ಅಕೆಡಮಿಗಳು
ಪ್ಲೇಟೊ ನಡೆಸುತ್ತಿದ್ದ ವಿದ್ಯಾಪೀಠ ಅಕೆಡಮಿ ಎಂಬ ಸ್ಥಳದಲ್ಲಿದ್ದಿತಾದ ಕಾರಣ ಅವನ ವಿದ್ಯಾಪೀಠವನ್ನೂ ಅದೇ ಹೆಸರಿನಿಂದ ಕರೆಯುವ ರೂಢಿ ಬಂದಿತು. ಅಲ್ಲಿಂದೀಚೆಗೆ ಅಕೆಡಮಿ (ಅಕಾಡೆಮಿ) ಪದ ವಿದ್ಯಾಪೀಠವೆಂಬ ಅರ್ಥದಲ್ಲೇ ಪ್ರಚಲಿತವಾಗಿದೆ. ತತ್ತ್ವ ಜಿಜ್ಞಾಸೆ, ಮಂಥನ, ಪರಿಶೀಲನೆ, ಇತ್ಯರ್ಥ - ಇವು ಮೊದಲಿನಿಂದಲೂ ವಿದ್ಯಾಪೀಠಗಳ ಧ್ಯೇಯವಾಗಿದ್ದುವು. ಇದರಿಂದ ಇನ್ನೊಬ್ಬರು ಹೇಳಿದ್ದನ್ನೇ ಪರಮಸತ್ಯವೆಂದು ನಂಬುವ ಮೌಢ್ಯ ದೂರವಾಗುತ್ತ ಶಾಸ್ತ್ರೀಯವಾಗಿ ಸತ್ಯಮಥನ ನಡೆಯುವಂತಾಯಿತು.
ಗ್ರೀಕ್ ಅಕೆಡಮಿ
[ಬದಲಾಯಿಸಿ]ಅಥೆನ್ಸಿಗೆ ವಾಯವ್ಯ ದಿಕ್ಕಿನಲ್ಲಿ ಅದರಿಂದ 11/2 ಕಿಮೀ ದೂರದಲ್ಲಿ ಸೆಫಿಸಸ್ ನದಿಯ ದಡದ ಮೇಲಿದ್ದ ಅಕೆಡಮಿ ಎಂಬ ಉದ್ಯಾನವನದಲ್ಲಿ ಪ್ಲೇಟೊ ಒಂದು ವಿದ್ಯಾಪೀಠವನ್ನು ಸ್ಥಾಪಿಸಿದ. ಐವತ್ತು ವರ್ಷಗಳ ಕಾಲ ಎಂದರೆ ಪ್ರ.ಶ.ಪು. 348ರಲ್ಲಿ ಅವನು ತೀರಿಕೊಳ್ಳುವವರೆಗೆ ಅಲ್ಲಿ ಪಾಠಪ್ರವಚನಗಳನ್ನು ನಡೆಸುತ್ತಿದ್ದ. ಅವನ ತರುವಾಯ ಅವನ ಶಿಷ್ಯರು ಅದನ್ನು ವಿದ್ಯಾಪೀಠವಾಗಿ 520ರವರೆಗೆ ನಡೆಸಿದರು. ಆದರೆ ಅದು ಮತಬೋಧನೆಗೆ ಗಮನ ಕೊಡದಿದ್ದುದರಿಂದ ಅದನ್ನು ಅಂದಿನ ದೊರೆ ಜಸ್ಟನಿಯನ್ ಮುಚ್ಚಿಸಿಬಿಟ್ಟ. ಪ್ಲೇಟೊವಿನ ಅನಂತರ ಅಕೆಡಮಿಯಲ್ಲಿ ಐದು ಸಂಪ್ರದಾಯಗಳು ಬೆಳೆದುವೆಂದು ಕೆಲವರೂ ಮೂರು ಸಂಪ್ರದಾಯಗಳು ಬೆಳೆದುವೆಂದು ಇನ್ನು ಕೆಲವರೂ ಹೊಸದು ಹಳೆಯದು ಎಂದು ಎರಡು ಸಂಪ್ರದಾಯಗಳು ಮಾತ್ರ ಇದ್ದುವೆಂದು ಮತ್ತೆ ಕೆಲವರೂ ಹೇಳುತ್ತಾರೆ. ಪ್ಲೇಟೊವಿನ ಕಾಲದಿಂದ ಸಿಸಿರೋವಿನ ಕಾಲದವರೆಗೆ ಈ ಅಕೆಡಮಿಯ ಸಂಪ್ರದಾಯದಲ್ಲಿ ನಾಲ್ಕು ಘಟ್ಟಗಳನ್ನು ಕಾಣಬಹುದು.
- . ಪ್ಲೇಟೊವಿನ ಭಾವನೆಗಳನ್ನು ಅವನ ಸಮೀಪದ ಅನುಯಾಯಿಗಳಾದ ಸ್ಪೆಸಿಪ್ಸಸ್ ಮತ್ತು ಕ್ಸೆನೊಕ್ರಾಟೀಸ್ ಅಂಗೀಕರಿಸಲಿಲ್ಲ. ಒಳ್ಳೆಯದು ಎಂಬುದು ವಸ್ತುಗಳ ಹುಟ್ಟಿಗೆ ಕಾರಣವಾಗಲಾರದು. ಏಕೆಂದರೆ ಅದು ವಸ್ತುಗಳಲ್ಲಿರುವ ಗುಣ ಮಾತ್ರ. ಆದ್ದರಿಂದ ಒಳ್ಳೆಯದು ಎಂಬುದಕ್ಕಿಂತ ಹೆಚ್ಚು ವ್ಯಾಪಕವಾದ ಭಾವನೆಯೊಂದು ಸೃಷ್ಟಿಗೆ ಕಾರಣವಾಗಿರಬೇಕು. ಎಲ್ಲದರಲ್ಲೂ ನೆಲೆಸಿ, ಎಲ್ಲವನ್ನೂ ವ್ಯಾಪಿಸಿ, ಎಲ್ಲವನ್ನೂ ಹಿಡಿತದಲ್ಲಿಟ್ಟುಕೊಂಡಿರುವ ಈಶ್ವರಶಕ್ತಿಯೇ ಸೃಷ್ಟಿಗೆ ಮೂಲ, ಇದು ಇವರಿಬ್ಬರ ನಿಲುವು.
- . ಆರ್ಸೆಸಿಲಸ್ನ ಕಾಲದಲ್ಲಿ ಅಕೆಡಮಿಯು ಅಜ್ಞಾತವಾದ (ಅಗ್ನಾಸ್ಟಸಿಸಮ್) ಕಡೆಗೆ ತಿರುಗಿತು. ನನಗೆ ಏನೂ ತಿಳಿಯದು ಎಂಬಷ್ಟು ಮಾತ್ರ ನನಗೆ ತಿಳಿದಿದೆ ಎಂದು ಸಾಕ್ರಟೀಸ್ ಹೇಳಿದನು. ಆರ್ಸೆಸಿಲಸ್್ಸ ಆದರೋ ಅಷ್ಟು ಕೂಡ ನನಗೆ ತಿಳಿಯದೆಂದು ಹೇಳುತ್ತಾನೆ. ನನಗೆ ತಿಳಿದಿದೆಯೋ ತಿಳಿದಿಲ್ಲವೋ ಯಾವುದನ್ನೂ ಹೇಳಲಾರೆ ಎಂದು ವಾದಿಸುತ್ತಾನೆ.
- . ಕಾರ್ನಿಡೀಸಿನ ಕಾಲದಲ್ಲಿ ಅಜ್ಞಾತವಾದವು ಸಂಭಾವ್ಯವಾದವಾಗಿ ಪರಿಣಮಿಸಿತು. ಒಂದು ಅಭಿಪ್ರಾಯ ಇತರರಿಗೆ ತಿಳಿಸಬೇಕಾದರೆ ಅದನ್ನು ತಿಳಿಸುವವನಿಗಾದರೂ ಅದು ಸಂಭಾವ್ಯವಾಗಿರಲೇಬೇಕು; ಆತನ ಅನುಭವಕ್ಕಾದರೂ ಸಂಗತವಾಗಿರಲೇಬೇಕು. ತನಗೆ ಸಂಭಾವ್ಯವಾಗದ್ದನ್ನು ಇತರರಿಗೆ ತಿಳಿಸುವುದು ಹೇಗೆ ಅಥವಾ ಇತರರಾದರೂ ಅದನ್ನು ನಂಬುವುದಾದರೂ ಹೇಗೆ?
- . ಕೊನೆಯ ಕಾಲದಲ್ಲಿ ಕಾರ್ನಿಡೀಸಿಗೂ ಪ್ಲೇಟೊವಿಗೂ ನಿಜವಾದ ವಿರೋಧವಿಲ್ಲ ವೆಂದೂ ಫೈಲೋ ವಾದಿಸಿ ಸಮನ್ವಯ (ಎಲೆಕ್ಟಿಸಿಸóಮ್) ಪಂಥವನ್ನು ಸ್ಥಾಪಿಸಿದ.
ಅಲೆಕ್ಸಾಂಡ್ರಿಯದ ಮ್ಯೂಸಿಯಂ
[ಬದಲಾಯಿಸಿ]ಇದು ಮೊದಲನೆಯ ಟಾಲಮಿಯಿಂದ ಪ್ರ.ಶ.ಪು. 3ನೆಯ ಶತಮಾನದಲ್ಲಿ ಸ್ಥಾಪಿತವಾದ ವಿದ್ಯಾಪೀಠ. ಈಗಿನ ವಿಶ್ವವಿದ್ಯಾನಿಲಯಗಳ ಮಾದರಿ ಯಲ್ಲಿ ರೂಪುಗೊಂಡು ತನ್ನ ಕಾರ್ಯಚಟುವಟಿಕೆಗಳನ್ನು ನಡೆಸಿತು. ಅಲ್ಲಿ ಅಂದಿನ ಎಲ್ಲ ವಿಜ್ಞಾನಗಳೂ ಬಳಕೆಗೆ ಬಂದುವಲ್ಲದೆ ಗ್ರೀಸಿನ ಮತ್ತು ಪುರ್ವ ರಾಷ್ಟ್ರಗಳ ವಿದ್ಯಾವಂತರೆಲ್ಲ ಅಲ್ಲಿ ನೆರೆದು ಪ್ರವಚನದಲ್ಲಿ ಭಾಗಿಯಾದರು. ಅಲೆಕ್ಸಾಂಡ್ರಿಯದ ಪ್ರಸಿದ್ಧ ಗ್ರಂಥಾಲಯಕ್ಕೆ ಅಂಕುರಾರ್ಪಣವಾದದ್ದು ಅಲ್ಲಿಯೆ.
ಅಕೆಡಮಿಯ ಪಾಂಟಾನಿಯಾನ
[ಬದಲಾಯಿಸಿ]1433ರಲ್ಲಿ ಆಂಟೋನಿಯ ಬೆಕಡೆಲ್ಲಿ ಎಂಬುವನಿಂದ ಫಾ಼್ಲರೆನ್ಸಿನಲ್ಲಿ ಸ್ಥಾಪನೆಯಾದ ವಿದ್ಯಾಪೀಠ. ಇದಕ್ಕಿಂತ ಪ್ರಸಿದ್ಧವಾದುದೆಂದರೆ 1442ರ ಸುಮಾರಿನಲ್ಲಿ ಸ್ಥಾಪಿತವಾದ ಅಕೆಡಮಿಯ ಪ್ಲೇಟೋನಿಕ ವಿದ್ಯಾಪೀಠ. ಇವು ಪ್ಲೇಟೊವಿನ ಜೊತೆಗೆ ಡಾಂಟೆಯಂಥ ಮಹಾಕವಿಗಳನ್ನೂ ಅಭ್ಯಾಸಕ್ಕೆ ಆರಿಸಿಕೊಂಡವಲ್ಲದೆ ಇಟಾಲಿಯನ್ ಭಾಷೆಯ ಪರಿಷ್ಕರಣಕ್ಕೆ ಯತ್ನಿಸಿದುವು. ಕೇವಲ ಐವತ್ತು ವರ್ಷಗಳು ಮಾತ್ರ ಜೀವಂತವಾಗಿದ್ದರೂ ಈ ಸಂಸ್ಥೆಗಳು ಮುಂದೆ ಬಂದ ಅನೇಕ ವಿದ್ಯಾಪೀಠಗಳಿಗೆಲ್ಲ ಮಾದರಿಯಾಗಿದ್ದು ಸ್ಫೂರ್ತಿಯನ್ನು ಕೊಟ್ಟುವು.
ವೈಜ್ಞಾನಿಕ ಅಕೆಡಮಿಗಳು
[ಬದಲಾಯಿಸಿ]ಈಚೆಗೆ ಯೂರೋಪ್ ಮತ್ತು ಅಮೇರಿಕಗಳಲ್ಲಿ ವಿಜ್ಞಾನ ವಿಷಯಗಳಿಗೆ ಸಂಬಂಧಪಟ್ಟ ಹಲವಾರು ವಿದ್ಯಾಪೀಠಗಳು ಸ್ಥಾಪನೆಯಾಗಿ ಉತ್ತಮ ಸೇವೆಯನ್ನು ಸಲ್ಲಿಸುತ್ತಿವೆ. ಅವುಗಳಲ್ಲಿ ಫ್ರಾನ್ಸಿನ ಫ್ರೆಂಚ್ ಅಕೆಡಮಿ, ಬರ್ಲಿನ್ನಿನ ಅಕೆಡಮಿ ಡರ್ವಿಸ್ಸೆನ್ಛಾಫ್ಪನ್, ಐರ್ಲೆಂಡಿನ ರಾಯಲ್ ಅಕೆಡಮಿ, ರಷ್ಯಾದ ಇಂಪೀರಿಯಲ್ ಅಕೆಡಮಿ - ಇವು ಪ್ರಸಿದ್ಧವಾದ ಸಂಸ್ಥೆಗಳು.
ಸಾಹಿತ್ಯ ಅಕೆಡಮಿಗಳು
[ಬದಲಾಯಿಸಿ]ಇಟಲಿಯಲ್ಲಿಅಕೆಡಮಿಯ ಪಾಂಟಾನಿಯಾನದಂಥ ಇನ್ನೆರಡು ಸಂಸ್ಥೆಗಳು ಉಲ್ಲೇಖನಾರ್ಹವಾಗಿವೆ. ಆರ್ಕೆಡಿ ಅಕೆಡಮಿಯು (1690) ಗ್ರಾಮಜೀವನಕ್ಕೆ ಸಂಬಂಧಿಸಿದ ಕವನಗಳಿಗೆ ಪ್ರೋತ್ಸಾಹವಿತ್ತು ಅವನ್ನು ಗ್ರಂಥರೂಪದಲ್ಲಿ ಪ್ರಚುರಪಡಿಸಿತು. ಇದಕ್ಕೆ ಈಗ ಇಟಾಲಿಯನ್ ಸಾಹಿತ್ಯ ಅಕೆಡಮಿ ಎಂಬ ಹೆಸರಿದೆ. 1603ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಸಾಹಿತ್ಯ ಪರಿಷತ್ತು ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವಿತ್ತು, ಪುರಸ್ಕರಿಸುವ ಕೆಲಸ ಮಾಡುತ್ತಿದೆ. ಇವುಗಳೊಂದಿಗೆ ಮುಖ್ಯವಾಗಿ ಫ್ರಾನ್ಸಿನ ಫ್ರೆಂಚ್ ಅಕೆಡಮಿ, ಜರ್ಮನಿಯ ದಿ ಫ್ರೂಟ್ಫುಲ್ ಸೊಸೈಟಿ, ಇಟಲಿಯ ಅಕೆಡಮಿಯ ಫ್ಲಾರೆಂಟೀನ, ಸ್ಪೇನಿನ ದಿ ರಿಯಲ್ ಅಕೆಡಮಿಯ ಎಸ್ಟನೋಲ - ಇವನ್ನು ಸೇರಿಸಬಹುದು.
ಕಲೆಗೆ ಮೀಸಲಾದ ಅಕೆಡಮಿಗಳು
[ಬದಲಾಯಿಸಿ]ಇವು ಈಚಿನವು. ಗಿಲ್ಡುಗಳೆಂದು ಕರೆಯಲಾದ ವ್ಯಾಪಾರ ಸಂಘಗಳು ಹುಟ್ಟಿದ ಅನಂತರ ಕಲೆಗಾರರ ಹಕ್ಕುಬಾಧ್ಯತೆಗಳನ್ನು ಸಂರಕ್ಷಿಸಲು ಅದೇ ಮಾದರಿಯ ಸಂಘಸಂಸ್ಥೆಗಳು ಏರ್ಪಟ್ಟವು. ಕಾಲ ಕ್ರಮೇಣ ಅವು ಕಲೆಯ ಆರಾಧನೆ ಮತ್ತು ಬೋಧನೆಯನ್ನು ಕೈಗೊಂಡು ಕಲಾಕೇಂದ್ರಗಳಾದುವು. ಅವುಗಳಲ್ಲಿ ಮುಖ್ಯವಾದ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಿದೆ: 1. ಫ್ರಾನ್ಸಿನ ದಿ ಅಕೆಡಮಿ ರಾಯಲೆ ದಿ ಪೇಂಚರ್ ಎಟ್ ದಿ ಸ್ಕಲ್ಪ್ಚರ್ (1648). ಇದರೊಂದಿಗೆ 1671ರಲ್ಲಿ ಸ್ಥಾಪಿತವಾದ ಅಕೆಡಮಿ ಆಫ್ ಆರ್ಕಿಟೆಕ್ಚರ್ ಸಂಸ್ಥೆ ವಿಲೀನವಾಯಿತು. 2. ಇಟಲಿಯ ಅಕೆಡಮಿ ಆಫ್ ಪೇಂಟಿಂಗ್ ಅಂಡ್ ಸ್ಕಲ್ಪ್ಚರ್ ಆಫ್ ಟೂರಿನ್ (1776); ವೆನಿಸ್ ಫಾ಼್ಲರೆನ್್ಸ ಮೊದೇನ ಮೊದಲಾದ ಕಡೆಗಳಲ್ಲಿರುವ ದಿ ಅಕೆಡಮಿ ಆಫ್ ಆಟ್ರ್ಸ್ ಸಂಸ್ಥೆಗಳು. 3. ರಷ್ಯಾದ ಅಕೆಡಮಿ ಆ¥sóï ಸೇಂಟ್ ಪೀಟರ್ಸ್ಬರ್ಗ್ (1816). 4. ದಕ್ಷಿಣ ಅಮೇರಿಕದ ಎಸ್ಕೊಲ ನ್ಯಾಷನಲ್ ದಿ ಬೆಲಾಸ್ ಆಟ್ರ್ಸ್ (1816). 5. ಸ್ಪೇನಿನ ಅಕೆಡಮಿ ದಿ ಬೆಲ್ಲಾಸ್ ಆಟ್ರ್್ಸ ದಿ ಸ್ಯಾನ್ ಫನಾರ್್ಯಂಡೊ ಐದನೆಯ ಫಿಲಿಪ್ಪನಿಂದ ಸ್ಥಾಪಿತವಾದದ್ದು. 6. ಸ್ವೀಡನ್ನಿನ ಸ್ಟಾಕ್ಹೋಂನಲ್ಲಿ ಸ್ಥಾಪಿತವಾದ ಅಕೆಡಮಿ ಆ¥sóï ಫೈನ್ ಆಟ್ರ್್ಸ (1733) 7. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿರುವ ನ್ಯಾಷನಲ್ ಅಕೆಡಮಿ ಆಫ್ ಡಿಸೈನ್ (1826) 8. ಬ್ರಿಟನ್ನಿನಲ್ಲಿ - ಲಂಡನ್ನಿನ ರಾಯಲ್ ಅಕೆಡಮಿ ಆಫ್ ಆಟ್ರ್ಸ್ (1768), ದಿ ಅಕೆಡಮಿ ಆಫ್ ಏನ್ಷಂಟ್ ಮ್ಯೂಸಿಕ್ (1710) 9. ಟರ್ಕಿಯ ದಿ ಅಕೆಡಮಿ ಆಫ್ ಆಟ್ರ್್ಸ (1908). ಇವು ಮುಖ್ಯವಾದುವು.
ರಾಯಲ್ ಅಕೆಡಮಿ ಆಫ್ ಆಟ್ರ್ಸ್
[ಬದಲಾಯಿಸಿ]ಚಿತ್ರಕಲೆ ಅಭಿವೃದ್ಧಿಗಾಗಿ ಒಂದು ಸಂಘವನ್ನು ಸ್ಥಾಪಿಸುವ ಉದ್ದೇಶದಿಂದ ಗ್ರೇಟ್ ಬ್ರಿಟನ್ನಿನ ಖ್ಯಾತ ಚಿತ್ರಕಾರರು ಮತ್ತು ವಾಸ್ತುಶಿಲ್ಪಕಾರರು ಅಂದಿನ ದೊರೆಯಾಗಿದ್ದ ಮೂರನೆಯ ಜಾರ್ಜ್ಗೆ ಅರ್ಪಿಸಿದ ಬಿನ್ನವತ್ತಳೆ ಫಲಪ್ರದವಾಗಿ 1768ರಲ್ಲಿ ಲಂಡನ್ ಅಲ್ಲಿ ಈ ಅಕೆಡಮಿ ಸ್ಥಾಪನೆಗೊಂಡಿತು. ಸಂಘದ ಎರಡು ಮುಖ್ಯ ಉದ್ದೇಶಗಳೆಂದರೆ ಉತ್ತಮವಾಗಿ ನಿಯಂತ್ರಿತವಾದ ಒಂದು ಶಾಲೆಯ ಸ್ಥಾಪನೆ ಮತ್ತು ವಾರ್ಷಿಕ ಪ್ರದರ್ಶನ. ದೊರೆಯೇ ಅಕೆಡಮಿಯ ಪ್ರಧಾನ ಪೋಷಕ, ರಕ್ಷಕ ಮತ್ತು ಬೆಂಬಲಿಗ. ಅಕೆಡಮಿಯಲ್ಲಿ 40 ಜನ ಸದಸ್ಯರಿರಬೇಕೆಂದು ತೀರ್ಮಾನಿಸಿ, ಮೊದಲ 34 ಜನರನ್ನು ಸಂಘ ನಾಮಕರಣ ಮಾಡಿತು. ಸಂಘದ ಕಾರ್ಯಕಲಾಪಗಳನ್ನು, ಮಂಡಲಿ ಮತ್ತು ಪ್ರಧಾನಾಡಳಿತ ಮಂಡಲಿಯ ಕೆಲಸಕಾರ್ಯಗಳ ಕಚೇರಿಗಳ ಸ್ಥಾಪನೆ ಹಾಗು ಹೊಸ ಸದಸ್ಯರನ್ನು ಆರಿಸುವ ಕ್ರಮ - ಮುಂತಾದುವುಗಳನ್ನು ಸಭೆಯೊಂದರಲ್ಲಿ ತೀರ್ಮಾನಿಸಲಾಯಿತು. ಅಕೆಡಮಿಯ ವ್ಯವಹಾರದಲ್ಲಿನ ಯಾವುದೇ ವಿಷಯದ ಮೇಲೆ ತೀರ್ಮಾನ, ಅಧ್ಯಕ್ಷರ ಮತ್ತು ಸಿಬ್ಬಂದಿಯ ನೇಮಕ, ಅಥವಾ ಯಾವುದೇ ತಿದ್ದುಪಡಿ ಮೊದಲಾದುವನ್ನು ಮಾಡಬೇಕಾದರೆ ಸಾರ್ವಭೌಮರ ಅನುಮತಿ ಪಡೆಯಬೇಕಾದದ್ದು ಅತ್ಯಗತ್ಯ. ಅಧಿಕಾರ ವಹಿಸಿಕೊಳ್ಳುವ 40 ಜನ ರಾಯಲ್ ಸದಸ್ಯರು ಮಂಡಳಿಯ ಹಾಗೂ ವಾರ್ಷಿಕ ಪ್ರದರ್ಶನಗಳ ಆಡಳಿತವನ್ನು ಒಂದು ಚಕ್ರೀಯ ಕ್ರಮದಲ್ಲಿ ನೋಡಿಕೊಳ್ಳುತ್ತಾರೆ. 1769 ಮತ್ತು 1918ರಲ್ಲಿ ಅಕೆಡಮಿಯಲ್ಲಿ ಎರಡು ಗಮನಾರ್ಹ ಬದಲಾವಣೆಗಳು ಕಂಡುಬಂದುವು. 30ಕ್ಕಿಂತ ಹೆಚ್ಚಿನ ಮತ್ತು 35ಕ್ಕೆ ಮೀರದ ಒಂದು ಸಂಗಡಿಗರ ಕೂಟವೊಂದು 1769ರಲ್ಲಿ ರಚಿತವಾಯಿತು. ಈ ಕೂಟ ಅಕೆಡಮಿಯ ಸದಸ್ಯರನ್ನು ಚುನಾಯಿಸುವ ವಿವಿದ ಸಮಿತಿಗಳಲ್ಲಿ ಭಾಗವಹಿಸುತ್ತಿತ್ತು. 1918ರ ಬದಲಾವಣೆಯೆಂದರೆ, 75 ವರ್ಷಕ್ಕೆ ಕಾಲಿಡುವ ಅಕೆಡಮಿಯ ಸದಸ್ಯರನ್ನು ಹಿರಿಯ ಸದಸ್ಯರೆಂದೂ (ಸೀನಿಯರ್ ಅಕೆಡಮಿಷಿಯನ್ಸ್) ಮತ್ತು ಹಿರಿಯ ಸಂಗಡಿಗರೆಂದೂ (ಸೀನಿಯರ್ ಅಸೋಸಿಯೇಟ್್ಸ್ಸ) ವಿಭಾಗ ಮಾಡಿದ್ದು, ಇಂಥವರು ಯಾವುದೇ ಕಚೇರಿ ಅಥವಾ ಸಮಿತಿಯಲ್ಲಿ ಕೆಲಸ ಮಾಡಲು ಅರ್ಹರಾಗಿಲ್ಲದಿದ್ದರೂ ಅವರು ಜನರಲ್ ಅಸೆಂಬ್ಲಿಯಲ್ಲಿ ತಮ್ಮ ಮತ ಚಲಾಯಿಸುವ ಹಕ್ಕು ಮತ್ತು ಇನ್ನಿತರ ಹಕ್ಕುಗಳನ್ನು ಹೊಂದಿದವರಾಗಿದ್ದರು. ಇಂಥ ಸದಸ್ಯರಿಂದ ಮತ್ತು ಮರಣಹೊಂದಿದ ಸದಸ್ಯರಿಂದ ತೆರವಾದ ಸ್ಥಾನಕ್ಕೆ ಸರ್ವಸದಸ್ಯರ ಸಭೆಯಲ್ಲಿ ಚುನಾವಣೆ ನಡೆದು ಆಯಾ ಸ್ಥಾನಕ್ಕೆ ಆಯ್ಕೆಯನ್ನು ನಡೆಸಲಾಗುತ್ತಿತ್ತು. ಸಾರ್ವಭೌಮರ ಸಹಿ ಹೊಂದಿರುವ ಡಿಪ್ಲೊಮ ಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಮುಂಚಿತವಾಗಿ ಪ್ರತಿಯೊಬ್ಬ ಹೊಸ ರಾಯಲ್ ಸದಸ್ಯನೂ ತನ್ನ ಕಲಾನಿಪುಣತೆಯ ಒಂದು ಮಾದರಿಯನ್ನು ಅಕೆಡಮಿಗೆ ಅರ್ಪಿಸಬೇಕಾಗುತ್ತದೆ. 1868ರಲ್ಲಿ ತನ್ನ ಶತಮಾನೋತ್ಸವವನ್ನಾಚರಿಸಿದ ರಾಯಲ್ ಅಕೆಡಮಿ ಲಂಡನ್ನಿನ ಪಿಕ್ಯಾಡಿಲ್ಲಿಯಲ್ಲಿರುವ ಬರ್ಲಿಂಗ್ಟನ್ ಹೌಸ್ನಲ್ಲಿ ಈಗ ತನ್ನ ಕಚೇರಿಯನ್ನು ನಡೆಸುತ್ತಿದೆ. ಅಲ್ಲದೆ ಬರ್ಲಿಂಗ್ಟನ್ ಹೌಸಿನ ಹೊರಗಡೆ ಸ್ವಂತ ಖರ್ಚಿನಲ್ಲಿಯೇ ಸಭಾಂಗಣವನ್ನೂ ಉದ್ಯಾನವನದ ಒಂದು ಭಾಗದಲ್ಲಿ ಶಾಲೆಗಳನ್ನೂ ನಿರ್ಮಿಸಿದೆ. ಈಗ ಈ ಭವನವನ್ನು ವಿಸ್ತರಿಸಲಾಗಿದೆ. 1769ರಿಂದಲೂ ಈ ಅಕೆಡಮಿ ಜನಪ್ರಿಯವಾದ ತನ್ನ ಕಲಾಪ್ರದರ್ಶನವನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬ ಸದಸ್ಯನೂ ಆರಕ್ಕೆ ಮೀರದಂತೆ ತನ್ನ ಕಲಾಕೃತಿಗಳನ್ನು ಕಳುಹಿಸಿಕೊಡಲು ಅವಕಾಶವಿದೆ. ಪ್ರತಿ ವರ್ಷವೂ 10,000 ಹೆಚ್ಚು ಕಲಾಕೃತಿಗಳು ಬಂದು ಸುಮಾರು 1,500ನ್ನು ಪ್ರದರ್ಶಿಸಲಾಗುತ್ತದೆ. ಮಾರಾಟವಾದ ಯಾವುದೇ ಕಲಾಕೃತಿಯ ಮೇಲೆ ಯಾವುದೇ ರೀತಿಯ ಶೇಕಡ ರುಸುಮನ್ನು ಸಂಗ್ರಹಿಸಲಾಗುವುದಿಲ್ಲ. ಮುಖ್ಯ ಸಭಾಂಗಣದಲ್ಲಿ ನಡೆಯುವ ಚಳಿಗಾಲದ ಪ್ರದರ್ಶನ 1870ರಲ್ಲಿ ಪ್ರಾರಂಬವಾಯಿತು. ಇದರಲ್ಲಿ ಪ್ರಾಚೀನ ಕಲಾನಿಪುಣರ ಅಂತಾರಾಷ್ಟ್ರೀಯ ಖ್ಯಾತಿಗಳಿಸಿರುವ ಅತ್ಯುತ್ತಮ ಕಲಾಕೃತಿಗಳನ್ನೂ ಪ್ರದರ್ಶಿಸಲಾಗುತ್ತದೆ. 1952ರಿಂದ ಈ ಸಭಾಂಗಣವನ್ನು ವರ್ಷವಿಡೀ ವಿಶೇಷ ಎರವಲು ಪಡೆದ ಪ್ರದರ್ಶನಗಳಿಗೋಸ್ಕರವಾಗಿ ಉಪಯೋಗಿಸಲಾಗುತ್ತಿದೆ. ರಾಯಲ್ ಅಕೆಡಮಿ ನಡೆಸುತ್ತಿರುವ ಶಾಲೆಯ ಶಿಕ್ಷಣವನ್ನು ಕೈಗೊಳ್ಳಲು ಆಸಕ್ತಿಯುಳ್ಳ ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಉತ್ತೀರ್ಣರಾದವರನ್ನು ಚಿತ್ರಕಲೆ ಮತ್ತು ಮೂರ್ತಿಶಿಲ್ಪ ಕಲಾಶಾಲೆಗಳಿಗೆ ಮೂರು ತಿಂಗಳ ಅವಧಿಗೆ ಸೇರಿಸಿಕೊಳ್ಳಲಾಗುತ್ತದೆ. ಇದಾದ ನಂತರ ಸಮ್ಮತಿ ದೊರೆತಲ್ಲಿ ಅವರನ್ನು ನಾಲ್ಕು ವರ್ಷದ ವಿದ್ಯಾರ್ಥಿವೇತನಸಹಿತ ಶಿಕ್ಷಣಕ್ಕೆ ಕಳುಹಲಾಗುತ್ತದೆ. ವಾಸ್ತುಶಿಲ್ಪದ ಶಾಲೆ 1947ರವರೆಗೂ ಈ ಕ್ರಮದಲ್ಲಿಯೇ, ಮುಂದುವರಿದು ಬಂದು ಒಂದು ವರ್ಷ ಅವಧಿಯ ಸ್ನಾತಕೋತ್ತರ ಶಿಕ್ಷಣದ ಸೌಲಭ್ಯವನ್ನೂ ಕಲ್ಪಿಸಿದೆ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಧನಸಹಾಯವನ್ನು ಎಂದೂ ಈ ಅಕೆಡಮಿ ಸ್ವೀಕರಿಸಿಲ್ಲ. ತನ್ನ ಅಸ್ತಿತ್ವದ ಮೊದಲ 11 ವರ್ಷಗಳಲ್ಲಿ ಇದರ ಆರ್ಥಿಕ ಪರಿಸ್ಥಿತಿ ಹದಗೆಟ್ಟು ದೊರೆಯೇ ತನ್ನ ರಾಜಧನದಿಂದ ಇದಕ್ಕೆ ಸಹಾಯಮಾಡಬೇಕಾಗಿ ಬಂದ ಸಂದರ್ಭವೊಂದನ್ನು ಬಿಟ್ಟರೆ ಆರ್ಥಿಕವಾಗಿ ಇದು ಒಂದು ಸ್ವಾವಲಂಬಿ ಸಂಸ್ಥೆ. ಸಂಸ್ಥೆಯ ಭವನದ ಖರ್ಚು, ಸಾಮಾನ್ಯಾಡಳಿತದ ಖರ್ಚು - ಮುಂತಾದ ಖರ್ಚುಗಳಿಗೆ, ಪ್ರದರ್ಶನಕ್ಕೆ ಸಾರ್ವಜನಿಕರು ನೆರವು ನೀಡುತ್ತಾರೆ. ಇದಲ್ಲದೆ ಈ ಅಕೆಡಮಿ ವಿದ್ಯಾರ್ಥಿವೇತನಗಳನ್ನು ನೀಡಲು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನೀಯಲು, ತೊಂದರೆಗೊಳಗಾಗಿರುವ ಕಲಾವಂತರಿಗೆ ವಾರ್ಷಿಕ ಸಹಾಯಧನವನ್ನೀಯಲು ಮತ್ತು ಗ್ರೇಟ್ ಬ್ರಿಟನ್ನಿನಲ್ಲಿರುವ ಪ್ರತಿಭಾವಂತ ಕಲಾನಿಪುಣರ ಕಲಾಕೃತಿಗಳನ್ನು ಕೊಳ್ಳಲೆಂದೇ ಕೆಲವು ದ್ರವ್ಯನಿಧಿ ಸಂಸ್ಥೆಗಳಿಂದ ಧನವನ್ನು ಪಡೆಯುತ್ತಿದೆ.
ಪ್ರಾಚೀನ ಭಾರತದ ಅಕೆಡಮಿಗಳು
[ಬದಲಾಯಿಸಿ]ಪ್ರಾಚೀನ ಗ್ರೀಸಿನಲ್ಲಿ ಮತ್ತು ಮಧ್ಯಯುಗದ ಯುರೋಪಿನಲ್ಲಿ ಇದ್ದಂತೆ ಭಾರತದಲ್ಲೂ ವೇದಗಳ ಕಾಲದಿಂದಲೂ ಪ್ರಸಿದ್ಧವಾದ ವಿದ್ಯಾಪೀಠಗಳಿದ್ದುವು. ಇವುಗಳಲ್ಲಿ ಬ್ರಾಹ್ಮಣ ವಿದ್ಯಾಪೀಠಗಳು ತುಂಬ ಪ್ರಾಚೀನವಾದುವು. ವಸಿಷ್ಠ, ವಿಶ್ವಾಮಿತ್ರ, ಯಾಜ್ಞವಲ್ಕ್ಯ ಮುಂತಾದ ಋಷಿಗಳು ತಮ್ಮ ಆಶ್ರಮಗಳಲ್ಲಿ ಅನೇಕ ಶಿಷ್ಯರಿಗೆ ವಿದ್ಯೆ ಕಲಿಸುತ್ತ್ತಿದ್ದರೆಂದೂ ತಮ್ಮ ಶಿಷ್ಯವರ್ಗವನ್ನು ಕಾಪಾಡಲು ಜನಕ ಮುಂತಾದ ರಾಜರುಗಳಿಂದ ಕೊಂಬುಗಳಿಗೆ ಚಿನ್ನದ ನಾಣ್ಯಗಳನ್ನು ಕಟ್ಟಿದ್ದ ನೂರಾರು ಹಸುಗಳನ್ನು ಪಡೆಯುತ್ತಿದ್ದರೆಂದೂ ತಿಳಿಯುತ್ತದೆ. ಒಂದೇ ಕಾಲದಲ್ಲಿ ಸಾವಿರ ವಿದ್ಯಾರ್ಥಿಗಳನ್ನು ಸಂರಕ್ಷಿಸಿ ವಿದ್ಯೆ ಕಲಿಸಿದ ಗುರುವಿಗೆ ಕುಲಪತಿಯೆಂದು ಹೆಸರಿತ್ತು. ಅಂಥ ಕುಲಪತಿಗಳು ವೇದ ಕಾಲದಿಂದ ಇತ್ತೀಚಿನವರೆಗೂ ಇದ್ದರು. ಕಾಶೀಕ್ಷೇತ್ರ ಪ್ರಸಿದ್ಧರಾದ ಕುಲಪತಿಗಳಿಗೆ ತವರು. ಈಗಲೂ ಅಲ್ಲಿ ಬ್ರಾಹ್ಮಣ, ಜೈನ, ವೀರಶೈವ ವಿದ್ಯಾಪೀಠಗಳಿವೆ. ಬಹಳ ಹಿಂದಿನ ಕಾಲದಿಂದ ಭಾರತದ ನಾನಾ ಭಾಗಗಳಿಂದ ಉಚ್ಚಶಿಕ್ಷಣ ಪಡೆಯಲು ಕಾಶಿಗೆ ಹೋಗಿ ಅನೇಕ ವರ್ಷಗಳ ಕಾಲ ಅಲ್ಲಿ ವ್ಯಾಸಂಗ ನಡೆಸಿ ತಮ್ಮ ತಮ್ಮ ಸ್ಥಾನಗಳಿಗೆ ಹಿಂತಿರುಗಿ ತಾವು ಕಲಿತ ವಿದ್ಯೆಯನ್ನು ದಾನಮಾಡುವುದು ಸಂಪ್ರದಾಯವಾಗಿತ್ತು. ಹಿಂದಿನಷ್ಟಿಲ್ಲದಿದ್ದರೂ ಈಗಲೂ ಹಲಕೆಲವು ದಾಕ್ಷಿಣಾತ್ಯರು ಆ ವಿದ್ಯಾಪೀಠಗಳಲ್ಲಿ ವ್ಯಾಸಂಗ ಮಾಡಿ ಬರುತ್ತಿದ್ದಾರೆ. ಬ್ರಾಹ್ಮಣ ವಿದ್ಯಾಪೀಠಗಳು ಸಾಮಾನ್ಯವಾಗಿ ಒಬ್ಬ ಗುರುವಿನ ವಿದ್ಯಾಪೀಠಗಳು. ಕೆಳಗಿನ ದರ್ಜೆಯ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಲು ತನ್ನೊಂದಿಗೆ ಆತ ಮೇಲಿನ ಮಟ್ಟವನ್ನು ಮುಟ್ಟಿದ ತನ್ನ ವಿದ್ಯಾರ್ಥಿಗಳ ನೆರವು ಪಡೆಯುತ್ತಿದ್ದ. ಬೌದ್ಧ ವಿದ್ಯಾನಿಲಯಗಳು ಬ್ರಾಹ್ಮಣ ವಿದ್ಯಾಪೀಠಗಳಂತೆ ಗುರುಗೃಹಗಳಲ್ಲ. ಗುರುಗೃಹಗಳ ವಾತಾವರಣ ಕುಟುಂಬದ ವಾತಾವರಣ. ಆ ಆವರಣದಲ್ಲಿ ಹೆಚ್ಚು ಮಂದಿ ವಿದ್ಯಾರ್ಥಿಗಳಿಗೆ ಅವಕಾಶವಿರಲಿಲ್ಲ. ಬೌದ್ಧ ವಿದ್ಯಾಪೀಠಗಳಾದರೋ ಕುಟುಂಬ ವಾತಾವರಣದಲ್ಲಿ ಬೆಳದುವಲ್ಲ; ಸನ್ಯಾಸಿಗಳ ವಾತಾವರಣದಲ್ಲಿ ಬೆಳೆದವು. ಒಂದೇ ಸ್ಥಳದಲ್ಲಿ ಸಾವಿರಾರು ಬೌದ್ಧ ಸಂನ್ಯಾಸಿ ಸಂಘಗಳಿರುವುದು ಬುದ್ಧನ ಕಾಲದಲ್ಲಿ ಸಾಮಾನ್ಯವಾಗಿತ್ತು. ಆದ್ದರಿಂದ ಒಂದೇ ಬೌದ್ಧ ವಿದ್ಯಾಪೀಠದಲ್ಲಿ ಸಾವಿರ ಉಪಾಧ್ಯಾಯರೂ ಹತ್ತು ಸಾವಿರ ವಿದ್ಯಾರ್ಥಿಗಳೂ ಇರಲು ಸಾಧ್ಯವಾಯಿತು. ಆಗಿನ ಕಾಲದಲ್ಲಿ ಬೌದ್ಧಧರ್ಮದಲ್ಲಿ ಜನರಿಗೆ ವಿಶೇಷವಾದ ಭಕ್ತಿ ಇತ್ತು. ರಾಜರೂ ವರ್ತಕರೂ ಸಾಮಾನ್ಯ ಜನರೂ ನಾ ಮುಂದು ತಾ ಮುಂದೆಂದು ನೆರವು ನೀಡಲು ಬರುತ್ತಿದ್ದರು. ಬೌದ್ಧಭಿಕ್ಷುಗಳೂ ತಮ್ಮ ಊಟವಸತಿಗಳಿಗಾಗಿ ಸಮಾಜವನ್ನು ಆಶ್ರಯಿಸಬೇಕಾಗಿತ್ತು. ಸಮಾಜದ ಆಶ್ರಯವನ್ನು ಸಂಪಾದಿಸಲು ಅವರು ಜನರಿಗೆ ಧರ್ಮವನ್ನಲ್ಲದೆ ಬೇರೆ ಬೇರೆ ಶಾಸ್ತ್ರವಿದ್ಯೆಯನ್ನೂ ಕಲಿಸುತ್ತಿದ್ದರು. ಆಗಾಗ ವಿದ್ವದ್ಗೋಷ್ಠಿಗಳನ್ನೂ ವಾದ್ಯಗೋಷ್ಠಿಗಳನ್ನೂ ಏರ್ಪಡಿಸಿ ಜನರ ಗಮನವನ್ನು ಸೆಳೆಯುತ್ತಿದ್ದರು. ಬೌದ್ಧ ಧರ್ಮದ ವಿದ್ಯಾಪೀಠಗಳಲ್ಲಿ ತುಂಬ ಪ್ರಸಿದ್ಧವಾದವು ನಾಲಂದ, ವಿಕ್ರಮಶೀಲ ಮತ್ತು ತಕ್ಷಶಿಲ ವಿದ್ಯಾನಿಲಯಗಳು. ಈ ವಿದ್ಯಾನಿಲಯಗಳು ಬೌದ್ಧ ಸನ್ಯಾಸಿಗಳಿಗಲ್ಲದೆ, ಬೌದ್ಧ ಮಾನವರಿಗೂ ಬೌದ್ಧರಲ್ಲದವರಿಗೂ ತೆರಪಾಗಿದ್ದವು (ಇಲ್ಲಿ ಮಾನವ ಎಂದರೆ ಸಂನ್ಯಾಸಿಯಲ್ಲದವ ಎಂದು ಅರ್ಥ). ಇವುಗಳಲ್ಲಿ ಬೌದ್ಧಧರ್ಮವನ್ನಲ್ಲದೆ ವೇದಗಳನ್ನೂ, ಹೇತು ವಿದ್ಯೆಯನ್ನೂ, ವ್ಯಾಕರಣವನ್ನೂ, ವೈದ್ಯವಿದ್ಯೆಯನ್ನೂ ಪ್ರೌಢವಾಗಿ ಅಭ್ಯಾಸಮಾಡುತ್ತಿದ್ದರು. ಯುವಾನ್ ಚಾಂಗ್ ಯೋಗವಿದ್ಯೆಯನ್ನು ನಾಲಂದದಲ್ಲಿ ಐದು ವರ್ಷಗಳ ಕಾಲ ಶೀಲಭದ್ರನ ಶಿಷ್ಯನಾಗಿ ಕಲಿತ. ಅವನು ಅಲ್ಲಿ ಯೋಗವಿದ್ಯೆಯನ್ನು ಕಲಿಯುತ್ತಿದ್ದಾಗ 1,500 ಉಪಾಧ್ಯಾಯರೂ 10,000 ವಿದ್ಯಾರ್ಥಿಗಳೂ ಇದ್ದುದಾಗಿ ತಿಳಿಸುತ್ತಾನೆ. ಪ್ರತಿದಿನವೂ ಉಪನ್ಯಾಸಗಳಿಗಾಗಿ ಚರ್ಚಾಕೂಟಗಳಿಗಾಗಿ ಒಂದು ನೂರು ವೇದಿಕೆಗಳನ್ನು ಏರ್ಪಡಿಸುತ್ತಿದ್ದರು. ವಿದ್ಯೆಯಲ್ಲಿ ಪಾರಂಗತರಾದವರಿಗೆ ಪಂಡಿತ ಎಂಬ ಬಿರುದನ್ನು ಕೊಡುವ ಪದ್ಧತಿ ಇತ್ತು. ಒಂದು ಸಲ ಕೇಳಿದ ಮಾತ್ರದಿಂದಲೇ ಒಂದು ಗ್ರಂಥವನ್ನು ಸ್ಮೃತಿಯಲ್ಲಿ ಧಾರಣೆಮಾಡಿ ಅದನ್ನು ಪುನರುಚ್ಚರಣೆ ಮಾಡುವಷ್ಟು ಗ್ರಹಣಶಕ್ತಿಯನ್ನು ಬೆಳೆಸಿಕೊಂಡವರಿದ್ದರೆಂದು ಇತ್ಸಿಂಗನ ವರದಿಯಿಂದ ತಿಳಿಯಬರುತ್ತದೆ. ಇಲ್ಲಿನ ಪುಸ್ತಕ ಭಂಡಾರಗಳ ವೈಖರಿ ಅದ್ಭುತವಾದದ್ದು. ಅವು ವಿದ್ಯಾಪೀಠಗಳ ಮುಖ್ಯ ಭಾಗಗಳು. ವಿದ್ಯಾಪೀಠಗಳ ಕಟ್ಟಡಗಳು ಕೆಲವು ಹಸ್ತಪ್ರತಿಗಳಿಗೆ ಮೀಸಲಾಗಿದ್ದವು. ಆ ಕಟ್ಟಡಗಳು ಅನೇಕ ಅಂತಸ್ತುಗಳುಳ್ಳವು. ಅವುಗಳಲ್ಲಿ ಮೂರು ಪ್ರಖ್ಯಾತವಾಗಿದ್ದುವು. ಒಂದರ ಹೆಸರು ರತ್ನದಧಿ, ಇನ್ನೊಂದರದು ರತ್ನಸಾಗರ, ಮತ್ತೊಂದರದು ರತ್ನರಂಜಕ. ಮೊದಲನೆಯದು ಒಂಬತ್ತು ಅಂತಸ್ತುಗಳ ಕಟ್ಟಡ. ಇಲ್ಲಿನ ಕಟ್ಟಡಗಳು ವಿಸ್ತಾರದಲ್ಲೂ ಸೌಂದರ್ಯದಲ್ಲೂ ಅನುಪಮವಾದುದೆಂದು ಯುವಾನ್ ಚಾಂಗ್ ಅಲ್ಲದೆ ಹ್ವೂಯ್ಲಿ ಮುಕ್ತಕಂಠದಿಂದ ಹೊಗಳಿರುತ್ತಾರೆ. ಈ ವಿದ್ಯಾನಿಲಯದಲ್ಲಿ ಬೌದ್ಧ ಸಂನ್ಯಾಸಿಗಳಲ್ಲದೆ ಎಲ್ಲ ಮತದವರೂ ಭಾಗವಹಿಸುತ್ತಿದ್ದರು. ಇವುಗಳ ಖ್ಯಾತಿ ಪುರ್ವದೇಶಗಳಲ್ಲೆಲ್ಲ ಹಬ್ಬಿ ಹೊರದೇಶದವರೂ ಇಲ್ಲಿಗೆ ಬಂದು ಹಲವು ವರ್ಷಗಳ ಕಾಲ ಇವುಗಳಲ್ಲಿ ಸೇರಿ ವ್ಯಾಸಂಗ ನಡೆಸುತ್ತಿದ್ದರು. 5ನೆಯ ಶತಮಾನದಿಂದ 8ನೆಯ ಶತಮಾನದವರೆಗೆ ಚೀನ ದೇಶದಿಂದ ಭಾರತಕ್ಕೆ ವಿದ್ಯಾರ್ಜನೆಗಾಗಿ ಬಂದವರ ಸಂಖ್ಯೆ 197 ಎಂದು ಒಬ್ಬ ಆಧುನಿಕ ಚೀನಾ ವಿದ್ವಾಂಸ ದಾಖಲಿಸಿದ್ದಾನೆ. 10-12 ಸಾವಿರ ಜನರು ಒಂದೇ ಕಡೆ ವಾಸಮಾಡುತ್ತ ವ್ಯಾಸಂಗ ಮಾಡುತ್ತ ಬಾಳಬೇಕಾದರೆ ಆ ವಿದ್ಯಾಪೀಠಗಳು ಎಷ್ಟು ವಿಶಾಲವಾಗಿರಬೇಕು ಎಂಬುದನ್ನು ಊಹಿಸಿಕೊಳ್ಳಬಹುದು. ವಿಶಾಲವಾದ ಕೊನೆಯ ಪ್ರಾಕಾರದಲ್ಲಿ ವಸತಿಗೃಹಗಳೂ ಈ ಮಧ್ಯೆ ಉಪನ್ಯಾಸ ಮಂದಿರಗಳೂ ಪುಸ್ತಕ ಭಂಡಾರಗಳೂ ಇರುತ್ತಿದ್ದವು. ವಿಕ್ರಮಶೀಲ ವಿದ್ಯಾಲಯಕ್ಕೆ ಆರು ಮಹಾದ್ವಾರಗಳಿದ್ದುವು. ಒಂದೊಂದು ಮಹಾದ್ವಾರದ ರಕ್ಷಕನಾಗಿ ಒಬ್ಬೊಬ್ಬ ದ್ವಾರಪಾಲಕ, ಪಂಡಿತ ನೇಮಕವಾಗಿರುತ್ತಿದ್ದ. ಇವನ ಒಪ್ಪಿಗೆ ಇಲ್ಲದೆ ಮಹಾವಿಹಾರಕ್ಕೆ ಪ್ರವೇಶವಿರಲಿಲ್ಲ. ಪಂಡಿತನೆಂದಾಗಲಿ ಅಥವಾ ವಿದ್ಯೆಯಲ್ಲಿ ನಿಜವಾದ ಆಸಕ್ತಿಯುಳ್ಳವನೆಂ ದಾಗಲಿ ಅಥವಾ ಅಲ್ಲಿನ ವಿದ್ಯೆಯನ್ನು ಕಲಿಯಲು ತಕ್ಕ ಯೋಗ್ಯತೆಯನ್ನು ಪಡೆದವನೆಂದಾಗಲಿ ದ್ವಾರಪಂಡಿತ ನಿಶ್ಚಯಿಸಿದ ವಿನಾ ಯಾವ ದ್ವಾರದಲ್ಲೂ ಪ್ರವೇಶವಿರಲಿಲ್ಲ. ದೀಪಂಕರನನ್ನು ಟಿಬೆಟ್ಟಿಗೆ ಕರೆದುಕೊಂಡು ಹೋಗಬೇಕೆಂದು ಭಾರತಕ್ಕೆ ಬಂದಿದ್ದ ಗನ್-ಥಾ-ಪಾ ವಿಕ್ರಮಶೀಲಕ್ಕೆ ಬಂದಾಗ ಸೂರ್ಯಾಸ್ತವಾಗಿತ್ತು. ಆದ್ದರಿಂದ ಹೊರಬಾಗಿಲುಗಳನ್ನು ಮುಚ್ಚಿದ್ದರು. ಅವನೂ ಅವನ ಸಂಗಡಿಗರೂ ಬಾಗಿಲ ಹೊರಗಿದ್ದೇ ರಾತ್ರಿಯನ್ನು ಕಳೆಯಬೇಕಾಗಿತ್ತು. ತನ್ನ ದೇಶದವನಾದ ವಿಕ್ರಮಸಿಂಗ್ ಎಂಬ ಭಿಕ್ಷುವಿನ ಅನುಗ್ರಹದಿಂದ ಅವರಿಗೆ ವಿದ್ಯಾಪೀಠಕ್ಕೆ ಪ್ರವೇಶ ದೊರೆತರೂ ಅವನು ದೀಪಂಕರನನ್ನು ಕಂಡು ತಾವು ಅಲ್ಲಿಗೆ ಬಂದ ಉದ್ದೇಶವನ್ನು ಅವನಿಗೆ ತಿಳಿಸಲು ಕೆಲವು ಕಾಲ ಕಾಯಬೇಕಾಯಿತು. ದೀಪಂಕರ ಆಗ ವಿಕ್ರಮಶೀಲ ವಿದ್ಯಾಲಯದ ಆಡಳಿತ ಮುಖ್ಯಸ್ಥನಾಗಿದ್ದ. ಅಲ್ಲಿನ ನೂರೆಂಟು ಬೌದ್ಧ ಚೈತ್ಯಗಳ ಆಡಳಿತ ಅವನ ಕೈಯಲ್ಲಿತ್ತು. ಆ ಜವಾಬ್ದಾರಿಯಿಂದ ನಿವೃತ್ತನಾಗಲು ಹದಿನೆಂಟು ತಿಂಗಳ ಕಾಲ ಹಿಡಿಯುವುದಾಗಿ ದೀಪಂಕರ ಅವನಿಗೆ ಹೇಳಿದ. ಅವರು ಅಲ್ಲಿಯೇ ಹದಿನೆಂಟು ತಿಂಗಳ ಕಾಲ ಕಾಯಬೇಕಾಯಿತು. ಅಲ್ಲಿನ ಕಾರ್ಯ ಕಲಾಪಗಳು, ವ್ಯವಸ್ಥೆ ಅಷ್ಟು ಮಹತ್ತರವಾಗಿತ್ತು. 1197ರಲ್ಲಿ ಮುಸ್ಲಿಮರ ದಾಳಿಗೆ ಸಿಕ್ಕಿ ಅದು ನಾಮಾವಶೇಷವಾಯಿತು. ಬೌದ್ಧ ಭಿಕ್ಷುಗಳು ಪುರ್ಣವಾಗಿ ಹತರಾದರು. ಈಗ ಉಳಿದಿರುವುದು ಬರಿಯ ಮಣ್ಣಿನ ದಿಬ್ಬಗಳು, ಮುರಿದವಿಗ್ರಹಗಳು, ಚಲ್ಲಾಪಿಲ್ಲಿಯಾಗಿ ಬಿದ್ದಿರುವ ಚೂರುಪಾರುಗಳು. ಪ್ರಾಕ್ತನ ಸಂಶೋಧಕರು ದಿಬ್ಬಗಳನ್ನು ಅಗೆದು ಸಂಗ್ರಹಿಸಿದ ಅವಶೇಷಗಳನ್ನು ಸೇರಿಸಿ ಇಡುತ್ತಿದ್ದಾರೆ. ಇವುಗಳಲ್ಲಿ ಆ ವಿದ್ಯಾನಿಲಯದ ಮುದ್ರೆಯೊಂದಿದೆ. ನಾಲಂದ ಬೌದ್ಧಭಿಕ್ಷುಸಂಘದ ಮಹಾವಿಹಾರವೆಂದು ಇದರ ಮೇಲೆ ಕೆತ್ತಿದೆ. ಇದೇ ವಿಧವಾದ ಮಹಾವಿಹಾರ ವಲ್ಲಭಿಯಲ್ಲಿತ್ತೆಂದು ಇತ್ಸಿಂಗ್ ಮತ್ತು ಯುವಾನ್ ಚಾಂಗ್ ವರದಿಗಳು ತಿಳಿಸುತ್ತವೆ. ವಿಕ್ರಮಶೀಲ ವಿದ್ಯಾನಿಲಯ ನಾಲಂದ ವಿದ್ಯಾಲಯಕ್ಕಿಂತ ಈಚಿನದು. ಅದರ ವಿಚಾರ ನಮಗೆ ತಿಳಿದಿರುವುದು ಟಿಬೆಟ್ಟಿನ ಸಾಹಿತ್ಯದಿಂದ, ಮುಖ್ಯವಾಗಿ ತಾರಾನಾಥನ ಭೌದ್ಧಧರ್ಮಚರಿತ್ರೆಯಿಂದ. ದೀಪಂಕರ 1034ರಿಂದ 1038ರವರೆಗೆ ಆ ವಿದ್ಯಾನಿಲಯದ ಅಧ್ಯಕ್ಷನಾಗಿದ್ದನೆಂದು ತಿಳಿದುಬಂದಿದೆ. ಈ ಮಹಾವಿಹಾರಗಳು ಮೊದಲಿನಿಂದ ಕೊನೆಯವರೆಗೂ ಮುಖ್ಯವಾಗಿ ಬೌದ್ಧ ಸಂನ್ಯಾಸಿಗಳ ವಿಹಾರಗಳು. ಬೌದ್ಧಧರ್ಮದ ತಿಳಿವಿಗೆ ಮಾತ್ರ ಮೀಸಲಾದವಲ್ಲ: ಸರ್ವಶಾಸ್ತ್ರಗಳನ್ನು ಬೋಧಿಸುವ ಯುರೋಪ್ ನ ಮಧ್ಯಯುಗದ ವಿಶ್ವವಿದ್ಯಾನಿಲಯಗಳಂತೆ ಇದ್ದುವು. ಬೌದ್ಧರು ಬೌದ್ಧೇತರರು ಎಂಬ ಭೇದವಿಲ್ಲದೆ ಇವುಗಳ ಉಪಯೋಗ ಸಾರ್ವತ್ರಿಕವಾಗಿತ್ತು. ಇವುಗಳಲ್ಲಿ ಬೌದ್ಧದರ್ಶನವಲ್ಲದೆ ಭಾರತದ ಸರ್ವದರ್ಶನಗಳನ್ನೂ ವ್ಯಾಸಂಗ ಮಾಡುತ್ತಿದ್ದರು; ಸರ್ವವಿದ್ಯೆಗಳನ್ನೂ - ವ್ಯವಸಾಯ ವಾಸ್ತುಶಿಲ್ಪ ಮುಂತಾದ ಉಪಯೋಗಕರವಾದ ವಿದ್ಯೆಗಳನ್ನೂ ಅಭ್ಯಾಸಮಾಡುತ್ತಿದ್ದರು.
ಆಧುನಿಕ ಭಾರತದ ಪ್ರಮುಖ ಅಕೆಡಮಿಗಳು
[ಬದಲಾಯಿಸಿ]ಸಾಹಿತ್ಯ ಅಕೆಡಮಿ
[ಬದಲಾಯಿಸಿ]ಭಾರತದ ಸಾಹಿತ್ಯಾಭಿವೃದ್ಧಿಗೆ ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಮತ್ತು ಭಾರತದ ಎಲ್ಲ ಭಾಷೆಗಳಲ್ಲಿಯೂ ಇರುವ ಸಾಹಿತ್ಯವನ್ನು ಸಂಘಟಿಸಿ ಸಶಕ್ತವನ್ನಾಗಿ ಮಾಡಲು ಉನ್ನತ ಧ್ಯೇಯಗಳನ್ನು ಹೊಂದಿರುವ ಈ ಸಂಸ್ಥೆಯನ್ನು ಭಾರತ ಸರ್ಕಾರ 1954ರಲ್ಲಿ ಸ್ಥಾಪಿಸಿತು. ಈ ಸಂಘಟನೆ ದೇಶದ ಸಾಂಸ್ಕೃತಿಕ ಏಕತೆಯನ್ನು ಎಲ್ಲೆಡೆಯಲ್ಲಿಯೂ ಸಾಧಿಸಲು ಭಾರತ ಸರ್ಕಾರ ಇಟ್ಟ ಒಂದು ಹೆಜ್ಜೆ. ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವನ್ನು ಪಡೆಯುತ್ತಿರುವ ಈ ಅಕೆಡಮಿ ಸ್ವಯಮಧಿಕಾರವುಳ್ಳದ್ದಾಗಿದೆ. ಅಕೆಡಮಿಯ ಸಾಮಾನ್ಯ ನೀತಿ - ಧೋರಣೆಗಳು ಮತ್ತು ಅದರ ಕಾರ್ಯಕ್ರಮಗಳ ಮೂಲ ತತ್ವ್ತಗಳು - ಇವುಗಳನ್ನು ರೂಪಿಸುವ ಹೊಣೆ ಪ್ರಧಾನಾಡಳಿತಮಂಡಲಿಯದು. ಕಾರ್ಯನಿರ್ವಾಹಕ ಮಂಡಲಿಯ ನೇರ ಪರಿಶೀಲನೆಯ ನಂತರವೇ ಅವುಗಳನ್ನು ಕಾರ್ಯರೂಪಕ್ಕೆ ತರುವುದು. ಪ್ರತಿಯೊಂದು ಭಾಷೆಗೂ ಒಂದೊಂದು ಸಲಹಾ ಮಂಡಲಿಯಿರುತ್ತದೆ. ಇವಲ್ಲದೆ ನಿರ್ದಿಷ್ಟ ಯೋಜನೆಗಳಿಗೆ ಸಂಬಂಧಿಸಿದಂತೆ ವಿಶೇಷ ಸಂಪಾದನಾ ಮಂಡಲಿ ಅಥವಾ ಸಲಹಾ ಮಂಡಲಿಯಿರುತ್ತದೆ. ಭಾರತ ಸರ್ಕಾರದ ರಾಜ್ಯಾಂಗದ ರೀತ್ಯ ಹದಿನೈದು ಭಾಷೆಗಳಿದ್ದರೂ ಈ ಅಕೆಡಮಿ ಇಂಗ್ಲಿಷ್ ಭಾಷೆಯನ್ನು ಸಹ ಅಂಗೀಕಾರ ಮಾಡಿ ಆ ಭಾಷೆಯಲ್ಲೇ ತನ್ನ ಎಲ್ಲ ವ್ಯವಹಾರಗಳನ್ನೂ ನಡೆಸುತ್ತಿದೆ. ಇದುವರೆಗೆ ಈ ಅಕೆಡಮಿ ಪ್ರಾಚೀನ ಹಾಗು ಆಧುನಿಕ ಸಾಹಿತ್ಯ ಕೃತಿಗಳ ಭಾಷಾಂತರ ಸಂಪುಟಗಳನ್ನೂ ಇತರ ಸಾಹಿತ್ಯ ಕೃತಿಗಳ ಪ್ರಕಟಣೆಗಳ ಕಾರ್ಯವನ್ನೂ ಮಾಡಿದೆ. ಭಾಷಾಂತರಕ್ಕೆ ಆರಿಸಿಕೊಂಡ ಕೃತಿಗಳಲ್ಲಿ ಷೇಕ್್ಸಪಿಯರ್, ಮಿಲ್ಟನ್, ವಿಕ್ಟರ್ ಹ್ಯೂಗೋ, ಗಯಟೆ, ಇಬ್ಸನ್, ಟಾಲ್ಸ್ಟಾಯ್ ಮುಂತಾದ ಖ್ಯಾತ ಸಾಹಿತಿಗಳ ಕೃತಿಗಳೂ ಸೇರಿವೆ. ಭಾಷಾಂತರ ಕಾರ್ಯದ ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ಇಂಡಿಯನ್ ಲಿಟರೇಚರ್, ಸಂಸ್ಕೃತದಲ್ಲಿ ಸಂಸ್ಕೃತ ಪ್ರತಿಭ ಎಂಬ ಎರಡು ಪತ್ರಿಕೆಗಳನ್ನೂ ಮತ್ತು ಪುಕ್ಕಟೆಯಾಗಿ ಕೊಡಲೆಂದೇ ನ್ಯೂಸ್ ಬುಲೆಟಿನ್ ಎಂಬ ಇಂಗ್ಲಿಷ್ ಮಾಸಪತ್ರಿಕೆಯನ್ನೂ ಹೊರಡಿಸುತ್ತಿದೆ. ಈ ಸಾಹಿತ್ಯ ಅಕೆಡಮಿ ಹೊರತರಲಿರುವ ಇತರ ಗ್ರಂಥಗಳೆಂದರೆ ಕಾಳಿದಾಸನ ಶಾಕುಂತಲ, ಮಾಳವಿಕಾಗ್ನಿ ಮಿತ್ರ ಮತ್ತು ರಘುವಂಶ; ಸಂಸ್ಕೃತ ಸಾಹಿತ್ಯದ ಕವನ ಸಂಕಲನದ ಏಳು ಸಂಪುಟಗಳು; ಟಿಬೆಟಿಯನ್ ಹಿಂದಿ ನಿಘಂಟು; ತೆಲುಗು ಸಾಹಿತ್ಯದ ಇತಿಹಾಸ; ಹತ್ತು ಸಂಪುಟಗಳಲ್ಲಿ ಮೌಲಾನ ಕಲಾಂ ಆಜಾದರ ಬರೆಹಗಳ ಸಂಗ್ರಹಣಾ ಗ್ರಂಥ ಮತ್ತು ಸರ್ದಾರ್ ಪುರಣ್ಸಿಂಗ್ ಅವರ ಬರೆಹಗಳ ಸಂಗ್ರಹಣಾ ಗ್ರಂಥ. ಭಾರತದ ಹದಿನಾಲ್ಕು ಭಾಷೆಗಳಿಂದಲೂ ಆರಸಿ ಸಂಗ್ರಹಿಸಿರುವ ಭಾರತೀಯ ಕವಿತಾ ಎಂಬ ಕವನ ಸಂಕಲನ ಹತ್ತು ಸಂಪುಟಗಳಷ್ಟು ದೊಡ್ಡದಾಗಿದೆ. ಇದನ್ನು ಅಕೆಡಮಿ ಈಗಾಗಲೇ ಪ್ರಕಟಿಸಿದೆ. ರವೀಂದ್ರ 101 ಕವನಗಳನ್ನೊಳಗೊಂಡಿರುವ ಏಕೋತ್ತರ ಶತಿ ಎಂಬ ಗ್ರಂಥದ ಮೊದಲ ಆರು ಸಂಪುಟಗಳನ್ನು ಮತ್ತು 500 ಕವನಗಳಿರುವ ಗೀತಾಪಂಚಶತಿ ಎಂಬ ಗ್ರಂಥವನ್ನೂ ಈ ಅಕೆಡಮಿ ಪ್ರಕಟಿಸಿದೆ. ಇದಲ್ಲದೆ ರವೀಂದ್ರರ 21 ಸಣ್ಣಕಥೆಗಳ ಸಂಕಲನವಾದ ಏಕವಿಂಶತಿ ಎಂಬ ಪುಸ್ತಕದ ಗುಜರಾತಿ, ಪಂಜಾಬಿ, ಮರಾಠಿ, ಕನ್ನಡ ಮತ್ತು ಒರಿಯ ಭಾಷೆಗಳ ಪ್ರತಿಗಳನ್ನು ಇದು ಹೊರತಂದಿದೆ. 1961ರಲ್ಲಿ ರವೀಂದ್ರರ ಶತಮಾನೋತ್ಸವ ಸಂಚಿಕೆಯನ್ನು ಪ್ರಕಟಿಸಿ, ರೋಲಾ(ಂಡ್)ನ ದಿ ಲೈಫ್ ಆಫ್ ವಿವೇಕಾನಂದ ಎಂಬ ಪುಸ್ತಕವನ್ನೂ ಹೊರ ತಂದಿದೆ. ಭಾರತದ ಯಾವುದೇ ಭಾಷೆಯಲ್ಲಿ ಹಾಗೂ ಇಂಗ್ಲಿಷ್ನಲ್ಲಿ ಶ್ರೇಷ್ಠಮಟ್ಟದ ಕೃತಿಗಳನ್ನು ರಚಿಸುವ ಸಾಹಿತ್ಯತಜ್ಞರಿಗೆ ಪ್ರತಿವರ್ಷವೂ ಆರ್ಥಿಕ ಸಹಾಯದೊಂದಿಗೆ ಪ್ರಶಸ್ತಿ ನೀಡಿ (ರೂ 50,000=00) ಸನ್ಮಾನಿಸುತ್ತಿದೆ ಕನ್ನಡದ ಪ್ರಸಿದ್ಧ ಲೇಖಕರನೇಕರಿಗೆ ಈ ಪ್ರಶಸ್ತಿ ದೊರೆತಿದೆ. ಭಾಷಾಸಮ್ಮಾನ್ ಎಂಬ ಪುರಸ್ಕಾರವನ್ನೂ ನೀಡುತ್ತಿದೆ. ಅಕೆಡಮಿಯ ಪ್ರಾದೇಶಿಕ ಕಚೇರಿಗಳು ಕಲ್ಕತ್ತ ಬೆಂಗಳೂರು ಮತ್ತು ಮದರಾಸುಗಳಲ್ಲಿವೆ.
ಸಂಗೀತ ನಾಟಕ ಅಕೆಡಮಿ
[ಬದಲಾಯಿಸಿ]1953ರಲ್ಲಿ ಭಾರತ ಸರ್ಕಾರದಿಂದ ಸ್ಥಾಪಿತವಾದ ಈ ಸಂಸ್ಥೆ ಸ್ವಯಮಧಿಕಾರವುಳ್ಳದಾಗಿದ್ದು ಸಂಗೀತ, ನೃತ್ಯ ಮತ್ತು ನಾಟಕ ಇವುಗಳ ಪುರೋಭಿವೃದ್ಧಿಗೆ ಹಾಗೂ ಪ್ರಚಾರಕ್ಕಾಗಿ ಶ್ರಮಿಸುತ್ತಿದೆ. ಇದರ ಆಡಳಿತ ನಿರ್ವಹಣೆಯನ್ನು ಪ್ರಧಾನಾಡಳಿತ ಮಂಡಲಿ, ಕಾರ್ಯನಿರ್ವಾಹಕ ಮಂಡಲಿ, ಆರ್ಥಿಕ ಸಮಿತಿಗಳು ಹೊತ್ತಿವೆ. ಇವಲ್ಲದೆ ಇತರ ವಿಶೇಷ ಸಮಿತಿಗಳನ್ನು ರಚಿಸಲು ಕಾರ್ಯ ನಿರ್ವಾಹಕಮಂಡಲಿ ಅಧಿಕಾರವನ್ನು ಹೊಂದಿದೆ. ಈ ಅಕೆಡಮಿಯ ಕಾರ್ಯಕ್ರಮದಲ್ಲಿ ಛಾಯಾಗ್ರಹಣ, ಧ್ವನಿಮುದ್ರಣ, ಚಿತ್ರೀಕರಣ - ಮುಂತಾದ ಸಾಧನ ಸಲಕರಣೆಗಳಿಂದ ಜಾನಪದ ಕಲೆಯ ಹಾಗೂ ವಸ್ತ್ತು ವಿಶೇಷಗಳ ಸಂಗ್ರಹಣೆ ಒಂದು ಮುಖ್ಯವಾದ ಅಂಶ. ಶಾಸ್ತ್ರೀಯ ಸಂಗೀತ ಹಾಗು ಜಾನಪದ ಸಂಗೀತದ ಧ್ವನಿಮುದ್ರಿಕೆಯ ಸಂಗ್ರಹಣಕ್ಕಾಗಿ ಪ್ರತ್ಯೇಕ ವಿಭಾಗವೇ ಇದೆ. ಸಂಗೀತ ವಾದ್ಯಗಳ ಸಂಗ್ರಹಾಲಯ ಮತ್ತು ಧ್ವನಿಮುದ್ರಣ ಸ್ಟುಡಿಯೊವೊಂದನ್ನು ಈ ಅಕೆಡಮಿ ಹೊಂದಿದೆ. ಸಂಗೀತ, ನೃತ್ಯ ಮತ್ತು ನಾಟಕಗಳಲ್ಲಿ ವಿಶೇಷ ರೀತಿಯ ತರಬೇತಿ ಪಡೆದ ಕಲಾವಿದÀರಿಗೆ ಮತ್ತು ಅಪುರ್ವ ಕಲಾಕೃತಿಗಳಿಗೆ ಇದು ಪ್ರೋತ್ಸಾಹ ನೀಡುತ್ತಿದೆ. ಸಂಗೀತನಾಟಕ ಎಂಬ ತ್ರೈಮಾಸಿಕ ಪತ್ರಿಕೆಯೊಂದನ್ನು ಮತ್ತು ಒಂದು ಪಾಕ್ಷಿಕ ಸುದ್ದಿ ಪತ್ರಿಕೆಯನ್ನು ಇದು ಪ್ರಕಟಿಸುತ್ತಿದೆ. ಮೂರು ವರ್ಷ ಅವಧಿಯ ನಾಟ್ಯಕಲೆಯ ಒಂದು ತರಬೇತಿ ಶಿಕ್ಷಣವನ್ನು ನೀಡುವ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ ಎಂಬ ಸಂಸ್ಥೆಯೊಂದನ್ನು ಈ ಅಕೆಡಮಿ ನಡೆಸುತ್ತಿದೆ. ಮಣಿಪುರಿ ನೃತ್ಯದಲ್ಲಿ ತರಬೇತಿ ಕೊಡಲು ಇಂಪಾಲ್ನಲ್ಲಿ ಜವಹರ್ಲಾಲ್ ನೆಹರು ಡ್ಯಾನ್್ಸ ಅಕೆಡಮಿ ಎಂಬ ಸಂಸ್ಥೆಯನ್ನೂ ಮತ್ತು ದೆಹಲಿಯಲ್ಲಿ ಕಥಕ್ಕಳಿ ನೃತ್ಯದಲ್ಲಿ ತರಬೇತಿ ಕೊಡುವ ಕೇಂದ್ರವೊಂದನ್ನೂ ಈ ಅಕೆಡಮಿ ನಡೆಸುತ್ತಿದೆ. ಕಲಾಭಿವೃದ್ಧಿಯ ಪಥದಲ್ಲಿ ಸಂಶೋಧನೆ, ತರಬೇತಿ, ವ್ಯಾಸಂಗಗೋಷ್ಠಿ, ಉತ್ಸವಾಚರಣೆ, ಸಂಗೀತ, ನೃತ್ಯ, ನಾಟಕಗಳಿಗೆ ಸಂಬಂಧಿಸಿದ ಪ್ರಕಟಣೆಗಳಿಗೆ ಸಹಾಯಧನ ನೀಡಿಕೆ - ಮೊದಲಾದುವುಗಳನ್ನು ಈ ಅಕೆಡಮಿ ಕೈಗೊಳ್ಳುತ್ತಿರುವುದಲ್ಲದೆ ಪ್ರತಿವರ್ಷವೂ ಸಂಗೀತ, ನೃತ್ಯ, ನಾಟಕ ಕ್ಷೇತ್ರಗಳಲ್ಲಿ ಶ್ರೇಷ್ಠದರ್ಜೆಯ ಕಲಾವಂತರಿಗೆ ಸನ್ಮಾನವನ್ನು ಮಾಡಿ ಪ್ರಶಸ್ತಿಯನ್ನು ನೀಡುತ್ತಿದೆ.
ಲಲಿತಕಲಾ ಅಕೆಡಮಿ
[ಬದಲಾಯಿಸಿ]ಚಿತ್ರಕಲೆ, ವಾಸ್ತುಶಿಲ್ಪ, ಮೂರ್ತಿಶಿಲ್ಪ - ಮುಂತಾದ ಕಲಾಕ್ಷೇತ್ರಗಳಿಗೆ ಸಂಬಂಧಿಸಿದಂತೆ ಇರುವ ಅಧ್ಯಯನ ಮತ್ತು ಸಂಶೋಧನೆಗಳಿಗೆ ಉತ್ತೇಜನ ನೀಡುವ ಮೂಲಭೂತ ಧ್ಯೇಯವನ್ನಿಟ್ಟುಕೊಂಡಿರುವ ಈ ಅಕೆಡಮಿ ಸ್ಥಾಪನೆಯಾದದ್ದು 1954ರಲ್ಲಿ. ಇದು ಸಂಪುರ್ಣವಾಗಿ ಕೇಂದ್ರ ಸರ್ಕಾರದ ನೆರವಿನಿಂದಲೇ ನಡೆಯುತ್ತಿದೆ. ಇದು ಪುರ್ಣವಾಗಿ ಸ್ವಯಮಧಿಕಾರವುಳ್ಳ ಸಂಸ್ಥೆಯಾಗಿಲ್ಲ. ಕೇಂದ್ರ ಸರ್ಕಾರ ಮತ್ತು ಪ್ರಧಾನಾಡಳಿತ ಮಂಡಲಿ ಈ ಅಕೆಡಮಿಯ ಆಡಳಿತವನ್ನು ವಹಿಸಿಕೊಂಡಿದೆ. ಈ ಅಕೆಡಮಿಯ ಮುಖ್ಯವಾದ ಎರಡು ಕಾರ್ಯಗಳೆಂದರೆ ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನಗಳನ್ನೇರ್ಪಡಿಸುವುದು ಮತ್ತು ಭಾರತದ ಪ್ರಾಚೀನ ಮತ್ತು ಆಧುನಿಕ ಕಲೆಗಾರಿಕೆಗೆ ಸಂಬಂಧಿಸಿದ ಪ್ರಕಾಶಿಕೆಗಳನ್ನು ಹೊರತರುವುದು. ಇದಲ್ಲದೆ ಅನೇಕ ಕಲಾಸಂಸ್ಥೆಗಳಿಗೆ ನೆರವನ್ನು ನೀಡಿ ಗೋಷ್ಠಿಗಳನ್ನೇರ್ಪಡಿಸುವುದು, ಗೋಡೆಯ ಮೇಲೆ ರಚಿಸಿದ ವರ್ಣಚಿತ್ರಗಳ ಹಾಗೂ ಕಲಾವಂತರ ಚಿತ್ರಗಳನ್ನು ಪುನರ್ಮುದ್ರಿಸಿಕೊಳ್ಳುವುದು ಮುಂತಾದುವು ಅಕೆಡಮಿಯ ಇತರ ಚಟುವಟಿಕೆಗಳು. 1968ರಲ್ಲಿ ನವದೆಹಲಿಯಲ್ಲಿ ಈ ಅಕೆಡಮಿ ನಡೆಸಿದ ಅಂತಾರಾಷ್ಟ್ರೀಯ ತ್ರೈವಾರ್ಷಿಕೋತ್ಸವದಲ್ಲಿ 35 ರಾಷ್ಟ್ರಗಳು ಭಾಗವಹಿಸಿದ್ದುವು. ಅಕೆಡಮಿಯ ಚಟುವಟಿಕೆಗಳಲ್ಲಿ ಸೇರಿದ ಇತರ ಅಂಶಗಳೆಂದರೆ: ಪ್ರತಿವರ್ಷವೂ ರಾಷ್ಟ್ರೀಯ ಕಲಾಪ್ರದರ್ಶನವನ್ನೇರ್ಪಡಿಸುವುದು, ವಿದೇಶೀ ಕಲಾವಸ್ತು ಪ್ರದರ್ಶನಗಳ ನ್ನೇರ್ಪಡಿಸುವುದು, ಭಾರತದ ಕಲಾಪ್ರದರ್ಶನವನ್ನು ವಿದೇಶಗಳಲ್ಲಿ ನಡೆಸುವುದು, ಜಾನಪದ ಗೀತೆ, ವಸ್ತು ಮುಂತಾದುವುಗಳ ಸಂಗ್ರಹಣೆ, ಗಾರೆಯ ಮೇಲೆ ರಚಿಸಿರುವ ವರ್ಣಚಿತ್ರಗಳನ್ನು ಚಿತ್ರಿಸಿಕೊಳ್ಳುವುದು, ಪ್ರಕಟನೆಗಳನ್ನು ಹೊರಡಿಸುವುದು, ಕಲಾ ಸಂಸ್ಥೆಗಳಿಗೆ ಅಂಗೀಕಾರ, ನೆರವು ನೀಡುವುದು - ಇತ್ಯಾದಿ. ಈ ಅಕೆಡಮಿ ಪ್ರಕಾಶ ಪಡಿಸಿರುವ ಪುಸ್ತಕಗಳಲ್ಲಿ ಮೊಗಲರ ಕಾಲದ ಬರವಣಿಗೆಯ ಚಿತ್ರಪ್ರತಿಗಳು; ಪಹಾರಿ ಚಿತ್ರಕಲೆಯಲ್ಲಿ ಶ್ರೀಕೃಷ್ಣನ ಕಥೆ: ಅಜಂತ, ಮೇವಾರ, ಕಿಷನ್ಗಢ್, ಬುಂಡಿ ಮುಂತಾದ ಸ್ಥಳಗಳ ವರ್ಣಚಿತ್ರಗಳು; ಬೇಂದ್ರೆ, ರವಿವರ್ಮ, ಹೆಬ್ಬಾರ್, ಛಾವ್ಡಾ, ಪಣಿಕರ್- ಮುಂತಾದ ವ್ಯಕ್ತಿಗಳ ಮೇಲೆ ಪ್ರಬಂಧ ಗ್ರಂಥಗಳ ಪ್ರಕಟಣೆ - ಇತ್ಯಾದಿ ಕಂಡುಬರುತ್ತವೆ. ಇವಲ್ಲದೆ ಎರಡು ದ್ವಿವಾರ್ಷಿಕ ಪತ್ರಿಕೆಗಳನ್ನು ಪ್ರಕಟಿಸುತ್ತಿದೆ. ರಾಷ್ಟ್ರೀಯ ಕಲಾಪ್ರದರ್ಶನದಲ್ಲಿ ಭಾಗವಹಿಸುವ ಶ್ರೇಷ್ಠದರ್ಜೆಯ ಕಲಾವಂತರಿಗೆ ಪ್ರತಿವರ್ಷವೂ ಪ್ರಶಸ್ತಿಗಳನ್ನಿತ್ತು ವಿಜೇತರಿಗೆ ತಾಮ್ರಪತ್ರ, ಅಂಗವಸ್ತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸುತ್ತದೆ.