ಲಾರ್ಡ್ ರೇಲೆ
ಲಾರ್ಡ್ ರೇಲೆ | |
---|---|
ಜನನ | Langford Grove, Maldon, Essex, England | ೧೨ ನವೆಂಬರ್ ೧೮೪೨
ಮರಣ | 30 June 1919 Terling Place, Witham, Essex, England | (aged 76)
ರಾಷ್ಟ್ರೀಯತೆ | British |
ಕಾರ್ಯಕ್ಷೇತ್ರ | ಭೌತಶಾಸ್ತ್ರ |
ಸಂಸ್ಥೆಗಳು | University of Cambridge |
ಅಭ್ಯಸಿಸಿದ ವಿದ್ಯಾಪೀಠ | University of Cambridge |
ಶೈಕ್ಷಣಿಕ ಸಲಹೆಗಾರರು | Edward John Routh |
ಗಮನಾರ್ಹ ವಿದ್ಯಾರ್ಥಿಗಳು | |
ಪ್ರಸಿದ್ಧಿಗೆ ಕಾರಣ | |
ಗಮನಾರ್ಹ ಪ್ರಶಸ್ತಿಗಳು |
|
ಹಸ್ತಾಕ್ಷರ |
ಲಾರ್ಡ್ ರೇಲೆ (12 ನವಂಬರ್ 1842 – 30 ಜೂನ್ 1919) ಇಂಗ್ಲೆಂಡ್‌ನ ಭೌತವಿಜ್ಞಾನಿ. ಇವರು ವಿಲಿಯಮ್ ರಾಮ್ಸೆಯವರೊಂದಿಗೆ ಆರ್ಗಾನ್ ಮೂಲಧಾತುವನ್ನು ಕಂಡುಹಿಡಿದರು. ಇದಕ್ಕಾಗಿ ಇವರಿಗೆ ೧೯೦೪ ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿತು. ಇದಲ್ಲದೆ ಹಲವಾರು ಸಿದ್ಧಾಂತಗಳನ್ನು ಪ್ರತಿಪಾದಿಸಿದ್ದು ಇವುಗಳು ವಿಜ್ಞಾನದಲ್ಲಿ ಇಂದಿಗೂ ಪ್ರಸ್ತುತವಿದೆ.
ಜೀವನ
[ಬದಲಾಯಿಸಿ]ಇಂಗ್ಲೆಂಡಿನ ಎಸೆಕ್ಸ್ ಪ್ರಾಂತದ ಮೊಲ್ಡಾನ್ ಸಮೀಪದ ಲ್ಯಾಂಗ್‌ಫರ್ಡ್ ಗ್ರೂವ್ ಎಂಬಲ್ಲಿ 1842 ನವೆಂಬರ್ 12ರಂದು ಜನಿಸಿದ. ವಿಜ್ಞಾನಕ್ಷೇತ್ರದಲ್ಲಿ ಈತ ಲಾರ್ಡ್ ರೇಲೀ ಎಂದೇ ಪ್ರಸಿದ್ಧ. ಇವನ ತಂದೆ ಕೂಡ ಈ ಬಿರುದಿಗೆ ಭಾಜನನಾಗಿದ್ದ. ವಿದ್ಯಾರ್ಥಿಯಾಗಿರುವಾಗಲೇ ಈತ ಗಣಿತದಲ್ಲಿ ಬಲು ಜಾಣನಾಗಿದ್ದ. 1865ರಲ್ಲಿ ಕೇಂಬ್ರಿಜ್‌ನಲ್ಲಿ ಈತ ಔಪಚಾರಿಕವಾದ ಗಣಿತಾಧ್ಯಯನವನ್ನು ಮುಗಿಸಿದ. 1873ರಲ್ಲಿ ಮನೆತನದ ಲಾರ್ಡ್ ಬಿರುದು ಪಡೆದ. ಅದೇ ವರ್ಷ ರಾಯಲ್ ಸೊಸೈಟಿ ಸದಸ್ಯನಾಗಿ ಚುನಾಯಿತನಾದ.
ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ 19ನೆಯ ಶತಮಾನದ ಮಧ್ಯಭಾಗದ ತನಕವೂ ಭೌತವಿಜ್ಞಾನ ಪೂರ್ಣ ಪ್ರಮಾಣದ ಒಂದು ಅಧ್ಯಯನ ವಿಷಯವಾಗಿರಲಿಲ್ಲ. 1871ರ ವೇಳೆಗೆ ಇಂಗ್ಲಿಷ್ ರಸಾಯನವಿಜ್ಞಾನಿ ಹಾಗೂ ಭೌತವಿಜ್ಞಾನಿ ಹೆನ್ರಿ ಕ್ಯಾವೆಂಡಿಷ್‌ನ (1731-1810) ವಂಶಸ್ಥರು ನೀಡಿದ ದೇಣಿಗೆಯಿಂದ ಒಂದು ಹೊಸ ಪ್ರಯೋಗಶಾಲೆಯೂ ಪ್ರಾಧ್ಯಾಪಕ ಪೀಠವೂ ಸ್ಥಾಪನೆಗೊಂಡುವು. ಸ್ಕಾಟ್ಲೆಂಡಿನ ಗಣಿತವಿದ ಹಾಗೂ ಭೌತವಿಜ್ಞಾನಿ ಜೇಮ್ಸ್ ಕ್ಲರ್ಕ್ ಮ್ಯಾಕ್ಸ್‌ವೆಲ್ (1831-79) ಪ್ರಥಮ ಕ್ಯಾವೆಂಡಿಷ್ ಪ್ರಾಧ್ಯಾಪಕನಾದ. ಅವನ ಬಳಿಕ 1879ರಲ್ಲಿ ಈತ ಆ ಸ್ಥಾನವನ್ನು ಅಲಂಕರಿಸಿದ. ವಿದ್ಯುನ್ಮಾನಗಳ ನಿರ್ಣಯದ ಬಗೆಗಷ್ಟೇ ಅಲ್ಲದೆ ದೂರದರ್ಶಕದಿಂದ ಹಿಡಿದು ಧ್ವನಿ ತರಂಗಗಳವರೆಗೆ ಇವನ ಸಂಶೋಧನಾವ್ಯಾಪ್ತಿ ಇತ್ತು. ಈತ ಪ್ರಾಧ್ಯಾಪಕನಾಗಿದ್ದ 5 ವರ್ಷಗಳಲ್ಲಿ ಕ್ಯಾವೆಂಡಿಷ್ ಪ್ರಯೋಗಾಲಯ ಒಂದು ಅಗ್ರಮಾನ್ಯ ಸಂಶೋಧನಾಲಯವಾಗಿ ರೂಪುಗೊಂಡಿತು. ಈತ ನಡೆಸಿದ ಸಂಶೋಧನೆ, ಪರೀಕ್ಷೆಗಳ ವಿಚಾರಗಳು 430 ವೈಜ್ಞಾನಿಕ ಪ್ರಬಂಧಗಳಲ್ಲಿ ವರದಿಯಾದುವು.
ತರಂಗಚಲನೆಯ ಎಲ್ಲ ವಿಧಗಳಲ್ಲಿಯೂ ಈತ ಆಸಕ್ತನಾಗಿದ್ದ. ವಾತಾವರಣದಲ್ಲಿ ಚದರುವ ಬೆಳಕಿನ ತೀವ್ರತೆ ಬೆಳಕಿನ ಅಲೆಯುದ್ದ ನಾಲ್ಕನೆಯ ಘಾತಕ್ಕೆ ವಿಲೋಮಾನಪಾತದಲ್ಲಿದೆ ಎಂಬುದನ್ನು ಈತ ನಿರ್ಣಯಿಸಿದ. ಬಿಳಿ ಬೆಳಕಿನಲ್ಲಿರುವ ಕೆಂಪು ಬೆಳಕಿನ ಅಲೆಯುದ್ದ 700 ನಾನೊಮೀಟರ ಹಾಗೂ ನೀಲಬೆಳಕಿನ ಅಲೆಯುದ್ದ 400 ನಾನೊಮೀಟರ್ ಎಂದಾದರೆ ಅವು ಚದರಿದಾಗಿನ ತೀವ್ರತೆಗಳ ನಿಷ್ಪತ್ತಿ ಎಂದರೆ ನೀಲ ಬೆಳಕು ಕೆಂಪು ಬೆಳಕಿಗಿಂತ ಸುಮಾರು ಹತ್ತುಪಟ್ಟು ಹೆಚ್ಚು ತೀವ್ರತೆಯಿಂದ ಚದರುತ್ತದೆ. ಚದರಿದ ಕೆಂಪು ಬೆಳಕು ನೇರವಾಗಿ ಸಾಗುವುದು. ಆದ್ದರಿಂದ ಆಕಾಶದ ನೀಲಿಗೂ ಉದಯಾಸ್ತ ಕಾಲಗಳಲ್ಲಿ ದಿಗಂತದ ಕೆಂಪುವರ್ಣಕ್ಕೂ ವಿದ್ಯುತ್ಕಾಂತ ತರಂಗಗಳಾಗಿರುವ ಬಿಳಿ ಬೆಳಕು ವ್ಯತ್ಯಸ್ತವಾಗಿ ವಾಯುಕಣ ಗಳಿಂದ ಚದರುವುದೇ ಕಾರಣ ಎಂದು ರೇಲೀ ವಿವರಿಸಿದ. ಪ್ರಕಾಶೀಯ ಪ್ರವರ್ಧನ ವ್ಯವಸ್ಥೆಯೊಂದಕ್ಕೆ ಸಂಬಂಧಿಸಿದಂತೆ ಎರಡು ವಸ್ತುಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ಪೃಥಕ್ಕರಿಸಿ ನೋಡುವುದಕ್ಕೂ ಆ ವಸ್ತುಗಳ ನಮನ ಬಳೆಗಳ ವಿನ್ಯಾಸಕ್ಕೂ ಪರಸ್ಪರ ಸಂಬಂಧವಿರುವುದನ್ನು ಈತ ವಿವರಿಸಿದ (1874). ಒಂದು ವಸ್ತುವಿನ ನಮನದ ಪ್ರಾಥಮಿಕ ಗರಿಷ್ಠ ತೀವ್ರತೆ ಬೀಳುವಲ್ಲೇ ಮತ್ತೊಂದು ವಸ್ತುವಿನ ಪ್ರಥಮ ಕನಿಷ್ಠ ತೀವ್ರತೆಯ ಸ್ಥಾನವೂ ಇದ್ದರೆ ಆ ಎರಡೂ ವಸ್ತುಗಳನ್ನು ಅಲ್ಲಿಂದಲ್ಲಿಗೆ ಪೃಥಕ್ಕರಿಸಬಹುದು. ಈ ಸಂಗತಿಯನ್ನು ‘ರೇಲೀ ಪ್ರಮಾಣ’ (ರೇಲಿ ಕ್ರೈಟೀರಿಯನ್) ಎನ್ನುವುದಿದೆ. ಕೃಷ್ಣಕಾಯದ ವಿಕಿರಣದಲ್ಲಿ (ಬ್ಲ್ಯಾಕ್ ಬಾಡಿ ರೇಡಿಯೇಶನ್) ಅಲೆಯುದ್ದದೊಂದಿಗೆ ತೀವ್ರತೆ ಹೇಗೆ ಬದಲಾಗುತ್ತದೆ ಎಂಬುದರ ಬಗ್ಗೆ ಒಂದು ಸೂತ್ರವನ್ನು ಈತ ನೀಡಿದ. ಆದರೆ ದೀರ್ಘ ಅಲೆಯುದ್ದದ ವ್ಯಾಪ್ತಿಯಲ್ಲಿ ಮಾತ್ರ ಈ ಸೂತ್ರ ಸರಿಹೊಂದುವುದು ಕಂಡುಬಂತು.
ಎಲ್ಲ ಧಾತುಗಳ ಪರಮಾಣುಗಳೂ ಬೇರೆ ಬೇರೆ ಸಂಖ್ಯೆಯಲ್ಲಿ ಹೈಡ್ರೊಜನ್ ಪರಮಾಣುಗಳು ಸೇರುವುದರಿಂದಲೇ ರಚನೆಗೊಂಡಿರುತ್ತದೆ ಎಂಬ ತತ್ತ್ವವನ್ನು 1815ರ ವೇಳೆಗೆ ಇಂಗ್ಲೆಂಡಿನ ರಸಾಯನವಿಜ್ಞಾನಿ ವಿಲಿಯಮ್ ಪ್ರೌಟ್ (1785-1850) ಎಂಬಾತ ಸೂಚಿಸಿದ್ದ. ಅದು ನಿಜವಾದರೆ ಧಾತುಗಳ ಪರಮಾಣು ತೂಕಗಳ ನಿಷ್ಪತ್ತಿ (ಹೈಡ್ರೊಜನ್‌ಗೆ ಹೋಲಿಸಿದಂತೆ) ಪೂರ್ಣಾಂಶ ರೂಪದ್ದಾಗಿರಬೇಕು. ಈ ತತ್ತ್ವವನ್ನು ಒರೆಗೆ ಹಚ್ಚಲು ಹೈಡ್ರೊಜನ್ ಮತ್ತು ಆಕ್ಸಿಜನ್ ಅನಿಲಗಳ ಸಾಂದ್ರತೆಗಳನ್ನು ಈತ ನಿಖರವಾಗಿ ಅಳೆದು ಹೋಲಿಸಿದ. ಅದು 1:16 ಎಂಬುದರ ಬದಲು 1:15.882 ಎಂಬುದಾಗಿ ಇದ್ದದ್ದು ಕಂಡುಬಂತು. ಈ ವ್ಯತ್ಯಾಸಕ್ಕೆ ಆಗ ಕಾರಣ ಹೊಳೆಯದಿದ್ದುದರಿಂದ ಪ್ರೌಟ್ ಊಹೆ ಸರಿಯಲ್ಲ ಎಂಬ ತೀರ್ಮಾನಕ್ಕೆ ಈತ ಬಂದ.
ಅನಿಲಗಳೊಂದಿಗೆ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದಾಗ ಈತ ಒಂದು ವಿಚಿತ್ರ ಸಮಸ್ಯೆಯನ್ನು ಎದುರಿಸಬೇಕಾಯಿತು. ಆಕ್ಸಿಜನನ್ನು ಯಾವುದೇ ರಾಸಾಯನಿಕ ಪ್ರತಿಕ್ರಿಯೆಯಿಂದಾಗಲೀ ವಾತಾವರಣದ ವಾಯುವಿನಿಂದಾಗಲೀ ಪಡೆದಾಗ ಅದರ ಸಾಂದ್ರತೆ ಬದಲಾಗುತ್ತಿರಲಿಲ್ಲ. ಆದರೆ ವಾಯುವಿನಿಂದ ಪಡೆದ ನೈಟ್ರೊಜನ್ನಿನ ಸಾಂದ್ರತೆ ಯಾವಾಗಲೂ ಇತರ ರಾಸಾಯನಿಕ ಸಂಯುಕ್ತಗಳಿಂದ ಪಡೆದ ನೈಟ್ರೊಜನ್ನಿಗಿಂತಲೂ ಅಲ್ಪಪ್ರಮಾಣದಲ್ಲಿ ಭಿನ್ನವಾಗಿತ್ತು. ವಾಯುವಿನಿಂದ ಪಡೆದ ನೈಟ್ರೊಜನ್ನಿನಲ್ಲಿ ಆರ್ಗಾನ್ ಎಂಬ ವಿರಳಾನಿಲ ಸೇರಿರುವುದೇ ಇದಕ್ಕೆ ಕಾರಣ ಎಂಬುದನ್ನು ಮುಂದೆ ಸ್ಕಾಟ್ಲೆಂಡಿನ ರಸಾಯನವಿಜ್ಞಾನಿ ವಿಲಿಯಮ್ ರ‍್ಯಾಮ್ಸೆ (1852-1916) ತೋರಿಸಿಕೊಟ್ಟ. ರೇಲೀ ಮತ್ತು ರ‍್ಯಾಮ್ಸೆ ಇದೇ ವಿಷಯವನ್ನು ಕುರಿತಂತೆ ಸಂಶೋಧನೆ ನಡೆಸಿದರಾದ್ದರಿಂದ ರ‍್ಯಾಮ್ಸೆಗೆ ರಸಾಯನವಿಜ್ಞಾನ ಕ್ಷೇತ್ರದಲ್ಲಿ 1904ರ ನೊಬೆಲ್ ಪಾರಿತೋಷಿಕ ಲಭಿಸಿತು. ಅದೇ ವರ್ಷ ಇವನಿಗೂ ಭೌತವಿಜ್ಞಾನ ಕ್ಷೇತ್ರದಲ್ಲಿ ನೊಬೆಲ್ ಪಾರಿತೋಷಿಕ ಲಭಿಸಿತು. 1905ರಲ್ಲಿ ಇವನು ರಾಯಲ್ ಸೊಸೈಟಿಯ ಅಧ್ಯಕ್ಷನಾದ. 1908ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಛಾನ್ಸಲರ್ ಆದ.
ಆಗಿನ ಕಾಲದ ವಿಜ್ಞಾನಿಗಳಾದ ವಿಲಿಯಮ್ ಜೇಮ್ಸ್ ಮತ್ತು ಆಲಿವರ್ ಲಾಡ್ಜ್‌ರಂತೆಯೇ ಕೊನೆಕೊನೆಗೆ ಈತ ಕೂಡ ಮಾನಸಿಕ ಸಂಶೋಧನೆಯಲ್ಲಿ ಆಸಕ್ತನಾದ. 1919 ಜೂನ್ 30ರಂದು ಎಸೆಕ್ಸ್‌ನ ವಿಧಾಮ್ ಎಂಬಲ್ಲಿ ನಿಧನಹೊಂದಿದ.[೧][೨]
ಉಲ್ಲೇಖಗಳು
[ಬದಲಾಯಿಸಿ]- ↑ "Lord Rayleigh: The Nobel Prize in Physics 1904". The Nobel Foundation. 1904. Retrieved 5 May 2010.
- ↑ "John Strutt, Lord Rayleigh". Westminster Abbey (in ಇಂಗ್ಲಿಷ್). Retrieved 7 May 2019.
ಹೊರಗಿನ ಕೊಂಡಿಗಳು
[ಬದಲಾಯಿಸಿ]- About John William Strutt
- O'Connor, John J.; Robertson, Edmund F., "ಲಾರ್ಡ್ ರೇಲೆ", MacTutor History of Mathematics archive, University of St Andrews
- Lord Rayleigh – the Last of the Great Victorian Polymaths, GEC Review, Volume 7, No. 3, 1992
- Works by or about ಲಾರ್ಡ್ ರೇಲೆ at Internet Archive
- Lord Rayleigh on Nobelprize.org