ಎತಿಯೇನ್ ಲೂಯಿ ಶಾರ್ಬೊನೊ
ಮೊದಲ ದಿನಗಳು
[ಬದಲಾಯಿಸಿ]ಎತಿಯೇನ್ ಲೂಯಿ ಶಾರ್ಬೊನೊ ಸ್ವಾಮಿಯವರ ಹೆಸರು ದಕ್ಷಿಣ ಇಂಡಿಯಾದ ಕಥೋಲಿಕ ಕ್ರೈಸ್ತ ಸಮುದಾಯದಲ್ಲಿ ಅಚ್ಚಳಿಯದ ಕುರುಹಾಗಿದೆ. ಫ್ರಾನ್ಸಿನ ವಿದೇಶೀ ಧರ್ಮಪ್ರಚಾರ ಸಂಸ್ಥೆ (Mission Etrangere de Paris) ಯ ಗುರುಗಳಾದ ಅವರು ಮೈಸೂರು ಪ್ರಾಂತ್ಯಕ್ಕೆ ಪೋಪ್ ಜಗದ್ಗುರುಗಳಿಂದ ನಿಯೋಜಿತರಾದ ಮೊದಲ ಧರ್ಮಾಧಿಕಾರಿಗಳು. ಫ್ರಾನ್ಸ್ ದೇಶದ ರೇನೆ ಧರ್ಮಪ್ರಾಂತ್ಯಕ್ಕೆ ಸೇರಿದ ಗೆರ್ಷೆ ಎಂಬ ಪುಟ್ಟ ಊರಿನಲ್ಲಿದ್ದ ಒಂದು ಒಳ್ಳೆಯ ಕ್ರೈಸ್ತ ಕುಟುಂಬದಲ್ಲಿ ೧೮೦೬ ಮಾರ್ಚ್ ೨೦ರಂದು ಶಾರ್ಬೊನೊ ಅವರು ಜನಿಸಿದರು. ಕ್ರೈಸ್ತ ವಾತಾವರಣದಲ್ಲಿಯೇ ಬೆಳೆದ ಅವರು ಗ್ಲೇಝಿಂಗ್ ಮತ್ತು ಕೊಂಬ್ರಿಯೆಗಳಲ್ಲಿ ಶಾಲಾ ಶಿಕ್ಷಣ ಪಡೆದು ಕ್ರೈಸ್ತ ಗುರುವಾಗುವ ಮಹದಾಶಯದಿಂದ ಆಂಜೆರ‍್ಸ್ ಗುರುಮಠಕ್ಕೆ ಸೇರಿದರು. ಅಲ್ಲಿ ವಿಸ್ತೃತ ಅಧ್ಯಯನದ ಬಳಿಕ ೧೮೩೦ರ ಜೂನ್ ೫ ರಂದು ಗುರುಪಟ್ಟ ಪಡೆದರು. ಗುರುಪಟ್ಟ ಪಡೆದ ಮೇಲೆ ಅವರು ಅಲ್ಲಿನ ಧರ್ಮಪ್ರಾಂತ್ಯದ ಗುರುಗಳಾಗಿ ಕೆಲಕಾಲ ಅಧ್ಯಾತ್ಮಪೋಷಣೆ ನಡೆಸಿದರು. ವಿಚಿತ್ರವೆಂದರೆ ಆಗ ಪ್ಯಾರಿಸ್ಸಿನಲ್ಲಿ ನಡೆದಿದ್ದ ರಾಜಕೀಯ ಮೇಲಾಟಗಳ ಕಾರಣ ಅಧ್ಯಾತ್ಮಕ್ಕೆ ಅಲ್ಲಿ ಸ್ಥಳವಿಲ್ಲದಾಗಿತ್ತು. ಅದರಿಂದ ಬೇಸತ್ತ ಶಾರ್ಬೊನೊ ಅವರು ತಮ್ಮ ಧರ್ಮಪ್ರಾಂತ್ಯದ ಸೇವೆಯನ್ನು ತೊರೆದು ಎಂಇಪಿ ಧರ್ಮಪ್ರಚಾರ ಸಂಸ್ಥೆಗೆ ಸೇರಿಕೊಂಡು ಆಗಸ್ಟಿನಲ್ಲಿ ಪ್ಯಾರಿಸ್ಸಿನಿಂದ ಹೊರನಡೆದರು. ಹತ್ತೊಂಬತ್ತನೇ ಶತಮಾನದ ಪ್ರಾರಂಭದ ದಿನಗಳಲ್ಲಿ ನಮ್ಮ ಇಂಡಿಯಾ ದೇಶದಲ್ಲಿ ಕ್ರೈಸ್ತಧರ್ಮವು ಇನ್ನೂ ವ್ಯವಸ್ಥಿತ ರೂಪದಲ್ಲಿ ನೆಲೆಗೊಂಡಿರಲಿಲ್ಲ. ಹದಿನೆಂಟನೇ ಶತಮಾನದಲ್ಲಿ ಇಲ್ಲಿ ಕ್ಷೇತ್ರಕಾರ್ಯ ನಡೆಸಿದ್ದ ಜೆಸ್ವಿತರು ಮಿಷನ್ ಕೇಂದ್ರಗಳನ್ನು ತೆರೆದು ಚರ್ಚುಗಳನ್ನು ಕಟ್ಟಿದ್ದರಾದರೂ ಅವರ ಸಂಸ್ಥೆಗೆ ಬಂದೊದಗಿದ ಬಹಿಷ್ಕಾರದ ಕಾರಣದಿಂದ ಎಲ್ಲ ಕೆಲಸಗಳೂ ಸ್ಥಗಿತಗೊಂಡಿದ್ದವು. ಅದರಲ್ಲೂ ಕನ್ನಡನಾಡಿನ ಪ್ರದೇಶಗಳಲ್ಲಿ ಟಿಪ್ಪುಸುಲ್ತಾನನ ಆಳ್ವಿಕೆಯಿದ್ದುದರಿಂದ ಕ್ರೈಸ್ತ ಮಿಷನರಿಗಳು ಸ್ವತಂತ್ರರಾಗಿ ತಿರುಗಾಡುವಂತಿರಲಿಲ್ಲ. ಮುಂದೆ ೧೭೯೯ರ ನಾಲ್ಕನೇ ಮೈಸೂರು ಯುದ್ಧದಲ್ಲಿ ಟಿಪ್ಪು ಮರಣಹೊಂದಿದ ಮೇಲೆ ಫ್ರೆಂಚ್ ಗುರುಗಳು ಆಗಮಿಸಿ ಸೊರಗಿದ್ದ ಧರ್ಮಸಭೆಗೆ ಜೀವ ತುಂಬಿದರು. ಅಲ್ಲಿಯವರೆಗೆ ಸ್ಥಳೀಯ ಕ್ರೈಸ್ತರು ಅಧ್ಯಾತ್ಮ ಪೋಷಣೆಯಿಂದ ವಂಚಿತರಾಗಿದ್ದರು. ಇಂಥ ಒಂದು ಸಂದರ್ಭದಲ್ಲಿ ಕ್ರೈಸ್ತರ ಆಶಾಕಿರಣವಾಗಿ ಬಂದವರು ಸ್ವಾಮಿ ಅಬ್ಬೆದ್ಯುಬುವಾ (Abbe duBois). ಅವರು ಚರ್ಚುಗಳಿಗೆ ಪುನರ್ಜೀವ ನೀಡಿದ್ದಲ್ಲದೆ ಕ್ರೈಸ್ತ ಭಕ್ತಾದಿಗಳಿಗೆ ವಿವಿಧ ರೀತಿಯ ಧಾರ್ಮಿಕ ಸಂಸ್ಕಾರಗಳನ್ನು ನೀಡಿ ಅವರೊಳಗಿನ ಕ್ರೈಸ್ತತ್ವಕ್ಕೆ ಚೇತನ ತುಂಬಿದರು. ಹೀಗೆ ಇಂಡಿಯಾ ದೇಶದಲ್ಲಿನ ಕ್ರೈಸ್ತ ಧರ್ಮದ ಪುನರುಜ್ಜೀವನದ ಕೆಲಸಕ್ಕೆ ಅಸಂಖ್ಯ ಗುರುಗಳ ಅವಶ್ಯಕತೆ ಇರುವುದನ್ನು ಫ್ರಾನ್ಸ್ ದೇಶದ ಧರ್ಮಭೀರುಗಳು ಮನಗಂಡಿದ್ದರು. ಹೀಗಿರುವಲ್ಲಿ ೧೮೩೧ರ ಏಪ್ರಿಲಿನಲ್ಲಿ ಶಾರ್ಬೊನೊ ಅವರು ಇಂಡಿಯಾ ದೇಶದ ಮಲಬಾರ್ ಮಿಷನ್ನಿನ ಪಾಂಡಿಚೇರಿಗೆ ಬಂದಿಳಿದರು. ಇಲ್ಲಿ ಕಾರ್ಯ ನಿರ್ವಹಿಸಬೇಕಾದರೆ ಇಲ್ಲಿನ ಭಾಷೆಗಳನ್ನು ಅರಿತಿರಬೇಕಲ್ಲವೇ? ಆದ್ದರಿಂದ ಕೆಲಸಕ್ಕೆ ತೊಡಗುವ ಮುನ್ನ ಅವರು ಕಾರೈಕಲ್ಲಿನಲ್ಲಿ ಕೆಲಕಾಲ ಕಳೆದು ಸ್ಥಳೀಯ ಭಾಷೆಗಳನ್ನು ಅಭ್ಯಸಿಸಿದರು. ೧೮೩೨ ಜನವರಿ ೮ರಂದು ಅವರನ್ನು ಮದರಾಸಿಗೆ ಉತ್ತರದಲ್ಲಿದ್ದ ತೆಲುಗು ಕ್ರೈಸ್ತರ ನಡುವೆ ಕೆಲಸ ಮಾಡುತ್ತಿದ್ದ ಫಾದರ್ ಬೊನಾಂ (Bonand) (ಮುಂದೆ ಈ ಬೊನಾಂ ಅವರು ಪಾಂಡಿಚೇರಿ ಬಿಷಪರಾದರು) ಅವರಿಗೆ ಸಹಾಯ ನೀಡಲು ನಿಯೋಜಿಸಲಾಯಿತು. ಹೀಗೆ ಫರಂಗಿಪುರದಲ್ಲಿ ನೆಲೆ ನಿಂತ ಅವರು ತೆಲುಗು ಕಲಿಯುವ ಜೊತೆಗೆ ಸ್ಥಳೀಯ ಜನಜೀವನದ ರೀತಿನೀತಿಗಳನ್ನೂ ಅರಿತರು. ಆ ಸಂದರ್ಭದಲ್ಲಿ ನಾಡಿನಲ್ಲಿ ಭಾರೀ ಕ್ಷಾಮ ಆವರಿಸಿ ಪರಿಹಾರ ಕಾರ್ಯದಲ್ಲಿ ಶಾರ್ಬೊನೊ ಅವರ ಪಾತ್ರ ಅತ್ಯಂತ ಅನುಕರಣೀಯವಾಗಿತ್ತೆಂದು ಅಂದಿನ ಗುಂಟೂರು ಜಿಲ್ಲಾ ಬ್ರಿಟಿಷ್ ಕಲೆಕ್ಟರ್ ಸ್ಮರಿಸಿದ್ದಾರೆ.
ಕನ್ನಡನಾಡಿನ ಸೇವೆಗೆ
[ಬದಲಾಯಿಸಿ]ಶ್ರೀರಂಗಪಟ್ಟಣವು ಅಂದಿನ ಮೈಸೂರು ಪ್ರಾಂತ್ಯದ ರಾಜಧಾನಿಯಾಗಿತ್ತು. ಶ್ರೀರಂಗಪಟ್ಟಣವನ್ನು ಸುಮಾರು ೧೬೪೮ರಲ್ಲಿ ಪ್ರವೇಶಿಸಿದ ಜೆಸ್ವಿತರು ಮಹಾರಾಜರ ಅನುಮತಿ ಪಡೆದು ಪ್ರಾಂತ್ಯದಲ್ಲಿ ಧರ್ಮಪ್ರಚಾರ ನಡೆಸಿದ್ದರು. ಗಂಜಾಮು, ಪಾಲಳ್ಳಿ, ಕಿರಂಗೂರು, ಬಸುವಾಪಟ್ಟಣ, ರಾಮಪುರ, ಚಿಕ್ಕರಸಿನಕೆರೆ, ಕಾಮನಹಳ್ಳಿ, ಸೋಮನಹಳ್ಳಿ, ಉಯ್ಯಂಬಳ್ಳಿ, ಹಾರೋಬೆಲೆ, ದಾಸರಹಳ್ಳಿ, ಮರಂದನಹಳ್ಳಿ, ಮದಗೊಂಡನಹಳ್ಳಿ, ಕೆಂಪಟ್ಟಿ, ಆನೆಕಲ್ಲು, ಬೇಗೂರು, ಬೆಂಗಳೂರು ಪೇಟೆ, ದಾಸನಪುರ, ಗಾರೇನಹಳ್ಳಿ ಮುಂತಾದ ಊರುಗಳಲ್ಲಿ ಚರ್ಚುಗಳು ಸ್ಥಾಪನೆಯಾಗಿ ಶ್ರೀರಂಗಪಟ್ಟಣ ಕೇಂದ್ರದ ಮೂಲಕ ಕಾರ್ಯ ನಿರ್ವಹಿಸುತ್ತಿದ್ದವು. ಸುಮಾರು ಹತ್ತು ಮಂದಿ ಜೆಸ್ವಿತ್ ಪಾದ್ರಿಗಳು ಹಾಗೂ ಊರೂರಿನಲ್ಲಿದ್ದ ಉಪದೇಶಿಗಳ ಕಾರ್ಯತತ್ಪರತೆಯಿಂದ ಮೈಸೂರು ಪ್ರಾಂತ್ಯದ ಕ್ರೈಸ್ತ ಸಮುದಾಯ ದೈವಕೃಪೆಯಲ್ಲಿ ನೆಮ್ಮದಿಯಿಂದಿತ್ತು. ಹೀಗಿರುವಲ್ಲಿ ಅಕಾಲದಲ್ಲಿ ಸಿಡಿಲು ಬಡಿದ ಹಾಗೆ ಪೋಪ್ ಜಗದ್ಗುರುಗಳು ಜೆಸ್ವಿತ್ ಸಂಸ್ಥೆಯನ್ನು ೧೭೭೩ರಲ್ಲಿ ವಜಾ ಮಾಡಿದರು. ಇದು ಸಾಲದೆಂಬಂತೆ ಮೊದಲೇ ಹೇಳಿದ ಹಾಗೆ ಆ ಸಮಯದಲ್ಲಿ ಆಳ್ವಿಕೆ ನಡೆಸಿದ್ದ ಟಿಪ್ಪುಸುಲ್ತಾನನು ಕ್ರೈಸ್ತರನ್ನು ಅಪನಂಬಿಕೆಯಿಂದ ಕಾಣುತ್ತಿದ್ದನಾದ್ದರಿಂದ ಪಾದ್ರಿಗಳಿಲ್ಲದೆ ಸ್ಥಳೀಯ ಕ್ರೈಸ್ತ ಸಮುದಾಯ ಸೊರಗಿತ್ತು. ೧೭೯೯ರಲ್ಲಿ ಟಿಪ್ಪು ಹತನಾಗಿ ಮೈಸೂರು ಮಹಾರಾಜರಿಗೆ ರಾಜ್ಯಭಾರವು ಕೈಬದಲಾಗಿದ್ದರೂ ಕ್ರೈಸ್ತ ಧರ್ಮಸಭೆಯು ಇನ್ನೂ ಸಾಕಷ್ಟು ಚೇತರಿಸಿಕೊಂಡಿರಲಿಲ್ಲ. ಇಂಥ ಸಂದರ್ಭದಲ್ಲಿ ಅಂದರೆ ೧೮೩೭ರ ಜನವರಿ ೨೭ರಂದು ಶಾರ್ಬೊನೊ ಅವರನ್ನು ಶ್ರೀರಂಗಪಟ್ಟಣಕ್ಕೆ ನಿಯೋಜಿಸಲಾಯಿತು. ಹೀಗೆ ಮೈಸೂರು ಸೀಮೆಗೆ ಬಂದ ಅವರು ಆಗ ಅಲ್ಲಿ ೨೫ ಕ್ರೈಸ್ತ ಹಳ್ಳಿಗಳಲ್ಲಿ ಚದುರಿಹೋಗಿದ್ದ ಸುಮಾರು ೩೫೦೦ ಕಥೋಲಿಕ ಕ್ರೈಸ್ತರಿಗೆ ಪಾಲಕರಾದರು. ಆದರೆ ಜನರೊಂದಿಗೆ ಬೆರೆಯಬೇಕಾದರೆ ಅವರು ಮೊದಲು ಕನ್ನಡ ಕಲಿಯಬೇಕಾಗಿತ್ತು, ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳನ್ನು ಪಾಂಡಿತ್ಯಪೂರ್ಣವಾಗಿ ಮತ್ತು ನಿರರ್ಗಳವಾಗಿ ಮಾತನಾಡುವಷ್ಟು ಚೆನ್ನಾಗಿ ಕಲಿತ ಶಾರ್ಬೊನೊ ಅವರು ಹೊಸ ಉತ್ಸಾಹದೊಂದಿಗೆ ನಾಡಿನಾದ್ಯಂತ ಸಂಚರಿಸಿದರು. ಹೀಗೆ ಪ್ರತಿವರ್ಷವೂ ಅವರು ಸುಮಾರು ೨೫೦೦ ಕಿಲೋಮೀಟರುಗಳಷ್ಟು ದೂರವನ್ನು ನಡೆದೇ ಕ್ರಮಿಸುತ್ತಿದ್ದರು. ಇದೇ ಅವಧಿಯಲ್ಲಿ ಅವರು ಶೀಮೊಗ್ಗೆ ಮತ್ತು ಫ್ರೇಝರ್ ಪೇಟೆಗಳ ಚರ್ಚುಗಳನ್ನು ಕಟ್ಟಿದರು. ಶೆಟ್ಟಿಹಳ್ಳಿಯ ಚರ್ಚನ್ನು ನವೀಕರಿಸಿದರು. ಮೈಸೂರಿನ ಚರ್ಚಿನ ನಿರ್ಮಾಣವು ಅಂತಿಮ ಹಂತದಲ್ಲಿದ್ದಾಗ ಅಂದರೆ ೧೮೪೨ರ ಜನವರಿಯಲ್ಲಿ ಶಾರ್ಬೊನೊ ಅವರನ್ನು ಬೆಂಗಳೂರಿಗೆ ಕರೆಸಿಕೊಂಡ ಎಂಇಪಿ ಸಂಸ್ಥೆಯ ವರಿಷ್ಠರು ರೋಮಿನಿಂದ ಬಂದ ಒಂದು ಆದೇಶವನ್ನು ಕೈಗಿತ್ತರು. ೧೮೪೧ರ ಜೂನ್ ೧೫ರಂದು ಬರೆದು ಪೋಪ್ ಜಗದ್ಗುರುಗಳೇ ಸ್ವಯಂ ಸಹಿ ಮಾಡಿದ್ದ ಆ ಪತ್ರದ ಒಕ್ಕಣೆಯ ಪ್ರಕಾರ ಶಾರ್ಬೊನೊ ಅವರನ್ನು ಯಸೆನ್ ಪ್ರಾಂತ್ಯದ ಬಿರುದಾಂಕಿತ ಬಿಷಪರನ್ನಾಗಿ ಅಭಿಷೇಕಿಸಿ ಬಿಷಪ್ ಬೊನಾಂ ಅವರಿಗೆ ಅನುವರ್ತಿಯಾಗಿರುವಂತೆ ಸೂಚಿಸಲಾಗಿತ್ತು. ಅಚ್ಚರಿಯೆಂದರೆ ನಮ್ಮ ಈ ಶಾರ್ಬೊನೊ ಅವರು ಬಿಷಪ್ ಪದವಿಯನ್ನು ಒಪ್ಪಿಕೊಳ್ಳಲಿಲ್ಲ. ಅವರಿಗೆ ಒಬ್ಬ ಸಾಮಾನ್ಯ ಗುರುವಾಗಿಯೇ ಕೆಲಸ ಮಾಡುವುದು ಇಷ್ಟವಾಗಿತ್ತು ಹೀಗಾಗಿ ಅವರು ಪೋಪರ ಸಂಸ್ಥೆ ಪ್ರಾಪಗಾಂಡಕ್ಕೆ ಪತ್ರ ಬರೆಯುತ್ತಾ ’ಸಾಮಾನ್ಯರ ಸೇವೆ’ ಗೆ ತಮ್ಮನ್ನು ಮೀಸಲಾಗಿಡುವಂತೆ ವಿನಂತಿಸುತ್ತಾರೆ. ಆ ಕಾಲದಲ್ಲಿ ನಮ್ಮ ದೇಶವು ಬರಗಾಲ, ಇನ್‌ಫ್ಲುಯೆಂಜಾ, ಮಲೇರಿಯಾ, ಪ್ಲೇಗ್, ಸಿಡುಬು ಮುಂತಾದ ಪಿಡುಗುಗಳಿಂದ ತತ್ತರಿಸಿತ್ತು. ೧೮೪೨ರ ಮಾರ್ಚ್‌ನಿಂದ ಜುಲೈವರೆಗೆ ಮೈಸೂರು, ಗಂಜಾಂ, ಹುಣಸೂರುಗಳಲ್ಲಿ ಕಾಲರಾ ರೋಗವು ಬಾಧಿಸಿದಾಗ ಶಾರ್ಬೊನೊ ಅವರು ಒಬ್ಬ ಧಾರ್ಮಿಕಗುರುವಾಗಿ ಅಲ್ಲ ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿ ಜನಸೇವೆ ಮಾಡಿದರು. ಹೀಗೆ ಅವರು ಶ್ರೀರಂಗಪಟ್ಟಣದಲ್ಲಿ ಇದ್ದುಕೊಂಡು ಐದು ವರ್ಷಗಳ ಕಾಲ ಏಕಾಂಗಿಯಾಗಿ ದುಡಿದರು. ಅವರ ಶ್ರಮದ ಫಲವಾಗಿ ೧೮೪೪ರ ವೇಳೆಗೆ ಶ್ರೀರಂಗಪಟ್ಟಣದಲ್ಲಿ ೩೮೯೪ ಮಂದಿ ಕ್ರೈಸ್ತರಾಗಿದ್ದರು ಹಾಗೂ ಇಡೀ ಮೈಸೂರು ಪ್ರಾಂತ್ಯದ ಕಥೋಲಿಕ ಕ್ರೈಸ್ತರ ಸಂಖ್ಯೆಯು ೧೨,೧೯೪ನ್ನು ಮುಟ್ಟಿತ್ತು. ಪಾಂಡಿಚೇರಿಯಲ್ಲಿ ನಡೆದ ೧೮೪೪ ಮತ್ತು ೧೮೪೯ರ ಎರಡೂ ಸಿನೋಡುಗಳಲ್ಲಿ ಭಾಗವಹಿಸಿದ ಅವರು ದೇಶೀ ಗುರುಗಳ ಆಯ್ಕೆ, ದೇಶಸ್ಥರಿಗೆ ಒಳ್ಳೆ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ, ಕಿರಿಯ ಮತ್ತು ಹಿರಿಯ ಗುರುಮಠಗಳ ಸ್ಥಾಪನೆ, ಕಥೋಲಿಕ ಸಾಹಿತ್ಯದ ಮುದ್ರಣ ಮತ್ತು ಪ್ರಸಾರಗಳು ಅಂದಿನ ತುರ್ತು ಅಗತ್ಯಗಳಾಗಿವೆಯೆಂದು ಪ್ರತಿಪಾದಿಸಿದರು. ಸ್ಥಳೀಯ ಕ್ರೈಸ್ತ ಘಟಕಗಳು ಗಟ್ಟಿಯಾಗಿ ನೆಲೆಯೂರಿ ತಮ್ಮದೇ ಸಂಪನ್ಮೂಲ ರೂಢಿಸಿಕೊಳ್ಳಬೇಕು ಹಾಗೂ ಅದರಲ್ಲಿ ಯಶಸ್ಸು ಗಳಿಸಬೇಕಾದರೆ ಸ್ಥಳೀಯರೇ ಪಾದ್ರಿಗಳೂ ಆಗಬೇಕು ಎನ್ನುವ ದೂರದೃಷ್ಟಿ ಅವರದಾಗಿತ್ತು. ಅವರ ಈ ಪ್ರಯತ್ನದ ಫಲವಾಗಿ ಸಿನೋಡ್ ಸಮ್ಮೇಳನಗಳು ಮರೆಯಲಾಗದಂಥ ನಿರ್ಣಯಗಳನ್ನು ಅಂಗೀಕರಿಸಿತು. ಸ್ವತಃ ಶಾರ್ಬೊನೊ ಅವರೂ ಸಹ ಬಿಷಪ್ ಪದವಿಯ ಬಗೆಗಿನ ತಮ್ಮ ನಿಲುವನ್ನು ಬದಲಾಯಿಸಿಕೊಂಡರು. ಅಲ್ಲದೆ ಧೈರ್ಯದಿಂದ ಅವರು ರೋಮ್ ಅನ್ನು ಪ್ರಶ್ನಿಸುತ್ತಾ ಧರ್ಮಪ್ರಾಂತ್ಯಗಳನ್ನು ಹೊರಗಿನ ದೇಶಗಳಿಗೆ ಅಥವಾ ಹೊರಗಿನ ಸಭೆಗಳಿಗೆ ಅಥವಾ ಹೊರಗಿನ ಗುರುಗಳಿಗೆ ವಹಿಸುವ ಪದ್ಧತಿಯನ್ನು ಖಂಡಿಸಿದರು. ಪ್ರಾಪಗಾಂಡವು ಇವರ ಅನಿಸಿಕೆಯನ್ನು ಮನ್ನಿಸಿ ಬಿಷಪ್ ನೇಮಕಾತಿಯ ತನ್ನ ಪತ್ರದ ಒಕ್ಕಣೆಯನ್ನು ಬದಲಾಯಿಸುತ್ತದೆ. ಹಾಗೂ ೧೮೪೪ ಸೆಪ್ಟೆಂಬರ್ ೧೨ರಂದು ಶಾರ್ಬೊನೊ ಅವರ ನೇಮಕಾತಿಯನ್ನು ಎತ್ತಿಹಿಡಿಯುತ್ತದೆ. ೧೮೪೫ರ ಮಾರ್ಚ್ ೧೬ರಂದು ರೋಮಾಪುರಿ ಪೀಠವು ಶಾರ್ಬೊನೊ ಅವರನ್ನು ಮೈಸೂರಿನ ಧರ್ಮಾಧ್ಯಕ್ಷರನ್ನಾಗಿ ನೇಮಿಸುವುದರೊಂದಿಗೆ ಮೈಸೂರನ್ನು ಧರ್ಮಪ್ರಾಂತ್ಯದ ಮಟ್ಟಕ್ಕೇರಿಸಿ ಬೆಂಗಳೂರನ್ನು ಅದರ ಆಡಳಿತ ಕೇಂದ್ರವಾಗಿಸಿತು. ಆ ಪ್ರಕಾರ ೧೮೪೫ ಜೂನ್ ೨೯ರಂದು ಮೊನ್ಸಿಜ್ಞೊರ್ ಬೊನಾಂ ಅವರು ಪಾಂಡಿಚೇರಿಯ ಪ್ರಧಾನಾಲಯದಲ್ಲಿ ಶಾರ್ಬೊನೊ ಅವರಿಗೆ ಬಿಷಪ್ ಪದವಿಯನ್ನು ಪ್ರದಾನ ಮಾಡುತ್ತಾರೆ. ಅಂದಿನ ತಮ್ಮ ದಿನಚರಿಯಲ್ಲಿ ಶಾರ್ಬೊನೊ ಅವರು ಶುಭಸಂದೇಶದ ಹೊರೆಯೊಂದಿಗೆ ಧರ್ಮಪ್ರಚಾರಕರಿಗೆ ಮಾದರಿಯಾಗಿ ಬದುಕಬೇಕೆನ್ನುವ ಹೊಣೆಯನ್ನು ನನ್ನ ಮೇಲೆ ಹೇರಲಾದ ಈ ದಿನ ಅತ್ಯಂತ ದುಃಖದ ದಿನ ಎಂದು ಬರೆದುಕೊಂಡಿದ್ದಾರೆ.
ಬಿಷಪರಾಗಿ
[ಬದಲಾಯಿಸಿ]೧೮೪೫ರ ಅಕ್ಟೊಬರ್ ೨೬ರಂದು ಬೆಂಗಳೂರಿನ ಶಿವಾಜಿನಗರದ ಸಂತ ಮೇರಿ ಬೆಸಿಲಿಕಾದಲ್ಲಿ ಅದ್ಧೂರಿ ಸಮಾರಂಭವನ್ನು ಏರ್ಪಡಿಸಿ ಈ ಹೊಸ ಬಿಷಪರನ್ನು ಸ್ವಾಗತಿಸಲಾಯಿತು. ಅಂದು ಆ ಸಮಾರಂಭಕ್ಕೆ ಆಗಮಿಸಿದ್ದ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರು ಹೊಸ ಬಿಷಪ್ ಶಾರ್ಬೊನೊ ಅವರೊಂದಿಗೆ ತಾವು ಸಾಯುವವರೆಗೂ ಒಳ್ಳೇ ಸ್ನೇಹವನ್ನು ಉಳಿಸಿಕೊಂಡಿದ್ದರು. ಮೈಸೂರು ಪ್ರಾಂತ್ಯವು ಅದಾಗಲೇ ಒಂದು ದೊಡ್ಡ ಕ್ರೈಸ್ತ ಸಮುದಾಯವಾಗಿ ಬೆಳೆದಿತ್ತು. ಅಂದು ಈ ಧರ್ಮಪ್ರಾಂತ್ಯದಲ್ಲಿ ಆರು ಧರ್ಮಪ್ರಚಾರ ಸಭೆಗಳೂ ೧೩೫೬೩ ಕ್ರೈಸ್ತರೂ ಇದ್ದರು. ಪ್ರತಿವರ್ಷವೂ ಸರಾಸರಿ ೨೫೦ ಮಂದಿ ಹೊಸಬರು ಕ್ರೈಸ್ತದೀಕ್ಷೆ ಪಡೆಯುತ್ತಿದ್ದರು. ಈ ಧರ್ಮಪ್ರಾಂತ್ಯಕ್ಕೆ ಒಳ್ಳೆಯ ಇತಿಹಾಸವಿದ್ದರೂ ಗುರುಗಳ ಕೊರತೆಯ ಕಾರಣದಿಂದಾಗಿ ಎಲ್ಲ ಭಕ್ತಾದಿಗಳಿಗೂ ಅಧ್ಯಾತ್ಮ ಪೋಷಣೆ ಮತ್ತು ಮಾರ್ಗದರ್ಶನ ನೀಡುವುದು ವಿಳಂಬವಾಗುತ್ತಿತ್ತು. ಪ್ರೊಟೆಸ್ಟ್ಟೆಂಟರ ಪೈಪೋಟಿಯಲ್ಲಿ ಕಥೋಲಿಕ ತತ್ವಾನುಯಾಯಿಗಳ ಹಿತ ಕಾಯುವುದು ಬಹು ಮುಖ್ಯ ಕೆಲಸವಾಗಿತ್ತು. ೧೮೪೬ ಅಕ್ಟೋಬರ್ ೭ರಂದು ಶಾರ್ಬೊನೊ ಅವರು ಬೆಂಗಳೂರಿನಲ್ಲಿ ಸಂತ ಪ್ಯಾಟ್ರಿಕ್ಕರ ದೇವಾಲಯದ ಬಳಿ ಹೊಸ ಗುರುಮಠ ಸ್ಥಾಪನೆಗೆ ಅಡಿಗಲ್ಲು ನೆಟ್ಟರು. ಗುರುಅಭ್ಯರ್ಥಿಗಳಿಗೆ ಪಠ್ಯವನ್ನು ನಿಗದಿಪಡಿಸಿದರೂ ನಂತರದ ದಿನಗಳಲ್ಲಿ ಅದನ್ನು ಇನ್ನಷ್ಟು ವಿಸ್ತರಿಸಲಾಯಿತು. ಪ್ರಾರಂಭದ ದಿನಗಳು ಅತಿ ಕಷ್ಟದ್ದಾಗಿದ್ದವು. ೧೮೪೫-೫೯ರ ಅವಧಿಯಲ್ಲಿ ಸ್ವಾಮಿ ಶೆವಾಲಿಯೇ (Chevalier) ಅವರ ನೇತೃತ್ವದಲ್ಲಿ ಇನ್ನೂರು ಯುವಕರಿಗೆ ತರಬೇತಿ ನೀಡಲಾಯಿತಾದರೂ ಅವರಲ್ಲಿ ಫಾದರ್ ಇಗ್ನೇಷಿಯಸ್ ಜೆಮ್ಮಾ (೧೮೫೭) ಅವರೊಬ್ಬರೇ ಯಶಸ್ವಿಯಾಗಿದ್ದು. ಅನಂತರ ಆ ಗುರುಮಠದ ಕಟ್ಟಡವನ್ನು ಕ್ಲೂನಿ ಸಂನ್ಯಾಸಿನಿಯರಿಗೆ ಶಾಲೆ ನಡೆಸಲೆಂದು ಪರಭಾರೆ ಮಾಡಿದರು. ಆಮೇಲೆ ಗುರುಮಠಕ್ಕಾಗಿ ಇನ್ನೊಂದು ಕಟ್ಟಡವನ್ನು ಕಟ್ಟಿದರಾದರೂ ಅದೂ ವಿಫಲವಾಗಿ ಆ ಕಟ್ಟಡವನ್ನು ಗುಡ್ ಶೆಫರ್ಡ್ ಸಂನ್ಯಾಸಿನಿಯರಿಗೆ ಕೊಡಲಾಯಿತು. ಗುರುಮಠಕ್ಕಾಗಿ ಮೂರನೆಯ ಕಟ್ಟಡವನ್ನು ಇಂದಿನ ಸಂತ ಫ್ರಾನ್ಸಿಸ್ ಝೇವಿಯರ್ ಪ್ರಧಾನಾಲಯದ ಬಳಿ ಕಟ್ಟಲಾಯಿತು. ಶಾರ್ಬೊನೊ ಅವರ ೨೮ ವರ್ಷಗಳ ದೀರ್ಘ ಬಿಷಪಗಿರಿಯಲ್ಲಿ ಒಟ್ಟು ಎಂಟು ಮಂದಿ ಗುರುಪಟ್ಟ ಪಡೆದರು. ಆ ಎಂಟು ಮಂದಿಯಲ್ಲಿ ಫಾದರ್ ಇಗ್ನೇಷಿಯಸ್ ಜೆಮ್ಮ ಅವರು ಬೆಂಗಳೂರಿನವರಾದರೆ ಫಾದರ್ ಶಾಂತಪ್ಪ (೧೮೬೮) ಅವರು ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯವರು. ಉಳಿದ ಆರು ಮಂದಿ ಮಂಗಳೂರಿನಿಂದ ಬಂದವರು. ಹೀಗೆ ಸ್ಥಳೀಯರನ್ನೇ ಪಾದ್ರಿಗಳನ್ನಾಗಿ ಮಾಡುವ ಶಾರ್ಬೊನೋರ ಕನಸು ಹೆಚ್ಚು ಫಲಪ್ರದವಾಗಲಿಲ್ಲ. ಗಾಯದ ಮೇಲೆ ಬರೆ ಎಂಬಂತೆ ನಾಡಿನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹಾಗೂ ಅನಾಥಾಲಯಗಳನ್ನು ನಡೆಸಲು ಯಾವುದೇ ವ್ಯವಸ್ಥೆಗಳಿರಲಿಲ್ಲ. ಪ್ರೊಟೆಸ್ಟಾಂಟರು ಈ ನಿಟ್ಟಿನಲ್ಲಿ ಬಹು ಮುಂದುವರಿದಿದ್ದರು. ಅವರಿಗೆ ಬ್ರಿಟಿಷ್ ಆಳ್ವಿಕೆಯ ಆಶ್ರಯವೂ ವಿಪುಲ ಹಣಕಾಸಿನ ನೆರವೂ ಇದ್ದುದರಿಂದ ಅವರ ಶಾಲಾಕಟ್ಟಡಗಳು ನಳನಳಿಸುತ್ತಿದ್ದವು. ಮಕ್ಕಳಿಗೆ ಶಿಕ್ಷಣ ನೀಡಲು ಯೂರೋಪಿನಿಂದ ಯುವಕರನ್ನು ಕರೆತರುವ ಶಾರ್ಬೊನೊ ಅವರ ಸಾಹಸ ವಿಫಲವಾಯಿತು. ಸ್ವಾಮಿ ಶೆವಾಲಿಯೇ ಅವರ ಮುಖಂಡತ್ವದಲ್ಲಿ ನಮ್ಮ ನಾಡಿನಲ್ಲೇ ಬ್ರದರುಗಳ ತಂಡವನ್ನು ರಚಿಸುವುದಕ್ಕಾಗಿ ಬ್ರದರ‍್ಸ್ ಆಫ್ ಸೆಂಜೋಸೆಫ್ ಅನ್ನು ಪ್ರಾರಂಭಿಸಿದರಾದರೂ ಅದೂ ಕೂಡ ಕೆಲಸಮಯದಲ್ಲೇ ಕಣ್ಣು ಮುಚ್ಚಿಕೊಂಡಿತು. ಅವರು ಪ್ರಾರಂಭಿಸಿದ ಉಪದೇಶಕರ ತರಬೇತು ಸಂಸ್ಥೆಯೂ ಒಂದೂವರೆ ವರ್ಷವಷ್ಟೇ ಕಾರ್ಯನಿರ್ವಹಿಸಿದ್ದು. ಈ ಮೊದಲ ಹೆಜ್ಜೆಗಳೆಲ್ಲ ಉತ್ಸಾಹೀ ಮತ್ತು ಸೇವಾಮನೋಭಾವದ ಜನರ ಕೊರತೆಯಿಂದಾಗಿ ವಿಫಲವಾದವು ಆದರೆ ಇವೆಲ್ಲವುಗಳ ಹಿಂದಿದ್ದ ಶಾರ್ಬೊನೊ ಎಂಬ ಪ್ರೇರಣಾಶಕ್ತಿಯನ್ನು ಮಾತ್ರ ಎಂದಿಗೂ ಮರೆಯಲಾಗದು.
ಸಾಹಿತ್ಯಸೇವೆ
[ಬದಲಾಯಿಸಿ]೧೮೪೭ರಲ್ಲಿ ಕನ್ನಡ ಮುದ್ರಣಾಲಯವನ್ನು ಸ್ಥಾಪಿಸಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದರು. ಅವರು ರಚಿಸಿ ಪ್ರಕಟಿಸಿದ ಪುಸ್ತಕಗಳನ್ನು ಮೂರು ವರ್ಗಗಳಲ್ಲಿ ವಿಂಗಡಿಸಬಹುದು. ಒಂದನೇ ವರ್ಗದಲ್ಲಿ ಹೊರಗಿನಿಂದ ಬಂದ ಪಾದ್ರಿಗಳು ಮತ್ತು ಪ್ರವಾಸಿಗರಿಗಾಗಿ ಅಂದಿನ ಚರ್ಚಿನ ಸಂಪರ್ಕಭಾಷೆಯಾದ ಲತೀನ್ ಮೂಲಕ ಕನ್ನಡದ ಪರಿಚಯ ಮಾಡಿಸುವ ಪುಸ್ತಕಗಳು ಇವೆ. ೧. ಲತೀನ ಕನ್ನಡ ನಿಘಂಟು (೧೮೬೧ ರಲ್ಲಿ ಬೆಂಗಳೂರಿನಲ್ಲಿ ವಿದೇಶೀ ಧರ್ಮಪ್ರಚಾರ ಸಭೆಯ ಮುದ್ರಣಾಲಯದಲ್ಲಿ ಛಾಪಿಸಲಾದ ೧೨೧೮ ಪುಟಗಳ ಡೆಮಿ ಗಾತ್ರದ ಪುಸ್ತಕ) ೨. ವ್ಯಾಕರಣ: ಕನ್ನಡ ಲತೀನು ೩. ಮೊದಲನೇ ಪಾಠ ೪. ಎರಡನೇ ಪಾಠ ಎರಡನೇ ವರ್ಗದಲ್ಲಿ ಕ್ರೈಸ್ತರು ತಮ್ಮ ದೈನಂದಿನ ಪೂಜೆ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಪ್ರಾರ್ಥನಾ ಪುಸ್ತಕ ಮತ್ತು ಪ್ರೇರಣಾ ಪುಸ್ತಕಗಳಿವೆ. ಇವನ್ನೆಲ್ಲ ತಮಿಳಿನಲ್ಲಿ ಪ್ರಚಲಿತವಿದ್ದ ಪುಸ್ತಕಗಳಿಂದ ಶಾರ್ಬೊನೊ ಅವರೇ ನೇರವಾಗಿ ಅನುವಾದಿಸಿದ್ದಾರೆ. ೧. ಜಪದ ದೊಡ್ಡ ಪುಸ್ತಕ ೨. ಜಪದ ಚಿಕ್ಕ ಪುಸ್ತಕ ೩. ಶಿಲುಬೆಹಾದಿ ೪. ದಿವ್ಯಮಾತೃಕೆ ೫. ಅಜ್ಞಾತವಾಸದ ಧ್ಯಾನ (ಸಂತ ಇಗ್ನಾಸಿಯವರ ಅಧ್ಯಾತ್ಮ ಸಾಧನೆ) ೬. ಜ್ಞಾನದರ್ಪಣ ೭. ದಿವ್ಯಪರೀಕ್ಷೆ ೮. ಪತಿತರ ಮಾರ್ಗ ಇನ್ನು ಮೂರನೇ ವರ್ಗದಲ್ಲಿ ಅವರು ಕ್ರೈಸ್ತರಲ್ಲಿ ನಂಬಿಕೆಯನ್ನು ಬಲಪಡಿಸಿ ಧರ್ಮದ ಆಚಾರ ವಿಚಾರಗಳನ್ನು ಚಾಚೂ ತಪ್ಪದಂತೆ ಅನುಸರಿಸಲು ಕೆಲ ಮಾರ್ಗೋಪಾಯಗಳನ್ನೂ ಚೌಕಟ್ಟನ್ನೂ ರೂಪಿಸಿ ಅವನ್ನು ಉಪದೇಶಿಗಳ ಮೂಲಕ ಜನರಿಗೆ ತಿಳಿಯಪಡಿಸುತ್ತಿದ್ದ ಬೋಧನಾ ಪಠ್ಯಗಳಿವೆ. ೧. ವೇದಬೋಧಕರ ಕ್ರಮ ೨. ಸತ್ಯವೇದ ಪರೀಕ್ಷೆ (ಸ್ವಮತದ ವಿಮರ್ಶೆ) ೩. ಲೋಕ ಮದುವೆ ಪ್ರಸ್ತದ ಕ್ರಮ ೪. ಪೂರ್ವಿಕ ಮತದ ವ್ಯಾಖ್ಯಾನ ಶಾರ್ಬೊನೊ ಅವರು ಆಳವಾದ ಅಧ್ಯಯನ ನಡೆಸಿ ಕ್ರೈಸ್ತರ ಮದುವೆ ವಿಧಿವಿಧಾನಗಳಿಗೆ ಒಂದು ಚೌಕಟ್ಟು ಹಾಕಿಕೊಟ್ಟರು. ಅಲ್ಲದೆ ಹೊಸ ಮತಾಂತರಗಳ ಬಗ್ಗೆಯೂ ಉಪದೇಶಿಗಳ ಚಟುವಟಿಕೆಗಳ ಬಗ್ಗೆಯೂ ನಿಯಮಾವಳಿ ರೂಪಿಸಿ ಅವನ್ನೆಲ್ಲ ೧೮೪೯ರ ಪಾಂಡಿಚೇರಿ ಸಿನೋಡ್ ಸಮ್ಮೇಳನದಲ್ಲಿ ಮಂಡಿಸಿ ಸಮರ್ಥಿಸಿದರು. ಆಮೇಲೆ ಅವನ್ನೆಲ್ಲಾ ಮೈಸೂರು ಧರ್ಮಪ್ರಾಂತ್ಯದ ಸುತ್ತೋಲೆಯಲ್ಲಿ ಪ್ರಕಟಿಸಿದರು. ೧೮೫೦ರ ಏಪ್ರಿಲ್ ೩, ಮೈಸೂರು ಧರ್ಮಪ್ರಾಂತ್ಯಕ್ಕೆ ಒಂದು ಐತಿಹಾಸಿಕ ದಿನ. ಅಂದು ಎತಿಯೇನ್ ಲೂಯಿ ಶಾರ್ಬೊನೊ ಅವರನ್ನು ಮೈಸೂರು ಧರ್ಮಪ್ರಾಂತ್ಯದ "ಪ್ರೇಷಿತಗುರು" (Apostolic Vicar) ಎಂದು ರೋಮಾಪುರಿ ಜಗದ್ಗುರು ಪೀಠವು ಘೋಷಿಸಿತು. ಆದರೂ ಅವರ ಆಡಳಿತಾತ್ಮಕ ಕಾರ್ಯಕಲಾಪಗಳಾಗಲೀ ಧರ್ಮಕೇಂದ್ರಗಳ ಭೇಟಿಗಳಾಗಲೀ ಯಾವುದೂ ಕುಂಠಿತವಾಗಲಿಲ್ಲ. "ಕೇಳುಗರ ಮನಪಟಲವನ್ನು ತಟ್ಟಿ ಅವರ ನಿರೀಕ್ಷೆಗಳನ್ನು ಅರಿತು ಹೃದಯಕ್ಕೆ ಹತ್ತಿರವಾಗುವಾತನೇ ಒಳ್ಳೆಯ ಬೋಧಕ" ಎಂದು ಅವರು ಹೇಳುತ್ತಿದ್ದರು. ಬೆಳೆಯುತ್ತಿದ್ದ ಕ್ರೈಸ್ತ ಮಕ್ಕಳಿಗೆ ಧರ್ಮವಿಚಾರಗಳನ್ನು ಉಪದೇಶಿಸಲು ಕಾರ್ಯಕರ್ತರ ಅವಶ್ಯಕತೆಯನ್ನು ಮನಗಂಡ ಅವರು ಶಾಲೆಗಳನ್ನೂ ಕಾನ್ವೆಂಟುಗಳನ್ನೂ ಸ್ಥಾಪಿಸುವುದರತ್ತ ಒಲವು ತೋರಿದರು. ೧೮೫೩ರಲ್ಲಿ ಯೂರೋಪಿಗೆ ತೆರಳಿದ್ದ ಅವರು ಆಂಜೆರ‍್ಸ್ ಊರಿನಲ್ಲಿದ್ದ ಬೋಂಪಾಶ್ಚರ್ ಸಂನ್ಯಾಸಿನಿಯರನ್ನು ಕಂಡು ಇಂಡಿಯಾಕ್ಕೆ ಬರುವಂತೆ ಆಹ್ವಾನಿಸಿದರು. ಅಂತೆಯೇ ೧೮೫೪ರಲ್ಲಿ ಬೆಂಗಳೂರಿನಲ್ಲೂ ಕೆಲಕಾಲದ ನಂತರ ಮೈಸೂರಿನಲ್ಲೂ ಗುಡ್ ಶೆಫರ್ಡ್ ಕಾನ್ವೆಂಟುಗಳು ಪ್ರಾರಂಭವಾದವು. ೧೮೫೯ರಲ್ಲಿ ಸ್ಥಳೀಯ ಹೆಣ್ಣುಮಕ್ಕಳದೇ ಆದ ಸಂತ ಅನ್ನಮ್ಮ ಕಾನ್ವೆಂಟು ಶುರುವಾಗಲು ಶಾರ್ಬೊನೋ ಅವರೇ ಪ್ರೇರಕರಾದರು. ಅವರು ಶಾಲೆಗಳನ್ನೂ ಸ್ಥಾಪಿಸುವ ಯೋಜನೆಗಳನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿರುವಾಗಲೇ ನಾಡಿಗೆ ಬರಗಾಲ ಹಾಗೂ ಪ್ಲೇಗ್ ಮಾರಿ ಅಪ್ಪಳಿಸಿ ಮಿಷನ್ ಸಂಸ್ಥೆಗಳೆಲ್ಲವೂ ತಮ್ಮ ಎಂದಿನ ಕಾರ್ಯಗಳನ್ನು ಬದಿಗೊತ್ತಿ ಅನಾಥರಕ್ಷಣೆಯ ಸೇವಾಕಾರ್ಯಗಳಲ್ಲಿ ತೊಡಗಬೇಕಾಯಿತು. ಆ ಸಂದರ್ಭದಲ್ಲಿ ರೂಪುಗೊಂಡಿದ್ದೇ ಸಂತ ಜೋಸೆಫರ ಬಾಲಕರ ಪ್ರೌಢಶಾಲೆ ಮತ್ತು ಅನಾಥಾಲಯ. ಅಂದಿನ ಬ್ರಿಟಿಷ್ ಅಧಿಕಾರಿಯಾಗಿದ್ದ ಲೆವಿನ ಬೆಂತಾಮ್ ಬೌರಿಂಗ್ ಅವರೊಂದಿಗಿನ ಒಡನಾಟದ ಫಲವಾಗಿ ಮೈಸೂರು ಮಹಾರಾಜರ ನಿಕಟ ಸಂಪರ್ಕವೂ ಪ್ರಾಪ್ತವಾಗಿದ್ದು ಶಾರ್ಬೊನೊ ಅವರ ವರ್ಚಸ್ಸು ಹೆಚ್ಚಿಸಿತು. ಬಿಷಪರಾಗಿದ್ದ ಬೊನಾಂ ಅವರು ನಿಧನರಾದ ಮೇಲೆ ಕೆಲಕಾಲ ಶಾರ್ಬೊನೊ ಅವರು ಇಂಡಿಯಾ ಮತ್ತು ಬರ್ಮಾ ದೇಶಗಳ ಎಂಇಪಿ ಕಾರ್ಯಗಳ ನೇತೃತ್ವ ವಹಿಸಿದ್ದೂ ಉಂಟು. ೧೮೭೦ರಲ್ಲಿ ವ್ಯಾಟಿಕನ್ನಿನ ಸಮಾವೇಶದಲ್ಲಿ ಭಾಗವಹಿಸಿದ್ದರಲ್ಲದೆ ಪೌರ್ವಾತ್ಯ ದೇಶಗಳ ಧಾರ್ಮಿಕ ವಿಧಿಗಳ ಅಧ್ಯಯನ ಸಮಿತಿಯ ಸದಸ್ಯರೂ ಆದರು. ಅದೇ ಕಾಲದಲ್ಲಿ ಅವರು ಎಂಇಪಿ ಸಂಸ್ಥೆಯ ನೀತಿ ನಿಯಮಾವಳಿಗಳನ್ನು ಅಭ್ಯಸಿಸಿ ಪರಿಷ್ಕಾರಗೊಳಿಸಿದರು. ಹೀಗೆ ಸಾರ್ಥಕ ಜೀವನ ನಡೆಸಿದ ಶಾರ್ಬೊನೊ ಅವರು ೧೮೭೩ರ ಜೂನ್ ೨೩ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಜೀವನದುದ್ದಕ್ಕೂ ಅವರ ಘನಗಂಭೀರ ವ್ಯಕ್ತಿತ್ವ ಹಾಗೂ ವಾರ್ಧಕ್ಯದ ಗುರುತಾದ ಬಿಳೀಗಡ್ಡ ಮತ್ತು ತೀಕ್ಷ್ಣವೂ ಆಳವೂ ಆದ ಕಣ್ಣುಗಳು ಅಮಿತ ಉತ್ಸಾಹೀ ಕಾರ್ಯತತ್ಪರತೆ ಹಾಗೂ ಪ್ರೀತ್ಯಾದರಗಳನ್ನು ಸೂಸುವಂತೆ ತೋರುತ್ತಿದ್ದವು. ಸ್ಥಳೀಯರ ಕುರಿತು ಅವರಷ್ಟು ಆಸ್ಥೆ ತಳೆದಿದ್ದ ಮಿಷನರಿ ಬೇರೊಬ್ಬರಿಲ್ಲ ಎಂದು ಖಂಡಿತವಾಗಿ ಹೇಳಬಹುದು.