾವಾಹಿ "ಅಳಗುಳಿಮನೆ". ಇದು ಪ್ರಸಾರ ಕಂಡ ಕೆಲವೇ ದಿನಗಳಲ್ಲಿ ಅತ್ಯಂತ ಯಶಸ್ವಿ ಧಾರಾವಾಹಿಗಳಲ್ಲಿ ಒಂದಾಯಿತು. ೨೦೧೩ರಲ್ಲಿ ಉದಯವಾಹಿನಿಗಾಗಿಯೇ ಬಿ.ಸುರೇಶ್ ಆರಂಭಿಸಿದ ಮತ್ತೊಂದು ದೈನಿಕ "ಮದರಂಗಿ" ಸಹ ಪ್ರಸಾರ ಕಂಡ ಮೊದಲ ವಾರದಲ್ಲಿಯೇ ಅತೀ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಎನಿಸಿಕೊಂಡಿದೆ.

ಲೇಖಕ ಮತ್ತು ಪ್ರಕಾಶಕರಾಗಿ

[ಬದಲಾಯಿಸಿ]
ಬಿ.ಸುರೇಶ
  • `ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಾ ಇರುವ ಬಿ.ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಬಿ.ಸುರೇಶ ಅವರು ಬರೆದಿರುವ ದೃಶ್ಯ ಮಾಧ್ಯಮ ಕುರಿತ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಲೇಖನಗಳ ಸಂಗ್ರಹ ಬೆಳ್ಳಿಅಂಕ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಬುಗಳನ್ನು ಆರಂಭಿಸಿರುವ ಬಿ.ಸುರೇಶ ಅವರಿಂದಾಗಿ ಗುಲ್ಬರ್ಗಾ, ಮೈಸೂರು, ಮಂಡ್ಯ, ಶಿವಮೊಗ್ಗ ಮುಂತಾದ ಸ್ಥಳಗಳಲ್ಲಿಯೂ ಚಲನಚಿತ್ರ ಕ್ಲಬ್ಬುಗಳು ಆರಂಭವಾಗಿವೆ.
  • ಈಚೆಗೆ ಬಿ. ಸುರೇಶ್ ಅವರು ಬರೆದ ‘ಗಿರಿಜಾ ಕಲ್ಯಾಣ’ ನಾಟಕ ರೈತರ ಆತ್ಮಹತ್ಯೆ ಕುರಿತಾಗಿದ್ದು ಅದನ್ನು ಕನ್ನಡದಲ್ಲಿ ಬಿ.ಜಯಶ್ರೀ ಅವರು ಯಶಸ್ವಿಯಾಗಿ ಪ್ರದರ್ಶಿಸಿದ್ದಾರೆ. ಹಿಂದಿಯಲ್ಲಿ ಇಪ್ಟಾ, ಮುಂಬಯಿಯಲ್ಲಿ ಎಂಎಸ್ ಸತ್ಯು ಅವರು ಗಿರಿಜಾ ಕಿ ಸಪ್ನೆ ಎಂಬ ಹೆಸರಿನಲ್ಲಿ ರಂಗಭೂಮಿಯ ಮೇಲೆ ತಂದಿದ್ದಾರೆ. ಮರಾಠಿಯಲ್ಲಿ ಅಮೋಲ್ ಪಾಲೇಕರ್ ಅವರ ತಂಡದವರು ಗಿರಿಜಾ ಕಲ್ಯಾಣ್ ಎಂಬ ಹೆಸರಿನಲ್ಲಿ ಅಭಿನಯಿಸಲಿದ್ದಾರೆ.

ನಿರ್ಮಾಪಕರಾಗಿ

[ಬದಲಾಯಿಸಿ]

ಇದೀಗ ಮೀಡಿಯಾ ಹೌಸ್ ಸ್ಟುಡಿಯೋದ ಮೂಲಕ ಹೊಸಬರಿಗೆ ಚಲನಚಿತ್ರ ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಬಿ.ಸುರೇಶ, ಆ ಸಂಸ್ಥೆಯಿಂದ ನಿರ್ಮಿಸಿದ ಪ್ರಥಮ ಚಿತ್ರ `ಗುಬ್ಬಚ್ಚಿಗಳು’ ಮೂಲಕ ಅಭಯಸಿಂಹ ಅವರು ನಿರ್ದೇಶಕರಾಗಿದ್ದಾರೆ. ಈ ಚಿತ್ರವು ಅದಾಗಲೇ ಲಾಸ್ಎಂಜಲೀಸ್, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲದೆ, ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗಕ್ಕು ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪಾಲ್ಗೊಳ್ಳುತ್ತಿದೆ. ಈ ಚಿತ್ರಕ್ಕೆ ೨೦೦೮ರ ಅತ್ಯುತ್ತಮ ಮಕ್ಖಳ ಚಿತ್ರ - ಸ್ವರ್ಣಕಮಲ ಪ್ರಶಸ್ತಿ ಭಾರತ ಸರ್ಕಾರದಿಂದ ದೊರೆತಿದೆ. ಪ್ರಕಾಶ್ ರೈ ನಿರ್ದೇಶನದಲ್ಲಿ ‘ನಾನು ನನ್ನ ಕನಸು’ ಎಂಬ ಚಿತ್ರವನ್ನು ಪಾಲುದಾರರಾಗಿ ನಿರ್ಮಿಸಿದ್ದಾರೆ. ಇದು ಪ್ರಕಾಶ್ ರೈ ಅವರ ನಿರ್ದೇಶನದ ಮೊದಲ ಚಿತ್ರ. ಇದೀಗ ಅಭಯ್ ಸಿಂಹ ಅವರ ನಿರ್ದೇಶನದಲ್ಲಿ ಗಣೇಶ್ ಅಭಿನಯದ ಸಕ್ಕರೆ ಚಲನಚಿತ್ರವನ್ನು ನಿರ್ಮಿಸಿದ್ದಾರೆ.

ಬಿ.ಸುರೇಶ ಅವರ ಚಿತ್ರಕಥೆ/ ಸಂಭಾಷಣೆಯಿರುವ ಚಿತ್ರಗಳು

[ಬದಲಾಯಿಸಿ]

ರಚಿಸಿ-ನಿರ್ದೇಶಿಸಿದ ಧಾರಾವಾಹಿಗಳು

[ಬದಲಾಯಿಸಿ]
  1. ಕಂದನಕಾವ್ಯ
  2. ಹೊಸಹೆಜ್ಜೆ
  3. ಕನಸುಗಿತ್ತಿ
  4. ಅನ್ನಪೂರ್ಣ
  5. ಮುಸ್ಸಂಜೆ
  6. ಚಿಗುರು
  7. ಸಾಧನೆ
  8. ಪ್ರೀತಿಯ ಹೂಗಳು (ನಿರ್ದೇಶನ: ಸಕ್ರೆಬೈಲು ಶ್ರೀನಿವಾಸ)
  9. ಚಕ್ರ (ನಿರ್ದೇಶನ: ಯೋಗರಾಜ್ ಭಟ್/ಅಶೋಕ್ ಕಶ್ಯಪ್)
  10. ಕನ್ನಡ-ಕನ್ನಡಿ
  11. ಅಕ್ಷರದೀಪ
  12. ಹತ್ತುಹೆಜ್ಜೆಗಳು
  13. ಮಗು ನೀ ನಗು
  14. ನಾಕುತಂತಿ
  15. ತಕಧಿಮಿತಾ
  16. ಅಳಗುಳಿಮನೆ
  17. ಮದರಂಗಿ
  18. ಪ್ರೀತಿ-ಪ್ರೇಮ (ವಾರಾಂತ್ಯದ ಟೆಲಿಚಿತ್ರಗಳು)
  19. ಗುಪ್ತಗಾಮಿನಿ (ಮೊದಲ ನೂರು ಕಂತುಗಳಿಗೆ ಚಿತ್ರಕತೆ/ಸಂಭಾಷಣೆ)
  20. ಭೃಂಗದ ಬೆನ್ನೇರಿ ಬಂತು (ಚಿತ್ರಕತೆ/ಸಂಭಾಷಣೆ ಮಾತ್ರ ನಿರ್ದೇಶನ: ಅಮರ್ ದೇವ್)
  21. ಮಿಸ್ ಮಾಲಾ (ಒಟ್ಟು ಹದಿಮೂರರಲ್ಲಿ ಮೊದಲ ಎಂಟು ಪ್ರಕರಣಗಳು ಮಾತ್ರ)

ರಚಿಸಿರುವ ನಾಟಕಗಳು

[ಬದಲಾಯಿಸಿ]
  1. ಕೋತಿಕತೆ (ಬೆಸಗರಹಳ್ಳಿ ರಾಮಣ್ಣುನವರ ಕತೆಯನ್ನು ಆಧರಿಸಿದ್ದು)
  2. ವರದಿಯಾಗದ ಕಥೆ
  3. ಅಪ್ಪಾಲೆತಿಪ್ಪಾಲೆ
  4. ಹಸಿರೇ ಉಸಿರು
  5. ಅಹಲ್ಯೆ ನನ್ನ ತಾಯಿ
  6. ಅಯ್ಯೋ ಅಪ್ಪಾ! (ಜರ್ಮನಿಯ ಮೂಲ ನಾಟಕ "ಮ್ಯಾನ್ ಓ ಮ್ಯಾನ್" ಸ್ಪೂರ್ತಿಯಿಂದ)
  7. ಕಾಡುಮಲ್ಲಿಗೆ (ವ್ಯಾಸರಾಯಬಲ್ಲಾಳರ ಇದೇ ಹೆಸರಿನ ಕತೆಯನ್ನಾಧರಿಸಿದ್ದು)
  8. ಕುಣಿಯೋಣು ಬಾರಾ (ಮಿಲ್ಟನ್ ನ "ಪ್ಯಾರಡೈಸ್ ಲಾಸ್ಟ್" ಕೃತಿಯ ಸ್ಪೂರ್ತಿಯಿಂದ)
  9. ಯವನ ಯಾಮಿನಿ ಕಥಾ ಚರಿತ್ರವು
  10. ಅರ್ಥ (ಜಯವಂತ ದಳವಿಯವರ ಕತೆಯೊಂದನ್ನಧರಿಸಿದ್ದು)
  11. ಹಜಾಮ ಹೆಂಡತಿಯನ್ನು ಕೊಂದದ್ದು
  12. ಕತೆ ಕಟ್ಟೋ ಆಟ
  13. ಷಾಪುರದ ಸೀನಿಂಗಿ ಸತ್ಯ
  14. ರೆಕ್ಕೆ ಕಟ್ಟುವಿರಾ? (ದು.ಸರಸ್ವತಿ ಮತ್ತು ಚಿತ್ರಾ ಅವರ ಜೊತೆ ಸೇರಿ ಬರೆದದ್ದು)
  15. ಚಂದಿರನ ನೆರಳಲ್ಲಿ
  16. ಕುರುಡಜ್ಜನ ಪೂರ್ಣಚಂದ್ರ
  17. ಗಿರಿಜಾಕಲ್ಯಾಣ
  18. ಬಾಳೂರ ಗುಡಿಕಾರ (ಇಬ್ಸೆನ್,_ಹೆನ್ರಿಕ್ ಬರೆದ "ಮಾಸ್ಟರ್ ಬಿಲ್ಡರ್" ಕೃತಿಯ ರೂಪಾಂತರ)

ನಿರ್ದೇಶಿಸಿದ ಸಿನಿಮಾಗಳು

[ಬದಲಾಯಿಸಿ]
  1. ಠಪೋರಿ
  2. ಅರ್ಥ
  3. ಪುಟ್ಟಕ್ಕನ ಹೈವೇ

ನಿರ್ಮಾಪಕರಾಗಿ

[ಬದಲಾಯಿಸಿ]
  1. ಗುಬ್ಬಚ್ಚಿಗಳು (ನಿರ್ದೇಶನ : ಅಭಯಸಿಂಹ)
  2. ನಾನು ನನ್ನ ಕನಸು (ಪಾಲುದಾರರು) (ನಿರ್ದೇಶನ : ಪ್ರಕಾಶ್ ರೈ)
  3. ಸಕ್ಕರೆ (ನಿರ್ದೇಶನ: ಅಭಯ್ ಸಿಂಹ)

ಪ್ರಶಸ್ತಿ - ಪುರಸ್ಕಾರ

[ಬದಲಾಯಿಸಿ]
  1. ಷಾಪುರದ ಸೀನಿಂಗಿ-ಸತ್ಯ ನಾಟಕವು ೧೯೯೭ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿದೆ.
  2. ಬೆಂಗಳೂರು ದೂರದರ್ಶನಕ್ಕಾಗಿ ಬಿ.ಸುರೇಶ ಅವರು ನಿರ್ದೇಶಿಸಿದ್ದ ದೈನಿಕ ಧಾರಾವಾಹಿ ಸಾಧನೆ ೨೦೦೧ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
  3. ಅರ್ಥ ಚಿತ್ರಕ್ಕಾಗಿ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ದೊರೆತಿದೆ. ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಅರುಂಧತಿ ಜತ್ಕರ್ ಅವರಿಗೆ.
  4. ಅರ್ಥ ಚಿತ್ರಕ್ಕೆ ದಕ್ಷಿಣ ಭಾರತದ ಛಾಯಾಗ್ರಾಹಕರ ಸಂಘದಿಂದ ಅತ್ಯುತ್ತಮ ಚಿತ್ರ ಪ್ರಶಸ್ತಿ. ಅತ್ಯುತ್ತಮ ನಟ ಪ್ರಶಸ್ತಿ ರಂಗಾಯಣ ರಘು ಅವರಿಗೆ ಮತ್ತು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಅರುಂಧತಿ ಜತ್ಕರ್ ಅವರಿಗೆ.
  5. ಗುಬ್ಬಚ್ಚಿಗಳು ಚಿತ್ರಕ್ಕೆ ೨೦೦೭ರ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣಕಮಲ ಪದಕ ಹಾಗೂ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಅಂಡ್ ವಿಡಿಯೋ ಫೇಸ್ಟಿವಲ್ ನಿಂದ ‘ಅತ್ಯುತ್ತಮ ಸಾಂಸಾರಿಕ ಚಿತ್ರ’ ಪ್ರಶಸ್ತಿ
  6. "ಪುಟ್ಟಕ್ಕನ ಹೈವೇ" ಚಿತ್ರಕ್ಕೆ ೨೦೧೦ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ರಜತ ಪದಕ ಮತ್ತು ಅತ್ಯುತ್ತಮ ಚಿತ್ರಕತೆಗೆ ರಾಜ್ಯ ಪ್ರಶಸ್ತಿ ದೊರೆತಿದೆ.
  7. '"ನಾಕುತಂತಿ"' ಧಾರಾವಾಹಿಗಾಗಿ ೨೦೦೬ರಲ್ಲಿ ವರ್ಷದ ಅತ್ಯುತ್ತಮ ಧಾರಾವಾಹಿ ಪ್ರಶಸ್ತಿ ಜೀ ಕನ್ನಡ ವಾಹಿನಿಯಿಂದ

ಹೊರಗಿನ ಸಂಪರ್ಕ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "B Suresha: I learnt all about cinema on the sets". Deccan Herald. July 24, 2020.
  2. "Directors TN Seetharam and B Suresha mourn the death of actor Siddharaj Kalyankar - Times of India". The Times of India.
  3. "Kannada scores four at national awards". The New Indian Express.
  4. "‘Puttakkana Highway' made more for artistic satisfaction: director". June 19, 2011 – via www.thehindu.com.
  5. "Review: Slum Bala". Rediff.
  6. "B Suresha's next film inspired from TOI article - Times of India". The Times of India.
  7. "B Suresha to launch new channel - Times of India". The Times of India.