ಕ್ವೇಸಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ವೇಸಾರ್ - ಖಚಿತವಾಗಿ ನಕ್ಷತ್ರವೆಂದಾಗಲಿ ಬ್ರಹ್ಮಾಂಡವೆಂದಾಗಲಿ (ಗ್ಯಾಲಾಕ್ಸಿ) ಗುರುತಿಸಲಾಗದ ಮತ್ತು ಅತಿ ಹೆಚ್ಚಿನ ವಿಸರಣಸಾಮಥ್ರ್ಯದಿಂದ ಕೂಡಿರುವ ರೇಡಿಯೋ ಆಕರ: ದೂರ 450-4,000 ದಶಲಕ್ಷ ಬೆಳಕಿನ ವರ್ಷಗಳವರೆಗೂ ಇರಬಹುದು. quasi-stellar object (ಅರ್ಥ ಅರೆ ನಕ್ಷತ್ರ) ಎಂಬ ಇಂಗ್ಲಿಷ್ ಪದದಿಂದ Quasar (ಕ್ವೇಸಾರ್) ಪದ ನಿಷ್ಪನ್ನವಾಗಿದೆ.

ಶೋಧನೆ[ಬದಲಾಯಿಸಿ]

ಜಾನ್ ಹೇ ಎಂಬ ಖಗೋಳವಿಜ್ಞಾನಿ ಸಿಗ್ನಸ್ ನಕ್ಷತ್ರ ಪುಂಜದಲ್ಲಿ (ಸಿಗ್ನಸ್ ಕಾನ್ಸ್‍ಟೆಲ್ಲೇಷನ್. ಇದರ ವ್ಯಾಪ್ತಿ ವಿಷುವದಂಶ 19 ಗಂ.5ಮಿ.-22ಗಂ. ಮತ್ತು ಘಂಟಾವೃತ್ತಾಂಶ 280-600ಉ. ಆಕಾಶಗಂಗೆಯ ಮೇಲಿರುವ ಉತ್ತರಗೋಳೀಯ ಪುಂಜವಿದು) ಒಂದು ಶಕ್ತ್ಯಾಕರವನ್ನು ಗುರುತಿಸಿದ (1946). ಅದಕ್ಕೆ ಅವನು ರೇಡಿಯೋ ನಕ್ಷತ್ರವೆಂದು ಹೆಸರಿಟ್ಟ. 1950ರ ವೇಳೆಗೆ ಸುಮಾರು 100 ರೇಡಿಯೋ ನಕ್ಷತ್ರಗಳನ್ನು ಗುರುತಿಸಲಾಗಿತ್ತು. ಆದರೆ ಇವನ್ನು ಯಾವುದೇ ರೀತಿಯ ಗೊತ್ತಿದ್ದ ನಕ್ಷತ್ರಗಳೊಂದಿಗಾಗಲಿ ಇತರ ದೃಗ್ಗೋಚರ ಕಾಯಗಳೊಂದಿಗಾಗಲಿ ಸಮೀಕರಿಸಲು ಸಾಧ್ಯವಾಗಲಿಲ್ಲ. ಅಷ್ಟರ ಮಟ್ಟಿಗೆ ಇವು ವಿಚಿತ್ರವಸ್ತುಗಳಾಗಿದ್ದುವು. ಮುಂದೆ 1952ರಲ್ಲಿ ವಾಲ್ಟರ್ ಬಾಡೆ ಮತ್ತು ರುಡೋಲ್ಫ್ ಮಿಂಕೋವಿಸ್ಕಿ ಸಿಗ್ನಸ್ ಪುಂಜದಲ್ಲೂ ಇನ್ನೂ ಉಳಿದ ಕೆಲವರು ಸ್ವಲ್ಪಮಟ್ಟಿಗೆ ವಿಶಿಷ್ಟವಾದ ಕೆಲವು ಬ್ರಹ್ಮಾಂಡಗಳಲ್ಲೂ ರೇಡಿಯೋ ಆಕರಗಳನ್ನು ಪತ್ತೆ ಹಚ್ಚಿದರು. ನಮ್ಮ ಆಕಾಶಗಂಗೆಯಲ್ಲಿರುವ (ಮಿಲ್ಕೀವೇ) ಮಹಾನೋವಾವಶೇಷಗಳನ್ನು ಗಣಿಸದೆ ಬಿಟ್ಟಲ್ಲಿ ಆಕಾಶದಲ್ಲಿ ಈ ರೇಡಿಯೋ ಆಕರಗಳು ಏಕರೀತಿಯಾಗಿ ಹರಡಿಕೊಂಡಿವೆ. ಇಂಥ ಬಹುಸಂಖ್ಯಾತ ರೇಡಿಯೋ ಆಕರಗಳು ಅಸ್ವಾಭಾವಿಕ ಮತ್ತು ತೀವ್ರ ರೇಡಿಯೋ ತರಂಗಗಳನ್ನು ವಿಸರಿಸುವ ಬಹ್ಮಾಂಡಗಳು ಎಂಬುದು ಸ್ಪಷ್ಟವಾಗುತ್ತ ಬಂದಿತು. ಆದ್ದರಿಂದ ರೇಡಿಯೋ ನಕ್ಷತ್ರ ಎಂಬ ಹೆಸರನ್ನು ರೇಡಿಯೋ ಬ್ರಹ್ಮಾಂಡ ಎಂದು ಬದಲಾಯಿಸಲಾಯಿತು. ಆದರೂ 1960ರಲ್ಲಿ ನ್ಯೂಯಾರ್ಕಿನಲ್ಲಿ ನಡೆದ ಅಮೆರಿಕನ್ ಅಸ್ಟ್ರನಾಮಿಕಲ್ ಸೊಸೈಟಿಯ 107ನೆಯ ಸಭೆಯಲ್ಲಿ ಆಲನ್ ಸಾಂಡೇಜ್ ಎಂಬಾತ 3C 48 ಕ್ಕೆ (ಮೂರನೆಯ ಕೇಂಬ್ರಿಜ್ ಸೂಚಿಯಲ್ಲಿ 48ನೇ ನಮೂದು) 16ರ ಕಾಂತಿಮಾನದ (ಮ್ಯಾಗ್ನಿಟ್ಯೂಡ್) ನಕ್ಷತ್ರದೊಂದಿಗೆ ಇರುವ ಸಾಮ್ಯವನ್ನು ರುಜುವಾತಿಸಿದಾಗ ರೇಡಿಯೋ ನಕ್ಷತ್ರ ಎಂಬ ಹೆಸರು ಮರುಕಳಿಸಿತು. ದೃಕ್ ಮತ್ತು ರೇಡಿಯೋ ಸ್ಥಾನಗಳ ಐಕ್ಯವೇ ಹೀಗೆ ಆಗಲು ಕಾರಣವಾಯಿತು. ಅನೇಕ ರೇಡಿಯೋ ಆಕರಗಳನ್ನು ಮಾರ್ಟನ್ ರೈಲ್ ಮತ್ತು ಆತನ ಸಹೋದ್ಯೋಗಿಗಳು ಮೂರನೆಯ ಕೇಂಬ್ರಿಜ್ ಸೂಚಿಯಲ್ಲಿ ಸಂಕಲಿಸಿದ್ದಾರೆ. ಇದರಲ್ಲಿ ಸಂಕಲಿಸಿದ ಅನೇಕ ರೇಡಿಯೋ ಆಕರಗಳು ನಕ್ಷತ್ರಗಳಂತೆ ಕಾಣುವ ದೃಗ್ವಸ್ತುಗಳ ಸ್ಥಾನಗಳಲ್ಲಿಯೇ ಇರುವುದನ್ನು ಕಂಡುಹಿಡಿಯಲಾಯಿತು. ಇಂಥ ರೇಡಿಯೋ ಆಕರಗಳಾದ ಆಕಾಶಕಾಯಗಳನ್ನು ಕ್ವೇಸಾರುಗಳೆಂದು ಹೆಸರಿಸಿದರು.

ಉಗಮ[ಬದಲಾಯಿಸಿ]

ಬ್ರಹ್ಮಾಂಡದ ಸ್ಫೋಟನ ಊಹೆಯ (ಗ್ಯಾಲಾಕ್ಸಿ ಎಕ್ಸ್‍ಫ್ಲೋಷನ್ ಹೈಪಾಥಿಸಿಸ್) ಪ್ರಕಾರ ಸುಮಾರು 107 ವರ್ಷಗಳ ಹಿಂದೆ ನಮ್ಮ ಆಕಾಶಗಂಗೆಯ ಮಧ್ಯದಲ್ಲಿ ಉಂಟಾದ ಸ್ಫೋಟನದ ಪರಿಣಾಮವಾಗಿ ಬೆಳಕಿನ ವೇಗದ ಸುಮಾರು 80%ರಷ್ಟು ವೇಗದಿಂದ ಹೊರದೂಡಲ್ಪಟ್ಟ ದೊಡ್ಡದಾದ ಮತ್ತು ಭಾರವಾದ ಮೋಡಗಳೇ ಕ್ವೇಸಾರುಗಳು. ಇವುಗಳ ರೋಹಿತದಲ್ಲಿ ನೀಲಪಲ್ಲಟವನ್ನು (ಬ್ಲೂಶಿಫ್ಟ್) ಗಮನಿಸಲಿಲ್ಲವಾದ್ದರಿಂದ ಇವು ನಮ್ಮ ಆಕಾಶಗಂಗೆಯಿಂದ ಹೊರಹೋಗುತ್ತಿವೆ ಎಂದು ನಿರ್ಧರಿಸಲಾಗಿದೆ. ಹಾಯ್ಲ್ ಮತ್ತು ಬರ್‍ಬಿಡ್ಜ್ ಇವರ ಇತ್ತೀಚಿನ ಸಂಶೋಧನೆ ಇಂಥ ನಿರ್ಧಾರಕ್ಕೆ ಒತ್ತಾಸೆ ಕೊಟ್ಟಿದೆ.

ಗುಣಲಕ್ಷಣಗಳು[ಬದಲಾಯಿಸಿ]

ಕ್ವೇಸಾರುಗಳ ಕೋನವ್ಯಾಸ, ಗಾತ್ರ, ರೇಡಿಯೋ ಮತ್ತು ಬೆಳಕು ವಿಸರ್ಜನೆಯಾಗುವ ವಿಸ್ತೀರ್ಣ ಇವೆಲ್ಲವೂ ಬಲುಮಟ್ಟಿಗೆ ಕಿರಿದು. ಆದರೆ ಬೆಳಕಿನ ವಿಸರ್ಜನೆ ದೈತ್ಯಾಕಾರದ ಬ್ರಹ್ಮಾಂಡಗಳ ಬೆಳಕಿನ ವಿಸರ್ಜನೆಯ ಎರಡರಷ್ಟಿದೆ. ಕೆಲವು ಕ್ವೇಸಾರುಗಳಿಗೆ ಮಸುಕಾಗಿ ಕಾಣುವ ಬೆಳಕು ಉಂಟು. ಇವುಗಳ ರೋಹಿತಗಳು ಸಾಪೇಕ್ಷವಾಗಿ ಉತ್ಸರ್ಜನ ರೇಖೆಗಳಿಂದ (ಬ್ರಾಡ್ ಎಮಿಶನ್ ಲೈನ್ಸ್) ಕೂಡಿದ್ದು ವೈಶಿಷ್ಟ್ಯಪೂರ್ಣವಾಗಿವೆ. ಇವುಗಳಿಗೆ ಕೆಲವು ನಿರ್ದಿಷ್ಟ ನಿಷೇಧಿತ ಆಮ್ಲಜನಕ ಮತ್ತು ನಿಯಾನ್ ರೇಖೆಗಳೊಂದಿಗೆ ಮತ್ತು ಅತಿಯಾದ ರಕ್ತಪಲ್ಲಟವಿರುವ ಬಾಮರ್ ಸರಣಿಯೊಡನೆ ಸಾಮ್ಯ ಉಂಟು. ರಕ್ತಪಲ್ಲಟದ ಅತಿಪರಿಮಾಣವನ್ನು ಗಮನಿಸಿದಾಗ ಕ್ವೇಸಾರುಗಳು ಸುಮಾರು 109~1010 ಬೆಳಕಿನ ವರ್ಷಗಳಷ್ಟು ದೂರದಲ್ಲಿವೆ ಎಂದು ಹೇಳಬೇಕಾಗುತ್ತದೆ. ಇದು ಗುರುತ್ವಾತ್ಮಕವಾಗಿರಬಹುದು ಅಥವಾ ಕ್ವೇಸಾರುಗಳ ಅತಿವೇಗ ಚಲನೆಯ ಪರಿಣಾಮವಾಗಿರಬಹುದು. ಆದರೆ ನ್ಯೂಟ್ರಾನ್ ನಕ್ಷತ್ರಗಳಂಥ ಅತಿ ಭಾರವಾಗಿರುವ ಕೆಲವು ವಸ್ತುಗಳಿಗೆ ಮಾತ್ರ ಅಳೆಯಲು ಸಾಧ್ಯವಾದ ಗುರುತ್ವಾತ್ಮಕ ರಕ್ತಪಲ್ಲಟವಿರಲು ಸಾಧ್ಯ. ಕ್ವೇಸಾರುಗಳ ರಕ್ತಪಲ್ಲಟ ಗುರುತ್ವಾತ್ಮಕವಾದದ್ದು ಎಂಬ ಉಪಕಲ್ಪನೆಯನ್ನು ಒಪ್ಪಿಕೊಂಡಲ್ಲಿ ಇವುಗಳ ರೋಹಿತವನ್ನು ವಿವರಿಸಲು ಅಸಾಧ್ಯವಾಗುತ್ತದೆ. ಆದ್ದರಿಂದ ರಕ್ತಪಲ್ಲಟ ಕ್ವೇಸಾರುಗಳ ಅತಿವೇಗ ಚಲನೆಯಿಂದ ಉಂಟಾದದ್ದೆಂದು ಅಂದರೆ ವಿಶ್ವವಿಜ್ಞಾನದ ಮೂಲಕ್ಕೆ ಸಂಬಂಧಪಟ್ಟದ್ದೆಂದು ಅನೇಕ ಖಗೋಳ ವಿಜ್ಞಾನಿಗಳು ಪರಿಗಣಿಸಿದ್ದಾರೆ. ವಿಶ್ವವಿಜ್ಞಾನದ ಹಬಲ್ ನಿಯಮವನ್ನು ಉಪಯೋಗಿಸಿಕೊಂಡು ಕ್ವೇಸಾರುಗಳ ದೂರವನ್ನು ಕಂಡುಹಿಡಿಯಬಹುದು. ಹಾಗೆ ಮಾಡಿದಲ್ಲಿ 3C 273 ಕ್ವೇಸಾರಿನ ದೂರ ಸುಮಾರು 1,000 ಬೆಳಕಿನ ವರ್ಷಗಳೆಂದು ನಿರ್ಧರಿಸಬಹುದು. ಇವುಗಳ ದೃಕ್ ಪ್ರಕಾಶದಿಂದ (ಬ್ರೈಟ್‍ನೆಸ್) ನೈಜಪ್ರಕಾಶವನ್ನು ಗಣಿಸಬಹುದು. ಅಂಥ ಲೆಕ್ಕಾಚಾರದಿಂದ ಇವುಗಳ ಪ್ರಕಾಶ ಅತಿ ಪ್ರಕಾಶಯುಕ್ತವಾದ ಬ್ರಹ್ಮಾಂಡಗಳ ಪ್ರಕಾಶದ 100ರಷ್ಟು ಇದೆಯೆಂದು ತಿಳಿದಿದೆ.

ಕೆಲವು ಕ್ವೇಸಾರುಗಳ ರೇಡಿಯೋ ಮತ್ತು ಬೆಳಕು ವಿಸರ್ಜನೆ ಕಾಲಕಾಲಕ್ಕೆ ವ್ಯತ್ಯಾಸವಾಗುತ್ತಿರುತ್ತದೆ ಎಂಬ ಮತ್ತೊಂದು ಸಂಶೋಧನೆ ಸಮಸ್ಯಾತ್ಮಕವಾಗಿದೆ. ಇವುಗಳಿಗೆ ಚಂಚಲ ಕ್ವೇಸಾರುಗಳು (ವೇರಿಯೆಬಲ್ ಕ್ವೇಸಾರ್ಸ್) ಎಂದು ಹೆಸರು. ಒಂದು ಚಂಚಲ ಕ್ವೇಸಾರನ್ನು ಮೊಟ್ಟಮೊದಲಿಗೆ ರಷ್ಯದ ಖಗೋಳ ವಿಜ್ಷಾನಿ ಜಿ.ಎ.ಶೋಲೋಮಿಸ್ಕಿ ಕಂಡುಹಿಡಿದ; ಮತ್ತು ಇದರ ಚಾಂಚಲ್ಯದ ಒಂದು ಚಕ್ರದ ಅವಧಿ 100 ದಿವಸಗಳು. ಈ ಅವಧಿ ರೇಡಿಯೋ ಆಕರಗಳ ಗಾತ್ರ ಪರಿಮತಿಯನ್ನು ನಿರ್ಧರಿಸುತ್ತದೆ. ಇದರಿಂದಾಗಿ ಕ್ವೇಸಾರುಗಳ ದೂರವನ್ನು ನಿರ್ಧರಿಸಬಹುದು. ಈ ರೀತಿಯಿಂದ ಗಣಿಸಲ್ಪಟ್ಟ ದೂರಗಳಿಗೂ ಪ್ರತ್ಯೇಕವಾಗಿ ಹಬಲ್ ನಿಯಮದಿಂದ ನಿರ್ಧರಿಸಿದ ದೂರಗಳಿಗೂ ಬಹಳ ವ್ಯತ್ಯಾಸ ಕಂಡು ಬಂದಿದೆ. ಇದರಿಂದಾಗಿ ಕ್ವೇಸಾರುಗಳು ಹಬಲ್ ನಿಯಮವನ್ನು ಪಾಲಿಸುತ್ತವೆಯೇ ಇಲ್ಲವೇ ಎಂಬ ಶಂಕೆ ಕೆಲವರಲ್ಲಿ ಉಂಟಾಗಿದೆ; ಮತ್ತು ಇದನ್ನು ವಿವರಿಸಲು ಬಹಳ ಪ್ರಯತ್ನಗಳು ನಡೆದಿವೆ.

ಕ್ವೇಸಾರುಗಳ ರಕ್ತಪಲ್ಲಟದ ಕಾರಣ ವಿಶ್ವಾತ್ಮಕ (ಕಾಸ್ಮಲಾಜಿಕಲ್ ಆರಿಜಿನ್) ಎಂದು ಪರಿಗಣಿಸಿದಲ್ಲಿ ಕ್ವೇಸಾರುಗಳ ಬಗ್ಗೆ ಸಂಗ್ರಹಿಸಿರುವ ಮಾಹಿತಿಯಿಂದ ವಿಶ್ವ ವಿಜ್ಞಾನವನ್ನು ಅರಿಯಲು, ಅದರಲ್ಲೂ ವಿಶ್ವದ ರಚನೆಯನ್ನು ತಿಳಿಯಲು, ಬಹುಮಟ್ಟಿಗೆ ಸಹಾಯವಾಗುತ್ತದೆ. (ಇದನ್ನೂ ನೋಡಿ- ಖಭೌತವಿಜ್ಞಾನ)

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: