ವಿಷಯಕ್ಕೆ ಹೋಗು

ರಾಮನ್ ಪರಿಣಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಳಕಿನ ಚದರಿಕೆಯ ವಿಭಿನ್ನ ಸಾಧ್ಯತೆಗಳು: ರೇಲೇ ಚದರಿಕೆ (ಶಕ್ತಿಯ ವಿನಿಮಯವಿಲ್ಲ: ಆಪಾತ ಮತ್ತು ಚದರಿದ ಫೋಟಾನ್‍ಗಳು ಸಮವಾದ ಶಕ್ತಿಯನ್ನು ಹೊಂದಿರುತ್ತವೆ), ಸ್ಟೋಕ್ಸ್ ರಾಮನ್ ಚದರಿಕೆ (ಪರಮಾಣು ಅಥವಾ ಅಣು ಶಕ್ತಿಯನ್ನು ಹೀರಿಕೊಳ್ಳುತ್ತದೆ: ಚದರಿದ ಫೋಟಾನ್ ಆಪಾತ ಫೋಟಾನ್‍ಗಿಂತ ಕಡಿಮೆ ಶಕ್ತಿಯನ್ನು ಹೊಂದಿರುತ್ತದೆ) ಮತ್ತು ಪ್ರತಿ-ಸ್ಟೋಕ್ಸ್ ರಾಮನ್ ಚದರಿಕೆ (ಪರಮಾಣು ಅಥವಾ ಅಣು ಶಕ್ತಿಯನ್ನು ಕಳೆದುಕೊಳ್ಳುತ್ತದೆ: ಚದರಿದ ಫೋಟಾನ್ ಆಪಾತ ಫೋಟಾನ್‍ಗಿಂತ ಹೆಚ್ಚು ಶಕ್ತಿಯನ್ನು ಹೊಂದಿರುತ್ತದೆ)

ರಾಮನ್ ಪರಿಣಾಮ ಎಂದರೆ ಏಕವರ್ಣೀಯ ಬೆಳಕು (ಮಾನೊಕ್ರೊಮ್ಯಾಟಿಕ್ ಲೈಟ್) ಪಾರದರ್ಶಕ ಮಾಧ್ಯಮದ (ಟ್ರ್ಯಾನ್ಸ್‌ಪೆರೆಂಟ್ ಮೀಡಿಯಮ್) ಮೂಲಕ ಹಾದುಹೋಗುವಾಗ ಆ ಮಾಧ್ಯಮದ ಅಣುಗಳೊಂದಿಗೆ ಅಂತರವರ್ತಿಸಿ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಇಲ್ಲವೆ ಪಡೆಯುವುದರಿಂದ ಚದರಿದ ಬೆಳಕಿನ ಆವರ್ತಾಂಕದಲ್ಲಿ (ಫ್ರೀಕ್ವೆನ್ಸಿ) ಬದಲಾವಣೆಯಾಗಿ ಹೆಚ್ಚುವರಿ ರೋಹಿತ ರೇಖೆಗಳು ಕಾಣಿಸುವ ವಿದ್ಯಮಾನ (ರಾಮನ್ ಎಫೆಕ್ಟ್).

ಯಾವುದೇ ಪಾರದರ್ಶಕ ರಾಸಾಯನಿಕ ವಸ್ತುವಿನ ಮೂಲಕ ಬೆಳಕನ್ನು ಹಾಯಿಸಿದಾಗ ಅದರಿಂದ ಹೊರಬರುವ ಕಿರಣಗಳು ಒಳಬರುವ ಕಿರಣಗಳಿಗಿಂತ ಭಿನ್ನವಾದ ದಿಕ್ಕಿನತ್ತ ಹೊರಳಿರುವುದನ್ನು ನೋಡಬಹುದು (ಗಾಜಿನ ಪಟ್ಟಕದ ಮೂಲಕ ಬೆಳಕನ್ನು ಹಾಯಿಸುವ ಉದಾಹರಣೆ ನೆನಪಿಸಿಕೊಳ್ಳಬಹುದು). ಹೀಗೆ ಚದುರಿದ ಬಹುಪಾಲು ಕಿರಣಗಳ ಸ್ವರೂಪ ಮೂಲ ಕಿರಣದಂತೆಯೇ ಇರುತ್ತದಾದರೂ ಒಂದಷ್ಟು ಭಾಗದ ಕಿರಣಗಳ ತರಂಗಾಂತರ ಮೂಲಕ್ಕಿಂತ ಬದಲಾಗಿರುತ್ತದೆ. ರಾಮನ್ ಪರಿಣಾಮವೆಂದು ಕರೆಯುವುದು ಇದನ್ನೇ.

ಹೆಚ್ಚುವರಿ ರೋಹಿತರೇಖೆಗಳನ್ನು ರಾಮನ್ ರೇಖೆಗಳು ಎಂದು ಕರೆಯಲಾಗಿದೆ. ರಾಮನ್ ಪರಿಣಾಮ ಒಂದು ವಿಧದಲ್ಲಿ ಕಾಂಪ್ಟನ್ ಪರಿಣಾಮದ ಪ್ರಕಾಶೀಯ ಸಾದೃಶವಿದ್ಯಾಮಾನ ಎನ್ನಬಹುದು.

೧೯೨೮ರಲ್ಲಿ ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್‍ರವರು ಸಣ್ಣ ಕಣದ ಮೂಲಕ ಬೆಳಕನ್ನು ಹಾಯಿಸಿದಾಗ ಅದರಲ್ಲಿ ಉಂಟಾಗುವ ವ್ಯತ್ಯಾಸವನ್ನು (ಚದುರುವಿಕೆ) ಕಂಡುಹಿಡಿದರು. ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ ೧೯೩೦ ರಲ್ಲಿ ಅವರು ಭೌತವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.[೧] ನೊಬೆಲ್ ಪಾರಿತೋಷಕಕ್ಕೆ ಭಾಜನರಾದ ಪ್ರಪ್ರಥಮ ಭಾರತೀಯ ವಿಜ್ಞಾನಿ ರಾಮನ್ ಅವರ ಈ ಸಂಶೋಧನೆ ರಾಮನ್ ಎಫೆಕ್ಟ್ ಎಂದೇ ಖ್ಯಾತಿ ಪಡೆದಿದೆ.

೧೯೮೭ ರಲ್ಲಿ, ರಾಮನ್ ಅವರ ಶತಮಾನೋತ್ಸವದ ಸಂದರ್ಭದಲ್ಲಿ ಕೃತಜ್ಞತೆಯಿಂದ ಕೂಡಿದ ಭಾರತ, ಫೆಬ್ರುವರಿ ೨೮ ನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಘೋಷಿಸಿತು.

ಹಿನ್ನೆಲೆ[ಬದಲಾಯಿಸಿ]

ಮಾಧ್ಯಮ ಒಂದರಲ್ಲಿ ಬೆಳಕು ಸಾಗುವಾಗ ಮಾಧ್ಯಮದ ಪರಮಾಣವಿಕ ಮತ್ತು ಆಣವಿಕ ಘಟಕಗಳು ಆಪಾತಬೆಳಕನ್ನು ಹೀರಿ ಮರು ಉತ್ಸರ್ಜಿಸಬಲ್ಲವು. ಇದರಿಂದ ಬೆಳಕಿನ ಚದರಿಕೆ (ಸ್ಕ್ಯಾಟರಿಂಗ್) ಉಂಟಾಗುತ್ತದೆ.

ಬೆಳಕಿನ ಕಿರಣದಲ್ಲಿರುವ ವಿದ್ಯುತ್ ಕ್ಷೇತ್ರದಿಂದಾಗಿ ದೂಳಿನ ಸೂಕ್ಷ್ಮಕಣಗಳು ಆಂದೋಲಿಸಬಲ್ಲವು. ಈ ಕಣಗಳು ಬೆಳಕನ್ನು ಎಲ್ಲ ದಿಕ್ಕುಗಳಿಗೆ ಹರಡುವ ಕೇಂದ್ರಗಳಾಗುತ್ತವೆ. ಹೀಗೆ ಹರಡಿದ ಬೆಳಕಿನ ಅಲೆಯುದ್ದ (ಅಥವಾ ಆವರ್ತಾಂಕ) ಮೂಲ ಬೆಳಕಿನದರಷ್ಟೇ ಆಗಿರುತ್ತದೆ. ಆದರೆ ಈ ರೀತಿ ಹರಡುವ ಬೆಳಕಿನ ತೀವ್ರತೆ ಅಲೆಯುದ್ದವನ್ನೂ ಆಪಾತಕಿರಣದೊಂದಿಗೆ ಕೋನವನ್ನು ಅವಲಂಬಿಸಿರುತ್ತದೆ. ಹ್ರಸ್ವಅಲೆಯುದ್ದಗಳ (ಗೋಚರಬೆಳಕಿನಲ್ಲಿ ರೋಹಿತ ನೀಲಭಾಗ) ತೀವ್ರತೆ ದೀರ್ಘಅಲೆಯುದ್ದಗಳ ತೀವ್ರತೆಗಿಂತಲೂ ಹೆಚ್ಚು. ಕೆಂಪು ಕಿರಣಗಳು ಹೆಚ್ಚು ಚದರದೆ ಸಾಗುತ್ತವೆ. ನೀಲ-ನೇರಳೆ ಕಿರಣಗಳು ಪಾರ್ಶ್ವಕ್ಕೆ ಹೆಚ್ಚು ಚದರುತ್ತವೆ. ಇದು ಟಿಂಡಲ್ ಪರಿಣಾಮ.

ವಾಯು ಅಣುಗಳೇ ಸೂರ್ಯನಿಂದ ಬರುವ ಬೆಳಕಿನ ಕಿರಣಗಳನ್ನು ಚದರಿಸುವುದರಿಂದ ಆಕಾಶದ ಬಣ್ಣ ನೀಲವಾಗಿದೆ ಎಂದು ಇಂಗ್ಲಿಷ್ ಭೌತವಿಜ್ಞಾನಿ ಲಾರ್ಡ್ ರ‍್ಯಾಲೀ (1842-1919) ಸೂಚಿಸಿದ (1899). ಶುದ್ಧವಾದ ಮತ್ತು ದೂಳುರಹಿತವಾದ ಅನಿಲಗಳು ಬೆಳಕನ್ನು ಚದರಿಸಬಲ್ಲವು ಎಂಬುದನ್ನು ಕಬಾನೆಸ್ ಎಂಬ ವಿಜ್ಞಾನಿ ಪ್ರಯೋಗರೀತ್ಯ ತೋರಿಸಿದ (1914).

ರಾಮನ್ ಪರಿಣಾಮ[ಬದಲಾಯಿಸಿ]

ಒಮ್ಮೆ ತಮ್ಮ ಯುರೋಪ್ ಪ್ರವಾಸಕಾಲದಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರದ ನೀರು ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಚದುರಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ಅವರು ತಮ್ಮ ಅಧ್ಯಯನವನ್ನು ಮುಂದುವರೆಸಲು ಪ್ರೇರಣೆಯಾಯಿತು. 1921 ಸೆಪ್ಟೆಂಬರ್‌ನಲ್ಲಿ ಕಲ್ಕತ್ತಕ್ಕೆ ಹಿಂದಿರುಗಿ ದ್ರವಗಳಲ್ಲಿ ಬೆಳಕಿನ ಚದರಿಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪರೀಕ್ಷಿಸಲು ಅವರು ಪ್ರಯೋಗಗಳನ್ನು ನಡೆಸಿದರು.

ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಅಧ್ಯಯನಗಳ ಪರಿಣಾಮವೇ ರಾಮನ್ ಪರಿಣಾಮದ ಶೋಧ.

ಬೆಳಕಿನ ಆಣವಿಕ ಚದರಿಕೆ ಎಂಬುದು ಸರ್ವೇಸಾಮಾನ್ಯವಾದ ಒಂದು ವಿದ್ಯಮಾನ ಆಗಿದ್ದು ಅದನ್ನು ಅನಿಲ, ಬಾಷ್ಪಗಳಷ್ಟೇ ಅಲ್ಲದೆ ದ್ರವ, ಘನಗಳಲ್ಲಿ (ಸ್ಫಟಿಕ, ಅಸ್ಫಟಿಕ) ಕೂಡ ಅಧ್ಯಯಿಸುವುದು ಸಾಧ್ಯ ಎಂಬುದನ್ನು ಕೆಲವೇ ತಿಂಗಳುಗಳ ಸಂಶೋಧನೆಯಿಂದ ರಾಮನ್ ತಿಳಿದುಕೊಂಡರು. 1922ರಿಂದ 1927ರ ವರೆಗೆ ಅವರು ಕಲ್ಕತ್ತದಲ್ಲಿ ತಮ್ಮ ಸಮರ್ಥ ಸಹಚರರೊಂದಿಗೆ ನಡೆಸಿದ ಮುಖ್ಯವಾದ ಕೆಲವು ಅಧ್ಯಯನಗಳು ಹೀಗಿದ್ದವು; ಅನೇಕ ತರಲಗಳನ್ನು ಉಪಯೋಗಿಸಿ ವಿವಿಧ ಒತ್ತಡ ಮತ್ತು ಉಷ್ಣತೆಗಳಲ್ಲಿ ರಾಮನಾಥನ್ ಎಂಬವರು ಅಧ್ಯಯನ ನಡೆಸಿದರು. ಉಷ್ಣತೆ ವ್ಯತ್ಯಾಸವಾಗುವಾಗ ಬಾಷ್ಪ ಮತ್ತು ದ್ರವಗಳಲ್ಲಿ ಚದರಿದ ಬೆಳಕಿನ ತೀವ್ರತೆ ವ್ಯತ್ಯಾಸವಾಗುವುದರೊಂದಿಗೆ ಆ ಬೆಳಕಿನ ಧ್ರುವೀಕರಣ ಸ್ಥಿತಿ (ಸ್ಟೇಟ್ ಆಫ್ ಪೋಲರೈಸೇಶನ್) ಕೂಡ ಬದಲಾಗುವುದು ಕಂಡುಬಂತು. ದ್ರವಮಿಶ್ರಣಗಳಲ್ಲಿ ಕಾಮೇಶ್ವರರಾವ್ ಎಂಬವರು ಸ್ಫಟಿಕಗಳಲ್ಲಿ ಶ್ರೀವಾಸ್ತವ ಎಂಬವರು, ದ್ರವಮೇಲ್ಮೈಯಲ್ಲಿ ರಾಮದಾಸ್ ಎಂಬವರು ಚದರಿಕೆಯನ್ನು ಅಧ್ಯಯಿಸಿದರು. ಅಣುಗಳ ಅಸಮ್ಮಿತಿಯೊಂದಿಗೆ (ಅನೈಸೊಟ್ರಿಪಿ) ಚದರಿದ ಬೆಳಕಿನ ಧ್ರುವೀಕರಣಸ್ಥಿತಿಗೆ ಇರುವ ಸಂಬಂಧ ಈ ಅಧ್ಯಯನಗಳಿಂದ ವಿದಿತವಾಯಿತು. ವಿಶ್ಲೇಷಕ ಉಪಕರಣದಿಂದ ವೀಕ್ಷಿಸಿದಾಗ ಕಂಡುಬರುವ ಕನಿಷ್ಠ ಮತ್ತು ಗರಿಷ್ಠ ತೀವ್ರತೆಗಳೊಳಗಿನ ನಿಷ್ಪತ್ತಿಗೆ ನಿರ್ಧ್ರುವೀಕರಣ ನಿಷ್ಪತ್ತಿ (ಡಿಪೋಲರೈಸಿಂಗ್ ರೇಷ್ಯೊ) ಎಂದು ಹೆಸರು. ಇದು ಚದರಿದ ಬೆಳಕಿನ ಧ್ರುವೀಕರಣ ಮಟ್ಟವನ್ನು ಸೂಚಿಸುತ್ತದೆ. ಇದಕ್ಕೂ ಅಣುಗಳ ದ್ಯುತೀಯ ಅಸಮ್ಮಿತಿಗೂ (ಆಪ್ಟಿಕಲ್ ಅನೈಸೊಟ್ರಪಿ) ಸಂಬಂಧವಿದೆ. ಅಣುವೊಂದರ ದ್ಯುತೀಯ ಅಸಮ್ಮಿತಿ ಅದರ ರಾಸಾಯನಿಕ ಸಂಯೋಜನೆಯನ್ನು ಅವಲಂಬಿಸಿರುವುದನ್ನು ಕೆ.ಎಸ್. ಕೃಷ್ಣನ್ ಎಂಬವರು ಅನೇಕ ದ್ರವಗಳನ್ನು ಪರೀಕ್ಷಿಸಿ ಶ್ರುತಪಡಿಸಿದರು.

ಮಾಧ್ಯಮ ಒಂದರ ಸಾಂದ್ರತೆಯ ಏರಿಳಿತಗಳನ್ನು (ಫ್ಲಕ್ಚುಯೇಶನ್ಸ್) ಅವಲಂಬಿಸಿ ಚದರಿದ ಬೆಳಕಿನ ತೀವ್ರತೆಯನ್ನು ವ್ಯಕ್ತಪಡಿಸುವ ಒಂದು ಸೂತ್ರವನ್ನು ಐನ್‌ಸ್ಟೈನ್ ಮತ್ತು ಸ್ಮೊಲುಚೊವಿಸ್ಕಿ ಎಂಬವರು ಪರಸ್ಪರ ಸ್ವತಂತ್ರವಾಗಿ ಅಭಿವರ್ಧಿಸಿದ್ದರು. ರಾಮನ್ ಮತ್ತು ಅವರ ಸಹಚರರು ಈ ಸೂತ್ರವನ್ನು ಸುಧಾರಿಸಲು ಪ್ರಯತ್ನಸಿದರು. ಅವರು ಮಾಡಿದ ತಿದ್ದುಪಡಿಗಳೆಲ್ಲ ಚದರಿದ ಬೆಳಕಿನ ತೀವ್ರತೆಗೆ ಸಂಬಂಧಿಸಿದ್ದಾಗಿದ್ದುವು. ಈ ಎಲ್ಲ ತಿದ್ದುಪಡಿಗಳಲ್ಲಿ ಚದರಿದ ಬೆಳಕಿನ ಆವೃತ್ತಿ ಆಪಾತಬೆಳಕಿನ ಆವರ್ತಾಂಕದಷ್ಟೆ ಆಗಿತ್ತು.

1923ರ ಅನಂತರ ರಾಮನ್ ಅವರ ಸಹಚರರು ಬೇರೆಯೇ ನಮೂನೆಯ ಬೆಳಕು ಚದರುವುದನ್ನು ಕಂಡುಕೊಂಡರು. ಅವರು ಅದನ್ನು ಕ್ಷೀಣ ಪ್ರತಿದೀಪ್ತಿ (ಫೀಬ್ಲ್ ಫ್ಲೊರಸೆನ್ಸ್) ಎಂದು ಹೆಸರಿಟ್ಟರು. ಆದರೆ ಇದು ಪ್ರಬಲ ಧ್ರುವೀಕರಣಕ್ಕೆ ಒಳಗಾಗಿತ್ತು. ಪ್ರತಿದೀಪ್ತಿಯಲ್ಲಿ ಧ್ರುವೀಕರಣ ಇರುವುದಿಲ್ಲವಾದ ಕಾರಣ ಅದು ಪ್ರತಿದೀಪ್ತಿಯೇ ಅಲ್ಲ ಎಂದು ರಾಮನ್ ಹೇಳಿದರು.

ಆಪಾತಬೆಳಕಿನ ಆವರ್ತಾಂಕವನ್ನಷ್ಟೇ ಅಲ್ಲದೆ ಇತರ ಆವರ್ತಾಂಕಗಳನ್ನು ಚದರಿದ ಬೆಳಕು ಒಳಗೊಳ್ಳಬಹುದು ಎಂಬುದನ್ನು ಆಸ್ಟ್ರಿಯದ ಭೌತವಿಜ್ಞಾನಿ ಅಡಾಲ್ಫ್ ಸ್ಮೆಕಲ್ (1895-1959) ಎಂಬವರು ಹೇಳಿದ್ದರು (1923).[೨] ಚದರಿದ ಬೆಳಕಿನ ಆವರ್ತಾಂಕ ಆಪಾತ ಬೆಳಕಿನ ಆವರ್ತಾಂಕಕ್ಕಿಂತಲೂ ಅಧಿಕವಾಗಿರುವ ಸಾಧ್ಯತೆಯನ್ನು 1925 ರಲ್ಲಿ ಮೊತ್ತಮೊದಲಿಗೆ ಕ್ರೀರ್ಸ್ ಮತ್ತು ಹೈಸನ್‌ಬರ್ಗ್ ಎಂಬ ವಿಜ್ಞಾನಿಗಳು ಮುನ್ನುಡಿದಿದ್ದರು.

ಕೆಲವು ದ್ರವಗಳಲ್ಲಿ (ನೀರು, ಈತರ್, ಮಿಥೈಲ್ ಆಲ್ಕೊಹಾಲ್, ಈಥೈಲ್ ಆಲ್ಕೊಹಾಲ್) ಚದರಿದ ಬೆಳಕಿನ ನಿರ್ಧ್ರುವೀಕರಣ ಆಪಾತಕಿರಣದ ಅಲೆಯುದ್ದದೊಂದಿಗೆ ಬದಲಾಗುವುದನ್ನು ರಾಮನ್ ಸಹಚರರು ಗಮನಿಸಿದರು. ದ್ರವದ ರಾಸಾಯನಿಕ ಶುದ್ಧೀಕರಣದ ಬಳಿಕವೂ ಚದರಿದ ಹೊಸವಿಕಿರಣದ ತೀವ್ರತೆ ಕಡಿಮೆಯಾಗಿರಲಿಲ್ಲ. ಬಲು ಶುದ್ಧವಾದ ಗ್ಲಿಸರಿನ್‌ನಲ್ಲಿ ಸೂರ್ಯರಶ್ಮಿ ಚದರಿದಾಗ ನಿರೀಕ್ಷಿತ ನೀಲದ ಬದಲು ಉಜ್ಜ್ವಲ ಹಸುರು ಕಂಡುದನ್ನು ವೆಂಕಟೇಶ್ವರನ್ ಎಂಬವರು ವರದಿಮಾಡಿದರು. ಚದರಿದ ಬೆಳಕು, ದ್ರವದ ವಿಶಿಷ್ಟಗುಣವನ್ನು ಅವಲಂಬಿಸಿದೆ ಎಂಬುದು ಇದರಿಂದ ಸ್ಪಷ್ಟವಾಯಿತು. ಮಂಜುಗಡ್ಡೆ ಮತ್ತು ದ್ಯುತೀಯ ಗಾಜು, ಅನೇಕ ಆರ್ಗ್ಯಾನಿಕ್ ದ್ರವಗಳು, ಸಂಕುಚಿತ ಕಾರ್ಬನ್ ಡೈಆಕ್ಸೈಡ್ (CO2) ಮತ್ತು ನೈಟ್ರಸ್ ಆಕ್ಸೈಡ್ (N2O) ಅನಿಲ ಇವುಗಳಲ್ಲೆಲ್ಲ ಈ ವಿದ್ಯಮಾನ ಕಂಡುಬಂತು. ಚದರಿದ ವಿಕಿರಣದ ಬಣ್ಣ (ಆವರ್ತಾಂಕ) ಆಪಾತವಿಕಿರಣದ ಬಣ್ಣಕ್ಕಿಂತ ಭಿನ್ನವಾಗಿದ್ದದಷ್ಟೇ ಅಲ್ಲ, ಚದರಿದ ವಿಕಿರಣ ಪ್ರಬಲ ಧ್ರುವೀಕರಣಕ್ಕೂ ಒಳಗಾಗಿತ್ತು. ತಾವು ಅಧ್ಯಯಿಸುತ್ತಿರುವ ಚದರಿದ ಬೆಳಕು ಕ್ರೇರ್ಸ್-ಹೈಸನ್‌ಬರ್ಗ್ ಸೂಚಿಸಿದ ಸಾಧ್ಯತೆಯನ್ನು ತೋರಿಸುತ್ತಿರಬಹುದು. ಎಕ್ಸ್-ಕಿರಣಗಳ ವ್ಯಾಪ್ತಿಯಲ್ಲಿ ಕಂಡುಬರುವ ಕಾಂಪ್ಟನ್ ಪರಿಣಾಮಕ್ಕೂ ಈ ವಿದ್ಯಮಾನಕ್ಕೂ ಹೋಲಿಕೆ ಇರಬಹುದು ಎಂದು ರಾಮನ್ ಭಾವಿಸಿದರು. ಆದ್ದರಿಂದ ಕ್ಷೀಣಪ್ರತಿದೀಪ್ತಿ ಎಂಬುದರ ಬದಲು ಈ ವಿದ್ಯಮಾನವನ್ನು ರೂಪಾಂತರಿತ ಚದರಿಕೆ (ಮಾಡಿಫೈಡ್ ಸ್ಕ್ಯಾಟರಿಂಗ್) ಎಂದು ಕರೆದರು.

ಸಿ.ವಿ. ರಾಮನ್ ಮತ್ತು ಕೆ.ಎಸ್. ಕೃಷ್ಣನ್ ೧೯೨೮ ಫೆಬ್ರುವರಿ ೨೮ ರಂದು ಸೋಸುಕಗಳನ್ನು (ಫಿಲ್ಟರ್ಸ್) ಉಪಯೋಗಿಸಿ ಆಪಾತಕಿರಣದ ಅಲೆಯುದ್ದದ ವ್ಯಾಪ್ತಿಯನ್ನು ಅಂದರೆ, ಅದರ ಅಗಲವನ್ನು ಬಹಳಷ್ಟು ಕಿರಿದಾಗಿಸಿ (ಅಂದರೆ ಏಕವರ್ಣೀಯವನ್ನಾಗಿ ಮಾಡಿ) ನೋಡಿದಾಗ ರೂಪಾಂತರಿತ ಚದರಿಕೆಗೂ ಆಪಾತಬೆಳಕಿನ ಚದರಿಕೆಗೂ ಮಧ್ಯೆ ಕಪ್ಪು ಪ್ರದೇಶವೊಂದಿತ್ತು. ಮರುದಿನವೇ ಇದರ ಬಗ್ಗೆ ರಾಮನ್ ಪತ್ರಿಕಾ ಹೇಳಿಕೆ ನಿಡಿದರು. ಆಪಾತಕಿರಣದ ಆವರ್ತಾಂಕಕ್ಕಿಂತಲೂ ಅಧಿಕ ಆವರ್ತಾಂಕದ ಚದರಿಕೆಯನ್ನು ೧೯೨೮ ಮೇ ತಿಂಗಳಲ್ಲಿ ಮೊದಲ ಬಾರಿಗೆ ರಾಮನ್ ಮತ್ತು ಕೃಷ್ಣನ್ ವೀಕ್ಷಿಸಿದರು.

ಚದರಿಕೆಯ ಬೇರೆ ಬೇರೆ ಪರಿಗಳನ್ನು ಗಮನಿಸಿದರೆ ರಾಮನ್ ಚದರಿಕೆ (ಅರ್ಥಾತ್ ರಾಮನ್ ಪರಿಣಾಮ) ಉಳಿದವುಗಳಿಗಿಂತ ಭಿನ್ನವಾಗಿ ನಿಲ್ಲುತ್ತದೆ. ರ‍್ಯಾಲೀ-ಟಿಂಡಾಲ್ ಚದರಿಕೆಯಲ್ಲಿ ಆಪಾತವಿಕಿರಣ ಮತ್ತು ಚದರಿದ ವಿಕಿರಣ ಈ ಎರಡರ ಆವರ್ತಾಂಕಗಳೂ ಒಂದೇ. ಪ್ರತಿದೀಪ್ತಿಯಲ್ಲಿ (ಫ್ಲೊರಸೆನ್ಸ್) ಹೊರಹೊಮ್ಮುವ ವಿಕಿರಣದ ಆವರ್ತಾಂಕ ಎಂಬುದು ಆಯಾ ವಸ್ತುವಿಗೆ ವಿಶಿಷ್ಟವಾಗಿರುವಂಥದು. ಪ್ರತಿದೀಪ್ತಿ ಬೆಳಕಿನಲ್ಲಿ ಧ್ರುವೀಕರಣವಿಲ್ಲ. ಕಾಂಪ್ಟನ್ ಪರಿಣಾಮದಲ್ಲಿ ಚದರಿದ ವಿಕಿರಣದ ಆವರ್ತಾಂಕ ಆಪಾತವಿಕಿರಣದ ಆವರ್ತಾಂಕಕ್ಕಿಂತ ಕಡಿಮೆ ಹಾಗೂ ಚದರಿದ ವಿಕಿರಣದ ಆವರ್ತಾಂಕ ಚದರಿಕೆಕೋನವನ್ನು ಅವಲಂಬಿಸಿದೆ; ಆದರೆ ಅದು ಚದರಿಕೆ ವಸ್ತುವನ್ನು (ಚದರಕ) ಅಥವಾ ಆಪಾತವಿಕಿರಣದ ಆವರ್ತಾಂಕವನ್ನು ಅವಲಂಬಿಸಿಲ್ಲ. ರಾಮನ್ ಚದರಿಕೆಯ ಸನ್ನಿವೇಶದಲ್ಲಿ ಚದರಿಕೆ ಆವರ್ತಾಂಕ ಆಪಾತ ಆವರ್ತಾಂಕದಷ್ಟೇ ಆಗಿರಬಹುದು. ಆಪಾತ ಆವರ್ತಾಂಕಕ್ಕಿಂತ ಹೆಚ್ಚಿಸಬಹುದು ಇಲ್ಲವೆ ಕಡಿಮೆಯಾಗಿರಬಹುದು. ಚದರಿಕೆ ಆವರ್ತಾಂಕಕ್ಕೂ ಆಪಾತಾವರ್ತಾಂಕಕ್ಕೂ ಇರುವ ವ್ಯತ್ಯಾಸ (ರಾಮನ್ ಪಲ್ಲಟ) ಆಯಾ ಚದರಿಕೆಗೆ ವಿಶಿಷ್ಟವಾಗಿದೆ. ಇದು ಆಪಾತ ವಿಕಿರಣವನ್ನು ಅವಲಂಬಿಸಿಲ್ಲ.

ವಿವರಣೆ: ವಿಕಿರಣದ ಕ್ವಾಂಟಮ್ ಸಿದ್ಧಾಂತದ ಪ್ರಕಾರ ವಿಕಿರಣಶಕ್ತಿ ಆವರ್ತಾಂಕವನ್ನು ಅವಲಂಬಿಸಿದ ವಿವಿಕ್ತ ಪರಿಮಾಣಗಳಲ್ಲಿ ಅಥವಾ ಕ್ವಾಂಟಮ್‌ಗಳಲ್ಲಿ ಇರುತ್ತದೆ. ಈ ಸಿದ್ಧಾಂತ ಹಾಗೂ ಶಕ್ತಿಯ ಸಂರಕ್ಷಣ ನಿಯಮ ರಾಮನ್ ಪರಿಣಾಮದ ವಿವರಣೆಗೆ ತಳಹದಿ ಒದಗಿಡುತ್ತದೆ. ಫೋಟಾನ್ ಅಂದರೆ ವಿಕಿರಣದ ಕ್ವಾಂಟಮ್. ಅದರ ಶಕ್ತಿ hv, ಇಲ್ಲಿ h=ಪ್ಲಾಂಕ್ ಸ್ಥಿರಾಂಕ.

ರೇಖೀಯ ಚಲನೆ, ಆವರ್ತನೆ (ರೊಟೇಷನ್), ಕಂಪನ (ವೈಬ್ರೇಶನ್) ಮತ್ತು ಎಲೆಕ್ಟ್ರಾನ್ ಉತ್ತೇಜನ-ಇವುಗಳ ರೂಪದಲ್ಲಿ ಅನಿಲದ ಅಣುವಿನ ಒಟ್ಟು ಶಕ್ತಿ ಇರುತ್ತದೆ. ಮೊದಲನೆಯ ಒಂದನ್ನು ಬಿಟ್ಟು ಉಳಿದೆಲ್ಲವನ್ನು ಕ್ವಾಂಟೀಕರಿಸಬಹುದು. ಅಣು ಪ್ರಾರಂಭದಲ್ಲಿ ಶಕ್ತಿಯ ಅನೇಕ ಸಾಧ್ಯಮಟ್ಟಗಳ ಪೈಕಿ ಒಂದಾದ bಯಲ್ಲಿರಲಿ.

ಎಲೆಕ್ಟ್ರಾನ್‌ಶಕ್ತಿ, ಕಂಪನಶಕ್ತಿ ಮತ್ತು ಭ್ರಮಣಶಕ್ತಿಗಳು ಒಟ್ಟಾಗಿ E1 ಆಗಿರಲಿ. ಅಣುವಿನ ವೇಗ v ಆಗಿರಲಿ. ರಾಶಿ m ಆಗಿರಲಿ. ಅಣುವಿಗೆ hv1 ಶಕ್ತಿಯ ಆಪಾತ ಫೋಟಾನ್ ಡಿಕ್ಕಿ ಹೊಡೆದಾಗ ಅಣು ತಾತ್ಕಾಲಿಕವಾಗಿ (10-9 ಸೆಕೆಂಡಿನಷ್ಟು) ಮಧ್ಯಸ್ಥ ಮಟ್ಟಕ್ಕೆ ಏರಿ ಅನಂತರ E2 ಮಟ್ಟಕ್ಕೆ ಬರಬಹುದು. ಆಗ ಅದು ಹೊಮ್ಮಿಸುವ ಫೋಟಾನ್‌ನ ಆವರ್ತಾಂಕ vs ಆಗಿದ್ದು ಅಣುವಿನ ವೇಗ v2 ಆಗಿದ್ದರೆ ಶಕ್ತಿಯ ಸಂರಕ್ಷಣಾ ನಿಯಮದ ಪ್ರಕಾರ

ವೇಗದಲ್ಲಿ ಆಗುವ ಬದಲಾವಣೆ ನಗಣ್ಯ ಎಂದು ಭಾವಿಸಿದರೆ

E1 + hv1 = E2 + hvR

E1 - E2

vs = v1 + h

. ಎಂದಾದರೆ vs = v1 + vR

ರಾಮನ್ ಪಲ್ಲಟ vR = vs~v1 ಎಂದಾಗುತ್ತದೆ. ಅಣು ಪ್ರಾರಂಭದ ಮಟ್ಟಕ್ಕೇ ಬಂದರೆ E1-E2 = 0 ಚದರಿದ ವಿಕಿರಣದಲ್ಲಿ ಆವರ್ತಾಂಕ ವ್ಯತ್ಯಯವಿಲ್ಲ. ಅಣು ಪ್ರಾರಂಭ ಮಟ್ಟದಿಂದ ಉಚ್ಚತರ ಮಟ್ಟಕ್ಕೆ ಬಂದರೆ E2 > E1. ಆದ್ದರಿಂದ v2 = v1 - vR. ಅಣು ಪ್ರಾರಂಭಿಕ ಮಟ್ಟಕ್ಕಿಂತ ಕೆಳಗಿನ ಮಟ್ಟಕ್ಕೆ ಬಂದರೆ E2 < E1 ಆದ್ದರಿಂದ v2 = v1 + vR. vs < v1 ಆಗಿರುವ ರೋಹಿತರೇಖೆಗಳನ್ನು ಸ್ಟೋಕ್ಸ್ ರೇಖೆಗಳೆಂದೂ vs > v1 ಆಗಿರುವಂಥದನ್ನು ಪ್ರತಿಸ್ಟೋಕ್ಸ್ ರೇಖೆಗಳೆಂದೂ (ಆಂಟಿ ಸ್ಟೋಕ್ಸ್ ಲೈನ್ಸ್) ಕರೆಯುವುದಿದೆ.

E1, E2 ಗಳು ಚದರಕವಸ್ತುವಿನ ಅಣುಗಳ ವಿಶಿಷ್ಟಶಕ್ತಿಯ ಮಟ್ಟಗಳು ಆಗಿರುವುದರಿಂದ ರಾಮನ್ ಪಲ್ಲಟ (ಅರ್ಥಾತ್ ರಾಮನ್ ರೇಖೆಗಳ ಸ್ಥಾನ) ಚದರಕವಸ್ತುವನ್ನು ಅವಲಂಬಿಸಿದೆ. ಮೂಲ ಆಪಾತ ವಿಕಿರಣದ ರೋಹಿತರೇಖೆಗೆ ಸಮ್ಮಿತವಾದ ರಾಮನ್ ರೇಖೆಗಳು ನಿಂದಿರುತ್ತವೆ. ಉಷ್ಣತೆ ಹೆಚ್ಚಿದಂತೆಲ್ಲ ಮೂಲರೇಖೆಗೂ ರಾಮನ್ ರೇಖೆಗಳಿಗೂ ಇರುವ ಅಂತರವೂ ಹೆಚ್ಚುತ್ತದೆ.

ಧ್ರುವೀಕರಣ: ಆಪಾತ ವಿಕಿರಿಣ ಧ್ರುವೀಕರಣಕ್ಕೆ ಈಡಾಗದಿದ್ದರೂ ಹಲವು ರಾಮನ್‌ರೇಖೆಗಳು ಬೇರೆ ಬೇರೆ ಮಟ್ಟಗಳಿಗೆ ಧ್ರುವೀಕರಿಸಲ್ಪಡುತ್ತದೆ. ಧ್ರುವೀಕೃತ ರೇಖೆಗಳು ಸ್ಫುಟವೂ ಹೆಚ್ಚು ತೀವ್ರತೆಯುಳ್ಳವು ಆಗಿರುತ್ತವೆ. ದ್ರವಗಳಲ್ಲಿ ಅಣುಗಳ ಸಮ್ಮಿತಕಂಪನಗಳು ಧ್ರುವೀಕೃತ ರಾಮನ್‌ರೇಖೆಗಳಿಗೆ ಕಾರಣವಾಗುತ್ತವೆ. ಒಂದು ರೇಖೆಯ ನಿರ್ಧ್ರುವೀಕರಣಾಂಶವನ್ನು ಅಳೆದು (ಇದು ಸೊನ್ನೆಯಿಂದ 6/7ರವರೆಗೆ ಬದಲಾಗುತ್ತದೆ) ಸಮ್ಮಿತಕಂಪನಗಳನ್ನು ಅಸಮ್ಮಿತಕಂಪನಗಳಿಂದ ಪ್ರತ್ಯೇಕವಾಗಿ ಗುರುತಿಸಬಹುದು.

ತೀವ್ರತೆ: ಚದರಿಕೆವಸ್ತು ಮಾಧ್ಯಮದ ಅಣುಗಳು E1, E2, E3 ಇತ್ಯಾದಿಗಳು ಶಕ್ತಿಗಳ ಭಿನ್ನ ಕ್ವಾಂಟಮ್‌ಸ್ಥಿತಿಗಳಲ್ಲಿರಬಹುದು. ಬೋಲ್ಟ್ಸ್‌ಮನ್ ನಿಯಮದಿಂದ ಯಾವುದೇ ಶಕ್ತಿಮಟ್ಟದಲ್ಲಿರುವ ಅಣುಗಳ ಸಂಖ್ಯೆಯನ್ನು ನಮೂದಿಸಲು ಸಾಧ್ಯವಿದೆ. ಅದರ ಪ್ರಕಾರ E1 ಶಕ್ತಿಯುಳ್ಳ ಅಣುಗಳ ಸಂಖ್ಯೆ N1 ನ್ನು ಎಂದು ನಮೂದಿಸಬಹುದು. ಇಲ್ಲಿ C = ಸ್ಥಿರಾಂಕ, N = ಅಣುಗಳ ಒಟ್ಟು ಸಂಖ್ಯೆ g=ಬೋಲ್ಟ್ಸ್‌ಮನ್ ಸ್ಥಿರಾಂಕ. E1 ಕಡಿಮೆಯಾದಂತೆ N1 ಹೆಚ್ಚಾಗುತ್ತದೆ. ಇದರ ಪರಿಣಾಮವಾಗಿ ಸ್ಟೋಕ್ಸ್ ರೇಖೆಗಳಿಗೆ ಕಾರಣವಾಗುವ ಸಂಕ್ರಮಣಗಳು ಅಣುಗಳಲ್ಲಿ ಹೆಚ್ಚಾಗಿ ಸ್ಟೋಕ್ಸ್ ರೇಖೆಗಳು ಪ್ರತಿಸ್ಟೋಕ್ಸ್ ರೇಖೆಗಳಿಗಿಂತಲೂ ಅಧಿಕ ತೀವ್ರತೆಯನ್ನು ಪ್ರದರ್ಶಿಸುತ್ತದೆ. ಉಷ್ಣತೆ ಹೆಚ್ಚಾದಂತೆಲ್ಲ ಅಧಿಕಸಂಖ್ಯೆಯಲ್ಲಿ ಅಣುಗಳು ಉಚ್ಚತರ ಶಕ್ತಿಮಟ್ಟಗಳಿಗೆ ಏರುವುದರಿಂದ ಪ್ರತಿ ಸ್ಟೋಕ್ಸ್ ರೇಖೆಗಳ ತೀವ್ರತೆಗೂ ಹೆಚ್ಚುತ್ತದೆ.

ಮಹತ್ತ್ವ: ಅಣುಗಳ ಅವಶೋಷಣರೋಹಿತ (ಅಬ್ಸಾರ್ಪ್ಷನ್ ಸ್ಪೆಕ್ಟಮ್) ಅಥವಾ ಉತ್ಸರ್ಜನ ರೋಹಿತಗಳಿಗೆ (ಎಮಿಷನ್ ಸ್ಪೆಕ್ಟಮ್) ಹೋಲಿಸಿದರೆ ರಾಮನ್‌ರೋಹಿತ ತೀರ ಸರಳಸ್ವರೂಪದ್ದು. ಈ ಸರಳತೆ ರಾಮನ್ ಪರಿಣಾಮದ ಸಾರ್ವತ್ರಿಕತೆ ಮತ್ತು ರಸಾಯನವಿಜ್ಞಾನಗಳ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಯಿತು. ಐನ್‌ಸ್ಟೈನ್ ಹೇಳಿದಂತೆ ಪೋಟಾನ್ ಒಂದರ ಶಕ್ತಿ ಭೌತದ್ರವ್ಯದೊಳಗೆ ಆಂಶಿಕ ಪರಿವರ್ತನೆಗೆ ಒಳಗಾಗಬಹುದು ಎಂಬುದನ್ನು ರಾಮನ್ ಪರಿಣಾಮ ಸ್ಥಿರಪಡಿಸಿತು.

ಅಣುಗಳ ಕಂಪನರೋಹಿತ ಅತಿರಕ್ತ (ಇನ್‌ಫ್ರಾರೆಡ್) ಭಾಗದಲ್ಲಿದೆ. ಇಲ್ಲಿರುವ ಅಣುಗಳ ಶೋಷಣ ರೋಹಿತಪಟ್ಟಿಗಳ ಆವರ್ತಾಂಕಕ್ಕೆ ಸಮನಾಗಿ ರಾಮನ್ ಪಲ್ಲಟಗಳು ಇರುತ್ತವೆ. ಇದರಿಂದ ಅಣುಗಳ ಅತಿರಕ್ತರೋಹಿತವನ್ನೇ ರಾಮನ್ ಪರಿಣಾಮದಿಂದಾಗಿ ಗೋಚರಭಾಗಕ್ಕೆ ಸ್ಥಾನಾಂತರಿಸಿದಂತೆ ಆಯಿತು.

ಅಣುಗಳ ರಾಮನ್‌ರೋಹಿತದಲ್ಲಿ ಕಂಡುಬರುವ ರೇಖೆಗಳಿಗೆ ಸಂವಾದಿಯಾದ ರೇಖೆಗಳೆಲ್ಲವೂ ಅಣುಗಳ ಶೋಷಣರೋಹಿತದಲ್ಲಿ ಕಂಡುಬರದಿರಬಹುದು. ಆಗ ಅಣುರಚನೆ ಮತ್ತು ಸಂಯೋಜನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಎರಡೂ ರೋಹಿತಗಳ ಅಧ್ಯಯನದಿಂದ ಪಡೆಯಬಹುದು. ಅನ್ಯೋನ್ಯ ಬಹಿಷ್ಕರಣ ನಿಯಮವನ್ನು (ರೂಲ್ ಆಫ್ ಮ್ಯುಚುಯಲ್ ಎಕ್ಸ್‌ಕ್ಲೂಷನ್) ಉಪಯೋಗಿಸಿ ಅಣುವಿನಲ್ಲಿರುವ ಪರಮಾಣುಗಳ ವಿನ್ಯಾಸವನ್ನು ತಿಳಿಯಬಹುದು. ಉದಾ: ರೇಖೀಯ ಸಂರಚನೆಯಿದ್ದರೂ N2O (N-N-O) ಮತ್ತು CO2 (O-C--O) ಅಣುಗಳಲ್ಲಿ CO2 ಅಣುವಿಗೆ ಇರುವ ಸಮ್ಮಿತಿಕೇಂದ್ರ N2O ಗೆ ಇಲ್ಲ.

ಅತಿರಕ್ತ ಭಾಗದಲ್ಲಿ ರೋಹಿತವನ್ನು ನೀಡದ H2, O2 ಮೊದಲಾದ ಅಣುಗಳ ಆವರ್ತನೆ ಮತ್ತು ಕಂಪನಗಳನ್ನು ರಾಮನ್ ಪರಿಣಾಮದಿಂದ ಅಧ್ಯಯಿಸಬಹುದು.

ಸ್ಫಟಿಕಗಳಲ್ಲಿ ಅಣುಗಳ ಅಭಿವಿನ್ಯಾಸವನ್ನು ((ಓರಿಯೆಂಟೇಷನ್) ರಾಮನ್ ಪರಿಣಾಮದಿಂದ ತಿಳಿಯಬಹುದು.

ರಾಮನ್ ಅವರೇ ಮುನ್ಸೂಚಿಸಿದಂತೆ ಚದರಿಕೆವಸ್ತುವಿನ ಅಂತಿಮ ಸಂರಚನೆಯನ್ನು ತಿಳಿಯಲು ಹಾಗೂ ಅದು ಉಷ್ಣತೆಯನ್ನು ಭೌತ ಕಾರಣಗಳಿಂದಲೂ ಮಿಶ್ರಣ, ದ್ರಾವಣ, ಪಾಲಿಮರೀಕರಣಗಳೇ ಮೊದಲಾದ ಭೌತ-ರಾಸಾಯನಿಕ ಸ್ಥಿತಿಗಳಿಂದಲೂ ಪ್ರಭಾವಕ್ಕೊಳಗಾಗುವುದನ್ನು ಅಧ್ಯಯಿಸಲು ರಾಮನ್ ರೋಹಿತವನ್ನು ಯಾವುದೇ ನಿರ್ಬಂಧವಿಲ್ಲದೆ ಅನ್ವಯಿಸಬಹುದಾಗಿದೆ.

ತರಂಗಾಂತರದಲ್ಲಿನ ಈ ಬದಲಾವಣೆಗೂ ಪಾರದರ್ಶಕ ವಸ್ತುವಿನ ರಚನೆಗೂ ಸಂಬಂಧವಿರುವುದರಿಂದ ಈ ವಿದ್ಯಮಾನವನ್ನು ಅಧ್ಯಯನಮಾಡುವ ಮೂಲಕ ವಸ್ತುವಿನ ರಚನೆಯ ಬಗ್ಗೆ ತಿಳಿದುಕೊಳ್ಳುವುದು ಸಾಧ್ಯವಾಗುತ್ತದೆ. ರಾಮನ್ ಪರಿಣಾಮದ ಕುರಿತು ವಿವರಗಳು ಪ್ರಕಟವಾದ ಕೇವಲ ಹನ್ನೆರಡು ವರ್ಷಗಳ ಅವಧಿಯಲ್ಲಿಯೇ ಆ ವಿದ್ಯಮಾನವನ್ನು ಕುರಿತು ಬೇರೆಬೇರೆ ದೇಶದ ವಿಜ್ಞಾನಿಗಳು ಬರೆದ ೧೮೦೦ ಪ್ರೌಢಪ್ರಬಂಧಗಳು ಪ್ರಕಟವಾದವು ಎಂದು ದಾಖಲೆಗಳು ಹೇಳುತ್ತವೆ. ಅಷ್ಟೇ ಅಲ್ಲ, ರಾಮನ್ ಅವರ ಅಧ್ಯಯನಗಳ ಫಲವಾಗಿ ಅದೇ ಅವಧಿಯಲ್ಲಿ ಸಾವಿರಾರು ರಾಸಾಯನಿಕ ಸಂಯುಕ್ತಗಳ ರಚನೆಯನ್ನು ಅಭ್ಯಾಸಮಾಡುವುದೂ ಸಾಧ್ಯವಾಯಿತು.

ಲೇಸರ್, ರಾಮನ್ ಪರಿಣಾಮ ಮತ್ತು ಇತರ ಬೆಳೆವಣಿಗೆಗಳು[ಬದಲಾಯಿಸಿ]

ಸೂರ್ಯ ರಶ್ಮಿಯನ್ನು ಅನೇಕ ಸೋಸುಕಗಳ ಮೂಲಕ ಹರಿಸಿಯಾಗಲಿ ಪಾದರಸದ ಚಾಪ ದೀಪಗಳೊಂದಿಗೆ ಸೋಸುಕಗಳನ್ನು ಬಳಸಿಯಾಗಲಿ ರಾಮನ್ ಮೊದಲಿಗೆ ಪ್ರಯೋಗ ನಡೆಸಿದರು. 1960ನೇ ಇಸವಿಯಲ್ಲಿ ಬಳಕೆಗೆ ಬಂದ ಲೇಸರ್ ದೂಲದಿಂದ ಹೆಚ್ಚು ಏಕವರ್ಣೀಯವೂ ತೀವ್ರವೂ ಆದ ಆಪಾತವಿಕಿರಣವನ್ನು ಪಡೆಯಲು ಸಾಧ್ಯ. ಸುಮಾರು 60 ಸೆಂ.ಮೀ.-1 ವರೆಗಿನ ಅಲೆಸಂಖ್ಯೆ (ವೇವ್‌ನಂಬರ್) ಇರುವ ಕಂಪನರೋಹಿತವನ್ನು ಲೇಸರ್ ರಾಮನ್ ರೋಹಿತ ಮಾಪಕದಿಂದ ಈಗ ಸುಲಭವಾಗಿ ಕ್ರಮವೀಕ್ಷಿಸಬಹುದಾಗಿದೆ.

ಕ್ರಿಯಾವರ್ಧಕಗಳ (ಕೆಟಲಿಸ್ಟ್) ಮೇಲ್ಮೈಯ ಪರಿಶೀಲನೆ, ಪಾಲಿಮರ್‌ಗಳ ಅಧ್ಯಯನ, ಅಧಿಶೋಷಿತ (ಅಡ್ಸಾರ್ಬ್ಡ್) ಅಣು ನಮೂನೆಗಳ ಅಧ್ಯಯನ-ಇಂಥ ಸನ್ನಿವೇಶಗಳಲ್ಲಿ ಲೇಸರ್ ರಾಮನ್‌ರೋಹಿತ ತೀರ ಉಪಯುಕ್ತವೆನಿಸಿದೆ. ಲೇಸರ್‌ನಿಂದ ಅನಿಲ, ದ್ರವ ಮತ್ತು ಘನಪ್ರಾವಸ್ಥೆಗಳಲ್ಲಿ ಅಲ್ಪಪರಿಮಾಣದ ಪ್ರತಿಚಯಗಳಿದ್ದಾಗಲೂ ರಾಮನ್‌ರೋಹಿತವನ್ನು ಸುಲಭವಾಗಿ ಪಡೆಯಬಹುದು. ಹಾಗೂ ಅವುಗಳ ಅಣುಸಂಯೋಜನೆಯನ್ನು ತಿಳಿಯಬಹುದು.

ಲೇಸರ್ ಆಕರಗಳನ್ನು ಉಪಯೋಗಿಸಿ ಅನೇಕ ಬಗೆಯ ಹೊಸ ಉತ್ತೇಜನಗಳು (ಎಕ್ಸೈಟೇಷನ್ಸ್) ಕಂಡುಬಂದಿದೆ. (ಉದಾ: ಕಾಂತವ್ಯವಸ್ಥೆಗಳು, ಅರ್ಧವಾಹಕಗಳು).

ಲೇಸರ್ ದೂಲದ ತೀವ್ರತೆ ಒಂದು ನಿಶ್ಚಿತ ಮಟ್ಟವನ್ನು ಮೀರಿದಾಗ ರಾಮನ್‌ರೇಖೆಗಳ ತೀವ್ರತೆ ಲೇಸರ್ ಆಕರದ ಪಾಟಿಗೆ ಬರುವುದು ಕಂಡುಬಂದಿದೆ. ಚದರಿಕೆ ವಸ್ತುವೇ ದ್ವಿತೀಯಕ ಲೇಸರ್‌ನಂತೆ ವರ್ತಿಸುವ ಈ ವಿದ್ಯಮಾನಕ್ಕೆ ಚೋದಿತ ರಾಮನ್ ಪರಿಣಾಮ (ಸ್ಟಿಮ್ಯುಲೇಟೆಡ್ ರಾಮನ್ ಎಫೆಕ್ಟ್) ಎಂದು ಹೆಸರು.

ಪ್ರಬಲ ಲೇಸರ್ ದೂಲಗಳನ್ನು ಉಪಯೋಗಿಸಿದಾಗ ಲೇಸರ್ ದೂಲದ ಆವರ್ತಾಂಕ v1 ಆಗಿರುವಾಗ 2v1 ± vR ಆವರ್ತಾಂಕದ ರಾಮನ್‌ರೇಖೆಗಳು ಅಲ್ಪ ತೀವ್ರತೆಯಲ್ಲಿ ಕಂಡುಬಂದಿದೆ. ಇದಕ್ಕೆ ಅತಿರಾಮನ್ ಪರಿಣಾಮ (ಹೈಪರ್ ರಾಮನ್‌ಎಫೆಕ್ಟ್) ಎಂದು ಹೆಸರು.

ಒಂದು ಚದರಿಕೆವಸ್ತುವಿನ ಮೇಲೆ v1 ಆವರ್ತಾಂಕವನ್ನು ಒಳಗೊಂಡ ಸಂತತ ಆವರ್ತಾಂಕಗಳ (ಕಂಟಿನ್ಯುಯಸ್ ಫ್ರೀಕ್ವೆನ್ಸೀಸ್) ವಿಕಿರಣವೂ ಬಿದ್ದಾಗ, ಚದರಿಕೆವಸ್ತುವಿನ ಅಣುಗಳು v1 ಆವರ್ತಾಂಕದ ವಿಕಿರಣವನ್ನು ಉತ್ಸರ್ಜಿಸಿದರೂ v1 + vR ಮತ್ತು v1 - vR ಆವರ್ತಾಂಕಗಳ ವಿಕಿರಣವನ್ನು ಹೀರಿಕೊಳ್ಳುತ್ತದೆ. ಇದಕ್ಕೆ ವಿಲೋಮ ರಾಮನ್ ಪರಿಣಾಮ (ಇನ್‌ವರ್ಸ್ ರಾಮನ್ ಎಫೆಕ್ಟ್) ಎಂದು ಕರೆಯುವುದಿದೆ.

1970ರ ದಶಕದಲ್ಲಿ ಲೇಸರ್ ತಂತ್ರಜ್ಞಾನದಲ್ಲಿ ಆದ ಪ್ರಗತಿಯಿಂದಾಗಿ ಅನೇಕ ಆವರ್ತಾಂಕಗಳಲ್ಲಿ ಲೇಸರ್ ಬೆಳಕು ಒದಗುವಂತಾಯಿತು. ನಿಶ್ಚಿತ ಎಲೆಕ್ಟ್ರಾನಿಕ್ ಶಕ್ತಿಮಟ್ಟಗಳ ನಡುವೆ ಅಣುವಿನ ಸಂಕ್ರಮಣ ಜರುಗುವಂತೆ ಮಾಡುವುದು ಇದರಿಂದ ಸಾಧ್ಯವಾಯಿತು. ಹೀಗೆ ನಿಶ್ಚಿತ ಆವರ್ತಾಂಕದ ವಿಕಿರಣವನ್ನು ಹೀರಿ ಉಂಟಾಗುವುದನ್ನು ಅನುರಣನ ರಾಮನ್ ಪರಿಣಾಮ (ರೆಸೋನೆಂಸ್ ರಾಮನ್ ಎಫೆಕ್ಟ್) ಎಂದು ಕರೆಯುವುದಿದೆ. ಯಾವುದೋ ಏಕವರ್ಣೀಯ ಆಪಾತ ವಿಕಿರಣವನ್ನು ಉಪಯೋಗಿಸಿದಾಗ ಲಭಿಸುವ ರಾಮನ್‌ರೇಖೆಗಳ ತೀವ್ರತೆ ಅಷ್ಟು ಹೆಚ್ಚಾಗಿರುವುದಿಲ್ಲ. ಆದರೆ ಅನುರಣನ ರಾಮನ್ ಪ್ರಯೋಗವನ್ನು ನಡೆಸಿದಾಗ ರಾಮನ್‌ರೇಖೆಗಳ ತೀವ್ರತೆ ಗಣನೀಯವಾಗಿ ಹೆಚ್ಚಾಗಿರುತ್ತದೆ.

ಒತ್ತಡ ಪ್ರಯೋಗಿಸಿದಾಗ ಪ್ರೇರಿಸಲ್ಪಟ್ಟಿರುವ ಪ್ರಾವಸ್ಥಾವ್ಯತ್ಯಯಗಳ ಹಾಗೂ ಸ್ಫಟಿಕದ ರಾಸಾಯನಿಕ ಗುಣಗಳ ಸಂಶೋಧನೆ ರಾಮನ್‌ರೋಹಿತದ ಅಧ್ಯಯನದಿಂದ ಇಂದು ಸಾಧ್ಯವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Singh, R. (2002). "C. V. Raman and the Discovery of the Raman Effect". Physics in Perspective. 4 (4): 399–420. Bibcode:2002PhP.....4..399S. doi:10.1007/s000160200002. S2CID 121785335.
  2. Smekal, A. (1923). "Zur Quantentheorie der Dispersion". Naturwissenschaften. 11 (43): 873–875. Bibcode:1923NW.....11..873S. doi:10.1007/BF01576902. S2CID 20086350.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]