ತಾಮಸ್ ಯಂಗ್
ತಾಮಸ್ ಯಂಗ್ (1773 - 1829) ಇಂಗ್ಲೆಂಡಿನ ಒಬ್ಬ ಭೌತವಿಜ್ಞಾನಿ ಹಾಗೂ ವೈದ್ಯ.
ಜನನ, ವಿದ್ಯಾಭ್ಯಾಸ
[ಬದಲಾಯಿಸಿ]ನೈಋತ್ಯ ಇಂಗ್ಲೆಂಡಿನ ಸಾಮರ್‌ಸೆಟ್ ಪ್ರಾಂತ್ಯದ ಮಿಲ್ವರ್‌ಟನ್ನಿನಲ್ಲಿ ಜನನ (13 ಜೂನ್ 1773). ಇವನ ತಂದೆ ತಾಮಸ್ ಯಂಗ್ ಜವಳಿ ವ್ಯಾಪಾರ ಮಾಡುವುದರ ಜೊತೆಗೆ ಲೇವಾದೇವಿಯನ್ನು ಮಾಡುತ್ತಿದ್ದ. ಸಾರ್‌ಡೇವಿಸ್ ತಾಯಿ. ಈ ದಂಪತಿಗಳ ಹಿರಿಯ ಮಗ ಯಂಗ್ ಹುಟ್ಟಿನಿಂದಲೇ ಬಲು ಬುದ್ಧಿಶಾಲಿಯೆನಿಸಿ ಯುವಪ್ರತಿಭಾವಂತನೆನಿಸಿಕೊಂಡ. ತನ್ನ ಎರಡನೆಯ ವಯಸ್ಸಿನಲ್ಲೇ ಓದುವುದನ್ನು ಚೆನ್ನಾಗಿ ಕಲಿತು ನಾಲ್ಕರ ಹರೆಯದಲ್ಲಿ ಬೈಬಲ್ಲನ್ನು ಎರಡು ಸಾರಿ ತಿರುವಿಹಾಕಿದ್ದ ಖ್ಯಾತಿಗೆ ಭಾಜನನಾದ. ಇದಲ್ಲದೆ ಲ್ಯಾಟಿನ್ ಭಾಷೆ ಕಲಿಯಲೂ ಪ್ರಾರಂಭಿಸಿದ್ದ. 1780 - 86ರ ನಡುವೆ ದುಡ್ಡಿಗೆ ಊಟ ಹಾಕಿ ಪಾಠ ಹೇಳುಕೊಡುವ ಎರಡು ಶಾಲೆಗಳಲ್ಲಿ ಈತ ವ್ಯಾಸಂಗ ಮಾಡಿದ. ಅಲ್ಲಿ ಈತ ಗಣಿತದ ಮೂಲಪಾಠಗಳನ್ನು ಕಲಿತು, ಲ್ಯಾಟಿನ್, ಗ್ರೀಕ್, ಫ್ರೆಂಚ್ ಮತ್ತು ಇಟಾಲಿಯನ್ ಭಾಷೆಗಳಲ್ಲಿ ಪಾಂಡಿತ್ಯ ಸಂಪಾದಿಸಿದ (1792). ಸ್ವತಂತ್ರವಾಗಿ ಪ್ರಾಣಿಜೀವನ, ಚರಿತ್ರೆ, ಭೌತವಿಜ್ಞಾನ ಮತ್ತು ಕಲನವಿಜ್ಞಾನಗಳ ಅಧ್ಯಯನವನ್ನು ನಡೆಸಿದ. ದೂರದರ್ಶಕ ಮತ್ತು ಸೂಕ್ಷ್ಮದರ್ಶಕಗಳನ್ನು ತಯಾರಿಸುವುದನ್ನು ಕಲಿತ. ಇವನು ಹೀಬ್ರೂ, ಕಾಲ್ಡಿಯನ್, ಅರಾಬಿಕ್, ಪರ್ಷಿಯನ್ ಮುಂತಾದ ಭಾಷೆಗಳನ್ನೂ ಕಲಿಯಲು ಪ್ರಾರಂಭಿಸಿದ (1786). ನ್ಯೂಟನ್ನನ ಪ್ರಿನ್ಸಿಪಿಯ ಗ್ರಂಥವನ್ನೂ ದೃಗ್ವಿಜ್ಞಾನ ಗ್ರಂಥಗಳನ್ನೂ ಓದಿ ಗ್ರಹಿಸಿಕೊಂಡಿದ್ದ ಎಂದೇ ಕೇಂಬ್ರಿಜ್‌ನಲ್ಲಿ ಈತನನ್ನು `ಯುವ ವಿದ್ಯಮಾನ' (ಫಿನಾಮಿನನ್ ಯಂಗ್) ಎಂದು ಸಂಬೋಧಿಸಲಾಗುತ್ತಿತ್ತು.
ಮನೆಯವರನ್ನು ತೃಪ್ತಿಪಡಿಸಲೋಸುಗ ಯಂಗ್ ಲಂಡನ್, ಎಡಿನ್‌ಬರೋ ಮತ್ತು ಗಾಟಿಂಗೆನ್ನುಗಳಲ್ಲಿ ವೈದ್ಯವಿಜ್ಞಾನದ ವ್ಯಾಸಂಗ ನಡೆಸಿ, ಎಮ್. ಡಿ. ಪದವಿ ಗಳಿಸಿದ (1796).[೧]
ವೃತ್ತಿಜೀವನ, ಸಾಧನೆಗಳು
[ಬದಲಾಯಿಸಿ]ಈತ ಲಂಡನ್ನಿನಲ್ಲಿ ಔಷಧಾಲಯವೊಂದನ್ನು ತೆರೆದ (1800). ಇಷ್ಟಾದರೂ ಈತ ವೈದ್ಯನಾಗಿ ಅಂಥ ಹೆಸರು ಗಳಿಸಲಿಲ್ಲ. ಆಗ ತಾನೇ ಸ್ಥಾಪಿತಗೊಂಡಿದ್ದ ರಾಯಲ್ ಸಂಸ್ಥೆಯ ಸ್ಥಾಪಕ ಕೌಂಟ್ ರಮ್‌ಫರ್ಡ್ (1752 - 1829) ಯಂಗ್‌ನನ್ನು ಅಲ್ಲಿಯ ವಿಜ್ಞಾನ ಪ್ರಾಧ್ಯಾಪಕನನ್ನಾಗಿ ನೇಮಿಸಿದ (1801).[೨] ಆದರೆ ಪ್ರಾಧ್ಯಾಪಕನಾಗಿಯೂ ಈತ ಮೊದಲು ನೀಡಬೇಕಾಗಿದ್ದ ಕೆಲಸ ಜನಪ್ರಿಯ ವಿಜ್ಞಾನ ಭಾಷಣಗಳನ್ನು ಕೊಡುವುದಾಗಿತ್ತಾದರೂ ಆ ಕೆಲಸದಲ್ಲೂ ಹೆಸರು ಗಳಿಸಲಿಲ್ಲ. 1802ರಲ್ಲಿ ಈತನನ್ನು ರಾಯಲ್ ಸೊಸೈಟಿಯ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಲಾಯಿತು.[೩] ಇವನ ಸಹೋದ್ಯೋಗಿಯಾಗಿದ್ದ ರಸಾಯನ ವಿಜ್ಞಾನಿ ಹಂಫ್ರಿ ಡೇವಿಯ (1778 - 1829) ತೀಕ್ಷ್ಣ ಪ್ರತಿಭೆಯ ಎದುರು ಈತ ಪೇಲವನಾಗಿ ಕಂಡ. ಈಜಿಪ್ಟಿನ ರಾಸೆಟಾ ಎಂಬ ಸ್ಥಳದಲ್ಲಿ 1799 ರಲ್ಲಿ ದೊರೆತ ಒಂದು ಕಲ್ಲು ಚಪ್ಪಡಿಯ (ರಾಸೆಟ್ಟ ಸ್ಟೋನ್) ಮೇಲಿನ ಗ್ರೀಕ್, ಈಜಿಪ್ಟಿಯನ್, ಹೀರೋಗ್ಲೀಫಿಕ್ ಲಿಪಿಗಳು ಹಾಗೆ ಇತರ ಬರೆಹಗಳನ್ನು ಓದಿ ತಿಳಿಸುವುದರಲ್ಲಿ ವಿಶೇಷ ಪರಿಶ್ರಮವಹಿಸಿ ಹೆಸರು ಮಾಡಿದ.
ಯಂಗ್‍ನಿಗೆ ಇವನ 21ನೆ ವಯಸ್ಸಿನಲ್ಲಿ ರಾಯಲ್ ಸೊಸೈಟಿಯ ಫೆಲೋ ಗೌರವ ದೊರಕಿತು. ಇದಾದ ಬಳಿಕ ಇವನ ಮೊತ್ತಮೊದಲ ಪ್ರಮುಖ ಸಂಶೋಧನ ಲೇಖನ (ದೃಷ್ಟಿಯ ಪರಿಶೀಲನೆಯನ್ನು ಕುರಿತಾದ್ದು) ಪ್ರಕಟವಾದಾಗ ಹತ್ತಿರದ ಮತ್ತು ದೂರದ ವಸ್ತುಗಳನ್ನು ನೋಡಲು ಕಣ್ಣು ಪಡೆದಿರುವ ಹೊಂದಾಣಿಕೆಯ ಗುಣದ ಬಗ್ಗೆ ಸರಿಯಾದ ತಿಳಿವಳಿಕೆ ಅಷ್ಟಾಗಿ ಇರಲಿಲ್ಲ. ಈ ಬಗ್ಗೆ ಈತ ಪ್ರಯೋಗಗಳನ್ನು ನಡೆಸಿ ಕಣ್ಣಿನ ಈ ಗುಣಕ್ಕೆ ಅದರ ಮಸೂರ ಆಕಾರವನ್ನು ಬದಲಾಯಿಸಿಕೊಂಡು, ಸಂಗಮ ದೂರವನ್ನು ಹೆಚ್ಚು ಕಡಿಮೆ ಮಾಡಲು ಅನುಕೂಲವಾಗುವ ಕಣ್ಣೆವೆಯ ಸ್ನಾಯುಗಳೇ (ಸಿಲಿಯರಿ ಮಸಲ್ಸ್) ಕಾರಣ ಎಂದು ತಿಳಿಸಿದ.
ವರ್ಣ ದೃಷ್ಟಿಯ ಅಭಿಗ್ರಹಣದ ಬಗ್ಗೆ ಯಂಗ್ ನಡೆಸಿದ ಸಂಶೋಧನೆಗಳು ಇಂದಿಗೂ ಪ್ರಸ್ತುತವಾಗಿ ಉಳಿದಿವೆ. ಪ್ರತಿಯೊಂದು ಬಣ್ಣಕ್ಕೂ ಅಕ್ಷಿಪಟ ಪ್ರತಿಮಿಡಿಯುತ್ತದೆಂಬ ನಂಬಿಕೆ ಹಿಂದಿನಿಂದ ಇತ್ತು. ಬಣ್ಣಗಳು ಅನೇಕ ಇವೆ. ಈ ಸಿದ್ಧಾಂತವನ್ನು ಮತ್ತಷ್ಟು ಪರಿಷ್ಕರಿಸಿದವನೆಂದರೆ ಜರ್ಮನಿಯ ಅಂಗಕ್ರಿಯಾ ವಿಜ್ಞಾನಿ ಹಾಗೂ ಭೌತವಿಜ್ಞಾನಿ ಹರ್ಮಾನ್ ಹೆಲ್ಮ್‌ಹೋಲ್‌ಟ್ಸ್ (1821 - 94). ಅಷ್ಟು ಬಣ್ಣಗಳಿಗೂ ಪ್ರತಿಮಿಡಿಯುವ ಅಸಂಖ್ಯಾತ ಅಭಿಗ್ರಾಹಕಗಳಿಗೆ ಅಕ್ಷಿಪಟದಲ್ಲಿ ಸ್ಥಳ ಇಲ್ಲ ಎಂದು ಯಂಗ್ ವಾದಿಸಿದ. ಕೇವಲ ಮೂರು ಪ್ರಧಾನ ಬಣ್ಣಗಳಿಂದ ಯಾವ ಬಣ್ಣವನ್ನಾದರೂ ಪಡೆಯುವ ಸಾಧ್ಯತೆ ಇರುವುದರಿಂದ ನೀಲಿ, ಹಳದಿ ಮತ್ತು ಕೆಂಪು ಬಣ್ಣಗಳಿಗೆ ಅಭಿಗ್ರಾಹಕಗಳು ಪ್ರತಿಮಿಡಿದರೆ ಸಾಕು, ಎಲ್ಲ ಛಾಯೆಗಳ ಬಣ್ಣಗಳನ್ನು ದೃಷ್ಟಿಸುವ ಸಾಮರ್ಥ್ಯ ಮನುಷ್ಯನಿಗೆ ಲಭಿಸುತ್ತದೆ ಎಂದು ತೋರಿಸಿದ. ವರ್ಣ ಅಭಿಗ್ರಹಣವನ್ನು ಕುರಿತ ಈ ಸಿದ್ಧಾಂತಕ್ಕೆ ಯಂಗ್ - ಹೆಲ್ಮ್‌ಹೋಲ್‌ಟ್ಸ್ ಸಿದ್ಧಾಂತ ಎಂಬ ಹೆಸರೇ ಇದೆ.
ಯಂಗ್ ರಾಯಲ್ ಸೊಸೈಟಿಯ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ವಹಿಸಿದ್ದ. ಈತ ನಿಯತಕಾಲಿಕೆಗಳಿಗೂ ಬ್ರಿಟಾನಿಕ ವಿಶ್ವಕೋಶಕ್ಕೂ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದ. ಇವನ ಹಣಕಾಸಿನ ಸ್ಥಿತಿ ಸಾಕಷ್ಟು ಉತ್ತಮವಾಗಿದ್ದುದರಿಂದ ಜೀವನ ನಿರ್ವಹಣೆಗಾಗಿ ಹೆಣಗಬೇಕಾದ ಪರಿಸ್ಥಿತಿ ಇರಲಿಲ್ಲ. 1804 ಜೂನ್ 4ರಂದು ಈತ ಎಲಿಜ಼ ಮ್ಯಾಕ್ಸ್‌ವೆಲ್ ಎಂಬುವಳನ್ನು ಮದುವೆಯಾದ. ಈ ಮದುವೆಯಿಂದಾಗಿ ಇವನಿಗೆ ಹೆಚ್ಚಿನ ಸಂಪತ್ತು ಕೂಡಿಬಂತು.
ಡಚ್ ಗಣಿತವಿದ ಹಾಗೂ ಭೌತಶಾಸ್ತ್ರಜ್ಞ ಕ್ರಿಶ್ಚಿಯನ್ ಹೈಗನ್ಸ್ (1629 - 95) ಎಂಬವ ಮಂಡಿಸಿದ್ದ ಬೆಳಕಿನ ಅಲೆಸಿದ್ಧಾಂತವನ್ನು ಯಂಗ್ ಭದ್ರಪಡಿಸಿದ.[೪] ನ್ಯೂಟನ್ನನ ಉಂಗುರಗಳಿಗೆ ಯುಕ್ತ ವಿವರಣೆ ನೀಡಲು ಕಣವಾದ (ಕಾರ್ಪಸ್ಕ್ಯುಲರ್ ತಿಯರಿ) ಸೋಲುತ್ತದೆಂದು ವಾದಿಸಿ, ಬೆಳಕಿನ ಅಲೆ ಸ್ವಭಾವವನ್ನು ಒಪ್ಪಿಕೊಂಡರೆ ಮಾತ್ರ ಸಹಜ ವಿವರಣೆ ಸಾಧ್ಯ ಎಂದು ನಿರ್ಣಯಿಸಿದ. ಬೆಳಕು ಮತ್ತು ಶಬ್ದಗಳಿಗೆ ಸಂಬಂಧಿಸಿದಂತೆ ಕಂಡುಬರುವ ವ್ಯತಿಕರಣ ಎಂಬುದು ಅವುಗಳ ಅಲೆ ಸ್ವಭಾವಕ್ಕೆ ಸಂಬಂಧಿಸಿದ ಸಂಗತಿಯೆಂದು ತಿಳಿಸಿದ ಮೊದಲಿಗರ ಪೈಕಿ ಯಂಗ್ ಪ್ರಮುಖ.
ಸೀಳು ಗಂಡಿ ಪ್ರಯೋಗ: ಇವನು ತನ್ನ ವಾದವನ್ನು ಬಲಪಡಿಸಲು ನಡೆಸಿದ ಎರಡು ಸೀಳು ಗಂಡಿಗಳ ಪ್ರಯೋಗದ (ಡಬಲ್ ಸ್ಲಿಟ್ ಎಕ್ಸ್‌ಪೆರಿಮೆಂಟ್) ಸ್ಥೂಲ ವಿವರ ಇಷ್ಟು; ಒಂದು ಆಕರದಿಂದ ಹೊರಬರುವ ಬೆಳಕು ಹತ್ತಿರ ಹತ್ತಿರ ಇರುವ ಎರಡು ಸೀಳುಗಂಡಿಗಳ ಮೂಲಕ ಹಾಯುವಂತೆ ಈತ ವ್ಯವಸ್ಥೆ ಮಾಡಿದ್ದ. ಈ ಸೀಳು ಗಂಡಿಗಳಿಂದ ಹೊರಬರುವ ಬೆಳಕು ದೂರದಲ್ಲಿದ್ದ ತೆರೆಯ ಮೇಲೆ ಬಿದ್ದಾಗ ಒಂದರ ಪಕ್ಕದಲ್ಲೊಂದು ಪ್ರಕಾಶದಿಂದ ಕೂಡಿದ ಹಾಗೂ ಮುಸುಕು ಪ್ರಕಾಶದ ಪಟ್ಟೆಗಳು ಕಾಣಿಸಿದವು. ಪ್ರಕಾಶದಿಂದ ಕೂಡಿದ ಪಟ್ಟೆಗಳು ಕಾಣಿಸಿಕೊಳ್ಳುವ ಎಡೆಯಲ್ಲಿ ಒಂದರ ಮೇಲೊಂದು ಬೀಳುವ ಅಲೆಗಳ ನಡುವಿನ ಪಥವಿನ್ಯಾಸ ಸೊನ್ನೆ ಅಥವಾ ಯಾವುದೇ ಪೂರ್ಣಾಂಕ ಅಲೆದೂರಗಳಷ್ಟು ಇರುತ್ತದೆ. ಇದು ರಚನಾತ್ಮಕ ವ್ಯತಿಕರಣಕ್ಕೆ ಇರಬೇಕಾದ ಷರತ್ತು. ಯಂಗ್ ಇದೇ ಷರತ್ತನ್ನು ಬಳಸಿಕೊಂಡು ತೆಳುಪೊರೆಗಳ (ಉದಾಹರಣೆಗೆ, ಸೋಪಿನ ಗುಳ್ಳೆಗಳು) ಬಣ್ಣಗಳನ್ನು ವಿವರಿಸಿದ. ನ್ಯೂಟನ್ ಬಿಟ್ಟುಹೋಗಿದ್ದ ಉಂಗುರಗಳ (ನ್ಯೂಟನ್ಸ್ ರಿಂಗ್ಸ್) ಅಳತೆಗಳಿಂದ ವರ್ಣಪಟಲದ ಬೆಳಕುಗಳ ಅಲೆದೂರಗಳನ್ನೂ ಲೆಕ್ಕಹಾಕಿದ. ಇಷ್ಟಾದರೂ ಇವನ ಅಲೆಸಿದ್ಧಾಂತಕ್ಕೆ ಬೇಗ ಪುರಸ್ಕಾರ ಸಿಕ್ಕಲೇ ಇಲ್ಲ. ಇದಕ್ಕೆ ಕಾರಣ ಇಂಗ್ಲೆಂಡಿನ ವಿಜ್ಞಾನಿಗಳ ಮನಸ್ಸಿನಲ್ಲಿ ನ್ಯೂಟನ್ನನ ಪ್ರಭಾವ ಹೆಪ್ಪುಗಟ್ಟಿಗೊಂಡಿದ್ದದ್ದು.
ಮುಂದೆ ಯಂಗ್ ಫ್ರಾನ್ಸಿನ ವಿಜ್ಞಾನ ಅಕಾಡೆಮಿಯ ಹೊರನಾಡ ಸದಸ್ಯನಾಗಿ ಚುನಾಯಿತನಾದ (1827).[೫] ಹೀಗಾಗಿ ಇವನಿಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಿತು. ಈತ ಅಣುಗಳ ಗಾತ್ರವನ್ನು ಅಳತೆಮಾಡಲು ಪ್ರಯತ್ನ ಪಟ್ಟ. ದ್ರವಗಳ ಮೇಲ್ಮೈಕರ್ಷಣದ ಬಗ್ಗೆ ಸಿದ್ಧಾಂತವೊಂದನ್ನು ಮಂಡಿಸಿದ.[೬] ಘನ ವಸ್ತುಗಳ ಸ್ಥಿತಿಸ್ಥಾಪಕ ಸ್ವಭಾವವನ್ನು ಕುರಿತೂ ಈತ ಅಧ್ಯಯನ ನಡೆಸಿದ. ಹೀಗಾಗಿ ಸ್ಥಿತಿಸ್ಥಾಪಕ ಗುಣಾಂಕಕ್ಕೆ ಇವನ ಹೆಸರೇ (ಯಂಗ್ಸ್ ಮಾಡ್ಯುಲಸ್) ಬಂದಿದೆ.
ಯಂಗ್ ಒಂದು ದಿನವನ್ನೂ ವ್ಯರ್ಥವಾಗಿ ಕಳೆಯಲಿಲ್ಲ. ವಿಜ್ಞಾನ ಎಂಬುದು ಸತ್ಯಶೋಧನೆಗೆ ತೆರೆದ ಬಾಗಿಲು ಎಂದು ಇವನು ನಂಬಿದ್ದ. ಕೇವಲ ವಿಜ್ಞಾನ ಸಂಬಂಧಿ ವಿಷಯಗಳನ್ನು ಕುರಿತಂತೆ ಅಧ್ಯಯನ ಸಂಶೋಧನೆ ಮಾಡಿದ್ದು ಮಾತ್ರವಲ್ಲದೆ ಪ್ರಾಚೀನ ಹೀರೋಗ್ಲಿಫಿಕ್ ಭಾಷೆಯ ಬಗ್ಗೆಯೂ ಸಾಕಷ್ಟು ಕೆಲಸ ನಡೆಸಿ ಹೆಸರುಗಳಿಸಿದ. ಇದರಿಂದಾಗಿ ಈತ 1818ರಲ್ಲಿ ಈಜಿಪ್ಟನ್ನು ಕುರಿತಂತೆ ಅಧಿಕಾರ ವಾಣಿಯಿಂದ ಕೂಡಿದ ಲೇಖನವೊಂದನ್ನು ಸಿದ್ಧಪಡಿಸುವಂತಾಯಿತು. ಈ ಲೇಖನ ಇವನ ಸಮಕಾಲೀನ, ಕೇವಲ ಚರಿತ್ರಕಾರರ ಬರೆಹಗಳ (ಚಾರಿತ್ರಿಕ ದೃಷ್ಟಿಯಿಂದ ಮಾತ್ರ ಇವು ಇದ್ದುದರಿಂದ) ಎದುರು ಬಲು ಸಮರ್ಥ ಲೇಖನವೆಂದೆನಿಸಿತು.
ಮರಣ
[ಬದಲಾಯಿಸಿ]ಯಂಗ್ 1829 ಮೇ 10 ರಂದು ಲಂಡನ್ನಿನಲ್ಲಿ ಕಾಲವಾದ.
ಉಲ್ಲೇಖಗಳು
[ಬದಲಾಯಿಸಿ]- ↑ "Thomas Young (1773–1829)". Andrew Gasson. Archived from the original on 31 ಆಗಸ್ಟ್ 2017. Retrieved 30 August 2017.
- ↑ "Ri Professors". Royal Institution. Retrieved 30 August 2017.
- ↑ "THOMAS YOUNG (1773–1829)". Emmanuel College. Archived from the original on 31 August 2017. Retrieved 30 August 2017.
- ↑ Kipnis, Naum S. (1991). History of the Principle of Interference of Light. Springer. p. 65.
- ↑ One or more of the preceding sentences incorporates text from a publication now in the public domain: Chisholm, Hugh, ed. (1911). . Encyclopædia Britannica. Vol. 28 (11th ed.). Cambridge University Press. p. 940.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help) - ↑ Young, Thomas (1805). "An Essay on the Cohesion of Fluids". Phil. Trans. 95: 65–87. doi:10.1098/rstl.1805.0005. JSTOR 107159. S2CID 116124581.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Pages using the JsonConfig extension
- Pages using duplicate arguments in template calls
- CS1 errors: empty unknown parameters
- CS1 errors: invalid parameter value
- 1911 ಎನ್ಸೈಕ್ಲೋಪೀಡಿಯಾ ಬ್ರಿಟಾನಿಕಾ
- Wikipedia articles incorporating text from the 1911 Encyclopædia Britannica
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with Biodiversity Heritage Library links
- Articles with Open Library links
- Articles with Internet Archive links
- ಭೌತವಿಜ್ಞಾನಿಗಳು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ