ವಿಷಯಕ್ಕೆ ಹೋಗು

ಹಾರೋಬೆಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾರೋಬೆಲೆ ಎಂಬುದು ಕನಕಪುರ ತಾಲೂಕಿನ ಒಂದು ಗ್ರಾಮ. ಕನಕಪುರದಿಂದ ಸುಮಾರು ೨೦ ಕಿಲೋಮೀಟರು ದೂರದಲ್ಲಿ ಅರ್ಕಾವತಿನದಿ ದಂಡೆಯ ಮೇಲಿರುವ ಈ ಊರನ್ನು ಕೃಷ್ಣಯ್ಯನದೊಡ್ಡಿ ಮಾರ್ಗವಾಗಿ ಅಥವಾ ಸಾತನೂರು ಆಲಹಳ್ಳಿ ಮಾರ್ಗವಾಗಿ ತಲುಪಬಹುದು. ಹಾರೋಬೆಲೆಯು ಒಂದು ಕ್ರೈಸ್ತಗ್ರಾಮ. ಅಂದರೆ ಈ ಊರಿನಲ್ಲಿರುವುದು ನೂರಕ್ಕೆ ನೂರು ಕ್ರೈಸ್ತಧರ್ಮೀಯರು. ಕ್ರಿಸ್ತಶಕ ೧೬೬೦ರ ಸುಮಾರಿಗೇ ಇಲ್ಲಿ ಕ್ರೈಸ್ತಧರ್ಮಪ್ರಚಾರಕರು ಕ್ಷೇತ್ರಕಾರ್ಯ ನಡೆಸಿದ್ದರಿಂದ ಇದೊಂದು ಪ್ರಾಚೀನ ಕ್ರೈಸ್ತಗ್ರಾಮವೆನ್ನಬಹುದು. ಸುಮಾರು ಇನ್ನೂರು ಮನೆಗಳ ಈ ಊರಿನಲ್ಲಿ ಒಂದು ದೊಡ್ಡ ಚರ್ಚ್ ಇದೆ, ಆರೋಗ್ಯಕೇಂದ್ರವಿದೆ, ಪ್ರೌಢಶಾಲೆಯಿದೆ, ತೆಂಗಿನತೋಟಗಳೂ ಹಸಿರಿನ ಹೊಲಗದ್ದೆಗಳೂ ಇವೆ.

ಹಾರೋಬೆಲೆಯ ಇತಿಹಾಸ

[ಬದಲಾಯಿಸಿ]
  • ಇಟಾಲಿಯನ್ ಜೆಸ್ವಿತರಾದ ಸ್ವಾಮಿ ಚಿಮಾವೊ ಮಾರ್ಟಿನ್ ಅವರು ೩೧-೧೦-೧೬೬೨ ರಲ್ಲಿ ರೋಮಿಗೆ ಕಳಿಸಿದ ವರದಿಯ ಪ್ರಕಾರ ಅವರು ಕೊಳ್ಳೇಗಾಲ ತಾಲೂಕಿನ ಮಾರ್ಟಳ್ಳಿಯಲ್ಲಿ ಕ್ಷೇತ್ರಕಾರ್ಯ ಕೈಗೊಂಡಿರುವಾಗ ಕ್ರಿಸ್ತಶಕ ೧೬೬೦ರಲ್ಲಿ ಕಾನಕಾನಹಳ್ಳಿಯಲ್ಲಿ ಧರ್ಮ ಪ್ರಚಾರ ಮಾಡಲು ಸ್ಥಳೀಯ ಉಪದೇಶಕನೊಬ್ಬನನ್ನು ಕಳಿಸಿದರಂತೆ. ಆ ಉಪದೇಶಕ ಮತ್ತು ಆ ಸ್ಥಳಗಳ ಪರಿಚಯವಿದ್ದ ಮತ್ತೊಬ್ಬ ಕ್ರೈಸ್ತನು ಎರಡು ದಿನಗಳ ಪ್ರಯಾಣ ಮಾಡಿ ಉಯ್ಯಂಬಳ್ಳಿ ಎಂಬ ಊರಿಗೆ ಬರುತ್ತಾರೆ.
  • ಅಲ್ಲಿ ಪಟ್ಟಿ (ಹಟ್ಟಿ) ಜನಾಂಗದ ಯುವಕ, ಅವನ ತಾಯಿ ಮತ್ತು ತಮ್ಮ ಮೊತ್ತಮೊದಲಿಗೆ ಕ್ರೈಸ್ತರಾಗುತ್ತಾರೆ. ಅವನ ಪ್ರೇರಣೆಯಿಂದ ಅವರ ಬಂಧು ಬಳಗದವರೆಲ್ಲ ಕ್ರೈಸ್ತ ಧರ್ಮದ ಕಡೆ ಬರುತ್ತಾರೆ. ಆ ಜನರು ಆ ಉಪದೇಶಕನನ್ನು ತಮ್ಮ ಸ್ವಂತ ಊರಾದ ಹಾರೋಬೆಲೆಗೆ ಕರೆದೊಯ್ಯುತ್ತಾರೆ. ಊರನ್ನು ಸೇರಿದಾಗ ದೇವದೂತನು ಸ್ವರ್ಗದಿಂದ ಇಳಿದು ಬಂದನೋ ಎಂಬಂತೆ ಅವನನ್ನು ಆ ಊರಿನ ಜನರೆಲ್ಲರೂ ಹಿರಿಯ ಕಿರಿಯರೆನ್ನದೆ ಸಂತೋಷದಿಂದ ಬರಮಾಡಿಕೊಂಡು ಕ್ರಿಸ್ತೋಪದೇಶವನ್ನು ಆಸಕ್ತಿಯಿಂದ ಆಲಿಸುತ್ತಾರೆ.
  • ಎರಡು ವರ್ಷಗಳ ನಂತರ ಅಂದರೆ ಕ್ರಿಸ್ತಶಕ ೧೬೬೨ ಆಗಸ್ಟ್ ೧೯ರಂದು ಪವಿತ್ರ ಪೂಜೆಯಲ್ಲಿ ಕ್ರೈಸ್ತ ದೀಕ್ಷೆ ಪಡೆದು ಹಾರೋಬೆಲೆಯ ಜನರು ಪುನೀತರಾಗುತ್ತಾರೆ. ಚಿಮಾವೊ ನಂತರ ಕ್ರಿಸ್ತಶಕ ೧೬೬೬ರಲ್ಲಿ ಸ್ವಾಮಿ ಎಮ್ಮಾನುವೆಲ್ ಕೊರೆಯಾ, ಕ್ರಿಸ್ತಶಕ ೧೬೭೬ರಲ್ಲಿ ಅಲ್ಫೋ ನ್ಸೋ ಮೆಂಡಿಸ್, ಕ್ರಿಸ್ತಶಕ ೧೬೭೯-೮೩ರಲ್ಲಿ ಮನುವೆಲ್ ರಾಯ್ಸ್, ಕ್ರಿಸ್ತಶಕ ೧೬೮೬ರಲ್ಲಿ ಮೈಕೆಲ್ ಕೊರೆಯ, ಕ್ರಿಸ್ತಶಕ ೧೬೯೧ರಲ್ಲಿ ವಿನ್ಚೆಂಸೊ ಪೌಲೊ ಮುಂತಾದ ಧರ್ಮಪ್ರಚಾರಕರು ಹಾರೊಬೆಲೆಯನ್ನು ಸಂಧಿಸುತ್ತಿದ್ದ ಬಗ್ಗೆ ದಾಖಲೆಯಿದೆ.
  • ಕ್ರಿಸ್ತಶಕ ೧೭೨೪-೨೯ರಲ್ಲಿ ದೊಡ್ಡ ಬರಗಾಲವಿತ್ತೆಂದೂ ಆ ಸಮಯದಲ್ಲಿ Magre (ಮಾಗಡಿ?) ಅರಸನು ಹಾರೋಬೆಲೆಗೆ ಮುತ್ತಿಗೆ ಹಾಕಿದ್ದನೆಂದು ಸ್ವಾಮಿ ಪೀಟರ್ ಅಲ್ಮೊನ್ ದಾಖಲಿಸಿದ್ದಾರೆ. ಯೇಸುಸಭೆಯ ಬಹಿಷ್ಕಾರ, ಬರಗಾಲ, ಲೂಟಿ, ಹಿಂಸೆಗಳಿಂದ ತತ್ತರಿಸಿದ ಹಾರೋಬೆಲೆಯು ಎಂಇಪಿ (MEP= Mission Etrangére de Paris) ಪಾದ್ರಿಗಳ ಆಗಮನಾನಂತರ ಮತ್ತೆ ಪಲ್ಲವಿಸತೊಡಗಿತು.
  • ಸ್ವಾಮಿ ಎತಿಯೇನ್ ಲೂಯಿ ಶಾರ್ಬೊನೊ ಅವರು ಹಾರೋಬೆಲೆಯನ್ನು ಪುನರುಜ್ಜೀವಿಸಿದರು. ಜೆಸ್ವಿತರ ಕಾಲದಲ್ಲಿ ಮರಿಯಾ ಜಯಂತಿ ದೇವಾಲಯ ಎಂದು ಕರೆಸಿಕೊಂಡಿದ್ದ ಈ ಊರ ಚರ್ಚು ಫ್ರೆಂಚ್ ಪಾದ್ರಿಗಳ ಕಾಲದಲ್ಲಿ ಜಪಮಾಲೆ ರಾಣಿಯ ದೇವಾಲಯ ಎನಿಸಿಕೊಂಡಿತು. ಕ್ರಿಸ್ತಶಕ ೧೮೫೯ರಲ್ಲಿ ಸ್ವಾಮಿ ಮೋನ್ತದ್ರಾ ಅವರಿಂದ ನಿರ್ಮಾಣಗೊಂಡ ಗಾರೆಯ ಚರ್ಚು ಇತ್ತೀಚೆಗೆ ಪುನರ್ ನಿರ್ಮಾಣವಾಗಿದೆ.

ಲಾಜರ್ ಸ್ವಾಮಿಯವರು

[ಬದಲಾಯಿಸಿ]
  • ಸುಮಾರು ನೂರುವರ್ಷಗಳ ಹಿಂದೆ ಹಾರೋಬೆಲೆ ಊರನ್ನು ಸುಧಾರಿಸಿ ಉನ್ನತ ಮೌಲ್ಯಗಳನ್ನು ತುಂಬಿದ ಕೀರ್ತಿ ಲಾಜರ್ ಸ್ವಾಮಿಯವರಿಗೆ ಸಲ್ಲುತ್ತದೆ. ಕ್ರಿಸ್ತಶಕ ೧೯೦೦ರಿಂದ ೧೯೨೫ರವರೆಗೆ ಇಲ್ಲಿ ಕ್ರಿಸ್ತಸೇವೆ ಮಾಡಿದ ಲಾಜರ್ ಸ್ವಾಮಿಯವರು ಊರವರ ಉನ್ನತಿಗೆ ಅಪಾರವಾಗಿ ಶ್ರಮಿಸಿದರು. ಆದ್ದರಿಂದ ಹಾರೋಬೆಲೆ ಜನರಿಗೆ ಲಾಜರ್ ಸ್ವಾಮಿಯವರು ಪ್ರಾತಃಸ್ಮರಣೀಯರಾಗಿದ್ದಾರೆ.
  • ಅವರು ಅಂದು ಪ್ರಾರಂಭಿಸಿದ ಯೇಸುಕ್ರಿಸ್ತರ ಪೂಜ್ಯಪಾಡುಗಳ ಹಾಗೂ ಪುನರುತ್ಥಾನದ ಮಹಿಮೆ ಎಂಬ ನಾಟಕವು ಇಂದಿಗೂ ಜೀವಂತವಾಗಿದ್ದು, ಪ್ರತಿವರ್ಷ ಕ್ರೈಸ್ತರ ಪವಿತ್ರವಾರದಲ್ಲಿ ಮೈದಳೆಯುತ್ತದೆ. ಜನಪದರ ಬಾಯಲ್ಲಿ ಹಾರೋಬೆಲೆ ಮೈಮೆ ಎಂದು ಕರೆಸಿಕೊಳ್ಳುವ ಈ ನಾಟಕವನ್ನು ಶುಭಶುಕ್ರವಾರ ಹಾಗೂ ಪವಿತ್ರಶನಿವಾರಗಳ ಇಡೀ ರಾತ್ರಿ ಆಡಲಾಗುತ್ತದೆ. ಈ ನಾಟಕವು ೨೦೦೫ರ ಏಪ್ರಿಲಿನಲ್ಲಿ ತನ್ನ ನೂರನೇ ಪ್ರದರ್ಶನ ಕಂಡಿತು.

ಹಾರೋಬೆಲೆ ಅಣೆಕಟ್ಟು

[ಬದಲಾಯಿಸಿ]
  • ೧೯೭೦ರ ದಶಕದಲ್ಲಿ ಕೇಂದ್ರದಲ್ಲಿ ಅಧಿಕಾರ ಹೊಂದಿದ್ದ ಜಗಜೀವನರಾಮರಿಗೆ ಸಾತನೂರಿನ ಪುಟ್ಟದಾಸ ಎಂಬುವರು ನಿಕಟವರ್ತಿಯಾಗಿದ್ದರು. ಅವರ ಪ್ರಭಾವದಿಂದ ಪ್ರವಾಹ ನಿಯಂತ್ರಣ ಯೋಜನೆಯನ್ವಯ ಹಾರೋಬೆಲೆಗೆ ಒಂದು ಜಲಾಶಯ ಮಂಜೂರಾಯಿತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ದೇವರಾಜ ಅರಸರು ೧೯೭೫ರಲ್ಲಿ ಅಣೆಕಟ್ಟಿಗೆ ಮೂಲೆಗಲ್ಲು ನೆಟ್ಟರು.
  • ಅಂದಿನಿಂದ ಸುಮಾರು ಮೂವತ್ತು ವರ್ಷಗಳ ಕಾಲ ಕುಂಟುತ್ತಾ ಸಾಗಿದ ಈ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ ೨೦ ಮೀಟರುಗಳಾದರೂ ಸನಿಹದ ಮೂರು ಹಳ್ಳಿಗಳ ಮುಳುಗಡೆಯ ಭೀತಿಯಿಂದ ೧೫ ಮೀಟರುಗಳಿಗೆ ಸೀಮಿತಗೊಳಿಸಲಾಗಿದೆ. ಎರಡೂ ದಂಡೆಗಳ ನಾಲೆಗಳಿಂದಲ್ಲದೆ ಏತದ ಮೂಲಕವೂ ಈ ನೀರನ್ನು ಗ್ರಾಮಗಳಿಗೆ ಉಣಿಸಲಾಗುತ್ತಿದೆ.