ವಿಷಯಕ್ಕೆ ಹೋಗು

ಪಲ್ಸಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಎಸ್ಆರ್ ಬಿ1509−58 – ಚಂದ್ರಾ ವೀಕ್ಷಣಾಲಯದಿಂದ ದೊರೆತ ಕ್ಷ-ಕಿರಣಗಳು ಬಂಗಾರದ ಬಣ್ಣದ್ದಾಗಿವೆ; ವೈಸ್‍ನಿಂದ ದೊರೆತ ಅತಿಗೆಂಪು ಕೆಂಪು, ಹಸಿರು ಮತ್ತು ನೀಲಿ/ಗರಿಷ್ಠ ಬಣ್ಣದಲ್ಲಿವೆ.

ಪಲ್ಸಾರ್‌ಗಳು ಕ್ರಮಬದ್ಧ ರೇಡಿಯೊಸ್ಪಂದಗಳ ಮೂಲಕ ಗೋಚರವಾಗುವ ಆಕಾಶಕಾಯಗಳು. ವಿವಿಧ ಪಲ್ಸಾರುಗಳ ಸ್ಪಂದಗಳು ಸೆಕೆಂಡಿನ ಮೂವತ್ತನೆಯ ಒಂದು ಅಂಶದಿಂದ ತೊಡಗಿ ಕೆಲವು ಸೆಕೆಂಡುಗಳ ತನಕದ ಅವಧಿಗಳಲ್ಲಿ ಕರಾರುವಕ್ಕಾಗಿ ಬರುತ್ತವೆ. ಇವೆಲ್ಲ ನಮ್ಮ ಬ್ರಹ್ಮಾಂಡದೊಳಗೇ (ಆಕಾಶಗಂಗೆ) ಇರುವ ಆವರ್ತಕ ನ್ಯೂಟ್ರಾನ್ ತಾರೆಗಳೆಂಬ ನಂಬಿಕೆಯಿದೆ. ಹಲವು ಮಿನಿಟುಗಳ ಅವಧಿಯಲ್ಲಿ ಎಕ್ಸ್‌ಕಿರಣಗಳನ್ನು ನೀಡುವ ಕೆಲವು ಯಮಳವ್ಯವಸ್ಥೆಗಳು ಈಚೆಗೆ ಕಂಡು ಬಂದಿದ್ದು ಅವನ್ನು ಎಕ್ಸ್‌ಕಿರಣ ಪಲ್ಸಾರುಗಳೆಂದು ಕೆಲವೊಮ್ಮೆ ಕರೆಯುವುದುಂಟು. ಆದರೆ ಸಾಧರಣ ಅರ್ಥದಲ್ಲಿ ತಿಳಿದ ರೇಡಿಯೋ ಪಲ್ಸಾರುಗಳಿಗಿಂತ ಅವು ತೀರ ಭಿನ್ನವಾಗಿರುವುದರಿಂದ ಅವನ್ನು ಇಲ್ಲಿ ಪ್ರಸ್ತಾವಿಸಿಲ್ಲ.

ಇತಿಹಾಸ

[ಬದಲಾಯಿಸಿ]

ಇಂಗ್ಲೆಂಡಿನ ಪ್ರಸಿದ್ಧ ರೇಡಿಯೊ ಖಗೋಳವಿಜ್ಞಾನಿ ಆಂಟೋನಿ ಹ್ಯೂಯಿಷ್ (1974 ರಲ್ಲಿ ಭೌತವಿಜ್ಞಾನದ ನೊಬೆಲ್ ಪಾರಿತೋಷಕ ದೊರೆಯಿತು[]) ಮತ್ತು ಅವರ ಸಂಶೋಧಕ ವಿದ್ಯಾರ್ಥಿನಿಯಾಗಿದ್ದ ಜೊಸೆಲಿನ್ ಬೆಲ್ ಎಂಬವರು 1967 ರಲ್ಲಿ ಆಕಸ್ಮಿಕವಾಗಿ ಪಲ್ಸಾರುಗಳನ್ನು ಆವಿಷ್ಕರಿಸಿದರು.[][] ಆಗ ಅವರ ಪ್ರಯೋಗದ ಮೂಲ ಉದ್ದೇಶ ಕ್ವೇಸಾರುಗಳಿಂದ ಮತ್ತು ಬಾಹ್ಯರೇಡಿಯೊ ಬ್ರಹ್ಮಾಂಡಗಳಿಂದ ಬರುವ ರೇಡಿಯೋ ತರಂಗಗಳು ಸೌರಮಾರುತದ ಮೂಲಕ ಹಾದು ಬಂದಾಗ ಅವುಗಳಲ್ಲಿ ಕಂಡುಬರುವ ಮಿನುಗುವಿಕೆಯನ್ನು (ಸಿಂಟೆಲೇಶನ್) ಗಮನಿಸುವುದಾಗಿತ್ತು. ಭೂ ವಾಯುಮಂಡಲದ ಅನಿಲಗಳ ಸಾಂದ್ರತೆಯ ಅವ್ಯವಸ್ಥೆಯಿಂದಾಗಿ ನಕ್ಷತ್ರಗಳು ಮಿನುಗುವುವೆಂಬುದು ಸರಿಯಷ್ಟೆ. ಹೀಗೆಯೇ ಸೌರಮಾರುತದ ಎಲೆಕ್ಟ್ರಾನುಗಳ ಅವ್ಯವಸ್ಥೆಯಿಂದಾಗಿ ಆ ಮಂಡಲದ ಹಿನ್ನೆಲೆಯಲ್ಲಿರುವ ಅತಿದೂರದ ರೇಡಿಯೊ ಆಕರಗಳೂ (radio sources) ಮಿನುಗುವುವು. ಈ ಕ್ರಿಯೆಯ ಅಧ್ಯಯನದಿಂದ ರೇಡಿಯೋ ಆಕರದ ವ್ಯಾಪ್ತಿ ಮತ್ತು ಸೌರಮಾರುತದ ವ್ಯವಸ್ಥೆಯ ಬಗ್ಗೆ ಅನೇಕ ಮಾಹಿತಿಗಳು ದೊರೆಯುತ್ತವೆಂಬುದನ್ನು ಹ್ಯೂಯಿಷರು ತೋರಿಸಿಕೊಟ್ಟಿದ್ದರು. ಇದಕ್ಕಾಗಿ ವಿಶೇಷ ಸೌಲಭ್ಯಗಳಿದ್ದ ರೇಡಿಯೊ ದೂರದರ್ಶಕದ ಸಹಾಯದಿಂದ ಮಿನುಗುವ ರೇಡಿಯೊ ಆಕರಗಳ ನಕಾಶೆಯನ್ನು ತಯಾರಿಸುವ ಯೋಜನೆಯನ್ನು ಹ್ಯೂಯಿಷರು ಜೊಸೆಲಿನ್ ಬೆಲ್‌ಗೆ ವಹಿಸಿಕೊಟ್ಟಿದ್ದರು. ಆಕೆ ಇದಕ್ಕೆ ಸಂಬಂಧಿಸಿದ ವೀಕ್ಷಣೆಗಳಿಂದ ಬರುತ್ತಿದ್ದ ಮೈಲಿಗಟ್ಟಲೆ ಉದ್ದದ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾಗ, 1967ರ ನವೆಂಬರಿನಲ್ಲಿ ವಿಸ್ಮಯಕಾರಿ ಸ್ಪಂದನಸಮುದಾಯವೊಂದು ಕಂಡುಬಂದಿತು.[] ಯಾವುದೋ ಒಂದು ಆಕಾಶಕಾಯ ಅತ್ಯಂತ ಕ್ರಮಬದ್ಧವಾಗಿ ರೇಡಿಯೊಸ್ಪಂದಗಳನ್ನು ಉತ್ಸರ್ಜಿಸುತ್ತಿತ್ತು ಎಂದು ಈ ಸಮುದಾಯದಿಂದ ಸ್ಪಷ್ಟವಾಗಿ ಸೂಚಿತವಾಗಿತ್ತು. ಮೊದಲಿಗೆ ಅವು ಬಾಹ್ಯಾಕಾಶದ ಸುಸಂಸ್ಕೃತ ಜನಾಂಗವೊಂದು ನಮ್ಮೆಡೆಗೆ ಕಳುಹಿಸುತ್ತಿರುವ ಸಂಜ್ಞೆಗಳೆಂದು ಅವರು ಶಂಕಿಸಿದರು. ಅತ್ಯಂತ ಕೂತೂಹಲಕಾರಿಯಾದ ಈ ಘಟನೆಯ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿಗಳನ್ನು ಪಡೆಯಲು ಮತ್ತೆ ಕೆಲವು ವೀಕ್ಷಣೆಗಳನ್ನು ನಡೆಸಿ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಇಂಥ ನಾಲ್ಕು ಆಕಾಶಕಾಯಗಳನ್ನು ಹ್ಯೂಯಿಷ್ ಮತ್ತು ಬೆಲ್ ಪತ್ತೆಮಾಡಿ ಅವುಗಳಿಗೆ ಪಲ್ಸಾರುಗಳೆಂಬ (ಪಲ್ಸೇಟಿಂಗ್ ರೇಡಿಯೊ ಸೋರ್ಸಸ್-ಸ್ಪಂದಿಸುವ ರೇಡಿಯೊ ಆಕರಗಳು) ಹೆಸರನ್ನು ಸೂಚಿಸಿದರು. ಈ ನೂತನ ವಿಸ್ಮಯದಿಂದ ಆಕರ್ಷಿತರಾದ ಅನೇಕ ವಿಜ್ಞಾನಿಗಳು ಶೀಘ್ರದಲ್ಲಿಯೇ ಅವುಗಳ ಶೋಧನೆಗೆ ತೊಡಗಿ 1970ರ ಹೊತ್ತಿಗೆ 30 ಪಲ್ಸಾರುಗಳನ್ನು ಗುರುತಿಸಿದರು. ಇಷ್ಟೊಂದು ಬಾಹ್ಯ ಸಂಸ್ಕೃತಿಗಳು ಒಮ್ಮೆಗೇ ನಮ್ಮ ಕಡೆಗೆ ಸಂಜ್ಞೆಗಳನ್ನು ಕಳುಹಿಸುತ್ತಿರುವುದು ನಂಬಲಸಾಧ್ಯವಾದ ಮಾತೇ. ಒಂದು ಪಲ್ಸಾರಿನ ಶೋಧವಾಯಿತು. ಇದಾದ ಅನಂತರ ಬಾಹ್ಯ ಸಂಸ್ಕೃತಿವಾದ ಪೂರ್ಣವಾಗಿ ಅಳಿಸಿಹೋಯಿತು.[][][][] ಈಗಿನ ಗ್ರಹಿಕೆಯಂತೆ ಪಲ್ಸಾರಿನ ರೇಡಿಯೊಸ್ಪಂದಗಳು ಆವರ್ತಕ ನ್ಯೂಟ್ರಾನ್ ತಾರೆಗಳಿಂದ ಬರುತ್ತವೆ.[] ನ್ಯೂಟ್ರಾನ್ ತಾರೆ ನಿರ್ದಿಷ್ಟ ದಿಶೆಯಲ್ಲಿ ರೇಡಿಯೊತರಂಗಗಳನ್ನು ಉತ್ಸರ್ಜಿಸುತ್ತಿದ್ದು, ಆ ದಿಶೆ ಪ್ರತಿ ಸುತ್ತಿಗೆ ಒಮ್ಮೆಯಂತೆ ನಮ್ಮೆಡೆಗೆ ಬಂದಾಗ ನಮಗೆ ಸ್ಪಂದಗಳು ಗೋಚರಿಸುವುವು.

ಲಕ್ಷಣಗಳು

[ಬದಲಾಯಿಸಿ]

೧೯೮೦ರ ತನಕ ಸುಮಾರು ಮುನ್ನೂರು ಪಲ್ಸಾರುಗಳು ತಿಳಿದು ಬಂದಿದ್ದವು. ಅವುಗಳ ಸಂಖ್ಯೆ ಬಲು ಬೇಗನೆ ಬೆಳೆಯುತ್ತಿದೆ. ಇಷ್ಟೊಂದು ಪಲ್ಸಾರುಗಳ ಅಧ್ಯಯನದಿಂದ ಅವುಗಳ ಅನೇಕ ಸ್ವಭಾವ ಲಕ್ಷಣಗಳು ಗಮನಕ್ಕೆ ಬಂದಿವೆ. ಇವುಗಳಲ್ಲಿ ಅತಿಮುಖ್ಯವಾದವೆಂದರೆ ಸ್ಪಂದನಗಳ ಕ್ರಮಬದ್ಧ ಮರುಬಳಕೆ. ಯಾವುದೇ ಪಲ್ಸಾರಿನಿಂದ ಬರುವ ಎರಡು ಕ್ರಮಾಗತ ಸ್ಪಂದಗಳು ನಡುವಿನ ಅವಧಿಗೆ ಅದರ ಪುನರಾವರ್ತನಾವಧಿ ಅಥವಾ ಸರಳವಾಗಿ ಅವಧಿ ಎಂದು ಹೆಸರು. ಈ ತನಕ 1/30 ಸೆ ನಿಂದ ಹಿಡಿದು 3-7 ಸೆ ತನಕದ ಅವಧಿಗಳಿರುವ ಪಲ್ಸಾರುಗಳು ತಿಳಿದುಬಂದಿವೆ. ನಿರ್ದಿಷ್ಟ ಪಲ್ಸಾರಿನ ಅವಧಿ ಅತ್ಯಂತ ನಿಖರವಾಗಿರುತ್ತದೆ. ಕೆಲವು ಪಲ್ಸಾರುಗಳು ಅವಧಿಯ ಬದಲಾವಣೆ ದಿವಸಕ್ಕೆ 10-3 ಸೆಕೆಂಡಿನಷ್ಟು ಕಡಿಮೆ ಇದೆ! ಈ ಮಟ್ಟದ ಕ್ರಮಬದ್ಧತೆಯನ್ನು ಅತ್ಯಾಧುನಿಕ ಪರಮಾಣು ಗಡಿಯಾರಗಳಲ್ಲಿಯೂ ಕಾಣಲಾರೆವು. ಅತ್ಯಂತ ಕಡಿಮೆ ಅವಧಿ ಇರುವ ಏಡಿನೀಹಾರಿಕೆಯ ಪಲ್ಸಾರಿನಿಂದ ಸೆಕೆಂಡಿಗೆ 30 ಸ್ಪಂದಗಳು ಬರುತ್ತಿವೆ.[೧೦][೧೧] ಪಲ್ಸಾರುಗಳ ಅವಧಿಯಲ್ಲಿ ಅತಿ ಸೂಕ್ಷ್ಮಮಟ್ಟದ ಹೆಚ್ಚಳವೂ ಕಂಡು ಬರುವುದು. ಅತ್ಯಧಿಕ ಹೆಚ್ಚಳವುಳ್ಳ ಏಡಿ ನೀಹಾರಿಕೆ ಪಲ್ಸಾರಿನಲ್ಲಿಯೂ ಈ ಹೆಚ್ಚಳ ದಿವಸಕ್ಕೆ 3.5 x 10-8 ಸೆಕೆಂಡಿನಷ್ಟು ಮಾತ್ರ ಇದೆಯೆಂಬುದು ಪಲ್ಸಾರುಗಳ ಕ್ರಮಬದ್ಧತೆಗೆ ಅಳತೆಗೋಲಾಗಿದೆ.

ಯಾವುದೇ ಪಲ್ಸಾರಿನಿಂದ ಅನುಕ್ರಮವಾಗಿ ಹೊರಬಂದ ರೇಡಿಯೊಸ್ಪಂದಗಳ ತೀಕ್ಷ್ಣತೆ (ಇಂಟೆನ್ಸಿಟಿ) ಮತ್ತು ಆಕೃತಿಗಳಲ್ಲಿ ಅನೇಕ ಬಗೆಯ ಬದಲಾವಣೆಗಳು ಕಂಡು ಬಂದಿವೆ. ಕೆಲವು ಪಲ್ಸಾರುಗಳಲ್ಲಿ ಕ್ರಮಬದ್ಧ ಬದಲಾವಣೆಗಳೂ ಇವೆ. (ಉದಾಹರಣೆಗೆ ಪ್ರತಿ ಮೂರನೆಯ ಸ್ಪಂದ ಅತಿ ತೀಕ್ಷ್ಣವಾಗಿರಬಹುದು.) ಸ್ಪಂದಗಳ ತೀಕ್ಷ್ಣತೆಗಳು ಬದಲಾಗುವುದರ ಪರಿಣಾಮವಾಗಿ ಕೆಲವೊಮ್ಮೆ ಹಲವು ಸೆಕೆಂಡುಗಳ ಕಾಲ ಪಲ್ಸಾರ್ ಅದೃಶ್ಯವಾದಂತೆ ಕಂಡುಬಂದು ಮತ್ತೆ ಇದ್ದಕ್ಕಿದಂತೆಯೇ ನಿರೀಕ್ಷಿತವಾದ ಸ್ಪಂದಗಳು ಮರುಕಳಿಸುವುವು. ಪ್ರತಿಯೊಂದು ಸ್ಪಂದದ ಕಾಲವೂ ಅತಿ ಕಡಿಮೆ ಇದ್ದು ಸಾಮಾನ್ಯವಾಗಿ ಅವಧಿಯ ಶೇಕಡ 3 ರಿಂದ 10 ರ ವರೆಗಿನ ನಿರ್ದಿಷ್ಟ ಭಾಗಕ್ಕೆ ಸೀಮಿತವಾಗಿರುತ್ತದೆ. ಈ ಭಾಗಕ್ಕೆ ಸ್ಪಂದ ಕಿಂಡಿ (ಪಲ್ಸ್ ವಿಂಡೊ) ಎಂದು ಹೆಸರು. ಅನೇಕ ಪಲ್ಸಾರುಗಳ ಸ್ಪಂದಗಳಲ್ಲಿ ಹಲವು ಮಿಲಿಸೆಕೆಂಡ್ ವ್ಯಾಪ್ತಿಯುಳ್ಳ (1 ಮಿಲಿಸೆಕೆಂಡ್ = 10-3ಸೆ) ಉಪಸ್ಪಂದಗಳು ಅಡಕವಾಗಿವೆ. ಅನುಕ್ರಮವಾಗಿ ಬರುವ ಸ್ಪಂದಗಳಲ್ಲಿ ಈ ಉಪಸ್ಪಂದಗಳು ಸ್ಪಂದಕಿಂಡಿಯ ಒಂದು ಭಾಗದಿಂದ ಮತ್ತೊಂದು ಭಾಗದ ಕಡೆಗೆ ನಿಧಾನವಾಗಿ ಜರುಗುವಂತೆ ತೋರಿ ಸುಮಾರು 10 ಸ್ಪಂದಗಳು ಸಲ್ಲುವಾಗ ಮೊದಲಿನ ಸ್ಥಾನಕ್ಕೆ ಬರುವುವು. ಇವು ಪಲ್ಸಾರಿನ ಉತ್ಸರ್ಜನ ಕ್ರಿಯೆಗಳ ಬಗ್ಗೆ ಮುಖ್ಯವಾದ ಮಾಹಿತಿಗಳನ್ನು ನೀಡಬಹುದೆಂದು ನಂಬಲಾಗಿದೆ. ಮೇಲೆ ಹೇಳಿದ ಬದಲಾವಣೆಗಳೆಲ್ಲ ಅಲ್ಪಕಾಲಿಕವಾದವು. ಅಂದರೆ ನೂರಾರು ಸ್ಪಂದಗಳ ಸರಾಸರಿ ಆಕೃತಿಯನ್ನು ಪರಿಗಣಿಸಿದಾಗ ಅದು ಸ್ಥಿರವಾಗಿರುವುದು. ಇಂಥ ಸರಾಸರಿ ಆಕೃತಿಗಳು ಪಲ್ಸಾರುಗಳ ಹೆಗ್ಗುರುತುಗಳು, ಯಾವುದೇ ಎರಡು ಪಲ್ಸಾರುಗಳ ಸರಾಸರಿ ಆಕೃತಿ ಒಂದೆ ಬಗೆಯದಾಗಿರುವ ಪ್ರಸಂಗ 1978ರ ತನಕ ತಿಳಿದಿರಲಿಲ್ಲ.

ಮೇಲೆ ತಿಳಿಸಿದಂಥ ಅಲ್ಪಕಾಲಿಕ ಬದಲಾವಣೆಗಲ್ಲದೆ ಸ್ಪಂದಗಳ ತೀಕ್ಷ್ಣತೆಗಳು ತಿಂಗಳುಗಟ್ಟಲೆ ಅಥವಾ ಹೆಚ್ಚಿನ ಕಾಲದ ತನಕ ಬದಲಾಗಬಹುದೆಂದು ತಿಳಿದಿದೆ. ಇಂಥ ಬದಲಾವಣೆಯನ್ನು ತಿಳಿಯಬೇಕಾದರೆ ನಿರ್ದಿಷ್ಟ ಪಲ್ಸಾರನ್ನು ಅನೇಕ ತಿಂಗಳುಗಳ ಕಾಲ ಒಂದೇ ಸಮನೆ ಅಧ್ಯಯನಮಾಡಬೇಕು. ಆದರೆ ಈ ತೆರನಾದ ವೀಕ್ಷಣೆಗಳ ಅಭಾವದಿಂದಾಗಿ ಇವುಗಳ ಬಗ್ಗೆ ಹೆಚ್ಚು ತಿಳಿದಿಲ್ಲ. ಯಾವುದೇ ಪಲ್ಸಾರಿನ ಅವಧಿ ಅತ್ಯಂತ ಸೂಕ್ಷ್ಮಮಟ್ಟದ ಹೆಚ್ಚಳವನ್ನು ತೋರಿಸುವುದರ ಹೊರುತು ಬಲುಮಟ್ಟಿಗೆ ಸ್ಥಿರವಾಗಿರುತ್ತದೆ ಎಂಬುದನ್ನು ಈ ಮೊದಲೇ ಹೇಳಿದೆ. ಆದರೆ ಕೆಲವು ಪಲ್ಸಾರುಗಳ ಅವಧಿ ಇದ್ದಕ್ಕಿದ್ದಂತೆ ಬದಲಾಗಿ ಹೊಸತೊಂದು ಸ್ಥಿರಮಟ್ಟವನ್ನು ಪಡೆದಿರುವುದು ತಿಳಿದುಬಂದಿದೆ. ಈ ಬಗೆಯ ಬದಲಾವಣೆ ಮೊದಲಿಗೆ ಸೆಪ್ಟೆಂಬರ್ 1969ರಲ್ಲಿ ವೇಲಾ ಮಹಾನೋವದ (Vela supernova) ಪಲ್ಸಾರಿನ ಅವಧಿ ಸುಮಾರು ದಶಲಕ್ಷದ ಒಂದು ಭಾಗದಷ್ಟು ಬದಲಾದಾಗ ಸ್ಥಿರವಾಯಿತು. ಏಡಿ ನೀಹಾರಿಕೆಯ ಪಲ್ಸಾರಿನಲ್ಲಿ ಇಂಥ ಬದಲಾವಣೆಗಳು ಎರಡು ಬಾರಿ ಕಂಡುಬಂದಿವೆ. ಸಾಮಾನ್ಯವಾಗಿ ಇವು ಬಲು ಕಡಿಮೆಮಟ್ಟದ ಬದಲಾವಣೆಗಳು. ವೇಲಾ ಪಲ್ಸಾರಿನಲ್ಲಿ ಮೇಲೆ ತಿಳಿಸಿದ ಬದಲಾವಣೆಯೇ ಅತ್ಯಂತ ಹೆಚ್ಚಿನದು.

ಪಲ್ಸಾರುಗಳ ಗುಣಗಳನ್ನು ವಿವರಿಸಲು ಯತ್ನಿಸುವ ವಾದಗಳು ಮೊದಲು ಪರಿಗಣಿಸಬೇಕಾದದ್ದು ಅವುಗಳ ಕ್ರಮಬದ್ಧತೆ. ಇದನ್ನು ವಿವರಿಸಲು ಈ ತನಕ ಮಂಡಿಸಿದ ವಾದಗಳಲ್ಲಿ ಆವರ್ತಕ ನ್ಯೂಟ್ರಾನ್ ತಾರಾವಾದ ಮಾತ್ರ ಪ್ರಚಲಿತವಾಗಿದೆ. ನಕ್ಷತ್ರ ತನ್ನ ಬೀಜಾಣು ಇಂಧನವನ್ನೆಲ್ಲಾ ಬಳಸಿಕೊಂಡ ಬಳಿಕ ಸ್ವಂತ ಗುರುತ್ವಾಕರ್ಷಣೆಯ ಪ್ರಭಾವದಿಂದ ಒಂದೇ ಸಮನೆ ಸಂಕೋಚಿಸಿದಾಗ ತಲಪುವ ಕೊನೆಗಾಲದ ಹಂತವೇ ನ್ಯೂಟ್ರಾನ್ ತಾರೆ. ಇದರ ರಾಶಿ ಸುಮಾರಾಗಿ ಸೂರ್ಯರಾಶಿಗೆ ಸಮವಾಗಿದ್ದರೂ ವ್ಯಾಸ ಕೇವಲ 20 ಕಿಮೀಗಳಷ್ಟಿರುತ್ತದೆ. ಭೂಮಿಯನ್ನು ಈ ಮಟ್ಟಕ್ಕೆ ಸಂಕೋಚಗೊಳಿಸಿದರೆ ಅದರ ವ್ಯಾಸ ಅರ್ಧಕಿಲೋಮೀಟರಿನಷ್ಟಾಗುತ್ತದೆ. ಇಂಥ ಅತಿರೇಕ ಸಾಂದ್ರತೆಗಳಲ್ಲಿ ವಸ್ತುವಿನ ಬೀಜಾಣುವ್ಯವಸ್ಥೆ ಸಂಪೂರ್ಣವಾಗಿ ಛಿದ್ರಗೊಂಡು ಅದು ಒತ್ತಾದ ನ್ಯೂಟ್ರಾನ್ ರಾಶಿಯ ರೂಪ ತಾಳುವುದರಿಂದ ನ್ಯೂಟ್ರಾನ್ ತಾರೆ ಎಂಬ ಹೆಸರು ಬಂದಿದೆ. ಗಾತ್ರ ಸಂಕೋಚವಾಗುವಾಗ ನಕ್ಷತ್ರದ ಕಾಂತಕ್ಷೇತ್ರ ಹಾಗೂ ಆವರ್ತನ ವೇಗಗಳು ಬಲುಮಟ್ಟಿಗೆ ವ್ಯಾಸದ ವಿಲೋಮವರ್ಗದಂತೆ (α 1/ವ್ಯಾಸ2) ಬದಲಾಗುವುವು; ಮೂಲಮಟ್ಟದಿಂದ ಸುಮಾರು ಒಂದು ಲಕ್ಷಪಟ್ಟು ಕಡಿಮೆ ವ್ಯಾಸಕ್ಕೂ ಸಂಕೋಚಗೊಂಡ ನ್ಯೂಟ್ರಾನ್ ತಾರೆಯ ಆವರ್ತನವೇಗ ಮತ್ತು ಕಾಂತಕ್ಷೇತ್ರಗಳು ಬಲು ಹೆಚ್ಚಾಗಿರುವುವು ಎಂಬುದು ಇದರಿಂದ ಸ್ಪಷ್ಟವಾಗುವುದು. ನ್ಯೂಟ್ರಾನ್ ತಾರೆಯ ಕಾಂತಕ್ಷೇತ್ರ ಸುಮಾರು 1012 ಗೌಸ್‌ಗಳಷ್ಟು ತೀವ್ರಮಟ್ಟದ್ದು. ಇದಲ್ಲದೆ ಅದು ತನ್ನ ಒಂದು ಅಕ್ಷದ ಸುತ್ತ ಅತಿವೇಗವಾಗಿ (ಕೆಲವು ಸೆಕೆಂಡುಗಳು ಅಥವಾ ಇನ್ನೂ ಕಡಿಮೆ ವೇಳೆಗೆ ಒಮ್ಮೆಯೆಂತೆ) ಸುತ್ತುತ್ತಿರುತ್ತದೆ. ಪಲ್ಸಾರಿನಲ್ಲಿ ಕಂಡುಬರುವ ರೇಡಿಯೊತರಂಗಗಳ ಉತ್ಪತ್ತಿ ಯಾವ ರೀತಿ ಆಗುವುದೆಂದೂ ಇನ್ನೂ ಸ್ಪಷ್ಟವಾಗಿಲ್ಲ. ಅದರ ತೀವ್ರವಾದ ಕಾಂತಕ್ಷೇತ್ರ ಉತ್ಸರ್ಜಿತ ರೇಡಿಯೊತರಂಗಗಳನ್ನು ನಿರ್ದಿಷ್ಟ ದಿಕ್ಕಿಗೆ ಕೇಂದ್ರಿಕರಿಸಬಲ್ಲದೆಂದು ತಿಳಿದಿದೆ. ನ್ಯೂಟ್ರಾನ್ ತಾರೆಯ ನಿರಂತರ ಆವರ್ತನದಿಂದಾಗಿ ಪ್ರತಿ ಸುತ್ತಿಗೊಮ್ಮೆ ಈ ಕಿರಣಗಳು ನಮ್ಮೆಡೆಗೆ ಬರುವುದರಿಂದ ಇವು ನಿಯತಕಾಲಿಕಸ್ಪಂದಗಳಂತೆ ತೋರುತ್ತದೆ. ಅಂದರೆ ಪಲ್ಸಾರುಗಳಲ್ಲಿಯ ಗಡಿಯಾರ ವಿನ್ಯಾಸ ನ್ಯೂಟ್ರಾನ್ ತಾರೆಯ ಆವರ್ತಶೀಲತೆಯಿಂದ ಉಂಟಾಗುತ್ತದೆಂದಾಯಿತು. ಈ ರೀತಿಯಲ್ಲಿ ನ್ಯೂಟ್ರಾನ್ ತಾರೆ ತನ್ನ ಶಕ್ತಿಯನ್ನೂ ಕೋನೀಯ ಸಂವೇಗವನ್ನು ಕ್ರಮೇಣ ಕಳೆದುಕೊಳ್ಳುವುದರಿಂದ ಅದರ ಆವರ್ತನ ವೇಗವೂ ಕ್ರಮೇಣ ಕಡಿಮೆಯಾಗುತ್ತಿರುವುದು. ಹಿಂದೆ ಪ್ರಸ್ತಾವಿಸಿದ ಪಲ್ಸಾರುಗಳ ಅವಧಿಯ ಹೆಚ್ಚಳವನ್ನು ಇದರಿಂದ ಅರ್ಥಮಾಡಿಕೊಳ್ಳಬಹುದು. ಇದಲ್ಲದೆ ವೇಲಾ ಮತ್ತಿತರ ಕೆಲವು ಪಲ್ಸಾರುಗಳಲ್ಲಿ ಕಂಡುಬಂದ ಅನಿರೀಕ್ಷಿತ ಬದಲಾವಣೆಗಳಿಗೆ ಕಾರಣ ನ್ಯೂಟ್ರಾನ್ ತಾರೆಗಳ ನಕ್ಷತ್ರ ಕಂಪನಗಳು (ಭೂಕಂಪನವನ್ನು ಹೋಲುವ ಕ್ರಿಯೆ) ಆವರ್ತನೆಯ ಮೇಲೆ ಬೀರುವ ಪ್ರಭಾವ ಎಂದು ಊಹಿಸಲಾಗಿದೆ.

ನ್ಯೂಟ್ರಾನ್ ತಾರೆಗಳು ಸಾಮಾನ್ಯವಾಗಿ ಮಹಾನೋವಗಳ ಅವಶೇಷಗಳಲ್ಲಿ ಕಂಡುಬರುವುವು. ಆದರೆ ಈ ತನಕ ಕೇವಲ ಎರಡು ಮಹಾನೋವವಶೇಷಗಳಲ್ಲಿ (ವೇಲಾ ಮತ್ತು ಏಡಿ ನೀಹಾರಿಕ) ಪಲ್ಸಾರುಗಳು ನಿಖರವಾಗಿ ಕಂಡು ಬಂದಿವೆ. ಉಳಿದ ಮಹಾನೋವಾವಶೇಷಗಳಲ್ಲಿ ಪಲ್ಸಾರುಗಳು ಕಾಣದೆ ಇರುವುದಕ್ಕೆ ಅವು ಈ ವೇಳೆಗೆ ತಮ್ಮ ಜನ್ಮಸ್ಥಾನದಿಂದ ಬಹಳ ದೂರ ಸಾಗಿರುವುದು ಒಂದು ಕಾರಣವಾಗಬಲ್ಲದು. ಈ ತನಕ 12 ಪಲ್ಸಾರುಗಳ ನೈಜ ಚಲನೆಗಳ ಅಧ್ಯಯನವಾಗಿದ್ದು, ಅವುಗಳ ವ್ಯಾಪ್ತಿ ಸೆಕೆಂಡಿಗೆ 45 ರಿಂದ 550 ಕಿಲೋಮಿಟರುಗಳ ವರೆಗಿದೆ. ಆದ್ದರಿಂದ ಹಳೆಯ ಪಲ್ಸಾರುಗಳು ತಮ್ಮ ಆಕರ ಮಹಾನೋವಸ್ಥಾನದಿಂದ ಬಲುಮಟ್ಟಿಗೆ ಬೇರ್ಪಟ್ಟಿರಲು ಸಾಧ್ಯ. ಅದರ ಈ ಬಗೆಯ ಮಾಹಿತಿಗಳು ಇನ್ನೂ ನಿರ್ಣಾಯಕ ಹಂತವನ್ನು ತಲುಪಿಲ್ಲ.

ಯಮಳ ವ್ಯವಸ್ಥೆಯಲ್ಲಿರುವ ಒಂದು ಪಲ್ಸಾರು 1974ರಲ್ಲಿ ಪತ್ತೆ ಆದಾಗ ಅದು ಅನೇಕರ ಗಮನ ಸೆಳೆಯಿತು. ಅದರಲ್ಲಿ ಪಲ್ಸಾರು ತನ್ನ ಒಡನಾಡಿ ನಕ್ಷತ್ರದ ಸುತ್ತ 8 ಗಂಟೆಗಳಿಗೊಮ್ಮೆ ಪ್ರರಿಭ್ರಮಿಸುತ್ತದೆ. ಈ ಒಡನಾಡಿ ನಕ್ಷತ್ರವೂ ಅತಿ ಸಂಕೋಚಿಸಿದ ಆಕಾಶಕಾಯವಾಗಿದೆಯೆಂದು ತಿಳಿದು ಬಂದಿದೆ. ಅದು ಕೂಡ ಒಂದು ಪಲ್ಸಾರೇ ಆಗಿದ್ದು ಅದರಿಂದ ಬರುವ ರೇಡಿಯೊತರಂಗಗಳು ನಮ್ಮೆಡೆಗೆ ಉದ್ದಿಷ್ಟವಾಗದೆ ಇರಬಹುದು; ಅಥವಾ ಅದೊಂದು ಕೃಷ್ಣವಿವರ  (ಬ್ಲ್ಯಾಕ್‌ಹೋಲ್) ಆಗಿರಬಹುದೆಂದು ಅನೇಕರು ನಂಬಿದ್ದಾರೆ. ಈ ಯಮಳ ವ್ಯವಸ್ಥೆಯಲ್ಲಿರುವ ಆಕಾಶ ಕಾಯಗಳ ಪರಸ್ಪರ ಗುರುತ್ವಾಕರ್ಷಣೆ ಅತ್ಯಂತ ತೀವ್ರವಾಗಿರುವುದರಿಂದ, ಗುರುತ್ವಾಕರ್ಷಣೆಯ ಬಗ್ಗೆ ಇರುವ ಸಾರ್ವತ್ರಿಕ ಸಾಪೇಕ್ಷಸಿದ್ಧಾಂತ ಮತ್ತಿತರ ಸಿದ್ಧಾಂತಗಳನ್ನು ಪರೀಕ್ಷಿಸಲು ಅದು ನೆರವಾಗಬಹುದು. ಇದರಿಂದಾಗಿ ಸೈದ್ಧಾಂತಿಕ ವಿಜ್ಞಾನಗಳಿಗೆ ಯಮಳವ್ಯವಸ್ಥೆಯ ಪಲ್ಸಾರು ಅನೇಕ ಬಗೆಯಲ್ಲಿ ಕೂತೂಹಲಕಾರಿಯಾಗಿದೆ.

೧೯೮೦ರ ವೇಳೆಗೆ ಕೇವಲ ಒಂದು ದಶಕದಷ್ಟು (1968-78) ಹಳೆಯದಾಗಿದ್ದ ಪಲ್ಸಾರುಗಳು ವಿಜ್ಞಾನಿಗಳಿಗೆ ಅನೇಕ ಬಗೆಯ ಒಗಟುಗಳನ್ನು ನೀಡಿದ್ದವು. ಮೊದಲು ಇವುಗಳ ಸಂಖ್ಯೆ ಬೆಳೆದಾಗ ವಾದಗಳಿಗೆ ಪುಷ್ಟಿ ಸಿಗುವುದೆಂದು ನಂಬಲಾಗಿತ್ತು. ಆದರೆ ಹೊಸ ಪಲ್ಸಾರುಗಳು ಗೋಚರವಾದಂತೆಲ್ಲ ಅವುಗಳ ಗುಣಲಕ್ಷಣಗಳಲ್ಲೂ ಹೊಸ ಆಯಾಮಗಳು ಕಂಡುಬರುತ್ತಿರುವುದರಿಂದ ಸಮಸ್ಯೆಗಳೂ ಬೆಳೆಯುತ್ತಲೇ ಇವೆ. ಬ್ರಹ್ಮಾಂಡಗಳಲ್ಲಿ ರೇಡಿಯೊ ಎಕ್ಸ್‌ಕಿರಣ, ಗ್ಯಾಮಕಿರಣ ಮುಂತಾದವುಗಳ ಉತ್ಸರ್ಜನೆಗೆ ಬೇಕಾದ ಎಲೆಕ್ಟ್ರಾನುಗಳ ವೇಗೋತ್ಕರ್ಷಗಳು ಹೇಗೆ ನೆಡೆಯುವುವು ಎಂಬ ಬಗ್ಗೆ ಅನೇಕ ಸೂಕ್ಷ್ಮಗಳನ್ನು ಪಲ್ಸಾರುಗಳ ಇರುವಿಕೆ ನಮಗೆ ನೀಡಿದೆ. ಆದರೆ ಪಲ್ಸಾರುಗಳಲ್ಲಿ ಅಸಾಧರಣ ಸ್ಥಿತಿಯಲ್ಲಿರುವ ವಸ್ತು ಮತ್ತು ಕಾಂತಕ್ಷೇತ್ರಗಳ ಪರಿಣಾಮಗಳ ಬಗ್ಗೆ ಭೌತಶಾಸ್ತ್ರದ ವಾದಗಳು ಇನ್ನೂ ಪಕ್ವವಾಗಿಲ್ಲ. ಮುಖ್ಯ ಅಡಚಣೆಯೆಂದರೆ ಪಲ್ಸಾರುಗಳಲ್ಲಿರುವಂಥ ತೀವ್ರಮಟ್ಟದ ಸ್ಥಿತಿಗಳನ್ನು ಪ್ರಯೋಗಶಾಲೆಯಲ್ಲಿ ನಿಯೋಜಿಸಿ ಹೊಸ ನಿಯಮಗಳನ್ನು ಶೋಧಿಸಲು ಸಾಧ್ಯವಾಗದಿರುವುದು. ಈ ದೃಷ್ಟಿಯಿಂದ ಪಲ್ಸಾರುಗಳನ್ನು ಆಕಾಶಗಂಗೆಯಲ್ಲಿ ಅಡಕವಾಗಿರುವ ಉನ್ನತಮಟ್ಟದ ಭೌತಶಾಸ್ತ್ರ ಪ್ರಯೋಗಶಾಲೆಗಳು ಎನ್ನಬಹುದು. ಹೀಗಾಗಿ ವಿಜ್ಞಾನಿಗಳಿಗೆ ಅವು ಬಹಳ ಕುತೂಹಲಕಾರಿಯಾಗಿ ಪರಿಣಮಿಸಿವೆ.

ಉಲ್ಲೇಖಗಳು

[ಬದಲಾಯಿಸಿ]
  1. István., Hargittai (2007) [2002]. The road to Stockholm : Nobel Prizes, science, and scientists. Oxford: Oxford University Press. ISBN 978-0198607854. OCLC 818659203.
  2. Proudfoot, Ben (July 27, 2021). "She Changed Astronomy Forever. He Won the Nobel Prize For It - In 1967, Jocelyn Bell Burnell made an astounding discovery. But as a young woman in science, her role was overlooked". The New York Times. Retrieved July 27, 2021.
  3. "I Changed Astronomy Forever. He Won the Nobel Prize for It. | 'Almost Famous' by Op-Docs". YouTube.
  4. Hewish, A.; Bell, S. J.; Pilkington, J. D. H.; Scott, P. F.; Collins, R. A. (February 1968). "Observation of a Rapidly Pulsating Radio Source". Nature (in ಇಂಗ್ಲಿಷ್). 217 (5130): 709–713. Bibcode:1968Natur.217..709H. doi:10.1038/217709a0. ISSN 1476-4687. S2CID 4277613.
  5. George Hobbs; Simon Johnston (November 28, 2017). "Fifty years ago, Jocelyn Bell discovered pulsars and changed our view of the universe". phys.org. Retrieved August 4, 2021. {{cite journal}}: Cite journal requires |journal= (help)
  6. Pranab Ghosh, Rotation and accretion powered pulsars. World Scientific, 2007, p. 2.
  7. M. S. Longair, Our evolving universe. CUP Archive, 1996, p. 72.
  8. M. S. Longair, High energy astrophysics, Volume 2. Cambridge University Press, 1994, p. 99.
  9. On the discovery of the period of the Crab Nebula pulsar Archived 2021-06-02 ವೇಬ್ಯಾಕ್ ಮೆಷಿನ್ ನಲ್ಲಿ. R. V. E. Lovelace and G. L. Tyler 2012, The Observatory, 132, 186.
  10. Crab nebula pulsar NP 0532 "ಆರ್ಕೈವ್ ನಕಲು". Archived from the original on 2020-11-19. Retrieved 2024-06-18.{{cite web}}: CS1 maint: bot: original URL status unknown (link) 1969, J. M. Comella, H. D. Craft, R. V. E. Lovelace, J. M. Sutton, G. L. Tyler Nature 221 (5179), 453–454.
  11. Digital Search Methods for Pulsars "ಆರ್ಕೈವ್ ನಕಲು". Archived from the original on 2021-04-20. Retrieved 2024-06-18.{{cite web}}: CS1 maint: bot: original URL status unknown (link) 1969, R. V. E. Lovelace, J. M. Sutton, E. E. Salpeter Nature 222 (5190), 231–233.

ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಪಲ್ಸಾರ್&oldid=1231098" ಇಂದ ಪಡೆಯಲ್ಪಟ್ಟಿದೆ