ವಿಷಯಕ್ಕೆ ಹೋಗು

ಕೈಟಭ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಹಾವಿಷ್ಣು ಮಧು-ಕೈಟಬರನ್ನು ಕೊಲ್ಲುತ್ತಿರುವುದು- a folio from Devi Mahatmya

ಕೈಟಭ ಒಬ್ಬ ರಾಕ್ಷಸ. ಮಧು ಎಂಬ ರಾಕ್ಷಸನ ತಮ್ಮ. ಕಲ್ಪಾಂತ್ಯದಲ್ಲಿ ಮಹಾವಿಷ್ಣು ವಟಪತ್ರಶಾಯಿಯಾಗಿ ಯೋಗನಿದ್ರೆಯಲ್ಲಿದ್ದಾಗ ಆತನ ಕಿವಿಯ ಗುಗ್ಗೆಯಿಂದ (ಕರ್ಣಮಲ) ಇಬ್ಬರು ರಾಕ್ಷಸರು ಉದ್ಭವಿಸಿ ಎರಡು ದೊಡ್ಡ ಗೋಡೆಗಳಂತೆ (ಮಹಾಕುಡ್ಯ) ಬೆಳೆದು ಅವಿಚಲರಾಗಿ ನಿಂತರು. ಬ್ರಹ್ಮನ ಪ್ರೇರಣೆಯಿಂದ ಅವರಲ್ಲಿ ವಾಯುಸಂಚಾರವಾಯಿತಾಗಿ ಮಹಾಪ್ರಾಣರಾದ ಅವರು ಮಹಾಬಲರಾಗಿ ದೇವಲೋಕವನ್ನೇ ಆರಿಸಿಕೊಳ್ಳುವವರಂತೆ ಬೆಳೆದು ವಿಜೃಂಭಿಸಿದರು. ಬ್ರಹ್ಮ ಅವರನ್ನು ಸ್ಪರ್ಶಿಸಿ ನೋಡಲು ಒಬ್ಬ ಮೃದುವಾಗಿ ಕಂಡ. ಅವನೇ ಮಧು. ಮತ್ತೊಬ್ಬ ಕಲ್ಲಿನಂತೆ ಕರ್ಕಶವಾಗಿ ಕಂಡ. ಅವನೇ ಕೈಟಭ.

ನಿರ್ಭೀತರಾಗಿ ಲೋಕಗಳನ್ನೇ ಎದುರಿಸಿ ನಿಂತ ಅವರು ಬ್ರಹ್ಮನ ಮೇಲೇರಿ ಹೋಗಲು ಆತ ವಿಷ್ಣುವಿನ ನಾಭಿಕಮಲವನ್ನು ಹೊಕ್ಕು ಮರೆಯಾದ. ಬಹಳ ಕಾಲ ಹುಡುಕಿ ಕೊನೆಗೆ ಮಧುಕೈಟಭರು ಬ್ರಹ್ಮನಿದ್ದ ಗುಪ್ತಸ್ಥಳವನ್ನು ಪತ್ತೆಹಚ್ಚಿ ಅವನ ಮೇಲೆ ಬಿದ್ದರು. ಆಗ ಆತ ಯೋಗನಿದ್ರೆಯಲ್ಲಿದ್ದ ವಿಷ್ಣುವನ್ನೆಚ್ಚರಿಸಲು ವಿಷ್ಣುವಿಗೂ ಮಧುಕೈಟಭರಿಗೂ ದೀರ್ಘಕಾಲ ಘೋರ ಯುದ್ಧವಾಯಿತು. ವಿಷ್ಣುವಿನ ಪರಾಕ್ರಮವನ್ನು ಮೆಚ್ಚಿದ ಆ ರಾಕ್ಷಸರು ವರವೊಂದನ್ನು ಬೇಡುವಂತೆ ವಿಷ್ಣುವನ್ನು ಕೇಳಿಕೊಂಡರು. `ನೀವು ನನ್ನಿಂದ ವಧ್ಯರಾಗುವ ಉಪಾಯವನ್ನು ತಿಳಿಸಿ ಎಂದು ವಿಷ್ಣು ಕೇಳಲು `ನಿನ್ನಿಂದ ನಮಗೆ ಮರಣ ಲಭ್ಯವಾಗುವುದು ಪ್ರಶಂಸನೀಯವಾದುದು. ನಾವು ನಿನ್ನ ಪುತ್ರರಾಗಿ ಜನಿಸುವ ಪುಣ್ಯ ಪಡೆವೆವು. ಆದರೆ ಒಂದು ಒಪ್ಪಂದ; ನೀನು ನಮ್ಮನ್ನು ನೀರಿಲ್ಲದ ಸ್ಥಳದಲ್ಲಿ ಕೊಲ್ಲಬೇಕು ಎಂದವರು ಹೇಳಿದರು. ವಿಶ್ವವೆಲ್ಲವೂ ಜಲಮಯವಾಗಿರಲು ಮಹಾವಿಷ್ಣು ಅವರನ್ನು ಹಿಡಿದು ತನ್ನ ತೊಡೆಗಳ ಮೇಲೆಯೇ ಹಿಸುಕಿ ಕೊಂದ. ಅವರ ಶವಗಳನ್ನು ನೀರಿಗೆ ಎಸೆದು ಬಿಡಲು ಅವು ಅಲ್ಲಿ ಕರಗಿ ಜಲವೆಲ್ಲವೂ ಮೇದೋಮಯವಾಯಿತು. ಆದ್ದರಿಂದಲೇ ಪೃಥಿವಿಗೆ ಮೇದಿನೀ ಎಂಬ ಹೆಸರು ಬಂತು.

ಪುರಾಣದಲ್ಲಿ ಉಲ್ಲೇಖ

[ಬದಲಾಯಿಸಿ]

ಮಧು ಕೈಟಭರನ್ನು ವಧಿಸಿದ ವಿಷ್ಣುವಿಗೆ ಮಧುಸೂದನ, ಮಧುವೈರಿ, ಮಧುಮಥನ, ಕೈಟಭಾರಿ, ಕೈಟಭಜಿತ್ ಇತ್ಯಾದಿ ಹೆಸರುಗಳಿವೆ. ಮಹಾಭಾರತ, ಭಾಗವತ, ಹರಿವಂಶ, ಬ್ರಹ್ಮವೈವರ್ತ ಪುರಾಣ ಇತ್ಯಾದಿಗಳಲ್ಲಿ ಈ ವಿಷಯದ ಪ್ರಸ್ತಾಪವಿದೆ. ಈ ಕಥನದಲ್ಲಿ ವಿಶ್ವಸೃಷ್ಟಿಯ ರಹಸ್ಯಭೇದನದ ಸೂಚನೆಯಿದೆಯೆಂದು ಕೆಲವರ ಅಭಿಪ್ರಾಯ.

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕೈಟಭ&oldid=788922" ಇಂದ ಪಡೆಯಲ್ಪಟ್ಟಿದೆ