ಪಂಜುರ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಜುರ್ಲಿ ದೈವದ ಮುಖವಾಡ

ಪಂಜುರ್ಲಿ(listen ) ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡಿನ ಕೆಲ ಭಾಗಗಳಲ್ಲಿ ಪೂಜಿಸಲ್ಪಡುವ, ಹಂದಿಯ ಮುಖದ ಒಂದು ದೈವ. ಮೂಲ ಮೈಸಂದಾಯ(ಮಹಿಷ), ನಂದಿಗೋಣೆ(ಹೋರಿ) ಹಾಯ್ಗುಳಿ(ಹಾಯುವ ಗೂಳಿ), ಪಿಲ್ಚಂಡಿ( ಹುಲಿ) ಆನೆ, ಕುದುರೆ ಇವೆಲ್ಲವೂ ಒಂದಲ್ಲ ಒಂದು ರೂಪದಲ್ಲಿ ತುಳುನಾಡಿನಲ್ಲಿ ಪೂಜೆ ಪಡೆಯುತ್ತಿವೆ. ಅದೇ ರೀತಿ ಮೂಲದಲ್ಲಿ ಪಂಜುರ್ಲಿ(ಹಂದಿಯ ಮರಿ) ದೈವತ್ವಕ್ಕೇರಲ್ಪಟ್ಟು ತುಳುನಾಡಿನಾದ್ಯಂತ ಪೂಜೆ ಪಡೆಯುತ್ತಿದೆ.

ದೈವದ ಹುಟ್ಟು[ಬದಲಾಯಿಸಿ]

ತುಳುನಾಡಿನ ಪಕ್ಕದ ಘಟ್ಟದ ರಾಜ್ಯದಲ್ಲಿ ಎರಡು ಕಾಡು ಹಂದಿಗಳು ವಾಸಿಸುತ್ತಿದ್ದವು. ಆ ಕಾಡು ಹಂದಿಗಳು ಕಾಡಿನಲ್ಲಿ ಅಣ್ಣ ತಂಗಿಯರಾಗಿ ಬಾಳುತ್ತಿದ್ದವು. ಈ ಹಂದಿಗಳಿಗೆ ಮುಂದೆ ಸತಿಪತಿಗಳಾಗಿ ಸಂತಾನ ವೃದ್ಧಿಗಳಿಸಬೇಕೆಂಬ ಇಚ್ಛೆಯಾಯಿತು. ಗಂಡು ಹೆಣ್ಣು ಹಂದಿಗಳು ತಮ್ಮೊಳಗೆ ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದವು. ಅವು ನೇರವಾಗಿ ಕುಕ್ಕೆಯ ಕ್ಷೇತ್ರಕ್ಕೆ ತೆರಳಿದವು. ಅಲ್ಲಿ ಸುಬ್ರಾಯ ದೇವರನ್ನು(ಕುಕ್ಕೆಯಲ್ಲಿರುವ ಮೂಲದ ನಾಗದೇವರು) ಭೇಟಿ ಆದವು. ಸುಬ್ರಾಯ ದೇವರಲ್ಲಿ ತಮ್ಮಲ್ಲಿಯ ಸಹೋದರ ಭಾವವವನ್ನು ಕಡಿದು ಗಂಡ-ಹೆಂಡತಿಯಾಗಿ ಬಾಳುವಂತೆ ಕರುಣಿಸಬೇಕೆಂದು ಭಕ್ತಿಯಿಂದ ಬೇಡಿಕೊಂಡವು. ಅವುಗಳ ಇಚ್ಛೆಯನ್ನು ಕೆಳಿ ಸುಬ್ರಾಯ ದೇವರಿಗೆ ಕರುಣೆ ಉಂಟಾಯಿತು. ಆ ಹಂದಿಗಳ ಅಣ್ಣ-ತಂಗಿಯರ ಭಾವವನ್ನು ಕಡಿದು ಸತಿಪತಿಗಳಾಗುವಂತೆ ವರವಿತ್ತರು. ಹಂದಿಗಳು ಸಂತಸದಿಂದ ಕಾಡನ್ನು ಪ್ರವೇಶಿಸಿದವು. ಅವುಗಳ ಅನ್ಯೋನ್ಯ ಬದುಕಿನ ಸಂಕೇತವಾಗಿ ಆ ಹಂದಿಗಳಿಗೆ ನಾಲ್ಕು ಮರಿಗಳು ಹುಟ್ಟಿಕೊಂಡವು. ಹಂದಿ ಮರಿಗಳಲ್ಲಿ ಒಂದು ಮರಿಯು ಈಶ್ವರ ದೇವರ ಹೂದೋಟವನ್ನು ಪ್ರವೇಶಿಸಿತು. ಆ ಹಂದಿ ಮರಿಯ ಅಂದ ಚೆಂದದ ರೂಪವನ್ನು ಕಂಡು ಈಶ್ವರ ದೇವರ ಅರಸಿ ಪಾರ್ವತಿ ದೇವಿ ಮೋಹಗೊಂಡರು. ಅದನ್ನು ಪ್ರೀತಿಯಿಂದ ಸಲಹ ತೊಡಗಿದರು. ಆ ಮರಿಯು ಬೆಳೆಯತೊಡಗಿದಂತೆ ಎಲ್ಲೆಂದರಲ್ಲಿ ತಿರುಗಾಡತೊಡಗಿತು. ಕೊನೆಗೆ ತನ್ನ ದಾಡೆಯಿಂದ ಈಶ್ವರ ದೇವರ ಹೂದೋಟವನ್ನು ಹಾಳುಗೆಡವಲು ಪ್ರಾರಂಭಿಸಿತು. ಹಂದಿಯ ಉಪಟಳವು ಸಹಿಸಲು ಅಸಾಧ್ಯವಾಯಿತು. ಕೊನೆಗೆ ಪರಮೇಶ್ವರ ಕುಪಿತರಾಗಿ ಅದನ್ನು ಕೊಂದು ಬಿಟ್ಟರು. ಈ ವಿಷಯ ತಿಳಿದಾಗ ಪಾರ್ವತಿದೇವಿ ಬಹಳ ದುಃಖ ಪಟ್ಟರು. ತಾನೇ ಪ್ರೀತಿಯಿಂದ ಸಾಕಿ ಸಲಹಿದ ಹಂದಿಮರಿಗೆ ಜೀವದಾನ ಮಾಡುವಂತೆ ಬಹುವಾಗಿ ಪ್ರಾರ್ಥಿಸಿಕೊಂಡರು. ಮಡದಿಯ ಇಚ್ಛೆಯಂತೆ ಪರಮೇಶ್ವರ ಹಂದಿಗೆ ಜೀವದಾನ ಮಾಡಿದರು. ಆ ಬಳಿಕ ಈಶ್ವರ ದೇವರು ಆ ಹಂದಿಯ ಮರಿಗೆ ದೈವಶಕ್ತಿಯನ್ನು ಕರುಣಿಸಿದರು. “ ನೀನು ವರಾಹರೂಪಿಯಾದ ‘ಪಂಜುರ್ಲಿ’ ದೈವವಾಗಿ ಭೂಲೋಕವನ್ನು ಪ್ರವೇಶಿಸು. ಅಲ್ಲಿ ಸತ್ಯ, ಧರ್ಮ, ನ್ಯಾಯವನ್ನು ರಕ್ಷಿಸುವ ದೈವವಾಗಿ ಮೆರೆದಾಡಿಕೊಂಡಿರು. ಭೂಲೋಕದಲ್ಲಿ ಮಾನವರು ನಿನಗೆ ಅರ್ಪಿಸುವ ನೈವೇದ್ಯಾದಿಗಳನ್ನು ಸ್ವೀಕರಿಸು. ಅವರ ಬೆಳೆಯನ್ನು ರಕ್ಷಣೆ ಮಾಡುವ, ಕಷ್ಟ, ಕಾರ್ಪಣ್ಯಗಳನ್ನು, ರೋಗರುಜಿನಗಳನ್ನು ಪರಿಹರಿಸಿ ಕಾಯುವ ರಕ್ಷಣೆಯ ದೈವವಾಗಿ ಕೀರ್ತಿಯನ್ನು ಬೆಳಗಿಕೊಂಡಿರು. ಅದೇ ರೀತಿ ನಿನ್ನನ್ನು ಧಿಕ್ಕರಿಸಿ ಅಹಂಕಾರದಿಂದ ನಡೆಯುವವರನ್ನು ಶಿಕ್ಷಿಸಿ, ಸರಿದಾರಿಗೆ ತಿರುಗಿಸಿ ನಿನ್ನಲ್ಲಿ ಭಕ್ತಿ ಹುಟ್ಟುವಂತೆ ಮಾಡು” ಎಂದು ವರಪ್ರಧಾನ ಮಾಡಿ ಕಳುಹಿಸಿದರು. ದೇವರ ಅಪ್ಪಣೆ ಪ್ರಕಾರ ಪಂಜುರ್ಲಿಯು ದೈವಶಕ್ತಿಯಾಗಿ ಭೂಲೋಕ ಪ್ರವೇಶಿಸಿತು.

ಪಂಜುರ್ಲಿಯ ಪ್ರಭೇದಗಳು[ಬದಲಾಯಿಸಿ]

ಮೂಲ ಪಂಜುರ್ಲಿಯು ಕುಡುಮ ಕ್ಷೇತ್ರ(ಈಗಿನ ಧರ್ಮಸ್ಥಳ) ಅಣ್ಣಪ್ಪನ ಜೊತೆ ನಿಕಟವಾಗಿ ಹೊಂದಿಕೊಂಡಿರುವುದು ತಿಳಿಯುವುದು. ತಾನು ನೆಲೆ ನಿಂತ ಊರಿಗೆ ಅನುಗುಣವಾಗಿ ಪಂಜುರ್ಲಿಯ ಹೆಸರು ಬದಲಾಗುತ್ತಾ ಹೋಗುವುದು ಒಂದು ವಿಶೇಷ. ಅಣ್ಣಪ್ಪ ಪಂಜುರ್ಲಿ(ಅಣ್ಣಪ್ಪಂಜುರ್ಲಿ ಎಂದೂ ಕರೆಯುತ್ತಾರೆ), ಅಂಗಣ ಪಂಜುರ್ಲಿ, ವರ್ನರ ಪಂಜುರ್ಲಿ, ಬಗ್ಗು ಪಂಜುರ್ಲಿ, ತೇಂಬೈಲು ಪಂಜುರ್ಲಿ, ವರ್ತೆ ಪಂಜುರ್ಲಿ, ಕುಪ್ಪೆಟ್ಟು ಪಂಜುರ್ಲಿ, ಗೋಲಿದಡಿ ಪಂಜುರ್ಲಿ, ಬೊಲ್ಯಲ ಪಂಜುರ್ಲಿ, ಮಲಾರ ಪಂಜುರ್ಲಿ, ದೆಂದೂರ ಪಂಜುರ್ಲಿ, ಪಾಜೈ ಪಂಜುರ್ಲಿ, ಬೈಕಾಡ್ದಿ ಪಂಜುರ್ಲಿ, ಬತ್ತಿ ಪಂಜುರ್ಲಿ, ಕಲ್ಯಬೂಡು ಪಂಜುರ್ಲಿ, ಕದ್ರಿ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಕಾಂತಾವರ ಪಂಜುರ್ಲಿ, ಅಂಬದಾಡಿ ಪಂಜುರ್ಲಿ, ಲತ್ತಂಡೆ ಪಂಜುರ್ಲಿ ಹೀಗೆ ಪಂಜುರ್ಲಿ ದೈವದ ಪ್ರಭೇದಗಳ ಪಟ್ಟಿ ಬೆಳೆಯುತ್ತದೆ.

ದೈವದ ಮಣೆ ಮತ್ತು ಸನ್ನಿಧಿ[ಬದಲಾಯಿಸಿ]

ಸಾಮಾನ್ಯವಾಗಿ ಎಲ್ಲಾ ತರದ ಜುಮಾದಿ(ಧೂಮಾವತಿ ದೈವ), ಪಿಲ್ಚಂಡಿ, ಪಂಜುರ್ಲಿ, ಜಾರಂದಾಯ ಮೊದಲಾದ ದೈವಗಳ ಮಣೆ-ಮಂಚದಲ್ಲಿ ವ್ಯತ್ಯಾಸ ಕಂಡು ಬರುವುದಿಲ್ಲ. ಕತ್ತರಿ ಮಂಚವನ್ನು ನಾಲ್ಕು ವಿನ್ಯಾಸಭರಿತ ಕಾಲುಗಳಿಂದ ನೆಲದ ಮೇಲೆ ಇರಿಸುವರು. ಮಂಚದ ಗಾತ್ರವು 5 1/2 ಅಡಿ ಉದ್ದ, 2 1/4 ಅಡಿ ಅಗಲ, 2 1/4 ಅಡಿ ಎತ್ತರವಿರುವುದು. ಹಲಸು, ಸಾಗುವಾನಿ, ಮೊದಲಾದ ದೀರ್ಘ ಬಾಳಿಕೆ ಬರುವ ಹಲಗೆಗಳನ್ನು ಉಪಯೋಗಿಸುತ್ತಾರೆ. ಈ ಮಂಚವನ್ನು ಅಪರೂಪಕ್ಕೆಂಬಂತೆ ಮನೆಯ ಚಾವಡಿಯ ಮಾಡಿನ ತೊಲೆಯ ಸರಪಳಿಗೆ ಆಧಾರದಲ್ಲಿ ತೂಗು ಹಾಕುವುದು ಇದೆ. ಮದನಕೈಗಳನ್ನು( ಗೋಡೆಯಲ್ಲಿ ಹಲಗೆಯನ್ನು ಜೋಡಿಸಲು ಇಕ್ಕೆಲಗಳಲ್ಲಿ ಆಧಾರಕ್ಕೆ ಜೋಡಿಸುವ ರೀಪುಗಳು) ಗೋಡೆಗೆ ಜೋಡಿಸಿ ಅದರ ಮೇಲೆ ಒಂದು ಹಲಗೆಯನ್ನಿಟ್ಟು ಪೂಜಿಸುವುದು ಹಿಂದಿನ ಕಾಲದಲ್ಲಿ ತುಳುವರಲ್ಲಿ ಸಾಮಾನ್ಯವಾಗಿ ನಡೆದುಬಂದ ಆಚರಣೆ. ಈಗ ಕ್ರಮೇಣ ಬದಲಾವಣೆ ಕಂಡು ಬಂದಿರುವುದು ತಿಳಿಯುತ್ತದೆ. ಮಂಚದ ಕೈಗಳಿಗೆ ಮುಂಭಾಗದಲ್ಲಿ ಸಾಂಕೇತಿಕವಾಗಿ ಹಂದಿಯ ಮುಖ ವಿನ್ಯಾಸವನ್ನು ಬಿಡಿಸುತ್ತಾರೆ.

ಪಂಜುರ್ಲಿ ಪ್ರಧಾನ ದೈವಶಕ್ತಿಯಾಗಿರುವಲ್ಲಿ ಮೂಲ ಮೈಸಂದಾಯ(ಮಹಿಷ ದೈವ) ದೈವವಿದ್ದಲ್ಲಿ ಬಲಭಾಗದಲ್ಲಿ ಮೂಲ ಮೈಸಂದಾಯನಿಗೆ ಪ್ರತ್ಯೇಕವಾದ ಸಣ್ಣ ಗಾತ್ರದ ಮಂಚವನ್ನು ಇಡಬೇಕು. ದೈವಗಳ ಕೋಲ ನಡೆಯುವಾಗಲೂ ಮೂಲ ಮೈಸಂದಾಯನಿಗೆ ಪ್ರಥಮ ಗೌರವ ಸಲ್ಲಬೇಕು. ಪಂಜುರ್ಲಿಯ ಜೊತೆಯಲ್ಲಿ ವರ್ತೆಯಿದ್ದಲ್ಲಿ(ಹೆಣ್ಣು ಶಕ್ತಿ) ಒಂದೇ ಮಣೆ-ಮಂಚದಲ್ಲಿ ನಂಬಿಕೊಂಡು ಬರುವರು. ಕೋಲ ಕಟ್ಟುವುದು ಕೂಡ ಜೊತೆಯಲ್ಲಿ ನಡೆಯುವುದು. ಪಂಜುರ್ಲಿ ರಕ್ತಾಹಾರದ ದೈವ. ಆದುದರಿಂದ ಭೋಗ/ತಂಬಿಲ ಪಸರ್ನೆಗಳಲ್ಲಿ(ದೈವಗಳಿಗೆ ಕಜ್ಜಾಯ ಸೇವೆ) ವ್ಯತ್ಯಾಸವಿರುವುದಿಲ್ಲ. ಕೋಲ ಕಟ್ಟುವ ಸಮಯದಲ್ಲಿ ತುಳುನಾಡಿನ ಬಡಗು ಭಾಗದಲ್ಲಿ ತೆಂಕಣ ಪ್ರದೇಶಕ್ಕಿಂತ ಸ್ವಲ್ಪ ಮಟ್ಟಿನ ವ್ಯತ್ಯಾಸವಿರುತ್ತದೆ. ದೈವನರ್ತಕನಿಗೆ ಮುಖಕ್ಕೆ ಹಂದಿಯ ಮುಖವಾಡವನ್ನು ತೊಡಿಸುತ್ತಾರೆ. ಮಣೆ-ಮಂಚದಲ್ಲಿ ಸಾಧಾರಣ ಒಂಭತ್ತು ಅಂಗುಲ ಎತ್ತರದ ಕಂಚು/ಹಿತ್ತಾಳೆಯ ‘ಪಂಜುರ್ಲಿ’ ಪಾಪೆಯನ್ನು ಇಡುವ ಕ್ರಮವಿದೆ.

ತೆಂಕಣ ರಾಜ್ಯದಲ್ಲಿ[ಬದಲಾಯಿಸಿ]

ತೆಂಕಣ ಮಂಗಳೂರು ಮೊದಲಾದೆಡೆ ಪಂಜುರ್ಲಿ ಪ್ರಧಾನ ದೈವಗಳಾಗಿರುವ ಮನೆತನಗಳಲ್ಲಿ ಕೋಲ ನಡೆಯುವ ಸಮಯ ಬಡಗಣ ಪ್ರದೇಶಕ್ಕಿಂತ ಕೆಲ ಭಿನ್ನ ಆಚರಣೆಗಳುನ್ನು ಮಾಡುತ್ತಿರುವುದು ತಿಳಿದು ಬಂದಿದೆ. ತೆಂಕಣ ಪ್ರದೇಶದಲ್ಲಿ ಉಳ್ಳಾಲ್ತಿ ಶಕ್ತಿಗೆ ಅಗ್ರಮಾನ್ಯ ಗೌರವ ಸಲ್ಲುವುದು. (ಬಪ್ಪನಾಡಿನ ದುರ್ಗಾಪರಮೇಶ್ವರಿ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ, ಇತ್ಯಾದಿ ಈ ಶಕ್ತಿಗಳನ್ನು ಉಳ್ಳಾಲ್ತಿ ಎಂದು ಸಂಭೋದಿಸುತ್ತಾರೆ.) ಕೋಲ ನಡೆಯುವ ಗ್ರಾಮದಲ್ಲಿ ಉಳ್ಳಾಲ್ತಿ ದೇವಸ್ಥಾನ ಇರದಿದ್ದರೆ, ಕೋಲದ ಚಪ್ಪರದಲ್ಲಿ ದೈವಗಳನ್ನು ಪ್ರತಿಷ್ಟಾಪಿಸುವ ’ಮತ್ತರ್ನೆ’ಯಲ್ಲಿ ಉಳ್ಳಾಲ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಕ್ರಮವಿರುವುದು. ‘ಮತ್ತರ್ನೆ’ ಬಲ ಪಾರ್ಶ್ವದಲ್ಲಿ ಉಳ್ಳಾಲ್ತಿಗೆ ಪ್ರತಿರೂಪವಾಗಿ ಅಮ್ನೂರು (ಅಮ್ಮನವರು ಅಥವಾ ದೇವಿ) ಶಕ್ತಿಯನ್ನು ಕಲಶ ರೂಪದಲ್ಲಿ ಸ್ಥಾಪಿಸುವರು. ಕೆಂಪು ಪಟ್ಟಿಯಿಂದ ಅಲಕಂರಿಸಿ ‘ಗದ್ದಿಗೆ’ (ದೇವಿಯನ್ನು ಆರಾಧಿಸುವ ವಿಧಾನ) ರೂಪದಲ್ಲಿ ಹೂ ಪಿಂಗಾರ(ಅಡಿಕೆಯ ಹೂ)ಗಳಿಂದ ಶೃಂಗರಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. ತುಳುನಾಡ ದೈವಗಳು ಪುಸ್ತಕ- ಬನ್ನಂಜೆ ಬಾಬು ಅಮೀನ್, ಕೆಮ್ಮಲಜೆ ಜಾನಪದ ಪ್ರಕಾಶನ ಉಡುಪಿ, ೨೦೧೦