ರೋಗವಿಜ್ಞಾನ
ರೋಗವಿಜ್ಞಾನವು ವೈದ್ಯವಿಜ್ಞಾನದ ಒಂದು ಶಾಖೆ (ಪೆತಾಲಜಿ). ವ್ಯಾಧಿಯ ಮೈದೋರಿಕೆ, ಕಾರಣ ಮತ್ತು ಕ್ರಿಯಾತಂತ್ರಗಳನ್ನು ಕುರಿತ ಶಾಸ್ತ್ರೀಯ ಅಧ್ಯಯನ.[೧][೨] ವೈದ್ಯಕೀಯದ ಇತರ ಶಾಖೆಗಳಾದ ಅಂಗರಚನಾವಿಜ್ಞಾನ, ಶರೀರಕ್ರಿಯಾವಿಜ್ಞಾನ, ಸೂಕ್ಷ್ಮಜೀವವಿಜ್ಞಾನ, ಜೀವರಸಾಯನವಿಜ್ಞಾನ ಮತ್ತು ಅಂಗಾಂಶವಿಜ್ಞಾನಗಳಿಂದ ಪಡೆದ ಜ್ಞಾನವನ್ನು ಇಲ್ಲಿ ಬಳಸಿಕೊಳ್ಳುವುದಿದೆ. ರೋಗ ತಲೆದೋರದಂತೆ ಅದನ್ನು ನಿಯಂತ್ರಿಸುವ ಸಂಬಂಧದಲ್ಲಿ ವಿಧಿವಿಧಾನಗಳನ್ನು ರೂಪಿಸಿಕೊಳ್ಳುವ ಪೂರ್ವದಲ್ಲಿ ರೋಗವಿಜ್ಞಾನ ವಿಧಾನದಿಂದ ಪಡೆಯುವ ಮಾಹಿತಿ ಬಲು ಮುಖ್ಯವೆನಿಸುತ್ತದೆ.
ಇತಿಹಾಸ
[ಬದಲಾಯಿಸಿ]ರೋಗವಿಜ್ಞಾನವನ್ನು ಕುರಿತ ಶಾಸ್ತ್ರೀಯ ಅಧ್ಯಯನ ಸುಮಾರು 150 ವರ್ಷಗಳಷ್ಟು ಹಿಂದೆಯೇ ಪ್ರಾರಂಭವಾಗಿತ್ತು. ಸೂಕ್ಷ್ಮದರ್ಶಕದ ಉಪಜ್ಞೆಯೊಂದಿಗೆ ವ್ಯಕ್ತಿಯೊಬ್ಬನಲ್ಲಿ ತಲೆದೋರುವ ರೋಗದ ಸಲುವಾಗಿ ಪ್ರಕಟಗೊಳ್ಳುವ ಚಿಹ್ನೆ ಮತ್ತು ಲಕ್ಷಣಗಳನ್ನು ಅವನಲ್ಲಿಯ ಕೋಶೀಯ ಬದಲಾವಣೆಗಳೊಂದಿಗೆ ಸಹಸಂಬಂಧಿಸುವ ಕಾರ್ಯವೂ ನಡೆದುಬಂತು. ಪ್ರಾರಂಭದ ಹಂತಗಳಲ್ಲಿ ರೋಗವಿಜ್ಞಾನ ವಿವರಣಾತ್ಮಕವಾಗಿಯೇ ಇತ್ತಾದರೂ ಕಾಲಕ್ರಮೇಣ ಅದು ನಿಶ್ಚಿತ ವ್ಯಾಖ್ಯೆಯನ್ನು ಪಡೆದುಕೊಂಡು ರೋಗದ ಕಾರಣಗಳನ್ನೂ ಲಕ್ಷಣಗಳನ್ನೂ ವಿಧಿವತ್ತಾಗಿ ನಿರ್ಣಯಿಸುವ ಹಂತವನ್ನು ತಲಪಿತು. ಆರಂಭದಲ್ಲಿ ವ್ಯಕ್ತಿಯ ಮರಣಾನಂತರ ಆತನ ಮೃತದೇಹದಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಆ ವ್ಯಕ್ತಿಯ ಜೀವಿತಾವಧಿಯಲ್ಲಿ ಕಂಡುಬಂದಿದ್ದ ಕಾಯಿಲೆಯ ಚಿಹ್ನೆಗಳೊಂದಿಗೆ ಸಹಸಂಬಂಧಿಸಿ, ಪರೀಕ್ಷೆ ನಡೆಸುವುದು ರೂಢಿಯಾಗಿತ್ತು. ಸಂಶೋಧನೆ, ಅಧ್ಯಯನಗಳು ಮುಂದುವರಿದಂತೆಲ್ಲ ರೋಗ ಹಾಗೂ ತತ್ಸಂಬಂಧೀ ಕ್ಷೇತ್ರಗಳೆನಿಸುವ ರೋಗ ಕಾರಣವಿಜ್ಞಾನ (ಈಟಿಯಾಲಜಿ), ಸೂಕ್ಷ್ಮ ದರ್ಶಕೀಯ ಅಂಗಾಂಶ ವಿಜ್ಞಾನ (ಮೈಕ್ರೊಸ್ಕೋಪಿಕ್ ಅನಾಟಮಿ), ಪರಪೀಡಾವಿಜ್ಞಾನ (ಪ್ಯಾರಾಸೈಟಾಲಜಿ), ಕ್ರಿಯಾತ್ಮಕ ವ್ಯತ್ಯಾಸಗಳು, ರಾಸಾಯನಿಕ ಬದಲಾವಣೆಗಳು ಇಂಥ ಕ್ಷೇತ್ರಗಳಲೆಲ್ಲ ರೋಗವಿಜ್ಞಾನ ವಿಸ್ತರಣೆಯನ್ನು ಪಡೆಯಿತು. 19ನೆಯ ಶತಮಾನದ ಉತ್ತರಾರ್ಧದಲ್ಲಿ ರೋಗವಿಜ್ಞಾನಕ್ಕೆ ಸಂಬಂಧಿಸಿದಂತೆ ಈ ಉಪಕ್ರಮವನ್ನು ಸೂಕ್ಷ್ಮಜೀವ ವೈಜ್ಞಾನಿಕ ಪ್ರಕ್ರಮಗಳೊಂದಿಗೆ ಬಳಸಿಕೊಂಡಿದ್ದರ ಫಲವಾಗಿ ಪ್ರೋಟೊಜ಼ೋವಗಳು, ಬ್ಯಾಕ್ಟೀರಿಯಗಳು, ವೈರಸ್ಸುಗಳು ಮತ್ತು ಬೂಸ್ಟುಗಳು (ಫಂಗೈ) ಮನುಷ್ಯನ ಸಾವಿಗೆ ಕಾರಣವಾಗುವ ಜೈವಿಕಕಾರಕಗಳು ಎಂಬುದು ತಿಳಿದುಬಂತು. ಸೋಂಕುರೋಗಗಳು ಬಹುತೇಕ ವ್ಯಕ್ತಿಗಳನ್ನು ಮರಣಕ್ಕೆ ಈಡುಮಾಡಿದುವು. ಈ ರೋಗಗಳನ್ನು ನಿಯಂತ್ರಿಸಲು ಉತ್ತಮ ನೈರ್ಮಲ್ಯ ಮತ್ತು ಸಾರ್ವಜನಿಕ ಆರೋಗ್ಯಕ್ರಮಗಳು ಬಲು ಪ್ರಮುಖ ಪಾತ್ರವಹಿಸಿದುವು. ಪ್ರತಿಜೀವಿರೋಧಕಗಳ (ಆ್ಯಂಟಿಬಯೊಟಿಕ್ಸ್) ಉತ್ಪಾದನೆ ಮತ್ತು ಪ್ರತಿರಕ್ಷಣಾತಂತ್ರಗಳು (ಇಮ್ಯುನೈಸೇಶನ್ ಟೆಕ್ನಿಕ್ಸ್) ಇಂಥ ಮಾರಕ ರೋಗಗಳನ್ನು ಬಲುಮಟ್ಟಿಗೆ ನಿಯಂತ್ರಿಸುವುದರಲ್ಲಿ ಸಫಲವಾಗಿವೆ. ಎಲ್ಲ ರೋಗಗಳೂ ತಮ್ಮ ಆಣವಿಕ ಹಂತದಲ್ಲೇ ಬದಲಾವಣೆಗಳನ್ನು ಪ್ರದರ್ಶಿಸುತ್ತವೆ ಎಂಬುದು ಈಗ ತಿಳಿದುಬಂದಿದೆ. ಕೆಲವೊಂದು ಕಾಯಿಲೆಗಳಲ್ಲಿ ಕಂಡುಬರುವ ಜೀವರಾಸಾಯನಿಕ ಬದಲಾವಣೆಗಳು ಏನು ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ.
ಶಾಖೆಗಳು
[ಬದಲಾಯಿಸಿ]ರೋಗವಿಜ್ಞಾನದಲ್ಲಿ ಎರಡು ಶಾಖೆಗಳಿವೆ. ಆಸಕ್ತಿ ಅನುಸಾರ ಇವನ್ನು ಅಭ್ಯಸಿಸುವುದಿದೆ;
- ರೋಗನಿದಾನ (ಡಯಾಗ್ನೋಸಿಸ್) ಕುರಿತದ್ದು ಚಿಕಿತ್ಸಾರೋಗ ವಿಜ್ಞಾನ (ಕ್ಲಿನಿಕಲ್ ಪೆತಾಲಜಿ). ವೈದ್ಯವಿಜ್ಞಾನದಲ್ಲಿ ಅಧ್ಯಯನ ಸಂಶೋಧನೆಗಳು ಮುಂದುವರಿದಂತೆಲ್ಲ ಶಸ್ತ್ರಚಿಕಿತ್ಸಾರೋಗ ವಿಜ್ಞಾನ, ನರಸಂಬಂಧೀರೋಗವಿಜ್ಞಾನ ಎಂಬ ಉಪಶಾಖೆಗಳು ಏರ್ಪಟ್ಟಿವೆ.
- ನಿಯಂತ್ರಿತ ಸನ್ನಿವೇಶಗಳಲ್ಲಿ ರೋಗದ ಕ್ರಿಯಾತಂತ್ರಗಳನ್ನು ಅಧ್ಯಯನ ನಡೆಸುವುದು ಪ್ರಾಯೋಗಿಕ ರೋಗವಿಜ್ಞಾನ.
ಸಾಮಾನ್ಯ ರೋಗವಿಜ್ಞಾನ ಎಂಬುದು ಎಲ್ಲ ಕ್ಷೇತ್ರಗಳನ್ನು ಕುರಿತು ಇದೆಯಾದರೂ ಮುಖ್ಯವಾಗಿ ಇದು ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ್ದಾಗಿದೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೂಡಿಬಂದಿರುವ ಒಂದು ನೂತನ ವಿಭಾಗ ಪರಿಸರೀಯ ರೋಗವಿಜ್ಞಾನ (ಎನ್‌ವಿರಾನ್‌ಮೆಂಟಲ್ ಪೆತಾಲಜಿ). ಇದು ಭೌತ ಮತ್ತು ರಾಸಾಯನಿಕ ಕಾರಕಗಳಿಂದ ಉಂಟಾಗುವ ರೋಗ ಪ್ರಕ್ರಿಯೆಗಳನ್ನು ಕುರಿತು ಅಧ್ಯಯಿನಿಸುತ್ತದೆ. ಪರಿಸರೀಯ ರೋಗವಿಜ್ಞಾನಕ್ಕೆ ಸಂಬಂಧಿಸಿದಂತೆ ಪರಿಸರ ಮಾಲಿನ್ಯದಿಂದ ಉಂಟಾಗುವ ಹೃದಯರೋಗಗಳು, ಈತಿರೋಸ್ಕ್ಲಿರೋಸಿಸ್ ಮತ್ತು ಕ್ಯಾನ್ಸರ್ ಇವೆಲ್ಲ ತಮ್ಮ ಪ್ರಭಾವ ಬೀರುತ್ತವೆ.
ಇತರ ವ್ಯಾಖ್ಯಾನಗಳು
[ಬದಲಾಯಿಸಿ]ಒಂದು ಸಂಕುಚಿತ ಅರ್ಥದಲ್ಲಿ ಹೇಳುವುದಾದರೆ, ದೇಹದಲ್ಲಿ ಉಂಟಾದ ಗಾಯಗಳಿಗೆ ಜೀವಿ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಅಧ್ಯಯನವೇ ರೋಗವಿಜ್ಞಾನ. ಗಾಯಕ್ಕೆ ಈಡಾಗಿರುವ ಜೀವಕೋಶಗಳ ಚಟುವಟಿಕೆಗಳು ಗಾಯದ ಸಮೀಪದಲ್ಲೋ ದೇಹದ ಬೇರೆಡೆಗಳಲ್ಲೋ ಪ್ರಕಟವಾಗಬಹುದು. ರೋಗವಿಜ್ಞಾನ ವಿಧಾನಗಳಿಂದ ಮತ್ತು ಕೋಶಗಳಲ್ಲಿ ಕಂಡುಬರುವ ಪ್ರತಿಕ್ರಿಯೆಗಳಿಂದ ರೋಗಕ್ಕೆ ಸಂಬಂಧಿಸಿದ ಫಲಿತಾಂಶಗಳನ್ನು ತಿಳಿಯಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ Herausgeber., Cross, Simon S., Herausgeber. Underwood, James C. E. 1942- (30 April 2018). Underwood's pathology : a clinical approach. Elsevier – Health Sciences Division. ISBN 978-0-7020-7212-3. OCLC 1043350646.
{{cite book}}
: CS1 maint: multiple names: authors list (link) CS1 maint: numeric names: authors list (link) - ↑ Kumar, Vinay; Abbas, Abul K.; Fausto, Nelson; Aster, Jon C. (2010). Robbins and Cotran Pathologic Basis of Disease (8th ed.). Philadelphia: Saunders/Elsevier. ISBN 978-1-4160-3121-5.
ಹೊರಗಿನ ಕೊಂಡಿಗಳು
[ಬದಲಾಯಿಸಿ]- Media related to Pathology at Wikimedia Commons
- American Society for Clinical Pathology (ASCP)
- American Society for Investigative Pathology (ASIP)
- Pathpedia online pathology resource Archived 2023-09-24 ವೇಬ್ಯಾಕ್ ಮೆಷಿನ್ ನಲ್ಲಿ.: Comprehensive pathology website with numerous resources.
- College of American Pathologists
- humpath.com Archived 2008-06-11 ವೇಬ್ಯಾಕ್ ಮೆಷಿನ್ ನಲ್ಲಿ. (Atlas in Human Pathology)
- Intersociety Council for Pathology Training (ICPI)
- Pathological Society of Great Britain and Ireland
- Royal College of Pathologists (UK)
- Royal College of Pathologists of Australasia (Australia & Oceania)
- United States and Canadian Academy of Pathology
- WebPath: The Internet Pathology Laboratory for Medical Education
- Atlases: High Resolution Pathology Images