ಕ್ರಿಸ್ಟಿಯಾನ್ ಹೈಜೆನ್ಸ್
ಕ್ರಿಸ್ಟಿಯಾನ್ ಹೈಜೆನ್ಸ್ | |
---|---|
ಜನನ | ದ ಹೇಗ್, ಡಚ್ ಗಣರಾಜ್ಯ | ೧೪ ಏಪ್ರಿಲ್ ೧೬೨೯
ಮರಣ | 8 July 1695 ದ ಹೇಗ್, ಡಚ್ ಗಣರಾಜ್ಯ | (aged 66)
ವಾಸಸ್ಥಳ | ನೆದರ್ಲಂಡ್ಸ್, ಫ್ರಾನ್ಸ್ |
ರಾಷ್ಟ್ರೀಯತೆ | ಡಚ್ |
ಕಾರ್ಯಕ್ಷೇತ್ರ | ಭೌತಶಾಸ್ತ್ರ ಗಣಿತ ಖಗೋಳ ವಿಜ್ಞಾನ ಕಾಲಮಾಪನಶಾಸ್ತ್ರ |
ಸಂಸ್ಥೆಗಳು | ರಾಯಲ್ ಸೊಸೈಟಿ ಆಫ಼್ ಲಂಡನ್ ಫ಼್ರೆಂಚ್ ಅಕಾಡೆಮಿ ಆಫ಼್ ಸೈನ್ಸಸ್ |
ಅಭ್ಯಸಿಸಿದ ವಿದ್ಯಾಪೀಠ | ಲೈಡನ್ ವಿಶ್ವವಿದ್ಯಾಲಯ ಆಂಜೆ ವಿಶ್ವವಿದ್ಯಾಲಯ |
ಪ್ರಸಿದ್ಧಿಗೆ ಕಾರಣ | ಟೈಟನ್ ಶನಿಗ್ರಹದ ಉಂಗುರಗಳ ವಿವರಣೆ ಅಪಕೇಂದ್ರ ಬಲ ಸಂಘಟ್ಟನಾ ಸೂತ್ರಗಳು ಲೋಲಕ ಗಡಿಯಾರ ಹೈಗೆನ್ಸ್-ಫ಼್ರೆಸ್ನೆಲ್ ತತ್ತ್ವ ತರಂಗ ಸಿದ್ಧಾಂತ ದ್ವಿವಕ್ರೀಕರಣ ಲಂಬಜ ಹೈಜೇನಿಯನ್ ನೇತ್ರಕ 31 ಸಮಶ್ರುತಿ ಸಂಗೀತ ಶ್ರುತಿ ಮಾಡುವುದು ಹೈಜೆನ್ಸ್-ಸ್ಟೈನರ್ ಪ್ರಮೇಯ |
ಪ್ರಭಾವಗಳು | ಗೆಲೀಲಿಯೊ ರೆನೆ ಡೆಕಾರ್ಟೆ ಫ಼್ರಾನ್ ವಾನ್ ಶೂಟನ್ |
ಪ್ರಭಾವಿತರು | ಗಾಟ್ಫ಼್ರೀಡ್ ಲೇಯ್ಬ್ನಿಜ಼್ ಐಸ್ಯಾಕ್ ನ್ಯೂಟನ್[೧][೨] |
ಕ್ರಿಸ್ಟಿಯಾನ್ ಹೈಜೆನ್ಸ್ ಲಂಡನ್ನಿನ ರಾಯಲ್ ಸೊಸೈಟಿಯ "ಫೆಲೋ" ಪುರಸ್ಕಾರಕ್ಕೆ ಪಾತ್ರನಾಗಿದ್ದ ಹದಿನೇಳನೇ ಶತಮಾನದ ವಿಜ್ಞಾನಿ. ನೆದರ್ಲಾಂಡ್ಸ್ ದೇಶದವನು. ಖಗೋಳ ವಿಜ್ಞಾನ ಮತ್ತು ಭೌತಶಾಸ್ತ್ರ ಇವನ ಮುಖ್ಯ ಕ್ಷೇತ್ರಗಳು. ಇದಲ್ಲದೆ ಗಣಿತ ಕ್ಷೇತ್ರದಲ್ಲಿ ಸಂಭಾವ್ಯತೆ (ಪ್ರಾಬಬಿಲಿಟಿ) ಕುರಿತಾಗಿ ಸಂಶೋಧನೆ ನಡೆಸಿದ್ದಾನೆ. ಸಮಯದ ಮಾಪನ ಕೂಡಾ ಇವನ ಆಸಕ್ತಿಯಾಗಿತ್ತು.
ಹೈಜೆನ್ಸ್ ತನ್ನ ಕಾಲಮಾನದಲ್ಲಿ ಮುಂಚೂಣಿಯ ವಿಜ್ಞಾನಿಯಾಗಿದ್ದ. ದೂರದರ್ಶಕ ಮೂಲಕ ಶನಿಗ್ರಹದ ಸುತ್ತಲೂ ಇರುವ ಉಂಗುರಗಳನ್ನು ಅಧ್ಯಯನ ಮಾಡಿ ಶನಿಗ್ರಹದ “ಟೈಟನ್” ಚಂದ್ರನನ್ನು ಗುರುತಿಸಿದವನು ಇವನೇ. ಇಂದು ಸಾಮಾನ್ಯವಾಗಿರುವ ಪೆಂಡುಲಮ್ ಗಡಿಯಾರವನ್ನು ಕಂಡುಹಿಡಿದದ್ದು ಈತನೇ. ಇಂದಿನ ಮಕ್ಕಳು ಶಾಲೆಯಲ್ಲಿ ಕಲಿಯುವ ಮೆಕಾನಿಕ್ಸ್, ಆಪ್ಟಿಕ್ಸ್ ಮತ್ತು ಸಂಭಾವ್ಯತೆಯ ಕೆಲವು ಮುಖ್ಯ ಶೋಧನೆಗಳನ್ನು ಹೈಜೆನ್ಸ್ ನಡೆಸಿದ್ದಾನೆ.
ಪ್ರಾರಂಭಿಕ ಜೀವನ
[ಬದಲಾಯಿಸಿ]ಕ್ರಿಸ್ಟಿಯಾನ್ ಹೈಗೆನ್ಸ್ ನೆದರ್ಲೆಂಡ್ಸ್ ದೇಶದ “ಹೇಗ್” ನಗರದಲ್ಲಿ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದ.[೩][೪] ತಂದೆ ಕಾನ್ಸ್ಟಾಂಟಿನ್ ಹೈಗೆನ್ಸ್ ಒಬ್ಬ ರಾಜಕೀಯ ಮುತ್ಸದ್ದಿ. ಜೊತೆಗೇ ಕವಿ ಮತ್ತು ಸಂಗೀತಗಾರನಾಗಿದ್ದ. ಆತನಿಗೆ ಪ್ರಸಿದ್ಧ ವಿಜ್ಞಾನಿಗಳಾದ ಗೆಲಿಲಿಯೋ ಗೆಲಿಲಿ, ರೆನಿ ಡೆಕಾರ್ಟೆ ಮೊದಲಾದವರ ಒಡನಾಟವಿತ್ತು.[೫] 16 ವರ್ಷ ವಯಸ್ಸಾಗುವ ತನಕ ಮನೆಯಲ್ಲಿಯೇ ಶಿಕ್ಷಣ. ರೇಖಾಗಣಿತ, ಯಾಂತ್ರಿಕ ಮಾದರಿಗಳ ನಿರ್ಮಾಣ, ಲ್ಯೂಟ್ ವಾದನ ಮತ್ತು ಸಾಮಾಜಿಕ ಕುಶಲತೆಗಳ ಕಲಿಕೆ. ಕ್ರಿಸ್ಟಿಯಾನ್ 15 ವರ್ಷದ ಹುಡುಗನಾಗಿದ್ದಾಗ ಅವನಿಗೆ ಗಣಿತದ ಮನೆಮೇಷ್ಟ್ರು ಸ್ಟಾಂಪಿಯನ್ ಎಂಬಾತ ಅವನಿಗೆ ಅನೇಕ ಸಮಕಾಲೀನ ವೈಜ್ಞಾನಿಕ ಗ್ರಂಥಗಳನ್ನು ಓದಲು ನೀಡಿದನಂತೆ.[೬] ಗಣಿತ ಕಲಿಕೆಯ ಮೇಲೆ ಡೇಕಾರ್ಟೆಯ ಪ್ರಭಾವ.
ವಿದ್ಯಾರ್ಥಿ ಜೀವನ
[ಬದಲಾಯಿಸಿ]ಕ್ರಿಸ್ಟಿಯಾನ್ನ ತಂದೆಯು ಅವನನ್ನು ಓದಲು ಲೇಡನ್ ವಿಶ್ವವಿದ್ಯಾಲಯಕ್ಕೆ ಕಳಿಸಿದ (1645-1647).[೭] ಅಲ್ಲಿ ವಾನ್ ಷೂಟೆನ್ ಎಂಬ ಗುರುವಿನ ಮೇಲ್ವಿಚಾರಣೆಯಲ್ಲಿ ಅವನು ಗಣಿತ ಮತ್ತು ನ್ಯಾಯಶಾಸ್ತ್ರಾಧ್ಯಯನ ಮಾಡಿದ. ಷೂಟೆನ್ ಅವನಿಗೆ ಸಮಕಾಲೀನ ಗಣಿತದ ವಿಷಯಗಳನ್ನು ಪರಿಚಯಿಸಿದ. ಇವುಗಳಲ್ಲಿ ಗಣಿತಜ್ಞ ಫರ್ಮಾನ ಸಂಶೋಧನೆಯೂ ಸೇರಿತ್ತು.[೮] ನಂತರ ಕಾಲೇಜ್ ಆಫ್ ಆರೆಂಜ್ ಎಂಬ ಕಾಲೇಜಿಗೆ ಶಿಕ್ಷಣ ಪಡೆಯಲು ಹೋದ. ಜಾನ್ ಪೆಲ್ (1611-85) ಎಂಬ ಗಣಿತ ಪ್ರಭೃತಿಯಿಂದ ಗಣಿತ ಕಲಿಯುವ ಸೌಭಾಗ್ಯ. ಜೊತೆಯಲ್ಲಿಯೇ ಮೇರಿನ್ ಮೆರ್ಸೆನ್(1588-1648) ಎಂಬ ಇನ್ನೊಬ್ಬ ಗಣಿತ ವಿದ್ವಾಂಸನಿಂದ ಪತ್ರಮುಖೇನ ಗಣಿತ ಶಿಕ್ಷಣ.
ರಾಯಭಾರೀ ತಂಡದ ಸದಸ್ಯನಾಗಿ ಡೆನ್ಮಾರ್ಕಿಗೆ ಪ್ರಯಾಣ (1649). ಅಲ್ಲಿಂದ ಸ್ಟಾಕ್ಹೋಮಿಗೆ ತೆರಳಿ ಡೇಕಾರ್ಟೆಯನ್ನು(1596-1650) ಭೇಟಿ ಮಾಡುವ ಬಯಕೆ ಪ್ರತಿಕೂಲ ಹವಾಮಾನದಿಂದಾಗಿ ಈಡೇರದಿದ್ದುದರಿಂದ ತಂಡದೊಂದಿಗೆ ಯುರೋಪ್ ಪ್ರವಾಸ.[೯]
ತನ್ನ ಮಗನೂ ತನ್ನಂತೆ ರಾಜಕೀಯ ಮುತ್ಸದ್ದಿಯಾಗಬೇಕೆಂದು ಕ್ರಿಸ್ಟಿಯಾನನ ತಂದೆ ಬಯಸಿದ್ದ. ಆದರೆ ಮಗನ ಅಭಿರುಚಿ ಗಣಿತ ಮತ್ತು ವಿಜ್ಞಾನದಲ್ಲಿದೆ ಎಂದು ತಂದೆಗೆ ಮನವರಿಕೆಯಾಯಿತು.
ಪ್ರಾರಂಭಿಕ ಪ್ರಕಟಣೆಗಳು
[ಬದಲಾಯಿಸಿ]ಹೈಜೆನ್ಸ್ ಬರೆದಿದ್ದು ಫ್ರೆಂಚ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ.[೧೦] ಹದಿನೆಂಟು ವರ್ಷದ ತರುಣನಾಗಿದ್ದಾಗಲೇ ಅವನು ಗಣಿತದ ವಿಷಯಗಳನ್ನು ಕುರಿತು ಮಾರ್ಸೀನ್ ಎಂಬ ಗಣಿತಜ್ಞನ ಜೊತೆ ಪತ್ರವ್ಯವಹಾರ ನಡೆಸಿದ. ಯುಕ್ತ ಅಂತರದಲ್ಲಿರುವ ಆಧಾರಗಳಿಗೆ ಜೋತುಬೀಳುವಂತೆ ಹಗ್ಗವೊಂದನ್ನು ಕಟ್ಟಿದರೆ ಅದು ತಾಳುವ ಆಕಾರಕ್ಕೆ ಸಂಬಂಧಿಸಿದ ಮತ್ತು ಇನ್ನಿತರ ಕೆಲವು ಸಮಸ್ಯೆಗಳನ್ನು ಪರಿಹರಿಸುವಂತೆ ಮೆರ್ಸೆನ್ ಒಡ್ಡಿದ ಸವಾಲಿನ ಸ್ವೀಕಾರ. ಸಮಸ್ಯೆಗಳನ್ನು ಪರಿಹರಿಸಲಾಗದಿದ್ದರೂ ಪರವಲಯ ಆಕಾರದಲ್ಲಿ ಹಗ್ಗ ಜೋತುಬೀಳುವಂತೆ ಮಾಡಬೇಕಾದರೆ ತೂಕಗಳನ್ನು ಎಲ್ಲೆಲ್ಲಿ ನೇತುಹಾಕಬೇಕೆಂಬುದರ ಪತ್ತೆ. ತೂಗುವ ಸೇತುವೆಯ ಆಕಾರ ಪರವಲಯ ಅಲ್ಲವೆಂದು ವಾದಿಸಿದ.[೧೧] ಮಾರ್ಸೀನ್ ತರುಣನ ಪ್ರತಿಭೆಯಿಂದ ಪ್ರಭಾವಿತನಾಗಿ ಆತನ ತಂದೆಗೆ ಪತ್ರ ಬರೆದು ಬಾಯ್ತುಂಬಾ ಹೊಗಳಿದ. ಮಾರ್ಸೀನ್ ಬರೆದ ಪ್ರಬಂಧಗಳನ್ನು ಕ್ರಿಸ್ಟಿಯಾನ್ ಗಂಭೀರವಾಗಿ ಓದಿದ. ಸಂಗೀತ ವಾದ್ಯಗಳಿಂದ ಹೊರಹೊಮ್ಮುವ ನಾದಗಳನ್ನು ಕುರಿತು ಅಭ್ಯಾಸ ನಡೆಸಿದ. 25 ವರ್ಷಗಳು ತುಂಬಿದಾಗ ಕ್ರಿಸ್ಟಿಯಾನ್ ತಂದೆಯ ಮನೆಗೆ ಹಿಂತಿರುಗಿದ. ಅಲ್ಲಿ ಪೂರ್ಣಕಾಲ ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಅವನಿಗೆ ಸಾಧ್ಯವಾಯಿತು.
1655ರಲ್ಲಿ ಕ್ರಿಸ್ಟಿಯಾನ್ ಪ್ಯಾರಿಸ್ ನಗರಕ್ಕೆ ಭೇಟಿ ನೀಡಿ ಅಲ್ಲಿ ಐದು ವರ್ಷ ಕಳೆದ. ಇಲ್ಲಿಯ ವಿದ್ವತ್ಪೂರ್ಣ ವಾತಾವರಣದಲ್ಲಿ ಅವನ ಪ್ರತಿಭೆ ಅರಳಿತು. ತಾನು ಆರಾಧಿಸುತ್ತಿದ್ದ ಗಣಿತಜ್ಞ ಪಿಯರೆ ಡಿ ಫರ್ಮಾ ಜೊತೆಗೂ ಅವನು ಪತ್ರವ್ಯವಹಾರ ನಡೆಸಿದ. ಆದರೆ ಈಗ ಫರ್ಮಾಗೆ ಗಣಿತದಲ್ಲಿ ಆಸಕ್ತಿ ಕಡಿಮೆಯಾಗಿದೆ ಎಂದು ತಿಳಿದು ನಿರಾಶನಾದ.
ವೈಜ್ಞಾನಿಕ ಪ್ರಕಟಣೆಗಳು
[ಬದಲಾಯಿಸಿ]ತನ್ನ ಶೋಧನೆಯ ಪರಿಣಾಮಗಳನ್ನು ಪ್ರಕಟಿಸಲು ಹೈಜೆನ್ಸ್ ತುಂಬಾ ಕಾಲ ತೆಗೆದುಕೊಳ್ಳುತ್ತಿದ್ದ.[೧೨] ಅವನ ಗುರುವಾಗಿದ್ದ ವಾನ್ ಷೂಟೆನ್ ಇದಕ್ಕೆ ಕಾರಣನಾಗಿರಬಹುದು. ವಾನ್ ಷೂಟೆನ್ ಆಗ ಪ್ರಸಿದ್ಧ ಗಣಿತಜ್ಞನಾಗಿದ್ದ. ತನ್ನ ಪ್ರಸಿದ್ಧಿಗೆ ಕುಂದು ಬಂದೀತೆಂದು ಆತ ಯಾವುದನ್ನೇ ಪ್ರಕಟಿಸುವ ಮುಂಚೆ ತುಂಬಾ ಮೀನ-ಮೇಷ ಎಣಿಸುತ್ತಿದ್ದ.[೧೩] ಇದೇ ಜಾಯಮಾನವು ಕ್ರಿಸ್ಟಿಯಾನನಿಗೂ ಬಳುವಳಿಯಾಗಿ ಬಂತು.
ಗ್ರಿಗೋರಿಯಸ್ ಸೈಂಟ್ ವಿನ್ಸೆಂಟ್ (1584-1667) ಪ್ರತಿಪಾದಿಸಿದ್ದ ವೃತ್ತದ ಚೌಕೀಕರಣ ವಿಧಾನದ ತರ್ಕದೋಷವನ್ನು ವಿವರಿಸುವ ‘ಸೈಕ್ಲೊಮೆಟ್ರಿಯೇ’ (1651) ಮತ್ತು ಇಂತಹುದೇ ಗಣಿತಸಮಸ್ಯೆಗಳ ಕುರಿತಾದ ‘ಡೆ ಸರ್ಕ್ಯುಲೈ ಮ್ಯಾಗ್ನಿಟ್ಯೂಡೈನ್ ಇನ್ವೆಂಟ’ (1654) ಲೇಖನಗಳ ಪ್ರಕಟಣೆ ವೃತ್ತಿ ಜೀವನದ ಆರಂಭದಲ್ಲಿ ಈತನಿಗಿದ್ದ ಗಣಿತಾಸಕ್ತಿಯ ಸೂಚಕಗಳು. “ಚದರೀಕರಣ ಕುರಿತಾದ ಪ್ರಮೇಯಗಳು” ಎಂಬುದು ಅವನ ಮೊದಲ ಪ್ರಕಟಿತ ಬರಹ (1651). ಇದಕ್ಕೆ ಹಿಂದೆ ಚದರೀಕರಣ ಕುರಿತು ಪ್ರಕಟವಾದ ಸಂಶೋಧನೆಗಳಲ್ಲಿ ತಪ್ಪುಗಳನ್ನು ಕ್ರಿಸ್ಟಿಯಾನ್ ತೋರಿಸಿದ. ಇದರಿಂದ ಅವನಿಗೆ ಸಾಕಷ್ಟು ಪ್ರಸಿದ್ಧಿ ದೊರೆಯಿತು.
ದೂರದರ್ಶಕಗಳನ್ನು ಅಧ್ಯಯನ ಮಾಡುವ ಪ್ರಯತ್ನದಲ್ಲಿ ಕ್ರಿಸ್ಟಿಯಾನ್ ಮಸೂರಗಳನ್ನು ಕುರಿತು ಸಂಶೋಧನೆ ನಡೆಸಿದ. ತನ್ನ ಸೋದರನ ಸಹಾಯದಿಂದ ತಾನೇ ಗಾಜನ್ನು ಅರೆದು ಮಸೂರಗಳನ್ನು ಸಿದ್ಧಪಡಿಸಲು ಕಲಿತ.[೧೪] 1662ರಲ್ಲಿ ಅವನು ಒಂದು ವಿಶೇಷ ಬಗೆಯ ಮಸೂರವನ್ನು ಸಿದ್ಧಪಡಿಸಿದ. ಇಂದು ಅದಕ್ಕೆ ಹೈಜೆನಿಯನ್ ಐಪೀಸ್ ಎನ್ನುತ್ತಾರೆ. ದೂರದರ್ಶಕದಲ್ಲಿ ನೋಡಲು ಇದೊಂದು ಎರಡು ಮಸೂರಗಳ ವ್ಯವಸ್ಥೆ.[೧೫][೧೬] ಮಸೂರಗಳನ್ನು ಕುರಿತು ಆಗ ತುಂಬಾ ಕುತೂಹಲವಿತ್ತು. ಈ ಸಂಬಂಧದಲ್ಲಿ ಕ್ರಿಸ್ಟಿಯಾನ್ ಅಂದಿನ ಪ್ರಸಿದ್ಧ ವಿಜ್ಞಾನಿ ಸ್ಪಿನೋಜಾ ಎಂಬುವನನ್ನು ಭೇಟಿ ಮಾಡಿದ. ಆದರೆ ವಿಜ್ಞಾನವನ್ನು ಕುರಿತು ಇವರ ದೃಷ್ಟಿಕೋನಗಳು ವಿಭಿನ್ನವಾಗಿದ್ದವು.[೧೭]
“ಆಕಸ್ಮಿಕವನ್ನು ಅವಲಂಬಿಸಿದ ಆಟಗಳಲ್ಲಿ ತರ್ಕ” ಎಂಬುದು ಕ್ರಿಸ್ಟಿಯಾನ್ ಪ್ರಕಟಿಸಿದ ಒಂದು ಪ್ರಬಂಧ (1657).[೧೮][೧೯] ಈ ಪ್ರಬಂಧವು ಡಚ್ ಭಾಷೆಯಲ್ಲಿತ್ತು. ಸಂಭಾವ್ಯತೆಯನ್ನು ಕುರಿತು ಪಿಯರೆ ಫರ್ಮಾ ಮತ್ತು ಬ್ಲೇಸ್ ಪ್ಯಾಸ್ಕಲ್ ಪ್ರಕಟಿಸಿದ ಸಂಶೋಧನೆಯನ್ನು ಕುರಿತು ಅವನು ಪ್ಯಾರಿಸ್ನಲ್ಲಿದ್ದಾಗ ಕೇಳಿದ್ದ.[೨೦] ಕ್ರಿಸ್ಟಿಯಾನ್ ಡಚ್ ಭಾಷೆಯಲ್ಲಿ ಬರೆದ ಪ್ರಬಂಧವನ್ನು ವಾನ್ ಷೂಟೆನ್ ಲ್ಯಾಟಿನ್ ಭಾಷೆಗೆ ಅನುವಾದಿಸಿದ.[೨೧] ಹಾಲೆಂಡಿಗೆ ಮರಳಿದ ಇವನು ತಾನು ಗಳಿಸಿದ ಮಾಹಿತಿಯನ್ನಾಧರಿಸಿ ‘ಡೆ ರೇಶಿಯೊಸಿನಿಇಸ್ ಇನ್ ಲ್ಯುಡೊ ಅಲ್ಯೇಯ್’ ಎಂಬ ಕಿರುಹೊತ್ತಗೆ ಪ್ರಕಟಿಸಿದ.[೨೨] ಸಂಭಾವ್ಯತೆ ಕುರಿತು ಪ್ರಕಟವಾದ ಮೊದಲ ಗ್ರಂಥ ಇದು. ಖಗೋಳಶಾಸ್ತ್ರದಲ್ಲೂ ಅವನಿಗೆ ಆಸಕ್ತಿಯಿತ್ತು. ಅಂದಿನ ಕಾಲದ ಅತ್ಯುತ್ತಮ ದೂರದರ್ಶಕದ ಮೂಲಕ ಕ್ರಿಸ್ಟಿಯಾನ್ ಮೇ 1661ರಲ್ಲಿ ಬುಧಗ್ರಹವು ಸೂರ್ಯನ ಮೇಲೆ ಹೋಗುವುದನ್ನು ಗಮನಿಸಿದ.[೨೩] ಇದೇ ರೀತಿ ಶುಕ್ರಗ್ರಹವು ಸೂರ್ಯನ ಮೇಲೆ ಹಾದುಹೋಗುವುದನ್ನು ಕೂಡಾ ಗಮನಿಸಿ ಅದನ್ನು ಕುರಿತು ಪ್ರಬಂಧ ಬರೆದ (1662).[೨೪] ಅದೇ ವರ್ಷ ಅವನಿಗೆ ಸಂಗೀತದಲ್ಲಿ ಗಾಢ ಆಸಕ್ತಿ ಹುಟ್ಟಿತು. ಸ್ವಂತ ಸಂಗೀತ ನುಡಿಸುತ್ತಿದ್ದ ಅವನು ಸ್ವರಸಾಮ್ಯದ ಕುರಿತು ಸಂಶೋಧನೆ ನಡೆಸಿದರೂ ಪ್ರಕಟಿಸಲು ಉತ್ಸುಕತೆ ತೋರಲಿಲ್ಲ.[೨೫][೨೬] ಲಂಡನಿನಲ್ಲಿ ರಾಬರ್ಟ್ ಬಾಯ್ಲನ (1627-91) ನಿರ್ವಾತ ರೇಚಕದಿಂದ ಆಕರ್ಷಿತನಾದ ಇವನು ತಾಯ್ನಾಡಿಗೆ ಹಿಂತಿರುಗಿದ ಬಳಿಕ ಬಾಯ್ಲನ ಅನೇಕ ಪ್ರಯೋಗಗಳನ್ನು ಪುನರಾವರ್ತಿಸಿ ಪರೀಕ್ಷಿಸಿದ್ದು ಇವನ ಅದಮ್ಯ ಕುತೂಹಲ ಪ್ರವೃತ್ತಿಯ ಸೂಚಕ. ಈತನ ಸಾಧನೆಗಳಿಂದ ಪ್ರಭಾವಿತವಾದ ಇಂಗ್ಲೆಂಡಿನ ವಿಜ್ಞಾನಿ ಸಮುದಾಯ1663ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋ ಗೌರವ ನೀಡಿತು.[೨೭][೨೮]
ಫ್ರಾನ್ಸ್ ದೇಶದಲ್ಲಿ
[ಬದಲಾಯಿಸಿ]ಪ್ಯಾರಿಸ್ ನಗರದಲ್ಲಿ ಮಾರ್ಸೀನ್ ಕಟ್ಟಿದ ಒಂದು ವಿಜ್ಞಾನಿಗಳ ಗುಂಪಿತ್ತು. ಇವರು ಸಭೆ ಸೇರಿ ವಿಜ್ಞಾನ ಕುರಿತಾದ ವಿಷಯಗಳ ಮೇಲೆ ಚರ್ಚೆ ನಡೆಸುತ್ತಿದ್ದರು. ಈ ಕೂಟಗಳಲ್ಲಿ ಕ್ರಿಸ್ಟಿಯಾನ್ ಭಾಗವಹಿಸಿದ. ಕೇವಲ ಒಣ ಚರ್ಚೆಯ ಬದಲು ಪ್ರಯೋಗ ಮಾಡಿ ತೋರಿಸುವುದು ಮೇಲೆಂಬ ಬಣವನ್ನು ಅವನು ಪುಷ್ಟೀಕರಿಸಿದ.[೨೯] 1666ರಲ್ಲಿ ಈತ ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯನಾಗಿ ಪ್ಯಾರಿಸ್ ನಗರದಲ್ಲಿ ಬಂದು ನೆಲೆಸಿದ.[೩೦] ಆ ಸಂಸ್ಥೆ ಇನ್ನೂ ಸ್ಥಾಪನೆಯಾಗಿಲ್ಲ ಎಂಬುದನ್ನು ತಿಳಿದ ಈತ ಅಲ್ಲಿಯೇ ನೆಲಸಿ ಅದರ ಸಂಘಟನೆಯ ಮುಖಂಡತ್ವ ವಹಿಸಿದ. ಪ್ಯಾರಿಸ್ ನಗರದಲ್ಲಿ ಆತನಿಗೆ ಜೀನ್ ಬ್ಯಾಪ್ಟಿಸ್ಟ್ ಕೋಲ್ಬರ್ಟ್ ಎಂಬ ವಿಜ್ಞಾನಿಯ ನೆರವು ದೊರೆಯಿತು.[೩೧] ಫ್ರೆಂಚ್ ಅಕಾಡೆಮಿಯೊಂದಿಗೆ ಅವನ ಸಂಬಂಧ ಚೆನ್ನಾಗಿರಲಿಲ್ಲ. ಒಮ್ಮೆ ಜಡ್ಡು ಬಿದ್ದಾಗ “ನಾನು ಸತ್ತರೆ ನನ್ನ ಸಂಶೋಧನಾ ಕಾಗದಪತ್ರಗಳನ್ನು ರಾಯಲ್ ಸೊಸೈಟಿ ಆಫ್ ಲಂಡನ್ ಸಂಸ್ಥೆಗೆ ದಾನ ಮಾಡಿ” ಎಂದು ಕೋರಿದ.[೩೨] ಆದರೆ ಮುಂದೆ ನಡೆದ ಫ್ರೆಂಚ್ ಮತ್ತು ಡಚ್ ಕದನದಲ್ಲಿ ಬ್ರಿಟನ್ನಿನ ಪಾತ್ರದ ಕಾರಣ ಅವನ ಮತ್ತು ರಾಯಲ್ ಸೊಸೈಟಿಯ ನಡುವಣ ಸಂಬಂಧ ಕೆಟ್ಟಿತು.[೩೩] ಆಗ ಸೊಸೈಟಿಯ ಮುಖ್ಯಸ್ಥನಾಗಿದ್ದ ರಾಬರ್ಟ್ ಹುಕ್ ಈ ನಾಜೂಕು ಸಂದರ್ಭವನ್ನು ನಿಭಾಯಿಸಲು ಅಸಮರ್ಥನಾದ.[೩೪]
1672ರಲ್ಲಿ ಕ್ರಿಸ್ಟಿಯಾನ್ ಒಬ್ಬ ತರುಣ ಗಣಿತಜ್ಞನನ್ನು ಭೇಟಿಯಾದ. ಈತನೇ ಮುಂದೆ ಜಗತ್ಪ್ರಸಿದ್ಧನಾದ ಲೇಬ್ನಿಜ್. ಲೇಬ್ನಿಜ್ ಕ್ರಿಸ್ಟಿಯಾನನ ಕೈಕೆಳಗೆ ಕೆಲಸ ಮಾಡಿದ. ಕ್ರಿಸ್ಟಿಯಾನ್ ಈತನಿಗೆ ಜ್ಯಾಮಿತಿ ಬೋಧಿಸಿದ. ಲೇಬ್ನಿಜ್ ಪ್ರತಿಪಾದಿಸುತ್ತಿದ್ದ ಕಲನಶಾಸ್ತ್ರದ ವಿಷಯ ಕ್ರಿಸ್ಟಿಯಾನನಿಗೆ ಅಷ್ಟು ಪಥ್ಯವಾಗಲಿಲ್ಲ.[೩೫]
ಕೊನೆಯ ದಿನಗಳು
[ಬದಲಾಯಿಸಿ]1681ರಲ್ಲಿ ಕ್ರಿಸ್ಟಿಯಾನ್ ಹೇಗ್ ನಗರಕ್ಕೆ ಮರಳಿದ. ಇದಕ್ಕೆ ಕಾರಣ ಅವನು ತೀವ್ರವಾದ ಖಿನ್ನತೆಯಿಂದ ಬಳಲುತ್ತಿದ್ದುದು. ಆದರೂ 1684ರಲ್ಲಿ ಕೊಳವೆಯಿಲ್ಲದ ದೂರದರ್ಶಕದ ಕುರಿತು ಅವನು ಒಂದು ಪ್ರಬಂಧವನ್ನು ಪ್ರಕಟಿಸಿದ. 1685ರಲ್ಲಿ ಅವನು ಫ್ರಾನ್ಸ್ ದೇಶಕ್ಕೆ ಮರಳಲು ಪ್ರಯತ್ನಿಸಿದರೂ ರಾಜಕೀಯ ಕಾರಣಗಳಿಂದಾಗಿ ಅದು ಸಾಧ್ಯವಾಗಲಿಲ್ಲ. 1687ರಲ್ಲಿ ಅವನು ತನ್ನ ತಂದೆಯನ್ನು ಕಳೆದುಕೊಂಡ. ಹಾಫ್ಕಿಕ್ ಮನೆ ಅವನಿಗೆ ಆಸ್ತಿಯಾಗಿ ಬಂತು. ಅಲ್ಲಿ ಅವನು ತನ್ನ ಕೊನೆಯ ದಿನಗಳನ್ನು ಕಳೆದ.[೩೬]
ಇಂಗ್ಲೆಂಡಿಗೆ ಮೂರನೆಯ ಬಾರಿ ಭೇಟಿ ಕೊಟ್ಟಾಗ ಐಸಾಕ್ ನ್ಯೂಟನ್ ಎಂಬ ತರುಣ ವಿಜ್ಞಾನಿಯನ್ನು ಹೈಜೆನ್ಸ್ ಕಂಡ. ಅವರ ನಡುವೆ ಸಾಕಷ್ಟು ವೈಜ್ಞಾನಿಕ ಚರ್ಚೆಗಳು ನಡೆದವು. ಮುಂದೆ ಜಾನ್ ಲಾಕ್ ಎಂಬ ವಿಜ್ಞಾನಿಗೆ ಪತ್ರ ಬರೆದು ನ್ಯೂಟನ್ನನ ಗಣಿತದ ಶೋಧನೆಗಳು ಭದ್ರವಾದ ಬುನಾದಿ ಹೊಂದಿವೆ ಎಂದು ಹೊಗಳಿದ. ನ್ಯೂಟನ್ನನನ್ನು ಜಾನ್ ಲಾಕ್ ಗಂಭೀರವಾಗಿ ಸ್ವೀಕರಿಸಲು ಇದು ಸಹಕಾರಿಯಾಯಿತು.[೩೭] 1695ರಲ್ಲಿ ಕ್ರಿಸ್ಟಿಯಾನ್ ಕಾಲವಶನಾದ. ಅವನ ಸಮಾಧಿ ಹೇಗ್ ನಗರದಲ್ಲಿದೆ.
ಸಂಶೋಧನೆಗಳು
[ಬದಲಾಯಿಸಿ]ವಸ್ತುಗಳ ಚಲನೆ ಮತ್ತು ವಸ್ತುಗಳ ನಡುವಣ ಘರ್ಷಣೆ
[ಬದಲಾಯಿಸಿ]ಡೆಕಾರ್ಟೆ ಮತ್ತು ನ್ಯೂಟನ್ ನಡುವಣ ಕಾಲಮಾನದಲ್ಲಿ ಹೈಜೆನ್ಸ್ ಅತ್ಯಂತ ಮಹತ್ತರ ಪ್ರಕೃತಿ ವಿಜ್ಞಾನಿ ಎಂದು ನಂಬುತ್ತಾರೆ. ಡೆಕಾರ್ಟೆಯು ಪ್ರತಿಪಾಸಿದ ವಸ್ತುಗಳ “ಎಲಾಸ್ಟಿಕ್” ಘರ್ಷಣೆಯ ಸಿದ್ಧಾಂತವು ದೋಷಪೂರ್ಣವೆಂದು ಹೈಜೆನ್ಸ್ ನಂಬಿದ್ದ. ಈ ಸಿದ್ಧಾಂತವನ್ನು ಅವನು ಮತ್ತೆ ಪರಿಶೀಲಿಸಿ ಎರಡು ವಸ್ತುಗಳ ಘರ್ಷಣೆಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಹೊಸ ಸೂತ್ರಗಳನ್ನು ಸಿದ್ಧಪಡಿಸಿದ.[೩೮] ಇಂದು ನಾವು ಯಾವುದನ್ನು ನ್ಯೂಟನ್ನನು ನೀಡಿದ ಚಲನೆಯ ದ್ವಿತೀಯ ನಿಯಮವೆಂದು ಪರಿಗಣಿಸುತ್ತೇವೋ ಅದನ್ನು ಹೈಜೆನ್ಸ್ ಭಿನ್ನರೂಪದಲ್ಲಿ ಸಿದ್ಧಪಡಿಸಿದ್ದ. ರಾಶಿಯುಳ್ಳ ವಸ್ತು ತ್ರಿಜ್ಯ(ವ್ಯಾಸ×)ವುಳ್ಳ ವೃತ್ತಾಕಾರದ ಪರಿಧಿಯಲ್ಲಿ ವೇಗದಲ್ಲಿ ಚಲಿಸಿದರೆ ಅದು ಅನುಭವಿಸುವ ಕೇಂದ್ರಾಕರ್ಷಣ ಶಕ್ತಿಯ ಮೌಲ್ಯವನ್ನು ಹೈಜೆನ್ಸ್ ಲೆಕ್ಕ ಹಾಕಿದ್ದಾನೆ. (In modern notation:with m the mass of the object, v the velocity and r the radius.)
ಈ ವಿಷಯದ ಬಗ್ಗೆ ಪ್ರೌಢಪ್ರಬಂಧವೊಂದನ್ನು ರಾಯಲ್ ಸೊಸೈಟಿಗೆ ಕಳುಹಿಸಿದ (1668). ಸಂಘಟ್ಟನೆಗೆ ಸಂಬಂಧಿಸಿದಂತೆ ಅದು ಕೇಳಿದ ಪ್ರಶ್ನೆಗೆ ಉತ್ತರವಾಗಿ ‘ಢಿಕ್ಕಿಯಾಗುವ ಮುನ್ನ ಎರಡು ಕಾಯಗಳ ನಿರ್ದಿಷ್ಟ ದಿಶೆಯಲ್ಲಿಯ ಸಂವೇಗ ಢಿಕ್ಕಿಯ ಬಳಿಕ ಅವುಗಳ ಅದೇ ದಿಶೆಯಲ್ಲಿಯ ಸಂವೇಗಕ್ಕೆ ಸಮ’ ಎಂದು ಪ್ರಯೋಗ ಮುಖೇನ ಸಿದ್ಧಪಡಿಸಿದ.
ಖಗೋಳಶಾಸ್ತ್ರದ ಮುನ್ನಡೆಯಲ್ಲಿ ಈ ಸೂತ್ರ ತುಂಬಾ ಮಹತ್ವಪೂರ್ಣವಾಯಿತು.
ದ್ಯುತಿವಿಜ್ಞಾನ
[ಬದಲಾಯಿಸಿ]ದ್ಯುತಿವಿಜ್ಞಾನದಲ್ಲಿ ಹೈಜೆನ್ಸ್ ನೀಡಿದ ಕೊಡುಗೆ ಅಪೂರ್ವವಾದದ್ದು. ಬೆಳಕನ್ನು ಒಂದು ತರಂಗದ ಸ್ವರೂಪದಲ್ಲಿ ನೋಡುವುದನ್ನು ಹೈಜೆನ್ಸ್ ನಮಗೆ ತಿಳಿಸಿದ. ಬೆಳಕಿನ ವೇಗಕ್ಕೆ ಒಂದು ಮಿತಿ ಇದೆ ಎಂಬುದನ್ನು ಹೈಜೆನ್ಸ್ ಪ್ರತಿಪಾದಿಸಿದ. ಇದಕ್ಕೆ ಮುಂಚೆ ಈ ಕುರಿತು ವಾದವಿವಾದಗಳಿದ್ದವು. ಬೆಳಕು ಎರಡು ಬಾರಿ ಡೊಂಕಾಗುವ ಪ್ರಕ್ರಿಯೆಯನ್ನು (ಬೈಫ್ರಿಂಜೆನ್ಸ್) ಹೈಜೆನ್ಸ್ 1672ರಲ್ಲಿ ಅಭ್ಯಾಸ ಮಾಡಿದ. ಕ್ಯಾಲ್ಸೈಟ್ ಎಂಬ ವಸ್ತುವಿನಲ್ಲಿ ಈ ಪ್ರಕ್ರಿಯೆ ಕಂಡು ಬಂದಿತ್ತು.
ಪ್ಯಾರಿಸಿಗೆ ಮರಳಿದ ಈತ ‘ಟ್ರೇಯ್ಟ್ ಡೆ ಲಾ ಲುಮಿಯೆರ್’ ಪ್ರೌಢಪ್ರಬಂಧ ಪ್ರಕಟಿಸಿದ (1678). ಬೆಳಕಿನ ತರಂಗ ಸಿದ್ಧಾಂತ ಇದರ ವಿಷಯ. ವ್ಯಾಕೋಚಿಸುತ್ತಿರುವ ಬೆಳಕಿನ ಗೋಲದಲ್ಲಿ ತರಂಗಮುಖದ ಪ್ರತಿಯೊಂದು ಬಿಂದುವೂ ವಿಕಿರಣದ ಹೊಸ ಆಕರದಂತೆ ವರ್ತಿಸುತ್ತದೆ ಹಾಗೂ ಅವುಗಳ ಆವೃತ್ತಿ ಮತ್ತು ಪ್ರಾವಸ್ಥೆ ಒಂದೇ ಆಗಿರುತ್ತದೆ ಎಂಬುದು ಅವನ ವಾದದ ತಿರುಳು.
ಬೆಳಕು ಅನೇಕ ಸಣ್ಣ ಹುಡಿಗಳಿಂದ ಕೂಡಿದೆ ಎಂದು ನ್ಯೂಟನ್ ಪ್ರತಿಪಾದಿಸಿದ (1704). ಎರಡು ಸಲ ಬಾಗುವ ಬೆಳಕಿನ ಪ್ರವೃತ್ತಿಯನ್ನು ಹೈಜೆನ್ಸನ ತರಂಗ ಸಿದ್ಧಾಂತದ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ ಅದಕ್ಕೆ ಸ್ವಲ್ಪ ಕಾಲ ಸೋಲಾಯಿತು. ಆದರೆ ತಾಮಸ್ ಯಂಗ್ ಎಂಬ ವಿಜ್ಞಾನಿಯ ವ್ಯತಿಕರಣ ಪ್ರಯೋಗವು ಪ್ರಕಟವಾದ ನಂತರ ತರಂಗ ಸಿದ್ಧಾಂತಕ್ಕೆ ಮರುವುಟ್ಟು ಸಿಕ್ಕಿತು. ಬೆಳಕು ಹುಡಿರೂಪದಲ್ಲಿದೆ ಎಂಬ ಸಿದ್ಧಾಂತದ ಮೂಲಕ ಯಂಗ್ ಪ್ರಯೋಗದ ಪರಿಣಾಮವನ್ನು ವಿವರಿಸುವುದು ಅಸಾಧ್ಯವಾಗಿತ್ತು.
ಹೈಜೆನ್ಸ್ ಗೆ ಮಸೂರಗಳನ್ನು ಕುರಿತು ಅಪಾರ ಆಸಕ್ತಿ ಇತ್ತು. ಅವನು ಪ್ರೊಜೆಕ್ಟರುಗಳಲ್ಲಿ ಮಸೂರಗಳ ಪಾತ್ರವನ್ನು ಅಧ್ಯಯನ ಮಾಡಿದ. ಮ್ಯಾಜಿಕ್ ಲಾಂಟರ್ನ್ ಎಂಬ ಉಪಕರಣದ ಆವಿಷ್ಕಾರದ ಕೀರ್ತಿ ಅವನಿಗೆ ಸಲ್ಲುತ್ತದೆ.[೩೯]
ಹೋರಾಲಜಿ ಅಥವಾ ಸಮಯಮಾಪನ
[ಬದಲಾಯಿಸಿ]ಹೋರಾಲಜಿ ಅಥವಾ ಕಾಲಮಾಪನಶಾಸ್ತ್ರದಲ್ಲಿ ಹೈಜೆನ್ಸ್ ಕೊಡುಗೆ ದೊಡ್ಡದು. ತನ್ನ ಕಾಲದ ಅತ್ಯಂತ ನಿಖರ ಸಮಯಮಾಪಕವನ್ನು ಹೈಜೆನ್ಸ್ ನಿರ್ಮಿಸಿದ. ಅದೇ ಪೆಂಡುಲಮ್ ಗಡಿಯಾರ. 1656ರಲ್ಲಿ ಇಂಥ ಗಡಿಯಾರವನ್ನು ನಿರ್ಮಿಸಿ ಸಾಲೊಮನ್ ಕೋಸ್ಟರ್ ಎಂಬ ಸಂಸ್ಥೆಗೆ ಅದರ ನಿರ್ಮಿತಿಯ ಹಕ್ಕನ್ನು ನೀಡಿದ.[೪೦] ಹೇಗ್ ನಗರದಲ್ಲಿ ಈ ಆವಿಷ್ಕಾರಕ್ಕೆ ಅವನಿಗೆ ಪೇಟೆಂಟ್ ನೀಡಲಾಯಿತು. ಆದರೆ ಫ್ರಾನ್ಸ್ ಮುಂತಾದ ಕಡೆ ಅವನಿಗೆ ಪೇಟೆಂಟ್ ದೊರೆಯಲಿಲ್ಲ. ಅವನ ಆವಿಷ್ಕಾರವನ್ನು ಅನೇಕರು ನಕಲು ಮಾಡಿದರು.[೪೧] ದೂರದ ಸಮುದ್ರಯಾನಗಳಲ್ಲಿ ಇಂಥ ಗಡಿಯಾರದ ಉಪಯೋಗವಾಗಬಹುದು ಎಂದು ಹೈಜೆನ್ಸ್ ನಂಬಿದ್ದ. ಆದರೆ ಈತನ ಸೋದರ ಒಮ್ಮೆ ಸಮುದ್ರಯಾನದಲ್ಲಿ ಪ್ರಯೋಗಿಸಿ ಜೋರಾದ ಗಾಳಿ ಬೀಸಿದಾಗ ಗಡಿಯಾರವು ಅನುಪಯುಕ್ತ ಎಂದು ಘೋಷಿಸಿದ. ಮುಂದೆ ಇನ್ನಿತರ ಕೆಲವರು ಗಡಿಯಾರದ ಕ್ಷೇತ್ರಕ್ಕೆ ಕಾಲಿಟ್ಟರು. ತನಗೆ ಅನ್ಯಾಯವಾಯಿತೆಂದು ಹೈಜೆನ್ಸ್ ರಾಯಲ್ ಸೊಸೈಟಿಗೆ ಮೊರೆ ಹೋದ.[೪೨] ಕೋರ್ಟ್ ಕಚೇರಿಯಲ್ಲಿ ವಾದವಿವಾದಗಳು ನಡೆದವು. ಇತ್ತ ಪೆಂಡುಲಮ್ ಗಡಿಯಾರ ಕೆಲವೊಮ್ಮೆ ಸಮಯವನ್ನು ಕಳೆದುಕೊಳ್ಳುವುದು ಮತ್ತು ಕೆಲವೊಮ್ಮೆ ಸಮಯವನ್ನು ಗಳಿಸುವುದು ಎಂಬ ದೂರು ಕೇಳಿಬಂತು. ಈ ಸಮಸ್ಯೆಗೆ ಹೈಜೆನ್ಸ್ ಪರಿಹಾರ ನೀಡಿದ.[೪೩]
ಇಂಥ ಗಡಿಯಾರದ ನೆರವಿನಿಂದ ಸ್ಥಳೀಯ ರೇಖಾಂಶ ಗಳಿಸುವುದು ಸುಲಭ. ಇಂಥ ಅನೇಕ ಲೋಲಕ ಗಡಿಯಾರಗಳನ್ನು ನಿರ್ಮಿಸಿ ಪುನಃಪುನಃ ಪರೀಕ್ಷಿಸಿದ (1662, 1686). ಲೋಲಕ ಚಲನೆಯ ತನ್ನ ಸಿದ್ಧಾಂತದ ವರ್ಣನೆ, ಚಕ್ರಜ ಒಂದು ಸಮಕಾಲವಕ್ರ ಎಂಬುದರ ಸಾಧನೆ, ಸಂಯುಕ್ತ ಲೋಲಕದ ಸಮಸ್ಯೆಗೆ ಪರಿಹಾರ, ನಿರ್ವಾತದಲ್ಲಿ ಕಾಯಗಳ ಸರಳರೇಖಾಪಥೀಯ ಅಥವಾ ವಕ್ರರೇಖಾಪಥೀಯ ಅವರೋಹದ ವರ್ಣನೆ, ವಕ್ರ ಕೇಂದ್ರಜಗಳ (ಎವಲ್ಯೂಟ್ಸ್) ಮತ್ತು ಅಂತರ್ವಲಿತಗಳ (ಇನ್ವಲ್ಯೂಟ್ಸ್) ವ್ಯಾಖ್ಯಾನ, ಚಕ್ರಜ ಮತ್ತು ಪರವಲಯಗಳ ಕೇಂದ್ರಜಗಳನ್ನು ಕಂಡುಹಿಡಿಯುವ ವಿಧಾನ, ಕಣಗಳಿಗೆ ಬದಲಾಗಿ ಕಾಯಗಳ ಗತಿವಿಜ್ಞಾನಾಧ್ಯಯನದ ಮೊದಲ ಪ್ರಯತ್ನ ಮುಂತಾದವನ್ನೊಳ ಗೊಂಡ ಪ್ರೌಢಪ್ರಬಂಧ ‘ಹೋರಾಲಾಜಿಯಮ್ ಆಸಿಲೇಟಾರಿಯಮ್ ಸಿವೆ ಡೆ ಮಾಟು ಪೆಂಡುಲಾರಮ್’ ಪ್ರಕಟಿಸಿದ (1673).[೪೪] ಅಲ್ಲದೆ ಏಕರೀತಿ ವರ್ತುಳೀಯ ಚಲನೆಗೆ ಸಂಬಂಧಿಸಿದಂತೆ ಕೇಂದ್ರಾಪಗಾಮಿ ಬಲ ನಿಯಮವನ್ನೂ ನಿಷ್ಪನ್ನಿಸಿದ. ಇವೆಲ್ಲದರ ಒಟ್ಟಾರೆ ಫಲಿತವೇ ಇವನು ಎಡ್ಮಂಡ್ ಹ್ಯಾಲಿ (1656-1742) ಮತ್ತು ಕ್ರಿಸ್ಟಾಫರ್ ರೆನ್ (1632-1723) ಸಂಯುಕ್ತವಾಗಿ ರೂಪಿಸಿದ ಗುರುತ್ವಾಕರ್ಷಣೆಯ ಪ್ರತಿಲೋಮ ವರ್ಗನಿಯಮ.
ಪೆಂಡುಲಮ್ ಉದ್ದವು ಆಗಿದ್ದು, ಗುರುತ್ವಾಕರ್ಷಣದ ಕಾರಣದ ವೇಗವರ್ಧನೆಯು ಆಗಿದ್ದಲ್ಲಿ ಪೆಂಡುಲಮ್ ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಸಮಯ ಎಷ್ಟೆಂಬ ಲೆಕ್ಕವನ್ನೂ ಹೈಜೆನ್ಸ್ ನೀಡಿದ್ದಾನೆ.
ಎರಡು ಪೆಂಡುಲಮ್ ಗಡಿಯಾರಗಳನ್ನು ಪಕ್ಕಪಕ್ಕದಲ್ಲಿಟ್ಟರೆ ಅವುಗಳ ಚಲನೆಯು ಪರಸ್ಪರ ಹೊಂದಾಣಿಕೆ ಪಡೆದುಕೊಳ್ಳುವುದನ್ನು ಕೂಡಾ ಹೈಜೆನ್ಸ್ ಗಮನಿಸಿದ್ದ. ಅದನ್ನು ಅವನು ರಾಯಲ್ ಸೊಸೈಟಿಗೆ ಬರೆದು ತಿಳಿಸಿದ್ದು ಕೂಡಾ ದಾಖಲಾಗಿದೆ.
ಮುಂದೆ ಹೈಜೆನ್ಸ್ ಬ್ಯಾಲೆನ್ಸ್ ಸ್ಪ್ರಿಂಗ್ ವಾಚ್ ಎಂಬ ಗಡಿಯಾರದ ಮಾದರಿಯನ್ನು ಕೂಡಾ ರೂಪಿಸಿದ. ರಾಬರ್ಟ್ ಹೂಕ್ (1635-1703) ಸ್ಪ್ರಿಂಗ್ ನಿಯಂತ್ರಿತ ಗಡಿಯಾರಗಳ ದಕ್ಷತೆಯನ್ನು ಪರೀಕ್ಷಿಸುತ್ತಿರುವುದನ್ನು (1665) ತಿಳಿದ ಇವನು ಇಂಥ ಗಡಿಯಾರಗಳ ದಕ್ಷತೆಯ ಮೇಲೆ ತಾಪ ವ್ಯತ್ಯಯಗಳು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ತನ್ನ ಅಭಿಪ್ರಾಯವನ್ನು ಪತ್ರಮುಖೇನ ಅವನಿಗೆ ತಿಳಿಸಿದುದಲ್ಲದೆ ಅವು ತಾನು ರೂಪಿಸಿದ ಗಡಿಯಾರಗಳಷ್ಟು ದಕ್ಷವಲ್ಲ ಎಂಬುದನ್ನು ಪ್ರಯೋಗಮುಖೇನ ಸಿದ್ಧಪಡಿಸಿದ. ಇಂಥದೇ ಆವಿಷ್ಕಾರವನ್ನು ರಾಬರ್ಟ್ ಹುಕ್ ಕೂಡಾ ನಡೆಸಿದ್ದರಿಂದ ಇವರಲ್ಲಿ ಯಾರಿಗೆ ಕೀರ್ತಿ ಸಲ್ಲಬೇಕೆಂಬ ಕುರಿತು ವಾಗ್ವಾದಗಳು ನಡೆದವು. ಹೈಜೆನ್ಸ್ ಗಡಿಯಾರದಲ್ಲಿ ಸುಳಿ ಆಕಾರದಲ್ಲಿ ಸುತ್ತಿದ ಸ್ಪ್ರಿಂಗ್ ಬಳಸಲಾಗಿತ್ತು. ಅವನು ಸ್ಪ್ರಿಂಗ್ ಗಡಿಯಾರಗಳ ಅನೇಕ ಮಾದರಿಗಳನ್ನು ಸೃಷ್ಟಿಸಿದ. ಇವುಗಳನ್ನು ಪ್ಯಾರಿಸ್ ನಗರದ ಥುರೇ ಕಂಪನಿ ತಯಾರಿಸಿತು. ಇಸವಿ 2006ದಲ್ಲಿ ದೊರೆತ ರಾಬರ್ಟ್ ಹುಕ್ ಕೈಬರಹದಲ್ಲಿದ್ದ ಟಿಪ್ಪಣಿಗಳ ಆಧಾರದ ಮೇಲೆ ಮೊದಲು ಸ್ಪ್ರಿಂಗ್ ಗಡಿಯಾರ ರಚಿಸಿದ ಕೀರ್ತಿ ಈಗ ಹುಕ್ಗೆ ನೀಡಲಾಗುತ್ತದೆ.[೪೬][೪೭]
1675ರಲ್ಲಿ ಹೈಜೆನ್ಸ್ ಪಾಕೆಟ್ ಗಡಿಯಾರಕ್ಕೆ ಪೇಟೆಂಟ್ ಅರ್ಜಿ ಸಲ್ಲಿಸಿದ. ಮುಂದೆ ಪ್ಯಾರಿಸ್ ನಗರದಲ್ಲಿ ಈ ಬಗೆಯ ಗಡಿಯಾರಗಳು ಜನಪ್ರಿಯವಾದವು.
ಖಗೋಳಶಾಸ್ತ್ರ
[ಬದಲಾಯಿಸಿ]1655ರಲ್ಲಿ ಹೈಜೆನ್ಸ್ ಒಂದು ಲೇಖನವನ್ನು ಪ್ರಕಟಿಸಿ ಅದರಲ್ಲಿ ಶನಿಗ್ರಹದ ಸುತ್ತ ಅದನ್ನು ಸ್ಪರ್ಶಿಸದ ಒಂದು ಎಲಿಪ್ಟಿಕ್ ಆಕಾರದ ತೆಳ್ಳನೆಯ ಚಪ್ಪಟೆಯಾದ ಉಂಗುರವಿದೆ ಎಂದು ಪ್ರತಿಪಾದಿಸಿದ.[೪೮][೪೯] ತಾನೇ ಸಿದ್ಧಪಡಿಸಿದ, ದೂರದ ವಸ್ತುವನ್ನು 50 ಪಟ್ಟು ದೊಡ್ಡದಾಗಿ ತೋರಿಸಬಲ್ಲ ದೂರದರ್ಶಕವನ್ನು ಬಳಸಿ ಶನಿಗ್ರಹದ (ಪ್ರಥಮ) ಚಂದ್ರನನ್ನು ಗುರುತಿಸಿದ. ಈ ಚಂದ್ರನಿಗೆ ಟೈಟನ್ ಎಂಬ ಹೆಸರಿದೆ.
ಈ ಕುರಿತು ವಿಭಿನ್ನ ಸಿದ್ಧಾಂತಗಳನ್ನು ಮಂಡಿಸಿದ್ದ ಗಿಲ್ಲೆಸ್ ಪರ್ಸೊನೆ ಡೆ ರಾಬರ್ವಾಲ್ (1602-75), ಬೌಲಿಯಾವ್ ಮತ್ತಿತರರು ಇದನ್ನು ಒಪ್ಪಲಿಲ್ಲ. ಬೌಲಿಯಾವ್ ಉಪಯೋಗಿಸುತ್ತಿದ್ದ ಕಳಪೆ ದರ್ಜೆಯ ದೂರದರ್ಶಕವೇ ಆತನ ಭಿನ್ನಾಭಿಪ್ರಾಯಕ್ಕೆ ಕಾರಣ ಎಂದು ಗ್ರಹಿಸಿದ ಇವನು ತನ್ನ ಉಂಗುರ ಸಿದ್ಧಾಂತವನ್ನು ಅವನಿಗೆ ಮನವರಿಕೆ ಮಾಡಿದ್ದಲ್ಲದೆ (1656) ಪ್ಯಾರಿಸ್ ವಿಜ್ಞಾನಿ ಸಮೂಹಕ್ಕೆ ತನ್ನ ಅಧ್ಯಯನಗಳ ಫಲಿತಾಂಶವನ್ನು ವರದಿ ಮಾಡಿದ. ‘ಸಿಸ್ಟೆಮ ಸ್ಯಾಟರ್ನಿಯಮ್’ ಎಂಬ ಪ್ರಬಂಧದಲ್ಲಿ ಉಂಗುರಗಳ ಕಲೆಗಳು ಮತ್ತು ಅವುಗಳಲ್ಲಿ ಆಗುವ ವ್ಯತ್ಯಯಕ್ಕೆ ವಿವರಣೆ ನೀಡಿದ. ಇವನ ಸಿದ್ಧಾಂತಗಳ ಮತ್ತು ವೀಕ್ಷಣೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದ್ದ ಹಾನೊರಿ ಫ್ಯಾಬ್ರಿ (1607-88) ಕೂಡ ಅವನ್ನು ಒಪ್ಪಿದ (1665). ಸುಧಾರಿತ ದೂರದರ್ಶಕಗಳು ಇವನ ವೀಕ್ಷಣೆಗಳನ್ನು ದೃಢೀಕರಿಸಿದ್ದೇ ಇದಕ್ಕೆ ಕಾರಣ.
ನೀಹಾರಿಕೆಯನ್ನು ದೂರದರ್ಶಕ ಮುಖಾಂತರ ನೋಡಿ ವಿವಿಧ ತಾರೆಗಳಾಗಿ ವಿಂಗಡಿಸಿದ ಕೀರ್ತಿಯೂ ಇವನಿಗೆ ಸಲ್ಲುತ್ತದೆ. ಇವನ ಗೌರವಾರ್ಥ ನೆಬುಲಾದ ಒಳಮೈಗೆ “ಹೈಜನಿಯನ್ ರೀಜನ್” ಎನ್ನುತ್ತಾರೆ. ತನ್ನ ಮರಣಕ್ಕೆ ಮುನ್ನ 1695ರಲ್ಲಿ ಕಾಸ್ಮೋಥಿಯರಾಸ್ ಎಂಬ ಗ್ರಂಥವನ್ನು ಬರೆದ. ಇದು ಅವನ ಮರಣದ ನಂತರ 1698ರಲ್ಲಿ ಪ್ರಕಟವಾಯಿತು. ಈ ಪುಸ್ತಕದಲ್ಲಿ ಅವನು ಬೇರೆ ಗ್ರಹಗಳಲ್ಲೂ ಜೀವಿಗಳಿವೆ ಎಂದು ಪ್ರತಿಪಾದಿಸಿದ್ದಾನೆ. ಉಳಿದ ಗ್ರಹಗಳಲ್ಲೂ ಭೂಮಿಯ ವಾತಾವರಣವೇ ಇದೆ ಎಂದು ಅವನು ನಂಬಿದ್ದ. ಜೀವಿಗಳ ಉಳಿವಿಗೆ ನೀರು ಅತ್ಯಗತ್ಯವೆಂದು ಅವನಿಗೆ ತಿಳಿದಿತ್ತು. ಮಂಗಳ ಮತ್ತು ಗುರು ಗ್ರಹಗಳ ಮೇಲೆ ಕಂಡ ಕಪ್ಪು ಛಾಯೆಯನ್ನು ಮಂಜಿನ ಗಡ್ಡೆ ಎಂದು ಅವನು ಭಾವಿಸಿದ್ದ. ಗ್ರಹಗಳು ಒಂದಕ್ಕೊಂದು ಅಷ್ಟೊಂದು ದೂರವಿರುವುದು ದೇವರಿಗೆ ಈ ಗ್ರಹಗಳ ಜೀವಿಗಳು ಪರಸ್ಪರ ಸಂಪರ್ಕದಲ್ಲಿರುವುದು ಇಷ್ಟವಿರಲಿಲ್ಲ ಎಂಬುದನ್ನೇ ತೋರಿಸುತ್ತವೆ ಎಂದು ಅವನು ಬರೆದಿದ್ದಾನೆ. ಇದೇ ಪುಸ್ತಕದಲ್ಲಿ ಒಂದು ಖಗೋಳಕ್ಕೂ ಇನ್ನೊಂದಕ್ಕೂ ನಡುವಣ ದೂರವನ್ನು ಮಾಪನ ಮಾಡುವುದು ಹೇಗೆಂದು ಅವನು ವಿವರಿಸಿದ್ದಾನೆ. ಒಂದು ತೆರೆಯ ಮೇಲೆ ಸಣ್ಣ ರಂಧ್ರಗಳನ್ನು ಮಾಡಿ ಅದನ್ನು ಸೂರ್ಯನ ಬೆಳಕಿಗೆ ಒಡ್ಡಿದರೆ ಒಳಬರುವ ರಶ್ಮಿಗಳ ಪ್ರಖರತೆ ಸಿರಿಯಸ್ ಎಂಬ ತಾರೆಯ ಬೆಳಕಿನಷ್ಟೇ ಪ್ರಖರತೆಯುಳ್ಳ ಹಾಗೆ ಮಾಡಬೇಕು – ಇದಕ್ಕೆ ತೆರೆಯ ಕೋನವನ್ನು ಮತ್ತು ರಂಧ್ರದ ಸುತ್ತಾಕಾರವನ್ನು ಬದಲಾಯಿಸಬೇಕಾಗಬಹುದು. ಹೀಗಾದಾಗ ರಂಧ್ರದ ವ್ಯಾಸವು ಸೂರ್ಯನ ವ್ಯಾಸಕ್ಕೆ ಹೋಲಿಸಿದರೆ ನಷ್ಟಿರುತ್ತದೆ ಎಂದು ಅವನ ತರ್ಕವಾಗಿತ್ತು. ಆದರೆ ಸಿರಿಯಸ್ ಮತ್ತು ಸೂರ್ಯನ ಪ್ರಖರತೆ ಒಂದೇ ಎಂಬ ಪೂರ್ವಸಿದ್ಧಾಂತಕ್ಕೆ ಪುಷ್ಟಿ ಇರಲಿಲ್ಲ. ಹೀಗಿದ್ದರೂ ಬೆಳಕಿನ ಪ್ರಖರತೆ ಅಳೆಯುವ ಮೂಲಕ ಖಗೋಳಗಳ ನಡುವಿನ ಅಂತರವನ್ನು ಅಳೆಯಬಹುದೆಂದು ತೋರಿಸಿದ ಕೀರ್ತಿ ಹೈಜೆನ್ಸಿಗೆ ಸಲ್ಲುತ್ತದೆ.
ಆಕರಗಳು/ಉಲ್ಲೇಖಗಳು
[ಬದಲಾಯಿಸಿ]- ↑ I. Bernard Cohen; George E. Smith (25 April 2002). The Cambridge Companion to Newton. Cambridge University Press. p. 69. ISBN 978-0-521-65696-2. Retrieved 15 May 2013.
- ↑ Niccolò Guicciarfdini (2009). Isaac Newton on mathematical certainty and method. MIT Press. p. 344. ISBN 978-0-262-01317-8. Retrieved 15 May 2013.
- ↑ "Christiaan Huygens." Encyclopedia of World Biography. 2004. Encyclopedia.com. (14 December 2012). http://www.encyclopedia.com/doc/1G2-3404703173.html
- ↑ "ಆರ್ಕೈವ್ ನಕಲು". Archived from the original on 2017-06-13. Retrieved 2016-04-10.
- ↑ The Heirs of Archimedes: Science and the Art of War Through the Age of Enlightenment, by Brett D. Steele, p. 20
- ↑ Jozef T. Devreese (31 October 2008). 'Magic Is No Magic': The Wonderful World of Simon Stevin. WIT Press. pp. 275–6. ISBN 978-1-84564-391-1. Archived from the original on 16 June 2016. Retrieved 24 April 2013.
- ↑ Henk J. M. Bos (14 December 2012) Huygens, Christiaan (Also Huyghens, Christian) Archived 2 September 2021 ವೇಬ್ಯಾಕ್ ಮೆಷಿನ್ ನಲ್ಲಿ., Complete Dictionary of Scientific Biography. 2008. Encyclopedia.com.
- ↑ Paoloni, B. (2022). "L'art de l'analyse de Christiaan Huygens de l'Algebra à la Geometria". Revue de Synthèse. 143 (3–4): 423–455. doi:10.1163/19552343-14234034. ISSN 1955-2343. S2CID 254908971.
- ↑ Stoffele, B. (2006). "Christiaan Huygens – A family affair - Proeven van Vroeger". Utrecht University (in ಇಂಗ್ಲಿಷ್). Retrieved 2023-11-27.
- ↑ Lynn Thorndike (1 March 2003). History of Magic & Experimental Science 1923. Kessinger Publishing. p. 622. ISBN 978-0-7661-4316-6. Archived from the original on 13 October 2013. Retrieved 11 May 2013.
- ↑ Leonhard Euler (1 January 1980). Clifford Truesdell (ed.). The Rational Mechanics of Flexible or Elastic Bodies 1638–1788: Introduction to Vol. X and XI. Springer. pp. 44–6. ISBN 978-3-7643-1441-5. Archived from the original on 13 October 2013. Retrieved 10 May 2013.
- ↑ Howard, N. C. (2003). Christiaan Huygens: The construction of texts and audiences (Master's thesis). Indiana University.
- ↑ C. D. Andriesse (25 August 2005). Huygens: The Man Behind the Principle. Cambridge University Press. p. 126. ISBN 978-0-521-85090-2. Archived from the original on 31 December 2013. Retrieved 10 May 2013.
- ↑ Robert D. Huerta (2005). Vermeer And Plato: Painting The Ideal. Bucknell University Press. p. 101. ISBN 978-0-8387-5606-5. Archived from the original on 17 June 2016. Retrieved 24 April 2013.
- ↑ Randy O. Wayne (28 July 2010). Light and Video Microscopy. Academic Press. p. 72. ISBN 978-0-08-092128-0. Archived from the original on 16 June 2016. Retrieved 24 April 2013.
- ↑ Bunge et al. (2003), Dictionary of Seventeenth and Eighteenth-Century Dutch Philosophers, p. 473.
- ↑ Margaret Gullan-Whur (1998). Within Reason: A Life of Spinoza. Jonathan Cape. pp. 170–1. ISBN 0-224-05046-X.
- ↑ Schneider, Ivo (2001), Heyde, C. C.; Seneta, E.; Crépel, P.; Fienberg, S. E. (eds.), "Christiaan Huygens", Statisticians of the Centuries (in ಇಂಗ್ಲಿಷ್), New York, NY: Springer, pp. 23–28, doi:10.1007/978-1-4613-0179-0_5, ISBN 978-1-4613-0179-0, archived from the original on 2 September 2021, retrieved 2021-04-15
- ↑ p963-965, Jan Gullberg, Mathematics from the birth of numbers, W. W. Norton & Company; ISBN 978-0-393-04002-9
- ↑ Malcolm, N. (1997). The Correspondence of Thomas Hobbes: 1660–1679. Oxford University Press. p. 841. ISBN 978-0-19-823748-8. Archived from the original on 16 June 2016.
- ↑ Whiteside, D. T. (March 1964). "Book Review: Frans van Schooten der Jüngere (Boethius. Texte und Abhandlungen zur Geschichte der exakten Wissenschaften. Band II)". History of Science (in ಇಂಗ್ಲಿಷ್). 3 (1): 146–148. doi:10.1177/007327536400300116. ISSN 0073-2753. S2CID 163762875.
- ↑ Stigler, S. M. (2007). "Chance Is 350 Years Old". Chance (in ಇಂಗ್ಲಿಷ್). 20 (4): 26–30. doi:10.1080/09332480.2007.10722870. ISSN 0933-2480. S2CID 63701819.
- ↑ Peter Louwman, Christiaan Huygens and his telescopes, Proceedings of the International Conference, 13 – 17 April 2004, ESTEC, Noordwijk, Netherlands, ESA, sp 1278, Paris 2004
- ↑ Venus Seen on the Sun: The First Observation of a Transit of Venus by Jeremiah Horrocks. BRILL. 2 March 2012. p. xix. ISBN 978-90-04-22193-2. Archived from the original on 16 June 2016. Retrieved 23 April 2013.
- ↑ Jozef T. Devreese (2008). 'Magic Is No Magic': The Wonderful World of Simon Stevin. WIT Press. p. 277. ISBN 978-1-84564-391-1. Archived from the original on 16 June 2016. Retrieved 11 May 2013.
- ↑ Fokko Jan Dijksterhuis (1 October 2005). Lenses And Waves: Christiaan Huygens and the Mathematical Science of Optics in the Seventeenth Century. Springer. p. 98. ISBN 978-1-4020-2698-0. Archived from the original on 16 June 2016. Retrieved 11 May 2013.
- ↑ Kemeny, Maximilian Alexander (2016-03-31). ""A Certain Correspondence": The Unification of Motion from Galileo to Huygens". The University of Sydney (in ಇಂಗ್ಲಿಷ್): 80.
- ↑ Gerrit A. Lindeboom (1974). Boerhaave and Great Britain: Three Lectures on Boerhaave with Particular Reference to His Relations with Great Britain. Brill Archive. p. 15. ISBN 978-90-04-03843-1. Archived from the original on 17 June 2016. Retrieved 11 May 2013.
- ↑ The anatomy of a scientific institution: the Paris Academy of Sciences, 1666–1803. University of California Press. 1971. p. 7 note 12. ISBN 978-0-520-01818-1. Archived from the original on 16 June 2016. Retrieved 27 April 2013.
- ↑ David J. Sturdy (1995). Science and Social Status: The Members of the "Académie Des Sciences", 1666–1750. Boydell & Brewer. pp. 71–2. ISBN 978-0-85115-395-7. Archived from the original on 17 June 2016. Retrieved 27 April 2013.
- ↑ Jacob Soll (2009). The information master: Jean-Baptiste Colbert's secret state intelligence system. University of Michigan Press. p. 99. ISBN 978-0-472-11690-4. Archived from the original on 16 June 2016. Retrieved 27 April 2013.
- ↑ A. E. Bell, Christian Huygens (1950), pp. 65–6; archive.org.
- ↑ Jonathan I. Israel (12 October 2006). Enlightenment Contested : Philosophy, Modernity, and the Emancipation of Man 1670–1752: Philosophy, Modernity, and the Emancipation of Man 1670–1752. OUP Oxford. p. 210. ISBN 978-0-19-927922-7. Archived from the original on 17 June 2016. Retrieved 11 May 2013.
- ↑ Lisa Jardine (2003). The Curious Life of Robert Hooke. HarperCollins. pp. 180–3. ISBN 0-00-714944-1.
- ↑ Marcelo Dascal (2010). The practice of reason. John Benjamins Publishing. p. 45. ISBN 978-90-272-1887-2. Archived from the original on 17 June 2016. Retrieved 23 April 2013.
- ↑ Bunge et al. (2003), Dictionary of Seventeenth and Eighteenth-Century Dutch Philosophers, p. 469.
- ↑ Deborah Redman (1997). The Rise of Political Economy As a Science: Methodology and the Classical Economists. MIT Press. p. 62. ISBN 978-0-262-26425-9. Archived from the original on 17 June 2016. Retrieved 12 May 2013.
- ↑ The Beginnings of Modern Science, edited by Rene Taton, Basic Books, 1958, 1964.
- ↑ Jordan D. Marché (2005). Theaters Of Time And Space: American Planetariums, 1930–1970. Rutgers University Press. p. 11. ISBN 978-0-8135-3576-0. Archived from the original on 17 June 2016. Retrieved 23 April 2013.
- ↑ "Salomon Coster the clockmaker of Christiaan Huygens. Clock". www.antique-horology.org. Retrieved 2023-11-15.
- ↑ Epstein/Prak (2010). Guilds, Innovation and the European Economy, 1400–1800. Cambridge University Press. pp. 269–70. ISBN 978-1-139-47107-7. Archived from the original on 16 June 2016. Retrieved 10 May 2013.
- ↑ Howard, N. (2008). "Marketing Longitude: Clocks, Kings, Courtiers, and Christiaan Huygens". Book History. 11: 59–88. ISSN 1098-7371. JSTOR 30227413.
- ↑ "Boerhaave Museum Top Collection: Hague clock (Pendulum clock) (Room 3/Showcase V20)". Museumboerhaave.nl. Archived from the original on 19 ಫೆಬ್ರವರಿ 2011. Retrieved 13 June 2010.
- ↑ Yoder, J. G. (2005), Grattan-Guinness, I.; Cooke, Roger; Corry, Leo; Crépel, Pierre (eds.), "Christiaan Huygens, book on the pendulum clock (1673)", Landmark Writings in Western Mathematics 1640–1940 (in ಇಂಗ್ಲಿಷ್), Amsterdam: Elsevier Science, pp. 33–45, ISBN 978-0-444-50871-3
- ↑ "Boerhaave Museum Top Collection: Horologium oscillatorium, siue, de motu pendulorum ad horologia aptato demonstrationes geometricae (Room 3/Showcase V20)". Museumboerhaave.nl. Archived from the original on 20 ಫೆಬ್ರವರಿ 2011. Retrieved 13 June 2010.
- ↑ Nature – International Weekly Journal of Science, number 439, pages 638–639, 9 February 2006
- ↑ Notes and Records of the Royal Society (2006) 60, pages 235–239, 'Report – The Return of the Hooke Folio' by Robyn Adams and Lisa Jardine
- ↑ van Helden, Albert (2004). "Huygens, Titan, and Saturn's ring". Titan – from Discovery to Encounter. 1278: 11–29. Bibcode:2004ESASP1278...11V. Archived from the original on 15 April 2019. Retrieved 12 April 2021.
- ↑ Baalke, R. (2011). "Historical Background of Saturn's Rings". solarviews.com. Later, it was determined that Saturn's rings were not solid but made of several smaller bodies. Archived from the original on 11 July 2021.
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 ಇಂಗ್ಲಿಷ್-language sources (en)
- Articles with FAST identifiers
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNC identifiers
- Articles with BNE identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with ICCU identifiers
- Articles with J9U identifiers
- Articles with KBR identifiers
- Articles with LCCN identifiers
- Articles with Libris identifiers
- Articles with LNB identifiers
- Articles with NDL identifiers
- Articles with NKC identifiers
- Articles with NLA identifiers
- Articles with NLG identifiers
- Articles with NTA identifiers
- Articles with PLWABN identifiers
- Articles with PortugalA identifiers
- Articles with VcBA identifiers
- Articles with CINII identifiers
- Articles with MATHSN identifiers
- Articles with MGP identifiers
- Articles with ZBMATH identifiers
- Articles with MusicBrainz identifiers
- Articles with RKDartists identifiers
- Articles with ULAN identifiers
- Articles with BPN identifiers
- Articles with DTBIO identifiers
- Articles with Trove identifiers
- Articles with SNAC-ID identifiers
- Articles with SUDOC identifiers
- ಭೌತವಿಜ್ಞಾನಿಗಳು
- ಗಣಿತಜ್ಞರು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ