ವಿಷಯಕ್ಕೆ ಹೋಗು

ಹಂಪೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹ೦ಪೆ ಇಂದ ಪುನರ್ನಿರ್ದೇಶಿತ)
ಸ್ಮಾರಕಗಳ ಸಮೂಹ, ಹಂಪಿ
ಯುನೆಸ್ಕೋ ವಿಶ್ವ ಪರಂಪರೆಯ ತಾಣ
ಸ್ಥಳವಿಜಯನಗರ ಜಿಲ್ಲೆ, ಕರ್ನಾಟಕ, ಭಾರತ
ಸಂಯೋಜಿತ ಸ್ಥಳಗಳುವಿರೂಪಾಕ್ಷ ದೇವಾಲಯ, ಹಂಪಿ
ಮಾನದಂಡಸಾಂಸ್ಕೃತಿಕ: i, iii, iv
ಉಲ್ಲೇಖಗಳು241
ಶಾಸನ1986 (10th Session)
ಅಳಿವಿನಂಚಿನಲ್ಲಿರುವ ಪ್ರದೇಶ1999–2006
ವಿಸ್ತೀರ್ಣ4,187.24 ಹೆಕ್ಟೇರು
ಬಫರ್ ವಲಯ19,453.62 ಹೆಕ್ಟೇರು
ವೆಬ್ ಸೈಟ್ಭಾರತೀಯ ಪುರಾತತ್ವ ಇಲಾಖೆ - ಹಂಪಿ
ಕಕ್ಷೆಗಳು15°20′04″N 76°27′44″E / 15.33444°N 76.46222°E / 15.33444; 76.46222
ಹಂಪೆ is located in India
ಹಂಪೆ
Location of Hampi
ಹಂಪೆ is located in Karnataka
ಹಂಪೆ
ಹಂಪೆ (Karnataka)
ವಿರೂಪಾಕ್ಷ ದೇವಾಲಯ
ವಿರೂಪಾಕ್ಷ ದೇವಾಲಯ
ಹಂಪಿಯ ಭೂಪಟ, 1911
ಕೃಷ್ಣ ದೇವಾಲಯದ ಪೂರ್ವ ದಿಕ್ಕಿನಲ್ಲಿರುವ ಪವಿತ್ರ ಪುಷ್ಕರಿಣಿ ಕೊಳ, ಹಂಪಿ
Schematic map of Hampi with major tourist spots and areas of mythological significance
ವಿರೂಪಾಕ್ಷ ದೇವಾಲಯ


ಹಂಪಿ ವಿಹಂಗಮ ನೋಟ, ಮಾತಾಂಗ ಬೆಟ್ಟದಿಂದ ತೆಗೆದ ೩೬೦° ಪನೋರಮ
ಹಂಪಿ ವಿಹಂಗಮ ನೋಟ, ಮಾತಾಂಗ ಬೆಟ್ಟದಿಂದ ತೆಗೆದ ೩೬೦° ಪನೋರಮ

ಹಂಪಿ ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಐತಿಹಾಸಿಕ ಸ್ಥಳ. ೧೩೩೬ರಿಂದ ೧೫೬೫ರವರೆಗೆ (೧೩೩೬-೧೫೬೫) ಇದು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಆಗಿತ್ತು. ಹಂಪಿಯ ಮೊದಲನೆ ಹೆಸರು 'ಪಂಪಾ' ಎಂದಿತ್ತು. ಅಂದರೆ ತುಂಗಭದ್ರ ನದಿ ಎಂದರ್ಥ. ವರ್ಷಗಳು ಕಳೆದಂತೆ ಇದು 'ವಿಜಯನಗರ' ಮತ್ತು 'ವಿರುಪಾಕ್ಷಪುರ' ಎಂದು ಕರೆಯಲ್ಪಟ್ಟಿತು. ಹಂಪೆಯನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದು ೧೯೮೬ರಂದು ಘೋಷಿಸಿದೆ. ವಿಜಯನಗರ ಸಾಮ್ರಾಜ್ಯದ ಒಡೆಯನಾದ ಕೃಷ್ಣದೇವರಾಯನ ಕಾಲದಲ್ಲಿ ಹಂಪಿ ಬಜಾರ್ ಎಂದೆನ್ನಿಸಿ ಕೊಂಡ ಬೀದಿಯಲ್ಲಿ ವಜ್ರಾಭರಣಗಳನ್ನು ತೂಕದ ಮಾದರಿಯಲ್ಲಿ ಮಾರಲ್ಪಡುತ್ತಿದ್ದರಂತೆ. ಕೃಷ್ಣದೇವರಾಯನ ರಾಜ್ಯಭಾರ ಮುಗಿದ ನಂತರ ವಿಜಯನಗರ ಸಾಮ್ರಾಜ್ಯ ತನ್ನ ಪ್ರಾಬಲ್ಯವನ್ನು ನಿಧಾನವಾಗಿ ಕಳೆದುಕೊಳ್ಳುತ್ತಾ ಬಂತು. ಕೊನೆಗೆ ತಾಳಿಕೋಟೆಯ ಯುದ್ಧದಲ್ಲಿ ಮುಸ್ಲಿಂ ಸಾಮ್ರಾಜ್ಯದಿಂದ ಬಂದ ಆಕ್ರಮಣವನ್ನು ತಡೆಯದೆ ಅಂತ್ಯಗೊಂಡಿತು. ಹಂಪಿಯಲ್ಲಿದ್ದ ಅನೇಕ ಸ್ಮಾರಕಗಳನ್ನು ಸುಮಾರು ಆರು ತಿಂಗಳುಗಳ ಕಾಲ ಸೈನಿಕರು ನಾಶ ಮಾಡಿದರು ಎನ್ನುತ್ತದೆ ಇತಿಹಾಸ. ಇಂದು ವಿರೂಪಾಕ್ಷ ದೇವಾಲಯ, ಹಜಾರ ರಾಮ ದೇವಸ್ಥಾನ, ಸಪ್ತಸ್ವರ ಸಂಗೀತ ಹೊರಹೊಮ್ಮಿಸುವ ಕಲ್ಲಿನ ಕಂಬಗಳು, ವಿಶ್ವವಿಖ್ಯಾತ ಕಲ್ಲಿನ ರಥ, ಮಹಾನವಮಿ ದಿಬ್ಬ, ಸಾಸಿವೆಕಾಳು ಗಣಪತಿ, ಉಗ್ರನರಸಿಂಹ, ಕಮಲ ಮಹಲ್, ಬಡವಿ ಲಿಂಗ, ಅನೆ ಲಾಯ ಹೀಗೆ ಹಲವಾರು ಪ್ರೇಕ್ಷಣಿಯ ಸ್ಥಳಗಳನ್ನು ಹಂಪಿಯಲ್ಲಿ ನೋಡಬಹುದಾಗಿದೆ.

ಭೂವಿವರಣೆ

[ಬದಲಾಯಿಸಿ]

ಹಂಪಿಯು ತುಂಗಭದ್ರಾ ನದಿಯ ತೀರದಲ್ಲಿದೆ. ಇದು ಬೆಂಗಳೂರಿನಿಂದ ೩೪೩ ಕಿ.ಮೀ., ಬಿಜಾಪುರದಿಂದ ೨೫೪ ಕಿ.ಮೀ., ಮತ್ತು ಬಳ್ಳಾರಿಯಿಂದ ೭೪ ಕಿ.ಮೀ ದೂರದಲ್ಲಿದೆ. ೧೩ ಕಿ.ಮೀ. ದೂರದಲ್ಲಿರುವ ಹೊಸಪೇಟೆ ಇಲ್ಲಿಗೆ ಅತಿ ಹತ್ತಿರದ ತಾಲ್ಲೂಕು ಕೇಂದ್ರ. ವ್ಯವಸಾಯ, ವಿರೂಪಾಕ್ಷ ಹಾಗೂ ಕೆಲವು ಇತರ ದೇವಸ್ಥಾನಗಳ ನಿರ್ವಹಣೆ ಮತ್ತು ಪ್ರವಾಸೋದ್ಯಮ, ಇವುಗಳು ಇಲ್ಲಿನ ಮುಖ್ಯ ಚಟುವಟಿಕೆ. ಕರ್ನಾಟಕ ಸರ್ಕಾರವು ಆಯೋಜಿಸುವ ವಿಜಯನಗರ ವಾರ್ಷಿಕೋತ್ಸವವು ಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲಿ ನಡೆಯುತ್ತದೆ.

ಹಂಪೆ ಹಾಗು ಸುತ್ತಮುತ್ತಲಿರುವ ಕೆಲವು ಮುಖ್ಯ ಸ್ಮಾರಕಗಳು

[ಬದಲಾಯಿಸಿ]

ಇಲ್ಲಿರುವ ದೇವಸ್ಥಾನಗಳನ್ನು ನೋಡಲು ಸುಲಭವಾಗುವಂತೆ ಹಲವು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಅವೆಂದರೆ-

  1. ಕೇಂದ್ರವಾದ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ.
  2. ನಡೆದು ನೋಡಬಹುದಾದ ದಾರಿ.
  3. ವಾಹನಗಳಲ್ಲಿ ಸಂಚರಿಸಿ ನೋಡಬಹುದಾದ ದಾರಿ.
  4. ಸೂರ್ಯಾಸ್ತದ ಸ್ಥಳಗಳು.
  5. ಅಚ್ಯುತರಾಯ ದೇಗುಲ
  6. ಆನೆಗೊಂದಿ
  7. ಅಂಜನಾದ್ರಿ ಪರ್ವತ
  8. ವಿರೂಪಾಕ್ಷೇಶ್ವರ ದೇವಾಲಯ
  9. ತುಂಗಭದ್ರ ನದಿ
  10. ಪುರಂದರ ಮಂಟಪ
  11. ವಿಜಯವಿಠ್ಠಲ ದೇಗುಲ
  12. ಕಲ್ಲಿನ ತೇರು
  13. ಉಗ್ರ ನರಸಿಂಹ ವಿಷಯದ ಬಗ್ಗೆ
  14. ಕಡಲೆಕಾಳು ಗಣಪತಿ
  15. ಸಾಸಿವೆಕಾಳು ಗಣಪತಿ
  16. ರಾಣಿ ಸ್ನಾನಗೃಹ
  17. ಹಂಪೆ ಬಜಾರ್
  18. ಹೇಮಕೂಟ

ಬಡವಿ ಲಿಂಗ

[ಬದಲಾಯಿಸಿ]

೯ ಅಡಿಯ ದೇವಸ್ಥಾನವಾಗಿದ್ದು, ಲಕ್ಷ್ಮಿನರಸಿಂಹ ದೇವಸ್ಥಾನದ ಸಮೀಪವೆ ಕಾಣಸಿಗುತ್ತದೆ. ಇದರ ವಿಶಿಷ್ಟತೆಯೆಂದರೆ, ಇದು ಒಂದು ಪ್ರಾಚೀನ ಕಾಲುವೆಯ ಮುಖಾಂತರ ಹರಿದು ಬರುವ ನೀರಿನಿಂದ ಸದಾಕಾಲ ಆವೃತವಾಗಿರುತ್ತದೆ. ಈ ಲಿಂಗದಲ್ಲಿ ಮೂರು ಕಣ್ಣುಗಳನ್ನು ಕೆತ್ತಲಾಗಿದ್ದು, ಭಗವಾನ ಶಿವನ ಮೂರು ನೇತ್ರಗಳನ್ನು ಪ್ರತಿನಿಧಿಸುತ್ತದೆ. ಇದು ಕೂಡ ಭೇಟಿ ಕೊಡಬಹುದಾದಂತಹ ಸ್ಥಳವಾಗಿದೆ. ಸ್ಥಳೀಯರ ನಂಬಿಕೆ ಪ್ರಕಾರ, ಹಂಪಿ ಎಂಬ ಬಡ ಬುಡಕಟ್ಟು ಜನಾಂಗದವನೊಬ್ಬ ತನ್ನ ಆಸೆಗಳನ್ನು ಈಡೇರಿಸಿದರೆ ಒಂದು ಶಿವಲಿಂಗವನ್ನು ಕಟ್ಟುತ್ತೆನೆಂದು ಮಾತು ಕೊಡುತ್ತಾನೆ. ಇದನ್ನರಿತ ಪರಮೇಶ್ವರನು ಅವನ ಆಸೆಗಳನ್ನು ಈಡೇರಿಸಲು ನಿರ್ಧರಿಸಿದ. ತದನಂತರ ಆ ಭಕ್ತನು ಈ ಬಡವಲಿಂಗವನ್ನು ನಿರ್ಮಿಸಿ ಈಶ್ವರನಿಗೆ ಅರ್ಪಿಸಿದ. ಇನ್ನೊಂದು ದಂತಕಥೆಯ ಪ್ರಕಾರ,ಈ ಲಿಂಗವು ಒಬ್ಬ ರೈತ ಮಹಿಳೆಯಿಂದ ನಿರ್ಮಿತವಾಗಿದ್ದು, ಅದಕ್ಕವಳು ಬಡವಿಲಿಂಗ ಎಂದು ನಾಮಕರಣ ಮಾಡಿದ್ದಳು ಎಂದು.

ಸಾಸುವೆಕಾಳು ಗಣೇಶ

[ಬದಲಾಯಿಸಿ]

ಹೇಮಕೂಟ ಬೆಟ್ಟದ ಕೆಳಗಿರುವ ಸಾಸಿವೆಕಾಳು ಗಣೇಶ ಗುಡಿಗೆ ಭೇಟಿ ನೀಡಲೇ ಬೇಕು. ಸಾಸಿವೆ ಕಾಳುಗಳನ್ನು ನೆನಪಿಗೆ ತರುವಂತಹ, ಇಲ್ಲಿರುವ ಜನಪ್ರಿಯ ಗಣಪತಿ ವಿಗ್ರಹವು ೮ ಅಡಿ ಉದ್ದವಾಗಿದೆ. ಆದ್ದರಿಂದ ಭಕ್ತ ಸಮೂಹದಲ್ಲಿ, ಇದು ಸಾಸಿವೆಕಾಳು ಗಣೇಶನೆಂಬ ಹೆಸರಿನಿಂದಲೂ ಚಿರಪರಿಚಿತವಾಗಿದೆ. ಪುರಾಣದ ಪ್ರಕಾರ, ಒಮ್ಮೆ ಭಗವಂತ ಗಣೇಶನು, ಮಿತಿ ಮೀರಿ ತಿಂದಿದ್ದರ ಪರಿಣಾಮ ಹೊಟ್ಟೆ ಒಡೆಯುವಂತಾಗಿ, ಅದನ್ನು ತಡೆಯಲು ಸರ್ಪವನ್ನು ಹೊಟ್ಟೆಗೆ ಅಡ್ಡಲಾಗಿ ಸುತ್ತಿಕೊಂಡನೆಂಬುದು ಪ್ರತೀತಿ. ವಿಗ್ರಹವು ಒಂದೆ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು, ಬಲಗೈಯಲ್ಲಿ ಮುರಿದ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು.ಮೊದಲನೆ ಎಡಗೈ ವಂಕಿಯಾಕಾರದ ಪಾಶವನ್ನು ಹೊಂದಿದ್ದು, ಎರಡನೆ ಎಡಗೈಯ ಮತ್ತು ಸೊಂಡಿಲು ಕಲ್ಲಿನಿಂದ ಬೇರ್ಪಡಿಸಿ ಕೆತ್ತಲಾಗಿದೆ. ಸಾಸಿವೆ ಕಾಳು ಗಣೇಶ ಗುಡಿಯನ್ನು ತಲುಪಿದಾಗ, ವಿಗ್ರಹವು ವಿಶಾಲವಾದ ಆವರಣವನ್ನು ಹೊಂದಿರುವುದು ಕಾಣಬಹುದು. ಅಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು ಚಂದ್ರಗಿರಿಯ ವ್ಯಾಪರಿಯೊಬ್ಬನು ಕ್ರಿ.ಶ.೧೫೦೬ರಲ್ಲಿ ವಿಜಯನಗರ ಸಾಮ್ರಾಜ್ಯದ ದೊರೆಯಾದ ಎರಡನೇ ನರಸಿಂಹನಿಗೋಸ್ಕರ ಕಟ್ಟಿದನೆಂಬುದು ಬರುತ್ತದೆ.

ಕಮಲಾಪುರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯ

[ಬದಲಾಯಿಸಿ]

ಇಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯವು, ಹಂಪಿಯ ಎರಡು ಮಾದರಿಗಳನ್ನು ಒಳಗೊಂಡಿದ್ದು, ಈ ಪ್ರದೇಶದ ಸ್ಥಳ ವಿವರಣೆಯನ್ನು ವಿವರವಾಗಿ ತಿಳಿಸುತ್ತದೆ. ಆದ್ದರಿಂದ ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೇಕಾದ ಮಾಹಿತಿಯನ್ನು ಸುಲಭವಾಗಿ ತಿಳಿಯುತ್ತಾರೆ. ಸಣ್ಣ ಮಾದರಿಯು ಗ್ಯಾಲರಿಯ ಒಳಭಾಗದಲ್ಲಿದ್ದು ರಾಯಲ್ ಸೆಂಟರನ ವಿಸ್ತಾರವಾದ ವಿವರಗಳನ್ನು ನೀಡುತ್ತದೆ.ಈ ಸಂಗ್ರಹಾಲಯವು ಪ್ರಧಾನವಾಗಿ ನಾಲ್ಕು ಭಾಗಗಳನ್ನು ಹೊಂದಿದೆ. ಮೇಲೆ ವಿವರಿಸಿದ ಹಂಪಿಯ ಮಾದರಿಗಳು ಒಂದನೆ ಭಾಗದಲ್ಲಿದ್ದು, ಎರಡನೆ ಭಾಗವು ಹಂಪಿಯ ಅವಶೇಷಗಳಿಗೆ ಸಂಬಂಧಿಸಿದ ಮೂರ್ತಿಗಳು ಹಾಗು ಶಿಲಾಕೃತಿಗಳನ್ನು ಹೊಂದಿದೆ. ಮೂರನೆ ಭಾಗವು ಆಗಿನ ಕಾಲದಲ್ಲಿ ಉಪಯೋಗಿಸಲ್ಪಡುತ್ತಿದ್ದ ಯುದ್ಧ ಸಲಕರಣೆಗಳು,ನಗನಾಣ್ಯಗಳು ಮತ್ತು ಇತರೆ ಸಾಮಗ್ರಿಗಳನ್ನು ಹೊಂದಿದೆ. ನಾಲ್ಕನೆ ಭಾಗವು ಇತಿಹಾಸದ ಪೂರ್ವ ಹಾಗು ನಂತರದ ವಸ್ತುಗಳನ್ನು ಹೊಂದಿದೆ. ಹಿರೊ ಕಲ್ಲುಗಳು, ಸತಿ ಕಲ್ಲುಗಳು,ಚಿಕ್ಕದಾದ ರಾಯಲ್ ಸೆಂಟರ್ ಪ್ರತಿರೂಪ, ಪಿಂಗಾಣಿ ವಸ್ತುಗಳು ಮತ್ತು ಗೋಡೆಯ ಅಲಂಕಾರಿಕ ವಸ್ತುಗಳನ್ನು ಹೊಂದಿದೆ. ಈ ಸಂಗ್ರಹಾಲಯವು ಪ್ರತಿ ಶುಕ್ರವಾರ ಹಾಗು ರಾಷ್ಟ್ರೀಯ ರಜಾ ದಿನಗಳಂದು ಮುಚ್ಚಿರುತ್ತದೆ. ಉಳಿದ ದಿನಗಳಲ್ಲಿ ಇದರ ಸಮಯ ಬೆಳಿಗ್ಗೆ ೧೦ ರಿಂದ ಸಂಜೆ ೫ ರ ವರೆಗೆ. ನೀವು ಹಂಪಿಗೆ ಹೋಗುತ್ತಿರಾದರೆ, ಖಂಡಿತವಾಗಿಯೂ ಇದಕ್ಕೆ ಭೇಟಿ ನೀಡಿ.

ಶ್ರೀ ಲಕ್ಷ್ಮಿನರಸಿಂಹ ದೇವಸ್ಥಾನ

[ಬದಲಾಯಿಸಿ]

ಶ್ರೀ ಲಕ್ಷ್ಮಿನರಸಿಂಹ ಗುಡಿಯಲ್ಲಿ, ೬.೭ಮೀ. ಎತ್ತರವಿರುವ ಒಂದೆ ಕಲ್ಲಿನಲ್ಲಿ ಕೆತ್ತಲಾದ, ನರಸಿಂಹನ(ಭಗವಾನ ವಿಷ್ಣುವಿನ ಅವತಾರ) ವಿಗ್ರಹವು ಆದಿಶೇಷನ(ಎಳು ಹೆಡೆಯ ಸರ್ಪ) ಮೇಲೆ ವಿಶ್ರಮಿಸುವ ಭಂಗಿಯಲ್ಲಿದ್ದು, ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿ ಕೆತ್ತಲಾಗಿರುವ ಮಾಹಿತಿಯ ಪ್ರಕಾರ, ಇದನ್ನು, ಕ್ರಿ.ಶ.೧೫೨೮ರಲ್ಲಿ ದೊರೆಯಾದ ಕೄಷ್ಣದೇವರಾಯನ ಆಳ್ವಿಕೆಯಲ್ಲಿ ಪೂರ್ಣಗೊಳಿಸಲಾಯಿತೆಂದು ತಿಳಿದು ಬರುತ್ತದೆ.ಮೂಲ ವಿಗ್ರಹವು ಲಕ್ಷ್ಮಿ ದೇವತೆಯು ವಿಷ್ಣುವಿನ ತೊಡೆಯಲ್ಲಿ ಕುಳಿತಿರುವ ಭಂಗಿಯಲ್ಲಿದೆ.ಆದರೆ, ಕ್ರಿ.ಶ.೧೫೬೫ರಲ್ಲಿ, ಲಕ್ಷ್ಮಿ ದೇವತೆಯ ವಿಗ್ರಹವು ನಾಶ ಹೊಂದಿದ್ದು, ಪ್ರಸ್ತುತ ಅದನ್ನು ಕಮಲಾಪುರ ಸಂಗ್ರಹಾಲಯದಲ್ಲಿ ಇರಿಸಲಾಗಿದೆ. ಆದರೂ ಉಬ್ಬಿರುವ ಕಣ್ಣುಗಳನ್ನು ಚಿತ್ರಿಸಲಾಗಿರುವ ನರಸಿಂಹನ ವಿಗ್ರಹವು ಇಂದಿಗೂ ಕೂಡ ಬಹುಪಾಲು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ನರಸಿಂಹ ಹಾಗು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಒಂದೆ ಕಲ್ಲಿನಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ ದಕ್ಷಿಣ ಭಾರತದ ವಾಸ್ತುಶಿಲ್ಪಿಗಳು ಉಪಯೋಗಿಸುವ ಸಾಮಗ್ರಿಗಳ ವಿರುದ್ಧವಾಗಿ,ಸಂಗಮರು ಗ್ರಾನೈಟ್ ಕಲ್ಲುಗಳಿಂದ ಲಕ್ಷ್ಮಿನರಸಿಂಹ ದೇವಾಲಯವನ್ನು ಕಟ್ಟಿದ್ದಾರೆ. ಆದರೆ ಕೆಲವು ಸೂಕ್ಶ್ಮವಾದ ಕೆಲಸಗಳನ್ನು ಸ್ಚಿಸ್ಟ(ಒಂದು ಮೃದುವಾದ ಕಲ್ಲು)ನಿಂದ ಮಾಡಲ್ಪಟ್ಟಿದ್ದು ಗ್ರಾನೈಟ್ ಬಳಕೆ ಮಾಡಲಾಗಿಲ್ಲ. ಜಟಿಲವಾದ ವಿನ್ಯಾಸಗಳ ಅಭಾವವನ್ನು ಸರಿದೂಗಿಸಲು, ವಾಸ್ತುಶಿಲ್ಪಗಾರರು ವಿಶಾಲವಾದ ಕಟ್ಟಡವನ್ನು ನಿರ್ಮಿಸಲು ನಿಶ್ಚಯಿಸಿದ್ದಾರೆ.

ವಿರೂಪಾಕ್ಷ ದೇವಾಲಯ

[ಬದಲಾಯಿಸಿ]

ವಿರೂಪಾಕ್ಷ ದೇವಾಲಯವು ಶಿವ ಹಾಗು ಅವನ ಸಂಗಾತಿ ದೇವತೆಯಾದ ಪಂಪಾಳಿಗೆ ಸಮರ್ಪಿತವಾಗಿದ್ದು, ಹಂಪಿಗೆ ಬರುವ ಪ್ರವಾಸಿಗರು ಇದಕ್ಕೆ ಭೇಟಿ ನೀಡಬಹುದು. ೫೦ ಮೀ. ಎತ್ತರದ ಗೋಪುರವನ್ನು ಹೊಂದಿರುವ ಈ ದೇವಾಲಯವು ತುಂಗಭದ್ರ ನದಿಯ ದಕ್ಷಿಣ ದಡದಲ್ಲಿರುವ ಹೇಮಕೂಟ ಬೆಟ್ಟದ ಕೆಳಭಾಗದಲ್ಲಿದೆ. ದಕ್ಷಿಣ ಭಾರತದ ದ್ರಾವಿಡಿಯನ್ ಶೈಲಿಯನ್ನು ಹೊಂದಿರುವ ಈ ದೇವಾಲಯವು ಇಟ್ಟಿಗೆ ಹಾಗೂ ಮೊರ್ಟಾರ್ ಗಳಿಂದ ರಚಿಸಲ್ಪಟ್ಟಿದೆ. ಪಂಪಾಪತಿ ದೇವಾಲಯವೆಂದೂ, ಕರೆಯಲ್ಪಡುವ ಈ ದೇವಾಲಯವು ಮುಖ ಮಂಟಪ(ರಂಗ ಮಂಟಪ), ಮುರು ಭಾಗಗಳು ಮತ್ತು ಕಂಬಗಳುಳ್ಳ ವಿಶಾಲವಾದ ಕೊಠಡಿಯನ್ನು ಹೊಂದಿದೆ. ವಿರೂಪಾಕ್ಷ ದೇವಾಲಯವು ೭ನೇ ಶತಮಾನದಲ್ಲಿ ನಿರ್ಮಾಣವಾಗಿದ್ದು, ಕೆತ್ತನೆಯ ಕೆಲಸವು ಸುಮಾರು ೯ ಹಾಗು ೧೧ ನೇ ಶತಮಾನಗಳ ಮಧ್ಯದಲ್ಲಿ ಮಾಡಲ್ಪಟ್ಟಿವೆ ಎಂಬುದನ್ನು ಅಲ್ಲಿ ಭೇಟಿ ನೀಡಿದಾಗ ತಿಳಿಯಬಹುದು. ಪ್ರಾರಂಭದಲ್ಲಿ, ಈ ದೇವಾಲಯವು ಕೆಲವೆ ವಿಗ್ರಹಗಳನ್ನು ಹೊಂದಿದ್ದು ಕಾಲಾಕ್ರಮೇಣವಾಗಿ ಬೃಹದಾಕಾರವನ್ನು ಪಡೆಯಿತು. ಕ್ರಿ.ಶ.೧೫೧೦ ರಲ್ಲಿ, ಕೃಷ್ಣದೇವರಾಯರಿಂದ, ರಂಗಮಂಟಪವು ನಿರ್ಮಿಸಲ್ಪಟ್ಟಿದ್ದು ವಿಜಯನಗರದ ಶೈಲಿಯ ವಾಸ್ತುಶಿಲ್ಪವನ್ನು ಸೂಚಿಸುತ್ತದೆ. ತದನಂತರ ಕಂಬಗಳು, ದೀಪಸ್ಥಂಬಗಳು, ಸ್ತೂಪಗಳನ್ನು ನಿರ್ಮಿಸಲಾಯಿತು. ಹಿಂದು ಸಂಸ್ಕೃತಿಯನ್ನು ಬಿಂಬಿಸುವಂತಹ ಪ್ರಾಣಿ ಪಕ್ಷಿಗಳ ಕೆತ್ತನೆಗಳು ವಿರೂಪಾಕ್ಷ ದೇವಾಲಯದ ಪ್ರಮುಖ ಆಕರ್ಷಣೆ.

ಜೆನಾನಾ ಎನ್ಕ್ಲೊಸರ್

[ಬದಲಾಯಿಸಿ]

ಎತ್ತರನೆಯ ಕಲ್ಲಿನ ಗೋಡೆಗಳಿಂದ ಸುತ್ತುವರೆಯಾಗಿ ನಿರ್ಮಿಸಲಾದ ಜೆನಾನಾ ಎನ್ಕ್ಲೊಸರ್, ಹಂಪಿಯಲ್ಲಿ ಪ್ರವಾಸಿಸುವಾಗ ನೋಡಲೆ ಬೇಕಾದ ಒಂದು ಸ್ಥಳ. ಈ ಸ್ಥಳವು ಕೇವಲ ಮಹಿಳೆಯರ ಪ್ರವೇಶಕ್ಕೆ ಮಾತ್ರವಿದ್ದು, ಅವರ ಗೌಪ್ಯತೆಯನ್ನು ಕಾಪಾಡುವ ರೀತಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ನಾಲ್ಕು ಪ್ರಧಾನ ರಚನೆಗಳಿದ್ದು, ಅವುಗಳೇ ಮಹಾರಾಣಿ ಅರಮನೆ(ಕ್ವೀನ್ಸ್ ಪ್ಯಾಲೇಸ್), ಎರಡು ನಿರೀಕ್ಷಣಾ ಗೋಪುರಗಳು ಹಾಗು ಜನಪ್ರೀಯವಾದ ಲೊಟಸ್ ಮಹಲ್. ಈ ಕಟ್ಟಡಕ್ಕೆ ಅನೇಕ ಕಿಂಡಿಗಳಿದ್ದು, ರಾಣಿಯರ ಬೇಸಿಗೆ ಅರಮನೆಯಾಗಿತ್ತು. ಕ್ವೀನ್ಸ ಪ್ಯಾಲೇಸ್ ೪೬*೨೯ ಮೀ. ಅಳತೆ ಹೊಂದಿದ್ದು ಕಟ್ಟಿಗೆ ಹಾಗು ಇತರೆ ಸಾಮಗ್ರಿಗಳಿಂದ ನಿರ್ಮಿಸಲ್ಪಟ್ಟಿದೆ.ಇತಿಹಾಸಕಾರರ ಪ್ರಕಾರ, ಈ ಸ್ಥಳವು ಕೇವಲ ಮಹಿಳೆಯರಿಗಾಗಿ ಮಾತ್ರ ಮೀಸಲಾಗಿದ್ದುದರಿಂದ, ಇದರ ರಕ್ಷಣೆಯು ನಪುಂಸಕ ಸೈನಿಕರಿಂದ ಮಾಡಲ್ಪಡುತ್ತಿತ್ತು. ಉತ್ತರ ಹಾಗು ಆಗ್ನೇಯ ದಿಕ್ಕಿನಲ್ಲಿ ಕಟ್ಟಲಾದ ಎರಡು ಕಟ್ಟಡಗಳು ನಿರೀಕ್ಷಣಾ ಗೋಪುರಗಳಾಗಿ ನಿರ್ವಹಿಸಲ್ಪಡುತ್ತಿದ್ದವು. ಈ ಕಟ್ಟಡಗಳಿಂದ ಮಹಾರಾಣಿ ಹಾಗು ಆಕೆಯ ಕುಟುಂಬದ ಸದಸ್ಯರು ಹೊರಗೆ ನಡೆಯುತ್ತಿದ್ದ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದರು. ಇಂಡೊ-ಇಸ್ಲಾಮಿಕ್ ಮಾದರಿಯ ವಾಸ್ತುಶಿಲ್ಪವುಳ್ಳ ಲೊಟಸ್ ಪ್ಯಾಲೇಸ್ ರಾಜ ಮಹಿಳೆಯರು ಸಂಧಿಸಿ ದಿನಕಳೆಯುವ ಸ್ಥಳವಾಗಿತ್ತು. ರಾಜಮನೆತನದ ಆನೆಗಳು ವಿರಮಿಸುತ್ತಿದ್ದ ಸ್ಥಳವಾದ ಎಲಿಫಂಟ್ ಸ್ಟೇಬಲ್ಸ್ ಇದರ ಹಿಂಬದಿಯಲ್ಲಿದ್ದು, ಪ್ರವಾಸಿಗರು ಭೇಟಿ ನೀಡಬಹುದು.


ಆನೆಗೊಂದಿ (ಆನೆಗುಂಡಿ)

ಆನೆಗುಂಡಿ ಹಳ್ಳಿಯು ಹಂಪಿಯಿಂದ ೧೦ ಕಿ.ಮೀ ದೂರದಲ್ಲಿದ್ದು, ತುಂಗಭದ್ರಾ ನದಿಯ ಉತ್ತರ ಭಾಗದ ದಡದಲ್ಲಿದೆ. ಇದು ಅಂದಿನ ವಿಜಯನಗರ ಸಾಮ್ರಾಜ್ಯದ ಪ್ರಾದೇಶಿಕ ರಾಜಧಾನಿಯಾಗಿತ್ತು. ಇದರ ಅರ್ಥ ಕನ್ನಡದಲ್ಲಿ ಆನೆಗೆ ತೋಡಿದ ಗುಂಡಿ ಎಂದಾಗುತ್ತದೆ. ಈ ಪ್ರದೇಶವು ಹಂಪಿಗಿಂತಲೂ ಪ್ರಾಚೀನವಾಗಿದ್ದು, ರಾಮಾಯಣದ ಪ್ರಕಾರ ಇದನ್ನು ಸುಗ್ರೀವನ (ಮಂಗಗಳ ರಾಜ) ರಾಜ್ಯ ಕಿಷ್ಕಿಂಧೆ ಎಂದು ನಂಬಲಾಗಿದೆ. ಸಮಯಾವಕಾಶವಿದ್ದರೆ ಪ್ರವಾಸಿಗರು ಖಂಡಿತವಾಗಿಯು ಈ ಸ್ಥಳಕ್ಕೆ ಭೇಟಿ ನೀಡಿ ಅಂಜನಾದ್ರಿ ಬೆಟ್ಟವನ್ನು ನೋಡಬಹುದು. ಈ ಬೆಟ್ಟವನ್ನು ದೇವರಾದ ಹನುಮಂತನ ಹುಟ್ಟು ಸ್ಥಳವೆಂದು ನಂಬಲಾಗಿದೆ. ಹಂಪಿಗಿಂತಲೂ ನೆಮ್ಮದಿಯಾದಂಥ ವಾತಾವರಣವನ್ನು ಆನೆಗುಂಡಿಯು ಹೊಂದಿದೆ. ಪ್ರಾಚ್ಯವಸ್ತು ಸಂರಕ್ಷಣಾ ಯೋಜನೆ ಮತ್ತು ಕಿಷ್ಕೀಂದ ಟ್ರಸ್ಟ್ ಇವುಗಳು, ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯುತ್ತಮವಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಆದರಾತಿಥ್ಯವು ಮನಸೂರೆಗೊಳಿಸುತ್ತದೆ. ಹೊಸ ಸೇತುವೆ(ಬ್ರಿಡ್ಜ್) ಅನ್ನು ತುಂಗಭದ್ರಾ ನದಿಗೆ ಕಟ್ಟಲಾಗುತಿತ್ತು , ಆದರೆ ಅದು ಮುರಿದು ಬಿದ್ದಿದ್ದು ಇನ್ನೊಂದು ಕಡೆ ಸೇತುವೆ ಕಟ್ಟುವ ಕೆಲಸ ಪ್ರಗತಿಯಲ್ಲಿದೆ. ಮುಂಬರುವ ದಿನಗಳಲ್ಲಿ, ಪ್ರವಾಸಿಗರು ಆನೆಗುಂಡಿಯನ್ನು ಸುಲಭವಾಗಿ ತಲುಪಬಹುದಾಗಿದೆ. ಸದ್ಯ, ಈ ಪ್ರದೇಶವನ್ನು ಸುತ್ತು ಮಾರ್ಗದಿಂದ ತಲುಪಬಹುದಾಗಿದೆ.

ಆನೆಗುಂದಿಯ ಕೆಲವು ಪ್ರಮುಖ ಆಕರ್ಷಣೆಗಳು

[ಬದಲಾಯಿಸಿ]
  1. ಗಗನ ಪ್ಯಾಲೇಸ್,
  2. ಪಂಪ ಸರೋವರ ಲಕ್ಷ್ಮಿದೇವಾಲಯ,
  3. ಶ್ರೀಕೄಷ್ಣದೇವರಾಯ ಸಮಾಧಿ,
  4. ಆನೆಗುಂದಿ ಕೋಟೆಯ ಹೆಬ್ಬಾಗಿಲು ಹಾಗು ಏಳು ತಲೆಯ ಸರ್ಪ ಇವು ಆನೆಗುಂದಿಯ ಕೆಲವು ಪ್ರಮುಖ ಆಕರ್ಷಣೆಗಳು. ಇಷ್ಟೇ ಅಲ್ಲದೆ ಪ್ರವಾಸಿಗರು-
  5. ಶ್ರೀ ಗವಿ ರಂಗನಾಥ ಸ್ವಾಮಿ ದೇವಸ್ಥಾನ,
  6. ಗಣಪತಿ ದೇವಸ್ಥಾನ,
  7. ಚಿಂತಾಮಣಿ ಶಿವ ದೇವಸ್ಥಾನ,
  8. ಹುಚ್ಚೈಪ್ಪನ ಮಠ ಮತ್ತು ಜೈನ್ ದೇವಾಲಯಗಳಿಗೂ ಕೂಡ ಭೇಟಿ ನೀಡಬಹುದು.

ಇವನ್ನೂ ನೋಡಿ

[ಬದಲಾಯಿಸಿ]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]
ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ
ಕರ್ನಾಟಕದ ಏಳು ಅದ್ಭುತಗಳು
ಹಿರೇಬೆಣಕಲ್ ಶಿಲಾ ಸಮಾಧಿಗಳು | ಹಂಪಿ | ಗೋಲ ಗುಮ್ಮಟ | ಶ್ರವಣಬೆಳಗೊಳದ ಗೊಮ್ಮಟೇಶ್ವರ | ಮೈಸೂರು ಅರಮನೆ | ಜೋಗ ಜಲಪಾತ | ನೇತ್ರಾಣಿ ದ್ವೀಪ



"https://kn.wikipedia.org/w/index.php?title=ಹಂಪೆ&oldid=1247238" ಇಂದ ಪಡೆಯಲ್ಪಟ್ಟಿದೆ