ವಿಷಯಕ್ಕೆ ಹೋಗು

ಕಣ್ವ ಜಲಾಶಯ

Coordinates: 12°43′45.36″N 77°11′53.45″E / 12.7292667°N 77.1981806°E / 12.7292667; 77.1981806
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಣ್ವ ಜಲಾಶಯ
ಸ್ಥಳರಾಮನಗರ, ಕರ್ನಾಟಕ
ನಿರ್ದೇಶಾಂಕಗಳು12°43′45.36″N 77°11′53.45″E / 12.7292667°N 77.1981806°E / 12.7292667; 77.1981806
ಮಾದರಿreservoir
ಪ್ರಾಥಮಿಕ ಒಳಹರಿವುಕಣ್ವ
ಪ್ರಾಥಮಿಕ ಹೊರಹರಿವುಗಳುಕಣ್ವ
ಜಲಾನಯನ ಪ್ರದೇಶ ದೇಶಗಳುಭಾರತ

ಕಣ್ವ ಜಲಾಶಯ ರಾಮನಗರ ಜಿಲ್ಲೆಯಚನ್ನಪಟ್ಟಣ ತಾಲೂಕಿನ ಕಣ್ವ ಗ್ರಾಮದ ಕಣ್ವ ಜಲಾಶಯ. ರಾಮನಗರದಿಂದ ಮುಂದೆ ಮೈಸೂರು ಹೆದ್ದಾರಿ ಹಿಡಿದು ಮುಂದೆ ೧೦ ಕೀ ಮೀ ಹೋದರೆ ಕಣ್ವ ಜಲಾಶಯ ಇದೆ. ೫ ಸ್ವಯಂ ಚಾಲಿತ ನೀರುಬಾಗಿಲುಗಳೊಂದಿಗೆ ಕ್ರಿ.ಶ.೧೯೪೬ನೆಯ ವರ್ಷದಲ್ಲಿ ಕಟ್ಟಲಾಗಿದೆ.ಇದರ ಉತ್ತರ ಅಕ್ಷಾಂಶ 120 47' ಮತ್ತು ಪುರ್ವ ರೇಖಾಂಶ 770 12'. ಬೆಂಗಳೂರಿನಿಂದ ಈ ಜಲಾಶಯದ ದೂರ 58 ಕಿಮೀಗಳು. [] ಕಣ್ವ ನದಿ ಮೈಸೂರು ಸೀಮೆಯ ಬೆಂಗಳೂರು ಜಿಲ್ಲೆಯ ಮಾಗಡಿ ಗ್ರಾಮಕ್ಕೆ ಸಮೀಪದಲ್ಲಿ ಹುಟ್ಟಿ ಮಾಗಡಿ, ರಾಮನಗರ, ಚನ್ನಪಟ್ಣ ಮತ್ತು ಮಳವಳ್ಳಿ ತಾಲ್ಲೂಕುಗಳಲ್ಲಿ ಪ್ರವಹಿಸಿ ಅಂತಿಮವಾಗಿ ಕಾವೇರಿ ನದಿಯ ಉಪನದಿಯಾದ ಶಿಂಷಾ ನದಿಯೊಡನೆ ಸಂಗಮವಾಗುತ್ತದೆ.

ಜಲಾಶಯ

[ಬದಲಾಯಿಸಿ]

ಕಣ್ವ ಜಲಾಶಯದ ಯೋಜನೆಯ ಕಾಮಗಾರಿಗಳು 1940ನೆಯ ಇಸವಿಯಲ್ಲಿ ಪ್ರಾರಂಭವಾಗಿ 1946ರಲ್ಲಿ ಮುಕ್ತಾಯವಾದುವು. ನೀರಾವರಿ ಇದರ ಪ್ರಧಾನ ಉದ್ದೇಶ. ಕಟ್ಟೆಯ ಉದ್ದ 1,422 ಮೀ; ಅತ್ಯಂತ ಆಳವಾದ ಜಾಗದಲ್ಲಿ ಅದರ ಎತ್ತರ 17.98 ಮೀ ಜಲಾಶಯದ ವಿಸ್ತೀರ್ಣ (ಕೋಡಿ ಮಟ್ಟದಲ್ಲಿ) 1,190 ಎಕರೆ (4,815.6 ಚಕಿಮೀ). ಭೂಮಟ್ಟದಿಂದ ಕೋಡಿ ಮಟ್ಟದವರೆಗೆ ತುಂಬುವ ಜಲದ ಘನಗಾತ್ರ 3,902 ಯೂನಿಟ್ಟುಗಳು (ಯೂನಿಟ್ಟು ಎಂದರೆ ಸು. 2 1/2 ಲಕ್ಷ ಘನ ಅಡಿಗಳು). ಇದರಲ್ಲಿ ಸು. 400 ಯೂನಿಟ್ಟುಗಳಷ್ಟು ಜಲಭಾಗ ತೂಬಿನ ಮಟ್ಟದಿಂದ ಕೆಳಗೆ ಉಳಿಯುವುದರಿಂದ ನೀರಾವರಿಗೆ ಅದರ ಉಪಯೋಗವಿಲ್ಲ. ಅಂದರೆ ಜಲಾಶಯದ ನಿವ್ವಳ ಉಪಯುಕ್ತ ಜಲಭಾಗ ಸು. 3,502 ಯೂನಿಟ್ಟುಗಳಷ್ಟಾಯಿತು.

ಜಲಾಯಾನ ಪ್ರದೇಶ

[ಬದಲಾಯಿಸಿ]

ಕಣ್ವ ಜಲಾಶಯದ ಜಲಾನಯನ ಪ್ರದೇಶ ವಿಸ್ತೀರ್ಣ 133 ಚ.ಕಿಮೀಗಳು. ಅದು ಒಂದು ವರ್ಷದಲ್ಲಿ ಒದಗಿಸುವ ನೀರಿನ ಸರಾಸರಿ 3,585 ಯೂನಿಟ್ಟುಗಳು. ಜಲಾಶಯ ಮತ್ತು ಅದರ ಮೇಲ್ಭಾಗದ ಕಣಿವೆಯಲ್ಲಿ ಒಂದು ವರ್ಷದ ಅವಧಿಯಲ್ಲಿ ಬೀಳುವ ಸರಾಸರಿ 32" ಮಳೆ ನೀರು ಇದಕ್ಕೆ ಆಧಾರ ಜಲಾಶಯ ಕಟ್ಟೆಯ ಅಡ್ಡಕೊಯ್ತ ವಿಷಮ ಸಮಾನಾಂತರ ಚತುರ್ಭುಜ (ಟ್ರ್ಯಾಪೆಜಾಯ್ಡಲ್) ಆಕಾರದಲ್ಲಿದೆ. ಏರಿಯ ಅಡ್ಡಕೊಯ್ತ ಪಕ್ಕದ ಚೌಕಟ್ಟಿನಲ್ಲಿದೆ. ನೀರು ತಾಕುವ ಕಡೆ ಏರಿಯ ಮೇಲುನದಿ ಭಾಗದ ಇಳಿಜಾರನ್ನು ದವಡೆ ಕಲ್ಲು (ರಿವೆಟ್ಮೆಂಟ್) ಗಳಿಂದ ಬಿಗಿದು ನೀರಲೆಗಳ ರಭಸದ ಹೊಡೆತ ಏರಿಯನ್ನು ಶಿಥಿಲಗೊಳಿಸದಂತೆ ರಕ್ಷಿಸಲಾಗಿದೆ. ಏರಿಯ ಮಧ್ಯಭಾಗದಲ್ಲಿ ಸು. 244 ಮೀ ಪರ್ಯಂತ ಕಲ್ಲುಗುಂಡುಗಳಿಂದ ತುಂಬಿದ ಗುಪ್ತ ಚರಂಡಿಗಳನ್ನು ಸಮಾನಾಂತರವಾಗಿ ರಚಿಸಿ ಏರಿಯ ಒಳಗಿನ ನೀರನ್ನು ಹೊರತೆಗೆಯಲು ಅನುಕೂಲ ಮಾಡಿದ್ದಾರೆ. ಇದರಿಂದಾಗಿ ಏರಿಯಲ್ಲಿ ಕಾರು ನೀರಿನ ಪ್ರಭಾವದಿಂದ ಒಡ್ಡು ಬೀಳುವ ಪ್ರಮೇಯ ಬಲುಮಟ್ಟಿಗೆ ಕಡಿಮೆಯಾಗಿದೆ. ಪ್ರವಾಹ ಕಾಲದಲ್ಲಿ ನದಿಯಿಂದ ಬಂದು ಸೇರುವ ಹೆಚ್ಚು ನೀರನ್ನು ಜಲಾಶಯದಿಂದ ಕ್ಷಿಪ್ರವಾಗಿ ಹೊರತೆಗೆಯಲು ಎಡತುದಿಯಲ್ಲಿ ಇಳಿಗೊಳವೆಗಳನ್ನೊಳಗೊಂಡ ಕೋಡಿಯನ್ನು ರಚಿಸಲಾಗಿದೆ. ವಾಯುಮಂಡಲದ ಒತ್ತಡದ ಆಧಾರದ ಮೇಲೆ ನಡೆಯುವ ಈ ಇಳಿಗೊಳವೆಗಳು ಅಷ್ಟೇ ಬಾಯಗಲವಿರುವ ಸಾಧಾರಣ ಆಯಾಕಾರದ ಕೋಡಿಗಿಂತ ಹೆಚ್ಚು ರಭಸದಿಂದ ನೀರನ್ನು ಹೊರತೆಗೆಯುತ್ತವೆ. ಈ ಜಲಾಶಯದ ಕೋಡಿಯಲ್ಲಿ ಅಳವಡಿಸಿರುವ ಇಳಿಗೊಳವೆಗಳು ಎರಡು ಬಗೆಯವು. ಮೊದಲನೆಯವು ಹೆಡೆಯಾಕಾರದವು (ಹುಡ್ ಸೈಫನ್ಸ್‌). ಎರಡನೆಯವು ಶಂಖ ತಿರುಪಿನಾಕಾರದವು (ವಲ್ಯೂಟ್ ಸೈಫನ್ಸ್‌). ಜಲಾಶಯದಲ್ಲಿ ಮೊದಲನೆಯ ಮಾದರಿಯ ಐದು ಇಳಿಗೊಳವೆಗಳಿವೆ. ಸು. 2-5 ಮೀ ಗಳ ಈ ಕೊಳವೆಗಳು ನೀರೆಳೆಯುವ ಪ್ರಮುಖ ಕೊಳವೆಗಳಾಗಿ ಕೆಲಸ ಮಾಡುತ್ತವೆ. ಎರಡನೆಯ ತರಹ ಎಂದರೆ ಶಂಖ ತಿರುಪಿನ ಕೊಳವೆಗಳು ಎರಡು ಮಾತ್ರ ಇವೆ. ಅವು ಕೇವಲ ಸಹಾಯಕ ಕೊಳವೆಗಳಾಗಿ (ಎಂದರೆ ಮೊದಲಿನವನ್ನು ಕೆಲಸದಲ್ಲಿ ತೊಡಗಿಸಲು ಅನುವಾಗಿ) ವರ್ತಿಸುತ್ತವೆ. ಈ ಜಲಾಶಯದ ಕಟ್ಟೆಯಲ್ಲಿ ಪ್ರತ್ಯೇಕವಾಗಿ 180’ ಅಗಲದ ಸಾಧಾರಣ ಕೋಡಿಯೂ ಇದೆ. ಇಳಿಗೊಳವೆಗಳೇನಾದರೂ ಕೆಲಸ ಮಾಡದೆ ನಿಂತಲ್ಲಿ ಇದು ನೆರವಿಗೆ ಬರುತ್ತದೆ. ಜಲಾಶಯದಿಂದ ನೀರಾವರಿಗಾಗಿ ಜಲವನ್ನು ಹೊರದೂಡಿಸುವ ಸಲುವಾಗಿ ಕಟ್ಟೆಯ ಎಡ ತುದಿಯಲ್ಲಿ ದೊಡ್ಡದೊಂದು ತೂಬನ್ನೂ ಎಡಗಡೆ ಸಣ್ಣದೊಂದು ತೂಬನ್ನೂ ಅಳವಡಿಸಿ ಈ ಎರಡು ತೂಬುಗಳಿಂದಲೂ ಪ್ರತಿಕ್ಷಣದಲ್ಲಿಯೂ 30.1752 ಘನ ಮೀ ಗಳಷ್ಟು ನೀರನ್ನು ರವಾನಿಸುವ ಏರ್ಪಾಡು ಮಾಡಲಾಗಿದೆ. ಪ್ರಮುಖ ನಾಲೆಗಳು ಮತ್ತು ಇತರ ಶಾಖಾ ನಾಲೆಗಳೂ ಸೇರಿ 40.23 ಕಿಮೀ ದೂರ ನೀರನ್ನು ಸಾಗಿಸುತ್ತವೆ. ಈ ಎಲ್ಲ ನಾಲೆಗಳೂ ಒಟ್ಟುಗೂಡಿ 5,000 ಎಕರೆಗಳಷ್ಟು (2,709 ಹೆಕ್ಟೇರುಗಳು) ಜಮೀನಿಗೆ ನೀರು ಹಾಕಿಸಬಲ್ಲವು. ಕಣ್ವ ಜಲಾಶಯದ ಯೋಜನೆಗೆ ಆದ ಒಟ್ಟು ಖರ್ಚು 40 ಲಕ್ಷ ರೂ. ಇದರ ನೀರಾವರಿ ಕ್ರಮದಿಂದ 30 ಗ್ರಾಮಗಳಿಗೆ ಪ್ರಯೋಜನವುಂಟಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಕಣ್ವ ಜಲಾಶಯ". ಜಿಲ್ಲಾ ಆಡಳಿತ, ರಾಮನಗರ ಜಿಲ್ಲೆ. Retrieved 25 ಮಾರ್ಚ್ 2019.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: