ವಿಷಯಕ್ಕೆ ಹೋಗು

ಆಟಿ ಅಮಾವಾಸ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಟಿ ಅಮಾವಾಸ್ಯೆ( ತುಳು :ಆಟಿ ಅಮಾಸೆ)ಯು ತುಳುನಾಡಿನಲ್ಲಿ ಆಟಿ ತಿಂಗಳಲ್ಲಿ ಆಚರಿಸುವ ಅಮಾವಾಸ್ಯೆಯಾಗಿದೆ. ಈ ಅಮಾವಾಸ್ಯೆಯನ್ನು ಆಷಾಡ ಅಮಾಸೆ , ದೀವಿಗೆ ಕರ್ನಾಟಕ ಅಮಾವಾಸ್ಯೆ ಅಥವಾ ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ.[] ಆಟಿ ತಿಂಗಳಲ್ಲಿ ಬರುವ ಈ ಅಮಾವಸ್ಯೆಯು ತುಳುವ ಜನರಿಗೆ ವಿಶೇಷವಾದ ದಿನ ಹಾಗೂ ಇದು ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ಆಚರಣೆಯಾಗಿದೆ. ಈ ದಿನದಂದು ತುಳುನಾಡು ಜನರು 'ಪಾಲೆ ಮರ'ದ ತೊಗಟೆಯನ್ನು ಕೆತ್ತಿ ಅದರಿಂದ ಕಷಾಯ/ಮದ್ದನ್ನು ತಯಾರಿಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ. ತುಳುನಾಡಿನಲ್ಲಿ ಆಟಿ ಎಂಬುದು ಒಂದು ತಿಂಗಳಿನ ಹೆಸರಾಗಿದೆ. ಆಟಿ ತಿಂಗಳನ್ನು ಅನಿಷ್ಟ ತಿಂಗಳೆಂದೂ ಕರೆಯುತ್ತಾರೆ. ಏಕೆಂದರೆ, ಆಟಿ ತಿಂಗಳಲ್ಲಿ ಕ್ರಿಮಿಕೀಟಗಳ ತೊಂದರೆ ಅಧಿಕವಾಗಿರುವುದರ ಜೊತೆಗೆ ಅಧಿಕವಾದ ಮಳೆಯೂ ಇರುತ್ತದೆ. ಈ ಸಂದರ್ಭದಲ್ಲಿ ಮನೆಬಿಟ್ಟು ಹೊರಹೋಗಲಾಗುವುದಿಲ್ಲ. ಹೀಗಾಗಿ ಆಟಿ ತಿಂಗಳನ್ನು ಅನಿಷ್ಟವೆಂದು ಕರೆಯುತ್ತಾರೆ. ಈ ಅನಿಷ್ಟಗಳನ್ನೆಲ್ಲ ಕಳೆಯಲು ಆಟಿ ಕಳಂಜೆ ಬರುತ್ತಾನೆ ಎಂಬ ವಾಡಿಕೆ ತುಳುನಾಡಿನಲ್ಲಿದೆ. ಆಟಿ ಅತ್ಯಂತ ಹಳೆಯ ಸಾಂಪ್ರದಾಯಿಕ ಭಾರತೀಯ ಸೌರ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳಾಗಿದೆ. ಈ ದಿನದಂದು ಕಹಿ ರುಚಿಯ ಹಾಲೆ ಮರದ ಕಷಾಯವನ್ನು ಕುಡಿಯುವುದರಿಂದ ಅನಾರೋಗ್ಯವು ಕಮ್ಮಿಯಾಗುತ್ತದೆ ಹಾಗೂ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ರೋಗಳ ವಿರುದ್ಧ ಹೋರಾಡಲು ಔಷಧೀಯ ಶಕ್ತಿಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಖಾಲಿ ಹೊಟ್ಟೆಯಲ್ಲಿ ಪಾಲೆದ ಕಷಾಯ ಸೇವಿಸಿದಾಗ ಅದರ ಸಂಪೂರ್ಣ ಉಪಯೋಗವಾಗುವುದು.

ಪಾಲೆ ಮರದ ತೊಗಟೆಯನ್ನು ಕೆತ್ತಿ ತೆಗೆಯುತ್ತಿರುವುದು.

ಪಾಲೆ ಮರದ ವಿಶೇಷತೆ

[ಬದಲಾಯಿಸಿ]

ತುಳುನಾಡಿನ ಜನರು ಆಟಿ ಅಮಾವಾಸ್ಯೆಯ ದಿನವನ್ನು ಆಚರಿಸಲು ಕಹಿ ರುಚಿಯನ್ನೊಳಗೊಂಡ ಹಾಗೂ ಆಯುರ್ವೇದದ ಅಂಶವಿರುವ ಪಾಲೆ ಮರದ ಕೆತ್ತೆ(ತೊಗಟೆ)ಯ ಕಷಾಯವನ್ನು ಮನೆಯಲ್ಲಿ ತಯಾರಿಸಿ ಕುಡಿಯುತ್ತಾರೆ. ಈ ಮರವನ್ನು ತುಳು ಭಾಷೆಯಲ್ಲಿ ಪಾಲೆ ಮರ; ಸಂಸ್ಕೃತದಲ್ಲಿ ಸಪ್ತಪರ್ಣಿ; ಕನ್ನಡದಲ್ಲಿ ಹಳೆಮರ; ಸಸ್ಯಶಾಸ್ತ್ರೀಯದಲ್ಲಿ ಅಲ್ಸ್ಟೋನಿಯಾಸ್ಕಾಲರಿಸ್ ಹಾಗೂ ಇಂಗ್ಲಿಷ್‌ನಲ್ಲಿ ಡೆವಿಲ್ ಟ್ರೀ ಎಂದೂ ಕರೆಯಲಾಗುತ್ತದೆ.[] ಪಾಲೆ ಮರ ಒಂದು ಜಾತಿಯ ಹಾಲು ಬಿಡುವಂತಹ ಮರವಾಗಿದೆ. ಇದನ್ನು ಬಲೀಂದ್ರ ಮರ ಎಂದೂ ಕರೆಯುತ್ತಾರೆ. ಈ ಮರವು ಆಟಿ ತಿಂಗಳಿನಲ್ಲಿ ಹಲವು ಆಯುರ್ವೇದ ಔಷಧಿಯ ಗುಣಗಳನ್ನು ಹೊಂದುತ್ತದೆ ಎಂಬುದು ತುಳುವರ ನಂಬಿಕೆ. ಆಟಿ ಅಮಾಸೆದಂದು ಎಲ್ಲ ಹಕ್ಕಿಗಳು ಈ ಮರಕ್ಕೆ ಬಂದು ಸೇರುತ್ತವೆ ಹಾಗೆಯೇ ಹಾವುಗಳು ಸಹ ತಮ್ಮ ವಿಷವನ್ನು ಈ ಮರದ ಬುಡದಲ್ಲಿ ಬಿಡುತ್ತವೆ. ಹಾಗಾಗಿ ಈ ಮರಕ್ಕೆ ವಿಶೇಷ ಶಕ್ತಿ ಬರುತ್ತದೆ. ಈ ಮರದ ಕಷಾಯವು ಕಹಿಯಾಗಿರುತ್ತದೆ.

ಪಾಲೆ ಮರದ ತೊಗಟೆಯನ್ನು ತೆಗೆಯುವ ವಿಧಾನ

[ಬದಲಾಯಿಸಿ]

ಮನೆಯ ಯಜಮಾನ ಅಮಾವಾಸ್ಯೆಯ ಹಿಂದಿನ ದಿನ ಕಾಡೀಗೆ ಹೋಗಿ ಸಪ್ತಪರ್ಣಿ/ಪಾಲೆ ಪರವನ್ನು ಹುಡುಕಿ ತೆಗೆದು ಮರಕ್ಕೆ ಏನಾದರೂ ಗುರುತನ್ನು ನೀಡಿ ಬರುತ್ತಾನೆ(ಒಣ ಬಾಳೆ ಎಲೆಗಳನ್ನು ಹಗ್ಗದಿಂದ ಕಟ್ಟಿ ಮರದ ಕೆಳಗೆ ಕಲ್ಲು ಇಡುತ್ತಾರೆ). ಮರುದಿನ ಅಂದರೆ ಆಟೀ ಅಮಾವಸ್ಯೆಯ ದಿನದಂದು ಸೂರ್ಯೋದಯಕ್ಕೂ ಮುನ್ನ ಪಾಲೆಮರದ ಬುಡಕ್ಕೆ ತೆರಳಿ ಕೈಯಲ್ಲೊಂದು ಪೊರಕೆ ಹಿಡಿದು ಮರಕ್ಕೆ ಸುತ್ತು ಬಂದು ಅದರಿಂದ ಮರಕ್ಕೆ ಮೂರು ಪೆಟ್ಟು ಕೊಡುತ್ತಾನೆ.ನಂತರ ಮರದ ಕೆತ್ತೆ(ತೊಗಟೆ)ಯನ್ನು ಕಲ್ಲಿನಿಂದ ಗುದ್ದಿ ತೆಗೆಯಬೇಕು. ಹಾಗೆ ಕಲ್ಲಿನಿಂದ ಗುದ್ದುವಾಗ ಪಾಲೆಮರವು ಬಿಳಿಯ ಹಾಲನ್ನು ಬಿಡುತ್ತದೆ. ಇದರಿಂದ ತೊಗಟೆ ತೆಗೆಯುವವನ ಮೈ ಹಗೂ ಬಟ್ಟೆ ಮರದ ಹಾಲಿನಿಂದ ಹಾಳಾಗುತ್ತದೆ. ಹಿಂದಿನಿಂದ ಬಂದ ವಾಡಿಕೆಯ ಪ್ರಕಾರ ಈ ಮರದ ತೊಗಟೆಯನ್ನು ಬಟ್ಟೆ ಧರಿಸದೆ ಬರಿ ಮೈಯಲ್ಲಿ ತೆಗೆಯಬೇಕು. ಮರವನ್ನು ಹೀಗೆ ಕಲ್ಲಿನಲ್ಲಿ ಗುದ್ದುವಾಗ ಅದರ ಚರ್ಮವು ಬಿಡಿಬಿಡಿಯಾಗಿ(ತುಳುವಿನಲ್ಲಿ ಪಾಲೆ ಪಾಲೆಯಾಗಿ) ಏಳುವುದರಿಂದ ಈ ಮರಕ್ಕೆ ತುಳು ಭಾಷೆಯಲ್ಲಿ ಪಾಲೆ ಮರ ಎಂಬ ಹೆಸರು ಬಂತು.

ಕಷಾಯ ತಯಾರಿಕೆ

[ಬದಲಾಯಿಸಿ]
ಪಾಲೆ ಮರದ ಹೂವು

ಸಾಂಪ್ರದಾಯಿಕವಾಗಿ, ತುಳುನಾಡಿನ ಜನರು ಅಮಾವಾಸ್ಯೆಯ ಹಿಂದಿನ ದಿನ ಪಾಲೆಮರದ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಮರವನ್ನು ಒಣ ಬಾಳೆ ಎಲೆಗಳನ್ನು ಹಗ್ಗದಿಂದ ಕಟ್ಟಿ ಮರದ ಕೆಳಗೆ ಕಲ್ಲು ಇಡುತ್ತಾರೆ. ಆದ್ದರಿಂದ, ಅವರು ಮುಂಜಾನೆ ಸುಲಭವಾಗಿ ಪಾಲೆ ಮಾರವನ್ನು ಗುರುತಿಸಬಹುದು ಮತ್ತು ''ಹೇ ದೈವಿಕ ವೃಕ್ಷ, ನೀವು ನಾಳೆ ಸಂಪೂರ್ಣ ಔಷಧೀಯ ಅಂಶಗಳನ್ನು ತುಂಬಿರಿ. ನಿಮ್ಮ ತೊಗಟೆ/ಚರ್ಮವನ್ನು ಪಡೆದ ನಂತರ ದಯವಿಟ್ಟು ಉತ್ತಮ ಆರೋಗ್ಯವನ್ನು ಆಶೀರ್ವದಿಸಿ" ಎಂದು ಮರದೊಂದಿಗೆ ಪ್ರಾರ್ಥಿಸಬಹುದು.[] ಇದು ಈ ಪ್ರದೇಶದಲ್ಲಿ ದೈವಿಕ ಸ್ಥಾನಮಾನವನ್ನು ಸಹ ಹೊಂದಿದೆ. ಆಟಿ ಅಮಾಸೆಯ ದಿನದಂದು ಸೂರ್ಯೋದಯಕ್ಕೆ ಮುಂಚೆ ಪಾಲೆ ಮಾರದ ತೊಗಟೆ/ಚರ್ಮವನ್ನು ಕಲ್ಲು ಮತ್ತು ಅದರಿಂದ ತಯಾರಿಸಿದ ಕಷಾಯದ ಸಹಾಯದಿಂದ ಸಂಗ್ರಹಿಸಬೇಕು. ಮರವನ್ನು ಗುರುತಿಸುವಲ್ಲಿ ವಿಶೇಷ ಕಾಳಜಿ ವಹಿಸಬೇಕು. ಕಷಾಯ ಮಾಡಲು ತುಂಬಾ ಹೊರಗಿನ ಚರ್ಮವನ್ನು (ಕಪ್ಪು ಬಣ್ಣ) ತೆಗೆಯಲಾಗುತ್ತದೆ ಮತ್ತು ಒಳಗಿನ ಬಿಳಿ ಭಾಗವನ್ನು ಸ್ವಲ್ಪ ನೀರು ಸೇರಿಸಿ ಪುಡಿಮಾಡಲಾಗುತ್ತದೆ. ಮರದ ತೊಗಟೆಯನ್ನು ಕಲ್ಲು ಬಳಸಿ ಪುಡಿಮಾಡಲಾಗುತ್ತದೆ.[] ಮತ್ತು ಈ ಆಯುರ್ವೇದ ಮಿಶ್ರಣವನ್ನು ಕಾಳುಮೆಣಸು, ಅರಿಶಿನ, ಅಜವೈನ್, ಬೆಳ್ಳುಳ್ಳಿ ಮತ್ತು ಬೀಜಗಳ ಪದಾರ್ಥಗಳನ್ನು ಮಿಶ್ರಣ ಮಾಡಿ ಒಂದು ಬೆಣಚುಕಲ್ಲು ಅಥವಾ ಕಬ್ಬಿಣದ ಬಾರ್ ಅನ್ನು ಬಿಸಿಮಾಡಿ ಕಷಾಯದಲ್ಲಿ ಇರಿಸಿ ನಂತರ ಚೆನ್ನಾಗಿ ಕುದಿಸಿ ತಯಾರು ಮಾಡುತ್ತಾರೆ. ಮೊದಲು ದೇವರಿಗೆ ಅರ್ಪಿಸಿದ ನಂತರ ಜನರು ಕಷಾಯವನ್ನು ಸೇವಿಸುತ್ತಾರೆ. ಇದು ಸಮಗ್ರ ಔಷಧೀಯಗುಣಗಳನ್ನು ಹೊಂದಿರುವುದರಿಂದ ಹೆಚ್ಚು ಕಹಿ ರುಚಿಯನ್ನು ಹೊಂದಿರುತ್ತದೆ. ಈ ರಸವನ್ನು ಕರಾವಳಿ ಭಾಗದ ಜನರು ಪಾಲೆ ಮರದ ಕಷಾಯ ಎನ್ನುತ್ತಾರೆ.[]

ಪಾಲೆ ಮರದ ಕಷಾಯ ತಯಾರಿ

ಕಷಾಯವನ್ನು ಸೇವಿಸಿದ ನಂತರ, ಹುರಿದ ಗೋಡಂಬಿ, ಪಪ್ಪಡ್ ಮತ್ತು ಶೇಂದಿಗೆ, ತೆಂಗಿನಕಾಯಿ ಅನ್ನ ಹಾಗೂ ಈ ಔಷಧಿಯು ಜೀವಕ್ಕೆ ಉಷ್ಣವಾಗಬಾರದೆಂದು ಮೆಂತೆ ಗಂಜಿಯನ್ನು ತಿನ್ನುವ ಅಭ್ಯಾಸವಿದೆ.[]

ಕಷಾಯದ ಉಪಯೋಗಗಳು

[ಬದಲಾಯಿಸಿ]

ಈ ಕಷಾಯವು ಸಾಕಷ್ಟು ಆಯುರ್ವೇದಿಕ್ ಗುಣಗಳನ್ನು ಹೊಂದಿದೆ ಹಾಗಾಗಿ ಇದು ಹಲವಾರು ಕಾಯಿಲೆಗಳನ್ನು ಉಪಶಮನ ಮಾಡುತ್ತದೆ. ನಮ್ಮ ಆಯುರ್ವೇದದಲ್ಲಿ ಈ ಸಪ್ತಪರ್ಣೀಮರದ ಕಷಾಯವನ್ನು ಅನೇಕ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಹೊಟ್ಟೆಯ ಕಾಯಿಲೆ ಹಾಗೂ ಹುಳುವಿನ ಸಮಸ್ಯೆ ಸೇರಿದಂತೆ,ಅತಿಸಾರ, ಮಲೇರಿಯಾ, ಅಸ್ತಮಾ, ಅಪಸ್ಮಾರ, ಸಂಧಿವಾತ, ಚರ್ಮ ರೋಗಗಳು, ಹೊಟ್ಟೆನೋವು, ಪ್ರತಿಬಂಧಕ ಕಾಮಾಲೆ, ಜ್ವರ, ಸ್ತ್ರೀರೋಗದಂತಹ ಸಮಸ್ಯೆಗಳ ನಿವಾರಣೆಗೆ ಈ ಮರವನ್ನು ಬಳಸಲಾಗುತ್ತದೆ.[] ಇದರ ತೊಗಟೆಯ ಪೇಸ್ಟನ್ನು ದೀರ್ಘಕಾಲದ ಚರ್ಮದ ಹುಣ್ಣುಗಳಿಗೆ ಹಚ್ಚಲು ಹಗೂ ಬಾಣಂತಿಯಲ್ಲಿರುವ ಹೆಂಗಸರಿಗೆ ತಮ್ಮ ಎದೆಹಾಲನ್ನು ಹೆಚ್ಚಿಸಲು ಪ್ರಸವಾನಂತರದ ಸಮಯದಲ್ಲಿ ನೀಡಲಾಗುತ್ತದೆ. ಅಷ್ಟೇ ಅಲ್ಲದೆ, ಇದು ಜೀರ್ಣಕಾರಿ ಶಕ್ತಿಯನ್ನೂ ಸಹ ಹೆಚ್ಚಿಸುತ್ತದೆ. ಪಾಲೆಮರದ ತಾಜಾ ತೊಗಟೆಯ ಕಷಾಯವನ್ನು ಕುಡಿಯುವುದರಿಂದ ಬೊಜ್ಜು, ಹೈಪರ್ ಕೊಲೆಸ್ಟ್ರಾಲ್ ಸಮಸ್ಯೆಗಳು ದೂರವಾಗುತ್ತವೆ.[]

ಆಟಿ ಅಗೇಲ್

[ಬದಲಾಯಿಸಿ]

ಅಮವಾಸ್ಯೆಯ ದಿನ ಸಂಜೆ ತುಳುವರು "ಗುರು ಕರ್ಣವೆರೆಗ್ ಅಗೇಲ್" ಮಾಡುತ್ತಾರೆ. ಅಗೇಲ್ ಎನ್ನುವುದು ನಮ್ಮ ಪೂರ್ವಜರಿಗೆ ಊಟದ ವ್ಯವಸ್ಥೆ ಮಾಡುವ ವ್ಯವಸ್ಥೆಯಾಗಿದೆ. ಇದು ತುಳುವರ ಒಂದು ರೀತಿಯ ಧಾರ್ಮಿಕ ನಂಬಿಕೆ. ಅಗೇಲ್ ಅನ್ನು ತಯಾರಿಸಲು ಕುಟುಂಬದ ಎಲ್ಲಾ ಸದಸ್ಯರು ಒಟ್ಟುಗೂಡುತ್ತಾರೆ. ಈ ಆಚರಣೆಗೆ ಸಾಮಾನ್ಯವಾಗಿ ತುಳುವರು ನೀರ್ ದೋಸೆ, ಚಿಕನ್ ಕರಿ ಮತ್ತು ಹಳ್ಳಿಗಾಡಿನ ಮದ್ಯವನ್ನು ತಯಾರಿಸುತ್ತಾರೆ ಮತ್ತು ಇದನ್ನು ತುಳು ಜನರು ಆರಾಧಿಸುವ ದೈವ-ದೇವತೆಗಳಿಗೆ ಮತ್ತು ಅಗಲಿದ ಪೂರ್ವಜರಿಗೆ ಅರ್ಪಿಸುತ್ತಾರೆ. 

ಆಟಿ ಕುಲ್ಲುನೆ

[ಬದಲಾಯಿಸಿ]

ಆಟಿ ತಿಂಗಳಿನಲ್ಲಿ ಮದುವೆಯಾದ ದಂಪತಿ ತಮ್ಮ ಹಿರಿಯರಲ್ಲಿಗೆ ಹೋಗಿ ಅವರ ಆಶೀರ್ವಾದ ತೆಗೆದುಕೊಂಡು ಬರುವ ಈ ಆಚರಣೆಗೆ ಆಟಿ ಕುಲ್ಲುನೆ ಎನ್ನುತ್ತಾರೆ. ಇದನ್ನು ಈಗ ಹೆಚ್ಚಿನವರು ಮಾಡುತ್ತಿಲ್ಲ. ಈ ಆಚರಣೆ ತುಂಬಾ ವಿರಳವಾಗಿದೆ ಎಂದು ಮನೆಯ ತೋಟದ ಕೆಲಸಕ್ಕೆ ಬಂದ ರಾಮಣ್ಣನ ಬಳಿ ತಿಳಿದುಕೊಂಡೆ. ಆಟಿದ ಅಗೆಲ್ ಕುಲ್ಲುನೆ: ಆಟಿ ತಿಂಗಳಿನಲ್ಲಿ ತುಳು ಜನಾಂಗದಲ್ಲಿ ಸತ್ತವರಿಗೆ ಬಡಿಸುವ ಕಾರ್ಯಕ್ರಮವನ್ನೇ ಅಗೆಲ್ ಕುಲ್ಲುನೆ ಎನ್ನುತ್ತಾರಂತೆ. ಇದಕ್ಕೆ ಕೋಳಿ ಪದಾರ್ಥ, ಚೇಟ್ಲ ಪದಾರ್ಥ ಮಾಡುತ್ತಾರೆ. ಇದು ರಾತ್ರಿ ಕುಟುಂಬದ ಸದಸ್ಯರು ನಡೆಸುವ ಆಚರಣೆ.[]

  • ತುಳುವಿನಲ್ಲಿ ಆಟಿ ತಿಂಗಳಿನ ಗಾದೆ ಹೀಗಿದೆ- "ಆಟಿ ಆನೆಡ್ ಪೋಪಿನಿ, ಸೋನ ಕುದುರೆಡ್ ಪೋಪಿನಿ. " -ಇದು ಆನೆಯ ಮೇಲೆ ಸವಾರಿ ಮಾಡುವಂತೆ ಮನೆಯಲ್ಲಿ ಯಾವುದೇ ಕೆಲಸವಿಲ್ಲದೆ ಆಟಿ ತಿಂಗಳು ನಿಧಾನವಾಗಿ ಪ್ರಯಾಣಿಸುತ್ತದೆ ಮತ್ತು ಸೋಣ(ಆಗಸ್ಟ್) ತಿಂಗಳು ಕುದುರೆ ಸವಾರಿ ಮಾಡಿದಂತೆಯೇ ಓಡುತ್ತದೆ! ಎಂಬರ್ಥವನ್ನು ನೀಡುತ್ತದೆ.

ಆಟಿ ಅಮವಾಸ್ಯೆದಂದು ಬಗೆ ಬಗೆಯ ತಿನಿಸುಗಳು

[ಬದಲಾಯಿಸಿ]

ಅರಿಶಿನ ಎಲೆಯಲ್ಲಿ ತಯಾರಾದ ತಿಂಡಿ, ಹಪ್ಪಳ, ಕಡ್ಲೆ ಬೇಳೆ ಪಾಯಸ, ಎಳೆ ಬಿದಿರಿನ ಉಪ್ಪಿನಕಾಯಿ, ತಜಂಕ ಪಲ್ಯ, ಈ ಆಟಿ ತಿಂಗಳಲ್ಲಿ ತಯಾರಾಗುವ ವಿಶೇಷ ತಿನಿಸುಗಳು. ಆಟಿ ತಿಂಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಕಾರ್ಯಗಳಿಗೆ ತೆರಳುವ ಮೊದಲು ತೆಂಗಿನ ಕಾಯಿ ಅಥವಾ ತಾರಾಯಿದ ಗಂಜಿ, ಕಾಯಿ ಹಾಲಿನ ಗಂಜಿ ಸೇವಿಸಿತೆರಳುವ ಪದ್ಧತಿ ಇಂದಿಗೂ ಇದೆ. ಮೋಡೆ, ಅರಸಿನ ಎಲೆಯ ಕಡುಬು, ಹಲಸಿನ ಕಡುಬು , ಪತ್ರೋಡೆ, ಕೆಸುವಿನ ಚಟ್ನಿ,ತಿಮರೆದ ಚಟ್ನಿ, ಮಾವಿನಕಾಯಿ ಚಟ್ನಿ, ಹುರುಳಿಸಾರು, ಚಿಲಿಂಬಿದ ಅಡ್ಡೆ, ಸೌತೆ ಪದಂಗಿ ಗಸಿ, ತಜಂಕ ವಡೆ, ಪಚ್ಚಿರ್ ಪಲ್ಯ, ಹಲಸಿನ ಮುಳ್ಕು, ಕಣಲೆ ಕಡ್ಲೆ, ತೇವು ಪದಪೆ ಗಸಿ, ಪಜಕಾಯಿ ಚಟ್ನಿ, ಮಾವಿನ ಹಣ್ಣಿನ ಮೆನಸ್ ಕಾಯಿಯ ರುಚಿ ಈ ಆಟಿ ತಿಂಗಳಲ್ಲಿ ಮಾತ್ರ ನೋಡಬಹುದಾಗಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Udupi: Aati Amavasya – Facts on tradition of 'Paleda Kashaya' consumption". Daijiworld.com. 2019-08-01. Retrieved 2020-10-20.
  2. Medicinal Plants of Karnataka, Dr. Magadi Auer. Gurudeva, Divyachandra Publishing, Bangalore, 1998
  3. "ಸಾವಿರದೊಂದು ಔಷಧಿ ಗುಣವಿರುವ ಆಟಿ ಮದ್ದು". Vijaya Karnataka.
  4. Kapikad, Sathish. "ಸರ್ವರೋಗ ನಿವಾರಕ, ರೋಗ ನಿರೋಧಕ ಶಕ್ತಿಯಿರುವ ಔಷಧಿ ಹಾಲೆ ಮರದ ಕಷಾಯದ ಬಗ್ಗೆ ನಿಮಗೇಷ್ಟು ಗೊತ್ತು…ಇದನ್ನು ನೀವು ತಿಳಿದುಕೊಳ್ಳಲೇ ಬೇಕು".
  5. "Aati Amavasya". Archived from the original on 2018-07-23. Retrieved 2022-12-25.
  6. "ಚಿತ್ರ ಸಂಪುಟ | ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ: ಪಾಲೆ ಕಷಾಯ ಸೇವಿಸಿದ ಜನತೆ". Prajavani. 20 July 2020.
  7. ೭.೦ ೭.೧ https://vijaykarnataka.com/lifestyle/home-remedies/health-benefits-of-saptaparni-tree-or-paleda-kashaya/articleshow/93178572.cms
  8. "ಆಟಿ ತಿಂಗಳ ಆಚರಣೆಗಳು". Retrieved 15 July 2024.
  9. "ಆಟಿ ತಿಂಗಳ ತಿನಿಸು". Vijay Karnataka. Retrieved 16 July 2024.