ವಿಷಯಕ್ಕೆ ಹೋಗು

ಪೂರಕ (ವಸ್ತು)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೂರಕ ವಸ್ತುವಾಗಿ ವ್ಯಾಪಕವಾಗಿ ಬಳಸಲಾಗುವ ಪುಡಿ ಸುಣ್ಣ.

ಪೂರಕ ವಸ್ತು ಎಂದರೆ ರಾಳ ಅಥವಾ ಸಂಯೋಜಕಗಳಿಗೆ (ಪ್ಲಾಸ್ಟಿಕ್‍ಗಳು, ಸಂಘಟಿತ ವಸ್ತುಗಳು, ಕಾಂಕ್ರೀಟ್) ಸೇರಿಸುವ ಕಣ. ಇದು ನಿರ್ದಿಷ್ಟ ಗುಣಗಳನ್ನು, ಸುಧಾರಿಸಬಲ್ಲದು, ಉತ್ಪನ್ನವನ್ನು ಹೆಚ್ಚು ಅಗ್ಗವಾಗಿ ಮಾಡಬಲ್ಲದು, ಅಥವಾ ಇವೆರಡರ ಮಿಶ್ರಣವನ್ನು ಮಾಡಬಲ್ಲದು.[]

ಖನಿಜಪೂರಕ ಎಂದರೆ ಖನಿಜದ ಗುಣಗಳನ್ನು ಸೂಕ್ತವಾದ ರೀತಿಯಲ್ಲಿ ಮಾರ್ಪಡಿಸುವ ಸಾಮರ್ಥ್ಯವಿರುವ, ಆದರೆ ತಾನೇ ಯಾವ ವಿಧವಾದ ಬದಲಾವಣೆಗಳಿಗೂ ಒಳಗಾಗದ ಪದಾರ್ಥ (ಮಿನರಲ್ ಫಿಲ್ಲರ್).

ಸೇರಿಸುವ ಉದ್ದೇಶಗಳು

[ಬದಲಾಯಿಸಿ]

ಇವನ್ನು ಖನಿಜದ ಯಾವುದಾದರೂ ಒಂದು ನಿರ್ದಿಷ್ಟ ಗುಣವನ್ನು ಉತ್ತಮಪಡಿಸಲು ಉಪಯೋಗಿಸುತ್ತಾರೆ. ಹಲವು ವೇಳೆ ಖನಿಜದಿಂದ ತಯಾರಿಸಿದ ಉತ್ಪನ್ನದ ಬೆಲೆಯನ್ನು ಸಾಕಷ್ಟು ತಗ್ಗಿಸಲು ಇವನ್ನು ಬಳಸಲಾಗುವುದು. ಖನಿಜಪೂರಕಗಳ ಉಪಯೋಗಗಳಲ್ಲಿ ಮುಖ್ಯವಾದುದು ಪ್ರಧಾನ ಖನಿಜದ ಹಲವು ಗುಣಗಳಾದ ಬಣ್ಣ, ರಚನೆ, ಹೊಳಪು ಇತ್ಯಾದಿಗಳನ್ನು ಉತ್ತಮಗೊಳಿಸುವುದೇ ಆಗಿದೆ. ಹಲವು ಬಾರಿ ಮುಖ್ಯ ಖನಿಜದ ಭೌತಗುಣಗಳಾದ ಶ್ಯಾನತ್ವ (ಜಿಗುಟು), ಕಾಠಿಣ್ಯ, ಉಷ್ಣನಿರೋಧಕ ಸಾಮರ್ಥ್ಯ, ಘರ್ಷಕ ಸಾಮರ್ಥ್ಯ ಇವನ್ನು ಉತ್ತಮ ಪಡಿಸಿ ಸೂಕ್ತ ಕೈಗಾರಿಕೆಯಲ್ಲಿ ಅಳವಡಿಸಿಕೊಳ್ಳಲು ಪೂರಕಗಳ ಉಪಯೋಗ ಉಂಟು. ಅಲ್ಲದೆ ಅವು ಇತರ ವಸ್ತುಗಳೊಡನೆ ಸಂಯೋಗವಾಗುವ ಶಕ್ತಿ ಮತ್ತು ಅವುಗಳ ಮೃದು ಚಾಲನಶಕ್ತಿ ಮುಂತಾದ ಗುಣಗಳನ್ನೂ ಉತ್ತಮಪಡಿಸಬಹುದು. ಹೀಗೆ ಕೈಗಾರಿಕಾ ಖನಿಜಗಳಲ್ಲಿನ ಕುಂದುಗಳನ್ನು ಉತ್ತಮಪಡಿಸಲು ಮತ್ತು ಅವನ್ನು ಉಪಯೋಗಿಸುವ ಕೈಗಾರಿಕೆಗಳ ವೆಚ್ಚವನ್ನು ಆದಷ್ಟು ಇಳಿಸಲು ಖನಿಜಪೂರಕಗಳನ್ನು ಬಳಸಲಾಗುತ್ತಿದೆ.

ಖನಿಜಪೂರಕಗಳ ಗುಣಗಳು

[ಬದಲಾಯಿಸಿ]

ವಿವಿಧ ಕೈಗಾರಿಕೆಗಳಲ್ಲಿ ಬಳಕೆಯಲ್ಲಿರುವ ಖನಿಜಪೂರಕಗಳ ನಿರ್ದಿಷ್ಟ ಗುಣಗಳನ್ನು ವ್ಯಾಪಾರದ ಗುಟ್ಟೆಂದು ಕಾದಿಡಲಾಗಿದೆ. ಹೀಗಿದ್ದರೂ ಕಣದ ಗಾತ್ರ ಅಥವಾ ನಯ ಅತ್ಯಂತ ಮುಖ್ಯವಾದ ಗುಣವೆಂದು ಭಾವಿಸಲಾಗಿದೆ. ಇದನ್ನು ಅನುಸರಿಸಿಯೇ ಖನಿಜಪೂರಕಗಳ ಕೈಗಾರಿಕಾ ವ್ಯಾಪ್ತಿಯನ್ನು ನಿರ್ಧರಿಸಲಾಗುವುದು. ಕಣಗಳ ಗಾತ್ರ ಬಹು ಸೂಕ್ಷ್ಮವಾಗಿದ್ದು 1/8" ನಿಂದ ಹಿಡಿದು ಒಂದು ಮೈಕ್ರಾನ್ ಅಥವಾ ಅದಕ್ಕೂ ಕಡಿಮೆ ಇರುತ್ತದೆ. ಜರಡಿಯಲ್ಲಿನ (ಇವು ಹಾದು ಹೋಗುವ) ರಂಧ್ರಗಳ ಸಂಖ್ಯೆಗೆ ಅನುಗುಣವಾಗಿ 100 ಮೆಷ್‌ನಿಂದ 325 ಮೆಷ್ ವರೆಗೆ ಹೆಸರಿಡಲಾಗುವುದು. ಕಣಗಳು ಗಾತ್ರದಲ್ಲಿ ಒಂದು ಮೈಕ್ರಾನಿಗೂ ಕಡಿಮೆಯಿದ್ದಲ್ಲಿ ಅವುಗಳ ನಯವನ್ನು ಕಣಸಂಖ್ಯೆ ಗಾತ್ರವನ್ನು ಸೂಚಿಸುವ ರೇಖಾ ಚಿತ್ರಗಳ ಮೂಲಕ ವಿವರಿಸಬಹುದು.

ಉಪಯೋಗಗಳು

[ಬದಲಾಯಿಸಿ]

ಕೈಗಾರಿಕಾ ವಸ್ತುಗಳಾದ ಕಾಗದ, ರಬ್ಬರ್, ದ್ರವ ವರ್ಣ, ಬಟ್ಟೆ, ಸುಗಂಧ ವಸ್ತುಗಳು ಮುಂತಾದವುಗಳ ತಯಾರಿಕೆಯಲ್ಲಿ ಖನಿಜಪೂರಕಗಳನ್ನು ಬಹುವಾಗಿ ಬಳಸಲಾಗುತ್ತಿದೆ. ಇವುಗಳಿಗೆ ಅಪಾರಕತೆ, ಹೊಳಪು, ರಾಸಾಯನಿಕ ಕ್ರಿಯೆಗಳನ್ನು ಮತ್ತು ವಾಯುಗುಣದಲ್ಲಿನ ಬದಲಾವಣೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಇತ್ಯಾದಿ ಉಪಯುಕ್ತ ಗುಣಗಳನ್ನು ಕೊಡಲು ಖನಿಜಪೂರಕಗಳ ಬಳಕೆ ಅವಶ್ಯಕ. ಹೀಗೆ ಮಾಡುವುದರಿಂದ ಉತ್ಪನ್ನದ ಗುಣದಲ್ಲಿ ಯಾವ ವ್ಯತ್ಯಾಸಗಳೂ ಆಗುವುದಿಲ್ಲ.

  • ರಾಸಾಯನಿಕ ಗೊಬ್ಬರಗಳ ತಯಾರಿಕೆಯಲ್ಲಿ ಇವು ಬಹು ಮುಖ್ಯ. ಏಕೆಂದರೆ ರಾಸಾಯನಿಕ ವಸ್ತುಗಳನ್ನು ಪೂರಕಗಳೊಡನೆ ಬೆರಸದೆ ಹಾಗೆಯೇ ಗೊಬ್ಬರವಾಗಿ ಉಪಯೋಗಿಸಿದಲ್ಲಿ ಅವು ಸಸ್ಯಗಳ ಪುಷ್ಟ ಬೆಳೆವಣಿಗೆಗೆ ಸಹಾಯಕವಾಗುವುದರ ಬದಲು ತಮ್ಮ ತೀವ್ರ ರಾಸಾಯನಿಕ ಗುಣದಿಂದ ಅವುಗಳಿಗೆ ಮಾರಕವಾಗುವುವು. ಇದನ್ನು ತಡೆಗಟ್ಟಲು ಅಂದರೆ ರಾಸಾಯನಿಕಗಳ ತೀವ್ರತೆಯನ್ನು ಕಡಿಮೆ ಮಾಡಲು ಒಂದು ಜಡವಸ್ತು ಬಹು ಅಗತ್ಯ. ಇದನ್ನು ರಾಸಾಯನಿಕ ವಸ್ತುವಿನೊಡನೆ ಉಪಯುಕ್ತ ಪರಿಮಾಣದಲ್ಲಿ ಬೆರೆಸಿದಲ್ಲಿ ಉತ್ತಮ ರಾಸಾಯನಿಕ ಗೊಬ್ಬರ ದೊರೆಯುತ್ತದೆ. ಅಲ್ಲದೆ ಕೃತಕ ಗೊಬ್ಬರದ ರಾಸಾಯನಿಕ ವಸ್ತು ಹೆಪ್ಪುಗಟ್ಟುವುದು ಮತ್ತಿತರ ತೊಂದರೆಗಳು ಕಂಡುಬರಲಾರವು. ಈ ದೃಷ್ಟಿಯಿಂದ ನಯವಾದ ಮರಳು, ಸುಣ್ಣಶಿಲೆ,[] ಡಾಲಮೈಟ್ ಮತ್ತು ಜಿಪ್ಸಂ ಅಧಿಕ ಮೊತ್ತದಲ್ಲಿ ಉಪಯೋಗದಲ್ಲಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮರಳು ಮತ್ತು ಜಡ ಸಿಲಿಕೇಟ್ ಖನಿಜಗಳ ಬಳಕೆ ಅಷ್ಟಾಗಿ ಕಂಡುಬರುತ್ತಿಲ್ಲ.
  • ಕ್ರಿಮಿನಾಶಕಗಳ ತಯಾರಿಕೆಯಲ್ಲೂ ಖನಿಜಪೂರಕಗಳನ್ನು ಅಧಿಕ ಮೊತ್ತದಲ್ಲಿ ಬಳಸಲಾಗುತ್ತಿದೆ. ಕ್ರಿಮಿನಾಶಕದ ರಾಸಾಯನಿಕ ಧಾತುವನ್ನು ಖನಿಜಪೂರಕದೊಡನೆ ಸರಿಯಾದ ಪರಿಮಾಣದಲ್ಲಿ ಬೆರೆಸದೆ ಹಾಗೆಯೇ ಬಳಸಿದಲ್ಲಿ ಅದು ಅಪಾಯಕಾರಿ ಅಲ್ಲದೆ ಹೆಚ್ಚಿನ ಭಾಗ ವ್ಯರ್ಥವಾಗುತ್ತದೆ. ಅದೇ ಅಲ್ಲದೆ ಖನಿಜಪೂರಕದ ಮತ್ತೊಂದು ಪಾತ್ರವೂ ಉಂಟು. ಅಂದರೆ ರೋಗ ಹಿಡಿದ ಪೈರು ಪಚ್ಚೆ ಮತ್ತು ಗಿಡಮರಗಳಿಗೆ ಕ್ರಿಮಿನಾಶಕ ವಸ್ತುವನ್ನು ಸಿಂಪಡಿಸಿದಾಗ ಅದು ದೂಳಿನಂತೆ ಉದುರಿ ಹೋಗದೆ, ಸಸ್ಯ ಭಾಗಗಳಿಗೆ ಮೆತ್ತಿಕೊಂಡಿರಬೇಕು. ಈ ರೀತಿಯ ಅಂಟಿಕೊಳ್ಳುವ ಗುಣ ಬಹು ಮುಖ್ಯ. ಅಲ್ಲದೆ ಕ್ರಿಮಿನಾಶಕದ ಮಾರಕಗುಣವನ್ನೂ ವೃದ್ಧಿಪಡಿಸುವಂತಿರಬೇಕು. ಜೇಡಿಮಣ್ಣು, ಬಳಪದ ಕಲ್ಲು, ಫುಲ್ಲರ್ಸ್ ಮಣ್ಣು, ಡಯಾಟಮೈಟ್,[] ಜಿಪ್ಸಂ, ಸುಣ್ಣ ಶಿಲೆ, ಪೈರೊಫಿಲ್ಲೈಟ್ ಇವನ್ನು ಸಾಮಾನ್ಯವಾಗಿ ಕ್ರಿಮಿನಾಶಕಗಳ ತಯಾರಿಕೆಯಲ್ಲಿ ಖನಿಜಪೂರಕಗಳಂತೆ ಉಪಯೋಗಿಸುತ್ತಾರೆ.
  • ರಬ್ಬರ್ ಟೈರುಗಳ ತಯಾರಿಕೆಯಲ್ಲಿ ಇಂಗಾಲ ಮತ್ತು ಸಿಲಿಕಗಳನ್ನು ಖನಿಜಪೂರಕಗಳಾಗಿ ಉಪಯೋಗಿಸುತ್ತಾರೆ.[] ಇವನ್ನು ರಬ್ಬರಿನೊಡನೆ ಬೆರೆಸುವುದರಿಂದ ಟೈರಿನ ಬಾಳಿಕೆ ಬಹುಮಟ್ಟಿಗೆ ಉತ್ತಮಗೊಳ್ಳುತ್ತದೆ. ಇಲ್ಲಿ ಪೂರಕ ವಸ್ತು ಸಾರರಿಕ್ತಕಾರಿ (ಡೈಲ್ಯೂಎಂಟ್) ಮತ್ತು ಹರಡುವ ಕಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಇಂಗಾಲವಂತೂ ಬಹು ಮುಖ್ಯವಾದ ಭದ್ರಪಡಿಸುವ ಕಾರಕವಾಗಿ ರಬ್ಬರಿನ ಕರ್ಷಣ ಸಾಮರ್ಥ್ಯವನ್ನು (ಟೆನ್ಸೈಲ್ ಸ್ಟ್ರೆಂತ್) ಉತ್ತಮಪಡಿಸುವುದರ ಜೊತೆಗೆ ಅದು ಹೆಚ್ಚುಕಾಲ ಬಾಳಿಕೆ ಬರುವಂತೆ ಮಾಡುತ್ತದೆ.
  • ಕೆಲವು ಉತ್ಪನ್ನಗಳಿಗೆ ಸೊಗಸಾದ ಬಿಳಿಯ ಬಣ್ಣವನ್ನು ಕೊಡಲು ಜೇಡಿಮಣ್ಣು, ಬಳಪದ ಕಲ್ಲು, ಬೆರೈಟ್,[] ಸ್ಲೇಟಿನ ಪುಡಿ, ಡಯಾಟಮೈಟ್, ಮೈಕ, ಕಲ್ನಾರು, ಮತ್ತು ಡಾಲಮೈಟುಗಳನ್ನು ಜಡಪೂರಕಗಳನ್ನಾಗಿ ಉಪಯೋಗಿಸುತ್ತಾರೆ. ಇವುಗಳ ಉಪಯೋಗದಿಂದ ತಯಾರಿಕಾ ವಿಧಾನವನ್ನೂ, ಉತ್ಪನ್ನದ ಕೆಲವು ಗುಣಗಳನ್ನೂ ಉತ್ತಮಪಡಿಸಬಹುದು. ಅಲ್ಲದೆ ತಯಾರಿಕೆಯ ವೆಚ್ಚವನ್ನು ಕೂಡ ಕಡಿಮೆ ಮಾಡಬಹುದು.
  • ಇತ್ತೀಚೆಗೆ ಖನಿಜಪೂರಕಗಳನ್ನು ಪ್ಲಾಸ್ಟಿಕ್ ಮತ್ತು ಎರಕದ ಕೈಗಾರಿಕೆಗಳಲ್ಲೂ ಉಪಯೋಗಿಸುತ್ತಾರೆ.[] ಇವು ಎರಕ ಕುಗ್ಗುವುದನ್ನು ಮತ್ತು ನೀರಿನ ಸಂಪರ್ಕದಿಂದಾಗುವ ಬದಲಾವಣೆಗಳನ್ನು ತಡೆಯುವ ಸಾಮರ್ಥ್ಯವನ್ನು ಕೊಡುತ್ತವೆ. ಉಷ್ಣನಿರೋಧಕ ಕಾರಕಗಳ ತಯಾರಿಕೆಯಲ್ಲಿ ಕಲ್ನಾರನ್ನೂ, ವಿದ್ಯುದುಪಕರಣಗಳಿಗಾಗಿ ಮೈಕವನ್ನು, ಉತ್ಪನ್ನದ ಹೊರಮೈ ಆಕರ್ಷಕವಾಗುವಂತೆ ಮಾಡಲು ಡಯಾಟಮೈಟನ್ನೂ ಖನಿಜಪೂರಕಗಳಾಗಿ ಉಪಯೋಗಿಸಲಾಗುತ್ತಿದೆ. ಇವೇ ಅಲ್ಲದೆ ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಜೇಡಿಮಣ್ಣು, ಜಿಪ್ಸಂ, ಬೇರೈಟ್, ಸ್ಲೇಟ್ ಮತ್ತು ಸ್ಫಟಿಕದ ಹರಳುಗಳನ್ನೂ ಬಳಸುತ್ತಾರೆ. ಬಟ್ಟೆಗಳ ತಯಾರಿಕೆಯಲ್ಲಂತೂ ಖನಿಜಪೂರಕಗಳು ಬೇಕೇ ಬೇಕು. ಗಂಜಿ ಅಥವಾ ಡೆಕ್ಸ್‌ಟ್ರೇನುಗಳ ಜೊತೆಯಲ್ಲಿ ಜೇಡಿಮಣ್ಣು, ಬೇರೈಟ್,[] ಬಳಪದ ಕಲ್ಲು, ಜಿಪ್ಸಂ ಮುಂತಾದ ಪೂರಕ ವಸ್ತುಗಳು ಉಪಯೋಗದಲ್ಲಿವೆ. ತಯಾರಾದ ಬಟ್ಟೆಯ ನೂಲಿನ ಎಳೆಗಳ ನಡುವಿನ ಸಂದುಗಳನ್ನು ಮುಚ್ಚಲು ಮತ್ತು ಬಟ್ಟೆಗೆ ನಯ ಮತ್ತು ಹೊಳಪನ್ನು ಉಂಟುಮಾಡಲು ಇವು ಬೇಕು. ಈ ದೃಷ್ಟಿಯಿಂದ ಸುದ್ದೆಮಣ್ಣು ಮತ್ತು ಸೀಮೆಸುಣ್ಣವನ್ನು ಯಥೇಚ್ಛವಾಗಿ ಬಳಸುತ್ತಾರೆ. ಇವೇ ಅಲ್ಲದೆ ಟಾಲ್ಕ್, ಜಿಪ್ಸಂ ಮತ್ತು ಬೆರೈಟುಗಳನ್ನೂ ಉಪಯೋಗಿಸುವುದುಂಟು.

ಈ ಬಗೆಯ ಪ್ರಮುಖ ಉಪಯೋಗಗಳಲ್ಲದೆ ಖನಿಜಪೂರಕಗಳಿಗೆ ಹಲವಾರು ಸಣ್ಣ ಪುಟ್ಟ ಉಪಯೋಗಗಳೂ ಇವೆ. ಉದಾಹರಣೆಗೆ ಜೇಡಿಮಣ್ಣು, ಬಳಪದ ಕಲ್ಲು, ಬೆಂಟೊನೈಟ್,[] ಡಯಾಟಮೈಟ್ ಮುಂತಾದ ಖನಿಜಗಳ ನಯವಾದ ದೂಳು ಎರಕ ಹೊಯ್ದು ತಯಾರಿಸುವ ಉತ್ಪನ್ನಗಳಿಗೆ ಬಹು ಮುಖ್ಯ. ಅಚ್ಚುಗಳ ಮೇಲೆ ಈ ಪೂರಕಗಳ ದೂಳನ್ನು ಸಿಂಪಡಿಸಿದಲ್ಲಿ ಅವು ಹೆಚ್ಚು ಬಲಯುತವಾಗುತ್ತವೆ. ಕೆಲವು ಕೈಗಾರಿಕೆಗಳಲ್ಲಿ ಗ್ರಾಫೈಟ್ ಮತ್ತು ಬಳಪದ ಕಲ್ಲನ್ನು ಮೃದು ಚಾಲಕಗಳನ್ನಾಗಿ[] ಮತ್ತು ಅಂಟಿಕೊಳ್ಳುವಂಥ ಕಾರಕಗಳಾಗಿ ಉಪಯೋಗಿಸುತ್ತಾರೆ. ಇವೇ ಅಲ್ಲದೆ ಚರ್ಮ ಹದಮಾಡುವಿಕೆ, ಸಿಮೆಂಟು ತಯಾರಿಕೆ ಮತ್ತು ನಿತ್ಯಬಳಕೆಯ ವಸ್ತುಗಳಾದ ಮಸಿ, ಟೂತ್‌ಪೇಸ್ಟ್ ತಯಾರಿಕೆಗಳಲ್ಲೂ ಖನಿಜಪೂರಕಗಳು ಅಗತ್ಯ.

ಉಲ್ಲೇಖಗಳು

[ಬದಲಾಯಿಸಿ]
  1. Pelzl, Bernhard; Wolf, Rainer; Kaul, Bansi Lal (2018). "Plastics, Additives". Ullmann's Encyclopedia of Industrial Chemistry. Weinheim: Wiley-VCH. pp. 1–57. doi:10.1002/14356007.a20_459.pub2. {{cite encyclopedia}}: Cite has empty unknown parameter: |authors= (help)
  2. Huwald, Eberhard (2001). "Calcium carbonate - pigment and filler". In Tegethoff, F. W. (ed.). Calcium Carbonate. Basel: Birkhäuser. pp. 160–170. doi:10.1007/978-3-0348-8245-3_7. ISBN 3-0348-9490-2.
  3. Fields, Paul; Allen, Sylvia; Korunic, Zlatko; McLaughlin, Alan; Stathers, Tanya (July 2002). "Standardized testing for diatomaceous earth" (PDF). Proceedings of the Eighth International Working Conference of Stored-Product Protection. York, U.K.: Entomological Society of Manitoba.
  4. Flörke OW, Graetsch HA, Brunk F, et al. (2018). "Silica". Ullmann's Encyclopedia of Industrial Chemistry. Weinheim: Wiley-VCH. doi:10.1002/14356007.a23_583.pub3. {{cite encyclopedia}}: Cite has empty unknown parameter: |authors= (help)
  5. M. Michael Miller Barite, 2009 Minerals Yearbook
  6. "Fillers Market Report: Global Industry Analysis, 2024". www.ceresana.com. Retrieved 2019-02-14.
  7. Dana, James Dwight; Ford, William Ebenezer (1915). Dana's Manual of Mineralogy for the Student of Elementary Mineralogy, the Mining Engineer, the Geologist, the Prospector, the Collector, Etc (13 ed.). John Wiley & Sons, Inc. pp. 299–300.
  8. Chang, Y; Hocheng, H (June 2001). "The flowability of bentonite bonded green molding sand". Journal of Materials Processing Technology. 113 (1–3): 238–244. doi:10.1016/S0924-0136(01)00639-2.
  9. "Graphite Statistics and Information". USGS. Retrieved 2009-09-09.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: