ವಿಷಯಕ್ಕೆ ಹೋಗು

ಸಂತ ಫ್ರಾನ್ಸಿಸ್ ಝೇವಿಯರ್ ಪ್ರಧಾನಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಕೋಲ್ಸ್ ಪಾರ್ಕ್ ಬಳಿಯಿರುವ ಬೃಹತ್ತಾದ ಕಲ್ಲುಕಟ್ಟಡವು ಪ್ರಸಿದ್ಧ ಸೆಂಟ್ ಝೇವಿಯರ್ ಕೆಥೆಡ್ರಲ್ ಆಗಿದೆ. ಫ್ರೆಂಚ್ ಪಾದ್ರಿ ಶೆವಾಲಿಯೇ (Chevalier) ಅವರು ೧೮೫೧ರಲ್ಲಿ ಫ್ರೆಂಚ್ ವಿಧವೆ ಝುಲೈಮ್ ವ್ಯಾಟ್ಕಿನ್ಸ್ ಅವರಿಂದ ಒಂದು ಸಾವಿರ ರೂಪಾಯಿಗಳಿಗೆ ಜಮೀನನ್ನು ಪಡೆದು ೫೫೦ ಚದರಡಿಗಳ ಒಂದು ಪುಟ್ಟ ಚರ್ಚನ್ನು ಅಲ್ಲಿ ಕಟ್ಟಿದರು. ಆನಂತರ ೧೮೯೮ರಲ್ಲಿ ಈ ದೇವಾಲಯದ ಧರ್ಮಗುರುವಾಗಿ ನಿಯುಕ್ತರಾದ ಫಾದರ್ ಸರ್ವೆಂಟನ್ ಅವರು ತಮ್ಮ ೫೦ವರ್ಷಗಳ ದೀರ್ಘ ಆಡಳಿತಾವಧಿಯಲ್ಲಿ ಈಗಿರುವ ಭವ್ಯ ದೇವಾಲಯವನ್ನು ಕಟ್ಟಿಸಿದರು. ಮೇಸ್ತ್ರಿ ಚೌರಪ್ಪನವರು ಕಟ್ಟಿದ ಈ ಚರ್ಚು ಸಂಪೂರ್ಣವಾಗಿ ಸ್ಥಳೀಯ ಕಲ್ಲಿನಿಂದಲೇ ನಿರ್ಮಿತವಾಗಿದ್ದು ವಿಶಾಲವಾದ ಹಜಾರ, ಸುಂದರವಾದ ಕಮಾನುಗಳು, ಅಮೃತಶಿಲೆಯ ಸ್ವರೂಪಗಳು, ದೊಡ್ಡದಾದ ಗುಮ್ಮಟ ಹೊಂದಿದೆ. ಶೆವಾಲಯೇ ಅವರ ಕಾಲದಲ್ಲಿ ಆರೋಗ್ಯದ ಪಾಲಕ ಸಂತ ರೋಶ್ ಅವರ ಸ್ಮರಣೆಯಲ್ಲಿ ಕಟ್ಟಿದ ಪುಟ್ಟ ಚರ್ಚು ಸರ್ವೆಂಟನ್ ಅವರ ಕಾಲದಲ್ಲಿ ಅಂದರೆ ೨೬ ಮೇ ೧೯೩೨ರಂದು ಈಗಿನ ದಿವ್ಯ ಭವ್ಯ ರೂಪ ತಳೆಯಿತು. ೧೯೪೦ರಲ್ಲಿ ಬೆಂಗಳೂರು ಧರ್ಮಪ್ರಾಂತ್ಯವು ಸ್ವಾಯತ್ತವಾದಾಗ ಈ ಚರ್ಚನ್ನು ಪ್ರಧಾನಾಲಯ(ಕೆಥೆಡ್ರಲ್)ಆಗಿ ಆಯ್ಕೆ ಮಾಡಲಾಯಿತು.