ಇಬ್ಸೆನ್, ಹೆನ್ರಿಕ್
ಇಬ್ಸೆನ್, ಹೆನ್ರಿಕ್ 1828-1906 ನಾರ್ವೆ ದೇಶದ ಕವಿ ಮತ್ತು ನಾಟಕಕಾರ. ಆಧುನಿಕ ನಾಟಕದ ಪಿತಾಮಹ ಎಂದೇ ಖ್ಯಾತಿ ಪಡೆದವನು ಇಬ್ಸೆನ್.
ಬಾಲ್ಯ ಮತ್ತು ಓದು
[ಬದಲಾಯಿಸಿ]ದಕ್ಷಿಣ ನಾರ್ವೆಯ ಸ್ಕೀಯೆನ್ ಎಂಬ ಸಣ್ಣ ಊರಿನಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ. ಬಾಲ್ಯದಲ್ಲೇ ಬಡತನಕ್ಕೆ ಗುರಿಯಾಗಿ ಔಷಧ ವ್ಯಾಪಾರಿಯೊಬ್ಬನ ಬಳಿ ಕೆಲಸಕ್ಕೆ ಸೇರಬೇಕಾಯಿತು. ಹಾಗೆಯೇ ವೈದ್ಯಶಾಸ್ತ್ರವನ್ನು ಅಭ್ಯಾಸ ಮಾಡತೊಡಗಿದ. ತನ್ನ ನೈಜಪ್ರವೃತ್ತಿ ಆ ಕ್ಷೇತ್ರಕ್ಕೆ ಸೇರಿದುದಲ್ಲವೆಂಬುದನ್ನು ಅರಿತುಕೊಂಡು ಪತ್ರಿಕೋದ್ಯಮಕ್ಕೂ ನಾಟಕ ಪ್ರಪಂಚಕ್ಕೂ ತಿರುಗಿದ. [೧]
ವೃತ್ತಿ ಬದುಕು
[ಬದಲಾಯಿಸಿ]1851ರಲ್ಲಿ ಬರ್ಗೆನ್ ನಗರದ ನಾಟಕ ಶಾಲೆಯೊಂದರಲ್ಲಿ ಕೆಲಸ ಮಾಡತೊಡಗಿ ಅಲ್ಲಿ ಪ್ರದರ್ಶನಕ್ಕೆಂದು ನಾಲ್ಕು ನಾಟಕಗಳನ್ನು ಬರೆದ. ಅವುಗಳಲ್ಲಿ ಮುಖ್ಯವಾದುದು ಆಸ್ಟ್ರಾಟಿನ ಶ್ರೀಮತಿ ಇಂಜರ್ (ಲೇಡಿ ಇಂಜರ್ ಆಫ್ ಆಸ್ಟ್ರಾಟ್, 1855). ಅದರ ವಸ್ತು ಪರಾಕ್ರಾಂತವಾಗಿದ್ದ ಮಧ್ಯಯುಗದ ನಾರ್ವೆಯ ವಿಮೋಚನೆ. 1857ರಲ್ಲಿ ಬರ್ಗೆನ್‍ನಿಂದ ಕ್ರಿಶ್ಚಿಯೇನಿಯ (ಇಂದಿನ ಆಸ್ಲೊ) ನಗರಕ್ಕೆ ತೆರಳಿ ಅಲ್ಲಿನ ಹೊಸ ರಾಷ್ಟ್ರೀಯ ನಾಟಕಾಲಯದಲ್ಲಿ ನಿರ್ದೇಶಕನಾಗಿ ನೇಮಿತನಾಗಿ, 1864ರಲ್ಲಿ ಆ ನಾಟಕ ಸಂಸ್ಥೆ ಮುರಿದು ಬೀಳುವವರೆಗೂ ಅಲ್ಲಿದ್ದ. ಈ ಅವಧಿಯಲ್ಲಿ ವೀರರಸಭರಿತವಾದ ಕೆಲವು ನಾಟಕಗಳನ್ನು ರಚಿಸಿದ. ಅವುಗಳಲ್ಲಿ ಹೆಲ್ಗೊಲೆಂಡಿನ ವೀರರು (ಹಿರೋಸ್ ಆಫ್ ಹೆಲ್ಗೊಲೆಂಡ್, 1858) ಎಂಬುದು ಹೆಸರಾದಂತಿದೆ. ಹಳೆಯ ಕಾಲದ ನಾರ್ವೆಯ ಸಾಹಸಿಗನ ಚಿತ್ರವಿದು. ನಟನಕಾರರು (ದಿ ಪ್ರಿಟೆಂಡರ್ಸ್, 1864) ಚಾರಿತ್ರಿಕ ನಾಟಕ. ಪ್ರಣಯದ ಪ್ರಹಸನ (ಲವ್ಸ್ ಕಾಮೆಡಿ, 1867) ವಿಡಂಬನಾತ್ಮಕವಾದ ಹಾಸ್ಯನಾಟಕ. ಸಮಕಾಲೀನ ಸಮಾಜದ ವಿವಾಹ ಪದ್ಧತಿಗಳನ್ನು ಅಪಹಾಸ್ಯಕ್ಕೀಡುಮಾಡುವ ಈ ಪ್ರಣಯ ಪ್ರಹಸನ ಅವನಿಗೆ ತುಂಬ ಅಪಖ್ಯಾತಿ ತಂದಿತು. ಈ ಕಾರಣದಿಂದಲೂ, ತಾನು ಕೆಲಸ ಮಾಡುತ್ತಿದ್ದ ನಾಟಕ ಶಾಲೆಯೇ ಊರ್ಜಿತವಾಗದೆ ಮುರಿದು ಬಿದ್ದುದರಿಂದಲೂ ಅವನಿಗೆ ನಾರ್ವೆಯಲ್ಲಿರುವುದೇ ಬೇಸರಕರವಾಯಿತು. ಜೊತೆಗೆ ಆಗ ಸ್ವಾತಂತ್ರ್ಯಕ್ಕಾಗಿ ಜರ್ಮಬಿಯೊಡನೆ ಹೋರಾಡುತ್ತಿದ್ದ ಡೇನರಿಗೆ ತನ್ನವರು ಸಹಾಯ ಮಾಡಲಿಲ್ಲವೆಂಬ ಅಸಮಾಧಾನವು ಸೇರಿ ಅವನನ್ನು ವಿದೇಶ ಯಾತ್ರೆಗೆ ಪ್ರೇರಿಸಿತು.
ಪ್ರಕಟನೆ ಮತ್ತು ಪ್ರವಾಸ
[ಬದಲಾಯಿಸಿ]1864ರಲ್ಲಿ ಪ್ರವಾಸ ವೇತನವೊಂದಿಷ್ಟನ್ನು ಪಡೆದು ದೇಶ ಬಿಟ್ಟು ಹೊರಟು ಬಹಳ ವರ್ಷಗಳ ಕಾಲ ಯೂರೋಪಿನ ಬೇರೆ ಬೇರೆ ಪಟ್ಟಣಗಳಿಗೆ ಹೋಗಿ ಇದ್ದು ಬಂದ. ಹೀಗೆ ಅವನಿದ್ದ ಸ್ಥಳಗಳಲ್ಲಿ ಮುಖ್ಯವಾದುವು ರೋಮ್, ಮ್ಯೂನಿಚ್ ಮತ್ತು ಡ್ರೆಸ್ಡನ್. 1891ರಲ್ಲಿ ಕ್ರಿಶ್ಚಿಯೇನಿಯಕ್ಕೆ ಹಿಂತಿರುಗಿ ಬಂದು ಅನಂತರ ತನ್ನ ಜೀವಿತದ ಕೊನೆಯವರೆಗೂ ಅಲ್ಲೇ ಇದ್ದ. 1806ರಲ್ಲಿ ನಾರ್ವೆಯ ಪಾರ್ಲಿಮೆಂಟ್ ಸಭೆ ಅವನಿಗೆ ಗೌರವವೇತನವೊಂದನ್ನು ದಯಪಾಲಿಸಿತು. ಮನಸ್ಸಿಲ್ಲದ ಮನಸ್ಸಿನಿಂದ ಆ ವರ್ಷವೂ ಮರುವರ್ಷವೂ ಆತ ಬ್ಯ್ರಾಂಡ್ ಮತ್ತು ಪೀರ್‍ಗಿಂಟ್ ಎಂಬ ತನ್ನ ದೃಶ್ಯಕಾವ್ಯಗಳನ್ನು ಪ್ರಕಟಿಸಿದ. ಅವು ಅವನ ಕೃತಿಗಳಲ್ಲೆಲ್ಲಾ ಅತ್ಯುತ್ತಮವಾದುವೆಂದು ಕೆಲವರ ಅಭಿಪ್ರಾಯ. ಮೊದಲನೆಯದು ತನ್ನ ಉನ್ನತಾದರ್ಶಗಳನ್ನು ಬಿಟ್ಟುಕೊಡಲೊಪ್ಪದೆ ತತ್ಫಲವಾಗಿ ಹಾಳಾಗುವ ಸಜ್ಜನನೊಬ್ಬನ ಸಾಂಕೇತಿಕ ಚಿತ್ರ. ಎರಡನೆಯದು ಆದರ್ಶರಹಿತವಾದ ವಾಸ್ತವಜೀವನವನ್ನು ನಡೆಸುವ ಪ್ರಣಯಿಯೊಬ್ಬನ ಕಥೆ. ಎರಡೂ ಸತ್ತ್ವಶಾಲಿಗಳಾದ ಕೃತಿಗಳೆಂದು ಪರಿಗಣಿತವಾಗಿವೆ.[೨]
ವಿಮರ್ಶೆ ಮತ್ತು ಗದ್ಯ
[ಬದಲಾಯಿಸಿ]ಇಬ್ಸೆನ್ ಉತ್ತಮ ಕವಿಯಾದರೂ ಅವನ ಕವನಗಳು ಇತರರ ಮೇಲೆ ಹೆಚ್ಚು ಪ್ರಭಾವವನ್ನು ಬೀರಲಿಲ್ಲ. ಸಾಹಿತ್ಯಚರಿತ್ರೆಯಲ್ಲಿ ಆತ ವಿರಾಜಿಸುತ್ತಿರುವುದೂ ಪ್ರಭಾವಶಾಲಿಯಾಗಿರುವುದೂ ಸಾಮಾಜಿಕ ಸುಧಾರಕನಾಗಿ, ಸಂಪ್ರದಾಯಬದ್ದ ಸಾಮಾಜಿಕ ಸಂಸ್ಥೆಗಳ ಮತ್ತು ವ್ಯವಸ್ಥೆಗಳ ಕಟುವಿಮರ್ಶಕನಾಗಿ. 1869ರಲ್ಲಿ ರಚಿತವಾದ ತಾರುಣ್ಯದ ಕೂಟ (ದಿ ಲೀಗ್ ಆಪ್ ಯೂತ್) ಅವನ ಮೊಟ್ಟ ಮೊದಲನೆಯ ಗದ್ಯನಾಟಕ. ಅದೊಂದು ರಾಜಕೀಯ ವಸ್ತುವನ್ನು ಒಳಗೊಂಡಿರುವ ವಿಡಂಬನಾತ್ಮಕ ಕೃತಿ. ಚಕ್ರವರ್ತಿ ಮತ್ತು ಗ್ಯಲೀಲಿಯನ್ (ಎಂಪರರ್ ಅಂಡ್ ಗ್ಯಲೀಲಿಯನ್, 1873) ಚರಿತ್ರಾತ್ಮಕವಾದುದು. ಎರಡು ಭಾಗಗಳಿರುವ ಈ ನಾಟಕದ ಮುಖ್ಯಪಾತ್ರ ಧರ್ಮದ್ರೋಹಿ ಜ್ಯೂಲಿಯನ್. ಸಮಾಜದ ಸ್ತಂಭಗಳು (ಪಿಲ್ಲರ್ಸ್ ಆಪ್ ಸೊಸೈಟಿ. 1876) ಹಣಗಾರರೂ ಮೋಸಗಾರರೂ ಆದ ವ್ಯಾಪಾರಿಗಳ ಕೃತ್ರಿಮಗಳನ್ನು ಎತ್ತಿ ತೋರಿಸುತ್ತದೆ. ಗೊಂಬೆಯ ಮನೆ (ದಿ ಡಾಲ್ಸ್ ಹೌಸ್) ವೈವಾಹಿಕ ಜೀವನದ ಸಮಸ್ಯೆಯನ್ನು ಒಳಗೊಂಡಿರುವ ನಾಟಕ. ಇದನ್ನು ಬರೆದಾಗ ಇಬ್ಸೆನ್ ಒಂದು ಕಡೆ ವಿಶೇಷ ಪ್ರಶಂಸೆಗೂ ಇನ್ನೊಂದು ಕಡೆ ವಿಪರೀತ ನಿಂದೆಗೂ ಗುರಿಯಾದ. ಗಂಡನಿಗೆ ಗುಲಾಮಳಾಗಿರಲು, ಅವನ ಕೈಗೊಂಬೆಯಾಗಿರಲು ಒಪ್ಪದೆ ಅವನ ಮನೆಯಿಂದ ಹೊರಬಿದ್ದು ಬಾಗಿಲು ಬಡಿಯುವ ನೋರಾ ಹೆಲ್ಮರ್‍ಳ ವರ್ತನೆ ಎಲ್ಲೆಲ್ಲೂ ತೀವ್ರವಾದ ಚರ್ಚೆ, ಮೆಚ್ಚಿಕೆ, ಟೀಕೆಗಳನ್ನು ಪ್ರಚೋದಿಸಿತು, ಈ ನಾಟಕದಿಂದ ಇಬ್ಸೆನ್ನನ ಹೆಸರು ಯೂರೋಪಿನ ಇತರ ದೇಶಗಳಲ್ಲೂ ಪ್ರಸಿದ್ಧವಾಯಿತು. ದೆವ್ವಗಳು (ಪೋಸ್ಟ್ಸ್, 1881) ನಾಟಕದ ವಸ್ತು ವಂಶಪಾರಂಪರ್ಯವಾಗಿ ಬರುವ ವ್ಯಾಧಿಗಳು, ಇಂಥ ವಿಷಯವನ್ನು ನಾಟಕದಲ್ಲಿ ತರುವ ಧೈರ್ಯ ಮಾಡಿದವರಲ್ಲಿ ಇಬ್ಸೆನ್ನನೇ ಮೊದಲಿಗ. ಯಾರದೊ ತಪ್ಪಿಗೆ ಯಾರೋ ಅನುಭವಿಸಬೇಕಾಗುವ ಗುಪ್ತ ರೋಗಗಳನ್ನು ಕಂಡು ಕನಿಕರಿಸಿ ಸಮಾಜದ ಅನ್ಯಾಯದ ಒಂದು ಮುಖವನ್ನು ಆತ ಇಲ್ಲಿ ತೆರೆದು ತೋರಿದ್ದಾನೆ. ಜನತೆಯ ಶತ್ರು (ಆನ್ ಎನಿಮಿ ಆಪ್ ದಿ ಪೀಪಲ್, 1882) ಎಂಬ ನಾಟಕದಲ್ಲಿ ಇಬ್ಸೆನ್ ತಿಳಿವಿಲ್ಲದವರಾದರೂ ಶಕ್ತರಾದ ಬಹುಸಂಖ್ಯಾತರ ಕೈಯಲ್ಲಿ ಸಿಕ್ಕು ಜ್ಞಾನಿಗಳೂ ವಿಚಾರಪರರೂ ಆದರೆ ಅಲ್ಪಸಂಖ್ಯಾತರೂ ಆದ ವ್ಯಕ್ತಿಗಳು ಹೇಗೆ ತೊಂದರೆಗೀಡಾಗಬೇಕೆಂಬುದನ್ನು ತೋರಿಸುತ್ತಾನೆ. ಇದರ ನಾಯಕ ಡಾಕ್ಟರ್ ಸ್ಟಾಕ್ಮನ್ ಊರಿನ ಲಾಭಕೋರರು ಕೆಲವರು ನಡೆಸುತ್ತಿರುವ ಸಾರ್ವಜನಿಕ ಸ್ನಾನದ ಕೊಳಗಳು ಹೇಗೆ ಆರೋಗ್ಯನಾಶಕವಾದ ವಸ್ತುಗಳಿಂದ ಅಶುದ್ಧಗೊಂಡಿವೆಯೆಂದೂ ಅವುಗಳನ್ನು ಮುಚ್ಚಬೇಕಾದ ಅಗತ್ಯ ಎಷ್ಟಿದೆಯೆಂದೂ ವಾದಿಸುತ್ತಾನೆ. ಪರಿಣಾಮವಾಗಿ ಜನತೆಯ ಶತ್ರು ಎಂಬ ಅಪವಾದಕ್ಕೆ ಗುರಿಯಾಗುತ್ತಾನೆ. ಸಂಪ್ರದಾಯಬದ್ಧ ಸಮಾಜದಲ್ಲಿ ಬಹು ಜನಪ್ರಿಯವಾದ ದೋಷಗಳನ್ನು ಹೊರಗೆಡಹುವುದೂ ಹೇಗೆ ಅಪಾಯಕರ ಎಂಬ ವ್ಯಂಗ್ಯಾರ್ಥ ಇಲ್ಲಿದೆ. ಈ ನಾಟಕದ ಅನಂತರ ಬಂದ ಕಾಡುಕೋಳಿ (ದಿ ವೈಲ್ಡ್ ಡಕ್, 1884) ಕಾವ್ಯಮಯವಾದ ಸಾಂಕೇತಿಕ ಕೃತಿ. ರಾಸ್‍ಮೆರ್ಷಾಮ್ ನಾಟಕದಲ್ಲಿ ಇಬ್ಸೆನ್ ಮತ್ತೆ ಆದರ್ಶದ ಔನತ್ಯದ ಪ್ರತಿಪಾದನೆಗೆ ಬರುತ್ತಾನೆ. ಕಡಲಿನಿಂದ ಬಂದ ಮಹಿಳೆಯಲ್ಲಿ (ಎ ಲೇಡಿ ಫ್ರಮ್ ದಿ ಸಿ, 1888) ಅದ್ಭುತ ಘಟನೆಗಳ ಛಾಯೆಯಿದೆ. ಅದು ಸುಖಾಂತ ನಾಟಕ ಹೆಡ್ಡಾಗ್ಯಾಬ್ಲರ್ ಇಬ್ಸೆನ್ನನ ಅತ್ಯಂತ ಮಹತ್ತರವಾದ ನಾಟಕಗಳಲ್ಲೊಂದು. ಅದರ ನಾಯಿಕೆ ಮಾನಸಿಕ ದೌರ್ಬಲ್ಯದಿಂದ ವಿಪರೀತವಾಗಿ ಆಡುವ ಆಧುನಿಕ ಸ್ತ್ರೀಯರ ಪ್ರತಿನಿಧಿ. ನಿಪುಣ ನಿರ್ಮಾಪಕ (ದಿ ಮಾಸ್ಟರ್ ಬಿಲ್ಡರ್) ಕಲೆಗಾರರ ಸ್ಥಿತಿಗತಿಗಳ ಮತ್ತು ಆದರ್ಶಗಳ ಸಾಂಕೇತಿಕ ಚಿತ್ರಣ, ಪುಟ್ಟ ಇಯೆಲ್ಫ (ಲಿಟ್ಲ್ ಇಯೋಲ್ಫ 1894) ಮಕ್ಕಳ ವಿಷಯದಲ್ಲಿ ತಂದೆತಾಯಿಗಳ ಹೊಣೆಯನ್ನು ಕುರಿತದ್ದು. ಜಾನ್ ಗೇಬ್ರಿಯಲ್ ಬಾರ್ಕಮನ್ ಮತ್ತು ಸತ್ತವರು ನಾವು ಎಚ್ಚೆತ್ತಾಗ (ವೆನ್ ವಿ ಡೆಡ್ ಅವೇಕ್) ಇಬ್ಸೆನ್ನನ ಕೊನೆಯ ನಾಟಕಗಳು. ಮೊದಲನೆಯದು ವಾಸ್ತವಿಕ ವಸ್ತು ಪ್ರತಿಪಾದಕವಾದರೆ ಎರಡನೆಯದು ಸಂಕೇತ ಪ್ರಧಾನವಾದುದು, ಆದರೆ ಎರಡೂ ಪ್ರೇಮಶೂನ್ಯತೆಯ ಫಲವಾಗಿ ಹೃದಯ ಬರಿದಾಗಿ ಮೃತ ಸಮಾನರಾಗುವವರನ್ನು ಚಿತ್ರಿಸುತ್ತವೆ. [೩]
ಆಧುನಿಕ ನಾಟಕದ ಪಿತಾಮಹ
[ಬದಲಾಯಿಸಿ]ಆಧುನಿಕ ನಾಟಕದ ಮೇಲೆ ಇಬ್ಸೆನ್ನನ ಪ್ರಭಾವ ಮಹತ್ತರವಾದುದು. ಆಧುನಿಕ ನಾಟಕದ ಪಿತಾಮಹನೆಂಬ ಹೆಸರೂ ಅವನಿಗೆ ಸಂದಿದೆ. ನಾಟಕ ಆದ್ಯಗಮನ ಕೊಡಬೇಕಾದುದು. ರಚನೆಗೆ-ಕಲೆಗೆ-ಎಂಬ ಫ್ರೆಂಚ್ ಲೇಖಕರ ವಾದವನ್ನು ಆತ ನಿರಾಕರಿಸಿದ. ಅವನ ನಾಟಕಗಳು ತಂತ್ರದ ದೃಷ್ಟಿಯಿಂದ, ರಂಗ ಸ್ಥಳದಲ್ಲಿ ಉಂಟುಮಾಡುವ ಪರಿಣಾಮದ ದೃಷ್ಟಿಯಿಂದ ಬಲಹೀನವೆಂದೇನೂ ಅಲ್ಲ. ಬಾಲ್ಯದಿಂದಲೂ ನಾಟಕಶಾಲೆಗಳ ಮತ್ತು ನಾಟಕಗಳ ವಾತಾವರಣದಲ್ಲೇ ಬೆಳೆದು ದುಡಿದವನ ಕೃತಿಗಳ ರಚನೆ ಸಹಜವಾಗಿಯೇ ಚೆನ್ನಾಗಿರಬೇಕು. ಆದರೆ ಕೇವಲ ಬಾಹ್ಯತಂತ್ರಗಳಿಗಿಂತಲೂ ಹೆಚ್ಚಾಗಿ ಆತ ಗಮನಕೊಟ್ಟದ್ದು ನಾಟಕದ ವಸ್ತುವಿಗೆ. ಅವನಿಗೆ ನಾಟಕ ಪ್ರತಿಪಾದಿಸುವ ವಿಷಯ ಅದರ ಜೀವಾಳ. ತನ್ನ ಕಾಲದ ಸಾಮಾಜಿಕ ಮತ್ತು ಇತರ ಸಮಸ್ಯೆಗಳನೇಕವನ್ನು ಆತ ರಂಗಭೂಮಿಗೆ ತಂದು ತಂತ್ರಕ್ಕಿಂತಲೂ ಹೆಚ್ಚಾಗಿ ಪಾತ್ರಗಳ ಗುಣದೋಷಗಳಿಗೆ ಪ್ರಾಮುಖ್ಯವನ್ನು ಕೊಟ್ಟುದಲ್ಲದೆ ಕುಟುಂಬಗಳಲ್ಲಿ, ಸಮಾಜದಲ್ಲಿ, ನಡೆಯುವ ಮಾನಸಿಕ ಘರ್ಷಣೆಗಳನ್ನು ವಸ್ತುವಾಗಿ ಉಳ್ಳ ನಾಟಕಗಳನ್ನು ಸೃಜಿಸಿದ. [೪]ನೀರ್ಗಲ್ಲು ಹೊನಲುಗಳೂ ಪೈನ್ ಮರಗಳ ಹೆಗ್ಗಾಡುಗಳೂ ಇನ್ನು ಸಾಕು. ಇಂದು ನಮಗೆ ಬೇಕಾಗಿರುವುದು ಜನಮನಗಳಲ್ಲಿ ನಡೆಯತ್ತಿರುವ ಮೂಕಚಿಂತನೆ-ಇದು ಆತ ತನ್ನ ಇಪ್ಪತ್ತೆರಡನೆಯ ವರ್ಷದಲ್ಲಿ ನಾರ್ವೆದೇಶದ ಅಂದಿನ ಸಾಹಿತ್ಯದ ವಿಚಾರವಾಗಿ ಹೇಳಿದ ಮಾತು. ಅವನ ನಾಟಕಗಳಲ್ಲಿ ನಾವು ಈ ಹೊಸ ವಸ್ತುವನ್ನು ಹೇರಳವಾಗಿ ಕಾಣುತ್ತೇವೆ. ವ್ಯಕ್ತಿಸ್ವಾತಂತ್ರ್ಯ ಸಮಾಜಕ್ಕಿಂತಲೂ ಹೆಚ್ಚಿನದು, ಪಾಪವಿರುವುದು ವಿಚಾರಶೂನ್ಯವಾದ ಪದ್ಧತಿಗಳನ್ನೂ ಸಂಪ್ರದಾಯಗಳನ್ನೂ ಎದುರಿಸುವುದರಲ್ಲಿಲ್ಲ. ಪ್ರೇಮಶೂನ್ಯತೆಯಲ್ಲಿ-ಎಂಬುದು ಅವನ ನಾಟಕಗಳಲ್ಲಿ ಉದ್ದಕ್ಕೂ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಹರಿಯುವ ಭಾವಗಳು. ಇವೇ ಮೊದಲಾದ ತತ್ತ್ವಗಳನ್ನೂ ಪ್ರಶ್ನೆಗಳನ್ನೂ ತನ್ನ ನಾಟಕಗಳಲ್ಲಿ ತಂದು ಆತ ನಾಟಕಕ್ಕೇ ತೂಕ ಕೊಟ್ಟ. ಆದರೆ ಕೆಲವು ವೇಳೆ ಆ ತೂಕದ ಪರಿಣಾಮವಾಗಿಯೇ ಅವನ ನಾಟಕಗಳ ಪ್ರದರ್ಶನ ಅಸಮರ್ಪಕವಾಗುತ್ತದೆಯೆಂದೂ ಹೇಳಬೇಕು.[೫]
ಇಬ್ಸೆನ್ ಯೂರೋಪಿನ ನಾಟಕಕಾರರನೇಕರ ಮೇಲೆ ಪ್ರಭಾವ ಬೀರಿದ ಇಂಗ್ಲಿಷ್ ನಾಟಕಕಾರ ಬರ್ನಾರ್ಡ್ ಷಾ ಅಂಥವರಲ್ಲಿ ಒಬ್ಬ.
ಇಬ್ಸೆನ್ನನ ಕೆಲವು ನಾಟಕಗಳು ಕನ್ನಡದಲ್ಲಿ ಅನುವಾದವಾಗಿವೆ. ಮೊಟ್ಟಮೊದಲು ಈ ಕೆಲಸ ಮಾಡಿದವರು ದಿವಂಗತ ಎಸ್.ಜಿ. ಶಾಸ್ತ್ರಿಗಳು. ಹೆಲ್ಗೊಲೆಂಡಿನ ವೀರರು ಮತ್ತು "ಸೂತ್ರದ ಗೊಂಬೆ" ಅವರು ಅನುವಾದಿಸಿದರು. ಈಚೆಗೆ ಎಂ.ಗೋಪಾಲಕೃಷ್ಣ ಅಡಿಗರು 'ಜನತೆಯ ಶತ್ರು' ಶ್ರೀರಂಗರು "ಕಾಡು ಕೋಳಿ ಮತ್ತು ದೆವ್ವಗಳು" ನಾಟಕಗಳನ್ನೂ ಕನ್ನಡಿಸಿದ್ದಾರೆ. ಇಬ್ಸೆನ್ನನ ನಾಲ್ಕು ನಾಟಕಗಳು ಎಂಬ ಎಸ್.ಮಂಜುನಾಥರ ಉಪನ್ಯಾಸ ಮೈಸೂರು ವಿಶ್ವವಿದ್ಯಾನಿಲಯದ ಪ್ರಚಾರ ಪುಸ್ತಕ ಮಾಲೆಯ ಕಿರುಹೊತ್ತಗೆಗಳ ಮಾಲೆಯಲ್ಲಿ ಪ್ರಕಟವಾಗಿದೆ.
ಉಲ್ಲೇಖಗಳು
[ಬದಲಾಯಿಸಿ]