ಗಂಟಲು
ಕಶೇರುಕ ಅಂಗರಚನಾಶಾಸ್ತ್ರದಲ್ಲಿ, ಗಂಟಲು ಎಂದರೆ ಕುತ್ತಿಗೆಯ ಮುಂಭಾಗವಾಗಿದ್ದು ಕಶೇರುಖಂಡದ ಮುಂದೆ ಸ್ಥಿತವಾಗಿರುತ್ತದೆ. ಇದು ಗ್ರಸನಕೂಪ ಮತ್ತು ಗಂಟಲಗೂಡನ್ನು ಹೊಂದಿರುತ್ತದೆ. ಕಿರುನಾಲಿಗೆಯು ಇದರ ಒಂದು ಪ್ರಮುಖ ವಿಭಾಗವಾಗಿದೆ. ಕಿರುನಾಲಿಗೆಯು ಅನ್ನನಾಳ ಮತ್ತು ಶ್ವಾಸನಾಳವನ್ನು ಪ್ರತ್ಯೇಕಿಸುವ ಒಂದು ಕವಾಟ ಮತ್ತು ಆಹಾರ ಹಾಗೂ ಪಾನೀಯಗಳು ಶ್ವಾಸಕೋಶಗಳಲ್ಲಿ ಒಳಸೇರದಂತೆ ತಡೆಯುತ್ತದೆ. ಗಂಟಲು ವಿವಿಧ ರಕ್ತನಾಳಗಳು, ಗ್ರಸನಕೂಪ ಸ್ನಾಯುಗಳು, ಗಲಗ್ರಂಥಿಗಳು, ಕಿರಿನಾಲಿಗೆ, ಶ್ವಾಸನಾಳ, ಅನ್ನನಾಳ ಮತ್ತು ಧ್ವನಿ ತಂತುಗಳನ್ನು ಹೊಂದಿರುತ್ತದೆ.[೧] ಸಸ್ತನಿಗಳ ಗಂಟಲುಗಳು ಎರಡು ಮೂಳೆಗಳನ್ನು ಹೊಂದಿರುತ್ತವೆ, ಜಿಹ್ವಾಸ್ಥಿ ಮತ್ತು ಕೊರಳೆಲುಬು. ಕೆಲವೊಮ್ಮೆ "ಗಂಟಲು" ಗಳಕುಹರ ಸಂಧಿಗೆ ಸಮಾನಾರ್ಥಕವಾಗಿದೆ ಎಂದು ಭಾವಿಸಲಾಗುತ್ತದೆ.[೨]
ಇದು ಬಾಯಿ, ಕಿವಿಗಳು ಮತ್ತು ಮೂಗಿನೊಂದಿಗೆ, ಜೊತೆಗೆ ಶರೀರದ ಇತರ ಅನೇಕ ಭಾಗಗಳೊಂದಿಗೆ ಕೆಲಸಮಾಡುತ್ತದೆ. ಇದರ ಗ್ರಸನಕೂಪವು ಬಾಯಿಗೆ ಸಂಪರ್ಕ ಹೊಂದಿರುತ್ತದೆ ಮತ್ತು ಮಾತು ಹೊರಡುವುದಕ್ಕೆ, ಆಹಾರ ಹಾಗೂ ದ್ರವ ಗಂಟಲ ಮೂಲಕ ಕೆಳಗಿಳಿಯುವುದಕ್ಕೆ ಅನುಮತಿಸುತ್ತದೆ. ಇದು ಗಂಟಲಿನ ಅಗ್ರದಲ್ಲಿರುವ ಗ್ರಸನಕೂಪದ ಮೇಲ್ಭಾಗದಿಂದ ಮೂಗಿಗೆ ಕೂಡಿರುತ್ತದೆ, ಮತ್ತು ಯೂಸ್ಟೇಕಿಯನ್ ನಾಳದಿಂದ ಕಿವಿಗೆ ಕೂಡಿರುತ್ತದೆ. ಶ್ವಾಸನಾಳವು ಉಚ್ಛ್ವಾಸಮಾಡಿದ ಗಾಳಿಯನ್ನು ಶ್ವಾಸಕೋಶಗಳ ಶ್ವಾಸನಾಳಿಕೆಗಳಿಗೆ ಸಾಗಿಸುತ್ತದೆ.[೩] ಅನ್ನನಾಳವು ಗಂಟಲಿನ ಮೂಲಕ ಆಹಾರವನ್ನು ಹೊಟ್ಟೆಗೆ ಸಾಗಿಸುತ್ತದೆ. ಗಲಗ್ರಂಥಿಗಳು ಸೋಂಕು ತಡೆಯಲು ನೆರವಾಗುತ್ತವೆ ಮತ್ತು ದುಗ್ಧರಸ ಅಂಗಾಂಶಗಳಿಂದ ರಚನೆಯಾಗಿರುತ್ತವೆ. ಗಂಟಲಗೂಡು ಧ್ವನಿ ತಂತುಗಳು,[೪] (ಆಹಾರ/ದ್ರವ ಒಳಹೋಗದಂತೆ ತಡೆಯುವ) ಕಿರುನಾಲಿಗೆ, ಮತ್ತು ಗಂಟಲಿನ ಮೇಲ್ಭಾಗದ ಅತ್ಯಂತ ಕಿರಿದಾದ ವಿಭಾಗವಾದ ಒಂದು ಪ್ರದೇಶವನ್ನು ಹೊಂದಿರುತ್ತದೆ.[೫] ಗಂಟಲಗೂಡಿನಲ್ಲಿ, ಧ್ವನಿ ತಂತುಗಳು ಗಾಳಿಯ ಒತ್ತಡದ ಪ್ರಕಾರ ಕಾರ್ಯನಿರ್ವಹಿಸುವ ಎರಡು ಪದರಗಳನ್ನು ಹೊಂದಿರುತ್ತವೆ.[೬]
ಕಿವಿಗಂಟಲು ಮತ್ತು ನಡುಗಿವಿಯ ನಡುವೆ ಇರುವ ಕಿವಿಗಂಟಲುನಾಳದ ಮೂಲಕ ಗಾಳಿ ಗಂಟಲಿನಿಂದ ನಡುಗಿವಿಯನ್ನು ಸೇರಿ ಹೊರಗಿವಿ (ಕುಹರ) ಮತ್ತು ನಡುಗಿವಿಯ ನಡವೆ ಇರುವ ಕಿವಿದಮಟೆಯ ಹೊರ ಒಳಪಕ್ಕಗಳಲ್ಲಿ ಗಾಳಿಯ ಒತ್ತಡ ಸಮವಾಗಿರುವಂತೆ ಮಾಡುತ್ತದೆ.
ರಚನೆ
[ಬದಲಾಯಿಸಿ]ಗಂಟಲು ಹಿಂದುಮುಂದೆ ಚಪ್ಪಟೆಯಾಗಿದೆ. ಇದರ ಉದ್ದ 5''. ಮೂಗಿನ ಹಿಂದೆ ತಲೆಬುರುಡೆಯ ತಳದಲ್ಲಿ ಇದರ ಅಗಲ ಸುಮಾರು 2''. ಕೆಳಗೆ ಅನ್ನನಾಳವನ್ನು ಸೇರುವಲ್ಲಿ ಇದರ ಅಗಲ 1''. ಗಂಟಲಿನ ಭಿತ್ತಿ ನಾರುಮಾಂಸ ಹಾಗೂ ಸ್ನಾಯುಗಳಿಂದ ಸುತ್ತಲಿನ ಮಾಂಸವಿಶೇಷಗಳಿಗೆ ಅಂಟಿಕೊಂಡಿದೆ. ಬಾಯಿ, ಮೂಗು, ಕಿವಿಗಂಟಲುನಾಳ, ಉಸಿರುನಾಳ ಮತ್ತು ಅನ್ನನಾಳಗಳಿಗೆ ಗಂಟಲು ಅಂಟಿಕೊಂಡಿದ್ದರೂ ತಲೆಬುರುಡೆಯ ತಳ, ಕೆಳದವಡೆ ಮೂಳೆ, ನಾಲಗೆ, ಹೈಯಾಯಿಡ್ ಮೂಳೆ ಮತ್ತು ಗೋಮಾಳೆಯ ಮೃದ್ವಸ್ಥಿಗಳಿಗೆ ಹೆಚ್ಚು ಗಟ್ಟಿಯಾಗಿ ಇದು ಅಂಟಿಕೊಂಡಿದೆ. ನುಂಗುವಾಗ ಗಂಟಲು ಅಕ್ಕಪಕ್ಕದ ಮಾಂಸ ವಿಶೇಷಗಳ ಮೇಲೆ ನುಣ್ಣಗೆ ಆಡುವಂತೆ ಭಿತ್ತಿಯ ಹೊರ ನಾರುಮಾಂಸ ಪದರ ಸಡಿಲವಾಗಿದೆ.
ಗಂಟಲಿನ ಮುಖ್ಯ ಭಾಗಗಳು ಮೂರು:
- ಬಾಯ ಗಂಟಲು,
- ಮೂಗಿನ ಗಂಟಲು, ಮತ್ತು
- ಗೋಮಾಳೆಗಳುಂಟು.
ಮೂಗಿನ ಗಂಟಲಲ್ಲಿ ಆಹಾರ ಹೋಗುವುದಿಲ್ಲ. ಗಾಳಿ ಮಾತ್ರ ಓಡಾಡುತ್ತದೆ. ಮಿಕ್ಕೆರಡರ ಮೂಲಕ ಗಾಳಿ, ಆಹಾರ ಎರಡೂ ಹೋಗುತ್ತವೆ. ಈ ಭಾಗಗಳ ಕೆಲವು ಮಿತಿಗಳನ್ನು ಅಗಲ ತೆರೆದ ಬಾಯಿಯಲ್ಲಿ ಕಾಣಬಹುದು. ಬಾಯಿಗೂ ಬಾಯ ಗಂಟಲಿಗೂ ನಡುವೆ ಇರುವ ರಂಧ್ರದಲ್ಲಿ ಕೆಲವು ವಿಶೇಷಗಳನ್ನು ಗುರುತು ಹಿಡಿಯಬಹುದು. ಈ ರಂಧ್ರದ ಎರಡು ಕಡೆಗಳಲ್ಲಿ ಅಂಗುಳದ ಟಾನ್ಸಿಲ್ ಕಾಣಬರುತ್ತದೆ. ಇದು ಎರಡು ಲೋಳೆಪೊರೆ ಮಡಿಕೆಗಳ ನಡುವೆ ಉಂಟು. ಮುಂದಿರುವ ಮಡಿಕೆ ನಾಲಗೆ ಅಂಗುಳದ ಮಡಿಕೆ. ಹಿಂದಿರುವುದು ಗಂಟಲು ಅಂಗುಳದ ಮಡಿಕೆ. ನಾಲಗೆಯ ಮುಂದಿನ 2/3 ಭಾಗಗಳು ಮತ್ತು ಬಾಯಿ ಹಿಂದಿನ 1/3 ಭಾಗ ಸೇರುವ ಸಂಧಿಯೂ, ನಾಲಗೆ ಅಂಗುಳದ ಮಡಿಕೆಗಳೂ ಬಾಯಿ ಮತ್ತು ಬಾಯಿ ಗಂಟಲಿನ ನಡುವೆ ಉಂಟು. ಮೃದು ಅಂಗುಳದ ಹಿಂದಿನ ಅಂಚಿನ ಮಧ್ಯದಲ್ಲಿ ಕಿರುನಾಲಗೆ ಕಾಣಿಸುತ್ತದೆ. ನಾಲಗೆಯ ಬುಡ ಉಬ್ಬಿರುವುದರಿಂದ ಇದರ ಹಿಂದಿರುವ ಬಾಯ ಗಂಟಲಿನ ಕೆಳಭಾಗ ಮತ್ತು ಗೋಮಾಳೆಗಂಟಲು ಕಾಣುವುದಿಲ್ಲ. ಕಾಣದಿರುವ ಈ ಭಾಗದಲ್ಲೇ ಬಾಯ ಗಂಟಲಿಗೂ ಗೋಮಾಳೆಗಂಟಲಿಗೂ ನಡುವೆ ದಿಕ್ಕು ತಿರುಗಿಸುವ ಹೆಡೆಯಂತಿರುವ ಎಪಿಗ್ಲಾಟಿಸ್ ಉಂಟು.
ಗಂಟಲುಭಿತ್ತಿಯ ಮುಖ್ಯಪದರುಗಳು ಒಳಗಿಂದ ಹೊರಕ್ಕೆ ಈ ರೀತಿ ಇವೆ:
- ಕಣಗಳ ಪೊರೆ ಮತ್ತು ನಾರುಮಾಂಸ ಪೊರೆಯಿಂದಾದ ಲೋಳೆಪೊರೆ. ಇದರ ಹೊರಪದರ ಮೇಲೆ ಕೆಳಗೆ ಗಟ್ಟಿಯಾಗಿ ಅಂಟಿಕೊಂಡು ಗಂಟಲಿಗೆ ಆಧಾರವಾಗಿದೆ.
- ಸ್ನಾಯುಪದರ.
- ನಾರುಮಾಂಸ ಪದರ.
ಗಂಟಲಸ್ನಾಯು ಪದರ ಇಚ್ಛೆಯ ಹತೋಟಿಯಲ್ಲಿದೆ. ನುಂಗುವ ಕಾರ್ಯದಲ್ಲಿ ಇದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಲೋಳೆಪೊರೆಯಲ್ಲಿ ನುಂಗುವ ಕಾರ್ಯದಲ್ಲಿ ಇದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಲೋಳೆಪೊರೆಯಲ್ಲಿ ಹಲವು ಸಣ್ಣ ಜೊಲ್ಲು ಗ್ರಂಥಿಗಳಿವೆ.
ಟಾನ್ಸಿಲುಗಳ ಸ್ಥಾನ ಗಂಟಲು ಅಂಗುಳ ಟಾನ್ಸಿಲುಗಳ ಮೇಲೆ ಹೇಳಿದವು. ಇವಲ್ಲದೆ ಕಿವಿಗಂಟಲುನಾಳದ ರಂಧ್ರದ ಹತ್ತಿರ ಒಂದು ಟಾನ್ಸಿಲ್ ಉಂಟು. ಮೂಗಿನ ಗಂಟಲಮಾಡಿನಲ್ಲಿ ಗಂಟಲ ಟಾನ್ಸಿಲ್ ಉಂಟು. ಹಲವು ಮಕ್ಕಳಲ್ಲಿ ಇದು ಊದಿಕೊಂಡು ಉಸಿರಾಡಲು ಕಷ್ಟ ಕೊಡುತ್ತದೆ. ನಾಲಗೆಯ ಹಿಂದಿನ 1/3 ಭಾಗದಲ್ಲಿ ಇರುವ ನಾಲಗೆ ಟಾನ್ಸಿಲ್ ಬಾಯಗಂಟಲಲ್ಲಿದೆ. ಈ ಟಾನ್ಸಿಲುಗಳಲ್ಲಿ ಲೋಳೆ ಪೊರೆಯಲ್ಲಿ ಹುದುಗಿರುವ ದುಗ್ಧಮಾಂಸವಿಶೇಷಗಳಿವೆ. ಇವುಗಳಲ್ಲಿ ಹೆಚ್ಚು ಭಾಗ ಬಿಳಿರಕ್ತ ಕಣಗಳಲ್ಲಿ ಒಂದು ಬಗೆಯಾದ ಸಣ್ಣ ದುಗ್ಧಕಣಗಳಿಂದಾದುದು. ಸಾಧಾರಣವಾಗಿ ಈ ಮಾಂಸವಿಶೇಷಗಳು ಪ್ರಾಯ ಮೀರುತ್ತಿರುವಂತೆ ಕ್ಷೀಣಗೊಳ್ಳುತ್ತವೆ.
ಹೋಲಿಕೆ ಅಂಗರಚನೆ
[ಬದಲಾಯಿಸಿ]ಸ್ಥೂಲವಾಗಿ ಹೇಳುವುದಾದರೆ ಬಾಯಿಯ ಅನಂತರ ಇರುವ ಆಹಾರನಾಳದ ಭಾಗವೇ ಗಂಟಲು.
ಅಕಶೇರುಕಗಳು
[ಬದಲಾಯಿಸಿ]ಅಕಶೇರುಕಗಳು ತಮ್ಮ ರಚನೆಯಲ್ಲಿ ವಿವಿಧ ಮಟ್ಟಗಳನ್ನು ಮುಟ್ಟಿವೆ. ಸರಳ ರಚನೆಯ ಪ್ರಾಣಿಗಳಲ್ಲಿ ಜಟಿಲ ರಚನೆಯ ಪ್ರಾಣಿಗಳಲ್ಲಿರುವ ಆಹಾರನಾಳಕ್ಕೆ ಸಮವಾದ ಆಹಾರನಾಳವಿಲ್ಲದಿರುವುದರಿಂದ ಅಂಗಗಳ ರಚನೆಯೂ ಸರಳವಾಗಿದ್ದು ಗಂಟಲೇ ಇರುವುದಿಲ್ಲ. ಆಹಾರನಾಳವಿರುವ ಕೆಲವು ಅಕಶೇರುಕಗಳಲ್ಲಿ ಬಾಯಿ ಮತ್ತು ಜಠರಕೋಶದ ನಡುವೆ ಗಂಟಲಿಲ್ಲ. ಗಂಟಲಿರುವ ಅಕಶೇರುಕಗಳಲ್ಲಿ ಗಂಟಲಿನ ರಚನೆ ಮತ್ತು ಕ್ರಿಯೆಗಳಲ್ಲಿ ವೈವಿಧ್ಯ ಉಂಟು. ಉದಾಹರಣೆಗಳು:
- ಜಿಗಣೆಗಳಲ್ಲಿನ ಗಂಟಲಿನ ಭಿತ್ತಿಯಲ್ಲಿ ಬಲವಾದ ಸ್ನಾಯು ಉಂಟು. ಇದು ಜಿಗಣೆಗೆ ತಾನು ಕಡಿದ ಪ್ರಾಣಿಯ ರಕ್ತವನ್ನು ಹೀರಲು ಸಹಾಯಕಾರಿ.
- ಕೆಲವು ಸಮುದ್ರಹುಳುಗಳಲ್ಲಿ (sea-worms) ಬಾಯಿ ಮತ್ತು ಗಂಟಲಿನ ಭಿತ್ತಿಗಳು ಆಚೆಗೆ ಒಳಹೊರಮುಖವಾಗಿ ಮಡಿಚಿಕೊಂಡು ಆಹಾರವನ್ನು ಕಬಳಿಸಲು ಚಾಚುವಂತಿವೆ. ಕಬಳಿಸುವುದಕ್ಕೆ ಸಹಾಯ ಮಾಡಲು ಗಂಟಲಿನ ಒಳಮೈ ಮೇಲೆ ಗುಳ್ಳೆಗಳು ಅಥವಾ ಕೊಂಬಿನ ಹಲ್ಲುಗಳಿರಬಹುದು.
ಅಕಶೇರುಕಗಳ ಗಂಟಲು ಕಶೇರುಕಗಳ ಗಂಟಲಿಗೆ ನಿಜವಾಗಿ ಸರಿಸಮವಲ್ಲ. ಅವುಗಳ ಹೋಲಿಕೆ ಆಹಾರನಾಳಗಳಲ್ಲಿರುವ ಸ್ಥಾನಗಳಿಂದ ಮಾತ್ರ. ಹುಳುಗಳ ರೆಕ್ಕೆಗಳು ಹಕ್ಕಿಗಳ ರೆಕ್ಕೆಗಳಂತೆ ಹಾರಲು ಉಪಯೋಗವಾದರೂ ಅವುಗಳ ರಚನೆಯಲ್ಲಿ ವ್ಯತ್ಯಾಸ ಇರುವಂತೆ ಹುಳುಗಳ ರೆಕ್ಕೆಗಳಲ್ಲಿ ಮಾಂಸಮೂಳೆಗಳಿಲ್ಲ. ಬೆನ್ನುಮೂಳೆಯಿರುವ ಮತ್ತು ಬೆನ್ನು ಹುರಿ (ನೋಟೊಕಾರ್ಡ್) ಮಾತ್ರ ಇರುವ ಪ್ರಾಣಿಗಳಲ್ಲೆಲ್ಲ ಗಂಟಲಿನ ಉತ್ಪತ್ತಿ ಮತ್ತು ರಚನೆಗಳು ಒಂದೇ ರೀತಿಯವಾಗಿರುವುದರಿಂದ ಇವುಗಳ ಗಂಟಲುಗಳು ಸರಿಸಮ.
ಕಶೇರುಕಗಳು
[ಬದಲಾಯಿಸಿ]ಕಶೇರುಕಗಳ ವಿವಿಧ ವರ್ಗಗಳಲ್ಲಿ ಗಂಟಲಿನ ರಚನೆ ವಿವಿಧವಾಗಿದೆ. ಗಾಳಿಯಲ್ಲಿ ಉಸಿರಾಡುವ, ಅಂದರೆ ಪುಪ್ಪುಸಗಳಿರುವ ಪ್ರಾಣಿಗಳಲ್ಲಿ (ಸಸ್ತನಿ, ಹಕ್ಕಿ, ಸರೀಸೃಪ ಮತ್ತು ಕಪ್ಪೆಯಂಥ ಹಲವು ಸ್ಥಳಜಲಚರ) ಗಂಟಲಿನ ರಚನೆ ಮನುಷ್ಯನ ಗಂಟಲ ರಚನೆಯಂತೆಯೇ ಸರಿಸುಮಾರಾಗಿ ಇದೆ. ಕಿವಿರುಗಳಿಂದ ನೀರಿನಲ್ಲಿ ಉಸಿರಾಡುವ ಪ್ರಾಣಿಗಳ (ಮೀನು) ಗಂಟಲಿನ ರಚನೆ ಬೆನ್ನುಹುರಿ ಪ್ರಾಣಿಗಳ ಮೂಲರಚನೆಯಂತಿದೆ. ಗಂಟಲಿನಲ್ಲಿ ಕಿವಿರುಗಳಿರುವುದು ಆದಿಮ ಸ್ಥಿತಿ. ಮೀನಿನಲ್ಲಿ ಮತ್ತು ಕೆಲವು ಬಾಲವಿರುವ ಸ್ಥಳಜಲಚರಗಳಲ್ಲಿ ಜೀವನದುದ್ದಕ್ಕೂ ಕಿವಿರುಗಳಿರುತ್ತವೆ. ಸ್ಥಳ ಜಲಚರಗಳಲ್ಲಿ ಜೀವನದುದ್ದಕ್ಕೂ ಕಿವಿರುಗಳಿರುತ್ತವೆ. ಸ್ಥಳ ಜಲಚರಗಳ ಮರಿಗಳು, ಪ್ರೌಢಾವಸ್ಥೆಯಲ್ಲಿರುವ ಸೆಕ್ಚ್ಯೂರಸ್ ಇತ್ಯಾದಿ ಪ್ರಾಣಿಗಳಲ್ಲಿ ಕಿವಿರುಗಳು ಕುಚ್ಚುಗಳಂತಿರುವ ಹೊರ ಅವಯವಗಳು. ಮೀನುಗಳಲ್ಲಿ ಸರ್ವೇಸಾಮಾನ್ಯವಾಗಿ ಕಿವಿರುಗಳು ಗಂಟಲಭಿತ್ತಿಯಲ್ಲೇ ಇರುವ ಒಳಅಂಗಗಳು. ಉದಾಹರಣೆಗೆ ಶಾರ್ಕ್ ಮೀನಿನ ಕತ್ತಿನ ಭಾಗದ ಇಕ್ಕೆಲಗಳಲ್ಲಿ ಸಾಧಾರಣವಾಗಿ 5 ಕಿವಿರು ಬಿರುಕುಗಳಿವೆ; ಇವಲ್ಲದೆ ಮುಂದುಗಡೆ ಸ್ಪೈರಕಲ್ ಎಂಬ ರಂಧ್ರವಿದೆ. ಬಿರುಕುಗಳು ಗಂಟಲಿಗೂ, ಆಚೆಯ ನೀರಿಗೂ ನಡುವೆ ಇರುವ ಮಾರ್ಗಗಳು. ಈ ಬಿರುಕುಗಳಲ್ಲಿರುವ ಕಿವಿರುಗಳಿಗೆ ನೀರಿನ ಸ್ನಾನವಾಗುತ್ತಿದ್ದಂತೆ ಅವು ನೀರಿನಲ್ಲಿ ಕರಗಿರುವ ಆಕ್ಸಿಜನ್ನನ್ನು ಹೀರುತ್ತವೆ. ಮೂಳೆ ಮೀನುಗಳಲ್ಲಿ ಬಲ ಎಡ ಕಿವಿರುಗಳ ಮುಚ್ಚಳಗಳಿವೆ. ಇದರಿಂದ ಆಚೆ ಕಾಣುವಂತೆ ಒಂದೇ ಬಿರುಕಿದೆ. ಮೇಲಿನ ಎಲ್ಲ ಉದಾಹರಣೆಗಳಲ್ಲಿಯೂ ಕಿವಿರುಗಳು ಉಸಿರಾಟದ ಅಂಗಗಳು; ಅವುಗಳಲ್ಲಿರುವ ಸೂಕ್ಷ್ಮ ರಕ್ತನಾಳಗಳ ಕುಚ್ಚುಗಳಲ್ಲಿರುವ ಇಂಗಾಲದ ಡೈ ಆಕ್ಸೈಡ್ ನೀರನ್ನು ಸೇರಿ ಆಕ್ಸಿಜನ್ ರಕ್ತವನ್ನು ಸೇರುತ್ತದೆ. ಈ ಕ್ರಿಯೆ ಪುಪ್ಪುಸಗಳಲ್ಲಿ ಗಾಳಿಗೂ ರಕ್ತಕ್ಕೂ ನಡುವೆ ನಡೆಯುವ ಅನಿಲ ವಿನಿಮಯದಂತಿದೆ. ಗಾಳಿಯಲ್ಲಿ ಉಸಿರಾಡುವ ಬೆನ್ನುಮೂಳೆ ಪ್ರಾಣಿಗಳ ಭ್ರೂಣಾವಸ್ಥೆಯಲ್ಲಿ ಮೀನಿನಲ್ಲಿರುವಂತೆ ಕಿವಿರುಗಳಿರುವ ಗಂಟಲಿನ ಆದಿರೂಪ ಕಾಣಿಸಿಕೊಳ್ಳುತ್ತದೆ. ಆದರೆ ಕಿವಿರುಗಳು ಬೆಳೆಯುವುದಿಲ್ಲ. ಬೆಳವಣಿಗೆಯ ಹಲವು ಘಟ್ಟಗಳು ಕಾಣಿಸಿಕೊಳ್ಳುವುದಿಲ್ಲ. ಉದಾಹರಣೆಗೆ ಕಿವಿರು ಬಿರುಕುಗಳಾಗುವುದಿಲ್ಲ. ಮನುಷ್ಯನಲ್ಲಿ ಅಪರೂಪ ವಿಚಿತ್ರವಾಗಿ ಒಂದು ಹೆಚ್ಚು ಕಿವಿರು ಬಿರುಕುಗಳು ರೂಪಗೊಳ್ಳಬಹುದು. ಇವು ಗಂಟಲಿನೊಳಕ್ಕೆ ತೆರೆಯಬಹುದು ಅಥವಾ ತರೆಯದಿರಬಹುದು.
ಸಸ್ತನಿಗಳಲ್ಲಿ ಬಾಯಿ ಮೂಗುಗಳ ನಡುವೆ ಅಂಗುಳವಿರುವುದರಿಂದ ಅಗಿಯುವ ಕಾರ್ಯ ಸಾಧ್ಯವಿದೆ. ಇತರ ಕಶೇರುಕಗಳಲ್ಲಿ ಅಂಗುಳವಿಲ್ಲದೆ ಮೂಗು ಬಾಯಿ ಒಂದೇ ಆಗಿರುವುದರಿಂದ ಅಗಿಯುವ ಸಾಧ್ಯತೆಯಿಲ್ಲ. ಉದಾಹರಣಗೆ ಹಾವು, ಹಕ್ಕಿಗಳು ಆಹಾರವನ್ನು ಅಗಿಯುವಾಗ ಉಸಿರಾಡಬಲ್ಲವು; ನುಂಗುವಾಗ ಮೃದು ಅಂಗುಳ ಮೂಗಿನ ಗಂಟಲನ್ನು ಬಾಯಿ ಗಂಟಲಿಂದ ಬೇರ್ಪಡಿಸುವುದರಿಂದ ಆಹಾರ ಮೂಗಿನೊಳಕ್ಕೆ ನುಗ್ಗುವುದಿಲ್ಲ.
ಉಲ್ಲೇಖಗಳು
[ಬದಲಾಯಿಸಿ]- ↑ "Throat anatomy". Medic8. Retrieved 7 August 2015.
- ↑ "throat" at Dorland's Medical Dictionary
- ↑ "Throat anatomy — throat parts". Healthhype. Retrieved 7 August 2015.
- ↑ "Neck anatomy". Healthline. Retrieved 7 August 2015.
- ↑ "Throat anatomy and physiology". Children's Hospital of Philadelphia. Retrieved 7 August 2015.
- ↑ "Vocal cords". Medic8. Retrieved 7 August 2015.