ದ್ರೌಪದಿ
ಮಹಾರಾಣಿ ದ್ರೌಪದಿ | |
---|---|
ಹಸ್ತಿನಾಪುರದ ಸಾಮ್ರಾಜ್ಞಿ | |
ಪೂರ್ಣ ಹೆಸರು | ಕೃಷ್ಣಾ, ದ್ರೌಪದಿ |
ಜನ್ಮ ನಾಮ | ಕೃಷ್ಣೆ |
ಬಿರುದುಗಳು | ಪಾಂಚಾಲಿ |
ಜನ್ಮ ಸ್ಥಳ | ಪಾಂಚಾಲ |
Consort to | ಯುಧಿಷ್ಠಿರ ಭೀಮಸೇನ ಅರ್ಜುನ ನಕುಲ ಸಹದೇವ |
ಮಕ್ಕಳು | ಪಾಂಡವರು ಮಹಾಭಾರತ |
ಅರಮನೆ | ಪಾಂಚಾಲ |
ವಂಶ | ಸೂರ್ಯ ವಂಶ |
ತಂದೆ | ದ್ರುಪದ |
ಧಾರ್ಮಿಕ ನಂಬಿಕೆಗಳು | ಹಿಂದೂ |
ದ್ರೌಪದಿ ಪಾಂಡವರ ಪತ್ನಿ. ಪಾಂಚಾಲ ರಾಜನ ಮಗಳು. ದ್ರುಪದರಾಜನು ಪುತ್ರಕಾಮೇಷ್ಟಿ ಯಾಗವನ್ನು ಮಾಡಿದ್ದರಿಂದ ದ್ರೌಪದಿಯು ಜನಿಸಿದಳು. ಅವಳು ಮುಂದೆ ಸ್ವಯಂವರದಲ್ಲಿ ಅರ್ಜುನನನ್ನು ವರಿಸಿದಳು. ಆದರೆ ಕುಂತಿಯ ಅಜಾಗರೂಕತೆಯ ಮಾತಿನಿಂದ ಐವರೂ ಪಾಂಡವರ ಧರ್ಮಪತ್ನಿ ಆಗಬೇಕಾಗುತ್ತದೆ. ಇಂದ್ರಪ್ರಸ್ಥದ ವೈಭವವನ್ನು ಸವಿಯಲು ಬಂದಿದ್ದ ದುರ್ಯೋಧನು ಅಮಾಯ ಅರಮನೆಯ ಒಂದು ಮಾಯೆಗೆ ಬಲಿಯಾದನು. ಆಗ ದ್ರೌಪದಿ ಅದನ್ನು ನೋಡಿ ನಕ್ಕಳು. ತಡೆಯಲಾಗದೆ "ಕುರುಡನ ಮಗ ಕುರುಡನೆಂದು" ಹೀಯಾಳಿಸಿದಳು. ಈ ಒಂದು ಘಟನೆಯಿಂದ ದುರ್ಯೋಧನನಿಗೆ ದ್ರೌಪದಿಯ ಮೇಲೆ ಹಗೆ ಬೆಳೆಯಿತು. ದ್ಯೂತದ ಆಟದಲ್ಲಿ ಯುಧಿಷ್ಠಿರನು ದ್ರೌಪದಿಯನ್ನು ಸೋತಾಗ ದುಶ್ಶಾಸನನು ದ್ರೌಪದಿಯನ್ನು ಅಂತಃಪುರದಿಂದ ಅರಮನೆಗೆ ಎಳೆದು ತಂದನು. ಆಸ್ಥಾನದಲ್ಲಿ ಅವಳನ್ನು ವಿವಸ್ತ್ರಳಾಗಿಸಲು ನೋಡಿದನು. ಶ್ರೀಕೃಷ್ಣನ ಕೃಪೆಯಿಂದ ದ್ರೌಪದಿಯ ಮಾನ ಉಳಿಯಿತು. ಒಟ್ಟಾರೆ ಕೌರವರ ವಿನಾಶಕ್ಕೆ ದ್ರೌಪದಿಯೇ ಕಾರಣ.
ಜನನ
[ಬದಲಾಯಿಸಿ]ಕೃಷ್ಣೆಯೆಂಬುದು ಈಕೆಯ ಹುಟ್ಟು ಹೆಸರು ಮತ್ತು ಅನ್ವರ್ಥ ನಾಮ.ಕಾರಣ ಅವಳ ಬಣ್ಣ ಕಪ್ಪು ಅಥವಾ ಕಂದು. ಅವಳು ದ್ರುಪದನ ಮಗಳಾದ್ದರಿಂದ ದ್ರೌಪದಿ ಎಂದು ಹೆಸರು. ಪಾಂಚಾಲ ದೇಶದ ಕನ್ಯೆಯಾದ್ದರಿಂದ ಪಾಂಚಾಲಿ ಎಂದು ಹೆಸರು. ದ್ರೋಣನಿಂದ ಅವಮಾನಿತನಾದ ದ್ರುಪದ ಅರ್ಜುನನನ್ನು ಮದುವೆಯಾಗುವ ಮಗಳನ್ನೂ ದ್ರೋಣನನ್ನು ಸಂಹರಿಸಬಲ್ಲ ಮಗನನ್ನು ಪಡೆಯಲು ತಪಸ್ವಿಗಳ ಸಹಾಯ ಪಡೆದ. ಆತನಿಗೆ ಸಹಾಯಮಾಡಿದ ಯಾಜ್ಞಿಕರು ನಿರ್ಮಿಸಿದ ಯಾಗ ಕುಂಡದಿಂದ ಪ್ರಾಯ ಪ್ರಬುದ್ಧರಾದ ದೃಷ್ಟದ್ಯುಮ್ನನೂ ದ್ರೌಪದಿಯೂ ಎದ್ದು ಬಂದರು. ದ್ರುಪದನ ಅಪೇಕ್ಷೆಯಂತೆ ಜನಿಸಿದ್ದರಿಂದ ಅವರು ದ್ರುಪದನ ಮಕ್ಕಳೆನಿಸಿದರು. ಅವಳು ಯಜ್ಞದಿಂದ ಹುಟ್ಟಿಬಂದುದರಿಂದ ಯಾಜ್ಞಸೇನಿ ಅಥವಾ ಯಾಜ್ಞಸೇನೆ ಎಂದು ಹೆಸರು ಬಂತು.
ಪಾಂಡವರ ಪತ್ನಿಯಾಗಿ
[ಬದಲಾಯಿಸಿ]ಮತ್ಸ್ಯ ಯಂತ್ರವನ್ನು ಭೇದಿಸಿದ ಅರ್ಜುನ ತನ್ನ ನಾಲ್ವರು ಸೋದರರೊಡನೆ ಈಕೆಯನ್ನು ವರಿಸಿದ. ದ್ರೌಪದಿ ಯುಧಿಷ್ಠಿರನಿಂದ ಪ್ರತಿವಿಂಧ್ಯ, ಭೀಮನಿಂದ ಶ್ರುತಸೋಮ, ಅರ್ಜುನನಿಂದ ಶ್ರತುಕೀರ್ತಿ, ನಕುಲನಿಂದ ಶತಾನೀಕ, ಸಹದೇವನಿಂದ ಶ್ರುತಸೇನ ಎಂಬ ಐದು ಜನ ಮಕ್ಕಳನ್ನು ಪಡೆದಳು. ಪಾಂಡವರಿಗೂ ಕೌರವರಿಗೂ ಇದ್ದ ಬದ್ಧದ್ವೇಷದ ಫಲವಾಗಿ ಈಕೆ ಪಡಬಾರದ ಕಷ್ಟಗಳನ್ನು ಪಟ್ಟಳು. ರಾಜಸೂಯಯಾಗ ಸಂದರ್ಭದಲ್ಲಿ ದೂರ್ಯೋಧನನನ್ನು ಕಂಡು ಈಕೆ ಪರಿಹಾಸ ಮಾಡಿದಳಾಗಿ ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ದುರ್ಯೋಧನ ಮುಂದೆ ದ್ಯೂತದಲ್ಲಿ ಪಾಂಡವರು ತಮ್ಮ ಸರ್ವಸ್ವವನ್ನು ಹೆಂಡತಿಯನ್ನು ಪಣವಾಗಿಟ್ಟು ಸೋತ ಕಾಲದಲ್ಲಿ ಈಕೆಯನ್ನು ತುಂಬಿದ ಸಭೆಗೆ ಕರೆಸಿ ವಸ್ತ್ರಾಪಹರಣ ಮಾಡಲು ಯತ್ನಿಸಿದ. ಇಲ್ಲಿಂದ ದ್ರೌಪದಿಯ ಕಷ್ಟದ ಕತೆ ಮೊದಲಾಯಿತು ತನ್ನ ಮುಡಿಯನ್ನು ಹಿಡಿದೆಳೆದ ದುಶ್ಯಾಸನನ್ನು ಆಹುತಿ ತೆಗೆದುಕೊಳ್ಳುವವರೆಗೂ ತಾನು ಮುಡಿಗಟ್ಟೆನೆಂದು ಪಣತೊಟ್ಟಳು. ಹಾಗೆಯೇ ತೊಡೆಯೇರೆಂದು ತೊಡೆತಟ್ಟಿದ ದುರ್ಯೋಧನನ ತೊಡೆಗಳನ್ನು ಮುರಿಯುವುದಾಗಿ ಭೀಮ ಪಣ ತೊಟ್ಟ. ಈ ಎರಡು ಪ್ರತಿಜ್ಞೆಗಳು ಪೂರೈಸುವವರೆಗೆ, 12 ವರ್ಷ ವನವಾಸದಲ್ಲಿ, ಒಂದು ವರ್ಷ ಅಜ್ಞಾತವಾಸದಲ್ಲಿ ಅನಂತರದ 18 ದಿನಗಳ ಭಾರತಯುದ್ಧ ಸಮಯದಲ್ಲಿ ತುಂಬ ನವೆದವಳೆಂದರೆ ದ್ರೌಪದಿಯೇ. ವನವಾಸ ಕಾಲದಲ್ಲಿ ಜಯದ್ರಥ ಈಕೆಯನ್ನು ಅಪಹರಿಸಬಂದು ಪರಾಜಿತನಾದ. ಅಜ್ಞಾತವಾಸದಲ್ಲಿ ಕೀಚಕ ಈಕೆಯನ್ನು ಕೆಣಕಿ ಅಸುನೀಗಿದ. ಉಪಕೀಚಕರೂ ಸತ್ತರು. ಈಕೆಯ ಒಂದೇ ಒಂದು ಸಂತಸದ ಸಂಗತಿಯೆಂದರೆ ವಿರಾಟಪರ್ವದ ಕೊನೆಯಲ್ಲಿ ಜರುಗಿದ ಅಭಿಮನ್ಯುವಿನ ವಿವಾಹ. ಉದ್ಯೋಗ ಪರ್ವದಲ್ಲಿ ಪಾಂಡವರು ಸಂಧಿಗೆ ಒಪ್ಪಿದರೂ ಈಕೆ ಒಪ್ಪದೆ ದೌತ್ಯಕ್ಕಾಗಿ ಹೊರಟ ಶ್ರೀಕೃಷ್ಣನಿಗೆ ತಾನು ಮಾಡಿದ ಪ್ರತಿಜ್ಞೆಗಳನ್ನು ನೆನಪಿಸಿ ಯುದ್ಧವನ್ನೇ ಖಚಿತ ಮಾಡಬೇಕೆಂದು ಅವನನ್ನು ಬೇಡಿದಳು. ಯುದ್ಧಕಾಲದಲ್ಲಿ ಭೀಮನಿಂದ ದುಶ್ಯಾಸನ ಹತನಾಗಲು ಈಕೆ ಅವನ ರಕ್ತದಿಂದ ತನ್ನ ತಲೆಗೂದಲನ್ನು ನೆನೆಸಿಕೊಂಡು ಮುಡಿಗಟ್ಟಿದಳು. ಯುದ್ಧದ ಕೊನೆಯಲ್ಲಿ ಭೀಮ ತನ್ನ ಗಧೆಯಿಂದ ದುರ್ಯೋಧನನ ತೊಡೆಗಳನ್ನು ಒಡೆದು ಅವನನ್ನು ಕೊಂದಾಗ ಈಕೆಯ ಎರಡನೆಯ ಬಯಕೆಯೂ ಪೂರ್ಣವಾಗುತ್ತದೆ. ದ್ರೌಪದಿಯ ದಾರುಣ ಕತೆಗೆ ಕಲಶದಂತಿರುವ ಸಂಗತಿಯೆಂದರೆ ಮಕ್ಕಳಾದ ಉಪಪಾಂಡವರನ್ನು ಪಾಂಡವರೆಂದೇ ಗ್ರಹಿಸಿ ಅಶ್ವತ್ಥಾಮ ಕೊಲೆ ಮಾಡುವುದು. ಅಂತೂ ಇಂತೂ ಕುಂತಿಯ ಮಕ್ಕಳಿಗೆ ರಾಜ್ಯ ಸಿಕ್ಕಿದ್ದು ತೀರ ಕೊನೆಯಲ್ಲಿ. ಅಲ್ಲಿಯವರೆಗೂ ಜೀವನದ ಮೂಸೆಯಲ್ಲಿ ನಿರಂತರ ನವೆಯುವ ದೌರ್ಭಾಗ್ಯ ಮಾತ್ರ ಪಾಂಡವರ ಅದರಲ್ಲೂ ದ್ರೌಪದಿಯ ಪಾಲಿನದಾದುದು ಆಶ್ಚರ್ಯದ ಸಂಗತಿ.
ದೈವಸಂಕಲ್ಪ ಮದುವೆ
[ಬದಲಾಯಿಸಿ]ಐವರನ್ನು ಪತಿಗಳನ್ನಾಗಿ ಪಡೆದುದಕ್ಕೆ ವ್ಯಾಸಮುನಿ ಕಾರಣವನ್ನು ದ್ರುಪದರಾಜನಿಗೆ ವಿವರಿಸುತ್ತಾ- ದ್ರೌಪದಿಯ ಪೂರ್ವಜನ್ಮದಲ್ಲಿನ ಸಂಸ್ಕಾರ ಫಲದಿಂದಲೇ ಈಕೆ ಪಾಂಡವರ ಧರ್ಮಪತ್ನೀಯಾದುದು ಎಂದು ಬಹುಪತಿತ್ವವನ್ನು ಒಪ್ಪಿಕೊಳ್ಳುತ್ತಾರೆ. ಹಿಂದಿನ ಜನ್ಮದಲ್ಲಿ ದ್ರೌಪದಿ ಶಿವನನ್ನು ಕುರಿತು ತಪಸ್ಸು ಮಾಡಿ, ಐದು ಒಳ್ಳೆಯ ಗುಣಗಳಿರುವ ವರನನ್ನು ತನಗೆ ಗಂಡನಾಗಿ ಕೊಡಬೇಕೆಂದು ವಿನಂತಿಸಿಕೊಳ್ಳತ್ತಾಳೆ. ಆದರೆ ಶಿವ ಐದು ಒಳ್ಳೆಯ ಗುಣಗಳು ಒಬ್ಬನಲ್ಲಿ ಇರಲು ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲಿ ನಿನ್ನ ಇಷ್ಟಾರ್ಥ ನೆರವೇರುತ್ತದೆ ಎಂದು ಹೇಳುತ್ತಾನೆ. ಅದರ ಫಲವಾಗಿ ದ್ರೌಪದಿ ಪಾಂಡವರ ಪತ್ನಿಯಾಗುತ್ತಾಳೆಂದು ಹೇಳುತ್ತಾರೆ
ದ್ರೌಪದಿಯ ಪ್ರತಿಭಟನೆ
[ಬದಲಾಯಿಸಿ]- ಧರ್ಮರಾಯನ ಜೂಜಿನ ದೌರ್ಬಲ್ಯ ದ್ರೌಪದಿಯನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಯುಧಿಷ್ಠಿರ ಜೂಜಿನಲ್ಲಿ ಮನೆಮಠ, ಐಶ್ವರ್ಯವನ್ನೇಲ್ಲ ಕಳೆದುಕೊಂಡು ಕೊನೆಗೆ ದ್ರೌಪದಿಯನ್ನು ಪಣವಾಗಿಟ್ಟು ಸೋಲುತ್ತಾನೆ. ಯುಧಿಷ್ಠಿರ ದ್ಯೂತದಲ್ಲಿ ದ್ರೌಪದಿಯನ್ನು ಸೋತಾಗ ದುರ್ಯೋದನ ರಾಜಸಭೆಗೆ ಬರುವಂತೆ ಆಗ್ರಹಿಸಿ ಅವಳನ್ನು ಕರೆತರಲು ಪ್ರತಿಕಾಮಿಯೆಂಬ ದೂತನನ್ನು ಕಳುಹಿಸುತ್ತಾರೆ.
- ಆಗ ದ್ರೌಪದಿ ಇಡೀ ಸಭೆಯ ಉದ್ದೇಶವನ್ನು ಪ್ರಶ್ನಿಸುತ್ತಾಳೆ. ಅವಳು ಕೇಳುವ ಪ್ರಶ್ನೆ ಮಾರ್ಮಿಕವಾದುದು. ಮೊದಲು ಪಾಂಡವರೆಲ್ಲ ಸೋತು, ನಂತರ ನನ್ನನ್ನು ಪಣವಾಗಿಟ್ಟರೋ? ಇಲ್ಲವೆ ಮೊದಲೆ ನನ್ನನ್ನು ಪಣವಾಗಿಟ್ಟು ಸೋತರೋ? ಅವರಿಂದ ಉತ್ತರವನ್ನು ಕೇಳಿಕೊಂಡು ಬಾ ಎಂದು ವಾಪಾಸು ಕಳುಹಿಸುತ್ತಾಳೆ. ಅವಳ ಪ್ರಶ್ನೆಗೆ ಉತ್ತರ ಹೇಳುವ ವ್ಯವಧಾನ, ಸಹನೆ ಅಲ್ಲಿರುವ ಯಾರಿಗೂ ಇರದೇ ಹೋದುದರಿಂದ, ದುಶ್ಯಾಸನ ದ್ರೌಪದಿಯನ್ನು ಕರೆತರಲು ಬರುತ್ತಾನೆ.
- ಆಗ ದ್ರೌಪದಿ ತಾನು ಋತುಮತಿಯಾಗಿರುವುದರಿಂದ ರಾಜಸಭೆಗೆ ಬರುವುದು ತರವಲ್ಲ ಎಂದು ಮೈದುನನಾದ ದುಶ್ಯಾಸನನಿಗೆ ಹೇಳಿದಾಗ, ಅವನು ಕೌರವನ ಆಸ್ಥಾನದಲ್ಲಿ ಫಲವತಿಯಾಗು ನಡೆ ಎಂದು ಬಲವಂತವಾಗಿ ಅವಳನ್ನು ಎಳೆತರುತ್ತಾನೆ. ಇದರಿಂದ ಆಕ್ರೋಶಗೊಂಡ ದ್ರೌಪದಿ ಗಂಡಂದಿರಿಗೆ ರಾಜಸಭೆಯಲ್ಲೇ ಛೀಮಾರಿ ಹಾಕುತ್ತಾಳೆ.
- ಗಂಡರೈವರು ಒಬ್ಬಳನಾಳಲಾರಿರಿ? ನೀವು ಗಂಡರೋ ಇಲ್ಲ ಭಂಡರೋ? ಎಂದು ಹಂಗಿಸಿ ಪ್ರತಿಭಟಿಸುತ್ತಾಳೆ. ತನ್ನ ವಾಕ್ ಪ್ರಹಾರದಿಂದ ಭೀಷ್ಮ, ದ್ರೋಣಾದಿಗಳನ್ನು ತರಾಟೆಗೆ ತೆಗೆದು ಕೊಳ್ಳತ್ತಾಳೆ. ರಾಜಸಭೆಯಲ್ಲಿ ದುಶ್ಯಾಸನ ದ್ರೌಪದಿಯ ಸೀರೆಯನ್ನು ಎಳೆಯ ತೊಡಗಿದಾಗ ಪಾಂಡವರು, ಭೀಷ್ಮ, ದ್ರೋಣಾದಿಗಳು ಅಸಹಾಕರಾಗಿ ತಲೆ ತಗ್ಗಿಸುತ್ತಾರೆ. ಕಡೆಗೆ ಶ್ರೀಕೃಷ್ಣ ದ್ರೌಪದಿಯ ಪ್ರಾರ್ಥನೆಯನ್ನು ದಿವ್ಯಜ್ಞಾನದಿಂದ ಅರಿತು ಅವಳ ಮಾನವನ್ನು ಕಾಪಾಡುತ್ತಾನೆ. ಈ ಘಟನೆಯ ನಂತರ ಪಾಂಡವರೊಂದಿಗೆ ದ್ರೌಪದಿ ವನವಾಸಕ್ಕೆ ಹೋಗಬೇಕಾಗಿ ಬರುತ್ತದೆ.
- ಕೃಷ್ಣನಿಗೆ ದ್ರೌಪದಿಯ ಮೊರೆ
- ಸುಲಿವರೂರೊಳಗುಟ್ಟ ಸೀರೆಯ
- ನೆಲೆ ಮುರಾಂತಕ ರಕ್ಷಿಸೈ ಶಶಿ
- ಕಳೆಗೆ ಸದರವೆ ರಾಹು ರಚಿಸಿದ ತುಟಿಯ ತೋಟಿಯದು||
- ಸೆಳೆವರಸುವನು ಖಳರು ಸೀರೆಯ
- ಸುಲಿದರುಳಿಯೆನು ಕೃಷ್ಣ ಕರುಣಾ
- ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ||೨-೧೪-೧೧೦||
ದುರ್ಯೋಧನನ ಅವಮಾನ
[ಬದಲಾಯಿಸಿ]ದುರ್ಯೋಧನನು ದ್ರೌಪದಿಯನ್ನು ದ್ವೇಷಿಸಲು ಕಾರಣವೇನೆಂದು ನಂಬಲಾರದ ಜನಪ್ರಿಯ ಪುರಾಣವಿದೆ. ಯುಧಿಷ್ಠಿರನ ರಾಜಸೂಯ ಯಜ್ಞಕ್ಕೆ ಭೇಟಿ ನೀಡಿದಾಗ ದುರ್ಯೋಧನ ಮತ್ತು ಅವನ ಮುತ್ತಣದವರಿಗೂ ಕೀಪ್ ಅನ್ವೇಷಿಸುತ್ತಿದ್ದರು. ಮೈದಾನದಲ್ಲಿ ಪ್ರವಾಸ ಮಾಡುವಾಗ, ಅನುಮಾನಾಸ್ಪದ ದುರ್ಯೋಧನನು ಅರಮನೆಯ ಸುತ್ತಲೂ ಕಾಣಬಹುದಾದ ಅನೇಕ ಭ್ರಮೆಗಳಲ್ಲಿ ಒಂದಕ್ಕೆ ಬಲಿಯಾದನು. ಅವನು ಅಂಗಳದ ಗಟ್ಟಿಯಾದ ಭಾಗಕ್ಕೆ ಕಾಲಿಟ್ಟಾಗ, ಒಂದು ಸ್ಪ್ಲಾಶ್ ಇತ್ತು ಮತ್ತು ದುರ್ಯೋಧನನು ಸೊಂಟವನ್ನು ನೀರಿನಲ್ಲಿ ಆಳವಾಗಿ ಕಂಡುಕೊಂಡನು, ಗುಪ್ತ ಕೊಳದಿಂದ ತಲೆಯಿಂದ ಪಾದಕ್ಕೆ ತೇವಗೊಂಡನು. ಪುರಾಣವೆಂದರೆ, ದ್ರೌಪದಿ ಮತ್ತು ಅವಳ ದಾಸಿಯರು ಇದನ್ನು ಬಾಲ್ಕನಿಯಲ್ಲಿ ಮನೋರಂಜನೆಯೊಂದಿಗೆ ನೋಡಿದರು ಮತ್ತು ಅಂಧಸ್ಯ ಪುತ್ರ ಅಂಧಾಹಾ ಅವರನ್ನು 'ಕುರುಡನ ಮಗ ಕುರುಡನಾಗಿದ್ದಾನೆ' ಎಂದು ವ್ಯಂಗ್ಯವಾಡಿದರು. ಈ ಪ್ರಸಿದ್ಧ ಕಥೆಯು ವೇದ ವ್ಯಾಸನ ಮಹಾಭಾರತದಲ್ಲಿ ಕಾಣಿಸುವುದಿಲ್ಲ, ಆದರೆ ನಂತರದ ನಾಟಕಕಾರನ ಕಲ್ಪನೆಯ ಆಕೃತಿಯಾಗಿದೆ. ಇದು ವಿವಿಧ ಪರದೆಯಲ್ಲಿ ಪುನರಾವರ್ತಿತ ಚಿತ್ರಣಗಳು ಮತ್ತು ದೇಶದ ಉದ್ದ ಮತ್ತು ಅಗಲದಾದ್ಯಂತ ಮಹಾಕಾವ್ಯದ ಲಿಖಿತ ರೂಪಾಂತರಗಳ ಮೂಲಕ ಕ್ರಮೇಣ ಅಪಾರ ಜನಪ್ರಿಯತೆಯನ್ನು ಗಳಿಸಿತು. ಅತ್ಯಂತ ಜನಪ್ರಿಯ ಚಿತ್ರಣಗಳು ಬಿ.ಆರ್. ಚೋಪ್ರಾ ಅವರ ಮೇರುಕೃತಿ ಮಹಾಭಾರತ ಸರಣಿ ೧೯೮೮ ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಯಿತು ಮತ್ತು ಪ್ರಸಿದ್ಧ ತೆಲುಗು ಚಿತ್ರ 'ದಾನ ವೀರ ಸೂರ ಕರ್ಣ' ನಂದಮುರಿ ತಾರಕ ರಾಮರಾವ್ ಅವರು ದುರ್ಯೋಧನನಾಗಿ ಅಭಿನಯಿಸಿದ್ದಾರೆ, ಅಲ್ಲಿ ದ್ರೌಪದಿಯ ನಗು ನಾಟಕೀಯ ಪರಿಣಾಮಕ್ಕಾಗಿ ಹೊರಹೊಮ್ಮಿತು. [೧]
ಕುಮಾರವ್ಯಾಸ ಭಾರತದಲ್ಲಿ ದ್ರೌಪದಿಯ ಬಣ್ಣನೆ
[ಬದಲಾಯಿಸಿ]ಪಾಂಚಾಲ ದೇಶದ ಅರಮನೆಯಲ್ಲಿ ದ್ರೌಪದಿಯ ಸ್ವಯಂವರ ನಡೆಯುತ್ತಿದೆ. ನಾನಾ ದೇಶದ ಅರಸುಗಳು ನೆರೆದಿದ್ದಾರೆ. ಕಿಕ್ಕಿರಿದ ಅರಮನೆಯ ಸಭಾಂಗಣದಲ್ಲಿ ನಡೆದು ಬರುವ ಕೃಷ್ಣೆಯ ರೂಪನ್ನು ಕುಮಾರವ್ಯಾಸ ಬಣ್ಣಿಸುವ ಬಗೆ ಹೀಗಿದೆ:
ಮೊಲೆಗಳಲಿ ಸಿಲುಕಿದೊಡೆ ನೋಟಕೆ
ಬಳಿಕ ಪುನರಾವರ್ತಿಯೇ ಕಂ
ಗಳಿಗೆ ಕಾಮಿಸಿದರೆಯು ನಿಮಿಷಕೆ ಸಮಯವೆಲ್ಲಿಹುದು
ಲಲಿತ ಮೈಕಾಂತಿಗಳೊಳದ್ದರೆ
ಮುಳುಗಿ ತೆಗೆವವರಾರು ಜಘನ
ಸ್ಥಳಕೆ ಮುರಿದರೆ ಮರಳದಲೆ ಕಂಗಳಿಗೆ ಹುಸಿಯೆಂದ
ಅಸಿಯ ನಡುವಿನ ನಿಮ್ನ ನಾಭಿಯ
ಮಸುಳ ಬಾಸೆಯ ತೋರ ಮೊಲೆಗಳ
ಮಿಸುಪ ತೊಡೆಗಳ ಚಾರು ಜಂಘೆಯ ಚರಣಪಲ್ಲವದ
ಎಸಳುಗಂಗಳ ತೊಳಗಿ ಬೆಳಗುವ
ಮುಸುಡ ಕಾಂತಿಯ ಮುರಿದ ಕುರುಳಿನ
ಬಿಸಜ ಗಂಧಿಯ ರೂಪನಭಿವರ್ಣಿಸುವಡಿರೆಂದ
ದ್ರೌಪದಿಯೊಂದಿಗಿರುವ ಸಖಿಯರಾದರೂ ಅಲ್ಪಸುಂದರಿಯರೇ? ಊಹುಂ!
ತೋರ ಮೊಲೆಗಳ ನಲಿವನಡು ಪೊರ
ವಾರಗಳ ನುಣ್ದೊಡೆಯ ಕಿರುದೊಡೆ
ಯೋರಣದ ಹಾವುಗೆಯ ಹೆಜ್ಜೆಯ ಹಂಸೆಗಳ ಗತಿಯ
ನೀರೆಯರ ಮೈಗಂಪುಗಳ ತನಿ
ಸೂರೆಗೆಳಸುವ ತುಂಬಿಗಳ ಕೈ
ವಾರಗಳ ಕಡು ಗರುವೆಯರ ನೆರೆದುದು ಸಖೀನಿವಹ
ತೋರ ಮೊಲೆಗಳ ದಂತಿ ಘಟೆಗಳ
ಚಾರು ಜಘನದ ಜೋಡಿಸಿದ ಹೊಂ
ದೇರುಗಳ ಸುಳಿಗುರುಳುಗಳ ಝಲ್ಲರಿಗಳ ಝಾಡಿಗಳ
ಚಾರುನಯನದ ಚಪಲಗತಿಗಳ
ವಾರುವಂಗಳ ಮೇಲುವಸನದ
ಸಾರಸಿಂಧದ ಸೇನೆ ನಡೆದುದು ಸತಿಯ ಬಳಸಿನಲಿ
ಇಂತಹ ಸುಂದರಿಯನ್ನು ಅರ್ಜುನ ಗೆಲ್ಲುತ್ತಾನೆ. ದ್ರೌಪದಿ ವೀರ ಪಾಂಡವರ ಸತಿಯಾಗುತ್ತಾಳಾದರೂ ಜೀವಿತದುದ್ದಕ್ಕೂ ಕೊರಗುಗಳನ್ನನುಭವಿಸುತ್ತಿರುತ್ತಾಳೆ. ಮೊದಲೇ ಐವರು ಪತಿಯರನ್ನು ಸಂಭಾಳಿಸಬೇಕಾದ ಕಷ್ಟ. ಅರ್ಜುನನ ಮೇಲೆ ಅವಳಿಗೆ ಹೆಚ್ಚಿನ ಅನುರಕ್ತಿಯಿದ್ದರೂ ಅರ್ಜುನನ ಪ್ರೀತಿ ಮತ್ತೀರ್ವರು ಸತಿಯರಿಗೆ ಹಂಚಿಹೋಗಿದೆ. ಭೀಮನಿಗೂ ಹಿಡಿಂಬೆ ಮತ್ತು ಸಾಲಕಟಂಕಟಿಯೆಂಬ ಹೆಂಡತಿಯರು. ದ್ಯೂತದಲ್ಲಿ ಸೋತ ಗಂಡನಿಂದಾಗಿ ದ್ರೌಪದಿ ಕುರುಸಭಾಮಧ್ಯದಲ್ಲಿ ಬೆತ್ತಲಾಗಿ ಅಪಮಾನಕ್ಕೆ ಒಳಗಾಗ ಬೇಕಾಗುತ್ತದೆ. "ಐವರಿಗೆ ಹೆಂಡತಿಯಾದವಳು ನಮಗೂ ಪತ್ನಿ ಆಗಲಾರೆಯಾ?" ಭಾರತದಲ್ಲಿ ಎಂದು ಹೆಣ್ಣೊಬ್ಬಳು ಐವರು ಗಂಡಿಗೆ ಹೆಂಡತಿಯಾದುದಿಲ್ಲ. ಅಂತಹ ಹೆಣ್ಣು ವೇಶ್ಯಾ ಸ್ತ್ರೀಯಾಗಿರುತ್ತಾಳೆ ಎಂಬಂತಹ ಕೌರವರ ಕುಹಕದ ಮಾತುಗಳಿಗೆ ಕಿವಿಯಾಗಬೇಕಾಗುತ್ತದೆ. ನಂತರ ತನ್ನ ಐವರು ಗಂಡಂದಿರೊಂದಿಗೆ ವನವಾಸ-ಅಜ್ಞಾತವಾಸಗಳನ್ನು ಅನುಭವಿಸಬೇಕಾಗಿ ಬರುತ್ತದೆ.
ನೋಡಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "Duryodhana Embarassed at the Palace of King Yudhisthira [Chapter 7]". www.wisdomlib.org. 9 January 2015. Retrieved 20 March 2020.
೧. ೨.