ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (November 2009) |
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ | |
---|---|
ಭೂಗೋಳ | |
ಕಕ್ಷೆಗಳು | 13°51′50″N 74°48′52″E / 13.8638°N 74.8145°E |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಉಡುಪಿ |
ಸ್ಥಳ | ಕೊಲ್ಲೂರು |
ಇತಿಹಾಸ ಮತ್ತು ಆಡಳಿತ | |
ಸೃಷ್ಟಿಕರ್ತ | ಪರಶುರಾಮ |
ಆಡಳಿತ ಮಂಡಳಿ | ಮುಜರಾಯಿ ಇಲಾಖೆ, ಕರ್ನಾಟಕ ಸರ್ಕಾರ |
ಅಧೀಕೃತ ಜಾಲತಾಣ | https://www.kollurmookambika.org/ |
[೧]ಮೂಕಾಂಬಿಕಾ ದೇವಿಗೆ ಸಮರ್ಪಿಸಲಾದ ಕೊಲ್ಲೂರಿನ ಮೂಕಾಂಬಿಕಾ ದೇವಿ ದೇವಸ್ಥಾನವು (ಕನ್ನಡ:ಮೂಕಾಂಬಿಕಾ ದೇವಿ), ಭಾರತದ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿನ ಜನರಿಗೆ ಸಂಬಂಧಿಸಿದಂತಿರುವ ಅತ್ಯಂತ ಪ್ರಸಿದ್ಧ ಪೂಜಾ ಸ್ಥಳಗಳ ಪೈಕಿ ಒಂದೆನಿಸಿದೆ. ಸೌಪರ್ಣಿಕಾ ನದಿಯ ದಂಡೆಗಳು ಮತ್ತು ಸೊಂಪಾಗಿ ರಸಭರಿತವಾಗಿರುವ ಹಸಿರು ಹುಲ್ಲಿನಿಂದಾವೃತವಾದ ಕೊಡಚಾದ್ರಿ ಬೆಟ್ಟದಿಂದ ಸಾದರಪಡಿಸಲ್ಪಟ್ಟಿರುವ ಚಿತ್ರಸದೃಶ ಪರಿಸರದಲ್ಲಿ, ಮಂಗಳೂರಿನಿಂದ ೧೪೭ ಕಿ.ಮೀ.ಗಳಷ್ಟು ಅಂತರದಲ್ಲಿ ನೆಲೆಗೊಂಡಿರುವ ಈ ದೇವಸ್ಥಾನವು ಪ್ರತಿವರ್ಷವೂ ಲಕ್ಷಗಟ್ಟಲೆ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ಹಿಂದುಗಳು ಪೂಜ್ಯಭಾವನೆಯಿಂದ ಕಾಣಲ್ಪಡುವ ಜಗದ್ಗುರು ಆದಿ ಶಂಕರಾಚಾರ್ಯರೊಂದಿಗೆ ಈ ದೇವಸ್ಥಾನವು ಸಂಬಂಧವನ್ನು ಹೊಂದಿರುವ ಕ್ಷೇತ್ರವಾಗಿರುವುದರಿಂದ, ಭಕ್ತ-ಸಮುದಾಯಕ್ಕೆ ಸಂಬಂಧಿಸಿದಂತೆ ಇದು ಅಗಾಧವಾದ ಪ್ರಸ್ತುತತೆಯನ್ನು ಹೊಂದಿದೆ. ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವೊಂದನ್ನು ಸ್ಥಾಪಿಸುವ ಪರಿಕಲ್ಪನೆಯನ್ನು ಆದಿ ಶಂಕರರು ಗ್ರಹಿಸಿದರು ಮತ್ತು ಸುಮಾರು ೧೨೦೦ ವರ್ಷಗಳಷ್ಟು ಹಿಂದೆಯೇ ದೇವಸ್ಥಾನದಲ್ಲಿ ದೇವತೆಯ ವಿಗ್ರಹವನ್ನು ಪ್ರತಿಷ್ಠಾಪಿಸಿದರು. ಮೂಕಾಂಬಿಕಾ ದೇವತೆಯು ಶಕ್ತಿ, ಸರಸ್ವತಿ ಮತ್ತು ಮಹಾಲಕ್ಷ್ಮಿಯ ಒಂದು ಅವಿರ್ಭವಿಸುವಿಕೆ ಅಥವಾ ಅವತಾರ ಎಂಬುದಾಗಿ ಪರಿಗಣಿಸಲ್ಪಟ್ಟಿರುವುದರಿಂದ, ಮೂಕಾಂಬಿಕಾ ದೇವಿಯ ದೇವಸ್ಥಾನದಲ್ಲಿ ಜನರು ಅತೀವವಾದ ನಂಬಿಕೆಯನ್ನು ಇರಿಸಿಕೊಂಡಿದ್ದಾರೆ. ವಾಸ್ತವವಾಗಿ ಹೇಳಬೇಕೆಂದರೆ, ಮೂಕಾಂಬಿಕಾ ದೇವಿಯ ದೇವಸ್ಥಾನವು ಕರ್ನಾಟಕದಲ್ಲಿನ 'ಸಪ್ತ ಮುಕ್ತಿಸ್ಥಳ' ತೀರ್ಥಯಾತ್ರಾ ತಾಣಗಳ ಪೈಕಿ ಒಂದೆನಿಸಿದೆ. ಆ ತಾಣಗಳೆಂದರೆ: ಕೊಲ್ಲೂರು, ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ. [೧]
ಕೊಡಚಾದ್ರಿ ಶಿಖರದ ತಪ್ಪಲು ಪ್ರದೇಶದಲ್ಲಿ ಮೂಕಾಂಬಿಕಾ ದೇವಿಯ ದೇವಸ್ಥಾನವು ನೆಲೆಗೊಂಡಿದೆ.[೨] ಶಿವ ಮತ್ತು ಶಕ್ತಿ ಈ ಇಬ್ಬರನ್ನೂ ಸಂಯೋಜಿಸಿರುವ ಜ್ಯೋತಿರ್ಲಿಂಗದ ಸ್ವರೂಪದಲ್ಲಿ ಈ ದೇವತೆಯು ಕಂಡುಬರುತ್ತಾಳೆ. [೩]ಶ್ರೀಚಕ್ರದ ಮೇಲೆ ಸ್ಥಾಪಿಸಲಾಗಿರುವ ದೇವತೆಯ ಪಂಚಲೋಹ ದ (ಐದು ಧಾತುಗಳನ್ನು ಬೆರೆಸಿದ ಲೋಹದ) ವಿಗ್ರಹವನ್ನು ಆದಿ ಶಂಕರಾಚಾರ್ಯರು ಈ ಸ್ಥಳಕ್ಕೆ ತಾವು ಭೇಟಿನೀಡಿದ ಸಂದರ್ಭದಲ್ಲಿ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ. ದೇವತೆಯ ಮೂಲಸ್ಥಳವು ಕೊಡಚಾದ್ರಿ ಶಿಖರದ ತುದಿಯ (೩೮೮೦') ಮೇಲಿದೆ ಎಂಬುದಾಗಿಯೂ ಮತ್ತು ಕೊಡಚಾದ್ರಿಯನ್ನು ಸಂಪೂರ್ಣವಾಗಿ ಚಾರಣಮಾಡಿಕೊಂಡು ಮೂಲಸ್ಥಳವನ್ನು ತಲುಪುವುದು ಸಾಮಾನ್ಯ ಜನರಿಗೆ ಅತ್ಯಂತ ಕಷ್ಟಕರವಾಗಿದ್ದರಿಂದ, ಶಂಕರಾಚಾರ್ಯರು ದೇವಸ್ಥಾನವನ್ನು ಕೊಲ್ಲೂರಿನಲ್ಲಿ ಪುನರ್-ಸ್ಥಾಪಿಸಿದರು ಎಂಬುದಾಗಿಯೂ ನಂಬಲಾಗಿದೆ.ಇಲ್ಲಿ ಪಂಚಮುಖಿ ಗಣೇಶನ ಒಂದು ಮನಮೋಹಕ ಶಿಲ್ಪವಿರುವುದನ್ನು ಕಾಣಬಹುದು.
ಕರ್ನಾಟಕದಲ್ಲಿನ ಪರಶುರಾಮ ಕ್ಷೇತ್ರದ ಸಪ್ತ ಮುಕ್ತಿಸ್ಥಳದ ತೀರ್ಥಯಾತ್ರಾ ತಾಣಗಳ ಪೈಕಿ ಒಂದೆಂಬುದಾಗಿ ಕೊಲ್ಲೂರು ಪರಿಗಣಿಸಲ್ಪಟ್ಟಿದೆ. ಆ ತಾಣಗಳೆಂದರೆ: ಕೊಲ್ಲೂರು, ಉಡುಪಿ, ಸುಬ್ರಮಣ್ಯ, ಕುಂಬಾಶಿ, ಕೋಟೇಶ್ವರ, ಶಂಕರನಾರಾಯಣ ಮತ್ತು ಗೋಕರ್ಣ. [೨].
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿರುವ ಇತರ ದೇವತೆಗಳಲ್ಲಿ ಇವು ಸೇರಿವೆ: ಶ್ರೀ ಸುಬ್ರಮಣ್ಯ, ಶ್ರೀ ಪಾರ್ಥೀಶ್ವರ, ಶ್ರೀ ಪಂಚಮುಖ ಗಣಪತಿ, ಶ್ರೀ ಚಂದ್ರಮೌಳೀಶ್ವರ, ಶ್ರೀ ಪ್ರಾಣಲಿಂಗೇಶ್ವರ, ಶ್ರೀ ನಂಜುಂಡೇಶ್ವರ, ಶ್ರೀ ಆಂಜನೇಯ, ಶ್ರೀ ವೆಂಕಟರಮಣ, ಶ್ರೀ ತುಳಸಿ ಗೋಪಾಲಕೃಷ್ಣ.
ನವೆಂಬರ್‌ನಲ್ಲಿ ನಡೆಯುವ ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ, ದೇವಸ್ಥಾನವು ಭಕ್ತರ ದಟ್ಟಣೆಯಿಂದ ಕೂಡಿರುತ್ತದೆ. ಜನ್ಮಾಷ್ಟಮಿ ಅಥವಾ ಕೃಷ್ಣ ಜಯಂತಿ ಕೂಡ ಇಲ್ಲಿನ ಒಂದು ಜನಪ್ರಿಯ ಉತ್ಸವ ಎನಿಸಿಕೊಂಡಿದೆ. ಈ ದಿನದಂದು ಸ್ವಯಂಭು ಲಿಂಗವು ಕಾಣಿಸಿಕೊಂಡಿತು ಎಂದು ನಂಬಲಾಗಿದೆ.
ನವರಾತ್ರಿ ಉತ್ಸವದ ಕೊನೆಯ ದಿನದಂದು ಇಲ್ಲಿನ ಸರಸ್ವತಿ ಮಂಟಪದಲ್ಲಿ, ಪುಟ್ಟ ಮಕ್ಕಳಿಗೆ ಅವರದೇ ಮಾತೃಭಾಷೆಯ ವರ್ಣಮಾಲೆಯ ಅಕ್ಷರಗಳಲ್ಲಿ ದೀಕ್ಷೆ ಅಥವಾ ಉಪದೇಶವನ್ನು ನೀಡಲಾಗುತ್ತದೆ ಮತ್ತು ಇದು ವಿದ್ಯಾರಂಭದ ದ್ಯೋತಕವಾಗಿರುತ್ತದೆ. ಅದೇನೇ ಇದ್ದರೂ, ಈ ದೇವಸ್ಥಾನದಲ್ಲಿ ಯಾವುದೇ ಸೂಕ್ತವಾದ ದಿನದಂದು ವಿದ್ಯಾರಂಭದ ಕೈಂಕರ್ಯವನ್ನು ನಡೆಸಬಹುದಾಗಿದೆ. ಪ್ರತಿದಿನದ ಮಧ್ಯಾಹ್ನದ ಅವಧಿ ಮತ್ತು ಸಾಯಂಕಾಲಗಳಲ್ಲಿ ಇಲ್ಲಿ ಭಕ್ತರಿಗೆ ಅನ್ನದಾನವನ್ನು ಮಾಡಲಾಗುತ್ತದೆ.
ಇಲ್ಲಿಗೆ ತಲುಪುವುದು ಹೇಗೆ?
[ಬದಲಾಯಿಸಿ][೪] ಮಂಗಳೂರು, ಉಡುಪಿ ಮತ್ತು ಕುಂದಾಪುರಗಳಿಂದ ರಸ್ತೆಯಿಂದ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ಸಂಪರ್ಕವನ್ನು ಹೊಂದಿದ್ದು, ಇಲ್ಲಿಗೆ ನೇರ ಬಸ್ಸುಗಳಿವೆ. ಕೊಂಕಣ ರೈಲ್ವೆ ಮಾರ್ಗದಲ್ಲಿರುವ ಮೂಕಾಂಬಿಕಾ ರೋಡ್ (ಬೈಂದೂರು) ಅಥವಾ ಕುಂದಾಪುರ ಇಲ್ಲಿಗೆ ಅತಿಸನಿಹದ ರೈಲ್ವೆ ನಿಲ್ದಾಣವಾಗಿವೆ.[೫]
ವಸತಿ ಸೌಕರ್ಯಗಳು
[ಬದಲಾಯಿಸಿ]ಕೊಲ್ಲೂರಿನಲ್ಲಿ ಹಲವಾರು ವಸತಿ-ಸೌಕರ್ಯಗಳು ಲಭ್ಯವಿವೆ. ದೇವಸ್ಥಾನದ ಆಡಳಿತ ಮಂಡಳಿಯು ಸೌಪರ್ಣಿಕಾ ಅತಿಥಿ ಗೃಹವನ್ನು ನಿರ್ವಹಿಸುತ್ತದೆ. ಶ್ರೀ ಲಲಿತಾಂಬಿಕಾ ಅತಿಥಿ ಗೃಹ, ಮಾತಾ ಛತ್ರಂ ಅತಿಥಿ ಗೃಹ, ಗೋಯೆಂಕಾ ಅತಿಥಿ ಗೃಹ ಇತ್ಯಾದಿಗಳೂ ಸಹ ಇಲ್ಲಿ ಲಭ್ಯವಿವೆ. ಒಟ್ಟಾರೆಯಾಗಿ ಹೇಳುವುದಾದರೆ, ಈ ಸೌಕರ್ಯಗಳಲ್ಲಿ ಸುಮಾರು ೪೦೦ ಕೋಣೆಗಳು ಸಂಯೋಜಿಸಲ್ಪಟ್ಟಿವೆ ಎನ್ನಬಹುದು. ಸಾಮಾನ್ಯ ಭಕ್ತರು ಪಾವತಿ ಮಾಡಲು ಶಕ್ಯವಾಗುವಷ್ಟರ ಮಟ್ಟಿಗೆ ಇಲ್ಲಿನ ಕೋಣೆಯ ದರಗಳನ್ನು ನಿಗದಿಪಡಿಸಲಾಗಿದೆ. ಏಕೈಕ ಸಂದರ್ಶಕರಿಗಾಗಿ ಬಸ್ ನಿಲ್ದಾಣದ ಸಂಕೀರ್ಣದಲ್ಲಿ ಒಂದು ವಿಶ್ರಾಂತಿ ಗೃಹದ ವ್ಯವಸ್ಥೆಯನ್ನೂ ಮಾಡಲಾಗಿದೆ. ಇಲ್ಲಿರುವ ಅತಿಥಿ ಮಂದಿರವು ಮತ್ತೊಂದು ಸೌಕರ್ಯವಾಗಿದ್ದು, ಇದನ್ನು ರಾಮಕೃಷ್ಣ ಯೋಗಾಶ್ರಮವು ನಿರ್ವಹಿಸುತ್ತದೆ.[೬]
ಐತಿಹ್ಯಗಳು
[ಬದಲಾಯಿಸಿ][೭]ಇಲ್ಲಿನ ಐತಿಹ್ಯಗಳ ಅನುಸಾರ, ಇಲ್ಲಿ ತಪಸ್ಸು ಮಾಡುತ್ತಿದ್ದ ಕೋಲ ಮಹರ್ಷಿಗೆ ಓರ್ವ ರಾಕ್ಷಸನು ತೊಂದರೆ ನೀಡಿದ; ಈ ರಾಕ್ಷಸನೂ ಸಹ ತನ್ನ ಸ್ವಾಮಿ ಶಿವನನ್ನು ಮೆಚ್ಚಿಸಿ ಅವನಿಂದ ವರವೊಂದನ್ನು ಪಡೆಯುವುದಕ್ಕಾಗಿ ಶಿವನ ಕುರಿತು ತಪಸ್ಸಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ. ಈ ರಾಕ್ಷಸನು ತನ್ನ ದುಷ್ಟ ಬಯಕೆಯನ್ನು ಪೂರೈಸಿಕೊಳ್ಳದಂತೆ ಅವನನ್ನು ತಡೆಗಟ್ಟುವ ಸಲುವಾಗಿ, ಆದಿಶಕ್ತಿಯು ಅವನನ್ನು ಮಾತುಬಾರದ (ಮೂಕ) ವ್ಯಕ್ತಿಯನ್ನಾಗಿಸಿದಳು. ಹೀಗಾಗಿ ಸ್ವಾಮಿ ಶಿವನು ಅವನ ಮುಂದೆ ಕಾಣಿಸಿಕೊಂಡಾಗ (ಅಂದರೆ ಪ್ರತ್ಯಕ್ಷನಾದಾಗ) ಅವನಿಂದ ಏನನ್ನು ಕೇಳಲೂ ರಾಕ್ಷಸನಿಗೆ ಆಗದಂತಾಯಿತು. ತತ್ಪರಿಣಾಮವಾಗಿ ಅವನು ರೋಷಗೊಂಡ ಮತ್ತು ವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸಿದ ಕೋಲ ಮಹರ್ಷಿಗೆ ತಕ್ಷಣವೇ ತೊಂದರೆ ಕೊಡಲು ಆರಂಭಿಸಿದ. ಮೂಕಾಸುರ ರಾಕ್ಷಸನನ್ನು ಪರಾಭವಗೊಳಿಸಿದ ಆದಿಶಕ್ತಿಯನ್ನು ಕುರಿತು ದೇವರುಗಳು ಗುಣಗಾನ ಮಾಡಿ ಅವಳನ್ನು ಮೂಕಾಂಬಿಕಾ ಎಂದು ಕರೆದರು. ಕೋಲ ಮಹರ್ಷಿಯ ಪ್ರಾರ್ಥನೆಯ ಅನುಸಾರವಾಗಿ, ಆ ದಿವ್ಯಮಾತೆಯು ಎಲ್ಲಾ ದೇವರುಗಳ ಜೊತೆಗೂಡಿ ಅಲ್ಲಿಯೇ ನೆಲೆಗೊಂಡಳು ಹಾಗೂ ಭಕ್ತರಿಂದ ಶಾಶ್ವತವಾಗಿ ಪೂಜಿಸಲ್ಪಡುವಂಥ ಭಕ್ತಿ-ಪರಂಪರೆಗೆ ಈ ಸನ್ನಿವೇಶವು ನಾಂದಿಯಾಯಿತು.[೩] Archived 2007-11-05 ವೇಬ್ಯಾಕ್ ಮೆಷಿನ್ ನಲ್ಲಿ..
ಶ್ರೀ ಆದಿ ಶಂಕರಾಚಾರ್ಯರು ತಾವು ಪಡೆದ ಶ್ರೀ ಮೂಕಾಂಬಿಕಾ ದೇವಿಯ ಒಂದು ದರ್ಶನ ಅಥವಾ ಅಂತರ್ದೃಷ್ಟಿಯ ಅನುಸಾರವಾಗಿ ಈ ದೇವತೆಯನ್ನು ಇಲ್ಲಿ ಪ್ರತಿಷ್ಠಾಪಿಸಿದರು ಎಂಬುದಾಗಿ ನಂಬಲಾಗಿದೆ.ಆ ಕಥೆಯು ಹೀಗೆ ಸಾಗುತ್ತದೆ. ಕೊಡಚಾದ್ರಿ ಬೆಟ್ಟಗಳಲ್ಲಿ ಆದಿ ಶಂಕರರು ಧ್ಯಾನಮಾಡಿದರು ಮತ್ತು ಅವರ ಮುಂದೆ ಪ್ರತ್ಯಕ್ಷಳಾದ ದೇವಿಯು ಅವರ ಬಯಕೆಯೇನೆಂದು ಕೇಳಿದಳು. ತಾನು ಪೂಜಿಸಲು ಬಯಸಿರುವ ಕೇರಳದಲ್ಲಿನ ಸ್ಥಳವೊಂದರಲ್ಲಿ ದೇವಿಯನ್ನು ಸಂಘಟಿಸಿ-ಸ್ಥಾಪಿಸುವ ತಮ್ಮ ಬಯಕೆಯನ್ನು ಅವರು ಹೊರಗೆಡವಿದರು.ಇದಕ್ಕೆ ದೇವಿ ಸಮ್ಮತಿಸಿದಳು ಮತ್ತು ಅವರ ಮುಂದೆ ಒಂದು ಸವಾಲನ್ನೂ ಇರಿಸಿದಳು. ತಾನು ಶಂಕರರನ್ನು ಅನುಸರಿಸುವುದಾಗಿಯೂ ಮತ್ತು ಶಂಕರರು ತಮ್ಮ ಗಮ್ಯಸ್ಥಾನವನ್ನು ತಲುಪುವರೆಗೂ ಹಿಂದಿರುಗಿ ನೋಡಬಾರದೆಂಬುದೇ ಈ ಸವಾಲಾಗಿತ್ತು.ಆದರೆ ಶಂಕರರನ್ನು ಪರೀಕ್ಷಿಸುವ ದೃಷ್ಟಿಯಿಂದ ದೇವಿಯು ತನ್ನ ನಡೆಗೆ ಉದ್ದೇಶಪೂರ್ವಕವಾಗಿ ಅಲ್ಪವಿರಾಮ ನೀಡಿದಳು. ದೇವಿಯ ಕಾಲ್ಗೆಜ್ಜೆಗಳ ಧ್ವನಿಯು ಶಂಕರರಿಗೆ ಕೇಳದಾದಾಗ, ಅವರು ತತ್‌ಕ್ಷಣವೇ ಹಿಂದಿರುಗಿ ನೋಡಿದರು. ಆಗ ದೇವಿಯು ಅವರನ್ನು ಅನುಸರಿಸುವುದನ್ನು ನಿಲ್ಲಿಸಿದಳು ಮತ್ತು ತನ್ನನ್ನು ಶಂಕರರು ನೋಡುತ್ತಿದ್ದಂತೆ ಆ ಸ್ಥಳದಲ್ಲಿ ತನ್ನ ವಿಗ್ರಹವನ್ನು ಪ್ರತಿಷ್ಠಾಪಿಸುವಂತೆ ಶಂಕರರಿಗೆ ತಿಳಿಸಿದಳು. ಕೊಲ್ಲೂರು ಕ್ಷೇತ್ರವು, ಗೋಕರ್ಣದಿಂದ ಕನ್ಯಾಕುಮಾರಿಯವರೆಗೆ ಹಬ್ಬಿದ್ದ ಪ್ರಾಚೀನ ಕೇರಳದ ಒಂದು ಭಾಗವೂ ಆಗಿತ್ತು. ಕೇರಳದ ಹುಟ್ಟಿನ ಕುರಿತಾದ ಒಂದಷ್ಟು ಪುರಾಣ ಕಥೆಗಳನ್ನು ಕಾಣಬಹುದಾಗಿದೆ. ಓರ್ವ ಯೋಧಸನ್ಯಾಸಿ ಅಥವಾ ವೀರಸನ್ಯಾಸಿಯಾಗಿದ್ದ ಪರಶುರಾಮನಿಂದ ಕೇರಳವು ಸೃಷ್ಟಿಯಾದದ್ದು ಅಂಥದ್ದೊಂದು ಪುರಾಣ ಕಥೆ ಎನಿಸಿಕೊಂಡಿದೆ. ಬ್ರಾಹ್ಮಣರ ಪುರಾಣವು ಪ್ರಕಟಪಡಿಸುವ ಪ್ರಕಾರ, ಮಹಾವಿಷ್ಣುವಿನ ಒಂದು ಅವತಾರವಾದ ಪರಶುರಾಮನು ತನ್ನ ಕದನ ಕೊಡಲಿಯನ್ನು ಸಮುದ್ರದೊಳಗೆ ಎಸೆದ. ಇದರ ಪರಿಣಾಮವಾಗಿ ಕೇರಳದ ಭೂಭಾಗವು ಹುಟ್ಟಿಕೊಂಡಿತು ಮತ್ತು ಜಲರಾಶಿಯಿಂದ ಇದನ್ನು ವಾಸಯೋಗ್ಯವನ್ನಾಗಿ ಪರಿವರ್ತಿಸಲಾಯಿತು.[5]
ವಿಷ್ಣುವಿನ ಹತ್ತು ಅವತಾರಗಳ (ಮೈದಾಳುವಿಕೆ) ಪೈಕಿ ಪರಶುರಾಮನದು ಆರನೆಯ ಅವತಾರವಾಗಿತ್ತು. ಪರಶು ಎಂಬ ಪದವು ಸಂಸ್ಕೃತದಲ್ಲಿ 'ಕೊಡಲಿ' ಎಂಬ ಅರ್ಥವನ್ನು ನೀಡುತ್ತದೆ. ಆದ್ದರಿಂದ ಪರಶುರಾಮ ಎಂದರೆ 'ಕೊಡಲಿಯನ್ನು ಹೊಂದಿರುವ ರಾಮ' ಎಂದರ್ಥ. ಆಳುವ ಕುಲಕ್ಕೆ ಸೇರಿದ ಕ್ಷತ್ರಿಯರ ಸೊಕ್ಕಿನ ಪೀಡನೆಯಿಂದ ಪ್ರಪಂಚವನ್ನು ವಿಮೋಚನೆಗೊಳಿಸುವುದು ಅವನ ಜನನದ ಗುರಿಯಾಗಿತ್ತು. ಭೂಮಿಯ ಮೇಲಿನ ಎಲ್ಲಾ ಪುರುಷ ಕ್ಷತ್ರಿಯರನ್ನು ಅವನು ಸಾಯಿಸಿದ ಮತ್ತು ಅವರ ರಕ್ತವನ್ನು ಐದು ಸರೋವರಗಳಲ್ಲಿ ಭರ್ತಿಮಾಡಿದ. ಕ್ಷತ್ರಿಯ ರಾಜರನ್ನು ನಾಶಪಡಿಸಿದ ನಂತರ, ತನ್ನ ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವ ಮಾರ್ಗವೊಂದನ್ನು ಕಂಡುಕೊಳ್ಳಲು ಅವನು ವಿದ್ವಜ್ಜನರ ಸಮೂಹವನ್ನು ಸಂಪರ್ಕಿಸಿದ. ಶಾಶ್ವತ ನರಕ-ಶಿಕ್ಷೆಯಿಂದ ತನ್ನ ಆತ್ಮವನ್ನು ರಕ್ಷಿಸಿಕೊಳ್ಳಬೇಕೆಂದರೆ, ತಾನು ಜಯಿಸಿದ್ದ ಭೂಭಾಗಗಳನ್ನು ಬ್ರಾಹ್ಮಣರಿಗೆ ಅವನು ಹಸ್ತಾಂತರಿಸಬೇಕು ಎಂಬ ಸಲಹೆಯು ಅವನಿಗೆ ದಕ್ಕಿತು. ಅವರು ಸಲಹೆ ನೀಡಿದಂತೆಯೇ ಅವನು ನಡೆದುಕೊಂಡ ಮತ್ತು ಗೋಕರ್ಣಂನಲ್ಲಿ ಧ್ಯಾನಕ್ಕೆ ಕುಳಿತುಕೊಂಡ. ಅಲ್ಲಿ ಸಾಗರಗಳ ದೇವರಾದ ವರುಣ ಮತ್ತು ಭೂಮಿಯ ದೇವತೆಯಾದ ಭೂಮಿದೇವಿ ಅವನನ್ನು ಹರಸಿದರು. ಗೋಕರ್ಣಂನಿಂದ ಹೊರಟು ಅವನು ಕನ್ಯಾಕುಮಾರಿಯನ್ನು ತಲುಪಿದ ಮತ್ತು ತನ್ನ ಕೊಡಲಿಯನ್ನು ಸಾಗರದ ಆ ಬದಿಯ ಉತ್ತರದ ಕಡೆಗೆ ಎಸೆದ. ಆ ಕೊಡಲಿಯು ಬಂದು ನೆಲೆಗೊಂಡ ಸ್ಥಳವು ಕೇರಳವಾಗಿತ್ತು. ಇದು ಗೋಕರ್ಣಂ ಮತ್ತು ಕನ್ಯಾಕುಮಾರಿಗಳ ನಡುವೆ ನೆಲೆಗೊಂಡಿರುವ ೧೬೦ ಕಾತಮ್‌ನಷ್ಟಿರುವ (ಒಂದು ಹಳೆಯ ಅಳತೆ) ಭೂಭಾಗವಾಗಿತ್ತು. ಪುರಾಣಗಳು ಹೇಳುವ ಪ್ರಕಾರ, ಪರಶುರಾಮನು ೬೪ ಬ್ರಾಹ್ಮಣ ಕುಟುಂಬಗಳನ್ನು ಕೇರಳದಲ್ಲಿ ನೆಲೆಗೊಳಿಸಿದ; ಕ್ಷತ್ರಿಯರನ್ನು ತಾನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು ಇವರನ್ನು ಆತ ಉತ್ತರದಿಂದ ಕರೆತಂದ. ಪುರಾಣಗಳ ಅನುಸಾರ, ಕೇರಳವು ಪರಶುರಾಮ ಕ್ಷೇತ್ರಂ, ಅಂದರೆ, 'ಪರಶುರಾಮನ ಭೂಭಾಗ' ಎಂಬುದಾಗಿಯೂ ಕರೆಯಲ್ಪಡುತ್ತದೆ; ಸಮುದ್ರದಿಂದ ಸದರಿ ಭೂಭಾಗವನ್ನು ಅವನು ವಾಸಯೋಗ್ಯವಾಗಿಸಿದ ಎಂಬ ಐತಿಹ್ಯವೇ ಈ ಹೆಸರಿಗೆ ಕಾರಣ.
ದೇವಸ್ಥಾನದ ಪೂಜಾ ಕಾರ್ಯವಿಧಿ
[ಬದಲಾಯಿಸಿ]ಮುಂಜಾನೆ ೫.೦೦ ಗಂಟೆ | ದೇವಸ್ಥಾನದ ನಾದವು ಪ್ರಾರಂಭವಾಗುತ್ತದೆ. ನಿರ್ಮಾಲ್ಯ-ದರ್ಶನ |
ಮುಂಜಾನೆ ೬.೦೦ ಗಂಟೆ | ಉಷಾ ಪೂಜೆ |
ಮುಂಜಾನೆ ೭.೩೦ಗಂಟೆ | ಮಂಗಳಾರತಿ |
ಮುಂಜಾನೆ ೮.೩೦ ಗಂಟೆ | ಬಲಿ |
ಬೆಳಗ್ಗೆ ೧೧.೩೦ ಗಂಟೆ | ಉಚ್ಚ ಪೂಜೆ |
ಮಧ್ಯಾಹ್ನ ೧೨.೦೦ ಗಂಟೆ | ಮಹಾನೈವೇದ್ಯ |
ಮಧ್ಯಾಹ್ನ ೧೨.೩೦ ಗಂಟೆ | ಮಹಾ ಮಂಗಳಾರತಿ |
ಮಧ್ಯಾಹ್ನ ೧.೦೦ ಗಂಟೆ | ಬಲಿ |
ಮಧ್ಯಾಹ್ನ ೧.೩೦ ಗಂಟೆ | ನಾದವು ಮುಕ್ತಾಯಗೊಳ್ಳುತ್ತದೆ |
ಮಧ್ಯಾಹ್ನ ೩.೦೦ ಗಂಟೆ | ನಾದವು ಪ್ರಾರಂಭವಾಗುತ್ತದೆ |
ಸಂಜೆ ೬.೦೦ ಗಂಟೆಗೆ | ಪ್ರದೋಷ ಪೂಜೆ |
ರಾತ್ರಿ ೭.೦೦ ಗಂಟೆಗೆ | ನಮನದ ಮಂಗಳಾರತಿ ಮತ್ತು ನೈವೇದ್ಯಂ |
ರಾತ್ರಿ ೭.೩೦ ಗಂಟೆ | ಮಂಗಳಾರತಿ |
ರಾತ್ರಿ ೮.೦೦ ಗಂಟೆ | ಬಲಿ ಮಂಗಳಾರತಿ |
ರಾತ್ರಿ ೮.೩೦ ಗಂಟೆ | ಬಲಿ ಉತ್ಸವ. ಸರಸ್ವತಿ ಮಂಟಪದಲ್ಲಿನ ಅಷ್ಟಾವಧಾನ ಪೂಜೆ. |
ರಾತ್ರಿ ೯.೦೦ ಗಂಟೆ | ಕಾಷಾಯ ಮಂಗಳಾರತಿ. ದೇವಸ್ಥಾನದ ನಾದವು ಮುಕ್ತಾಯಗೊಳ್ಳುತ್ತದೆ. |
ಶ್ರೀ ಮೂಕಾಂಬಿಕಾ ದೇವಿಯ ಅಲಂಕಾರಿಕ ಆಭರಣಗಳು
[ಬದಲಾಯಿಸಿ]ಉಪಕಾರ ಸ್ಮರಣೆಯ ಕೊಡುಗೆಗಳಾಗಿ ಭಕ್ತರ ಸಮುದಾಯದಿಂದ ಸ್ವೀಕರಿಸಲ್ಪಟ್ಟ ಆಭರಣಗಳ ಒಂದು ಬೃಹತ್ ಸಂಗ್ರಹವೇ ದೇವಸ್ಥಾನದಲ್ಲಿದೆ; ದೇವತೆಯ ಕೃಪಾಕಟಾಕ್ಷದಿಂದ ತಮ್ಮ ಕನಸುಗಳು ಮತ್ತು ಬಯಕೆಗಳನ್ನು ನೆರವೇರಿಸಿಕೊಂಡ ಭಕ್ತರು ಈ ಕೊಡುಗೆಗಳನ್ನು ಅರ್ಪಿಸಿರುತ್ತಾರೆ ಎಂಬುದು ಗಮನಾರ್ಹ ಸಂಗತಿ. ದೇವಿಯ ನಾನಾಬಗೆಯ ಆಭರಣಗಳ ಪೈಕಿ ಪಚ್ಚೆಯಲ್ಲಿರುವ ಆಭರಣವು ಅತ್ಯಮೂಲ್ಯ ಎನಿಸಿಕೊಂಡಿದೆ. ಪಚ್ಚೆಯು ಜ್ಞಾನವನ್ನು ಪ್ರತಿನಿಧಿಸುತ್ತದೆ. ಬಂಗಾರದಲ್ಲಿ ಮಾಡಿರುವಂಥ, ಉತ್ಸವದಲ್ಲಿ ಬಳಸುವ ಎರಡು ಉತ್ಸವಮೂರ್ತಿಗಳನ್ನು ಈ ದೇವಸ್ಥಾನವು ಹೊಂದಿದೆ. ಮೂಲ ವಿಗ್ರಹವು ಕಳೆದುಹೋದಾಗ ಅದಕ್ಕೆ ಒಂದು ಪರ್ಯಾಯವಾಗಿ ಚೆನ್ನಮ್ಮ ರಾಣಿಯು ಮತ್ತೊಂದನ್ನು ನೀಡಿದ್ದಳು. ಆದರೆ ಕಳೆದುಹೋದ ಉತ್ಸವಮೂರ್ತಿಯು ತರುವಾಯದಲ್ಲಿ ಸಿಕ್ಕಿತು. ಹೀಗಾಗಿ ಇಲ್ಲಿ ಎರಡು ಉತ್ಸವ ಮೂರ್ತಿಗಳನ್ನು ಕಾಣಬಹುದು. ತಮಿಳುನಾಡಿನ ಹಿಂದಿನ ಮುಖ್ಯಮಂತ್ರಿಯಾದ, ಶ್ರೀ. M.G.R.ರವರು ಈ ದೇವಸ್ಥಾನಕ್ಕೆ ಒಂದು ಬಂಗಾರ ಕತ್ತಿಯನ್ನು ಕೊಡುಗೆಯಾಗಿ ನೀಡಿದ್ದು, ಅದು ಒಂದು ಕೆ.ಜಿ.ಯಷ್ಟು ತೂಗುತ್ತದೆ ಹಾಗೂ ೨½ ಅಡಿ ಉದ್ದವಿದೆ. ಕರ್ನಾಟಕದ ಹಿಂದಿನ ಮುಖ್ಯಮಂತ್ರಿಯಾದ ಶ್ರೀ ಗುಂಡೂರಾವ್‌ರವರು ಬೆಳ್ಳಿಯಿಂದ ಮಾಡಿದ್ದ ಇದೇ ಬಗೆಯ ಕತ್ತಿಯೊಂದನ್ನು ಕೊಡುಗೆಯಾಗಿ ನೀಡಿದ್ದರು. ಮೂಕಾಂಬಿಕಾ ದೇವತೆಯ ಮುಖವಾಡವು ಸಂಪೂರ್ಣವಾಗಿ ಬಂಗಾರದಿಂದ ಮಾಡಲ್ಪಟ್ಟಿದ್ದು, ಇದು ವಿಜಯನಗರ ಸಾಮ್ರಾಜ್ಯದ ವತಿಯಿಂದ ಕೊಡುಗೆಯಾಗಿ ನೀಡಲ್ಪಟ್ಟಿತು. ಕೆಳದಿಯ ಚೆನ್ನಮ್ಮಾಜಿಯವರಿಂದ ಕೊಡುಗೆಯಾಗಿ ನೀಡಲ್ಪಟ್ಟ ಜ್ಯೋತಿರ್ಲಿಂಗದ ಬಂಗಾರದ ಮುಖವಾಡವು ಮತ್ತೊಂದು ಅನನ್ಯ ಆಭರಣವಾಗಿದೆ.[ಸೂಕ್ತ ಉಲ್ಲೇಖನ ಬೇಕು]
ಸಂಗೀತ ಉತ್ಸವ
[ಬದಲಾಯಿಸಿ]ಕಳೆದ ೩೦ ವರ್ಷಗಳಿಂದಲೂ, ಯೇಸುದಾಸ್‌ರವರು ತಮ್ಮ ಜನ್ಮದಿನದಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬರುತ್ತಿದ್ದಾರೆ ಮತ್ತು ಸರಸ್ವತಿ ದೇವಿಯ ಕುರಿತಾದ ಕೀರ್ತನೆಗಳನ್ನು ಹಾಡುತ್ತಿದ್ದಾರೆ. ಅವರ ೬೦ನೇ ಜನ್ಮದಿನದಿಂದ ಸಂಗೀತ ಉತ್ಸವವು ಆರಂಭಗೊಂಡಿತು. ಒಂಬತ್ತು-ದಿನ ಅವಧಿಯ ಸಂಗೀತ ಉತ್ಸವವು ಪ್ರತಿ ಜನವರಿಯಲ್ಲಿ ದೇವಸ್ಥಾನದಲ್ಲಿ ಆರಂಭವಾಗುತ್ತದೆ.
೨೦೧೦ರ ಜನವರಿ ೧೦ರಂದು ಅವರು ‘ಸಂಗೀತಾರ್ಚನೆ’ಯನ್ನು (ಶಾಸ್ತ್ರೀಯ ಭಕ್ತಿ ಗೀತೆಗಳ ಗಾಯನ) ನಡೆಸುವುದರೊಂದಿಗೆ ತಮ್ಮ ೭೦ನೇ ಜನ್ಮದಿನವನ್ನು ಆಚರಿಸಿಕೊಂಡರು. ಭಾನುವಾರದ ಆ ದಿನದಂದು ಮೂಕಾಂಬಿಕಾ ದೇವತೆಯ ಸಮ್ಮುಖದಲ್ಲಿ ಅವರು ನಡೆಸಿದ ಈ ಸೇವೆಯಲ್ಲಿ ಅವರೊಂದಿಗೆ ೭೦ ಮಂದಿ ಹಾಡುಗಾರರು ಪಾಲ್ಗೊಂಡಿದ್ದರು ಎಂಬುದು ಗಮನಾರ್ಹ ಸಂಗತಿ. ತ್ಯಾಗರಾಜರ ಕೀರ್ತನೆಗಳ ‘ಪಂಚರತ್ನ ಗಾಯನ’ವನ್ನು ಈ ಸಂಗೀತಾರ್ಚನೆಯು ಒಳಗೊಂಡಿತ್ತು. ವಿದ್ಯಾರಂಭ ಕಾರ್ಯಕ್ರಮದಲ್ಲೂ ಸಹ ಅವರು ಭಾಗವಹಿಸಿದರು. ಸದರಿ ವಿಶೇಷ ಸಂಗೀತಾರ್ಚನೆಯನ್ನು ಆಕಾಶವಾಣಿಯು ಕೇರಳದ ಎಲ್ಲೆಡೆ ಪ್ರಸಾರ ಮಾಡಿತು.[೮] [೯] [೧೦] [೧೧]
ಕೊಲ್ಲೂರಿನ ಸುತ್ತಮುತ್ತಲ ಪ್ರಕೃತಿ ಸೌಂದರ್ಯ
[ಬದಲಾಯಿಸಿ]ದಟ್ಟವಾಗಿರುವ ನಿತ್ಯಹರಿದ್ವರ್ಣದ ಕಾಡಿನಿಂದ ಮತ್ತು ಅಡಿಕೆ ತೋಟಗಳನ್ನು ಹೊಂದಿರುವ ಇತರ ಪುಟ್ಟ ಹಳ್ಳಿಗಳಿಂದ ಕೊಲ್ಲೂರು ಹಳ್ಳಿಯು ಸುತ್ತುವರಿಯಲ್ಪಟ್ಟಿದೆ. ಕೊಡಚಾದ್ರಿ ಶಿಖರದೊಂದಿಗೆ ಪಶ್ಚಿಮ ಘಟ್ಟಗಳ ಇತರ ಶಿಖರಗಳೂ ಸೇರಿಕೊಂಡು ದೇವಸ್ಥಾನದಿಂದ ಒಂದು ಸುಂದರ ನೋಟವನ್ನು ನೀಡುತ್ತವೆ. ಇಲ್ಲಿನ ಕಾಡು ಯಾವಾಗಲೂ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ ಮತ್ತು ಇದು ಹಲವಾರು ಕಾಡುಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಆಶ್ರಯ ನೀಡಿದೆ. ಇಲ್ಲಿ ಅಪರೂಪದ ಸಸ್ಯಗಳನ್ನೂ ಸಹ ಕಾಣಬಹುದು. ಕೊಲ್ಲೂರು ಮತ್ತು ಕೊಡಚಾದ್ರಿಯ ನಡುವೆಯಿರುವ ಅಂಬಾವನ ಎಂಬ ಒಂದು ಕಾಡು ಅಭೇದ್ಯವಾದ ಕಾಡು ಎಂದು ಹೇಳಲಾಗುತ್ತದೆ.
ಜಲಪಾತ
[ಬದಲಾಯಿಸಿ][೧೨] ದೇವಸ್ಥಾನದಿಂದ ಸುಮಾರು ೪ ಕಿ.ಮೀ.ನಷ್ಟು ದೂರದಲ್ಲಿ ಅರಸಿನಗುಂಡಿ ಎಂಬ ಹೆಸರಿನ ಒಂದು ಸುಂದರ ಜಲಪಾತವಿದೆ. ಈ ಜಲಪಾತವು ಕೊಡಚಾದ್ರಿ ಬೆಟ್ಟಗಳ ತಪ್ಪಲು-ಪ್ರದೇಶದಲ್ಲಿ ನೆಲೆಗೊಂಡಿದೆ ಮತ್ತು ಇದು ಈ ಪ್ರದೇಶದ ಅತ್ಯಂತ ಸುಂದರ ದೃಶ್ಯಗಳ ಪೈಕಿ ಒಂದೆನಿಸಿಕೊಂಡಿದೆ. ಈ ಜಲಪಾತವು ದಾಲಿ ಹಳ್ಳಿಯ ಸಮೀಪದಲ್ಲಿದ್ದು, ಇಲ್ಲಿಗೆ ತಲುಪಲು ಚಾರಣಿಗರು ೩ ಕಿ.ಮೀ.ನಷ್ಟು ಅಂತರವನ್ನು ಚಾರಣಮಾಡಬೇಕಾಗುತ್ತದೆ.
ಸೌಪರ್ಣಿಕಾ ನದಿ
[ಬದಲಾಯಿಸಿ][೧೩] ಮೂಕಾಂಬಿಕಾ ದೇವಿಯ ಪವಿತ್ರಸ್ಥಳದಲ್ಲಿ ಹರಿಯುವ ಎರಡು ನದಿಗಳಾದ ಅಗ್ನಿತೀರ್ಥ ಮತ್ತು ಸೌಪರ್ಣಿಕಾ ಕೊಡಚಾದ್ರಿ ಬೆಟ್ಟಗಳಿಂದ ಉದ್ಭವವಾಗುತ್ತವೆ. ತಂಪಾದ ನೀರಿನ ಪುಟ್ಟ ಚಿಲುಮೆಯು ಕಾಲಭೈರವ ಮತ್ತು ಉಮಾಮಹೇಶ್ವರ ದೇವಸ್ಥಾನಗಳ ನಡುವೆ ನೆಲೆಗೊಂಡಿದ್ದು, ಇದೇ ಸೌಪರ್ಣಿಕಾ ನದಿಯ ಉಗಮಸ್ಥಾನವಾಗಿದೆ. ಇಲ್ಲಿನ ಐತಿಹ್ಯವು ಹೇಳುವ ಪ್ರಕಾರ, ಸುಪರ್ಣನು (ಗರುಡ) ತನ್ನ ತಾಯಿ ವಿನುತಾಳ ಅಳಲುಗಳನ್ನು ಉಪಶಮನಗೊಳಿಸಬೇಕೆಂದು ದೇವತೆಗೆ ಮೊರೆಯಿಡುತ್ತಾ ಈ ನದಿಯ ದಂಡೆಗಳ ಮೇಲೆ ಕುಳಿತು ಒಂದು ತಪಸ್ಸು ಮಾಡಿದ. ದೇವತೆಯು ಅವನ ಮುಂದೆ ಪ್ರತ್ಯಕ್ಷಳಾದಾಗ, ಈ ನದಿಯನ್ನು ಇನ್ನು ಮುಂದೆ ತನ್ನ ಹೆಸರಿನಿಂದ ಅಂದರೆ ಸುಪರ್ಣ ಎಂಬ ಹೆಸರನ್ನೊಳಗೊಂಡಂತಿರುವ ಹೆಸರಿನಿಂದ ಕರೆಯಬೇಕು ಎಂಬುದಾಗಿ ಅವನು ಪ್ರಾರ್ಥಿಸಿದ. ಆದ್ದರಿಂದ ಈ ನದಿಯನ್ನು ಸೌಪರ್ಣಿಕಾ ನದಿ ಎಂಬುದಾಗಿ ಕರೆಯಲಾಗುತ್ತದೆ. ಆತ ತಪಸ್ಸಿಗೆ ಕುಳಿತುಕೊಂಡಿದ್ದ ಎಂದು ಹೇಳಲಾಗುವ ತಾಣದಲ್ಲಿ ಈಗಲೂ ಒಂದು ಪುಟ್ಟ ಗವಿಯಿದ್ದು, ಅದನ್ನು "ಗರುಡನ ಗವಿ" ಎಂದೇ ಕರೆಯಲಾಗುತ್ತದೆ.
ಈ ಪವಿತ್ರ ನದಿಯು ಕೊಡಚಾದ್ರಿಯಲ್ಲಿ ಉಗಮವಾಗುತ್ತದೆ ಮತ್ತು ಅಂತರ್ಗಾಮಿ (ಈಗ ಓಲೂರು) ಪ್ರದೇಶದ ಅಂಚಿನವರೆಗೆ ಹರಿಯುತ್ತದೆ. ಈ ಪ್ರದೇಶದಲ್ಲಿ ಭೃಂಗೀಶ ಮತ್ತು ಪಿಪ್ಪಲಾದ ಎಂಬ ಮತ್ತೆರಡು ಸಣ್ಣನದಿಗಳು ಅದಕ್ಕೆ ಸೇರುತ್ತವೆ. ನಂತರ ಇದು ಪಶ್ಚಿಮದ ಕಡೆಗೆ ಹರಿಯುತ್ತದೆ, "ಸಂಪಾರ" ಎಂಬ ಹೆಸರಿನೊಂದಿಗೆ ಕೊಲ್ಲೂರನ್ನು ಸುತ್ತುವರೆಯುತ್ತದೆ, ಹಾಗೂ ಸಮುದ್ರವನ್ನು ಸೇರಲೆಂದು ಮುಂದುವರಿಯುತ್ತದೆ. ಮರವಂತೆಯಲ್ಲಿ "ಮಹಾರಾಜಸ್ವಾಮಿ" (ವರಾಹಸ್ವಾಮಿ) ದೇವಸ್ಥಾನದ ಸಮೀಪ ಇದು ಸಮುದ್ರವನ್ನು ಸೇರುತ್ತದೆ. ಈ ನದಿಯು ಹರಿಯುತ್ತಾ ಹೋಗುವಾಗ ೬೪ ವಿಭಿನ್ನ ಔಷಧೀಯ ಸಸ್ಯಗಳು ಹಾಗೂ ಬೇರುಗಳ ಅಂಶ-ಧಾತುಗಳನ್ನು ಹೀರಿಕೊಳ್ಳುವುದರಿಂದ, ಈ ನದಿಯಲ್ಲಿ ಸ್ನಾನಮಾಡುವವರ ಎಲ್ಲಾ ಕಾಯಿಲೆಗಳನ್ನೂ ಇದು ವಾಸಿಮಾಡುತ್ತದೆ ಎಂಬ ನಂಬಿಕೆಯು ಇಲ್ಲಿ ಮನೆಮಾಡಿದೆ. ಆದ್ದರಿಂದ, ಈ ನದಿಯಲ್ಲಿನ ಒಂದು ಸ್ನಾನವು ಪ್ರಾಮುಖ್ಯತೆಯನ್ನು ಪಡೆದಿದೆ ಮತ್ತು ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು][೧೪]
ಸಮೀಪದ ಆಕರ್ಷಣೆಯ ಸ್ಥಳಗಳು
[ಬದಲಾಯಿಸಿ][೧೫] ಬೈಂದೂರು ಕಡಲ ತೀರ(ಉಡುಪಿ ಜಿಲ್ಲೆ): ೧೫ ಕಿ.ಮೀ.; ಇದು ಕಡಲ ತೀರಕ್ಕಾಗಿ ಪ್ರಸಿದ್ಧವಾಗಿದೆ. ಒತ್ತಿನಾಣೆ (ಉಡುಪಿ ಜಿಲ್ಲೆ): ೧೪ ಕಿ.ಮೀ.; ಇಲ್ಲಿ ಎತ್ತರದ ನೆಲ (ಪ್ರಸ್ಥಭೂಮಿ) ಮತ್ತು ಸಮುದ್ರ ಹೆದ್ದಾರಿಯ ಸಮೀಪ ಸೇರುತ್ತವೆ. ನಗರ ಕೋಟೆ (ಶಿವಮೊಗ್ಗ ಜಿಲ್ಲೆ): ೩೦ ಕಿ.ಮೀ.; ಹಳೆಯ ಕೋಟೆಯನ್ನು ಪ್ರವಾಸಿಗಳು ಸಂದರ್ಶಿಸುತ್ತಾರೆ. . ಮೂಕಾಂಬಿಕಾ ಅಭಯಾರಣ್ಯ (ಉಡುಪಿ ಜಿಲ್ಲೆ): ೫ ಕಿ.ಮೀ; ಘಟ್ಟದ ರಸ್ತೆಗಳು ಮತ್ತು ಕಾಡಿನ ದೃಶ್ಯಾವಳಿಯನ್ನು ಇದು ಒಳಗೊಂಡಿದೆ. ಸಿಗಂದೂರು (ಶಿವಮೊಗ್ಗ ಜಿಲ್ಲೆ): ೩೫ ಕಿ.ಮೀ.; ಇದೊಂದು ಸುಂದರ ಹಳ್ಳಿಯಾಗಿದ್ದು, ಇಲ್ಲಿನ ಶರಾವತಿ ನದಿಯ ಹಿನ್ನೀರಿನಲ್ಲಿ ಚೌಡೇಶ್ವರಿ ದೇವಸ್ಥಾನವಿದೆ. ಮರವಂತೆ (ಉಡುಪಿ ಜಿಲ್ಲೆ): ೨೦ ಕಿ.ಮೀ. ಈ ಭಾಗದಲ್ಲಿ ಅರಬ್ಬೀ ಸಮುದ್ರ ಮತ್ತು ನದಿಯ ನಡುವೆ ಒಂದು ಹೆದ್ದಾರಿ ರಸ್ತೆಯು ಹಾದುಹೋಗುತ್ತದೆ ಹಾಗೂ ಇದು ಭಾರತದಲ್ಲಿನ ಏಕೈಕ ವೈಶಿಷ್ಟ್ಯತೆಯಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://kannada.karnataka.com/kollur/mookambika-devi-temple/
- ↑ "ಆರ್ಕೈವ್ ನಕಲು". Archived from the original on 2023-04-07. Retrieved 2023-04-07.
- ↑ https://vijaykarnataka.com/religion/temples/everything-you-must-know-about-kollur-mookambika-temple/articleshow/82402200.cms
- ↑ https://kannada.nativeplanet.com/travel-guide/kollur-mookambika-temple-history-timings-and-how-to-reach/articlecontent-pf36796-003374.html
- ↑ https://karnatakatourism.org/kn/tour-item/%E0%B2%B6%E0%B3%8D%E0%B2%B0%E0%B3%80-%E0%B2%AE%E0%B3%82%E0%B2%95%E0%B2%BE%E0%B2%82%E0%B2%AC%E0%B2%BF%E0%B2%95%E0%B2%BE-%E0%B2%A6%E0%B3%87%E0%B2%B5%E0%B2%B8%E0%B3%8D%E0%B2%A5%E0%B2%BE%E0%B2%A8/
- ↑ https://karnatakatourism.org/kn/tour-item/%E0%B2%B6%E0%B3%8D%E0%B2%B0%E0%B3%80-%E0%B2%AE%E0%B3%82%E0%B2%95%E0%B2%BE%E0%B2%82%E0%B2%AC%E0%B2%BF%E0%B2%95%E0%B2%BE-%E0%B2%A6%E0%B3%87%E0%B2%B5%E0%B2%B8%E0%B3%8D%E0%B2%A5%E0%B2%BE%E0%B2%A8/
- ↑ "ಆರ್ಕೈವ್ ನಕಲು". Archived from the original on 2023-04-07. Retrieved 2023-04-07.
- ↑ "Gandharva of songs : K.J Yesudas celebrates 70th birthday". Non Resident Kerala Associations. Retrieved 2010-05-01. [ಮಡಿದ ಕೊಂಡಿ]
- ↑ "Yesudas celebrated Birthday at Kollur". Oneindia Entertainment. 2009-01-19. Archived from the original on 2012-07-11. Retrieved 2010-05-01.
- ↑ PTI (2010-01-10). "Music legend Yesudas turns 70". The Hindu. Archived from the original on 2010-08-15. Retrieved 2010-05-01.
- ↑ "Yesudas celebrates 70th birthday in Kollur". Expressbuzz.com. 2010-01-11. Retrieved 2010-05-01.[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.udupilive.in/city-guide/arasinagundi-falls-near-udupi
- ↑ https://www.wikiwand.com/en/Souparnika_River
- ↑ ಕುಂದಾಪುರ ತಾಲ್ಲೂಕು ದರ್ಶನ. ಲೇಖಕ: ಡಾ. ಕನರಾಡಿ ವಾದಿರಾಜ ಭಟ್ಟ
- ↑ https://kannada.nativeplanet.com/travel-guide/kollur-mookambika-temple-history-timings-and-how-to-reach/articlecontent-pf36796-003374.html
This article includes a list of references, related reading or external links, but its sources remain unclear because it lacks inline citations. (November 2009) |
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಪುಸ್ತಕಗಳು
- ಭಾರತದ ದೇವಸ್ಥಾನಗಳು ಕೊಲ್ಲೂರು
- ಮೂಕಾಂಬಿಕಾ ದೇವಿ ದೇವಸ್ಥಾನ
- ಕೊಲ್ಲೂರು Archived 2011-06-29 ವೇಬ್ಯಾಕ್ ಮೆಷಿನ್ ನಲ್ಲಿ.
- ಶ್ರೀ ಮೂಕಾಂಬಿಕಾ ದೇವಸ್ಥಾನ
13°51′49.6″N 74°48′52.6″E / 13.863778°N 74.814611°E{{#coordinates:}}: cannot have more than one primary tag per page
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from October 2010
- Articles with invalid date parameter in template
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Pages with malformed coordinate tags
- Articles needing additional references from November 2009
- All articles needing additional references
- Coordinates on Wikidata
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with unsourced statements from February 2007
- Articles lacking in-text citations from November 2009
- All articles lacking in-text citations
- Commons link is locally defined
- Commons category with page title different than on Wikidata
- ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ
- ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳು
- ವಿಕಿ ಇ-ಲರ್ನಿಂಗ್ನಲ್ಲಿ ವಿಸ್ತರಿಸಿದ ಲೇಖನ