ಸದಸ್ಯ:Vinisha ujire/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಲಾಟ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಜಾನಪಸಾಹಿತ್ಯದಲ್ಲಿ ಕೋಲಾಟ ಪ್ರಮುಖವಾದ ಕಲೆಯಾಗಿದೆ ಗಂಡಸರು ಹಾಗೂ ಹುಡುಗಿಯರ ಗುಂಪು ಎದುರಾಗಿ ನಿಂತು ನರ್ತಿಸುವ ಅಥವಾ ಹುಡುಗಿಯರು ಮಾತ್ರವೇ ನರ್ತಿಸುವ ದಕ್ಷಿಣ ಭಾರತದ ಉತ್ಸವಗಳಲ್ಲಿ ಒಂದು ಕೋಲು ನೃತ್ಯ. ಇದು ಕುಮ್ಮಿಗಳ ಕೈ ಚಪ್ಪಾಳೆ ನೃತ್ಯದಂತೆಯೇ ಇದೆ. ಇಲ್ಲಿ ನೃತ್ಯಗಾರರು ಕೈಯಲ್ಲಿ ಹಿಡಿದಿರುವ ಎರಡು ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿ, ತಲೆಯ ಮೇಲೆ ,ಹೆಗಲ ಮೇಲೆ, ಹಿಂಭಾಗದಲ್ಲಿ, ಮೊಣಕಾಲ ಬಳಿ ಹೊಡೆಯುತ್ತಾರೆ. ಅಥವಾ ಸಂಗಾತಿಗಳ ಕೋಲನ್ನು ವಿವಿಧ ವಿನ್ಯಾಸಗಳಲ್ಲಿ ಹಾಗೂ ಲಯಗಳಲ್ಲಿ ಹೊಡೆಯುತ್ತಾರೆ. ಯುರೋಪಿನ ಕೋಲು ನೃತ್ಯಗಳಿಗಿಂತ ಈ ನೃತ್ಯದಲ್ಲಿ ಮೈ ಹಾಗೂ ಮೊಣಕಾಲಿನ ಬಳುಕುಗಳು ಗಮನಾರ್ಹವಾಗಿರುತ್ತದೆ. ಪಿನ್ನಾಲ್ ಕೋಲಾಟದಲ್ಲಿ ನೃತ್ಯಗಾರರು ಬಲಗೈಯಲ್ಲಿ ಒಂದು ಕೋಲನ್ನೂ ಎಡಗೈಯಲ್ಲಿ ಕೆಂಪು ಅಥವಾ ಬಿಳಿಯ ಹುರಿಯನ್ನು ಹಿಡಿದಿರುತ್ತಾರೆ. ಇವುಗಳನ್ನು ಅವರು ಮೆಪೋಲ್ ವಿನ್ಯಾಸದಲ್ಲಿ ಹೆಣೆಯುತ್ತಾ (ಮೇಪೋಲ್: ಮೇ ಉತ್ಸವದ ದಿನ ಅವರ ಸುತ್ತಲು ಕುಣಿಯುವುದಕ್ಕಾಗಿ ಬಣ್ಣ ಬಳಿದು ಹೂವಿನಿಂದ ಅಲಂಕರಿಸಿದ ಕಂಬ) ಅದೇ ಸಮಯದಲ್ಲಿ ಹೆಣೆವ ರೀತಿಯಲ್ಲಿಹೆಜ್ಜೆಗಳನ್ನು ಹಾಕುತ್ತಾ ಕೋಲುಗಳನ್ನು ಹೊಡೆಯುತ್ತಾರೆ. ಈ ಹೆಣೆಯುವಿಕೆ ಯುರೋಪಿಯನ್ ಮತ್ತು ಅಮೇರಿಕನ್ ಮೇಪೋಲ್ನ ವೃತ್ತಾಕಾರದ ಸುರುಳಿಗಷ್ಟೇ ಸೀಮಿತವಾಗಿರದೇ ಚೌಕಾಕೃತಿಯ ಮತ್ತು ಲಂಬಾಕೃತಿಯ ರಚನೆಗಳನ್ನೂ ಒಳಗೊಳ್ಳುತ್ತದೆ. ಮೂಲತಃ ಅವುಗಳಿಗೆ ಸಸ್ಯಜೀವನದ ಸಾಂಕೇತಿಕತೆ ಇದ್ದಿರಬಹುದು.

ನಮ್ಮಲ್ಲಿ ಹಬ್ಬ ಹರಿದಿನಗಳು, ಉತ್ಸವಗಳು, ವಿಶೇಷ ಸಮಾರಂಭಗಳು, ಕೋಲಾಟದ ಸಂದರ್ಭಗಳಲ್ಲಿ, ಕೋಲಾಟವನ್ನೇರ್ಪಡಿಸಲು ಕೋಲು ಹುಯ್ಯುವವರು ಕನಿಷ್ಠ ಎಂಟು ಮಂದಿಯಿಂದ ಗರಿಷ್ಠ ಇಪ್ಪತ್ನಾಲ್ಕು ಮಂದಿಬೇಕು. ಕಣಿಕಣಿ ಎಂದು ಶಬ್ದ ಕೊಡುವಂಥ ಗಟ್ಟಿಯಾದ ಕೋಲುಗಳಿಗೆ ಎರಡನೇಯ ಮಹತ್ವ. ಸುಮಾರು ಮುಕ್ಕಾಲು ಅಡಿ ಉದ್ದವಿರುವ ಕಾರೆ, ಆಲೆ, ಬೈನೆ ಮುಂತಾದ ಮರಗಳಿಂದ ಮಾಡಿದ ಕೋಲು ಗೂಟಗಳು. ಇವುಗಳಿಗೆ ಬಣ್ಣ ಹಚ್ಚಿ ಗೀಲಿಟು ಮಾಡುವುದು ಉಂಟು. ಗೆಜ್ಜೆಗಳಿಗೆ ನಂತರದ ಸ್ಥಾನ. ಕೋಲಾಟವಾಡುವ ಆಳುಗಳು ತಮ್ಮ ಎರಡು ಕಾಲುಗಳಿಗೂ ಒಂದೊಂದು ಸರಗೆಜ್ಜೆಯನ್ನು ಕಟ್ಟಿಕೊಳ್ಳುತ್ತಾರೆ. ಕೋಲಾಟವಾಡುವವರ ಮಧ್ಯೆ ದಮ್ಮಡಿ ಬಾರಿಸುವವನು ಇರುತ್ತಾನೆ ಮತ್ತೊಬ್ಬ ತಾಳಗಳನ್ನು ಬಾರಿಸುತ್ತಾನೆ. ಇಷ್ಟು ಪರಿಕರಗಳನ್ನೊಳಗೊಂಡು ಕೋಲಾಟ ಪ್ರಾರಂಭವಾಗುತ್ತದೆ. ಕೆಲವು ಕಡೆ ಮತ್ತೊಂದು ವಿಶೇಷ ಸಾಧನವಿರುವುದುಂಟು. ಸುಮಾರು ಎರಡು ಅಥವಾ ಎರಡೂವರೆ ಅಡಿ ಎತ್ತರದ ಮರಗಾಲುಗಳನ್ನು ಒಬ್ಬ ವ್ಯಕ್ತಿ ತನ್ನ ಕಾಲಿಗೆ ಕಟ್ಟಿಕೊಂಡು ಕೋಲಾಟದವರ ಮಧ್ಯೆ ಕುಣಿಯುತ್ತಿದ್ದು ನೋಡುವವರಿಗೆ ತಮಾಷೆಗಾಗಿ ಕಾಣಿಸುತ್ತಾನೆ.

ಕೋಲಾಟದಲ್ಲಿ ಕೋಲುಪದಗಳಿಗೆ ಹೆಚ್ಚು ಪ್ರಾಮುಖ್ಯತೆ. ಇವು ಪ್ರಾಸ, ಚರಣ, ಪಲ್ಲವಿಗಳಿಂದ ರಚಿತವಾಗಿರುತ್ತದೆ. ವಿನೋದ, [[ದುರಂತ], ಪ್ರಣಯ ಮುಂತಾದ ವಸ್ತುಗಳನ್ನೊಳಗೊಂಡ ಕೋಲುಪದಗಳು ಕೋಲಾಟದ ಅವಿಭಾಜ್ಯ ಅಂಗ. ಕೋಲಾಟದವರ ವೇಷವೆಂದರೆ ಚಡ್ಡಿ ಅಥವಾ ಮೊಣಕಾಲಿನವರೆಗೆ ಎತ್ತಿಕಟ್ಟಿದ ಪಂಚೆ, ಒಳಅಂಗಿ, ಸೊಂಟಕ್ಕೆ ಒಂದು ವಸ್ತು ಮತ್ತು ಕಾಲಿಗೆ ಗೆಜ್ಜೆ.ಕೊಡವ , ಗೊಲ್ಲ ಮತ್ತು ಲಂಬಾಣಿ ಜನಾಂಗಗಳಲ್ಲಿ ಕೋಲಾಟವು ಹೆಚ್ಚು ಪ್ರಯೋಗಗೊಳ್ಳುತ್ತದೆ. ಆ ಜನಾಂಗಗಳಲ್ಲಿ ಹೆಂಗಸರೂ ಕೋಲಾಟವಾಡುವುದುಂಟು.ಉತ್ತರಕರ್ನಾಟಕದ ಕೆಲವೆಡೆ ಕೋಲಾಟವು ದೈವೀ ಆರಾಧನೆಯೊಡನೆ ಸಂಬಂಧವುಳ‍್ಳದ್ದಾಗಿದೆ. ಆಶ್ವಯುಜ ಮಾಸದಲ್ಲಿ ಹುಣ್ಣಿಮೆಯ ದಿನ ಶಾಸ್ತ್ರೋಕ್ತವಾಗಿ ಕಾಡಿಗೆ ಹೋಗಿ ಅಲ್ಲಿ ಗಂಧ, ಕೊಡಸು, ಬೈನೆ ,ಹೊನ್ನೆ ಈ ಮರಗಳಲ್ಲಿ ಮಾತ್ರ ಕೋಲುಗಳನ್ನು ಕಡಿದು ತರುತ್ತಾರೆ. ಐದು ಜನ ಉಪವಾಸವಿದ್ದು ಮರಗಳಿಗೆ ಪೂಜಿಸಿ ಒಂದು ಮರಕ್ಕೆ ಒಂದೇ ಜೊತೆ ಕೋಲನ್ನು ಗೋಧೂಳಿ ಲಗ್ನದಲ್ಲಿ ಕಡಿಯಬೇಕೆಂಬ ನಿಯಮವೂ ಉಂಟು. ಇದಕ್ಕಾಗಿ ಕೆಲವು ಮನೆತನಗಳೇ ಇವೆ. ಆನಂತರ ಹದಿನೈದು ದಿನಗಳ ಕಾಲ ಕೋಲಾಟದ ಅಭ್ಯಾಸ ನಡೆಸಿ ದೀಪಾವಳಿ ವೇಳೆಗೆ ದೇವರ ಮುಂದೆ ಪ್ರದರ್ಶಿಸುವ ಸಂಪ್ರಾದಯವಿದೆ. ಕೃಷ್ಣ ಹುಟ್ಟಿದಾಗ ಯಾದವರು ಕೋಲಾಟವಾಡಿದುದು, ಗೋಪಿಕಾ ಸ್ತ್ರೀಯರು ಕೃಷ್ಣನೊಂದಿಗೆ ಕೋಲಾಟವಾಡಿದ ಸನ್ನಿವೇಶಗಳು ಪುರಾಣದಲ್ಲಿ ಉಲ್ಲೇಖವಾಗಿದೆ. ಕೋಲಾಟ ಪ್ರಾರಂಭವಾಗುವುದು ಗಣೇಶನ ಪ್ರಾರ್ಥನೆಯೊಡನೆ ಮೊದಲಿಗೆ ಕಲಾವಿದರು ವರ್ತುಲಾಕಾರದಲ್ಲಿ ನಿಲ್ಲುವರು. ಮಧ್ಯೆಕೋಲುಗಳನ್ನಿಟ್ಟು ಪೂಜಿಸಿ ತಮ್ಮ ಮುಖಂಡನಿಗೆ ವಂದನೆ ಮಾಡಿದ ಬಳಿಕ ಗಣಪತಿ, ಇಷ್ಟದೈವ, ಗ್ರಾಮದೇವತೆ, ಪ್ರಕೃತಿ, ಶರಣ, ವೀರ- ಮುಂತಾದವರ ಸ್ತುತಿ ಮಾಡುವರು.ಅನಂತರ ಕೋಲಾಟ ಪ್ರಾರಂಭವಾಗುತ್ತದೆ. ಮಧ್ಯೆ ಮಧ್ಯೆ 'ಥೈಯ್ಯ', 'ಉಡುದೈಯ' ಎಂದು ಒಂದಿಬ್ಬರು ಕೂಗುವುದುಂಟು. ಆಟದ ಮುಕ್ತಾಯದಲ್ಲಿ "ತಾಕಿತು, ತಗುಲಿತು ಯಾಕ್ಹಿಂಗಾಯಿತು ಥೈಯ್ಯ, ಥೈಯ್ಯ ಥಗಡದತ್ತೈಯ್ಯ" ಎಂದು ಹೇಳಿ ಮುಗಿಸುವ ಸಂಪ್ರಾದಯ ಉಂಟು . ಕೋಲಾಟದಲ್ಲಿ ಹಲವು ಬಗೆಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ:

ಗಣೇಶನ ಸ್ತುತಿ ಕೋಲು[ಬದಲಾಯಿಸಿ]

ಕೋಲಾಟದವರು ಸ್ತುತಿ ಹಾಡುತ್ತಾ ಅವರವರ ಸ್ಥಳದಲ್ಲೇ ನಿಂತುಕೊಂಡು ಕೋಲು ಹುಯ್ಯುವದು.

ಚಿತ್ತಾರದ ಕೋಲು[ಬದಲಾಯಿಸಿ]

ಪ್ರತಿಯೊಬ್ಬರೂ ಒಬ್ಬರ ಕೋಲಿಗೆ ಮತ್ತೊಬ್ಬರ ಕೋಲನ್ನು ತಾಕಿಸುತ್ತಾ ಸುತ್ತುವುದು.

ಮುರಾಳು ಸುತ್ತಾಡುವ ಕೋಲು[ಬದಲಾಯಿಸಿ]

ಒಬ್ಬನಿಗೆ ಒಬ್ಬ ಸುತ್ತಾಡಿಕೊಂಡು ಕೋಲು ಹೊಡೆಯುತ್ತಾ ಪದ ಹಾಡುತ್ತಾ ವೃತ್ತದ ಒಳಹೊಕ್ಕು ಹೊರಬರುವುದು.

ನೀರುಕೋಲು[ಬದಲಾಯಿಸಿ]

ಪ್ರತಿಯೊಬ್ಬರೂ ನಿಂತು ಬಗ್ಗಿ ಒಳಗಡೆಯವನು ಹೊರಗೂ ಹೊರಗಿನವನು ಒಳಗೂ ನಾಲ್ಕು ಜನರಿಗೆ ಕೊಲುನ್ನು ಕೊಡುತ್ತಾ ಪದ ಹೇಳಿಕೊಂಡು ಆಡುವುದು.

ಚೆಂಡಾಡುವ ಕೋಲು[ಬದಲಾಯಿಸಿ]

ಇದರಲ್ಲಿ ಭಾಗವಹಿಸುವವರು ಎಂಟು ಮಂದಿ. ನಾಲ್ಕು ಜನ ಕೋಲು ಕೊಡುತ್ತಾ ನಾಲ್ಕು ಮೂಲೆಯಲ್ಲಿ ನಿಲ್ಲುವರು. ಉಳಿದ ನಾಲ್ಕು ಜನ ಒಳಗೆ ಕುಣಿದು ಅವರಿಗೆ ಕೋಲು ಕೊಡುತ್ತಾ ಚೆಂಡಾಡುವ ರೀತಿಯಲ್ಲಿ ಕುಣಿಯುವುದು.

ತೇರು ಕೋಲು[ಬದಲಾಯಿಸಿ]

ಹನ್ನೆರಡು ಮಂದಿ ಸುತ್ತುತ್ತಾ ತಮ್ಮ ಕಾಲಡಿಯಲ್ಲಿ ಕೋಲನ್ನು ಹೊಡೆದು ಪುನಃ ಬೆನ್ನ ಹಿಂದುಗಡೆ ಮತ್ತೊಬ್ಬರಿಗೆ ಕೋಲನ್ನು ಕೊಟ್ಟು ಪದ ಹೇಳುತ್ತಾ ಕುಣಿಯುವುದು.

ಕಾದಲಗೋಪು ಕೋಲು[ಬದಲಾಯಿಸಿ]

ಪ್ರತಿಯೊಬ್ಬರೂ ತಮ್ಮ ಒಂದೇ ಕೈಯಲ್ಲಿ ಜೊತೆ ಕೋಲನ್ನು ತಲೆಯ ಮೇಲೆ ಹಿಡಿದು ಹಿಂದಕ್ಕೂ ಮುಂದಕ್ಕೂ ಚಲಿಸಿ ಕೋಲು ಹೊಡೆದುಕೊಂಡು ಪದ ಹೇಳುತ್ತಾ ಕುಪ್ಪಳಿಸುತ್ತಲೇ ಕುಣಿಯುವುದು

ಜಡೇ ಕೋಲು[ಬದಲಾಯಿಸಿ]

ಇದರಲ್ಲಿ ಎಂಟು ಮಂದಿ ಭಾಗವಹಿಸುವರು. ಕೆಲವು ಕಡೆ ಹನ್ನೆರಡರಿಂದ ಹದಿನಾರು ಮಂದಿಯವರೆಗೂ ಇರುವುದುಂಟು. ಒಂದು ಖಚಿತವಾದ ಅಂತರದಲ್ಲಿ ಸುಮಾರು ಹತ್ತು ಅಡಿ ಉದ್ದದ ಎರಡು ದಡಿ(ಕೊಂಬೆ)ಗಳನ್ನು ನೆಟ್ಟು ಅವುಗಳ ಮೇಲೆ ಒಂದು ಅಡ್ಡಗಳನ್ನು ಇಡುವರು. ಎಂಟು ಹಗ್ಗಗಳನ್ನು ಈ ಗಳುವಿನ ಮಧ್ಯಭಾಗಕ್ಕೆ ಸೇರಿಸಿ ಒಟ್ಟಿಗೆ ಕಟ್ಟಲಾಗುವುದು. ಆ ಹಗ್ಗಗಳ ತುದಿಯನ್ನು ಕೋಲು ಹಾಕುವ ಕಲಾವಿದರು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಕೋಲು ಹುಯ್ಯುಲು ಆರಂಭಿಸುವರು. ವರಸೆ ಬದಲಾಯಿಸಿದಾಗ ಜಡೆ ಬಿಚ್ಚಿಕೊಳ್ಳುತ್ತಾ ಮೊದಲಿನಂತಾಗುತ್ತದೆ. ಹೀಗೆ ಹಗ್ಗ ಜಡೆಯಂತೆ ಹೆಣೆದುಕೊಳ್ಳುವುದರಿಂದ ಇದಕ್ಕೆ ಜಡೇಕೋಲು ಹೆಸರು ಬಂದಿದೆ. ಇಲ್ಲಿ ಕಲಾವಿದರು ಕ್ರಮವಾಗಿ ತಪ್ಪಿಲ್ಲದೆ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ಜಡೆಯಲ್ಲಿ ಸಿಕ್ಕುಟಾಂಗಿ ಆಟ ಕೆಟ್ಟು ಹೋಗುತ್ತದೆ, ಹಾಕುವ ಹೆಣಿಕೆಗಳು ಹಲವು ಬಗೆ ಇರುತ್ತವೆ. ಉದಾ:ಜಡೆ, ಪಟಗಾಣೆ, ಬಾರಕೋಲು, ಗಂಟು, [[ಸರಪಳಿ], ಕಲ್ಲಿ, ನೆಲವು, ಜೋಡಿಜಡೆ ಇತ್ಯಾದಿ. ಕೆಲವು ಪ್ರದೇಶದಲ್ಲಿ ಈ ಕೋಲಿಗೆ ಮಲಕಿನಕೋಲು, ಲಾವಳ ಎಂದೂ ಕರೆಯುವುದುಂಟು. ಉತ್ತರ ಕರ್ನಾಟಕದಲ್ಲಿ ಗೋಪು ಹೆಣೆಯುವುದು ಎಂದು ಇದಕ್ಕೆ ಹೆಸರಿದೆ.

ಕೊರವಂಜಿ ಕೋಲು[ಬದಲಾಯಿಸಿ]

ನಾಲ್ಕು ಮಂದಿ ಇನ್ನೊಂದು ಸಾಲಿನಲ್ಲಿ ಎದುರುಬದುರಾಗಿ ನಿಂತುಕೊಳ್ಳುವರು. ಮಧ್ಯೆ ಓಣಿಯೋಪಾದಿಯಲ್ಲಿ ಸ್ವಲ್ಪ ಸ್ಥಳವಿರುತ್ತದೆ. ಎರಡು ಸಾಲಿನವರೂ ನಿಂತಲ್ಲಿಯೇ ನಿಂತು ತಾಳ ಹಾಕುತ್ತಿರುತ್ತಾರೆ. ಈ ಎಂಟು ಮಂದಿಯಲ್ಲದೇ ಬೇರೆ ಇಬ್ಬರಲ್ಲಿ ಒಬ್ಬ ಕೊರವಂಜಿ ವೇಷ ಹಾಕುವನು. ಕೊರವಂಜಿ ಓಣಿಯ ಒಂದು ತುದಿಯಲ್ಲಿದ್ದರೆ ರುಕ್ಮಿಣಿ ಮತ್ತೊಂದು ತುದಿಯಲ್ಲಿರುವಳು. 'ಕೈತಾರೆ ಕೈತಾರೆ ದುಂಡಿ'ಎಂದು ಹೇಳುತ್ತಾ ಕೊರವಂಜಿಯು ರುಕ್ಮಿಣಿಯನ್ನು ಹಿಡಿಯುವಳು. ಕೊರವಂಜಿವೇಷದಲ್ಲಿ ಬಂದವನು ಕೃಷ್ಣ ಎಂಬುದು ಹಾಡಿನಿಂದ ವ್ಯಕ್ತವಾಗುತ್ತದೆ. ಇಲ್ಲಿ ಕೊರವಂಜಿಯದೇ ಪ್ರಧಾನ ಪಾತ್ರವಾಗಿರುವುದರಿಂದಲೂ ಹಾಡು ಸಹ ಕೊರವಂಜಿಯನ್ನು ಕುರಿತಿರುವುದರಿಂದಲೂ ಇದನ್ನು ಕೊರವಂಜಿ ಕೋಲು ಎಂಬುದಾಗಿ ಕರೆಯುತ್ತಾರೆ.

ಕೊರಮರ ಕೋಲು[ಬದಲಾಯಿಸಿ]

ಚಕ್ರಾಕಾರವಾಗಿ ಸುತ್ತಿ ಕೊಡುವುದು ಇದರ ರೀತಿ. ಕೊರಮರೇ ಇದನ್ನು ಪ್ರಾರಂಭಿಸಿದ್ದರಿಂದ'ಕೊರಮರಕೋಲು' ಎಂದು ಹೆಸರು ಬಂದಿದೆ ಎಂದು ಹೇಳುತ್ತಾರೆ. ಇವರ ಕೋಲು ಪದಗಳಲ್ಲಿ ನಾಗರೀಕತೆಯ ಪ್ರಭಾವ ಹೆಚ್ಚು.

ಕತ್ರಿ ಕೋಲು[ಬದಲಾಯಿಸಿ]

ಹದಿನಾರು ಮಂದಿ ಸುತ್ತಲೂ ವರ್ತುಲಾಕಾರದಲ್ಲಿ ನಿಂತು ಒಮ್ಮೆ ತಮ್ಮ ಎಡಗೈ ಕೋಲಿನಿಂದ ಬಲಗಡೆಯವನ ಬಲಗೈ ಕೋಲಿಗೆ, ಇನ್ನೊಮ್ಮೆ ತಮ್ಮ ಬಲಗೈ ಕೋಲಿನಿಂದ ಎಡಗಡೆಯವನ ಎಡಗೈ ಕೋಲಿಗೆ ಹೊಡೆಯುತ್ತಾ ಸುತ್ತುವುದು ಈ ಆಟದ ವಿನ್ಯಾಸ.

ಅಂಗಡಿ ಕೋಲು[ಬದಲಾಯಿಸಿ]

ಎಂಟೆಂಟು ಮಂದಿ ಎರಡು ಗುಂಪಾಗಿ ನಿಂತುಕೊಂಡು ಪ್ರತ್ಯೇಕವಾಗಿ ಸುತ್ತುತ್ತಿರುವರು. ಒಂದರಿಂದ ಇನ್ನೊಂದು ಗುಂಪು ತೀರ ಹತ್ತಿರದಲ್ಲಿರುತ್ತದೆ. ಮೊದಲನೆಯ ಗುಂಪಿನ ಕೊನೆಯ ವ್ಯಕ್ತಿ ಎರಡನೆಯ ಗುಂಪಿನ ಕೊನೆಯವನಿಗೆ ಕೋಲು ಕೊಡುತ್ತಾನೆ. ಗುಂಪು ಸುತ್ತುತ್ತಿರುವುದು ಎರಡು ಕೊನೆಗಳಲ್ಲಿ ಪ್ರತಿಯೊಬ್ಬನು ಸಂಧಿಸುವನು. ಹೀಗೆ ಸುತ್ತುತ್ತಿರುವಾಗ ಯಾರು, ಎಲ್ಲೆಲ್ಲಿ ಸರಿಯುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ.

ಬೆನ್ನಾಳಿ ಕೋಲು[ಬದಲಾಯಿಸಿ]

ವರ್ತುಲಾಕಾರವಾಗಿ ಪ್ರತಿಯೊಬ್ಬರ ಬೆನ್ನಿನ ಹಿಂದೆ ಒಬ್ಬ ಬರುವಂತೆ ನಿಂತುಕೊಳ್ಳುವರು. ಕೋಲಿನ ಒಂದು ಪೆಟ್ಟನ್ನು ತಮ್ಮ ಬೆನ್ನ ಹಿಂದೆಯೇ ಕೊಡುವರು. ಇನ್ನೊಂದನ್ನು ತಲೆಯ ಮೇಲೆ ಬರುವ ಕೋಲಿಗೆ ಕೊಟ್ಟು ಸುತ್ತುವರು. ಬೆನ್ನ ಹಿಂದೆ ಆಡುವ ಕೋಲಾಟವಾದ್ದರಿಂದ ಇದಕ್ಕೆ 'ಬೆನ್ನಾಳಿಕೋಲು' ಎಂದು ಹೆಸರು ಬಂದಿದೆ.

ಮಲಕಿನ ಕೋಲು[ಬದಲಾಯಿಸಿ]

ಒಬ್ಬ ಕಿರುಬೆರಳನ್ನು ಇನ್ನೊಬ್ಬರ ಕಿರುಬೆರಳಿಗೆ ಸಣ್ಣ ಹುರಿಯಿಂದ ಮೆಲಕು ಹಾಕುವರು. ಹೀಗೆ ಒಬ್ಬರಿಗೆ ಇನ್ನೊಬ್ಬರು ಬೇರ್ಪಡದೆ ಎರಡೂ ಕೈಯಿಂದ ಕೋಲು ಹಿಡಿದು ತಲೆಯ ಮೇಲ್ಗಡೆಯಿಂದ ಕೋಲನ್ನು ಇತರರ ಕೋಲಿಗೆ ಹೊಡೆದು ಇಡೀ ದೇಹವನ್ನು ತಿರುಗಿಸಿ ಪುನಃ ಮೊದಲಿನ ಸ್ಥಿತಿಗೆ ಬರುವರು.

ಉದ್ದಕೋಲು[ಬದಲಾಯಿಸಿ]

ಇದರಲ್ಲಿ ಅನೇಕ ಪ್ರಕಾರಗಳಿವೆ.ಬಲಗೈಯಲ್ಲಿ ಮಾತ್ರ ಕೋಲು ಇರುತ್ತದೆ.ಎಡಗೈಯಲ್ಲಿ ಬಣ್ಣದ ಬಟ್ಟೆಯನ್ನು ಹಿಡಿದಿರುವರು.ಗಿಡ್ಡಕೋಲಿನ ಪ್ರಕಾರಕ್ಕೆ ದಪ್ಪಿನ ಗತ್ತು ಇರುವುದಿಲ್ಲ.ಆದರೆ ಇದರ ಪ್ರತಿ ಪ್ರಕಾರಕ್ಕೂ ತಾಳಮೇಳ ಕೊಡುವುದೇ ಇದರ ಸೊಗಸು.ಎಂಟು ಮಂದಿ ಎದುರುಬದುರು ನಿಂತುಕೊಂಡು ಆಟದ ಪ್ರಾರಂಭಕ್ಕೆ ದಪ್ಪಿನ ನಿಧಾನವಾದ ಗತ್ತಿಗೆ ಹೆಜ್ಜೆಯನ್ನು ಏಕ ಪ್ರಕಾರವಾಗಿ ಹಿಂದೊಮ್ಮೆ ಮುಂದೊಮ್ಮೆ ಹಾಕುತ್ತಾ ಟೊಂಕ ಬಳಸುತ್ತಾ ಎಡಗೈನ ಬಟ್ಟೆಯನ್ನು ಗತ್ತಿಗೆ ಸರಿಯಾಗಿ ಮೇಲಕ್ಕೊಮ್ಮೆ ಕೆಳಕ್ಕೊಮ್ಮೆ ಬೀಸುತ್ತಾ ಕೋಲನ್ನು ಹೆಬ್ಬೆರಳಿನ ಸಂದಿಯಿಂದಲೇ ಚಕ್ರಕಾರವಾಗಿ ತಿರುಗಿಸುತ್ತಾ ಒಯ್ಯರವಾಗಿ ಆಡಿಸುವರು.ತಂಡದ ನಾಯಕನಿಂದ ಸಂಜ್ಞೆ ಬರುತ್ತದ್ದಂತೇಯೇ ಕೋಲು ಹಾಕುವ ತಾಳಗತ್ತು ಹಾಗೂ ದಪ್ಪಿಗತ್ತು ತೀರ್ವ ಗತಿಯನ್ನು ತಲುಪುತ್ತದೆ.ಅದೇ ವೇಳೆಗೆ ಎದುರು ಬದುರು ಸಾಲಿನವರು ಜೋಲಿ ಕೊಟ್ಟು ಬಂದು ಏಟನ್ನು ಪರಸ್ಪರ ಕೋಲಿಗೆ ಬಹೊಡೆದು ಒಬ್ಬರ ಸಂದಿಯಿಂದ ಇನ್ನೊಬ್ಬರು ತಪ್ಪಿಸಿಕೋಳ್ಳುವರು.ಆಗ ಆ ಕಡೆಯ ಸಾಲು ಈ ಕಡೆಗೂ, ಈ ಕಡೆಯ ಸಾಲು ಆ ಕಡೆಗೂ ಸರಿಯುತ್ತದೆ. ಪುನಃ ಇದೇ ಮುಂದುವರಿಯುತ್ತದೆ. ಕೆಲವು ನಿಮಿಷಗಳ ಬಳಿಕ ನಿರ್ದಿಷ್ಟ ಸೂಚನೆ ಕೊಟ್ಟು ಗತ್ತು ಮುಗಿಸುವರು.ಆಗ ಎಲ್ಲರೂ ಮೊಣಕಾಲಿನ ಮೇಲೆ ಕೂತು ತಮ್ಮ ಎದುರಿನ ವ್ಯಕ್ತಿಯ ಕೋಲಿಗೆ ಸಣ್ಣದಾಗಿ ಏಟು ಕೊಟ್ಟು ಮುಕ್ತಾಯ ಮಾಡುವರು.ಉತ್ತರ ಕರ್ನಾಟಕದಲ್ಲಿ ರೂಢಿಯಲ್ಲಿರುವ ಹೆಜ್ಜೆಮೇಳದಲ್ಲೂ ಇಂಥ ಕೋಲಾಟ ಆಡುವುದುಂಟು.

ಸುತ್ತುಕೋಲು[ಬದಲಾಯಿಸಿ]

ಎರಡು ಸಾಲಿನಲ್ಲಿ ಒಬ್ಬರಿಗೊಬ್ಬರು ಬೆನ್ನು ಕೊಟ್ಟು ನಿಲ್ಲುವರು. ಕೋಲುಕಾರರು ಪರಸ್ಪರರ ಕೋಲಿಗತ್ತಿಗೆ ಸರಿಯಾಗಿ ಏಟು ಕೊಟ್ಟು ಮುಂದೆ ಸರಿದು ಪುನಃ ತಿರುಗಿ ನಿಲ್ಲುವರು. ಹೀಗೆ ತಳಕು ಹಾಕಿದ ರೀತಿಯಲ್ಲಿ ಮುಂದುವರಿದು ಮುಗಿಸುವರು.

ಪಳತುಕೋಲು[ಬದಲಾಯಿಸಿ]

ಹಿಂದಿನ ಪ್ರಕಾರದಲ್ಲೇ ನಿಲ್ಲುವರು. ಆದರೆ ಇಲ್ಲಿ ಎರಡರಲ್ಲಿ ಒಂದು ಪೆಟ್ಟನ್ನು ಕಾಲುಗಳ ನಡುವಿನಿಂದ ಕೊಡಲಾಗುವುದು. ಈ ಕೋಲುಗಳು ಎರಡೂವರೆ ಅಡಿ ಇರುತ್ತವೆ. ಹನ್ನೆರಡು ಮಂದಿ ಕಲಾವಿದರು ಭಾಗವಹಿಸುವರು, ಇಬ್ಬರು ಹಾಡನ್ನು ಹಾಡುವರು.

ಉಯ್ಯಾಲೆ ಕೋಲು[ಬದಲಾಯಿಸಿ]

ಎಂಟು ಮಂದಿ ಭಾಗವಹಿಸಬೇಕು. ನಾಲ್ಕು ಜನರು ಒಂದು ಸಾಲಿನಲ್ಲಿ ನಿಂತು ಅವರಿಗೆ ಅಭಿಮುಖವಾಗಿ ಉಳಿದ ನಾಲ್ವರು ಸಾಲಿನಲ್ಲಿ ನಿಲ್ಲಬೇಕು. ಆರಂಭದಲ್ಲಿ ಒಂದು ಸಾರಿ ಎರಡು ಸಾಲಿನವರೂ ತಮಗೆ ಎದುರು ಬದುರು ನಿಂತವರಿಗೆ ಎಡಗೈ ಬಲಗೈ ಕೋಲು ಕೊಡುವರು. ಅನಂತರ ತಮ್ಮ ಸಾಲಿನಲ್ಲೇ ಕೋಲು ಕೊಡಲು ಪ್ರಾರಂಭಿಸುವರು. ಅಂದರೆ ಒಂದು ಸಾಲಿನ ನಾಲ್ಕು ಜನರಲ್ಲಿ ಇಬ್ಬಿಬ್ಬರು ಜೊತೆ ಜೊತೆಯಾಗಿ ಎಡಗೈ ಬಲಗೈ ಕೋಲು ಕೊಡುವರು. ಇದೇ ಸಮಯದಲ್ಲಿ ಮತ್ತೊಂದು ಸಾಲಿನ ನಾಲ್ಕು ಮಂದಿಯು ಅತ್ತ ಕಡೆ ಇದೇ ರೀತಿ ಕೋಲು ಕೊಡುತ್ತಿರುತ್ತಾರೆ. ಅಂದರೆ ಒಂದೊಂದು ಸಾಲಿನ ನಾಲ್ಕು ಜನರು ತಮ್ಮ ಸಾಲಿನವರಲ್ಲೇ ಜೊತೆ ಜೊತೆಯಾಗಿ ಎಡರು ಸಾರಿ ಕೊಟ್ಟು ಅನಂತರ ಮುಂದಿನ ಸಾಲಿನೊಡನೆ ಮೊದಲಿನಂತೆಯೇ ಕೋಲು ಕೊಡುವರು. ಹೀಗೆ ಕೋಲು ಕೊಡುವ ರೀತಿ ಪುನಾರವರ್ತನೆಗೊಳ್ಳುವುದರಿಂದ ಕೋಲಾಟವು ಒಂದು ಸಾರಿ ಚಕ್ರಕಾರವಾಗಿ ಮತ್ತೊಂದು ಸಾರಿ ಮತ್ತೊಂದು ದಿಕ್ಕಿನಲ್ಲಿ ಈ ಎರಡು ಸಾಲುಗಳು ಸಂಧಿಸುತ್ತದೆ. ಹೀಗೆ ಕೋಲಾಡುವ ಮಂದಿ ಹಿಂದಕ್ಕೂ ಮುಂದಕ್ಕೂ ಉಯ್ಯಾಲೆಯಂತೆ ಸಾಗುವುದರಿಂದ ಇದನ್ನು ಉಯ್ಯಾಲೆ ಕೋಲು ಎಂದೇ ಕರೆಯುತ್ತಾರೆ.

ಗೀಜುಗನ ಕೋಲು[ಬದಲಾಯಿಸಿ]

ಈ ವಿಧದಲ್ಲಿ ಎಂಟು ಮಂದಿ ಭಾಗವಹಿಸುವರು.ನಾಲ್ಕು ಜನ ಒಳ ಮನೆಯಲ್ಲೂ ಉಳಿದ ನಾಲ್ಕು ಜನ ಅವರಿಗೆ ಅಭಿಮುಖವಾಗಿ ಹೊರ ಮನೆಯಲ್ಲೂ ನಿಲ್ಲುವರು. ಎಂಟು ಮಂದಿಯೂ ಕೋಲುಗಳನ್ನು ಹೊಡೆದು ಎಡಗಡೆ ಒಂದು ಸಾರಿ ಬಲಗಡೆ ಒಂದು ಸಾರಿ ಕೊಡುವರು. ಎಡಗಡೆ ಮತ್ತು ಬಲಗಡೆಯವರು ಇದೇ ರೀತಿ ಕೋಲು ಕೊಡುತ್ತಾರೆ ಹೀಗೆ ಕೋಲು ಕೊಡುತ್ತಿರುವಾಗ ಯಾಳ ಹೊಂದಿದಾಗ ಒಳಗಿದ್ದವನಲ್ಲಿ ಯಾರಾದರೊಬ್ಬ ಮಲಗುವನು.ಹಾಗೆ ಮಲಗಿಯೂ ಅವನು ಮೊದಲಿನಂತೆ ಕೋಲು ಕೊಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.ಇದು ಈ ಕೋಲಿನ ಒಂದು ವೈಶಿಷ್ಟ್ಯ.ಅನಂತರ ಮಲಗಿದವನ ಮೇಲೆ ಕಾಲ ಮೇಲೆ ಒಳಗಿದ್ದವರಲ್ಲಿ ಇನ್ನೊಬ್ಬ ಕುಳಿತುಕೊಳ್ಳತ್ತಾನೆ. ಕುಳಿತ ತಕ್ಷಣ ಅವನ ಭುಜಗಳ ಮೇಲೆ ಮತ್ತಿಬ್ಬರು ಕುಳ್ಳಿತುಕೊಳ್ಳುತ್ತಾರೆ.ಅಂದರೆ ಕುಳಿತುಕೊಳ್ಳುವ ಅವಕಾಶ ಒಳಗಡೆಯ ಸರದಿಯಲ್ಲಿದ್ದ ನಾಲ್ಕು ಜನರಿಗೂ ಮಲಗುವ ಮತ್ತು ಕೂರುವ ಸರದಿ ಬರುತ್ತದೆ.ಈ ರೀತಿಯ ಪುನರಾವರ್ತನೆಯಿಂದ ಆಟವು ಚೆನ್ನಾಗಿ ಕಾಣುತ್ತದೆ"ಬಾರು ಗೀಜುಗನೆ ಮುದ್ದಿನ ತೇರು ಗೀಜುಗನೆ" ಎಂಬ ಹಾಡುನ್ನು ಇದಕ್ಕೆ ಬಳಸಿಕೊಳ್ಳುವುದರಿಂದ ಇದಕ್ಕೆ ಅದೇ ಹೆಸರು ಪ್ರಾಪ್ತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಆಡುವ ಕೋಲಾಟದ ವಿಧಗಳು[ಬದಲಾಯಿಸಿ]

ತೆಕ್ಕೆಗೋಲು,ಬೆಟ್ಗೋಲು,ಆಳದೀಟು,ವಿಲಾಟ, ನಾಬಂದಿ,ಒಂಬತ್ತು ಚಿಟಗಿ,ರಂಡ ಆಟ,ಒಂಟಿಕೋಲು,ಪಗಡಿಕೋಲು,ಬಳ್ಳಿಕೋಲು ,ಪಳತುಕೋಲು,ಸುತ್ತುಕೋಲು,ಕತ್ರಿಕೋಲು,ಚಿತ್ರಕೋಲು,ಅಂಗಡಿಕೋಲು,ಚೆನ್ನಾಳಿಕೋಲು,ಮುರಾಳಿನಕೋಲು,ಮುರಾಳಿಹೆಜ್ಜೆಕೋಲು,ತಮಲಕು ಕೋಲು,ಬಾಗ್ಗೋಲು,ದಾವಣಿಗೋಲು,ಹೂವಿನ ಕೋಲು,ಬಿಚ್ಚುಕೋಲು,ತೊಳಸುಕೋಲು ಇತ್ಯಾದಿ. ಹೆಣ್ಣು ಮಕ್ಕಳೇ ಭಾಗವಹಿಸಿ ಆಡುವ ಲಂಬಾಣಿಗರ ಕೋಲಾಟ ವಿಶಿಷ್ಟವಾದುದು.ಎಂಟರಿಂದ ಹತ್ತುಮಂದಿ ಹೆಣ್ಣು ಮಕ್ಕಳು ಒಂದು ಮೊಳ ಉದ್ದಎರಡು ಕೋಲುಗಳನ್ನು ಹಿಡಿದುಕೊಂಡು ವೃತ್ತಾಕಾರವಾಗಿ ನಿಂತು ಹಲಗೆಗತ್ತಿಗೆ ಹಾಡುತ್ತಾ ಕುಣಿಯುತ್ತಾರೆ.ಇದನ್ನು 'ಛತ್ರಿ' ಎಂದು ಕರೆಯುತ್ತಾರೆ.ದಸರಾ ಮತ್ತು ಹೋಳಿ ಹುಣ್ನಿಮೆಯ ಸಂದರ್ಭದಲ್ಲಿ ಇವರು ವಿಶೇಷವಾಗಿ ಆಡುತ್ತಾರೆ.