ವಿಷಯಕ್ಕೆ ಹೋಗು

ಕಟೀಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಟೀಲು
ಕಟೀಲು
ನಗರ
ಕಟೀಲು ದುರ್ಗಾಪರಮೇಶ್ವರೀ
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ.

ಹೆಸರಿನ ಉತ್ಪತ್ತಿ

[ಬದಲಾಯಿಸಿ]

'ಕಟಿ' ಎಂದರೆ 'ಸೊ೦ಟ' ಎಂದರ್ಥ. ಕಟೀಲು, ನ೦ದಿನಿ ನದಿಯ ಉಗಮಸ್ಥಾನವಾದ ಕನಕಗಿರಿ ಮತ್ತು ಸಮುದ್ರವನ್ನು ಸೇರುವ ಪಾವಂಜೆಯ ನಡುವೆ ಅ೦ದರೆ ಮಧ್ಯ ಭಾಗದಲ್ಲಿದೆ. 'ಇಳಾ' ಎಂದರೆ ಪ್ರದೇಶ (ಭೂಮಿ), ಹೀಗಾಗಿ ಈ ಸ್ಥಳವನ್ನು 'ಕಟಿ + ಇಳಾ', ಕಟೀಲು ಎಂದು ಕರೆಯಲಾಗುತ್ತದೆ.

ಸ್ಥಳ ಪುರಾಣ

[ಬದಲಾಯಿಸಿ]

ಈ ಆಧ್ಯಾತ್ಮಿಕ ಕ್ಷೇತ್ರದ ಹಿಂದೆ ಸೊಗಸಾದ ಒಂದು ಪೌರಾಣಿಕ ಕಥೆಯಿದೆ. ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅವನು ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು. ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ಇತ್ತ ಅರುಣಾಸುರನು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ತನಗೆ ತ್ರಿಮೂರ್ತಿಗಳಿಂದಾಗಲೀ, ದೇವತೆಗಳಿಂದಾಗಲೀ, ಪುರುಷರಿಂದ ಅಥವಾ ಸ್ತ್ರೀಯರಿಂದಲಾಗಲೀ, ಚತುಷ್ಪದಿಗಳಿಂದಲಾಗಲೀ ಮರಣ ಬಾರದಂತೆ ವರವನ್ನು ಪಡೆದಿದ್ದನು. ಸರಸ್ವತೀ ದೇವಿಯೂ ಕೂಡ ಅವನಿಗೆ ಗಾಯತ್ರೀ ಮಂತ್ರವನ್ನುಪದೇಶಿಸಿ ಅನುಗ್ರಹಿಸಿದ್ದಳು. ಇವೆಲ್ಲವುಗಳಿಂದ ಅತ್ಯಂತ ಬಲಿಷ್ಠನಾದ ಅವನು ದೇವಲೋಕಕ್ಕೆ ಆಕ್ರಮಣ ನಡೆಸಿ ಅದನ್ನು ತನ್ನ ವಶಪಡಿಸಿಕೊಂಡನು. ತಮ್ಮ ನೆಲೆಯನ್ನು ಕಳೆದುಕೊಂಡ ದೇವತೆಗಳು ತ್ರಿಮೂರ್ತಿಗಳ ಜೊತೆಗೂಡಿ ಸ್ವರ್ಗವನ್ನು ಮರಳಿ ವಶಪಡಿಸಿ ಕೊಡುವಂತೆ ಆದಿಶಕ್ತಿಯನ್ನು ಮೊರೆಹೊಕ್ಕರು. ಆಗ ದೇವಿಯು, ಅರುಣಾಸುರನು ಗಾಯತ್ರೀ ಮಂತ್ರವನ್ನು ಉಪಾಸಿಸುವಷ್ಟು ಸಮಯ ತನಗೂ ಅವನನ್ನು ವಧಿಸುವುದು ಅಸಾಧ್ಯವೆಂದು ಹೇಳಿ, ದೇವಗುರು ಬೃಹಸ್ಪತಿಗಳ ಸಹಾಯದಿಂದ ಅವನನ್ನು ಗಾಯತ್ರೀ ಮಂತ್ರಪಠಣದಿಂದ ವಿಮುಖನನ್ನಾಗಿ ಮಾಡುವಂತೆ ತಿಳಿಸಿದಳು. ಅದರಂತೆಯೇ ಅರುಣಾಸುರನಲ್ಲಿಗೆ ತೆರಳಿದ ಬೃಹಸ್ಪತಿಗಳು ಅವನನ್ನು ಉಪಾಯದಿಂದ ಗಾಯತ್ರೀ ಮಂತ್ರದಿಂದ ವಿಮುಖನನ್ನಾಗಿಸಿದರು. ಇದರಿಂದ ಅರುಣಾಸುರನು ತಾನು ದೇವರಿಂದಲೂ ದೊಡ್ಡವನೆಂದು ಭಾವಿಸಲಾರಂಭಿಸಿದನು. ಋಷಿ ಮುನಿಗಳ ಯಜ್ಞವನ್ನು ಹಾಳುಗೆಡವಿ, ಎಲ್ಲರೂ ತನ್ನನ್ನೇ ಆರಾಧಿಸಬೇಕೆಂದು ಆಜ್ಞೆ ವಿಧಿಸಿದನು(ಆದೇಶಿಸಿದನು). ಅವನ ಅಟ್ಟಹಾಸ ಮಿತಿಮೀರಿದಾಗ ದೇವತೆಗಳಿಗೆ ಇತ್ತ ಮಾತಿನಂತೆ ದೇವಿಯು ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ಸುತ್ತಾಡಲಾರಂಭಿಸಿದಳು. ಅರುಣಾಸುರನ ಮಂತ್ರಿಗಳಾದ ಚಂಡ ಪ್ರಚಂಡರು ಅವಳನ್ನು ನೋಡಿ, ಅರುಣಾಸುರನಿಗೆ ಅವಳ ಸೌಂದರ್ಯದ ಬಗ್ಗೆ ತಿಳಿಸಿದರು. ಅರುಣಾಸುರನು ಅವಳನ್ನು ಮದುವೆಯಾಗಲು ಉದ್ದೇಶಿಸಿ ಅವಳ ಬಳಿಗೆ ತೆರಳಿದನು. ತನ್ನ ಒಡೆಯರಾಗಿದ್ದ ಶುಂಭ ನಿಶುಂಭರನ್ನು ವಧಿಸಿದವಳು ಅವಳೇ ಎಂದು ತಿಳಿದು ಅವಳ ಮೇಲೆ ದಾಳಿ ಮಾಡಿದನು. ಆಗ ದೇವಿಯು ಅಲ್ಲಿಯೇ ಸಮೀಪದಲ್ಲಿದ್ದ ಬಂಡೆಯೊಂದರಲ್ಲಿ ಅಂತರ್ಧಾನಳಾದಳು. ಅರುಣಾಸುರನು ಕೋಪದಿಂದ ಆ ಬಂಡೆಯನ್ನು ತನ್ನ ಖಡ್ಗದಿಂದ ಒಡೆಯಲು ಅದರಿಂದ ಸಾವಿರಾರು ಸಂಖ್ಯೆಯಲ್ಲಿ ಹೊರಟ ದುಂಬಿಗಳು ಅವನನ್ನು ಕಚ್ಚಲಾರಂಭಿಸಿದವು. ದೇವಿಯು ಒಂದು ದೊಡ್ಡದಾದ ದುಂಬಿ (ಭ್ರಮರ) ಯ ರೂಪವನ್ನು ತಾಳಿ ಅರುಣಾಸುರನನ್ನು ಕಚ್ಚಿ ಕೊಂದಳು. ಭ್ರಮರದ ರೂಪವನ್ನು ತಾಳಿದ್ದರಿಂದ ಭ್ರಾಮರಿ ಭ್ರಮರಾಂಬಿಕೆ ಎಂದು ಪ್ರಖ್ಯಾತಿಯನ್ನು ಪಡೆದಳು. ದೇವತೆಗಳು, ಜಾಬಾಲಿ ಮಹರ್ಷಿಗಳು ದೇವಲೋಕದ ಕಲ್ಪವೃಕ್ಷದಿಂದ ತಂದ ಎಳನೀರಿನಿಂದ ರೌದ್ರ ರೂಪದಲ್ಲಿದ್ದ ದೇವಿಗೆ ಅಭಿಷೇಕವನ್ನು ಮಾಡಿ , ಮಲ್ಲಿಕಾ ಹಾರವನ್ನು ಹಾಕಿ ಶಾ೦ತರೂಪವನ್ನು ಹೊಂದುವಂತೆ ಪ್ರಾರ್ಥಿಸಿದರು. ಅದರಂತೆಯೇ ದೇವಿಯು ನಂದಿನಿ ನದಿಯ ಮಧ್ಯದಲ್ಲಿದ್ದ ಒಂದು ಪುಟ್ಟ ದ್ವೀಪದಲ್ಲಿ ಲಿಂಗ ರೂಪದಲ್ಲಿ ದುರ್ಗಾ ಪರಮೇಶ್ವರೀ ಎಂಬ ಹೆಸರಿನಿಂದ ಉದ್ಭವಿಸಿದಳು. ಇದರಿಂದ ನಂದಿನಿಯ ಶಾಪ ವಿಮೋಚನೆಯಾಯಿತು. ನಂದಿನಿಯ ಕಟಿ (ಸೊಂಟ/ನಡು) ಭಾಗದಲ್ಲಿರುವ ಇಳೆ (ಭೂಮಿ) ಯಲ್ಲಿ ದೇವಿಯು ಉದ್ಭವಿಸಿದ ಕಾರಣ ಆ ಕ್ಷೇತ್ರಕ್ಕೆ ಕಟೀಲು ಎಂಬ ಹೆಸರಾಯಿತು. []

ಆಡಳಿತ ಮಂಡಳಿ

[ಬದಲಾಯಿಸಿ]

ಈ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿದೆ. ದೇವಸ್ಥಾನವು ಅನೇಕ ಬಗೆಯ ಕಲೆಗಳಿಗೆ ಆಶ್ರಯವನ್ನು, ಪ್ರೋತ್ಸಾಹವನ್ನು ನೀಡುತ್ತಿದೆ. ಆವುಗಳಲ್ಲಿ ಮುಖ್ಯವಾದ್ದು ಯಕ್ಷಗಾನ. 6 ಯಕ್ಷಗಾನ ಮೇಳಗಳು ಸೇವಾರೂಪದಲ್ಲಿ ಯಕ್ಷಗಾನ ಬಯಲಾಟವನ್ನು ನಡೆಸಿಕೊಡುತ್ತವೆ. ವಿಶೇಷ ದಿನಗಳಂದು ಇಲ್ಲಿ ಚಂಡಿಕಾ ಹೋಮ, ತುಲಾಭಾರ, ವೇದ ಪಾರಾಯಣ, ಹರಿಕಥೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಜರುಗುತ್ತವೆ.

ಭೂಗೋಳಶಾಸ್ತ್ರ

[ಬದಲಾಯಿಸಿ]

ಇದು ಮಂಗಳೂರಿನಿಂದ ಸುಮಾರು 20.6 ಕಿಲೋಮೀಟರ್ ದೂರದಲ್ಲಿದೆ. [] ಉಡುಪಿಗೆ ಹೋಗುವ ದಾರಿಯಲ್ಲಿ ಕಟೀಲು ಇದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು [] ಇರುವ ಬಜ್ಪೆ ಮತ್ತು ಕಿನ್ನಿಗೋಳಿ ಒಂದು ಪ್ರಮುಖ ಜಂಕ್ಷನ್ ನಡುವೆ ಇದೆ.

ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ

[ಬದಲಾಯಿಸಿ]

ಪಟ್ಟಣವು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನವನ್ನು ಹೊಂದಿದೆ. [] ಈ ದೇವಾಲಯವು ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿರುವ ಒಂದು ದ್ವೀಪದ ಮೇಲೆ ವಿಹಂಗಮ ದೃಶ್ಯಗಳು ಮತ್ತು ಆಕರ್ಷಕ ಹಸಿರಿನ ನಡುವೆ ನೆಲೆಗೊಂಡಿದೆ. ದುರ್ಗಾ ಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿದಿನ ಸಾವಿರಾರು ಭಕ್ತರು ಕಟೀಲಿಗೆ ಭೇಟಿ ನೀಡುತ್ತಾರೆ.

ಶಿಕ್ಷಣ ಸಂಸ್ಥೆಗಳು

[ಬದಲಾಯಿಸಿ]

ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಗೆ ಕಟೀಲು ಹೆಸರುವಾಸಿಯಾಗಿದೆ. ಎಲ್ಲಾ ಸಂಸ್ಥೆಗಳು ಶ್ರೀ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನದ ಒಡೆತನದಲ್ಲಿದೆ. ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜು, ಕಟೀಲು, [] ಶ್ರೀ ದುರ್ಗಾ ಸಂಸ್ಕೃತ ಪಿಜಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಕಟೀಲು, [] [] [] ಹಿಂದೂ ನಂಬಿಕೆಯ ಭಕ್ತರು ತಮ್ಮ ಸ್ಥಳದಲ್ಲಿ ಯಾವುದೇ ಮೇಳಗಳ ಮೂಲಕ ಯಕ್ಷಗಾನವನ್ನು ಆಡುತ್ತಾರೆ.

ಆಕರಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ದೇವೀ ಭಾಗವತ
  2. "mangalore to kateel temple - Google Search".
  3. "Mangalore Airport (IXE)".
  4. ೪.೦ ೪.೧ "KateelDevi | Kateel Devi|Kateel Durgaparameshwari Temple Official Website|Kateel devasthana |News|Events|Photos| Devi temple|Kateel school|College|Goshala|Yakshagana|Annadhana".
  5. "S.D.P.T. First Grade College Kateel | Established in the year 1988".
  6. "Sri Durga Sanskrit PG Studies & Research Centre, Kateel". 17 January 2014.
  7. "List of All Colleges in Dakshina Kannada, Karnataka".

    ಯಕ್ಷಗಾನ ಮೇಳ

    [ಬದಲಾಯಿಸಿ]

    ಕಟೀಲು ಯಕ್ಷಗಾನಕ್ಕೆ ಬಹಳ ಹೆಸರುವಾಸಿಯಾಗಿದೆ ಮತ್ತು ಈ ಪವಿತ್ರ ಸ್ಥಳಕ್ಕೆ ಸಾಂಪ್ರದಾಯಿಕ ಪ್ರಾಮುಖ್ಯತೆಯನ್ನು ಹೊಂದಿದೆ. ಕಟೀಲು ದೇವಸ್ಥಾನದಲ್ಲಿ 6 ಮೇಳಗಳಿವೆ (ತಂಡಗಳು) <ref>Yakshagana


ಬಾಹ್ಯ ಕೊಂಡಿಗಳು

[ಬದಲಾಯಿಸಿ]


"https://kn.wikipedia.org/w/index.php?title=ಕಟೀಲು&oldid=1229459" ಇಂದ ಪಡೆಯಲ್ಪಟ್ಟಿದೆ